ಪ್ರತಿ ವರ್ಷ ಜನವರಿ 26 ರಂದು ಭಾರತ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತದೆ. ಸ್ವತಂತ್ರ್ಯಗೊಂಡ ರಾಷ್ಟ್ರಕ್ಕೆ ಸಂವಿಧಾನದ ಆಗತ್ಯವಿದೆ ಎಂದು ಅರಿತ ಅಂದಿನ ಧೀಮಂತರು 1946 ರಿಂದಲೇ ಸಂವಿಧಾನ ರಚನಾ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ಅದರ ಪ್ರತಿಫಲವಾಗಿ 1949 ನವೆಂಬರ್ 26ಕ್ಕೆ ಸಂವಿಧಾನದ ಕುರಿತಂತೆ ಎಲ್ಲ ಸಭೆಗಳು ಮುಕ್ತಾಯಗೊಳ್ಳುತ್ತದೆ. ನಂತರ 1950 ಜನವರಿ 26ಕ್ಕೆ ಸಂವಿಧಾನವನ್ನು ಆಳವಡಿಸಿಕೊಳ್ಳಲಾಗುತ್ತದೆ. ರಾಷ್ಟ್ರಕ್ಕೆ ಸಂವಿಧಾನವನ್ನು ಅಳವಡಿಸಿದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತೇವೆ.
ಗಣರಾಜ್ಯೋತ್ಸವ ಇತಿಹಾಸ
1946ರ ಡಿಸೆಂಬರ್ 9ರಂದು ಭಾರತದ ಮೊಟ್ಟ ಮೊದಲ ಸಂವಿಧಾನ ಸಂಬಂಧಿ ಸಭೆ ನಡೆಸಲಾಯಿತು. 1949ರ ನವೆಂಬರ್ 26ರಂದು ಅಂತಿಮ ಬಾರಿ ಸಭೆ ಸೇರಿತು. ಈ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ.
1950ರ ಜನವರಿ 26ರಂದು ಭಾರತವು ಗಣರಾಜ್ಯಗೊಂಡಿದ್ದನ್ನು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರುಅಧಿಕೃತಗೊಳಿಸಿದರು. ಅಂದಿನಿಂದ ಈ ದಿನವನ್ನು ಭಾರತವು ಗಣರಾಜ್ಯವಾಗಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬದ ದಿನವನ್ನಾಗಿ ಪರಿಗಣಿಸವಂತೆ ನಿರ್ಧರಿಸಲಾಯ್ತು.
ಸಂವಿಧಾನ ಸಮತಿಯಲ್ಲಿ ಯಾರೆಲ್ಲ ಇದ್ದರು?
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್ ಅಂಬೇಡ್ಕರ್, ಸಮಿತಿ ಸದಸ್ಯರಾಗಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್ , ಕೆ. ಎಮ್ ಮುನ್ಶಿ, ಸಯ್ಯದ್ ಮಹಮೂದ್ , ಬಿ.ಎಲ್ ಮಿಟ್ಟರ್ ,ಡಿ.ಪಿ ಖೈತಾನ್ ಮುಂತಾದ ವಿದ್ವತ್ ವಲಯವಿತ್ತು.
ಜನವರಿ 26ಕ್ಕೆ ಏಕೆ ಆಚರಣೆ?
ಸಂವಿಧಾನವನ್ನು ಜಾರಿಗೆ ತರಲು ಈ ದಿನಾಂಕವನ್ನು ಆಯ್ಕೆ ಮಾಡಲು ವಿಶೇಷ ಉದ್ದೇಶವಿತ್ತು. ಜನವರಿ 26,1930ರಂದು ಕಾಂಗ್ರೆಸ್ ಬ್ರಿಟೀಷರ ಗುಲಾಮಗಿರಿಯ ವಿರುದ್ಧ ಭಾರತವನ್ನು ಸಂಪೂರ್ಣವಾಗಿ ಸ್ವತಂತ್ರವೆಂದು ಘೋಷಿಸಿತು. ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಸ್ವರಾಜ್ಯ ಪ್ರಸ್ತಾವನೆಯ ಅನುಷ್ಠಾನದ ಈ ದಿನಾಂಕದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ಜಾರಿಗೆ ತರಲು ಜನವರಿ 26ರನ್ನು ಆಯ್ಕೆ ಮಾಡಲಾಯಿರು.
ಥೀಮ್
ಗಣರಾಜ್ಯೋತ್ಸವ 2024ರ ಪರೇಡ್ ಥೀಮ್ ‘ವಿಕ್ಷಿತ್ ಭಾರತ್’ ಮತ್ತು ‘ಭಾರತ್ – ಲೋಕತಂತ್ರ ಕಿ ಮಾತೃಕಾ’, ಇದು ಪ್ರಜಾಪ್ರಭುತ್ವದ ಪೋಷಕರಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ. ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ಹೇಗೆ?
ಈ ದಿನ ಹಲವು ಸಾಧಕರಿಗೆ ಪದ್ಮಪ್ರಶಸ್ತಿಗಳನ್ನು, ಅಶೋಕ ಚಕ್ರ ಪ್ರಶಸ್ತಿ, ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ವರ್ಷವು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಜನವರಿ 26 ರ ಪ್ರಮುಖ ಆಕರ್ಷಣೆಯೆಂದರೆ ಪರೇಡ್. ಇದು ದೆಹಲಿಯ ಕರ್ತವ್ಯಪಥದಿಂದ ಪ್ರಾರಂಭವಾಗಿ ಇಂಡಿಯಾ ಗೇಟ್ ಬಳಿ ಅಂತ್ಯವಾಗುತ್ತದೆ. ಭಾರತದ ತ್ರಿವಿಧ ಸೇನೆ ತನ್ನ ಶಕ್ತಿ ಪ್ರದರ್ಶನವನ್ನು ಮಾಡುತ್ತದೆ. ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಪಥ ಸಂಚಲನದಲ್ಲಿ ಪ್ರದರ್ಶನಗೊಳ್ಳುತ್ತದೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈವಿಧ್ಯತೆಯ ಪ್ರಕಟವೂ ಆಗುತ್ತದೆ.