Ram Mandir Ayodhya

ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪಕ್ಕೆ ತಾನು ಬದ್ಧ ಎಂದು ಆರೆಸ್ಸೆಸ್ ಪುನರುಚ್ಚರಿಸಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಇ-ಮೈಲ್, ಎಸ್.ಎಂ.ಎಸ್.ಗಳ ಮೂಲಕ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವಿಶಿಷ್ಟ ಪ್ರಶ್ನೋತ್ತರ ಕಾರ‍್ಯಕ್ರಮದಲ್ಲಿ ಮಾತನಾಡಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆರೆಸ್ಸೆಸ್ ಬದ್ಧವಾಗಿದೆ. ಧಾರ್ಮಿಕ ಸಂತರ ನೇತೃತ್ವದಲ್ಲಿ ಸಮಿತಿ ಈಗಾಗಲೇ ಕ್ರಿಯಾಶೀಲವಾಗಿದೆ. ಈ ಕುರಿತು ಕಾನೂನು ಮತ್ತು ಶಾಸನಗಳ ಬೆಂಬಲವನ್ನು ಅಪೇಕ್ಷಿಸುತ್ತಿದ್ದೇವೆ. ಆದರೆ ಆತುರ ಇಲ್ಲ’ ಎಂದಿದ್ದಾರೆ.

Ram Mandir Ayodhya

ಆರೆಸ್ಸೆಸ್-ಬಿಜೆಪಿ ಸಂಬಂಧದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾಗವತ್ ‘ಆರೆಸ್ಸೆಸ್ ಸ್ವಯಂಸೇವಕರು ಬೇರೆ-ಬೇರೆ ರಾಜಕೀಯ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿಯಲ್ಲಿ ತುಸು ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳಲ್ಲಿ ಪದಾಧಿಕಾರಿಯಾದವರೂ ಇದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷದಲ್ಲಿರುವ ನೂರಾರು ಕಾರ‍್ಯಕರ್ತರು ಸ್ವಯಂಸೇವಕರೇ. ಹಾಗಾಗಿ ಆರೆಸ್ಸೆಸ್ ಸ್ವಯಂಸೇವಕರು ಇಂತದ್ದೇ ರಾಜಕೀಯ ಪಕ್ಷದಲ್ಲಿ ಇರಬೇಕೆಂಬ ನಿಯಮವಿಲ್ಲ. ಆರೆಸ್ಸೆಸ್ ಒಂದು ರಾಜಕೀಯ ವ್ಯವಸ್ಥೆಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ಭ್ರಷ್ಟ ರಾಜಕೀಯ ಮಾನಸಿಕತೆ, ಅಧಿಕಾರದಾಹ ಹಾಗೂ ವೋಟ್‌ಬ್ಯಾಂಕ್ ರಾಜಕಾರಣದಿಂದಾಗಿಯೇ ಈಶಾನ್ಯ ರಾಜ್ಯಗಳಲ್ಲಿ ಅರಾಜಕತೆ ಮುಂದುವರೆದಿದೆ. ಬಾಂಗ್ಲಾ ನುಸುಳುಕೋರರ ಸಮಸ್ಯೆಗೆ ಇದೇ ಮೂಲಕಾರಣ’ ಎಂದರು ಭಾಗವತ್.

‘ಆರೆಸ್ಸೆಸ್ ಮುಸಲ್ಮಾನ್ ವಿರೋಧಿ’ ಎಂಬ ಭಾವನೆ ಮುಸಲ್ಮಾನರ ಮಧ್ಯೆ ಇದೆ. ಮುಸ್ಲಿಮರ ಜತೆಗೆ ಆರೆಸ್ಸೆಸ್ ವ್ಯವಹಾರ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್ ‘ಆರೆಸ್ಸೆಸ್‌ನ್ನು ಸರಿಯಾಗಿ ಅರ್ಥಮಾಡಿಕೊಂಡು ನಿಷ್ಕರ್ಷೆಗಳಿಗೆ ಬರಬೇಕು. ಸಕ್ಕರೆಯ ಸವಿಯನ್ನು ಅರಿಯಲು ಅದನ್ನು ಬಾಯಿಗೆ ಹಾಕಿಕೊಳ್ಳಲೇಬೇಕು. ದೂರದಿಂದ ನೋಡಿದರೆ ಆರೆಸ್ಸೆಸ್‌ನ್ನು ಅರ್ಥಮಾಡಲು ಸಾಧ್ಯವಿಲ್ಲ. ಆದ್ದರಿಂದ ಆರೆಸ್ಸೆಸ್‌ನ್ನು ಅರಿಯಲು ಆರೆಸ್ಸೆಸ್‌ಗೆ ಬನ್ನಿ, ಆರೆಸ್ಸೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ’ ಎಂದು ಮೋಹನ್ ಭಾಗವತ್ ಮುಸ್ಲಿಂ ಬಂಧುಗಳಿಗೆ ಕರೆಯಿತ್ತಿದ್ದಾರೆ

Leave a Reply

Your email address will not be published.

This site uses Akismet to reduce spam. Learn how your comment data is processed.