ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ, ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ.
ಬೆಂಗಳೂರು, ೧೫ ಡಿಸೆಂಬರ್ : ಭಾರತದ ಖ್ಯಾತ ಏರೋಸ್ಪೇಸ್ ವಿಜ್ಞಾನಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಫ್ಲ್ಯೂಯಿಡ್ ಡೈನಾಮಿಕ್ಸ್ ವಿಷಯದಲ್ಲಿ ಅವರಿಗೆ ಹೆಚ್ಚಿನ ಅಭಿರುಚಿ ಇತ್ತು. ಬೆಂಗಳೂರಿನ ಐಐಎಸ್ಸಿ ಯಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ನ್ಯಾಷನಲ್ ಏರೋಸ್ಪೇಸ್ ಲಾಬೊರೇಟರಿಯಲ್ಲಿ ನಿರ್ದೇಶಕರಾಗಿ ರೊಡ್ಡಮ್ ನರಸಿಂಹ ಕಾರ್ಯ ನಿರ್ವಹಿಸಿದ್ದರು.
ದೇಶ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ರೊಡ್ಡಮ್ ನರಸಿಂಹ ಅವರ ಅಗಲುವಿಕೆ ಅತ್ಯಂತ ನೋವಿನ ಸಂಗತಿ. ವಿಜ್ಞಾನ ಮತ್ತು ಅಧ್ಯಾತ್ಮಗಳನ್ನು ಬೇರೆಬೇರೆಯಾಗಿ ನೋಡದೇ, ಅವೆರಡೂ ಒಂದಕ್ಕೊಂದು ಪೂರಕವೆಂಬ ದೃಷ್ಟಿಯಲ್ಲಿ ಕೆಲಸ ಮಾಡಿದವರು. ನಮ್ಮ ಗಡಿಸುರಕ್ಷೆಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಉತ್ತಮ ಸಲಹೆಗಳನ್ನು ಅವರು ಸರ್ಕಾರಕ್ಕೆ ನೀಡಿದ್ದರು. ಆರೆಸ್ಸೆಸ್ಸಿನ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದ ಭೇಟಿಯಲ್ಲಿ ದೇಶದ ಆಗುಹೋಗುಗಳ ಬಗ್ಗೆ ಉತ್ತಮ ಚರ್ಚೆ ನಡೆದಿತ್ತು. ಇಂದಿನ ಯುವಪೀಳಿಗೆಗೆ ಅವರ ಜೀವನ ಮತ್ತು ಸಾಧನೆಗಳು ಪ್ರೇರಣೆ ನೀಡುವಂಥವು. ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕರಾದ ವಿ ನಾಗರಾಜ್ ತಮ್ಮ ಸಂದೇಶದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.