ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ

ಪರಿವರ್ತನೆಗಾಗಿ ಸಂಘಕಾರ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ 3 ದಿನಗಳ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು. ಮಾರ್ಚ್ ೧೬, ೧೭ ಮತ್ತು ೧೮ರಂದು ನಡೆದ ಈ ರಾಷ್ಟ್ರೀಯ ಸಭೆಯಲ್ಲಿ ಆರೆಸ್ಸೆಸ್‌ನ ಆಯ್ದ ಪ್ರತಿನಿಧಿಗಳು ಹಾಗೂ ಪರಿವಾರ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಸೇರಿದಂತೆ ೧೨೦೦ ಪ್ರತಿನಿಧಿಗಳು ಪಾಲ್ಗೊಂಡರು.

ಸರಸಂಘಚಾಲಕ ಮೋಹನ್ ಭಾಗವತ್‌ರಿಂದ ಉದ್ಘಾಟನೆಗೊಂಡ ಈ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ (ಭಯ್ಯಾಜಿ) ಜೋಶಿ ವಾರ್ಷಿಕ ವರದಿಯನ್ನು ಪ್ರಕಟಿಸಿದರು. ಸಮಾಜಕ್ಕೆ ಕೊಡುಗೆ ಸಲ್ಲಿಸಿದ್ದ, ಕಳೆದ ಸಾಲಿನಲ್ಲಿ ಅಗಲಿದ ಸಾಧಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಕೃತಿಕ ವಿಕೋಪ, ನಕ್ಸಲ್-ಭಯೋತ್ಪಾದನಾ ದಾಳಿಯಲ್ಲಿ ಬಲಿಯಾದ ಭಾರತೀಯರನ್ನೂ ಸ್ಮರಿಸಲಾಯಿತು. ಕುಷ್ಠರೋಗಿಗಳಿಗಾಗಿ ಕೆಲಸ ಮಾಡಿದ ಗುಲ್ಬರ್ಗಾದ ವೆಂಕಟೇಶ ಗುರುನಾಯಕ್, ಡಾ|| ವಿ.ಎಸ್. ಆಚಾರ್ಯ, ಎಸ್. ಬಂಗಾರಪ್ಪ, ಗಾಯಕ ಭೂಪೇನ್ ಹಜಾರಿಕಾ, ಸಂಸ್ಕಾರಭಾರತೀಯ ಪುರಾಚಂದ್ ಅಗರ್‌ವಾಲ್, ವನವಾಸಿ ಕಲ್ಯಾಣದ ನಾರಾಯಣ ಭಗತ್, ಪತ್ರಕರ್ತೆ ಹೊಮಾಯಿ ವ್ಯಾರಾವಾಲ್, ಬಾಂಗ್ಲಾದಿಂದ ಓಡಿಬಂದ ನಿರಾಶ್ರಿತ ಹಿಂದುಗಳ ಸೇವೆಯಲ್ಲಿ ತೊಡಗಿದ್ದ ಭಾರತ್ ಸೇವಾಶ್ರಮದ ಸ್ವಾಮಿ ಅಭಯಾನಂದ ಮಹಾರಾಜ್ ಸೇರಿದಂತೆ ಹಲವಾರು ಗಣ್ಯರನ್ನು ಆರೆಸ್ಸೆಸ್ ಸ್ಮರಿಸಿತು.

ದೇಶದ 27,978  ಕಡೆಗಳಲ್ಲಿ ಪ್ರತಿನಿತ್ಯವೂ ಆರೆಸ್ಸೆಸ್‌ನ 40,891ಶಾಖೆಗಳು ನಡೆಯುತ್ತಿವೆ. ವಾರಕ್ಕೊಮ್ಮೆ ನಡೆಯುವ ಸಾಪ್ತಾಹಿಕ ಮಿಲನ್‌ಗಳ ಸಂಖ್ಯೆ 8508  ಹಾಗೂ ತಿಂಗಳಿಗೊಮ್ಮೆ ಜರಗುವ ಸಂಘಮಂಡಲಿಗಳ ಸಂಖ್ಯೆ 6445 ಎಂದು ಜೋಶಿ ತಿಳಿಸಿದ್ದಾರೆ.

ದೇಶದಲ್ಲಿ ಸಂಘಕಾರ್ಯಕ್ಕೆ ಹೊಸ ಪೀಳಿಗೆಯ ಕಾರ್ಯಕರ್ತರು ಅಪಾರ ಪ್ರಮಾಣದಲ್ಲಿ ಜೋಡಿಕೊಳ್ಳುತ್ತಿರುವ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ ಸುರೇಶ್ ಜೋಶಿ, ದೇಶದೆಲ್ಲೆಡೆ ೧.೬೦ ಲಕ್ಷ ವಿವಿಧ ಸೇವಾಚಟುವಟಿಕೆಗಳು ಸಂಘ ಅಥವಾ ಸಂಘ ಪ್ರೇರಿತ ಸಂಘಟನೆಗಳ ಮೂಲಕ ನಡೆಯುತ್ತಿದ್ದು ಸಾಮಾಜಿಕ ಪರಿವರ್ತನೆಯಲ್ಲಿ ಆರೆಸ್ಸೆಸ್ ತಲ್ಲೀನವಾಗಿದೆ ಎಂದಿದ್ದಾರೆ.

2012-13ರ ವರ್ಷವನ್ನು ವಿವೇಕಾನಂದರ 150ನೇ ಜಯಂತಿ ವರ್ಷವನ್ನಾಗಿ ಅರೆಸ್ಸೆಸ್ ಆಚರಿಸಲಿದ್ದು, ಭಾರತ ಹಾಗೂ ಜಗತ್ತಿನ ಇತರ ದೇಶಗಳಲ್ಲಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಿದೆ.

ವನವಾಸಿ ಕಲ್ಯಾಣ ಆಶ್ರಮ, ಭಾರತೀಯ ಕಿಸಾನ್ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿಶ್ವಹಿಂದೂ ಪರಿಷತ್, ಭಾರತೀಯ ಮಜ್ದೂರ್ ಸಂಘ, ಸೇವಾಭಾರತಿ, ಸಂಸ್ಕೃತ ಭಾರತಿ, ಸಂಸ್ಕಾರ ಭಾರತಿ, ಲಘು ಉದ್ಯೋಗ ಭಾರತಿ, ವಿದ್ಯಾಭಾರತಿ, ವಿಜ್ಞಾನ ಭಾರತಿ, ಸೀಮಾ ಸುರಕ್ಷಾ ಸಮಿತಿ, ರಾಷ್ಟ್ರಸೇವಿಕಾ ಸಮಿತಿ, ಶೈಕ್ಷಣಿಕ ಮಹಾಸಂಘ, ಧರ್ಮಜಾಗರಣ, ಭಾರತೀಯ ಜನತಾ ಪಾರ್ಟಿ, ಇತಿಹಾಸ ಸಂಕಲನ ಸಮಿತಿ ಸೇರಿದಂತೆ ವಿವಿಧ ಪರಿವಾರ ಸಂಘಟನೆಗಳ ಪ್ರಮುಖರು ಹಾಗೂ ಆರೆಸ್ಸೆಸ್‌ನ ಆಯ್ದ ಕಾರ್ಯಕರ್ತರು ಸೇರಿದಂತೆ ಸುಮಾರು 1200 ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾಮಾಜಿಕ ಚಳುವಳಿಗಳಲ್ಲಿ ರಾಷ್ಟ್ರೀಯ ಏಕತೆಯನ್ನು ಕಾಯ್ದುಕೊಳ್ಳುವ ಬಗೆ ಮತ್ತು ರಾಷ್ಟ್ರೀಯ ಜಲನೀತಿ-2012ರ ಪುನರ್ ವಿಮರ್ಶೆಗೆ ಒತ್ತಾಯಿಸಿ ಮಹತ್ವದ ಎರಡು ಪ್ರತ್ಯೇಕ ನಿರ್ಣಯಗಳನ್ನು ಪ್ರತಿನಿಧಿ ಸಭೆಯನ್ನು ಕೈಗೊಳ್ಳಲಾಯಿತು.

ಪ್ರಾದೇಶಿಕ ಸಂಕುಚಿತತೆ ಕುರಿತು ಆರೆಸ್ಸೆಸ್ ಕಳವಳ

ಪ್ರಾದೇಶಿಕವಾದದ ಅತಿಯಾದ ಪೋಷಿಸುವಿಕೆ, ರಾಷ್ಟ್ರೀಯ ಹಿತದೃಷ್ಟಿಯಿಲ್ಲದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯ ಕಳವಳಕಾರಿ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ (ಭಯ್ಯಾಜಿ) ಜೋಶಿ ಅಭಿಪ್ರಾಯ ಪಟ್ಟಿದ್ದಾರೆ. ರಾಷ್ಟ್ರೀಯ ಏಕತೆಗೆ ಪೂರಕವಲ್ಲದ ಪ್ರಾದೇಶಿಕ ಪಕ್ಷಗಳ ಧೋರಣೆಯು ಅಪಾಯಕಾರಿ ಎಂದಿರುವ ಜೋಶಿ ಈ ವಿಷಯಗಳ ಕುರಿತು ರಾಷ್ಟ್ರೀಯ ಪಕ್ಷಗಳೂ ಹಿಡಿತ ಕಳೆದುಕೊಳ್ಳುತ್ತಿರುವುದು ಆಘಾತಕಾರಿ ಎಂದಿದ್ದಾರೆ. ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳು ಈಗಾಗಲೇ ಸಂಕುಚಿತ ಪ್ರಾದೇಶಿಕವಾದದ ದುಷ್ಪರಿಣಾಮವನ್ನು ಅನುಭವಿಸುತ್ತಿದೆ ಎಂದಿದ್ದಾರೆ.

‘ತಮಿಳರಿಗೆ ಸೂಕ್ತ ರಕ್ಷಣೆ ನೀಡಿ’: ಶ್ರೀಲಂಕಾಕ್ಕೆ ಆರೆಸ್ಸೆಸ್ ಮನವಿ

ಶ್ರೀಲಂಕಾದಲ್ಲಿನ ತಮಿಳರಿಗೆ ಸೂಕ್ತ ನಾಗರಿಕ ಸ್ಥಾನಮಾನ, ಆಶ್ರಯ ಹಾಗೂ ರಕ್ಷಣೆ ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರೀಲಂಕಾ ಸರಕಾರವನ್ನು ಆಗ್ರಹಿಸಿದೆ. ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದಾಗಿ ಇತ್ತೀಚೆಗೆ ಅಮೇರಿಕಾದ ಸಂಸತ್ತು ಜಾರಿಗೊಳಿಸಿದ ನಿರ್ಣಯವನ್ನು ಆರೆಸ್ಸೆಸ್ ಟೀಕಿಸಿದೆ. ವಿಶ್ವದಲ್ಲೇ ಮಾನವಹಕ್ಕುಗಳನ್ನು ಅತಿಹೆಚ್ಚು ಉಲ್ಲಂಘಿಸುವ ಅಮೇರಿಕಾದ ಈ ನಿರ್ಣಯವು ಒಂದು ‘ದುರಂತ ಹಾಸ್ಯ’ ಎಂದು ವ್ಯಾಖ್ಯಾನಿಸಿರುವ ಆರೆಸ್ಸೆಸ್, ಇದೇ ವೇಳೆ ಶ್ರೀಲಂಕಾದಲ್ಲಿ ತಮಿಳರಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಭಾರತ ಸರಕಾರ ಶ್ರೀಲಂಕಾದೊಂದಿಗೆ ಮಾತುಕತೆಗೆ ಮುಂದಾಗಬೇಕು ಎಂದೂ ಆಗ್ರಹಿಸಿದೆ. ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆ ಕುರಿತ ಪತ್ರಿಕಾ ಹೇಳಿಕೆಯಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ, ‘ಇದೊಂದು ಅಂತಾರಾಷ್ಟ್ರೀಯ ಸೂಕ್ಷ-ಸಂವೇದನೆಯ ವಿಷಯವಾಗಿದ್ದು ಭಾರತ ಸರಕಾರ ಅಗತ್ಯದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು’ಎಂದು ಆಗ್ರಹಿಸಿದ್ದಾರೆ.

ಆರೆಸ್ಸೆಸ್ ವಾರ್ಷಿಕ ವರದಿಯ ಮುಖ್ಯಾಂಶಗಳು

  •       ಕಳೆದ ವರ್ಷ ದೇಶದಲ್ಲಿ 69 ಪ್ರಥಮ ವರ್ಷ ಸಂಘ ಶಿಕ್ಷಾವರ್ಗಗಳು ನಡೆದಿದ್ದು732 ಸ್ಥಾನಗಳಿಂದ 11,507 ಶಿಕ್ಷಾರ್ಥಿಗಳು ಭಾಗವಹಿಸಿದ್ದರು.
  •      2102 ಸ್ಥಾನಗಳಿಂದ 2781 ಶಿಕ್ಷಾರ್ಥಿಗಳು ದ್ವಿತೀಯ ವರ್ಷ ಸಂಘ ಶಿಕ್ಷಾವರ್ಗದಲ್ಲಿ ಭಾಗವಹಿಸಿದ್ದರು.
  •       675ಸ್ಥಾನಗಳಿಂದ ೭೩೨ ಶಿಕ್ಷಾರ್ಥಿಗಳು ತೃತೀಯ ವರ್ಷ ಸಂಘ ಶಿಕ್ಷಾವರ್ಗದಲ್ಲಿಯೂ, 474 ಶಿಕ್ಷಾರ್ಥಿಗಳು ವಿಶೇಷ ತೃತೀಯ ವರ್ಷ ಸಂಘ ಶಿಕ್ಷಾವರ್ಗದಲ್ಲಿಯೂ ಭಾಗವಹಿಸಿದ್ದರು.
  •       ದೇಶಾದ್ಯಂತ ಇರುವ ಸಂಘದ ಶಾಖೆಗಳ ಸಂಖ್ಯೆ 40891 ಸ್ಥಾನಗಳು 27978 ಸಾಪ್ತಾಹಿಕ ಮಿಲನ್‌ಗಳು 8508 ಸಂಘ ಮಂಡಳಿಗಳು6445
  •       ಕಳೆದ ವರ್ಷ ಸೇವಾ ವಿಭಾಗವು ೧೦ ಕಡೆಗಳಲ್ಲಿ ’ಸೇವಾ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ೪೮೦ ಮಹಿಳೆಯರೂ ಸೇರಿದಂತೆ ೩,೧೫೩ ಕಾರ್ಯಕರ್ತರು ಭಾಗವಹಿಸಿದ್ದರು.
  •       ಗ್ರಾಮವಿಕಾಸದ ಕಾರ್ಯಕರ್ತರ ಪ್ರಯತ್ನದಿಂದಾಗಿ ೨೦೦ ಗ್ರಾಮಗಳು ಪ್ರಭಾತ ಗ್ರಾಮಗಳಾಗಿ ಪರಿವರ್ತನೆಯಾಗಿವೆ.
  •       ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ವರ್ಷದ ಅಂಗವಾಗಿ ದಕ್ಷಿಣ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಸ್ವಯಂಸೇವಕರ ಬೃಹತ್ ಶಿಬಿರದಲ್ಲಿ ೧೫,೯೦೬ ಸ್ವಯಂಸೇವಕರು ಪೂರ್ಣ ಗಣವೇಶದಲ್ಲಿ ಭಾಗವಹಿಸಿದ್ದರು. ೫೨,೦೦೦ ಜನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  •       ಕರ್ನಾಟಕ ಉತ್ತರ ಪ್ರಾಂತದಲ್ಲಿ ನಡೆದ ಹಿಂದೂ ಶಕ್ತಿ ಸಂಗಮದಲ್ಲಿ ೧,೯೮೧ ಸ್ಥಾನಗಳಿಂದ ೨೧,೭೬೩ ಸ್ವಯಂಸೇವಕರು ಭಾಗವಹಿಸಿದ್ದರು.
  •       ಆಂಧ್ರದ ಧರ್ಮ ಜಾಗರಣ ವಿಭಾಗವು ಆಯೋಜಿಸಿದ್ದ ಗೋಂಡ್ ಸಮುದಾಯದ ಸಮ್ಮೇಳನದಲ್ಲಿ ೮,೦೦೦ ಪುರುಷರೂ ೩,೦೦೦ ಮಹಿಳೆಯರೂ ಭಾಗವಹಿಸಿದ್ದರು. ಇದಕ್ಕೆ ಪೂರ್ವಭಾವಿಯಾಗಿ ೭೦ ಜನ ಕಾರ್ಯಕರ್ತರು ೩೦೦ ಗ್ರಾಮಗಳ ಪ್ರವಾಸ ಮಾಡಿದರು. ೫೨ ಕಡೆಗಳಲ್ಲಿ ಕಾರ್ಯಕ್ರಮದ ತಯಾರಿಗಾಗಿ ಸಮುದಾಯ ಸಭೆಗಳನ್ನು ನಡೆಸಲಾಗಿತ್ತು.
  •       ದೇವಗಿರಿ ಪ್ರಾಂತದ ೧೭೭ ಗ್ರಾಮಗಳು ಮತ್ತು ೧೨೦ ಪಟ್ಟಣಗಳಲ್ಲಿ ’ಜಲ ಸಾಕ್ಷರತಾ ಅಭಿಯಾನ’ಗಳನ್ನು ನಡೆಸಲಾಯಿತು. ೨೫,೬೯೨ ಕುಟುಂಬಗಳನ್ನು ಈ ಅಭಿಯಾನದಲ್ಲಿ ಸಂಪರ್ಕಿಸಲಾಯಿತು.
  •       ಗುಜರಾತಿನ ೩೮ ಜಿಲ್ಲೆಗಳ ೫೮ ಸ್ಥಾನಗಳಲ್ಲಿ ಸಾಮಾಜಿಕ ಸದ್ಭಾವನಾ ಬೈಠಕ್‌ಗಳನ್ನು ಆಯೋಜಿಸಲಾಗಿತ್ತು. ’ಕೋಮು ಹಿಂಸಾಚಾರ ತಡೆ ವಿಧೇಯಕ’ದ ಕುರಿತು ಚರ್ಚಿಸಲಾದ ಈ ಬೈಠಕ್‌ಗಳಲ್ಲಿ ಒಟ್ಟು ೪,೧೦೦ ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.
  •       ಮಾಳವ ಪ್ರಾಂತದಲ್ಲಿ ಹರಿಯಾಲಿ ಅಮಾವಾಸ್ಯೆಯ ದಿನದಂದು ೬೫೭ ಸ್ಥಾನಗಳಲ್ಲಿ ೧೮,೧೨೪ ಗಿಡಗಳನ್ನು ನೆಡಲಾಯಿತು.
  •       ಮಹಾಕೋಶಲ ಪ್ರಾಂತದ ವನವಾಸಿ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರಿಗಾಗಿ ಸೇವಾವಿಭಾಗವು ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ೨೨,೬೨೧ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
  •       ಸಿಕ್ಕಿಂನಲ್ಲಿ ೨೦೧೧ರ ಅಕ್ಟೋಬರ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಸಂತ್ರಸ್ತರಾದವರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಅಲ್ಲದೇ, ನಿರ್ವಸಿತರಾದವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ.
  •       ಪಂಜಾಬ್ ಪ್ರಾಂತದಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ನವೆಂಬರ್ ೨೦೧೧ರಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು. ೯ ವಿಶ್ವವಿದ್ಯಾಲಯಗಳಿಂದ ೩ ಉಪಕುಲಪತಿಗಳು, ೮ ಹಿರಿಯ ಉಪನ್ಯಾಸಕರು ಮತ್ತು ೩೦ ಉಪನ್ಯಾಸಕರು ಭಾಗವಹಿಸಿದ್ದರು. ೧೮೦ ವಿದ್ಯಾರ್ಥಿಗಳು ಮೊದಲ ಬಾರಿಗೆ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  •       ಕೋಮು ಹಿಂಸಾಚಾರ ತಡೆ ವಿಧೇಯಕವನ್ನು ವಿರೋಧಿಸಿ ದೇಶಾದ್ಯಂತ ನಡೆದ ೩,೧೧೮ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ೧,೫೪,೩೫೮ ಜನರು ಭಾಗವಹಿಸಿದ್ದರು. ಸಂಪರ್ಕ ವಿಭಾಗ, ವಿಹಿಂಪ, ಅಧಿವಕ್ತಾ ಪರಿಷತ್ ಹೆಚ್ಚಿನ ಸ್ಥಳಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಆರೆಸ್ಸೆಸ್ : ನೂತನ ರಾಷ್ಟ್ರೀಯ ತಂಡ

ದೇಶವ್ಯಾಪಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳು ಅಗಾಧವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಕ್ಕೆ ಹೊಸದಾಗಿ ಇಬ್ಬರು ಸಹಸರಕಾರ್ಯವಾಹ (ಸಹಪ್ರಧಾನ ಕಾರ್ಯದರ್ಶಿ)ರನ್ನು ನೇಮಿಸಲಾಗಿದೆ. ಇದರಂತೆ ಈಗಿರುವ ಸುರೇಶ್‌ಸೋನಿ, ದತ್ತಾತ್ರೇಯ ಹೊಸಬಾಳೆ ಅವರ ಜೊತೆಯಲ್ಲಿ ಕೃಷ್ಣಗೋಪಾಲ್ ಹಾಗೂ ಕೆ.ಸಿ. ಕಣ್ಣನ್ ನೂತನ ಸಹಸರಕಾರ್ಯ ವಾಹರಾಗಿರುತ್ತಾರೆ.

ಸರಸಂಘಚಾಲಕ್ ಮೋಹನ್‌ಜೀ ಭಾಗ್ವತ್ ಮಾರ್ಗದರ್ಶನದಲ್ಲಿ ಹೊಸತಂಡ ಇನ್ನಷ್ಟು ವ್ಯಾಪಕವಾಗಿ ಕಾರ್ಯನಿರ್ವಹಿಸಲು ಸಜ್ಜಾದಂತಾಗಿದೆ. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಸುರೇಶ್ ಜೋಶಿ(ಭಯ್ಯಾಜಿ ಜೋಶಿ) ಈಗಾಗಲೇ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.

ಅಖಿಲ ಭಾರತ ಬೌದ್ಧಿಕ ಪ್ರಮುಖರಾಗಿ ಭಾಗಯ್ಯ, ಸಹಬೌದ್ಧಿಕ ಪ್ರಮುಖರಾಗಿ ಮಹಾವೀರ್, ಶಾರೀರಿಕ ಪ್ರಮುಖರಾಗಿ ಅನಿಲ್ ಓಕ್, ಸಹಶಾರೀರಿಕ ಪ್ರಮುಖರಾಗಿ ಜಗದೀಶ್ ಪ್ರಸಾದ್, ಸಂಪರ್ಕ ಪ್ರಮುಖರಾಗಿ ಹಸ್ತಿಮಲ್, ಸಹಸಂಪರ್ಕ ಪ್ರಮುಖರಾಗಿ ರಾಮ್‌ಮಾಧವ್, ಅರುಣ್ ಕುಮಾರ್ ಹಾಗೂ ಅನಿರುದ್ಧ ದೇಶ್‌ಪಾಂಡೆ, ಸೇವಾ ಪ್ರಮುಖರಾಗಿ ಸುಹಾಸ್ ಹೀರೇಮಠ್, ಸಹಸೇವಾ ಪ್ರಮುಖರಾಗಿ ಅಜಿತ್ ಮಹಾಪಾತ್ರ, ವ್ಯವಸ್ಥಾ ಪ್ರಮುಖರಾಗಿ ಸಾಂಕಲ್ ಚಂದ್ ಬಾಗ್ರೇಚಾ, ಸಹ ವ್ಯವಸ್ಥಾ ಪ್ರಮುಖರಾಗಿ ಮಂಗೇಶ್ ಭೇಂಢೆ ಹಾಗೂ ಬಾಲಕೃಷ್ಣ ತ್ರಿಪಾಠಿ, ಪ್ರಚಾರ ಪ್ರಮುಖರಾಗಿ ಡಾ|| ಮನಮೋಹನ ವೈದ್ಯ, ಸಹಪ್ರಚಾರ ಪ್ರಮುಖರಾಗಿ ಜೆ. ನಂದಕುಮಾರ್, ಪ್ರಚಾರಕ ಪ್ರಮುಖರಾಗಿ ಸುರೇಶ್ ಚಂದ್ರ, ಸಹ ಪ್ರಚಾರಕ ಪ್ರಮುಖರಾಗಿ ವಿನೋದ್ ಕುಮಾರ್ ನಿಯುಕ್ತಿಗೊಂಡಿದ್ದಾರೆ. ಮದನ್‌ದಾಸ್ ದೇವಿ, ಕೆ.ಎಸ್. ಸುದರ್ಶನ್, ಅಶೋಕ್ ಭೇರಿ, ಸೀತಾರಾಮ ಕೆದಿಲಾಯ, ಇಂದ್ರೇಶ್‌ಕುಮಾರ್, ಮಧುಭಾಯಿ ಕುಲಕರ್ಣಿ, ನ. ಕೃಷ್ಣಪ್ಪ ಹಾಗೂ ಶ್ರೀಕಾಂತ್ ಜೋಷಿ ಅವರು ಅಖಿಲ ಭಾರತೀಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುತ್ತಾರೆ.

ಎಲ್ಲ ಕ್ಷೇತ್ರೀಯ ಸಂಘ ಚಾಲಕರು ಕಾರ್ಯಕಾರಣಿ ಮಂಡಳಿ ಸದಸ್ಯರಾಗಿರುತ್ತಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.