Mangalore Vibhag Sanghik-Feb-03-2013

ಮಂಗಳೂರು ಫೆಬ್ರವರಿ 03, 2013: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಕೆಲಸ ಸ್ವಾಮಿ ವಿವೇಕಾನಂದರ ಚಿಂತನೆ, ಬೋಧನೆಗಳ ಅನುಷ್ಠಾನವೇ ಆಗಿದೆ ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ಮಂಗಳೂರು ವಿಭಾಗ ಮಟ್ಟದ ಮಹಾ ಸಾಂಘಿಕ್‌ನಲ್ಲಿ ಅವರು ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರ ಭಾಷಣದ ಸಾರಾಂಶ ಇಲ್ಲಿದೆ.

Mangalore Vibhag Sanghik-Feb-03-2013
Mangalore Vibhag Sanghik-Feb-03-2013

‘ಇಂದುಸ್ವಾಮಿ ವಿವೇಕಾನಂದರ ಜನ್ಮದಿನ. ಇದು ಕೇವಲ ಯೋಗಾಯೋಗ ಮಾತ್ರವಲ್ಲ. ಆರೆಸ್ಸೆಸ್ಸಿನ ಕಾರ್ಯಕ್ಕೂ ವಿವೇಕಾನಂದರ ಸಂದೇಶಕ್ಕೂ ಒಂದು ಘನಿಷ್ಠ ಸಂಬಂಧವಿದೆ. ಒಂದು ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದು, ಒಂದು ಧ್ಯೇಯಕ್ಕಾಗಿ ಸ್ವಾರ್ಥವಿಲ್ಲದೇ ಕೆಲಸ ಮಾಡುವುದು – ಇದನ್ನು ಸ್ವಾಮೀಜಿ ಹೇಳಿದ್ದರು. ಇದೇ ಕೆಲಸವನ್ನು ನಮ್ಮ ಸಂಘದ ಕಾರ್ಯಕರ್ತರೂಮಾಡುತ್ತಿದ್ದಾರೆ. ಸಂಘದ ಕೆಲಸದ ಮೂಲಕ ನೋಡುವವರಿಗೆ ಸಂಘ ಅರ್ಥವಾಗುತ್ತದೆ.

ಇಂದಿನ ಕಾರ್ಯಕ್ರಮ ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ. ಇಂದಿನ ಇಂಗ್ಲಿಷ್ ಪತ್ರಿಕೆಯಲ್ಲಿ ಸಂಘದ ಶಕ್ತಿ ಪ್ರದರ್ಶನವಿದು ಎಂದು ವರದಿಯಾಗಿದೆ. ಸಂಘಕ್ಕೆ ತನ್ನ ಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿಲ್ಲ. ತನ್ನ ಸೇವೆಯ ಮೂಲಕ, ಆತ್ಮೀಯತೆಯ ಮೂಲಕ ಜನರನ್ನು ತಲುಪುವ ಮಾರ್ಗ ಸಂಘದ್ದು. ತನ್ನ ಜೀವನದಲ್ಲಿ ಎಷ್ಟು ಉನ್ನತಿಯಾಗಿದೆ ಎನ್ನುವುದನ್ನು ನೋಡಿಕೊಳ್ಳುವ ಸಂದರ್ಭ ಇದು. ಇದು ನಮಗೆ ಆತ್ಮನಿರೀಕ್ಷಣೆಯ ಕಾರ್ಯಕ್ರಮ.

ದೇಶವನ್ನು ತಿಳಿಯುವುದಕ್ಕಾಗಿ ಸ್ವಾಮೀಜಿ ಸಂಪೂರ್ಣ ಭಾರತವನ್ನು ತಿರುಗಿದರು. ತನ್ಮೂಲಕ, ದೇಶದಲ್ಲಿ ಹುದುಗಿರುವ ಪ್ರಾಚೀನ ಜ್ಞಾನದ ಶಕ್ತಿಯನ್ನು ಅವರು ಅರ್ಥಮಾಡಿಕೊಂಡಿದ್ದರು. ಪ್ರಪಂಚ ಕಳೆದುಕೊಂಡಿದ್ದನ್ನು ಮರಳಿ ಕೊಡುವ ಸಾಮರ್ಥ್ಯ ಭಾರತದ ಬಳಿಯಿದೆ ಎನ್ನುವುದನ್ನು ಅವರು ಕಂಡುಕೊಂಡಿದ್ದರು.ಆದರೆ, ಅದನ್ನು ಕೊಡಲು ನಾವು ಎಷ್ಟು ತಯಾರಿದ್ದೇವೆ ಎಂದು ವಿವೇಕಾನಂದರು ಯೋಚಿಸುತ್ತಿದ್ದರು. ನಮ್ಮನ್ನು ನಾವು ಕೀಳೆಂದು ಭಾವಿಸುವ ಅಗತ್ಯವಿಲ್ಲ. ನಮ್ಮ ಪರಂಪರೆ, ಸಂಸ್ಕೃತಿಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಾವು ಅಮೃತದ ಮಕ್ಕಳು ಎಂಬುದು ಅವರ ಧೀರವಾಣಿ. ಇಡೀ ಪ್ರಪಂಚಕ್ಕೆ ಸಂದೇಶ ಕೊಡಲು ನಮ್ಮ ಸಮಾಜ ಜಾಗೃತಗೊಳ್ಳಬೇಕಾಗಿದೆ. ವ್ಯಕ್ತಿ, ಸಮಾಜ, ದೇಶ ಸ್ವಾಭಿಮಾನದೊಂದಿಗೆ ಮೇಲೇಳಬೇಕು. ’ಉತ್ತಿಷ್ಠತ, ಜಾಗ್ರತ. ಪ್ರಪ್ಯವರಾನ್ನಿಬೋಧತ’ ಎಂದು ಅವರು ಕರೆ ಕೊಟ್ಟರು. ಅಂತಹ ಸಾಮರ್ಥ್ಯವಿರುವ ದೇಶ ಭಾರತ ಮಾತ್ರ. ಆದ್ದರಿಂದ ನಾವು ಭಾರತೀಯರು, ಹಿಂದುಗಳು ಎಂಬ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದು ಅವರು ಸಾರಿದರು.

DSC_4501

ಪರಿಸ್ಥಿತಿಗೆ ಬೆನ್ನು ಕೊಡದೇ, ಅದನ್ನು ಧೈರ್ಯವಾಗಿ ಎದುರಿಸಬೇಕು ಎಂಬುದು ಅವರ ಇನ್ನೊಂದು ಮುಖ್ಯ ಸಂದೇಶ. ಪರೋಪಕಾರ ಮತ್ತು ಸೇವೆಯ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಸೇವೆ ಮಾಡಬೇಕು. ದೇಶದ ಉನ್ನತಿಯನ್ನು ಸಾಧಿಸಬೇಕಾದರೆ, ನಾವು ವಿವೇಕಾನಂದರ ವಿಚಾರವನ್ನು ಇಂದು ನಾವು ಅನುಸರಿಸಬೇಕಾಗಿದೆ. ದರಿದ್ರ ಭಾರತೀಯ, ದೀನ ಭಾರತೀಯರೆಲ್ಲರೂ ನಮ್ಮವರೇ. ಅವರನ್ನು ಆರಾಧಿಸಬೇಕು. ಅಂತಹ ಕೆಲಸ ಮಾಡಲು ನಮಗೆ ಶಕ್ತಿಯ ಅಗತ್ಯವಿದೆ. ಎಲ್ಲಿಯವರೆಗೆ ಶಕ್ತಿಯ ಆರಾಧನೆ ನಡೆಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಏಳ್ಗೆ ಆಗುವುದಿಲ್ಲ. ಶಕ್ತಿಯಿಲ್ಲದೇ ಏನೂ ಕೆಲಸವಾಗುವುದಿಲ್ಲ. ಶಕ್ತಿಯೊಂದಿಗೆ ಚಾರಿತ್ರ್ಯವೂ ಬೇಕು. ಇಂತಹ ಗುಣಗಳನ್ನು ಯುವಕರಲ್ಲಿ ತುಂಬಲುವಿದ್ಯಾಲಯಗಳನ್ನು ತೆರೆಯಬೇಕೆನ್ನುವುದು ಸ್ವಾಮೀಜಿ ಯೋಚಿಸಿದ್ದರು. ಹೊಟ್ಟೆ ಪಾಡಿನ ಶಿಕ್ಷಣವಲ್ಲ, ದೇಶದ ಏಳ್ಗೆಗಾಗಿ ಶಿಕ್ಷಣ ಪಡೆದ ಯುವಕರು ಅನಂತರ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ಅಲ್ಲಿಯೂ ಅಂಥಹ ಯುವಕರ ಪಡೆಯನ್ನು ಕಟ್ಟಿ, ನಮ್ಮ ಸಮಾಜ ಜಾಗೃತಿ ಮಾಡಿ ಈ ದೇಶದ ಉನ್ನತಿಯನ್ನು ಸಾಧಿಸಬೇಕೆನ್ನುವುದ ಅವರ ಅಪೇಕ್ಷೆಯಾಗಿತ್ತು. ಆದರೆ, ಆ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಸಂಘದ ಶಾಖೆಗಳ ಮೂಲಕ ನಾವು ಮಾಡುತ್ತಿರುವುದೂ ಇದೇ ಕೆಲಸವನ್ನು. ಐವತ್ತು ವರ್ಷಗಳ ಕಾಲ ಬೇರೆಲ್ಲ ದೇವರನ್ನೂ ಬದಿಗಿಡಿ. ಭಾರತ ಮಾತೆಯೇ ನಮ್ಮ ದೇವರಾಗಲಿ ಎಂದರು ವಿವೇಕಾನಂದರು. ಸಂಘದ ಸ್ವಯಂಸೇವಕರೂ ಪ್ರತಿನಿತ್ಯವೂ ತಮ್ಮ ಪ್ರಾರ್ಥನೆಯ ಮೂಲಕ ಭಾರತಮಾತೆಯನ್ನು ಪೂಜಿಸುತ್ತಾರೆ. ಸ್ವಾರ್ಥದ ಚಿಂತನೆ ಅಲ್ಲಿರುವುದಿಲ್ಲ. ನಮ್ಮ ತಾಯಿಯಾದ ಭಾರತಮಾತೆಯನ್ನು ವಂದಿಸಿ ನಮ್ಮ ಜೀವನವನ್ನೇ ಆಕೆಗಾಗಿ ಸಮರ್ಪಿಸುತ್ತೇವೆ ನಾವು.ಯಾವ ದೇಶವನ್ನು ನಾವು ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕೆಂದು ಬಯಸುತ್ತೇವೆಯೋ ಆ ರಾಷ್ಟ್ರದ ಅವಿಭಜ್ಯ ಘಟಕಗಳು ನಾವು ಎಂಬ ಭಾವ ನಾವು ಪ್ರಾರ್ಥನೆ ಮಾಡುವಾಗ ನಮ್ಮಲ್ಲಿ ಮೂಡುತ್ತದೆ. ಅದನ್ನು ಸಾಧಿಸಲು ನಮಗೆ ಶಕ್ತಿ, ಜ್ಞಾನ, ಜೀವನಪೂರ್ತಿ ಈ ಕೆಲಸವನ್ನು ಮಾಡಲು ಬೇಕಾದ ವೀರವ್ರತವನ್ನುಕೊಡು ಎಂದು ದೇವರಲ್ಲಿ ಕೇಳುತ್ತೇವೆ. ಧರ್ಮವನ್ನು ಸಂರಕ್ಷಣೆ ಮಾಡುತ್ತಾ ನಮ್ಮ ದೇಶವನ್ನು ಪರಮವೈಭವಸಂಪನ್ನ ಮಾಡಲು ನಮಗೆ ಶಕ್ತಿ ಕೊಡು ಎಂದು ಕೇಳುತ್ತೇವೆ. ಇದು ಸ್ವಾಮೀಜಿಯವರ ಕನಸಿನ, ಅವರ ಉಪದೇಶದ ಅನುಷ್ಠಾನವೇ ಆಗಿದೆ.

ಈ ವರ್ಷ ಪೂರ್ತಿ ನಾವು ವಿವೇಕಾನಂದರ ೧೫೦ನೇ ಜನ್ಮ ವರ್ಷದ ಕಾರ್ಯಕ್ರಮಗಳನ್ನು  ನಡೆಸುತ್ತಿದ್ದೇವೆ. ಕೇವಲ ಕಾರ್ಯಕ್ರಮಗಳಿಂದ ಕೆಲಸವಾಗುವುದಿಲ್ಲ. ಅದರಿಂದಾಗಿ ನಾವೆಲ್ಲ ಸಕ್ರಿಯರಾಗೋಣ. ಸಮಾಜವನ್ನೂ ಸಕ್ರಿಯಗೊಳಿಸೋಣ.ಪರಿಸ್ಥಿತಿ ಕಠಿಣವೇ ಇರಲಿ. ಅದನ್ನು ನಿಭಾಯಿಸಿ ನಮ್ಮ ಕೆಲಸವನ್ನು ಮುಂದುವರಿಸುವ ಛಾತಿ ನಮ್ಮಲ್ಲಿರಲಿ. ಹಿಂದೂ ಸಮಾಜದ ಬಗ್ಗೆ ಆತ್ಮೀಯತೆ ಸದಾ ಇರಲಿ. ಯಾರ ಬಗ್ಗೆಯೂ ಕಹಿ ಭಾವನೆಯಿಲ್ಲದಿರಲಿ. ಅಂತಹ ಮಾನಸಿಕತೆಯಿಂದ ನಾವು ದೇಶವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯುವ ಕೆಲಸವನ್ನು, ತನ್ಮೂಲಕ ವಿಶ್ವ ಕಲ್ಯಾಣದ ಕೆಲಸವನ್ನು ಮಾಡೋಣ.ಸ್ವಾಮೀಜಿಯ ಕನಸನ್ನು ನನಸು ಮಾಡುವಲ್ಲಿ ನಾವು ಪ್ರತಿದಿನ ಸ್ವಲ್ಪ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದೇವೆ. ಇಲ್ಲಿ ಕುಳಿತಿರುವ ಪ್ರತಿಯೊಬ್ಬ ಸ್ವಯಂಸೇವಕನೂ ತನ್ನಲ್ಲಿರುವ ಶಕ್ತಿ, ಚಾರಿತ್ರ್ಯ, ಜ್ಞಾನ, ವೀರವ್ರತ, ಧ್ಯೇಯನಿಷ್ಠೆ, ಸಂಘಟನಾ ಕುಶಲತೆ – ಈ ಎಲ್ಲಾ ಗುಣಗಳನ್ನು ಉಪಯೋಗಿಸಿಕೊಂಡು ಸಮಾಜವನ್ನು ಸಂಘಟಿಸುವ ಕೆಲಸವನ್ನು ಈಗಿನಿಂದಲೇ ಪ್ರಾರಂಭಿಸಬೇಕು. ಇದನ್ನು ಇನ್ನೂ ಚೆನ್ನಾಗಿ ಮಾಡುತ್ತಾ,೮೭ ವರ್ಷಗಳಿಂದ ಹರಿಯುತ್ತಿರುವ ಈ ಸಂಘಗಂಗೆ ಸದಾ ಪ್ರವಹಿಸುತ್ತಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲರದ್ದು. ಸಂಪೂರ್ಣ ರಾಷ್ಟ್ರದ ಸರ್ವಾಂಗೀಣ ಉನ್ನತಿಯನ್ನು ಮಾಡುವ ಸಂಕಲ್ಪವನ್ನು ಸಾಕಾರಗೊಳಿಸುವ ಕೆಲಸ ನಮ್ಮದು. ಅದಕ್ಕಾಗಿ ನಮ್ಮ ನಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಂಡು, ಅದನ್ನು ಚೆನ್ನಾಗಿ ನಿರ್ವಹಿಸೋಣ. ಮುಂದಿನ ೧೦-೨೦ ವರ್ಷಗಳಲ್ಲೇ ನಮ್ಮ ರಾಷ್ಟ್ರದಲ್ಲಿ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಿ, ರಾಷ್ಟ್ರವು ಪ್ರಪಂಚದಲ್ಲೇ ಉನ್ನತ ಸ್ಥಾನ ಗಳಿಸಿ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲುವಂತೆ ಮಾಡಬೇಕು.ಅದನ್ನು ನಾವು ಇದೇ ಕಣ್ಣಿನಿಂದ ನೋಡಬೇಕು. ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತಾ ನಾವು ನಮ್ಮ ದೇಶವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ಕೆಲಸ ಮಾಡೋಣ, ವಿವೇಕಾನಂದರ ಕನಸನ್ನು ಸಾಕಾರ ಮಾಡೋಣ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.’

ಆರೆಸ್ಸೆಸ್ಸಿನ ಸರಕಾರ್ಯವಾಹ ಭಯ್ಯಾಜಿ ಜೋಷಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಮ. ವೆಂಕಟರಾಮು, ಮಂಗಳೂರು ವಿಭಾಗ ಸಂಘಚಾಲಕ ಡಾ|| ಪಿ. ವಾಮನ ಶೆಣೈ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಹ ಸರಕಾರ್ಯವಾಹ ಕೆ. ಸಿ. ಕಣ್ಣನ್, ಅಖಿಲ ಭಾರತೀಯ ಸಹ ಸೇವಾ ಪ್ರಮುಖ್ ಅಜಿತ್ ಮಹಾಪಾತ್ರ, ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ, ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮುಖ್ ಮಂಗೇಶ ಭೇಂಡೆ, ಹಿರಿಯ ಕಾರ್ಯಕರ್ತರಾದ ಕೃ. ಸೂರ್ಯನಾರಾಯಣ ರಾವ್, ಮೈ. ಚ. ಜಯದೇವ, ನ. ಕೃಷ್ಣಪ್ಪ, ಸು. ರಾಮಣ್ಣ, ಡಾ| ಕಲ್ಲಡ್ಕ ಪ್ರಭಾಕರ ಭಟ್, ಗೋಪಾಲ್ ಚೆಟ್ಟಿಯಾರ್, ವಿ. ನಾಗರಾಜ, ನ. ತಿಪ್ಪೇಸ್ವಾಮಿ, ಶ್ರೀಧರ ಸ್ವಾಮಿ ಮೊದಲಾದವರು ಸಾಂಘಿಕ್‌ನಲ್ಲಿ ಭಾಗವಹಿಸಿದ್ದರು.

ಬಜ್ಪೆ ವಿಮಾನ ನಿಲ್ದಾಣದ ಸಮೀಪವಿರುವ ಕೆಂಜಾರುವಿನ ಬೃಹತ್ ಮೈದಾನದಲ್ಲಿ ನಡೆದ ಮಂಗಳೂರು ವಿಭಾಗ ಮಟ್ಟದ ಈ ಮಹಾ ಸಾಂಘಿಕ್‌ನಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳು ಮತ್ತು ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವ ಪ್ರದೇಶಗಳಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಗಣವೇಶಧಾರಿ ಸ್ವಯಂಸೇವಕರು ಭಾಗವಹಿಸಿದ್ದರು.

ವರದಿ: ವಿಶ್ವ ಸಂವಾದ ಕೇಂದ್ರ, ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.