RSS IT Milan's Kannada Parichaya Varg

ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು!

‘ನನ್ನ ಹೆಸರು ಅರ್ಪಿತಾ. ನಿಮ್ಮ ಹೆಸರು ಏನು?’ ಎಂಬ ಪ್ರಶ್ನೆಗೆ ’ನನ್ನ ಹೆಸರು ನಿಖಿಲ್ ಲಾಡ್’ ಎಂದು ಅಲ್ಲಿ ಕುಳಿತವರೊಬ್ಬರು ಉತ್ತರ ಕೊಡುತ್ತಿದ್ದರು. ’ನನ್ನ ಮನೆ ಜಯನಗರದಲ್ಲಿದೆ. ನಿಮ್ಮ ಮನೆ ಎಲ್ಲಿ ಇದೆ?’ ಎಂಬ ಪ್ರಶ್ನೆಗೂ ಥಟ್ಟನೇ ಉತ್ತರ ಬರುತ್ತಿತ್ತು. ಅರೇ! ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ?! ವಿಶೇಷವಿದೆ. ಪ್ರಶ್ನೆ ಕೇಳುತ್ತಿದ್ದವರು ಕನ್ನಡ ಕಲಿಸುತ್ತಿದ್ದವರು, ಉತ್ತರ ಹೇಳುತ್ತಿದ್ದವರು ಕನ್ನಡ ಕಲಿಯಲು ಬಂದ ಕನ್ನಡೇತರರು. ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಸುಮಾರು 200 ಅಪಾರ್ಟ್‌ಮೆಂಟ್‌ಗಳಲ್ಲಿ ಕಂಡುಬರುತ್ತಿದ್ದ ದೃಶ್ಯ ಇದು. ಅಲ್ಲಿ ನಡೆಯುತ್ತಿದ್ದುದು ’ಕನ್ನಡ ಪರಿಚಯ ವರ್ಗ’

RSS IT Milan’s Kannada Parichaya Varg

’ಬೆಂಗಳೂರು ಅಡ್ಡಾದಿಡ್ಡಿ ಬೆಳೀತಿದೆ. ಎಲ್ಲೆಲ್ಲಿಂದಲೋ ಬಂದವರೇ ಇಲ್ಲಿ ಜಾಸ್ತಿಯಾಗಿದ್ದಾರೆ. ಕೆಲವು ಕಡೆ ಹೋದ್ರಂತೂ ಕನ್ನಡಾನೇ ಕಿವಿಗೆ ಬೀಳಲ್ಲ. ಇದು ಕರ್ನಾಟಕ ಹೌದೋ ಅಲ್ವೋ ಅನ್ನೋ ಥರಾ ಆಗಿಬಿಟ್ಟಿದೆ. ಬೆಂಗಳೂರಲ್ಲಿ ಇನ್ನು ಕನ್ನಡಕ್ಕೆ ಉಳಿಗಾಲವಿಲ್ಲ!’ – ಇಂಥಾ ಮಾತುಗಳನ್ನು ನಾವೆಲ್ಲಾ ಆಗಾಗ ಕೇಳುತ್ತಿರುತ್ತೇವೆ. ಕನ್ನಡದ ಬಗ್ಗೆ ಕಾಳಜಿಯಿರುವ ಅನೇಕರಿಗೆ ಹೊರಗಡೆಯಿಂದ ಬಂದವರು ಕನ್ನಡ ಕಲೀತಿಲ್ಲ, ಹಾಗಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಕೊರಗು ಇರುವುದು ಸುಳ್ಳಲ್ಲ. ಆದರೆ, ನಾವೇ ಅವರ ಹತ್ತಿರ ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಮಾತನಾಡಿದರೆ ಅವರು ಕನ್ನಡವನ್ನು ಕಲಿಯುವುದಾದರೂ ಹೇಗೆ ಎನ್ನುವುದೂ ಸತ್ಯವೇ. ಹಾಗಾದರೆ, ಅವರಿಗೆ ಕನ್ನಡ ಕಲಿಸುವರು ಯಾರು? ಅದಕ್ಕೇನು ವ್ಯವಸ್ಥೆಯಿದೆ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬುದು ಪ್ರಶ್ನೆ.

ಇದನ್ನು ಗಮನಿಸಿದ ಆರೆಸ್ಸೆಸ್ ಐಟಿ ಮಿಲನ್‌ನ ಸ್ವಯಂಸೇವಕರಾದ ಕೆಲವು ಸಾಫ್ಟ್‌ವೇರಿಗರು ತಾವೇಕೆ ಈ ಕೆಲಸ ಮಾಡಬಾರದು ಎಂದು ಯೋಚಿಸಿದರು. ಅದರ ಫಲವಾಗಿಯೇ ಕಳೆದ ಫೆಬ್ರವರಿ ೧೧ ಮತ್ತು ೧೨ರ ಶನಿವಾರ ಭಾನುವಾರದಂದು ’ಕನ್ನಡ ಪರಿಚಯ ವರ್ಗ’ ನಡೆಯಿತು! ಎರಡೂ ದಿನ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಡೆದ ಕನ್ನಡ ಕಲಿಕೆಯ ಈ ಕಾರ್ಯಕ್ರಮದಲ್ಲಿ ಸುಮಾರು ೩೦೦೦ ಜನ ಕನ್ನಡಿಗರಲ್ಲದವರು ಕನ್ನಡದ ಪರಿಚಯ ಮಾಡಿಕೊಂಡರು. ಐಟಿ ಮಿಲನ್‌ನ ಸ್ವಯಂಸೇವಕರಲ್ಲದೇ ಇತರ ಸಾಫ್ಟ್‌ವೇರ್ ಉದ್ಯೋಗಿಗಳೂ ಸೇರಿದಂತೆ ಸುಮಾರು ೩೩೦ ಜನರು ಕನ್ನಡ ಕಲಿಸಲು ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದರು. ಕೆಲವೆಡೆ ಗಂಡ ಹೆಂಡರಿಬ್ಬರೂ, ಇನ್ನು ಕೆಲವೆಡೆ ಸಾಫ್ಟ್‌ವೇರಿನ ಹುಡುಗಿಯರೂ ಶಿಕ್ಷಕರಾಗಿ ದೂರದ ಅಪಾರ್ಟ್‌ಮೆಂಟಿಗೆ ಹೋಗಿ ಕನ್ನಡ ಕಲಿಸಿದ್ದು ವಿಶೇಷವಾಗಿತ್ತು. ಕನ್ನಡದ ಗಂಧಗಾಳಿಯೂ ಇಲ್ಲದವರು ಕೇವಲ ಎರಡೇ ದಿನದಲ್ಲಿ ’ನನ್ನ ಹೆಸರು …. ನಿಮ್ಮ ಹೆಸರು ಏನು?’  ಎಂಬ ಮಂತ್ರ ಶುರು ಮಾಡಿದರು. ದಿನಬಳಕೆಯಲ್ಲಿ ಮಾತನಾಡಲು ಬೇಕಾಗುವಷ್ಟು ಕನ್ನಡ ಕಲಿತರು, ಅದೂ ಯಾವುದೇ ಶುಲ್ಕ ನೀಡದೇ!

’ನಮಸ್ಕಾರ ಅಣ್ಣಾ’ ಎಂದೇ ಮಾತಿಗೆ ಶುರುಮಾಡಿದ ಗ್ಲೋಮಂತ್ರ ಕಂಪೆನಿಯಲ್ಲಿ ಕೆಲಸ ಮಾಡುವ ಒರಿಸ್ಸಾ ಮೂಲದವರಾದ, ಐಟಿ ಮಿಲನ್‌ನ ಪ್ರಭಾತಚಂದ್ರ ಪಾತ್ರ (ಅಂದ ಹಾಗೆ, ಐಟಿ ಮಿಲನ್ ಎನ್ನುವುದು ಸಾಫ್ಟ್‌ವೇರ್ ಉದ್ಯೋಗಿಗಳಿಗಾಗಿಯೇ ಪ್ರತೀ ಭಾನುವಾರ ನಡೆಯುವ ಆರೆಸ್ಸೆಸ್ಸಿನ ಶಾಖೆ.) ಹೇಳುವ ಹಾಗೆ ಕನ್ನಡ ಕಲಿಸುವ ಈ ಐಡಿಯಾ ಬಂದಿದ್ದೇ ತಡ, ಅವರ ಮಿತ್ರರೆಲ್ಲಾ ಯಾವುದೇ ಚರ್ಚೆಯಿಲ್ಲದೇ ಇದನ್ನು ಒಪ್ಪಿದರಂತೆ. ಸರಿ, ಇನ್ನೇಕೆ ತಡ ಎಂದು ತಮ್ಮ ಇಡೀ ತಂಡವನ್ನು ಇದಕ್ಕಾಗಿ ತೊಡಗಿಸಿದರು. ಬೇರೆ ಬೇರೆ ಅಪಾರ್ಟ್‌ಮೆಂಟ್‌ಗಳನ್ನು ಸಂಪರ್ಕಿಸಿ ಅಲ್ಲಿ ಕಲಿಕಾ ಕೇಂದ್ರಗಳನ್ನು ಗುರುತಿಸುವ ಗುಂಪು ಒಂದಾದರೆ, ತಮ್ಮ ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಮತ್ತು ಸಂಬಂಧಿಕರ ಬಳಿ ಮಾತನಾಡಿ ಶಿಕ್ಷಕರಾಗಿ ಬರಲು ಮನವೊಲಿಸಿ, ಅವರಿಗೆ ಒಂದು ಗಂಟೆಯ ಪ್ರಾತ್ಯಕ್ಷಿಕೆ ನಡೆಸಿ ತರಬೇತಿ ಕೊಡುವ ಗುಂಪು ಇನ್ನೊಂದು. ಯಾರ‍್ಯಾರು ಯಾವ್ಯಾವ ಅಪಾರ್ಟ್‌ಮೆಂಟಿಗೆ ಹೋಗಬೇಕು ಎನ್ನುವುದನ್ನು ನಿರ್ಧರಿಸಿ ಅವರಿಗೆ ವಾಹನ ವ್ಯವಸ್ಥೆ ಮಾಡುವ ಗುಂಪು ಮತ್ತೊಂದು. ಹೀಗೆ ಸುಮಾರು ೬೦೦ ಜನ ಕಾರ್ಯಕರ್ತರು ಇದರಲ್ಲಿ ಮೂರು ತಿಂಗಳಿನಿಂದ ತೊಡಗಿಸಿಕೊಂಡದ್ದರಂತೆ. ಅದರಿಂದಾಗಿಯೇ ಏಕಕಾಲದಲ್ಲಿ ಇಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡ ಪರಿಚಯ ವರ್ಗ ನಡೆಸಲು ಸಾಧ್ಯವಾಯಿತು ಎಂಬ ಪ್ರಭಾತಚಂದ್ರರ ಮಾತಿಗೆ, ಅಲ್ಲಿ ಕಲಿಸುವ ಸಿಲಬಸ್ ಏನಿರಬೇಕು ಎನ್ನುವುದನ್ನು ಸಿದ್ಧಪಡಿಸಿ ಪರಿಷ್ಕರಿಸಲು ಮತ್ತೊಂದು ಗುಂಪು ಒಂದು ತಿಂಗಳಿನಿಂದ ಕೆಲಸ ಮಾಡಿದೆ ಎಂದು ಇನ್ನೊಬ್ಬ ಕಾರ್ಯಕರ್ತ ಅಕಾರ್ಡ್ ಸಾಫ್ಟ್‌ವೇರ್‌ನ ಉದ್ಯೋಗಿ ರಾಘವೇಂದ್ರ ಕುಲಕರ್ಣಿ ದನಿಗೂಡಿಸಿದರು.

ಹೊರ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಯಲು ಆಸಕ್ತಿಯಿಲ್ಲ ಎನ್ನುವುದು ಸತ್ಯವಲ್ಲ ಎನ್ನುವುದು ನಮಗೆ ಮನವರಿಕೆಯಾಯಿತು. ಸುಮಾರು 5 ಕೇಂದ್ರಗಳಲ್ಲಿ 40 ಕ್ಕೂ ಹೆಚ್ಚು ಜನ ಕನ್ನಡ ಕಲಿಯಲು ಬಂದಿದ್ದು, ಹೆಚ್ಚೂ ಕಮ್ಮಿ ಎಲ್ಲಾ ಕೇಂದ್ರಗಳಲ್ಲೂ ಇದನ್ನು ಪ್ರತೀವಾರವೂ ಮುಂದುವರಿಸಿ ಎಂಬ ಬೇಡಿಕೆ ಬಂದಿದ್ದು ಇದಕ್ಕೆ ಸಾಕ್ಷಿಯಾಗಿತ್ತು ಎನ್ನುತ್ತಾರೆ ಶಿಕ್ಷಕರಾಗಿ ಭಾಗವಹಿಸಿದ್ದ ಸಾಫ್ಟ್‌ವೇರಿಗ ಸುಪ್ರದೀಪ್ ಸುಬ್ರಹ್ಮಣ್ಯ ಅವರು. ಅಲ್ಲದೇ, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದ ಕಾರ್ಯಕರ್ತರು ಇದರಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು ಎನ್ನುತ್ತಾರೆ ಅವರು.

ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು!

Leave a Reply

Your email address will not be published.

This site uses Akismet to reduce spam. Learn how your comment data is processed.