ಪುಣೆ: ಸಂಘ ಕಾರ್ಯ ವಿಸ್ತಾರದ ದೃಷ್ಟಿಯಿಂದ ಪ್ರಾರಂಭವಾದ 35-36 ಸಂಘಟನೆಗಳು ಸ್ವಾಯತ್ತ ಸಂಘಟನೆಗಳು. ಅವುಗಳ ನಿರ್ಣಯ ಪ್ರಕ್ರಿಯೆ ಸ್ವತಂತ್ರವಾಗಿರುತ್ತದೆ. ಸಮಾಜ ಜೀವನದಲ್ಲಿ ಕೆಲಸ ಮಾಡುವ ಈ ಸಂಘಟನೆಗಳ ಕಾರ್ಯಕರ್ತರಿಗೆ ಅನೇಕ ಅನುಭವಗಳು, ತಮ್ಮ ಕ್ಷೇತ್ರದಲ್ಲಿ ಗುರುತಿಸಿದ ಅಂಶಗಳು ಲಭ್ಯವಾಗುತ್ತವೆ. ಅವುಗಳ ಕುರಿತು ಪರಸ್ಪರ ಹಂಚಿಕೊಂಡು ಚರ್ಚಿಸುವ ಕಾರ್ಯ ಸಮನ್ವಯ ಬೈಠಕ್ ನಲ್ಲಿ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ.ಮನಮೋಹನ್ ವೈದ್ಯ ಹೇಳಿದರು.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಮೂರು ದಿನಗಳ ಸಮನ್ವಯ ಬೈಠಕ್ ನ ನಂತರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಮನ್ವಯ ಬೈಠಕ್ ವರ್ಷದಲ್ಲಿ ಒಂದು ಬಾರಿ ನಡೆಯುತ್ತದೆ. ಒಂದು ಪ್ರೇರಣೆಯಿಂದ ಸಮಗ್ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಸಕ್ರಿಯರಾಗಿದ್ದಾರೆ. ಸಂಘ ಕಾರ್ಯ ಆರಂಭಗೊಂಡು 97 ವರ್ಷಗಳಾಗಿವೆ. ಒಟ್ಟು ನಾಲ್ಕು ಹಂತಗಳಲ್ಲಿ ಸಂಘ ಕಾರ್ಯ ವಿಸ್ತಾರವನ್ನು ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಹಿಂದೂ ಸಮಾಜ ಸಂಘಟಿತವಾಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಒಂದು ದಿಕ್ಕಿನಲ್ಲಿ ಹೆಜ್ಜೆ ಹಾಕುವುದು ಸಾಧ್ಯವಾಗುತ್ತದೆ. ಒಂದು ಸ್ವರದಲ್ಲಿ, ಒಂದೇ ಮನಸ್ಸಿನಲ್ಲಿ ಭಾರತದ ಕುರಿತು ಮಾತನಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವನ್ನು ಸಮಾಜದಲ್ಲಿ ಮೂಡಿಸುವ ಅವಶ್ಯಕತೆ ಇತ್ತು. ಹಾಗಾಗಿ ಮೊದಲ 25 ವರ್ಷಗಳು ಸಂಘಟನೆ ಮತ್ತು ವ್ಯಕ್ತಿ ನಿರ್ಮಾಣಕ್ಕೆ ಮಾತ್ರ ಸಂಘ ಪ್ರಾಮುಖ್ಯತೆಯನ್ನು ಕೊಟ್ಟಿತು ಎಂದರು.

ಸ್ವಾತಂತ್ರ್ಯದ ನಂತರ ಸಂಘ ಕಾರ್ಯ ವಿಸ್ತಾರದ ಎರಡನೇ ಹಂತ ಆರಂಭವಾಯಿತು. ಪ್ರಥಮ ಹಂತದ ಸಂಘ ಕಾರ್ಯದ ಧ್ಯೇಯವನ್ನು ಮುನ್ನಡೆಸುತ್ತಾ ಶಾಖೆಯ ಸಂಪರ್ಕಕ್ಕೆ ಬಾರದ ವಿವಿಧ ಕ್ಷೇತ್ರಗಳ ಜನರನ್ನು ತಲುಪುವುದಕ್ಕಾಗಿ ಸಂಘದ ಸ್ವಯಂಸೇವಕರು ಸಂಘದ ರಾಷ್ಟ್ರೀಯ ವಿಚಾರವನ್ನು ಮೂಲವಾಗಿಸಿಕೊಂಡು ಈ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸಂಘಟನೆಗಳನ್ನು ಪ್ರಾರಂಭಿಸಿದರು. ಪ್ರಸ್ತುತ 35-36 ವಿವಿ‍ಧ ಸಂಘಟನೆಗಳು ಸಂಘದ ಪ್ರೇರಣೆಯಿಂದ ಮುನ್ನಡೆಯುತ್ತಿವೆ ಎಂದು ನುಡಿದರು.

ಸಂಘ ಕಾರ್ಯವಿಸ್ತಾರದ ಮೂರನೇ ಹಂತ 1989ರ ಡಾ.ಕೇಶವ ಬಲಿರಾಮ ಹೆಡಗೇವಾರ್ ಅವರ ಜನ್ಮಶತಾಬ್ದಿಯ ನಂತರ 1990ರಲ್ಲಿ ಪ್ರಾರಂಭವಾಯಿತು. ಅದರ ಸ್ವರೂಪವೇ ಹೆಚ್ಚು ಜನರನ್ನು ತಲುಪುವುದಾಗಿತ್ತು. 1991-94ರೊಳಗೆ ಸೇವಾ, ಸಂಪರ್ಕ ಹಾಗೂ ಪ್ರಚಾರ ವಿಭಾಗಗಳು ಪ್ರಾರಂಭವಾದವು. ಈ ವಿಶಿಷ್ಟ ಕ್ಷೇತ್ರಗಳ ಮೂಲಕ ಸಮಾಜ ಪರಿವರ್ತನೆಯ ಕಾರ್ಯವನ್ನು ಸ್ವಯಂಸೇವಕರು ಪ್ರಾರಂಭಿಸಿದರು. ಕುಟುಂಬ ಪ್ರಬೋಧನ, ಗ್ರಾಮವಿಕಾಸ, ಪರ್ಯಾವರಣ ಸಂರಕ್ಷಣಾ ಮುಂತಾದ ಗತಿವಿಧಿಗಳ ಮೂಲಕ ಸಂಘದ ತೃತೀಯ ಹಂತದ ಕೆಲಸಗಳು ಮುನ್ನೆಲೆಗೆ ಬಂದವು ಎಂದು ತಿಳಿಸಿದರು.

2006ರ ನಂತರ ಗುರೂಜಿ ಅವರ ಜನ್ಮಶತಾಬ್ದಿಯ ನಂತರ ಸಂಘಕಾರ್ಯದ ನಾಲ್ಕನೇ ಹಂತ ಪ್ರಾರಂಭವಾಯಿತು. ಈ ಹಂತದಲ್ಲಿ ಪ್ರತಿ ಸ್ವಯಂಸೇವಕ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ದಿಕ್ಕಿನಲ್ಲಿ ಸಕ್ರಿಯನಾಗುವಂತೆ ಮಾಡುವುದರ ಕುರಿತು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಈ ನಾಲ್ಕು ಹಂತಗಳು ಸಂಘ ಕಾರ್ಯ ವಿಸ್ತಾರದ ಪ್ರಮುಖ ನಾಲ್ಕು ಹಂತಗಳು ಎಂದರು.

ಸಮನ್ವಯ ಬೈಠಕ್ ನಲ್ಲಿ ಸಂಘ ಪ್ರೇರಿತ ಎಲ್ಲಾ ಸಂಘ ಸಂಸ್ಥೆಗಳಲ್ಲಿನ ಮಹಿಳಾ ಸಹಿಭಾಗಿತ್ವವನ್ನು ಹೆಚ್ಚುಗೊಳಿಸುವ ದೃಷ್ಟಿಯಿಂದ ಅದಾಗಲೇ ಸಕ್ರಿಯವಾಗಿದ್ದ ಕಾರ್ಯಕರ್ತೆಯರ ಸಮನ್ವಯ ನಡೆಯಿತು. ಮಹಿಳೆಯರ ನಡುವೆ ವ್ಯಾಪಕ ಸಂಪರ್ಕ ನಿರ್ಮಾಣವಾಗಲು, ಮಹಿಳೆಯ ಮೂಲಕ ಭಾರತೀಯ ಚಿಂತನೆಯನ್ನು ಸಮಾಜದಲ್ಲಿ ಪಸರಿಸಲು ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ವಿಭಾಗ ಸ್ಥರದಲ್ಲಿ ಮಹಿಳಾ ಸಮ್ಮೇಳನವನ್ನು ಮಾಡುವ ಕುರಿತು ನಿರ್ಧರಿಸಲಾಗಿತ್ತು. ಮಹಿಳೆಯರಲ್ಲಿ ಪರಸ್ಪರ ಸಂಪರ್ಕ ಹೆಚ್ಚಿಸಲು ದೇಶಾದ್ಯಂತ 411 ಸಮ್ಮೇಳನಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ, 12 ಪ್ರಾಂತ್ಯಗಳಲ್ಲಿ 73 ಸಮ್ಮೇಳನಗಳನ್ನು ಆಯೋಜಿಸಲಾಗಿದ್ದು ಅವುಗಳಲ್ಲಿ ಒಟ್ಟು ಸುಮಾರು 1,30,000 ಮಂದಿ ಮಹಿಳೆಯರು ಭಾಗವಹಿಸುವ ಮೂಲಕ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಸಂಘದ ಶತಮಾನೋತ್ಸವ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕುರಿತು ಬೈಠಕ್ ನಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.

ಸಂಘ ಪ್ರೇರಿತ ವಿವಿ‍ಧ ಸಂಘಟನೆಗಳಲ್ಲಿ ಕಾರ್ಯನಿರತ ಅನೇಕ ಹೊಸಬರಿಗೆ ಸಂಘದ ಕುರಿತು ತಿಳಿದಿರುವುದಿಲ್ಲ ಹಾಗೂ ಅವರು ಸಂಘದ ಸ್ವಯಂಸೇವಕರಾಗಿರುವುದಿಲ್ಲ. ಹಾಗಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಅಂತಹ ಹೊಸಬರಿಗೆ ಸಂಘದ ವೈಚಾರಿಕತೆ ಅರ್ಥವಾಗುವುದಕ್ಕಾಗಿ, ಅನ್ಯ ಸಂಘಟನೆಗಳ ಕುರಿತು ತಿಳಿಯುವುದಕ್ಕಾಗಿ ಈ ಸಮನ್ವಯ ಬೈಠಕ್ ಸಾಧ್ಯವಾಗುತ್ತದೆ. ಆ ಸಂಘಟನೆಗಳಲ್ಲಿ ಕಾರ್ಯನಿರತರಾಗಿರುವ ಕಾರ್ಯಕರ್ತರು ನಮ್ಮ ಸಹಯಾತ್ರಿಗಳು ಎಂಬ ಸಮನ್ವಯದ ಮನಸ್ಥಿತಿ ರೂಪುಗೊಳ್ಳುತ್ತದೆ. ಎಲ್ಲರೂ ಒಟ್ಟಾಗಿ ಪರಸ್ಪರ ಪೂರಕವಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿ ಭಾರತವನ್ನು ಸಮೃದ್ಧ ಭಾರತವನ್ನಾಗಿಸುವ ಕುರಿತು ಈ ಬೈಠಕ್ ನಲ್ಲಿ ನಿರ್ಧರಿಸಲಾಯಿತು. ಎಲ್ಲಾ ಸಂಘಟನೆಯವರು ಜೊತೆಯಾಗಿ ಕಾರ್ಯನಿರ್ವಹಿಸುವ ಕುರಿತು ಪ್ರಶಿಕ್ಷಣ ಹಾಗೂ ಹೊಸದಾಗಿ ಸಂಘಟನೆಯ ಭಾಗವಾದವರಿಗೆ ಸಂಘ ಪರಿಚಯ ವರ್ಗ ಮಾಡುವ ಕುರಿತು ಇಲ್ಲಿ ಚರ್ಚಿಸಲಾಯಿತು. ಹಾಗೆಯೇ ಸಂಘದ ಸಂಪರ್ಕಕ್ಕೆ ಬಾರದ ಮತ್ತು ನಮ್ಮ ಕಾರ್ಯಗಳಿಗೆ ಜೊತೆಯಾಗಬಲ್ಲ ಸಜ್ಜನ ಶಕ್ತಿಯನ್ನು ಸಂಪರ್ಕಿಸುವ ಕುರಿತು ಬೈಠಕ್ ನಲ್ಲಿ ಚರ್ಚಿಸಲಾಯಿತು ಎಂದರು.

ಸಂಘ ಕಾರ್ಯ ವೃದ್ಧಿಸುತ್ತಿದೆ. ಸಂಘಕಾರ್ಯದಲ್ಲಿ ಸಮಾಜದ ಸಹಭಾಗಿತ್ವ ಹೆಚ್ಚುತ್ತಿದೆ. ಕೊರೋನಾ ಸಂದರ್ಭದಲ್ಲಿ ಅಂದರೆ 2020 ರಲ್ಲಿ, ದೇಶದಲ್ಲಿ 38,913 ಸ್ಥಳಗಳಲ್ಲಿ ಶಾಖೆಗಳಿದ್ದವು. 2023ರಲ್ಲಿ ಈ ಸಂಖ್ಯೆಯು 42,613ಕ್ಕೆ ಏರಿದೆ. ಅಂದರೆ 9.5% ಪ್ರತಿಶತದಷ್ಟು ಹೆಚ್ಚಾಗಿದೆ. 2020ರಲ್ಲಿ 62,491 ಇದ್ದ ಶಾಖೆಗಳ ಸಂಖ್ಯೆ 2023ರಲ್ಲಿ 68,651ಕ್ಕೆ ಏರಿಕೆಯಾಗಿದೆ. 2020ರಲ್ಲಿ ಇದ್ದ 20,300 ಸಾಪ್ತಾಹಿಕ ಮಿಲನ್ ಗಳ ಸಂಖ್ಯೆ 26,877ಕ್ಕೆ ಏರಿಕೆಯಾಗಿದೆ. 2020ರಲ್ಲಿ 8,732 ಸಂಘ ಮಂಡಲಿಗಳಿದ್ದವು. ಆದರೆ 2023ರ ಹೊತ್ತಿಗೆ ಅವುಗಳ ಸಂಖ್ಯೆ 10,400ರಷ್ಟಾಗಿದೆ. JOIN RSS ವೆಬ್ ಸೈಟ್ ಮೂಲಕ ಪ್ರತಿ ವರ್ಷ 20-35 ವಯೋಮಿತಿಯ 1ಲಕ್ಷಕ್ಕೂ ಹೆಚ್ಚು ತರುಣರು ಆನ್ ಲೈನ್ ಮೂಲಕ ಸಂಘದ ಸ್ವಯಂಸೇವಕರಾಗಲು ಅರ್ಜಿಯನ್ನು ಸಲ್ಲಿಸಿರುವುದು ಸಂಘ ಕಾರ್ಯದ ವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.