ಈಶಾನ್ಯ ಭಾರತೀಯರ ಸುರಕ್ಷೆಗೆ ಆರೆಸ್ಸೆಸ್ ಬದ್ಧ : ದತ್ತಾತ್ರೇಯ ಹೊಸಬಾಳೆ
“ಅಸ್ಸಾಂನಲ್ಲಿ ಉಂಟಾಗಿರುವ ದುರಂತಮಯ ಪರಿಸ್ಥಿತಿಯು ಎಲ್ಲ ದೇಶಬಾಂಧವರ ಗಂಭಿರ ಕಳವಳಕ್ಕೆ ಕಾರಣವಾಗಿದೆ. ಜನ ತಮ್ಮದೇ ದೇಶದಲ್ಲಿ ವಿದೇಶೀಯರ ದಾಳಿಯ ಭಯದಿಂದ ಮನೆ ಬಿಟ್ಟು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವುದು ಅತ್ಯಂತ ಕ್ರೂರ ವ್ಯಂಗ್ಯವಾಗಿದೆ. ಅಲ್ಲಿನ ಜನರಿಗಾದ ನೋವು, ಸಂಕಷ್ಟ ಮತ್ತು ಹಾನಿಗಳಿಗೆ ಆರೆಸ್ಸೆಸ್ ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತದೆ” ಎಂದು ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಅಸ್ಸಾಂನ ಬೋಡೋಲ್ಯಾಂಡ್ ಭೂಭಾಗ ಪ್ರದೇಶ ಜಿಲ್ಲೆ (ಬಿಟಿಎಡಿ) ಮತ್ತು ಧುಬ್ರಿಗಳಲ್ಲಿ ಸಂಭವಿಸಿದ ಹಿಂಸೆಯ ಸ್ಫೋಟದಿಂದ ಹಲವರು ಕೊಲ್ಲಲ್ಪಟ್ಟು ಮತ್ತಷ್ಟು ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ಮನೆಬಿಟ್ಟು ನಿರಾಶ್ರಿತರ ಶಿಬಿರಗಳನ್ನು ಸೇರಿಕೊಂಡಿದ್ದಾರೆ. ಲೂಟಿ ಮತ್ತು ಬೆಂಕಿಹಚ್ಚುವ ಕೃತ್ಯಗಳು ಗಾಬರಿ ಹುಟ್ಟಿಸುತ್ತಿವೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಅಸ್ಸಾಂ ಮತ್ತು ಈಶಾನ್ಯದ ರಾಜ್ಯಗಳ ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳು ತಮ್ಮ ಊರಿಗೆ ಮರಳುತ್ತಿರುವ ದೃಶ್ಯ ತುಂಬ ನೋವುಂಟು ಮಾಡುತ್ತದೆ ಎಂದವರು ಹೇಳಿದ್ದಾರೆ.
ಪ್ರಸ್ತುತ ಘಟನಾವಳಿಗಳು ಜುಲೈ ೨೦ರಂದು ಸ್ಫೋಟಗೊಂಡಿದ್ದು ಇದು ಒಮ್ಮೆಗೇ ಆದಂಥದಲ್ಲ. ಇಂತಹ ಸರಣಿ ಹಿಂಸಾತ್ಮಕ ಘಟನೆಗಳು ನಡೆಯುತ್ತಲೇ ಇವೆ. ಬಾಂಗ್ಲಾದೇಶದ ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ಇರುವ ಕಡೆಗಳಲ್ಲಿ ಇಂತಹ ಜಗಳ-ಘರ್ಷಣೆಗಳು ಮಾಮೂಲಾಗಿವೆ. ಉದಾಹರಣೆಗೆ, ಈಚೆಗೆ ಫಕೀರ ಗ್ರಾಮ ಎಂಬಲ್ಲಿ ನಡೆದ ಈದ್ಗಾ ಘಟನೆ ಮತ್ತು ನಾಲ್ಕು ವರ್ಷಗಳ ಹಿಂದೆ ನಡೆದ ಉದಲ್ಗುರಿ ಹಿಂಸಾಚಾರವನ್ನು ಉಲ್ಲೇಖಿಸಬಹುದು. ಬಂಗ್ಲಾದೇಶಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಶಾಂತಿ – ಸೌಹಾರ್ದ ಭಂಗ ಆಗಿರುವುದಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಕೂಡ ಉಂಟಾಗಿವೆ. ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಜನ ಇದರಿಂದ ನೊಂದಿದ್ದಾರೆ. ಹಲವು ಸಂಘಟನೆಗಳು ಈ ವಿಷಯವನ್ನು ಎತ್ತಿ ಕೇಂದ್ರ, ರಾಜ್ಯ ಸರ್ಕಾರಗಳು ಜಿಗುಟಾದ ಈ ಸಮಸ್ಯೆಗೆ ಅಂತ್ಯ ಕಾಣಿಸಬೇಕೆಂದು ಆಗ್ರಹಿಸಿವೆ. ರಾಷ್ಟ್ರಮಟ್ಟದಲ್ಲಿ ಆರೆಸ್ಸೆಸ್ ಮತ್ತಿತರರು ಕಳೆದ ಮೂರು ದಶಕಗಳಿಂದ ಇದನ್ನು ಹೇಳುತ್ತಾ ಬಂದಿದ್ದಾರೆ. ಆದರೆ ಇದಕ್ಕೆ ಪರಿಹಾರ ಸಿಗದಿರುವುದು ದುರದೃಷ್ಟಕರ ಎಂದು ಹೊಸಬಾಳೆ ಅವರು ಬೇಸರ ಸೂಚಿಸಿದ್ದಾರೆ. ದೇಶದ ಆ ಭಾಗದಲ್ಲಿ ಆಗಾಗ ಹಿಂಸೆ ಸ್ಫೋಟಗೊಳ್ಳುತ್ತಿರುವುದಕ್ಕೆ ಕಾರಣ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ನಾಗರಿಕರು ಮತ್ತು ಅಕ್ರಮ ವಲಸಿಗರ ನಡುವಣ ಘರ್ಷಣೆಯಲ್ಲದೆ ಬೇರೇನೂ ಅಲ್ಲ ಎಂಬುದು ಸಂಘದ ಖಚಿತ ಅಭಿಪ್ರಾಯ. ಪರಿಸ್ಥಿತಿ ಆತಂಕಕಾರಿ ಮಟ್ಟಕ್ಕೆ ಹೋಗುತ್ತಿದೆ ಮತ್ತು ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಮುಂಬಯಿ ಘಟನೆಗಳು ಸಾಕ್ಷಿಯಾಗಿವೆ. ಪುಣೆಯಲ್ಲೂ ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಮುಂಬೈಯಲ್ಲೂ ಅಂತಹ ಹಿಂಸಾತ್ಮಕ ಘಟನೆ ವರದಿಯಾಗಿದೆ. ಒಟ್ಟಿನಲ್ಲಿ ಇದೆಲ್ಲದರ ಹಿಂದೆ ದೇಶದಲ್ಲಿ ಆತಂಕ ಸೃಷ್ಟಿಸಿ ಹಿಂಸೆಯನ್ನು ಹಬ್ಬಿಸುವ ದೊಡ್ಡ ಪಿತೂರಿ ಕಾಣಿಸುತ್ತಿದೆ; ಪರಿಸ್ಥಿತಿಯ ನಿಯಂತ್ರಣ ಈಗ ಎಲ್ಲರ ಹೊಣೆಯಾಗಿದೆ.
ಕೆಲವು ಕಡೆ ಪರಿಹಾರ ಶಿಬಿರಗಳಲ್ಲಿ ಆಶ್ರಯಪಡೆದ ಮುಸ್ಲಿಮರು ಹಿಂಸೆ ನಡೆದ ಗ್ರಾಮೀಣ ಪ್ರದೇಶದವರಲ್ಲ ಎಂದು ವರದಿಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಅಗತ್ಯಕ್ರಮ ಕೈಗೊಳ್ಳಬೇಕೆಂದು ದತ್ತಾಜೀ ಆಗ್ರಹಿಸಿದ್ದಾರೆ. ಹಿಂಸೆ ಸ್ಫೋಟಿಸುತ್ತಲೇ ಆರೆಸ್ಸೆಸ್ನ ಸ್ವಯಂಸೇವಕರು ಮತ್ತು ಸಂಘದಿಂದ ಪ್ರೇರಣೆಗೊಂಡ ಸಂಘಟನೆಗಳು ಪರಿಹಾರದ ಕೆಲಸಕ್ಕೆ ಧಾವಿಸಿವೆ. ೬೦ಕ್ಕೂ ಮಿಕ್ಕ ಶಿಬಿರಗಳಲ್ಲಿ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಆಹಾರ, ಔಷಧಿ, ಬಟ್ಟೆ, ಸಲಕರಣೆಗಳನ್ನು ಒದಗಿಸುತ್ತಿದ್ದಾರೆ. ಗುಜರಾತ್ ಮತ್ತು ಉತ್ತರಪ್ರದೇಶದ ಡಾಕ್ಟರುಗಳ ತಂಡ ಕಳೆದ ಮೂರು ವಾರಗಳಿಂದ ಹಿಂಸಾಗ್ರಸ್ತ ಪ್ರದೇಶಗಳಲ್ಲಿ ವೈದ್ಯಕೀಯ ನೆರವು ಒದಗಿಸುತ್ತಿದೆ. ಇನ್ನಷ್ಟು ಪರಿಹಾರ ಕಾರ್ಯದ ಕುರಿತು ಚಿಂತಿಸಲಾಗುತ್ತಿದೆ.
ಆರೆಸ್ಸೆಸ್ ಕಾರ್ಯಕರ್ತರು ಪುಣೆ, ಮುಂಬಯಿ, ಬೆಂಗಳೂರು, ಕೇರಳ, ಹೈದರಾಬಾದ್, ದೆಹಲಿ ಮುಂತಾದ ಕಡೆ ವಿದ್ಯಾರ್ಥಿಗಳನ್ನು ಭೇಟಿಮಾಡಿ ರಕ್ಷಣೆ, ನೆರವು ನೀಡುತ್ತಿದ್ದಾರೆ. ಹೆಲ್ಪ್ಲೈನ್ ನಂಬರುಗಳನ್ನು ನೀಡಿದ್ದಾರೆ. ಅಸ್ಸಾಂ ಪ್ರಯಾಣದ ವೇಳೆ ಅವರಿಗೆ ಆಹಾರ ಮತ್ತು ರಕ್ಷಣೆ ಒದಗಿಸುವಲ್ಲಿ ಸಂಘ, ಎಬಿವಿಪಿ ಮತ್ತು ಬಿಜೆಪಿ ಕಾರ್ಯಪ್ರವೃತ್ತವಾಗಿದೆ ಎಂದು ಹೊಸಬಾಳೆ ತಿಳಿಸಿದ್ದಾರೆ. ಸಮಸ್ಯೆಗೆ ಕಾರಣವಾದ ಬಾಂಗ್ಲಾದೇಶೀಯರ ಅಕ್ರಮಪ್ರವೇಶವನ್ನು ಕೂಡಲೆ ತಡೆಯಬೇಕು; ಅಕ್ರಮ ವಲಸಿಗರ ಹೆಸರುಗಳನ್ನು ಪತ್ತೆ ಮಾಡಿ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು; ಅವರನ್ನು ಬಾಂಗ್ಲಾದೇಶಕ್ಕೆ ಮರಳಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಅದಲ್ಲದೆ ಶೀಘ್ರವಾಗಿ ರಾಷ್ಟ್ರೀಯ ನಾಗರಿಕರ ಪಟ್ಟಿ (ಎನ್ಆರ್ಸಿ)ಯನ್ನು ಸಿದ್ಧಪಡಿಸಿ, ದೇಶದ ನಾಗರಿಕರಲ್ಲದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಈಶಾನ್ಯ ಭಾರತದವರು ಮತ್ತು ದೇಶದ ಜನ ಶಾಂತಿಯನ್ನು ಕಾಪಾಡಬೇಕು. ಜಾಗೃತರಾಗಿದ್ದು ಯಾರೂ ಕೂಡ ಪರಿಸ್ಥಿತಿಯ ದುರುಪಯೋಗ ಮಾಡದಂತೆ ತಡೆಯಬೇಕು, ಎಂದ ದತ್ತಾಜೀ, ವಿದ್ಯಾರ್ಥಿಗಳು ಹಾಗೂ ಈಶಾನ್ಯ ಭಾರತದ ನಮ್ಮ ಸಹೋದರರು ಭಯಗೊಳ್ಳಬಾರದು. ಯಾವುದೇ ನೆರವು ಬೇಕಿದ್ದರೆ ಸ್ಥಳೀಯ ಆರೆಸ್ಸೆಸ್ ಅಥವಾ ಎಬಿವಿಪಿ ಕಚೇರಿಗಳನ್ನು ಸಂಪರ್ಕಿಸಬೇಕೆಂದು ಅಸ್ಸಾಂನ ಗೌಹಾತಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.