ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ-ನಿಧಾರಗಳನ್ನು ನಿರೂಪಿಸುವ ೩ದಿನಗಳ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ, ಮಾರ್ಚ್ ೧೬, ೧೭ ಮತ್ತು ೧೮ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು. ಆರೆಸ್ಸೆಸ್ ಹಾಗೂ ಇತರ ಪರಿವಾರ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಭಾಗವಹಿಸಿದ್ದ ಈ ಮಹತ್ವದ ಸಭೆಯಲ್ಲಿ ರಾಷ್ಟ್ರಜೀವನವನ್ನು ಪ್ರಭಾವಿಸುವ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರೀಯ ಜಲನೀತಿ ಕುರಿತು ಮಹತ್ವದ ನಿರ್ಣಯಗಳನ್ನು ಪ್ರತಿನಿಧಿ ಸಭಾದಲ್ಲಿ ಕೈಗೊಳ್ಳಲಾಯಿತು. ಈ ನಿರ್ಣಯಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ನಿರ್ಣಯ: 1 – ರಾಷ್ಟ್ರೀಯ ಏಕತೆಗೆ ಮೊದಲ ಮಣೆ

ರತದ ವಿವಿಧ ಭಾಗಗಳಲ್ಲಿ ಈಗ ಅನೇಕ ಜನಾಂದೋಲನಗಳು ನಡೆಯುತ್ತಿವೆ, ಭೂಮಿಯ ಹಕ್ಕು, ರಾಜಕೀಯ ಹಕ್ಕು, ಅಣೆಕಟ್ಟು ನಿರ್ಮಾಣ ಮತ್ತು ನದಿನೀರಿನ ಹಂಚಿಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಜನರ ವಲಸೆ, ಬುಡಕಟ್ಟು, ಜಾತಿ, ಮತ ಮುಂತಾದ ಅಂಶಗಳನ್ನು ಆಧರಿಸಿದ ವಿವಿಧ ಗುಂಪುಗಳ ನಡುವೆ ಘರ್ಷಣೆ- ಹೀಗೆ ಅವುಗಳನ್ನು ಗುರುತಿಸಬಹುದು. ಈ ಚಳವಳಿಗಳ ಕೆಲವು ಸ್ಥಾಪಿತ ಹಿತಾಸಕ್ತಿಗಳ ಚಟುವಟಿಕೆಗಳಿಂದಾಗಿ ಸಮಾಜದ ವಿವಿಧ ವರ್ಗಗಳ ನಡುವೆ ವೈಮನಸ್ಸು ಬೆಳೆಯುತ್ತಿರವುದಕ್ಕೆ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಕಳವಳ ವ್ಯಕ್ತಪಡಿಸಿದೆ.

ಅಂತಹ ಚಳವಳಿಗಳನ್ನು ಒಂದು ಪಕ್ವವಾದ ರಾಜಕೀಯ ವ್ಯವಸ್ಥೆಯು ಅತ್ಯಂತ ಎಚ್ಚರ ಮತ್ತು ಸೂಕ್ಷ್ಮತೆಯೊಂದಿಗೆ ನಿಭಾಯಿಸಬೇಕೆಂದು ಪ್ರತಿನಿಧಿ ಸಭಾ ಸೂಚಿಸಿದೆ. ಇಂತಹ ವಿಷಯಗಳನ್ನು ನಿರ್ವಹಿಸುವಾಗ ಅದು ಏಕತೆ ಮತ್ತು ಭಾವೈಕ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ದುರದೃಷ್ಟಕರವೆಂದರೆ ಇಂದು ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳ ದುರುಪಯೋಗದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ.

ಜನಶಿಕ್ಷಣ ಮತ್ತು ಜಾಗೃತಿಗಳಲ್ಲಿ ಮಾಧ್ಯಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಾಧ್ಯಮದ ಒಂದು ಭಾಗ ಅಂತಹ ವಿಷಯಗಳಲ್ಲಿ ಭಾವೋದ್ರೇಕ ಉಂಟುಮಾಡುವುದರಿಂದ ಆಯಾ ಆಂದೋಲನಗಳ ಹಿತಕ್ಕೆ ಭಂಗ ಉಂಟಾಗುವುದಷ್ಟೇ ಅಲ್ಲ; ಸಾಮಾಜಿಕ ವ್ಯವಸ್ಥೆಯ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತದೆ. ಅಂತಹ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸುವ ಸ್ವಯಂಸೇವಾಕರ್ತರು ಮತ್ತು ಸರ್ಕಾರೇತರ ಸಂಸ್ಥೆ (ಎನ್‌ಜಿಓ)ಗಳ ನಾಯಕರು ತಮ್ಮ ಚಳವಳಿಗಳಲ್ಲಿ ಅಂತಹ ವಿಭಾಜಕ ಪ್ರವೃತ್ತಿಗಳು ತಲೆಹಾಕದಂತೆ ವಿಶೇಷ ಎಚ್ಚರವಹಿಸಬೇಕು ಮತ್ತು ಸ್ಥಾಪಿತ ಹಾಗೂ ವಿದೇಶಿ ಹಿತಾಸಕ್ತಿಗಳು ಚಳವಳಿಯ ದುರ್ಲಾಭ ಪಡೆದು ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಏಕತೆಗೆ ಭಂಗ ಉಂಟುಮಾಡದಂತೆ ನೋಡಿಕೊಳ್ಳಬೇಕು. ಅಂತಹ ಚಳವಳಿಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಬಗ್ಗೆ ರಚನಾತ್ಮಕ ಪಾತ್ರ ವಹಿಸಬೇಕೆಂದು ಮಾಧ್ಯಮ ಮತ್ತು ಎನ್‌ಜಿಓಗಳಿಗೆ ಆರೆಸ್ಸೆಸ್ ವಿನಂತಿ ಮಾಡಿದೆ.

ಪ್ರತಿಯೊಂದು ಕಡೆಯಿಂದಲೂ ಪ್ರಾಮಾಣಿಕವಾದ ಅಹವಾಲುಗಳು ಮತ್ತು ದೂರುಗಳು, ಬೇಡಿಕೆಗಳಿರುವ ಕಾರಣದಿಂದಲೇ ಅನೇಕ ಚಳವಳಿಗಳು ಹುಟ್ಟಿಕೊಳ್ಳುತ್ತವೆಂಬುದು ನಿಜ. ಆದರೆ ಇದರಿಂದ ನಮ್ಮ ಸಮಾಜದ ಏಕತೆ ಮತ್ತು ಭಾವೈಕ್ಯಗಳು ಅಲಕ್ಷ್ಯಕ್ಕೆ ಗುರಿಯಾಗಬಾರದೆಂದು ಈ ಚಳವಳಿಗಳ ಮುಂದಾಳುಗಳನ್ನು ಹಾಗೂ ಭಾಗವಹಿಸುವ ಜನರನ್ನು ಪ್ರತಿನಿಧಿ ಸಭಾ ಕೋರುತ್ತದೆ. ಬೇಡಿಕೆಗಳನ್ನು ಮುಂದಿಡುವಾಗ ಹಾಗೂ ಚಳವಳಿಯ ವೇಳೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಒಡಕುಂಟಾಗಿ ರಾಷ್ಟ್ರೀಯ ಬಂಧವು ದುರ್ಬಲವಾಗದಂತೆ ಎಚ್ಚರ ವಹಿಸಬೇಕು.

ಕೋಮುವಾದಿ ಮತ್ತು ನಿರ್ದೇಶಿತ ಹಿಂಸಾಚಾರ ಮಸೂದೆ ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯ ವಿಷಯದಲ್ಲಿ ಕೇಂದ್ರ ಸರ್ಕಾರವು ನಡೆದುಕೊಂಡ ರೀತಿ ದೇಶದಲ್ಲಿ ಸಂಘರ್ಷ ಮತ್ತು ವೈಮನಸ್ಸನ್ನು ಸ್ಫೋಟಿಸುವಂತಿತ್ತು. ಇತರ ಹಿಂದುಳಿದ ವರ್ಗಗಳ (ಓಬಿಸಿ) ಶೇ. ೨೭ ಕೋಟಾದಿಂದ ಶೇ. ೪.೫ನ್ನು ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ನೀಡುವ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳ ಸಂವಿಧಾನ ವಿರೋಧಿ ನಿರ್ಧಾರವನ್ನು ಇಡೀ ದೇಶ ತಿರಸ್ಕರಿಸಬೇಕು. ರಾಷ್ಟ್ರೀಯ ನೀತಿಗೆ ತಾತ್ಕಾಲಿಕ ರಾಜಕೀಯ ಲಾಭಗಳು ಗುರಿಯಾಗಬಾರದು, ಬದಲಾಗಿ ‘ಒಂದುರಾಷ್ಟ್ರ ಒಂದು ಜನತೆ’ ಎಂಬ ತತ್ವ ಆಧಾರವಾಗರಬೇಕೆಂದು ಪ್ರತಿನಿಧಿ ಸಭಾ ದೇಶವಾಸಿಗಳಲ್ಲಿ ಮನವಿ ಮಾಡಿದೆ.

ಸಂಕುಚಿತವಾದ ಸ್ವಾರ್ಥ ಉದ್ದೇಶಗಳಿಗಾಗಿ ಸಾಮಾಜಿಕ ಏಕತೆಗೆ ಧಕ್ಕೆಯುಂಟುಮಾಡುವ ಪ್ರಯತ್ನವನ್ನು ತಡೆಯುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಪ್ರತಿನಿಧಿ ಸಭಾ ದೇಶಬಾಂಧವರನ್ನು ವಿಶೇಷವಾಗಿ ಸ್ವಯಂಸೇವಕರನ್ನು ವಿನಂತಿಸಿದೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.