ವರ್ತಮಾನದ ರಾಷ್ಟ್ರೀಯ ಪರಿದೃಶ್ಯ

ಕಳೆದ ವರ್ಷದಲ್ಲಿ ಅನೇಕ ಸಂತೋಷದಾಯಕ ಘಟನೆಗಳ ಜತೆಗೆ ಬೇಸರದ ಅಥವಾ ಅಹಿತಕರ ಘಟನೆಗಳ ಮಿಶ್ರಣವನ್ನು ದೇಶವು ಒಳಗೊಂಡಿತ್ತು.

ಇಡೀ ದೇಶದ, ವಿಶೇಷವಾಗಿ ಹಿಂದೂ ಸಮಾಜದ ಸಾಂಸ್ಕೃತಿಕ ಗರಿಮೆ ಹಾಗೂ ಸ್ವಾಭಿಮಾನವನ್ನು ಶಿಖರಕ್ಕೇರಿಸಿದ್ದು, ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ. ಇದೊಂದು ಅವಿಸ್ಮರಣೀಯ ಸಂದರ್ಭ. ಈ ವಿಶೇಷ ಮಹಾಕುಂಭವು ಭಾರತದ ಅಧ್ಯಾತ್ಮ, ಸಾಂಸ್ಕೃತಿಕ ಪರಂಪರೆಯ ನೋಟವನ್ನು ನೀಡಿದ್ದಷ್ಟೆ ಅಲ್ಲದೆ ನಮ್ಮ ಸಮಾಜದ ಆಂತರ್ಯದಲ್ಲಿ ಅಡಗಿರುವ ಉದಾತ್ತತೆಯ ಅರಿವನ್ನು ಮನಗಾಣಿಸಿತು. ಮಹಾಕುಂಭಮೇಳದ ಪವಿತ್ರ ಸಂದರ್ಭದಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಿದರು ಹಾಗೂ ‘ನ ಭೂತೋ…’ (ಹಿಂದೆಂದೂ ಘಟಿಸದಂತಹ) ಇತಿಹಾಸವನ್ನು ಸೃಷ್ಟಿಸಿದರು. ಅಧ್ಯಾತ್ಮದ ಈ ಮಹಾ ಮೇಳದಲ್ಲಿ ದೇಶದ ಸಮಸ್ತ ಪಂಥ-ಸಂಪ್ರದಾಯಗಳ ಎಲ್ಲ ಸಾಧುಗಳೂ, ಮಹಾತ್ಮರೂ, ಭಕ್ತರೂ ಭಕ್ತಿಪೂರ್ವಕವಾಗಿ ಪಾಲ್ಗೊಂಡರು. ಈ ಬೃಹತ್ ಕುಂಭಮೇಳದ ಮೂಲಸೌಕರ್ಯವನ್ನು, ಸೂಕ್ತ ಹಾಗೂ ಸರಾಗವಾಗಿ ನಡೆಯುವಂತೆ ರೂಪಿಸಿದ ಹಾಗೂ ನಿರ್ವಹಣೆ ಮಾಡಿದ ಉತ್ತರ ಪ್ರದೇಶ ಸರ್ಕಾರ ಹಾಗೂ ಭಾರತ ಸರ್ಕಾರವು ಅಭಿನಂದನಾರ್ಹವಾಗಿವೆ. ಜತೆಗೆ, ಸಮಾಜದ ಅಗಣಿತ ಜನರು ಹಾಗೂ ಸಂಘಟನೆಗಳು ತಮ್ಮ ಸಂಪನ್ಮೂಲ ಮತ್ತು ಪರಿಶ್ರಮವನ್ನು ವಿನಿಯೋಗಿಸುವ ಮೂಲಕ ಮಹಾಕುಂಭಕ್ಕೆ ಬೆಂಬಲ ನೀಡಲು ಮುಂದೆ ಬಂದದ್ದು ಕಂಡುಬಂದಿತು.

ಶಾಹಿಸ್ನಾನದ ಪ್ರಮುಖ ದಿನವಾದ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಆಕಸ್ಮಿಕ ಕಾಲ್ತುಳಿತದಿಂದಾಗಿ ಕೆಲವು ಭಕ್ತರು ನಿಧನರಾಗಿದ್ದು ಬೇಸರದ ಸಂಗತಿ. ಉಳಿದಂತೆ ಮಹಾಕುಂಭವು ವ್ಯವಸ್ಥೆ, ಶಿಸ್ತು, ಸ್ವಚ್ಛತೆ, ಸೇವೆ ಹಾಗೂ ಸಹಕಾರದ ದೃಷ್ಟಿಯಿಂದ ಸಾರ್ವಜನಿಕ ಜೀವನದಲ್ಲೊಂದು ಮೈಲುಗಲ್ಲಾಯಿತು ಹಾಗೂ ವಿಶೇಷ ಮೇಳಗಳನ್ನು ಆಯೋಜಿಸಲು ಆದರ್ಶವಾಯಿತು. ಮಹಾಕುಂಭವು ಸಾರ್ವಕಾಲಿಕ ದಾಖಲೆಯನ್ನೇ ಬರೆಯಿತು.

ಮಹಾಕುಂಭದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತ ಸಂಸ್ಥೆಗಳು, ಸಂಘಟನೆಗಳು ವಿವಿಧ ಸೇವಾ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸೈದ್ಧಾಂತಿಕ ಕಾರ್ಯಕ್ರಮಗಳನ್ನು ಆಯೋಜಿಸಿದವು. ಇವುಗಳಲ್ಲಿ ಎರಡು ಪ್ರಯತ್ನಗಳು ಉಲ್ಲೇಖನೀಯ.

1.           ನೇತ್ರ ಕುಂಭ: ಕಳೆದ ಬಾರಿಯಂತೆಯೇ ಸಕ್ಷಮ ಸಂಘಟನೆಯು ಕುಂಭಕ್ಕೆ ಆಗಮಿಸುವವರಿಗಾಗಿ ಉಚಿತ ಕಣ್ಣಿನ ಪರೀಕ್ಷೆ, ಕನ್ನಡಕಗಳ ಉಚಿತ ವಿತರಣೆ ಹಾಗೂ ಅವಶ್ಯಕತೆಯಿದ್ದರೆ ಕೆಟರಾಕ್ಟ್ ಸರ್ಜರಿಯನ್ನೂ ಉಚಿತವಾಗಿ ನೆರವೇರಿಸಿತು. ಅನೇಕ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಹಾಗೂ ಇನ್ನಿತರೆ ಸಾಮಾಜಿಕ ಸಂಘಟನೆಗಳು ಸೇವಾಮನೋಭಾವದಿಂದ ಈ ಕಾರ್ಯಕ್ಕೆ ಮನದುಂಬಿ ಸಹಕಾರ ನೀಡಿದವು. ಸಂಪೂರ್ಣ ಸುಸಜ್ಜಿತ ಬೃಹತ್ ಪೆಂಡಾಲ್‌ನಲ್ಲಿ ಆಯೋಜಿಸಿದ್ದ ಈ ಯೋಜನೆಯ ಕೆಲವು ಅಂಕಿಅಂಶಗಳು ಕೆಳಕಂಡAತಿವೆ.

ಕಣ್ಣಿನ ಪರೀಕ್ಷೆಗೆ ಒಳಪಟ್ಟವರು – 2,37,964

ಕನ್ನಡಕಗಳ ಉಚಿತ ವಿತರಣೆ- 1,63,652

ಕೆಟರಾಕ್ಟ್ ಸರ್ಜರಿ- 17,069

ಮಹಾಕುಂಭದಲ್ಲಿ 53 ದಿನಗಳವರೆಗೆ ನಡೆದ ಈ ಯೋಜನೆಯಲ್ಲಿ ಒಟ್ಟು 300 ನೇತ್ರತಜ್ಞರು ಹಾಗೂ 2,800 ಕಾರ್ಯಕರ್ತರು ಕಾರ್ಯನಿರ್ವಹಿಸಿದರು.

2.           ಒನ್ ಥಾಲಿ- ಒನ್ ಥೈಲಿ ಅಭಿಯಾನ: ಸಮಾಜದ ಅನೇಕ ಸಂಘಟನೆಗಳ ಜತೆಗೂಡಿ ಪರಿಸರ ಸಂರಕ್ಷಣೆ ಗತಿವಿಧಿಯ ಮೂಲಕ ಆಯೋಜನೆ ಮಾಡಲಾಗಿದ್ದ ಒನ್ ಥಾಲಿ-ಒನ್ ಥೈಲಿ (ಒಂದು ತಟ್ಟೆ-ಒಂದು ಕೈಚೀಲ) ಅಭಿಯಾನವು ಅಪಾರ ಸಫಲತೆ ಕಂಡಿತು. ಮಹಾಕುಂಭದಲ್ಲಿ ಯಾವುದೇ ಸಂದರ್ಭದಲ್ಲಿ ಥರ್ಮೊಕೋಲ್ ತಟ್ಟೆಗಳು ಹಾಗೂ ಪಾಲಿಥೀನ್ (ಪ್ಲಾಸ್ಟಿಕ್) ಕೈಚೀಲಗಳನ್ನು ಬಳಸದಂತೆ ತಡೆಯುವ ಸಲುವಾಗಿ ಈ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನದ ಕಾರಣದಿಂದಾಗಿ ಅಪಾರ ಪ್ರಮಾಣದ ಸ್ಟೀಲ್ ತಟ್ಟೆಗಳು ಹಾಗೂ ಬಟ್ಟೆಯ ಕೈಚೀಲಗಳು ದೇಶದಾದ್ಯಂತ ಸಂಗ್ರಹವಾಗಿದೆ. ಕಾರ್ಯಕತರು ಒಟ್ಟು ೧೪,೧೭,೦೬೪ ಸ್ಟೀಲ್ ತಟ್ಟೆಗಳು ಹಾಗೂ ೧೩,೪೬,೧೨೮ ಬಟ್ಟೆ ಕೈಚೀಲಗಳನ್ನು ೨,೨೪೧ ಸಂಸ್ಥೆಗಳು ಮತ್ತು ಸಂಘಟನೆಗಳಿಂದ, ೭,೨೫೮ ಕೇಂದ್ರಗಳ ಮೂಲಕ ಸಂಗ್ರಹ ಮಾಡಲಾಯಿತು. ಸಂಗ್ರಹ ಮಾಡಿದ ಸ್ಟೀಲ್ ತಟ್ಟೆ ಹಾಗೂ ಕೈಚೀಲಗಳನ್ನು ಕುಂಭದ ವಿವಿಧ ಪಂಡಾಲ್‌ಗಳಲ್ಲಿ ಭಕ್ತರಿಗೆ ಹಂಚಲಾಯಿತು. ಈ ಅಭಿಯಾನವು ಒಂದು ವಿಶಿಷ್ಟ ಪ್ರಯೋಗಗ. ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಮತ್ತು ‘ಸ್ವಚ್ಛಕುಂಭ’ ಘೋಷಣೆಯನ್ನು ಜನಸಮೂಹಕ್ಕೆ ಕೊಂಡೊಯ್ಯುವಲ್ಲಿ ಈ ಅಭಿಯಾನವು ಬಹಳ ಸಫಲವಾಯಿತು.

ಲೋಕಸಭೆ ಚುನಾವಣೆ ಹಾಗೂ ಈ ವರ್ಷ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಲೋಕಮತ ಪರಿಷ್ಕಾರದ (ಸಾರ್ವಜನಿಕ ಅಭಿಪ್ರಾಯ ಮರುರೂಪಿಸುವಿಕೆ) ಮೂಲಕ ಸಂಘದ ಸ್ವಯಂಸೇವಕರು ಅಪಾರ ಶ್ರಮವಹಿಸಿದರು; ರಾಷ್ಟ್ರೀಯ ವಿಚಾರಗಳು ಸಮಾಜದಲ್ಲಿ ಚರ್ಚೆಯಾಗುವಂತೆ ಮಾಡುವಲ್ಲಿ ಸಫಲವಾದರು ಹಾಗೂ ಮತದಾನದ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಿದರು. ಸ್ವಸ್ಥ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ತೋರುಗಾಣಿಸುವ ಬದ್ಧತೆಯೊಂದಿಗೆ ನಾಗರಿಕರು ತಮ್ಮ ರಾಷ್ಟ್ರೀಯ ಕರ್ತವ್ಯ (ಮತದಾನವನ್ನು) ನೆರವೇರಿಸಲು ಈ ಅಭಿಯಾನವು ಸಹಕಾರಿಯಾಯಿತು.

ಆದರ್ಶ ಆಡಳಿತ, ಧಾರ್ಮಿಕ ನಂಬಿಕೆ, ತನ್ನ ಜನರ ಕುರಿತು ಮಾತೃಭಾವದ ಪ್ರೀತಿ ಹಾಗೂ ಅಕಳಂಕ ವ್ಯಕ್ತಿತ್ವದಂತಹ ಗುಣಗಳ ಮೂರ್ತಿವೆತ್ತಂತಿದ್ದ ಲೋಕಮಾತಾ ಅಹಿಲ್ಯಾ ದೇವಿ ಹೋಳ್ಕರ್ ಅವರ 300ನೇ ಜನ್ಮವರ್ಷಾಚರಣೆ ಪ್ರಯುಕ್ತ ಸಂಘವು ಕರೆಯೊಂದನ್ನು ನೀಡಿತ್ತು. ಈ ಕರೆಗೆ ಓಗೊಟ್ಟು ದೇಶದ ಅನೇಕ ಸ್ಥಾನಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಲೋಕಮಾತೆಯ ಆದರ್ಶ ವ್ಯಕ್ತಿತ್ವವನ್ನು ಸಮಾಜದ ಮುಂದಿರಿಸಲು ಅನೇಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದವು. ಲೋಕಮಾತೆಯ ಅನುಕರಣೀಯ ವ್ಯಕ್ತಿತ್ವದ ಸ್ಮರಣೆಯು ಸ್ಫೂರ್ತಿದಾಯಕವಾಗಿತ್ತು ಹಾಗೂ ಸಮಾಜದ ಕುರಿತು ಕರ್ವವ್ಯದ ಪುನರ್‌ಮನನ ಮಾಡಿಸಿತು.

ಸ್ಫೂರ್ತಿದಾಯಕ ಹಾಗೂ ಪ್ರೋತ್ಸಾಹಕರವಾದ ಇಂತಹ ಚಟುಚಟಿಕೆಗಳು ನಾಗರಿಕರಲ್ಲಿ ರಾಷ್ಟ್ರೀಯ ಭಾವ, ಸಾಮಾಜಿಕ ಸೂಕ್ಷ್ಮತೆ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ರೂಪಿಸುವ ಧನಾತ್ಮಕ ವಾತಾವರಣವು ಕ್ರಮೇಣ ರೂಪುಗೊಳ್ಳುತ್ತಿದೆ. ಇದರ ಜತೆಗೇ ನಮ್ಮ ಸಮಾಜವು ಕೆಲವು ಗಂಭೀರ ಸಮಸ್ಯೆ ಮತ್ತು ಸವಾಲುಗಳನ್ನೂ ಎದುರಿಸುತ್ತಿದೆ.

ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಅಧಿಕಾರ ಬದಲಾವಣೆಯ ಸಂದರ್ಭದಲ್ಲಿ ಅಲ್ಲಿನ ಮತೀಯ ಮೂಲಭೂತವಾದಿಗಳು ಹಿಂದೂ ಮತ್ತು ಇತರೆ ಸಮುದಾಯಗಳ ಮೇಲೆ ನಡೆಸಿದ ದಾಳಿಯು ಸರ್ವಥಾ ಖಂಡನೀಯವಾದುದು. ಈ ಘಟನಾವಳಿಗಳು ಯಾವುದೇ ಅರ್ಥದಲ್ಲಿ ನೋಡಿದರೂ ಸಮಗ್ರ ಮಾನವೀಯತೆ ಮತ್ತು ಪ್ರಜಾಪ್ರಭುತ್ವಕ್ಕೂ ನಾಚಿಕೆಗೇಡಿನದ್ದು. ಬಾಂಗ್ಲಾದೇಶದಲ್ಲಿರುವ ಈ ಮತೀಯ ಮೂಲಭೂತವಾದಿ ಸ್ಥಿತಿಯನ್ನು ಖಂಡಿಸಲು ಸಂಘ ಮತ್ತು ಇನ್ನಿತರೆ ಸಂಘಟನೆಗಳು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದವು. ಹಿಂದೂಗಳಿಗೆ ರಕ್ಷಣೆ ನೀಡುವಂತೆ ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುವ ಜತೆಗೆ ಈ ವಿಚಾರದಲ್ಲಿ ಜಾಗತಿಕ ಅಭಿಪ್ರಾಯ ರೂಪಿಸುವಲ್ಲಿ ಭಾರತ ಸರ್ಕಾರವು ಪ್ರಯತ್ನಿಸಿತು.

ಆದರೂ ಅಲ್ಲಿನ ಪರಿಸ್ಥಿತಿಯು ಗಂಭೀರವಾಗಿಯೇ ಮುಂದುವರಿದಿದೆ. ಹಿಂದೂಗಳ ಜೀವ ಮತ್ತು ಸಂಪತ್ತು ಅಪಾಯದಲ್ಲಿದೆ. ಇಂತಹ ಕಠಿಣ ಮತ್ತು ಭಯಾನಕ ಪರಿಸ್ಥಿತಿಯಲ್ಲೂ ಬಾಂಗ್ಲಾದೇಶದ ಹಿಂದೂ ಸಮುದಾಯವು ತನ್ನ ಆತ್ಮವಿಶ್ವಾಸದ ಬಲದ ಮೇಲೆ ಈ ದಾಳಿಕೋರ ಶಕ್ತಿಗಳ ವಿರುದ್ಧ ಸೆಟೆದುನಿಂತಿದೆ ಹಾಗೂ ತನ್ನನ್ನು ರಕ್ಷಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿದೆ ಎನ್ನುವುದು ಸ್ತುತ್ಯರ್ಹವಾದದ್ದು.

ಭಾರತೀಯ ಸಮಾಜವು ಬಾಂಗ್ಲಾದೇಶದ ಹಿಂದೂಗಳ ಸುರಕ್ಷಿತ ಮತ್ತು ಸಂತೋಷದಾಯಕ ಜೀವನಕ್ಕಾಗಿ ಹಾರೈಸುವುದು ಮಾತ್ರವಲ್ಲದೆ, ಅದಕ್ಕಾಗಿ ಸರ್ವ ರೀತಿಯ ಬೆಂಬಲ ಮತ್ತು ಸಹಕಾರವನ್ನೂ ನೀಡಲಿದೆ. ಬಾಂಗ್ಲಾದೇಶದ ಹಿಂದೂಗಳ ಮತ್ತು ಇತರೆ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಾಗತಿಕ ಸಮುದಾಯವು ಮುಂದೆ ಬರಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ.

ದೇಶದ ಪೂರ್ವಗಡಿಯನ್ನು ಹೊಂದಿರುವ ಮಣಿಪುರ ರಾಜ್ಯವು ಕಳೆದ 20 ತಿಂಗಳಿಂದಲೂ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಬಳಲುತ್ತಿದೆ. ಅಲ್ಲಿನ ಎರಡು ಸಮುದಾಯಗಳ ನಡುನೆ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದಿಂದಾಗಿ ಪರಸ್ಪರ ಅಪನಂಬಿಕೆ, ದ್ವೇಷ ಮಾನಸಿಕತೆಯ ಉಲ್ಬಣವಾಗಿದೆ. ನಾಗರಿಕರು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಲು ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಕೈಗೊಂಡ ಕೆಲವು ಪರಿಣಾಮಕಾರಿ ರಾಜಕೀಯ ಮತ್ತು ಆಡಳಿತಾತ್ಮಕ ಕ್ರಮಗಳಿಂದಾಗಿ ಪರಿಸ್ಥಿತಿಯು ತಿಳಿಗೊಳ್ಳುವ ಆಶಾಭಾವನೆಯನ್ನು ಸ್ವಲ್ಪಮಟ್ಟಿಗೆ ಮೂಡಿಸಿದೆ. ಆದರೆ ಪರಸ್ಪರ ಸೌಹಾರ್ದಯುತ ಮತ್ತು ನಂಬಿಕೆಯುಳ್ಳ ಸಹಜ ವಾತಾವರಣ ನಿರ್ಮಾಣವಾಗಲು ಸಾಕಷ್ಟು ಸಮಯ ತಗಲುತ್ತದೆ.

ಈ ಸಂಪೂರ್ಣ ಘಟನಾವಳಿಗಳ ಸಂದರ್ಭದಲ್ಲಿ ಒಂದೆಡೆ ಸಂಘ ಮತ್ತು ಸಂಘಪ್ರೇರಿತ ಸಂಘಟನೆಗಳು ಸಂತ್ರಸ್ತ ಜನರಿಗೆ ಸಾಂತ್ವನ ನೀಡಲು ಹಾಗೂ ಒತ್ತಾಸೆಯಾಗಿ ನಿಲ್ಲಲು ಕಾರ್ಯನಿರ್ವಹಿಸುತ್ತಿದ್ದರೆ; ಇನ್ನೊಂದೆಡೆ ವಿವಿಧ ಸಮುದಾಯಗಳ ಜತೆಗೆ ನಿರಂತರ ಸಂಪರ್ಕವನ್ನು ಇರಿಸಿಕೊಂಡು ತಾಳ್ಮೆಯಿಂದಿರಲು ಸಂದೇಶವನ್ನು ನೀಡುತ್ತ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನವನ್ನೂ ಮಾಡುತ್ತಿವೆ. ಶಾಂತಿ ಹಾಗೂ ಸೌಹಾರ್ದತೆಗಾಗಿ ಈ ಎಲ್ಲ ಪ್ರಯತ್ನಗಳೂ ಈಗಲೂ ಯಥಾರೂಪ ಮುಂದುವರಿದಿವೆ. “ತಮ್ಮ ಆತಂಕ ಹಾಗೂ ಅಪನಂಬಿಕೆಯನ್ನು ಬದಿಗಿರಿಸಬೇಕು ಹಾಗೂ ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಭ್ರಾತೃತ್ವಭಾವನೆಯನ್ನು ಮೂಡಿಸಲು ಜಾಗೃತ ಪ್ರಯತ್ನವನ್ನು ಮಾಡಬೇಕು” ಎಂದು ಮಣಿಪುರದ ಎಲ್ಲ ಸಮುದಾಯಗಳಿಗೂ ಸಂಘವು ಮನವಿ ಮಾಡುತ್ತದೆ. ರಾಜ್ಯದ ಜನತೆಯ ಅಭಿವೃದ್ಧಿಯ ಸಲುವಾಗಿ ಈ ಹೆಜ್ಜೆಯು ಅತ್ಯಂತ ಆವಶ್ಯಕವಾಗಿದೆ.

ವಿಭಜನಕಾರಿ ಕುಕೃತ್ಯಗಳ ಮೂಲಕ ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಗೆ ಸವಾಲೊಡ್ಡಲು ಅನೇಕ ಶಕ್ತಿಗಳು ಆಗಿಂದಾಗ್ಗೆ ತಲೆಯೆತ್ತುತ್ತಲೇ ಇರುತ್ತವೆ. ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಜಾತಿ, ಭಾಷೆ, ಪ್ರದೇಶ, ಮತಗಳ ಹೆಸರಿನಲ್ಲಿ ವಿಭಜನಕಾರಿ ಕುತಂತ್ರವನ್ನು ರೂಪಿಸುವುದು ಹೊಸತೇನೂ ಅಲ್ಲ ಎನ್ನುವುದು ತಿಳಿಯುತ್ತದೆ. ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಇಂತಹ ಮಾನಸಿಕತೆಗಳು ಬಲಗೊಳ್ಳುತ್ತಿವೆ ಅಥವಾ ದಕ್ಷಿಣ ಭಾರತ ಎಂಬ ಪ್ರತ್ಯೇಕ ಗುರುತು ಎಂಬ ಕಥನಗಳನ್ನು ರೂಪಿಸುವಲ್ಲಿ ನಿರತವಾಗಿವೆ. ಇಂತಹ ಕೃತ್ಯಗಳಿಂದ ಇಡೀ ದೇಶ, ವಿಶೇಷವಾಗಿ ಆ ಪ್ರದೇಶಗಳ ಜನರ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲವಾದರೂ ಈ ಕುತಂತ್ರದ ಕುರಿತು ಜಾಗೃತರಾಗಿರಬೇಕು ಹಾಗೂ ಜನಜಾಗೃತಿ ಮೂಡಿಸಿ ಇಂತಹ ದುಷ್ಟಪ್ರಯತ್ನಗಳನ್ನು ಸೋಲಿಸಲು ಪ್ರಯತ್ನಿಸಬೇಕಾಗಿರುವುದು ಕಾಲದ ಅವಶ್ಯಕತೆ.

ಸಂಘದ ಶತಮಾನವರ್ಷದ ವಾತಾವರಣವು ಸಂಘಟನೆಯ ಜತೆಗೆ ಸಮಾಜದಲ್ಲಿಯೂ ರೂಪಿತಗೊಳ್ಳುತ್ತಿದೆ. ಸಮಾಜದ ಜಾಗೃತ ನಾಗರಿಕರು ಮತ್ತು ಒಟ್ಟಾರೆ ಜನಸಮೂಹದಲ್ಲೂ ಸಂಘಕಾರ್ಯದ ಕುರಿತು ವಿಶ್ವಾಸಾರ್ಹತೆಯು ಹೆಚ್ಚುತ್ತಿರುವುದು ಅನುಭವಕ್ಕೆ ಬರುತ್ತಿದೆ. ಸಂಘದ ಸಾಮಾಜಿಕ ದೃಷ್ಟಿ ಹಾಗೂ ಉಪಾಯಗಳು ಮತ್ತು ಸ್ವಯಂಸೇವಕರು ಕೈಗೊಳ್ಳುತ್ತಿರುವ ಉಪಕ್ರಮಗಳಿಗೆ ಸಮಾಜದಿಂದ ಧನಾತ್ಮಕ ಬೆಂಬಲ ಮತ್ತು ಸಹಕಾರ ದೊರಕುತ್ತಿದೆ. ಈ ಅನುಕೂಲಕರ ವಾತಾವರಣದಲ್ಲಿ ಕಾರ್ಯವಿಸ್ತಾರದ ಗುರಿಸಾಧಿಸಲು ನಮ್ಮೆಲ್ಲ ಪರಿಶ್ರಮವನ್ನು ನಾವು ವಿನಿಯೋಗಿಸಬೇಕಿದೆ. ನಮ್ಮ ಕಾರ್ಯಪದ್ಧತಿಯನ್ನು ಅಚಲವಾಗಿ ಅನುಸರಿಸಲು ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಹೆಚ್ಚಿನ ಪರಿಶ್ರಮದ ಅವಶ್ಯಕತೆಯಿದೆ.

ಶತಮಾನವರ್ಷದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಈ ಪ್ರತಿನಿಧಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಂಪೂರ್ಣ ಗುರಿಸಾಧಿಸುವ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ವಿಸ್ತೃತ ಯೋಜನೆಯನ್ನು ಮಾಡಬೇಕಾಗಿದೆ. ಸಂಘಟನೆಯಲ್ಲಿ ಉತ್ಸಾಹವರ್ಧನೆ ಮತ್ತು ಸಮಾಜದಲ್ಲಿ ಸ್ವಾಭಿಮಾನವನ್ನು ಹೆಚ್ಚಿಸಲು ಸಂಘದ ಶಕ್ತಿ ಹಾಗೂ ಪ್ರಭಾವವನ್ನು ಎಲ್ಲ ರೀತಿಯಲ್ಲೂ ಹೆಚ್ಚಿಸಿಕೊಳ್ಳಲು ದೊರಕಿರುವ ಈ ಸುವರ್ಣ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಲಿದ್ದೇವೆ. ಸಮಾಜ ಜಾಗೃತಿ ಹಾಗೂ ಸಂಘಟನೆಯಲ್ಲಿ ತೊಡಗಿರುವ ಸಂಘದAತಹ ಶಕ್ತಿಗಳಿಗೆ, ಉಳಿದ ಸಮಾಜವನ್ನು ಜಾಗೃತಗೊಳಿಸುವುದು, ಸಮಯಕ್ಕೆ ಅನುಗುಣವಾಗಿ ಆಗಿಂದಾಗ್ಗೆ ಸೂಕ್ತ ದಿಕ್ಕಿನಲ್ಲಿ ಸಾಗುವಂತೆ ಕ್ರಿಯಾಶೀಲಗೊಳಿಸುವುದೂ ಮುಖ್ಯ ಕೆಲಸ. ಹಾಗಾಗಿ ಈ ಅರ್ಥಪೂರ್ಣಪಾತ್ರವನ್ನು ನಿಭಾಯಿಸುವ ಸಲುವಾಗಿ ನಾವು ಸಂಘಟನೆಯನ್ನು ಪೂರ್ಣಪ್ರಮಾಣದಲ್ಲಿ ಸಿದ್ಧಗೊಳಿಸಬೇಕಾಗಿದೆ. ಇದರ ಸಾಧನೆಗಾಗಿ ಸಮಾಜದೊಂದಿಗೆ ವ್ಯಾಪಕ ಸಂಪರ್ಕ ಹೊಂದಬೇಕು, ಸಜ್ಜನರ ಭಾಗವಹಿಸುವಿಕೆಗೆ ಒತ್ತು ನೀಡಬೇಕು ಹಾಗೂ ನಮ್ಮ ಅಚಲ ರಾಷ್ಟ್ರಭಕ್ತಿ ಮತ್ತು ಶುದ್ಧಸ್ಫಟಿಕ ವ್ಯಕ್ತಿತ್ವದೊಂದಿಗೆ ಮುಂದಡಿ ಇಡಬೇಕು.

ಸಮಾಜ ಹೈ ಆರಾಧ್ಯ ಹಮಾರಾ, ಸೇವಾ ಹೈ ಆರಾಧನಾ

ಭಾರತಮಾತಾ ಕೇ ವೈಭವ್ ಕೀ ಸೇವಾ ವ್ರತ್ ಸೇ ಸಾಧನಾ

(ಸೇವೆಯ ಈ ಸಂಕಲ್ಪದ ಮೂಲಕ ಭಾರತಮಾತೆಯ ವೈಭವಕ್ಕಾಗಿ ಪ್ರಾರ್ಥಿಸಲು ಸಮಾಜವೇ ನಮ್ಮ ದೇವರು ಹಾಗೂ ಸೇವೆಯೇ ನಮ್ಮ ಆರಾಧನೆ)

– ದತ್ತಾತ್ರೇಯ ಹೊಸಬಾಳೆ

(ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ನೀಡಿದ ವಾರ್ಷಿಕ ವರದಿಯಲ್ಲಿ ವರ್ತಮಾನದ ರಾಷ್ಟ್ರೀಯ ಪರಿದೃಶ್ಯ ಕುರಿತು ಸರಕಾರ್ಯವಾಹರ ಹೇಳಿಕೆ)

Leave a Reply

Your email address will not be published.

This site uses Akismet to reduce spam. Learn how your comment data is processed.