ಕಂಬಾರರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಭಿನಂದನೆ
ಬೆಂಗಳೂರು ಸೆಪ್ಟೆಂಬರ್ 22:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಜಾನಪದ ವಿದ್ವಾಂಸ ಡಾ.ಚಂದ್ರಶೇಖರ ಕಂಬಾರರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರು ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಕಂಬಾರರ ಕತ್ತರಿಗುಪ್ಪೆಯ ‘ಸಿರಿಸಂಪಿಗೆ’ ನಿವಾಸಕ್ಕೆ ತೆರಳಿದ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮೈ ಚ ಜಯದೇವ್, ಶಿಕ್ಷಣ ತಜ್ಞ ಪ್ರೊ. ಕೃ. ನರಹರಿ, ಉತ್ಥಾನ ಮಾಸಿಕದ ಸಂಪಾದಕ ಹಾಗೂ ಕಂಬಾರರ ಧೀರ್ಘ ಕಾಲದ ಸ್ನೇಹಿತ ಡಾ. ಎಸ್ ಆರ್ ರಾಮಸ್ವಾಮಿ , ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ಎನ್ ದಿನೇಶ್ ಹೆಗ್ಡೆ , ಆರೆಸ್ಸೆಸ್ ಪ್ರಾಂತ ಸಹಕಾರ್ಯವಾಹ ಪ್ರೊ. ಬಿ. ವಿ. ಶ್ರೀಧರ ಸ್ವಾಮಿ ಹಾಗೂ ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಮುಂತಾದವರು ಕಂಬಾರರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ , ರಾಷ್ಟ್ರೋತ್ಥಾನದ ಹೆಮ್ಮೆಯ ಪ್ರಕಟಣೆಗಳಾದ ಡಾ|| ಅನುಪಮಾ ನಿರಂಜನ ಮಕ್ಕಳಿಗೆಂದೇ ಬರೆದ ಪಸ್ತಕ ’ದಿನಕ್ಕೊಂದು ಕಥೆ’ಯ ಬಿಡುಗಡೆಯ ಕಾರ್ಯಕ್ರಮಕ್ಕೆ ಬಂದಿದ್ದನ್ನು ನೆನಪಿಸಿಕೊಂಡು ಕಂಬಾರ ಭಾವುಕರಾದರು.
ಇಂದಿನ ಮಕ್ಕಳ ಶಿಕ್ಷಣದಲ್ಲಿನ ಇಂಗ್ಲೀಷ್ ಹಾವಳಿ ಅವರನ್ನು ಚಿಂತೆಗೀಡು ಮಾಡಿತ್ತು. ಏನಾದರೂ ಮಾಡಿ ೧೦ ನೇ ತರಗತಿಯವರೆಗೆ ಎಲ್ಲರೂ ಕನ್ನಡದಲ್ಲೇ ಓದೋ ಹಾಗೇ ಆಗಬೇಕು. ಸರ್ಕಾರಿ ಶಾಲೆಯಿಂದ ಬಂದ ಕೀಳರಿಮೆಯ ಕನ್ನಡದ ಮಕ್ಕಳು ಒಂದು ಕಡೆ, ಖಾಸಗಿ ಶಾಲೆಯಿಂದ ಬಂದ ಧಿಮಾಕಿನ ಇಂಗ್ಲೀಷ್ ಮಕ್ಕಳು ಇನ್ನೊಂದು ಕಡೆ. ನಾವು ನಮ್ಮಲ್ಲೇ ಎರಡು ಜನಾಂಗ ಸೃಷ್ಟಿಸ್ತಾ ಇದ್ದೀವಿ. ಮಕ್ಕಳೆಲ್ಲ ಹೀಗೆ ಪರದೇಸಿಗಳಾದರೆ ’ದಿನಕ್ಕೊಂದು ಕಥೆ’ ಎಂತಹ ಪಸ್ತಕ ಓದೋರು ಯಾರು? ಕಥೆ ಓದಿದೋನು, ಕೇಳಿದೋನು ಅದನ್ನು ಇನ್ನೊಬ್ಬರಿಗೆ ಹೇಳ್ತಾನೆ. ಹಾಗೆ ಹೇಳುವಾಗ ತನ್ನದು ಹತ್ತು ವಾಕ್ಯ ಸೇರಿಸ್ತಾನೆ. ಇಂಗ್ಲೀಷ್ ಹಾವಳಿಯಿಂದ ಈ ಸೃಜನಶೀಲತೆಯೇ ನಾಶವಾಗಿದೆ. ಪರದೇಶಿಗಳಾದ ಮುಂದಿನ ಜನಾಂಗ ಹುಟ್ಟುತ್ತಿರುವಾಗ ೮ನೇ ಜ್ಞಾನಪೀಠ ದಕ್ಕಿಸಿಕೊಂಡ ಕನ್ನಡ ಭಾಷೆಗೇನಿದೆ ಬೆಲೆ ಎಂದರು ಕಂಬಾರ.