
ಯುಗಾದಿ ಸಂದರ್ಭದಲ್ಲಿ ಕರ್ನಾಟಕದ ವಿಕ್ರಮ ವಾರಪತ್ರಿಕೆ ಹೊರತರುತ್ತಿರುವ ‘ಸಂಘ ಶತಮಾನ’ ವಿಶೇಷಾಂಕಕ್ಕೆ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ವಿಕ್ರಮದ ಸಂಪಾದಕ ರಮೇಶ ದೊಡ್ಡಪುರ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳವರೆಗೆ ನಡೆಸಿದ ಸುದೀರ್ಘ ಸಂದರ್ಶನದಲ್ಲಿ ಸಂಘ, ಸಮಾಜ, ದೇವಾಲಯ ಪುನರುತ್ಥಾನ, ಸಂಘದ ಮುಂದಿನ ನಡೆ ಸೇರಿ ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.
—————–
ವಿಕ್ರಮ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೆಲವು ವಿಶಿಷ್ಟ ಪದ್ಧತಿಗಳಲ್ಲಿ ಶಾಖೆಯೂ ಒಂದು. ಬಹಿರಂಗ ಚಟುವಟಿಕೆಯಾದ ಶಾಖೆಯಲ್ಲಿ ಸೀಕ್ರೇಟ್ ಏನೂ ಇಲ್ಲ. ಆದರೆ ಇದನ್ನು ಯಾರೂ ನಕಲು ಮಾಡಿ ಸಫಲವಾಗಲು ಇಲ್ಲಿವರೆಗೆ ಆಗಿಲ್ಲ. ಅಂದರೆ ಬಹಿರಂಗವಾಗಿ ನಡೆಯುವ ಶಾಖೆಯ ‘ಸೀಕ್ರೆಟ್’ ಏನು? ಆರ್ಎಸ್ಎಸ್ನಿಂದ ಮಾತ್ರವೇ ಈ ಮುಕ್ತ ಸರಳ, ವ್ಯವಸ್ಥೆಯನ್ನು ರೂಪಿಸಲು, ನಡೆಸಲು ಹೇಗೆ ಸಾಧ್ಯವಾಗುತ್ತಿದೆ?
ದತ್ತಾತ್ರೇಯ ಹೊಸಬಾಳೆ: ಸಂಘದ ನೂರು ವರ್ಷದ ಪ್ರಯಾಣದಲ್ಲಿ ವ್ಯಕ್ತಿ ನಿರ್ಮಾಣಕ್ಕಾಗಿ ಪ್ರಾರಂಭದಿಂದಲೂ ಕಂಡುಕೊಂಡ ವ್ಯವಸ್ಥೆಯೇ ಶಾಖೆ. ಒಂದು ಊರಿನಲ್ಲಿ ಶಾಖೆ ಇದೆ ಎಂದರೆ ಮಾತ್ರವೇ ಅಲ್ಲಿ ಸಂಘ ಇದೆ ಎಂದರ್ಥ. ಸಂಘ ಸಂಸ್ಥಾಪಕರಾದ ಪೂಜನೀಯ ಡಾ. ಕೇಶವ ಬಲಿರಾಮ ಹೆಡಗೆವಾರರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಇನ್ನಿತರ ಕೆಲಸಗಳಲ್ಲೂ ಅನೇಕ ಮುಖಗಳಲ್ಲಿ ತೊಡಗಿ ಅನುಭವ ಪಡೆದಿದ್ದರು. ಆ ಎಲ್ಲ ಅನುಭವದ ಪಾಕವಾಗಿ ಸಂಘದ ಶಾಖೆ ಎನ್ನುವ ಪದ್ಧತಿ, ತಂತ್ರ ಮೂಡಿತು. ಬಹುಶಃ ಡಾಕ್ಟರ್ಜಿ ಈ ಕುರಿತು ಬಹಳ ಆಳವಾಗಿ ಯೋಚನೆ ಮಾಡಿರಬಹುದು.
ನೀವು ಹೇಳಿದಂತೆಯೇ ಇದು ಮುಕ್ತ ಬಯಲಿನಲ್ಲಿ ಪ್ರತಿದಿನ ಒಂದು ಗಂಟೆ ನಡೆಯುವ ಕಾರ್ಯಕ್ರಮ, ಅತ್ಯಂತ ಸರಳವಾದದ್ದು, ಯಾವುದೇ ರಹಸ್ಯ ಇಲ್ಲ. ಇದು ಸರಳವಾಗಿದೆ, ಆದರೆ ಇದು ಸುಲಭ ಅಲ್ಲ. ಶಾಖೆಯ ಪದ್ಧತಿ ಸರಳವಾದರೂ ಪ್ರತಿದಿನ, ವರ್ಷಾನುಗಟ್ಟಲೆ ನಡೆಸಬೇಕಿರುವುದರಿಂದ ಸುಲಭ ಅಲ್ಲ. ಇದಕ್ಕೆ ಬೇಕಾದ ಮಾನಸಿಕತೆ, ನಿಷ್ಠೆ, ಶ್ರದ್ಧೆ ಮತ್ತು ತಕ್ಷಣದ ಪರಿಣಾಮ ನಿರೀಕ್ಷಿಸದೇ ನಡೆಯಬೇಕಾದ ಗುಣವನ್ನು ಬೆಳೆಸಿಕೊಳ್ಳುವುದು ಕಠಿಣ. ಇದನ್ನು ನಕಲು ಮಾಡಲು ಕೆಲವರು ಪ್ರಯತ್ನಪಟ್ಟರು. ಆದರೆ ನಿಸ್ವಾರ್ಥವಾಗಿ, ಪ್ರತಿಫಲ-ಪ್ರಸಿದ್ಧಿಯ ಅಪೇಕ್ಷೆ ಇಲ್ಲದೆಯೇ ವೈಯಕ್ತಿಕ ಸ್ವಾರ್ಥ ಇಲ್ಲದೆಯೇ ತಪಸ್ಸಿನ ರೀತಿ ಮಾಡಲು ಅಂಥವರಲ್ಲಿ ತಯಾರಿ ಇರಲಿಲ್ಲ. ಹಾಗಾಗಿ ಸಫಲವಾಗಲಿಲ್ಲ. ಆತ್ಮೀಯತೆಯ ಭಾವವೇ ಶಾಖೆಯ ಮೂಲಾಧಾರ. ‘ಶುದ್ಧ ಸಾತ್ತಿ÷್ವಕ ಪ್ರೇಮ್ ಅಪನೇ ಕಾರ್ಯ ಕಾ ಆಧಾರ್ ಹೈ’ ಎಂದು ಸಂಘದ ಹಾಡೊಂದಿದೆ. ಸಮಾಜದ ಸಂಘಟನೆಗೆ ಇದು ಯೋಗ್ಯ ಪದ್ಧತಿ ಎನ್ನುವಂಥದ್ದು ನೂರು ವರ್ಷದ ಅನುಭವದಲ್ಲಿ ಸಾಬೀತಾಗಿದೆ.
ವಿಕ್ರಮ: ಸಂಘದ ಇನ್ನೊಂದು ವೈಶಿಷ್ಟ್ಯತೆ ಎಂದರೆ ಪ್ರಚಾರಕ ವ್ಯವಸ್ಥೆ. ಪ್ರಚಾರಕ ವ್ಯವಸ್ಥೆಯನ್ನು ಹೆಡಗೆವಾರರು ಪರಿಕಲ್ಪಿಸುವಾಗ ಅದಕ್ಕೆ ಭಾರತೀಯ ಪರಂಪರೆಯಲ್ಲಿ ಯಾವುದಾದರೂ ಮಾದರಿ, ಉದಾಹರಣೆ ಇತ್ತೇ?
ದತ್ತಾತ್ರೇಯ ಹೊಸಬಾಳೆ: ಸಂಘದ ಪ್ರಚಾರಕ ಪದ್ಧತಿ ಬಗ್ಗೆ ಅನೇಕ ಮೂಲಗಳನ್ನು ಚರ್ಚೆ ಮಾಡಲಾಗುತ್ತದೆ. ಆದರೆ ಡಾಕ್ಟರ್ಜಿ ಅವರು ಯಾವ ಮೂಲದಿಂದ ಇದನ್ನು ಕಂಡುಕೊಂಡರು ಎನ್ನುವುದು ನಿಖರವಾಗಿ ಗೊತ್ತಿಲ್ಲ. ನಮ್ಮ ಸಮಾಜದಲ್ಲಿ ದೇಶ, ಧರ್ಮ ಮತ್ತು ದೈವಕ್ಕೆ, ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಧ್ಯೇಯವೊಂದಕ್ಕೆ ದುಡಿಯುವ ಸಾಧು ಸಂತರ ಪರಂಪರೆ ಸಾವಿರಾರು ವರ್ಷಗಳಿಂದ ನಡೆದುಕೊಂಡುಬಂದಿದೆ. ನಿಸ್ವಾರ್ಥವಾಗಿ, ಸಾಧನೆಗಾಗಿ ತನ್ನ ಜೀವನವನ್ನು ಕೊಡುವ ಗುಣ ಈ ಮಣ್ಣಿನಲ್ಲೇ ಇದೆ. ಸ್ವಾತಂತ್ರ್ಯದ ಧ್ಯೇಯಕ್ಕಾಗಿ ಅನೇಕ ಯುವಕರು ಕ್ರಾಂತಿಕಾರಿಗಳಾಗಿ, ವೈಯಕ್ತಿಕ ಜೀವನವನ್ನು ಬದಿಗಿಟ್ಟು ಕೆಲಸ ಮಾಡಿದ್ದರು. ಡಾಕ್ಟರ್ಜಿಯವರು ಅಂಥ ವಾತಾವರಣದಲ್ಲಿ ತಯಾರಾದಂಥವರು.
ಮಹಾರಾಷ್ಟ್ರದಲ್ಲಿ ಸಮರ್ಥ ರಾಮದಾಸರು ‘ಮಹಂತ’ ಎನ್ನುವ ಕಲ್ಪನೆಯನ್ನು ನೀಡಿದ್ದರು. ಅದು ಪ್ರಚಾರಕ ಜೀವನಕ್ಕೆ ಬಹಳ ಹತ್ತಿರವಾಗಿ ಕಂಡುಬರುತ್ತದೆ. ಡಾಕ್ಟರ್ಜಿಯವರು ಇದನ್ನು ಸ್ಪಷ್ಟವಾಗಿ ಎಲ್ಲಿಯೂ ಹೇಳಿಲ್ಲವಾದರೂ ಅವರು ಮಹಾರಾಷ್ಟ್ರದಲ್ಲೇ ಸಂಘದ ಕೆಲಸವನ್ನು ಆರಂಭಿಸಿದ್ದರಿಂದ, ಸಮರ್ಥರ ಮಹಂತರ ಕಲ್ಪನೆಯೂ ಅವರ ಮನಸ್ಸಿನಲ್ಲಿ ಇದ್ದಿರಬೇಕು. ಡಾಕ್ಟರ್ಜಿ ಅವರು ಸಮಾಜದ ಕಾರ್ಯಕ್ಕಾಗಿ ಸ್ವತಃ ತಾವೇ ಉದಾಹರಣೆ ಆದರು. ಹಾಗೆ ನೋಡಿದರೆ ಡಾಕ್ಟರ್ಜಿ ಅವರೇ ಸಂಘದ ಪ್ರಥಮ ಪ್ರಚಾರಕರು.
ಭಾರತದ ಯಾವುದೇ ಮೂಲೆಯಲ್ಲಿ ಶಾಖೆ ಆರಂಭಿಸಬಹುದು ಹಾಗೂ ಎಲ್ಲಿಂದ ಬೇಕಾದರೂ ಪ್ರಚಾರಕರು ಹೊರಡಬಹುದು ಎಂಬ ವಿಶ್ವಾಸ ಡಾಕ್ಟರ್ಜಿ ಅವರಿಗಿತ್ತು. ಇಷ್ಟು ವೈವಿಧ್ಯಮಯ ದೇಶದಲ್ಲಿ ಎಲ್ಲ ಕಡೆಯೂ ಪ್ರಸ್ತುತವಾಗಬಲ್ಲ ಈ ಎರಡು ವಿಚಾರಗಳನ್ನು ಕಂಡುಕೊಂಡಿದ್ದು ಡಾಕ್ಟರ್ಜಿ ಅವರ ವೈಶಿಷ್ಟ್ಯತೆ. ಇಂತಹ ಆಲೋಚನೆ ಮಾಡುವವರು ಸಾಮಾನ್ಯ ವ್ಯಕ್ತಿ, ಚಿಂತಕ ಆಗಿರಲಿಕ್ಕಿಲ್ಲ. ಆದರೆ ಡಾಕ್ಟರ್ಜಿ ಅವರನ್ನು ಇನ್ನಷ್ಟು ತಿಳಿಯಲು ಅವರು ಬರೆದ ಸಾಲುಗಳು, ಭಾಷಣಗಳು ಲಭ್ಯವಿಲ್ಲ.
ವಿಕ್ರಮ: ಡಾಕ್ಟರ್ಜಿ ಅವರ ವ್ಯಕ್ತಿತ್ವವನ್ನು ಹೇಗೆ ವಿವರಿಸಬಹುದು?
ದತ್ತಾತ್ರೇಯ ಹೊಸಬಾಳೆ: ಅವರೊಬ್ಬ ದ್ರಷ್ಟಾರ. ಇಂಗ್ಲಿಷ್ನಲ್ಲಿ seeಡಿ ಎಂದು ಹೇಳುವಂತೆ. ಮುಂದೆ ಆಗುವಂಥದ್ದನ್ನು ನೋಡುವಂತಹ ಒಳಗಿನ ಕಣ್ಣು ಇದ್ದಂಥವರು. ಅವರ ಇನ್ನೊಂದು ವ್ಯಕ್ತಿತ್ವ, ಆತ್ಮವಿಲೋಪಿ. ತನ್ನ ಪ್ರಸಿದ್ಧಿಯನ್ನು ಎಂದೂ ಬಯಸಲಿಲ್ಲ. ಕ್ರಾಂತಿಕಾರಿಯಾಗಿದ್ದರಿಂದಲೋ ಏನೊ , ಮಾಡಿದ ಕೆಲಸವನ್ನು ಬರೆದಿಡುವ ಅಭ್ಯಾಸ ಅವರಿಗಿರಲಿಲ್ಲ. ನಿಮ್ಮ ಜೀವನಚರಿತ್ರೆಯನ್ನು ಬರೆಯುತ್ತೇನೆ ಎಂದು ಒಬ್ಬ ಲೇಖಕರು ಡಾಕ್ಟರ್ಜಿ ಅವರ ಬಳಿ ಹೇಳಿದಾಗ, ಖಡಾಖಂಡಿತವಾಗಿ ನಿರಾಕರಿಸಿದರು. ತಮ್ಮೆಲ್ಲ ಪ್ರಸಿದ್ಧಿ, ಸಂಪರ್ಕಗಳನ್ನೂ ಅವರು ಸಂಘದ ಕಾರ್ಯಕ್ಕೆ ಧಾರೆ ಎರೆದರು. ತಮ್ಮ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ೧೯೮೯ರಲ್ಲಿ ಡಾಕ್ಟರ್ಜಿ ಅವರ ಜನ್ಮಶತಮಾನೋತ್ಸವ ಆಚರಣೆ ವೇಳೆಯೇ ಸಮಾಜದ ಅನೇಕರು ಡಾಕ್ಟರ್ಜಿ ಅವರ ಭಾವಚಿತ್ರವನ್ನು ಮೊದಲಿಗೆ ನೋಡಿದ್ದರು. ಜನಕ್ಕೆ ಸಂಘ ತಿಳಿದಿತ್ತೇ ವಿನಃ ಸಂಸ್ಥಾಪಕರ ಕುರಿತು ತಿಳಿದಿರಲಿಲ್ಲ.
ವಿಕ್ರಮ: ದೇಶದಲ್ಲಿ ಆರಂಭವಾದ ಅನೇಕ ಸಂಘಟನೆಗಳು ಕಣ್ಮರೆಯಾಗಿವೆ, ಕೆಲವು ಉಳಿದುಕೊಂಡಿವೆಯಾದರೂ ಪ್ರಭಾವವನ್ನು ಕಳೆದುಕೊಂಡಿವೆ. ಆದರೆ ಆರ್ಎಸ್ಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು, ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಅಖಂಡವಾಗಿಯೂ ಇದೆ. ಹಾಗಾದರೆ ಸಂಘವನ್ನು ವಿಘಟಿಸುವ, ದುರ್ಬಲಗೊಳಿಸುವ ಆಂತರಿಕ ಅಥವಾ ಬಾಹ್ಯ ಪ್ರಯತ್ನಗಳು ನಡೆಯಲಿಲ್ಲವೇ? ಅಥವಾ ಅಂಥದ್ದನ್ನು ಎದುರಿಸಲಾಗಿದೆಯೇ? ಈ ವಿಚಾರವನ್ನು ಹೇಗೆ ನೋಡಬಹುದು?
ದತ್ತಾತ್ರೇಯ ಹೊಸಬಾಳೆ: ಆರಂಭದಲ್ಲಿ ಹೇಳಿದಂತೆ, ಸಂಘದ ಸ್ವಯಂಸೇವಕರು ಪರಸ್ಪರ ಆತ್ಮೀಯತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದರಿಂದ ಸಂಘದಲ್ಲಿ ಒಡಕು ಕಾಣಿಸಿಕೊಳ್ಳಲಿಲ್ಲ. ಸಂಘದಲ್ಲಿ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಲಾಗುತ್ತದೆ. ಒಮ್ಮೆ ತೀರ್ಮಾನ ಅಥವಾ ನಿರ್ಣಯ ಆದನಂತರ ಅದನ್ನು ಎಲ್ಲರೂ ಪಾಲಿಸುತ್ತಾರೆ. ವೈಯಕ್ತಿಕ ಸ್ವಾರ್ಥ, ಪ್ರತಿಷ್ಠೆಗೆ ಇಲ್ಲಿ ಆಸ್ಪದವಿಲ್ಲ. ಸಾಮೂಹಿಕ, ಸಂಘಟನೆಯ ಹಿತವೇ ಎಲ್ಲರ ಇಚ್ಛೆ. ಎರಡನೆಯ ವಿಚಾರವೆಂದರೆ ಪರಸ್ಪರರಲ್ಲಿ ವಿಶ್ವಾಸ. ಮೂರನೆಯದು, ಮತಭೇದ ಇರಬಹುದು ಆದರೆ ಮನಭೇದ ಇರಬಾರದು ಎನ್ನುವ ಮನಃಸ್ಥಿತಿ. ನಿತ್ಯಶಾಖೆ ಮತ್ತು ಕಾರ್ಯಪದ್ಧತಿ ಈ ವಿಚಾರಕ್ಕೆ ಬಹಳ ಪೋಷಕವಾಗಿದೆ. ಸಂಘವನ್ನು ಒಡೆಯಲು ಹೊರಗಿನಿಂದ ಪ್ರಯತ್ನಪಟ್ಟಿರಲೂಬಹುದು. ಆದರೆ ಈ ವಜ್ರಕೋಟೆಯನ್ನು ಭೇದಿಸಲು ಯಾರಿಂದಲೂ ಸಾಧ್ಯವಾಗಿಲ್ಲ.
ವಿಕ್ರಮ: ಜಾತಿ ಎನ್ನುವುದು ಇವತ್ತಿಗೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವಾಸ್ತವ. ಇಷ್ಟು ವರ್ಷ ಸಮಾಜದ ಜತೆಗೇ ಕೆಲಸ ಮಾಡುತ್ತಿರುವ ಸಂಘಕ್ಕೆ, ಸಮಾಜದಲ್ಲಿರುವ ಜಾತೀಯ ವಿಷಮತೆ, ಭಿನ್ನತೆ ಬಾಧಿಸಲಿಲ್ಲವೇ? ಈ ವಿಚಾರದಿಂದ ಸಂಘವು ದೂರವಿರುವುದು ಹೇಗೆ?
ದತ್ತಾತ್ರೇಯ ಹೊಸಬಾಳೆ: ಸಂಘದಲ್ಲಿ ಎಲ್ಲ ಸಂಪ್ರದಾಯ, ಪಂಥ, ಜಾತಿಯವರು ಇದ್ದಾರೆ. ಆದರೆ ಒಂದು ಜಾತಿ, ಒಂದು ಸಂಪ್ರದಾಯ ಅಥವಾ ಧಾರ್ಮಿಕ ಆಚರಣೆಯ ಪದ್ಧತಿಯನ್ನು ಸಂಘದಲ್ಲಿ ತರಲಿಲ್ಲ. ಶಾಖೆಗೆ ಬೇಕಾದ ಕನಿಷ್ಟತಮ ಪದ್ಧತಿಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ. ಸಂಘದಲ್ಲಿ ಜಾತಿಯನ್ನು ಚರ್ಚೆ ಮಾಡುವುದಿಲ್ಲ. ನಾವೆಲ್ಲರೂ ಹಿಂದೂ ಎನ್ನುವುದೇ ಸಂಘದಲ್ಲಿ ಮೊದಲ ಪಾಠ. ಜಾತಿ ಎನ್ನುವ ರೇಖೆಯನ್ನು ಚಿಕ್ಕದು ಮಾಡುವುದು ಹೇಗೆ ಎಂದರೆ, ಹಿಂದೂ ಎನ್ನುವ ದೊಡ್ಡ ರೇಖೆ ಎಳೆಯುವುದರ ಮೂಲಕ. ಆದ್ದರಿಂದ ಜಾತಿ ಎನ್ನುವುದಕ್ಕೆ ಇಲ್ಲಿ ಯಾವುದೇ ಸ್ಥಾನ ಸಿಗಲಿಲ್ಲ. ಸಂಘದ ಕಾರ್ಯಕರ್ತರು ಜಾತಿ ಸಂಘಟನೆಗಳಲ್ಲಿ ಸಕ್ರಿಯರಾಗಿರಬಾರದು ಎನ್ನುವುದು ಒಂದು ಅನುಶಾಸನ. ಸಂಘದ ಸ್ವಯಂಸೇವಕರು ಸಾಮಾನ್ಯವಾಗಿ ಯಾವುದೇ ಒಂದು ಜಾತಿ ಸಂಘಟನೆಯ ಪದಾಧಿಕಾರಿಗಳಾಗಿಲ್ಲ.
ಜಾತಿ ಹೋಗಬೇಕು ಎಂದು ಹೋರಾಟ ಮಾಡಿದರೆ ಜಾತಿ ಇನ್ನಷ್ಟು ಗಟ್ಟಿಯಾಗುತ್ತದೆ. ೧೯೭೪ರಲ್ಲಿ ತೃತೀಯ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು ನೀಡಿದ ವಸಂತ ಉಪನ್ಯಾಸ ಮಾಲಿಕೆಯಲ್ಲಿ, ‘ಜಾತಿ ಎನ್ನುವುದು ಸಮಾಜದಿಂದ ಅಳಿಸಿಹೋಗಲಿ. ಅದು ಇನ್ನಷ್ಟು ಸರಾಗವಾಗಿ ಹೋಗಲಿ ಎನ್ನುವುದನ್ನು ಬಿಟ್ಟರೆ, ಅಯ್ಯೋ ಜಾತಿ ಹೋಗುತ್ತಿದೆಯಲ್ಲ ಎಂದು ಪರಿತಪಿಸುವ ಅಗತ್ಯವಿಲ್ಲ’ ಎಂದಿದ್ದರು. ವರ್ಣದ ರೀತಿಯಲ್ಲಿ ಜಾತಿ ಎನ್ನುವುದು ಪರಸ್ಪರ ಇಂಟರ್ಚೇಂಜ್ ಆಗುವುದಿಲ್ಲ. ಹಾಗಾಗಿ ಅಂಬೇಡ್ಕರರು ಇದನ್ನು, ‘ಏಣಿ ಇಲ್ಲದಿರುವ, ಅನೇಕ ಮಹಲುಗಳ ಕಟ್ಟಡ’ ಎಂದು ಹೇಳಿದರು. ಸಂಘದ ವಲಯದಲ್ಲಿ ಸಾಕಷ್ಟು ಅಂತರ್ಜಾತಿ ವಿವಾಹಗಳು ನಡೆಯುತ್ತವೆ. ಆದರೆ ಇದನ್ನು ಪ್ರಚಾರದ ಸರಕನ್ನಾಗಿ ಸಂಘ ಎಂದೂ ಮಾಡಿಲ್ಲ. ತಾವೆಲ್ಲರೂ ಹಿಂದುಗಳು ಎನ್ನುವ ಭಾವನೆ ಸ್ವಯಂಸೇವಕರ ಮನಸ್ಸಿನಲ್ಲಿ ಇರುವುದರಿಂದ ಜಾತೀಯತೆಯಿಂದ ಹೊರಗಿದ್ದಾರೆ.
ವಿಕ್ರಮ: ಸಂಘದಲ್ಲಿ ಜಾತಿಯನ್ನು ಗೌಣವಾಗಿ ನೋಡುವುದರ ಪ್ರಭಾವ ಸಮಾಜದ ಮೇಲೆ ಆಗಿದೆಯೇ? ಅದನ್ನು ಮಾಪನ ಮಾಡಲು ಸಾಧ್ಯವಾಗಿದೆಯೇ? ಇನ್ನೊಂದು ವಿಚಾರವೆಂದರೆ, ಭಾರತದಲ್ಲಿ ವೈವಿಧ್ಯತೆ ಎನ್ನುವುದು ಸದ್ಯದ ಮಟ್ಟಿಗಂತೂ ಜಾತಿಯ ಆಧಾರದಲ್ಲೇ ಉಳಿದುಕೊಂಡಿದೆ, ಜಾತಿ ಹೋದರೆ ವೈವಿಧ್ಯತೆಯೂ ಹೋಗುತ್ತದೆ ಎನ್ನುವ ಮಾತುಗಳು ಇವೆ. ಇದನ್ನು ಹೇಗೆ ನೋಡಬಹುದು?
ದತ್ತಾತ್ರೇಯ ಹೊಸಬಾಳೆ: ವೈವಿಧ್ಯತೆಯನ್ನು ಇರಿಸಿಕೊಳ್ಳಬೇಕು ಎಂಬುದಕ್ಕಾಗಿ ಜಾತಿಯನ್ನು ಉಳಿಸಿಕೊಳ್ಳಬೇಕು ಎಂಬುವ ತರ್ಕ ಸಮಾಜದ ಒಗ್ಗಟ್ಟಿಗೆ ಸರಿಯಾದುದಲ್ಲ. ಭಾರತದ ಭೌಗೋಳಿಕ, ಪ್ರಾಕೃತಿಕ ವಿಚಾರಗಳ ಕಾರಣದಿಂದಾಗಿ ಸಮಾಜದಲ್ಲಿ ವೈವಿಧ್ಯತೆ ಇದ್ದೇ ಇರುತ್ತದೆ. ವೈವಿಧ್ಯತೆಗಾಗಿ ಜಾತಿಯೇ ಇರಬೇಕು ಎಂದೇನಿಲ್ಲ. ಜಾತಿ ಎನ್ನುವುದು ಮನೆಯಮಟ್ಟಿಗೆ ಆಚರಣೆಗೆ ಸೀಮಿತವಾಗಿದ್ದರೆ ಸಮಾಜಕ್ಕೆ ತೊಂದರೆ ಇಲ್ಲ. ಆದರೆ ಜಾತಿ ಆಧಾರದಲ್ಲಿ ಮೇಲು-ಕೀಳು ಎನ್ನುವುದು, ಜಾತಿ ಆಧಾರದಲ್ಲಿ ಅಧಿಕಾರದ ಲೆಕ್ಕಾಚಾರ ಸೇರಿಕೊಳ್ಳುವುದು ಸಮಾಜಕ್ಕೆ ತೊಂದರೆ.
ಹುಟ್ಟಿನ ಆಧಾರದ ಮೇಲೆಯೇ (ಜಾತಿ) ಸಮ್ಮಾನ, ಅವಕಾಶ, ಸಮಾನತೆಗಳಿಂದ ವಂಚಿತರಾಗುವ ಸಮೂಹಕ್ಕೆ ಈ ಕೊರತೆ ದೂರವಾಗಲೂ ಸಮಾಜ ಹಾಗೂ ಸಂವಿಧಾನದ ಮೂಲಕ ವ್ಯವಸ್ಥೆಯೂ ಆಗಬೇಕು ಎನ್ನುವುದನ್ನು ಸಂಘವು ಸದಾ ಆಗ್ರಹಪಡಿಸಿದೆ.
ಸಂಘದಲ್ಲಿ ಜಾತೀಯತೆ ಮಾಡದೆ ಇರುವುದರ ಪ್ರಭಾವ ಸಮಾಜದಲ್ಲಿ ಆಗಿದೆಯೇ ಎಂದರೆ, ಆಗಿದೆ ಎಂದು ಹೇಳಬಹುದು. ಕೇವಲ ಸಂಘದ ಕಾರಣಕ್ಕಾಗಿ ಅಲ್ಲದೇ ಇದ್ದರೂ, ಅನೇಕರು ಇದಕ್ಕಾಗಿ ಪ್ರಯತ್ನಪಟ್ಟಿದ್ದಾರೆ. ಕಾಲವೂ ಬದಲಾಗುತ್ತಿರುವುದರಿಂದ ಜಾತಿಗಳು ನಶಿಸಿಹೋಗುತ್ತಿವೆ. ಇವತ್ತು ಐಎಎಸ್ ಅಧಿಕಾರಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು, ಐಟಿ ಕಂಪನಿ ಉದ್ಯೋಗಿಗಳು ತಮ್ಮ ಉದ್ಯೋಗ, ಅಭಿರುಚಿಗೆ ತಕ್ಕಂತೆ ಮದುವೆ ಆಗುತ್ತಿದ್ದಾರೆ. ಅದೇ ಒಂದು ಜಾತಿಯಾಗಿ ಮಾರ್ಪಡುತ್ತಿದೆ. ಇಂತಹ ಸಂಖ್ಯೆ ಹೆಚ್ಚಾಗುತ್ತಿದೆ.
ವಿಕ್ರಮ: ಜಾತಿ ವಿನಾಶದ ಕುರಿತು ಪದೇಪದೇ ಹೇಳುವಂತಹ ಅನೇಕರು ಇಂದು ಪ್ರಬಲ ಜಾತಿವಾದಿಗಳಾಗಿ ರೂಪುಗೊಂಡುಬಿಟ್ಟಿದ್ದಾರೆ…
ದತ್ತಾತ್ರೇಯ ಹೊಸಬಾಳೆ: ಜಾತಿಯನ್ನು ರಾಜಕೀಯ ಬಲಪರೀಕ್ಷೆಯ ಉಪಕರಣವಾಗಿ ಬಳಸಿಕೊಳ್ಳಲಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾದಿಯಲ್ಲಿ ಜೀವಿಸುತ್ತಿದ್ದೇವೆ ಎನ್ನುವಂತಹ ಅನೇಕರು ಜಾತಿ ಹೆಸರಲ್ಲಿ ಚುನಾವಣೆ ನಡೆಸುತ್ತಾರೆ, ಜಾತಿ ಹೆಸರಲ್ಲಿ ಪಕ್ಷ ಕಟ್ಟಿದ್ದಾರೆ. ‘ಇದು ಒಂದು ರಾಷ್ಟ್ರ ನಾವೆಲ್ಲರೂ ಒಂದು’ ಎಂಬ ಭಾವನೆಯನ್ನು ಆಚರಣೆಗೆ ತರದೆ ಸಮಸ್ಯೆ ಬಗೆಹರಿಯುವುದಿಲ್ಲ.
ವಿಕ್ರಮ: ಸಂಘ ನೂರನೇ ವರ್ಷವನ್ನು ಆಚರಿಸಬೇಕು ಎಂದು ಅದರ ಸಂಸ್ಥಾಪಕರು ಇಚ್ಛಿಸಿರಲಿಲ್ಲ. ಹೆಡಗೆವಾರರ ಆಲೋಚನೆಯ ಹಿನ್ನೆಲೆಯಲ್ಲಿ ಈ ನೂರು ವರ್ಷವನ್ನು ಹೇಗೆ ನೋಡಬೇಕು? ಇದು ಸಂಭ್ರಮದ ಸಮಯವೋ? ತಾನಂದುಕೊಂಡಷ್ಟು ವೇಗವಾಗಿ ಕಾರ್ಯವನ್ನು ಮಾಡಲಾಗಲಿಲ್ಲವಲ್ಲ ಎನ್ನುವ ರೀತಿಯಲ್ಲೋ?
ದತ್ತಾತ್ರೇಯ ಹೊಸಬಾಳೆ: ನಿಜ. ಡಾ. ಹೆಡಗೆವಾರರು “ಇದೇ ದೇಹದಲ್ಲಿ, ಇದೇ ಕಣ್ಣಿನಲ್ಲಿ ನಾನು ಸಮಾಜ ಸಂಘಟಿತವಾಗುವುದನ್ನು ನೋಡಬೇಕು” ಎಂಬ ಬಯಕೆಯನ್ನು ಇಟ್ಟುಕೊಂಡಿದ್ದರು. ಇದೇ ಕಾರಣಕ್ಕೆ ಸಂಘ ತನ್ನ ಇಪ್ಪತ್ತೈದು, ಐವತ್ತು, ಎಪ್ಪತ್ತೈದು… ವರ್ಷಗಳ ಆಚರಣೆಯನ್ನು ಮಾಡಲಿಲ್ಲ. “ಇದು ನಿಜಕ್ಕೂ ಸಂಭ್ರಮದ ಸಂದರ್ಭವೋ ಅಥವಾ ನಾವಿನ್ನೂ ಕೆಲಸವನ್ನು ಪೂರ್ಣ ಮಾಡಲಾಗಿಲ್ಲವಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕೊ” ಎಂದು ಪೂಜ್ಯ ಸರಸಂಘಚಾಲಕ ಡಾ. ಮೋಹನ ಭಾಗವತ್ ಅವರು ಒಂದು ಬೈಠಕ್ನಲ್ಲಿ ವಿಚಾರ ಪ್ರಸ್ತಾಪಿಸಿದ್ದರು. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೆ. ಆದರೆ ಆತ್ಮನಿಂದನೆಯೂ ಬೇಕಾಗಿಲ್ಲ. ಸಂಘದ ಸ್ವಯಂಸೇವಕರ ತಪಸ್ಸು, ತ್ಯಾಗ, ಬಲಿದಾನ, ಪರಿಶ್ರಮ, ಸಮಾಜದ ಸಹಯೋಗದಿಂದ ಹಿಂದೂ ಸಮಾಜದಲ್ಲಿ ಆತ್ಮವಿಶ್ವಾಸವನ್ನು ಸಂಘ ಮೂಡಿಸಿದೆ. ಹಿಂದೂ ಜಾಗೃತಿ ಮತ್ತು ಸಂಘಟಿತ ಶಕ್ತಿಯ ಸತ್ಪರಿಣಾಮಗಳೂ ಗೋಚರಿಸುತ್ತಿವೆ. ನಡೆದು ಬಂದ ಹಾದಿಯನ್ನು ನೋಡಿದಾಗ ಹೆಮ್ಮೆ ಇದೆ ಮತ್ತು ನಾವು ಮಾಡಬಹುದಾದಂತಹ ಕೆಲಸ ಮಾಡಿದ್ದೇವೆ ಎನ್ನಿಸುತ್ತದೆ. ಆದರೆ ಪೂರ್ಣವಾಗಿಲ್ಲ ಎನ್ನುವ ಕೊರಗು, ಕೊರತೆಯೂ ಇದೆ. ಆದ್ದರಿಂದ ಶತಮಾನವನ್ನು ಸಂಭ್ರಮ, ಉತ್ಸವಗಳನ್ನಾಗಿ ಮಾಡುವ ಯೋಚನೆ ಮಾಡಿಲ್ಲ. ಕಾರ್ಯವನ್ನು ಇನ್ನಷ್ಟು ಪ್ರಭಾವಿಯಾಗಿ, ಗುಣಾತ್ಮಕವಾಗಿ ಸುದೃಢಗೊಳಿಸುವ ಸಂಕಲ್ಪ-ಯೋಜನೆಗಳಿವೆ.
ವಿಕ್ರಮ: ಸಂಘ ನೂರು ವರ್ಷಗಳಲ್ಲಿ ತನ್ನ ಗುರಿಯನ್ನು ಸಾಧಿಸದೆ ಇರಲು ಪ್ರಮುಖವಾಗಿ ಎದುರಾದ ಅಡೆತಡೆ ಯಾವುದು? ಸಮಾಜದ ಪರಿಸ್ಥಿತಿಯೋ? ರಾಜಕೀಯ ಕೇಂದ್ರಿತ ಶಕ್ತಿಗಳೋ? ವಿದೇಶಿ ಶಕ್ತಿಗಳೋ? ಯಾವುದು?
ದತ್ತಾತ್ರೇಯ ಹೊಸಬಾಳೆ: ಎಲ್ಲವೂ ಸೇರಿದಂತಹ ಒಟ್ಟು ಕಾರಣ. ವಿದೇಶಿ ಶಕ್ತಿಗಳು ಎಂದು ನಾನು ಹೇಳುವುದಿಲ್ಲ. ಏಕೆಂದರೆ ವಿದೇಶಿಯರ ಕಾರಣಕ್ಕೆ ನಮ್ಮ ಸಮಾಜ ಹೀಗಾಯಿತು ಎನ್ನುವುದನ್ನು ಸ್ವತಃ ಡಾಕ್ಟರ್ಜಿ ಅವರೂ ಒಪ್ಪಿರಲಿಲ್ಲ. ನಮ್ಮಲ್ಲಿ ಕೊರತೆಯಿದ್ದದ್ದರಿಂದಲೇ ವಿದೇಶಿಯರು ಇಲ್ಲಿ ಬಂದರು. ಜಾತೀಯತೆ, ವ್ಯಕ್ತಿಯ ಅಹಂಕಾರ, ಭಾಷೆ- ಪ್ರಾಂತ ಮುಂತಾದವುಗಳ ವಿಚಾರದಲ್ಲಿ ನಮ್ಮ ಸಮಾಜದಲ್ಲಿ ನೂರಾರು ವರ್ಷಗಳಿಂದ ಸಮಸ್ಯೆಗಳು ಇರುವುದರಿಂದ ಸಮಾಜದಲ್ಲಿ ಒಡಕು ಇದೆ. ಸ್ವಾಭಿಮಾನಶೂನ್ಯತೆ, ಸ್ವಾರ್ಥ, ಒಗ್ಗಟ್ಟಿನ ಕೊರತೆ… ಇವೇ ತೊಡಕುಗಳು.
ಎರಡನೆಯ ವಿಚಾರ ಎಂದರೆ, ಸ್ವಾತಂತ್ರ್ಯ ಬಂದ ನಂತರದಲ್ಲಿ ರಾಜಕೀಯ ಚಲನವಲನಗಳು ಸಮಾಜವನ್ನು ಒಗ್ಗೂಡಿಸುವುದಕ್ಕಿಂತ ಒಡಕು ಮೂಡಿಸುವಲ್ಲಿ ನಿರತವಾಗಿದ್ದು ದೌರ್ಭಾಗ್ಯ. ಸಮಾಜದಲ್ಲಿರುವ ಒಡಕನ್ನು ಹೆಚ್ಚಿಸುವಂತಹ ಕ್ಷುದ್ರ, ಸ್ವಾರ್ಥ ರಾಜಕಾರಣವೂ ಸಂಘದ ಕಾರ್ಯಕ್ಕೆ ದೊಡ್ಡ ಸವಾಲಾಗಿದೆ.ಇಷ್ಟೆಲ್ಲದರ ನಂತರವೂ ಜನರಲ್ಲಿ ಭಾರತದ ಭಕ್ತಿ ಪ್ರಖರವಾಗಿಯೇ ಇದೆ. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಯಾರಾದರೂ ಗೆದ್ದರೆ, ಗಡಿಯಲ್ಲಿ ಯೋಧ ಹುತಾತ್ಮನಾದರೆ ಅವನು ಯಾವ ರಾಜ್ಯ, ಜಾತಿ, ಭಾಷೆಯವನು ಎಂದು ನೋಡದೆ ಇಡೀ ದೇಶದ ಜನ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಸೇವೆ ಹಾಗೂ ಸಂಸ್ಕೃತಿಯ ಭಾವನೆಗಳೂ ಹೆಚ್ಚುತ್ತಿವೆ. ಈ ಭಾವನೆ ಕೆಲವು ಸಂದರ್ಭಗಳಿಗಷ್ಟೇ ಸೀಮಿತ ಆಗಬಾರದು, ಸ್ಥಾಯಿ ಆಗಬೇಕು, ಅದೊಂದು ಜೀವನದೃಷ್ಟಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ.

ವಿಕ್ರಮ: ನೂರು ವರ್ಷದ ಹಿನ್ನೆಲೆಯಲ್ಲಿ ಸಂಘ ಎರಡು ಗುರಿಗಳನ್ನು ಇಟ್ಟುಕೊಂಡಿದೆ. ಶಾಖೆಗಳನ್ನು ಒಂದು ಲಕ್ಷಕ್ಕೆ ಹೆಚ್ಚಿಸುವುದು ಹಾಗೂ ಪಂಚ ಪರಿವರ್ತನೆಯ ವಿಚಾರಗಳು. ಈ ವಿಚಾರಗಳು ಸಾಮಾನ್ಯವಾಗಿ ಸಂಘ ಬಳಸುವ ‘ಹಿಂದುತ್ವ’ದ ಪರಿಭಾಷೆಗಳಂತೆ ಕಾಣಿಸುತ್ತಿಲ್ಲ ಅಥವಾ ಧ್ವನಿಸುತ್ತಿಲ್ಲ. ಇದು ಕೇವಲ ಶಬ್ದಗಳಲ್ಲಿ ಆಗಿರುವ ಬದಲಾವಣೆಯೇ ಅಥವಾ ವಿಷಯಗಳನ್ನು ನೋಡುವ ರೀತಿಯಲ್ಲಿ ಆಗಿರುವ ಬದಲಾವಣೆಯೇ?
ದತ್ತಾತ್ರೇಯ ಹೊಸಬಾಳೆ: ಸಂಘದ ವೈಚಾರಿಕ ಮೂಲದ ಆಧಾರದಲ್ಲಿಯೇ ಇವೆಲ್ಲವೂ ಇವೆ. ‘ಪ್ರೋಗ್ರೆಸ್ಸಿವ್ ಅನ್ಫೋಲ್ಡ್ಮೆಂಟ್’ ಎಂಬ ಮಾತಿನ ರೀತಿಯಲ್ಲಿ, ನಡಿಗೆ ಮುಂದೆ ಸಾಗಿದಂತೆ ಆಯಾಮಗಳು ತೆರೆಯುತ್ತಾ ಹೋಗುತ್ತವೆ. ಹಿಂದುತ್ವ ಎನ್ನುವುದು ಯಾವುದೋ ಒಂದು ಆಧ್ಯಾತ್ಮದ ಉಪದೇಶವಲ್ಲ, ಜೀವನಕ್ಕೆ ಸಂಬಂಧ ಪಟ್ಟದ್ದು. ಹಿಂದುತ್ವ ಎಂದರೆ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕುವುದು, ಗೋರಕ್ಷಣೆ, ಅಯೋಧ್ಯೆ ರಾಮಮಂದಿರ ನಿರ್ಮಾಣ ಮಾತ್ರ ಎಂಬಂತಾಗಿದೆ. ಪಂಚಪರಿವರ್ತನೆಯಲ್ಲಿ ಇರುವುದೆಲ್ಲವೂ ಹಿಂದುತ್ವವೆ. ಜೀವನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳೂ ಇದರಲ್ಲಿವೆ. ಯುಗಾನುಕೂಲ ಪರಿವರ್ತನೆ ಹಿಂದೂ ಸಮಾಜದ ಸ್ವಭಾವ. ಮೂಲವನ್ನು ಬಿಡದೆಯೇ ಸಮಾಜಕ್ಕೆ, ಧರ್ಮವನ್ನು ಇವತ್ತಿಗೆ ತಕ್ಕಂತೆ ಅಭಿವ್ಯಕ್ತಗೊಳಿಸಬೇಕು ಎನ್ನುವುದಕ್ಕಾಗಿತಾನೆ ನಮ್ಮಲ್ಲಿ ಸ್ಮೃತಿಗಳು ಬಂದಿದ್ದು? ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ… ಎಂದು ಡಿ.ವಿ. ಗುಂಡಪ್ಪನವರು ಹೇಳಿದಂತೆ ಜೀವಂತವಾಗಿರುವ ಸಮಾಜದಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗಲೇಬೇಕು. ಇದನ್ನು ಸಂಘ ಮೊದಲಿನಿಂದಲೂ ಹೇಳಿಕೊಂಡುಬಂದಿದೆ. ಪಂಚಪರಿವರ್ತನೆ ಈ ದೃಷ್ಟಿಯಿಂದ ರಾಷ್ಟ್ರಧರ್ಮ, ಯುಗಧರ್ಮ.
ವಿಕ್ರಮ: ಸಂಘ ಅನೇಕ ಸಂದರ್ಭಗಳಲ್ಲಿ ಅಖಂಡ ಭಾರತದ ಕುರಿತು ಬಲವಾಗಿ ಪ್ರತಿಪಾದನೆ ಮಾಡುತ್ತಿರುವುದು ಕಾಣಿಸುತ್ತಿತ್ತು. ಅಖಂಡ ಭಾರತ ಸಂಕಲ್ಪ ದಿನಗಳ ಆಚರಣೆ ಈಗಲೂ ಆಗುತ್ತಿವೆ ಸರಿ. ಆದರೆ ಸಂಘದ ಮುಖ್ಯಸ್ಥರ ಹಾಗೂ ಪ್ರಮುಖರ ಭಾಷಣಗಳಲ್ಲಿ ಅಖಂಡ ಭಾರತದ ವಿಚಾರ ಇತ್ತಿಚಿನ ದಿನಗಳಲ್ಲಿ ಪ್ರಸ್ತಾಪ ಆಗಿದ್ದು ಕಂಡಿಲ್ಲ. ಇದು ಸಂಘದ ನಿಲುವಿನಲ್ಲಿ ಆದ ಬದಲಾವಣೆಯೇ? ಅಥವಾ ಅಖಂಡ ಭಾರತದ ಕುರಿತು ಸಂಘದ ಇಂದಿನ ನಿಲುವು ಏನಾಗಿದೆ?
ದತ್ತಾತ್ರೇಯ ಹೊಸಬಾಳೆ: ಭಾರತ ಅಖಂಡವಾಗಿರಬೇಕು ಎನ್ನುವುದು ಕೇವಲ ಭೌಗೋಳಿಕ ಅಖಂಡತೆ ಮಾತ್ರವಲ್ಲ. ಈ ದೇಶದಲ್ಲಿರುವ ಎಲ್ಲರ ಪೂಜಾಪಾಠ ಏನೇ ಇರಲಿ, ನಾವೆಲ್ಲ ಒಂದು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಅಖಂಡ ಭಾರತ ಮಾಡುವುದಷ್ಟೇ ಅಲ್ಲ, ಈಗ ಯಾವ ಭಾರತ ಇದೆಯೋ, ಯಾವ ಸಮಾಜ ಇದೆಯೋ ಅದು ಅಖಂಡವಾಗಿರಬೇಕು ಎನ್ನುವುದೂ ಮುಖ್ಯ.
ಇನ್ನು, ಭೌಗೋಳಿಕ ಅಖಂಡತ್ವ ಆಗಬೇಕು ಎನ್ನುವುದರಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಇಂದಿಗೂ ಅಖಂಡ ಭಾರತ ಸಂಕಲ್ಪ ದಿನ ನಡೆಯುತ್ತಲೇ ಇದೆ. ಆದರೆ ಜಗತ್ತಿನ ಜಿಯೋಪಾಲಿಟಿಕ್ಸ್ನಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿದೆ ಎನ್ನುವುದನ್ನು ನೋಡಬೇಕು. ಭಾರತದೊಳಗಿನ ಹಿಂದೂ ಸಮಾಜ ಸಶಕ್ತ, ಸಂಘಟಿತ ಆಗದೆಯೇ ಅಖಂಡ ಭಾರತದ ಕನಸನ್ನು ಹೇಳುತ್ತಿದ್ದರೆ ಅದು ಫಲಿಸುವುದು ಸಾಧ್ಯವಿಲ್ಲ. ಭಾರತ, ಹಿಂದೂ ಸಮಾಜ ಸಂಘಟಿತವಾಗಿ ತನ್ನ ಶಕ್ತಿಯನ್ನು ತೋರಿಸುವ ಸ್ಥಿತಿ ಬಂದಾಗ ಜಗತ್ತು ಅದನ್ನು ಗುರುತಿಸುತ್ತದೆ. ಅಖಂಡ ಭಾರತ ಎನ್ನುವುದು ನಮ್ಮ ಜೀವನದ ಕನಸು, ವ್ರತ. ಅದರಲ್ಲಿ ಯಾವ ಸಡಿಲತೆಯೂ ಇಲ್ಲ. ನಾಳೆ ಭೌಗೋಳಿಕ ವಿಭಜಿತ ಪ್ರದೇಶ ಸೇರಿದಾಗ ಆ ಸ್ಥಿತಿಯನ್ನು ಜೀರ್ಣ ಮಾಡಿಕೊಳ್ಳಲು ಭಾರತದ ಸಮಾಜ ತಯಾರಾಗಿದೆಯೇ? ತಯಾರಿಲ್ಲದೆಯೇ ಕೇವಲ ಒಣಕನಸನ್ನು ಹೇಳುವುದರಿಂದ ಲಾಭವಿಲ್ಲ.
ವಿಕ್ರಮ: ಸಂಘದ ಜತೆಗಿನ ಸಂಘಟನೆಗಳನ್ನು ಸಂಘ ಪರಿವಾರ ಎಂದು ಹೇಳಲಾಗುತ್ತದೆ. ಎಲ್ಲ ಸಂಘಟನೆಗಳೂ ಸ್ಥಾಪನೆಯಾದ ಉದ್ದೇಶಕ್ಕೆ ಅನುಗುಣವಾಗಿ ಸಮಾಜದಲ್ಲಿ ಪರಿಣಾಮ ಉಂಟುಮಾಡುತ್ತಿವೆಯೇ? ಅದರ ಮೌಲ್ಯಮಾಪನ ಮಾಡುವಂತಹ ವ್ಯವಸ್ಥೆ ಇದೆಯೇ?
ದತ್ತಾತ್ರೇಯ ಹೊಸಬಾಳೆ: ಈ ಸಂಘಟನೆಗಳನ್ನು ಸಂಘ ತನ್ನ ಯೋಜನೆಯಂತೆ ಮಾಡಿಲ್ಲ. ಸ್ವಯಂಸೇವಕರು ತಮ್ಮ ಸಾಮಾಜಿಕ ಜವಾಬ್ದಾರಿ, ಕರ್ತವ್ಯವವನ್ನು ನಿರ್ವಹಿಸಲು ತಂತಮ್ಮ ಕಾರ್ಯಕ್ಷೇತ್ರಗಳಲ್ಲಿ ಸಂಘದ ವಿಚಾರದ, ಸಂಸ್ಕಾರದ ಅನುಭವದ ಆಧಾರದಲ್ಲಿ ಸಂಘಟನೆಗಳನ್ನು ಕಟ್ಟಿದ್ದಾರೆ. ಈ ಸಂಘಟನೆಗಳ ಮೌಲ್ಯಮಾಪನವನ್ನು ಸಂಘ ಮಾಡುವುದಿಲ್ಲ. ನೀವು ನಡೆಸುತ್ತಿರುವ ಸಂಘಟನೆಯಲ್ಲಿ ‘ಸಂಘ ಸಂಸ್ಕಾರ’, ‘ಸಂಘತ್ವ’ ಎಷ್ಟಿದೆ ಎಂದು ನೋಡಿ ಎನ್ನುವುದಷ್ಟೇ ಸಂಘದ ಮೌಲ್ಯಮಾಪನದ ಆಧಾರ. ಕಳೆದ ೫೦ ವರ್ಷಗಳಲ್ಲಿ ಸ್ವಯಂಸೇವಕರು ಆರಂಭಿಸಿರುವ ಬಹುತೇಕ ಸಂಘಟನೆಗಳು ಶಕ್ತಿ, ವ್ಯಾಪಕತೆ ಹಾಗೂ ಪರಿಣಾಮದ ಆಧಾರದಲ್ಲಿ ಆಯಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿವೆ. ಎಲ್ಲವೂ ತನ್ನ ಗುರಿಯನ್ನು ಸಾಧಿಸಿಬಿಟ್ಟಿದೆಯೋ ಎಂದರೆ ಹೇಳುವುದು ಕಷ್ಟ. ಇದಕ್ಕೆ ಅನೇಕ ಸವಾಲುಗಳಿವೆ. ಆದರೆ ಆ ಸಂಘಟನೆಗಳು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆಯೋ ಆ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ಹಲವು ಉತ್ತಮ ಪರಿಪಾಠಗಳನ್ನೂ ಸ್ಥಾಪಿಸಿವೆ. ರಾಷ್ಟ್ರೀಯತೆಯ ಧ್ವಜವನ್ನು ಹಾರಿಸಿವೆ. ಸ್ವಯಂಸೇವಕರು ಯಾವುದೇ ಕಾರ್ಯವನ್ನು ಮಾಡಿದರೂ ಪರಿಣಾಮಕಾರಿ ಆಗಬೇಕು. ಅದರ ಮೌಲ್ಯಾಂಕನವನ್ನು ಆಯಾ ಸಂಘಟನೆಯವರು ಮಾಡಬೇಕು, ಮಾಡುತ್ತಿದ್ದಾರೆ.
ವಿಕ್ರಮ: ಇಂದು ಆಂಗ್ಲ ಮಾಧ್ಯಮ ಎನ್ನುವುದು ಸಾಮಾನ್ಯವಾಗಿದೆ. ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕನ್ನು ಪೋಷಕರೇ ಹೊಂದಿದ್ದಾರೆ, ಸರ್ಕಾರಕ್ಕೆ ಆ ಹಕ್ಕಿಲ್ಲ ಎಂದು ಸ್ವತಃ ಸುಪ್ರೀಂಕೋರ್ಟ್ ಹೇಳಿದೆ. ಪೋಷಕರು ಇಂಗ್ಲಿಷ್ ಹಿಂದೆ ಹೋಗುತ್ತಿದ್ದಾರೆ. ಸಂಘದ ಸ್ವಯಂಸೇವಕರೂ ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಸೇರಿಸುತ್ತಿದ್ದಾರೆ. ಸಂಘದ ಪ್ರೇರಣೆಯಿಂದ ನಡೆಯುತ್ತಿರುವ ಅನೇಕ ಸಂಘ ಸಂಸ್ಥೆಗಳೂ ಆಂಗ್ಲ ಮಾಧ್ಯಮ ಶಾಲೆಗಳನ್ನೇ ಆರಂಭಿಸುತ್ತಿವೆ. ಮಾತೃಭಾಷೆಯಲ್ಲಿ ಶಿಕ್ಷಣ ಆಗಬೇಕೆಂಬ ಎಬಿಪಿಎಸ್ ನಿರ್ಣಯವೂ ಇದೆ. ಇದೆಲ್ಲದರ ಹಿನ್ನೆಲೆಯಲ್ಲಿ ಭಾಷೆ ವಿಷಯದಲ್ಲಿ ಸ್ವತ್ವದ ಭೂಮಿಕೆಯನ್ನು ಹೇಗೆ ನೋಡುವುದು?
ದತ್ತಾತ್ರೇಯ ಹೊಸಬಾಳೆ: ಯಾವುದೇ ವ್ಯಕ್ತಿ ಮಾತೃಭಾಷೆಯಲ್ಲಿ ಜ್ಞಾನವನ್ನು ಸಂಪಾದಿಸುವುದು ಸುಲಭ, ಸಹಜ ಎನ್ನುವುದು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳ ಮಾತು. ಹಾಗಾಗಿ ನಾವು ಮಾತೃಭಾಷೆಯನ್ನು ಆಗ್ರಹಪಡಿಸಿದೆವು. ಶಿಕ್ಷಣದ ಭಾಷೆ ಆಯ್ಕೆಯಲ್ಲಿ ವ್ಯಕ್ತಿ ಸ್ವಾತಂತ್ರö್ಯ ಎನ್ನುವುದುದು ಮುಖ್ಯವಾದರೆ ಸಂಸ್ಕೃತಿಯ ಬಗೆಗಿನ ಕಳಕಳಿ ಮುಖ್ಯವಲ್ಲವೇ? ಎಂಬ ಪ್ರಶ್ನೆ ಏಳುತ್ತದೆ. ಭಾಷೆ ಎನ್ನುವುದು ಕೇವಲ ಭಾವನೆಗಳನ್ನು ವ್ಯಕ್ತಪಡಿಸಲು ವಾಹಕ ಮಾತ್ರವಲ್ಲ. ಇದು ಸಂಸ್ಕೃತಿಯ ಅಭಿವ್ಯಕ್ತಿ. ಹಾಗಾಗಿ ಇದು ವ್ಯಕ್ತಿಯ ಸ್ವಾತಂತ್ರ್ಯ ಮಾತ್ರವಲ್ಲ ಎನ್ನುವ ಮುಖಗಳಲ್ಲೂ ಭಾಷೆಯನ್ನು ನೋಡಬೇಕು. ಅದಕ್ಕಾಗಿ ಭಾರತೀಯ ಭಾಷೆ, ಮಾತೃಭಾಷೆಯನ್ನು ಉಳಿಸುವುದು ಅಗತ್ಯ.
ನಮ್ಮ ದೇಶದ ಭಾಷೆಗಳು, ಅವುಗಳ ವಾಙ್ಮಯ, ಜಗತ್ತಿನ ಯಾವುದೇ ಭಾಷೆಗಳ ಸಾಹಿತ್ಯದ ಸ್ತರಕ್ಕಿಂತ ಕಡಿಮೆಯದ್ದಲ್ಲ. ಶ್ರೇಷ್ಠವಾದ ಸಾಹಿತ್ಯ ನಿರ್ಮಾಣವನ್ನು ನಮ್ಮ ಎಲ್ಲ ಭಾಷೆಗಳೂ ಮಾಡಿವೆ. ಮುಂದಿನ ಪೀಳಿಗೆ ಆ ಭಾಷೆಯಲ್ಲಿ ಓದುವುದು, ಬರೆಯುವುದು ಮಾಡದೇ ಇದ್ದರೆ ಅದು ಹೇಗೆ ಉಳಿಯುತ್ತದೆ? ಇಂಗ್ಲಿಷ್ ಓದಿದರೆ ನೌಕರಿ ಸಿಗುತ್ತದೆ, ವಿದೇಶಕ್ಕೆ ಹೋಗಬಹುದು, ಪ್ರತಿಷ್ಠೆಯ ಪ್ರಶ್ನೆ ಎಂಬ ಅನೇಕ ವ್ಯಾವಹಾರಿಕ ಕಾರಣಕ್ಕೆ ಇಂಗ್ಲಿಷ್ ವ್ಯಾಮೋಹ ಇದೆ. ಇದಕ್ಕೆ ಒಂದು ಶಾಶ್ವತವಾದ ಪರಿಹಾರವನ್ನು ಹುಡುಕಲೇಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ ನಮ್ಮ ಭಾಷೆಯಲ್ಲಿ ಓದಿದಂಥವರಿಗೆ ಉದ್ಯೋಗ ಮಾಡುವುದು ಸಾಧ್ಯ ಎನ್ನುವಂತಹ ಆರ್ಥಿಕ ಯೋಜನೆಯನ್ನೂ ಮಾಡಬೇಕು. ಸಮಾಜದ ಮಾರ್ಗದರ್ಶನ ಮಾಡುವ ಹಿರಿಯರು, ನ್ಯಾಯಾಧೀಶರು, ಶಿಕ್ಷಣ ತಜ್ಞರು, ಸಾಹಿತಿಗಳು, ರಾಜಕೀಯ, ಧಾರ್ಮಿಕ ನೇತಾರರು ಈ ದೃಷ್ಟಿಯಿಂದ ಸಕಾರಾತ್ಮಕ ನಿಲುವನ್ನು ಹೊಂದಬೇಕು. ತ್ರಿಭಾಷಾ ಸೂತ್ರವನ್ನು ಸರಿಯಾಗಿ ಅಳವಡಿಸಿದರೆ ಶೇ.೯೫ ಸಮಸ್ಯೆ ಪರಿಹಾರ ಆಗುತ್ತದೆ ಎನ್ನಿಸುತ್ತದೆ.
ವಿಕ್ರಮ: ಭಾಷೆಯನ್ನು ಸರಳವಾಗಿ ಅನ್ವಯಿಸುವ ಬದಲಿಗೆ ಹೇರಿಕೆ ಮಾಡುವಂತಹ ಪ್ರಯತ್ನಗಳು ನಡೆದಿದ್ದರಿಂದ ಬಹುಶಃ ಈ ಪ್ರಯತ್ನಕ್ಕೆ ಹಿನ್ನಡೆ ಆಯಿತು ಎನ್ನಿಸುತ್ತದೆ.
ದತ್ತಾತ್ರೇಯ ಹೊಸಬಾಳೆ: ಇದರಲ್ಲಿ ಸ್ವಲ್ಪ ರಾಜಕೀಯವೂ ನುಸುಳಿತು, ಕೆಲವರ ಹಠ, ತಂತಮ್ಮ ಭಾಷೆಯ ಬಗೆಗಿನ ದುರಭಿಮಾನವೂ ಕೆಲಸ ಮಾಡಿತು. “ಭಾಷೆಯ ಕುರಿತು ಅಭಿಮಾನವಿರಲಿ, ದುರಭಿಮಾನ ಬೇಡ. ಆಗ್ರಹ ಇರಲಿ, ದುರಾಗ್ರಹ ಬೇಡ” ಎಂದು ಡಿ.ವಿ. ಗುಂಡಪ್ಪನವರು ಹೇಳಿದ್ದರು. ಹೀಗೆ ಹೇಳಬೇಕಾದರೆ, ಅಂತಹ ಪ್ರಯತ್ನಗಳು ನಡೆದಿದ್ದವು ಎಂದರ್ಥ ತಾನೆ? ಇದು ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ.
ಇಷ್ಟು ದೊಡ್ಡ ದೇಶದಲ್ಲಿ ಎಲ್ಲರೂ ಸಂಸ್ಕೃತವನ್ನು ಕಲಿತರೆ ಬಹಳ ಸಂತೋಷವೆ. ಅಂಬೇಡ್ಕರರೂ ಅದನ್ನೇ ಹೇಳಿದ್ದರು. ಅಥವಾ ಯಾವ ಭಾಷೆಯನ್ನು ಹೆಚ್ಚು ಜನರು ಮಾತನಾಡುತ್ತಿದ್ದಾರೊ ಅದನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಅದೂ ನಮ್ಮ ಭಾಷೆಯೇ ಅಲ್ಲವೇ? ಇವತ್ತು ಸೈನಿಕರಾಗುವ ಪ್ರತಿಯೊಬ್ಬರೂ ಹಿಂದಿ ಕಲಿಯುತ್ತಾರೆ. ಉದ್ಯೋಗಕ್ಕೆ ಬೇಕಾದವರು ಆಯಾ ರಾಜ್ಯದ ಭಾಷೆಯನ್ನು ಕಲಿಯುತ್ತಾರೆ. ಇದನ್ನು ಹೇರಿಕೆ, ವಿರೋಧ, ರಾಜಕೀಯ ಮಾಡುವುದರಿಂದ ಸಮಸ್ಯೆ ಆಗಿದೆ. ಭಾಷೆಯ ವೈವಿಧ್ಯತೆಯೊಂದಿಗೆ ನಮ್ಮ ದೇಶ ಸಾವಿರಾರು ವರ್ಷ ಏಕಾತ್ಮಕತೆಯಿಂದ ಇತ್ತಲ್ಲ? ಹೇಗಿತ್ತು ಹಾಗಾದರೆ? ಇವತ್ತು ನಾವೇ ಭಾಷೆಯನ್ನು ಸಮಸ್ಯೆಯಾಗಿ ಮಾಡಿಕೊಂಡಿದ್ದೇವೆ ಎನ್ನಿಸುತ್ತದೆ.
ವಿಕ್ರಮ: ಭಾಷೆ ಸೇರಿ ಅನೇಕ ಸಮಸ್ಯೆಗಳು ಜಟಿಲವಾಗಿ ಮುಂದುವರಿಯಲು ರಾಜಕೀಯವೂ ಮುಖ್ಯ ಕಾರಣ. ‘ರಾಜಕೀಯದಿಂದ ಸಮಾಜವನ್ನು ಒಂದುಗೂಡಿಸಲು ಸಾಧ್ಯವಿಲ್ಲ, ಅದೇನಿದ್ದರೂ ವಿಭಜಿಸಲಷ್ಟೇ ಶಕ್ತ’ ಎಂದು ಸರಸಂಘಚಾಲಕ ಡಾ. ಮೋಹನ ಭಾಗವತ್ ಅವರೂ ಹೇಳಿದ್ದರು. ರಾಜಕೀಯವು ಸಮಾಜದಲ್ಲಿ ಭಿನ್ನತೆಯನ್ನು ಸೃಷ್ಟಿಸುತ್ತಿದೆ. ಇದನ್ನು ತಡೆಯಲು ಸಂಘ ಯಾವ ಪ್ರಯತ್ನ ಮಾಡುತ್ತಿದೆ?
ದತ್ತಾತ್ರೇಯ ಹೊಸಬಾಳೆ: ಸಂಘ ಇದಕ್ಕಾಗಿ ನಿರ್ದಿಷ್ಟ ಪ್ರಯತ್ನವನ್ನೇನೋ ಯೋಜನೆ ಮಾಡಿದೆ ಎಂದೇನಿಲ್ಲ. ರಾಜಕೀಯ ಹೀಗೆ ಏಕೆ ಮಾಡುತ್ತಿದೆ ಎನ್ನುವುದನ್ನು ಯೋಚಿಸಬೇಕು. ದೀನದಯಾಳ ಉಪಾಧ್ಯಾಯ, ರಾಮಮನೋಹರ ಲೋಹಿಯಾ, ಮಹಾತ್ಮಾ ಗಾಂಧೀಜಿ, ಮದನಮೋಹನ ಮಾಲವೀಯ, ಸಂಪೂರ್ಣಾನAದರು… ಇವರೆಲ್ಲರೂ ಸಂಸ್ಕೃತಿ ಆಧಾರಿತ ರಾಜಕಾರಣ ಮಾಡಿದವರು. ಅದನ್ನು ಅವರ ಅನುಯಾಯಿಗಳು ಪಾಲಿಸಬೇಕಾಗಿತ್ತಾದರೂ ಅಲ್ಲಿ ಎಡವಿದ್ದಾರೆ. ಅಥವಾ ಸ್ವಾರ್ಥಕ್ಕಾಗಿ ಬಲಿಯಾಗಿದ್ದಾರೆ.
ಒಂದು ಪಕ್ಷದಲ್ಲಿರುವವರನ್ನು ದೇಶಭಕ್ತರು, ಇನ್ನೊಬ್ಬರು ದೇಶದ್ರೋಹಿಗಳು ಎಂದು ನಾವು ತೀರ್ಮಾನ ಮಾಡಬೇಕಾಗಿಲ್ಲ. ದೇಶಭಕ್ತಿ, ರಾಷ್ಟ್ರೀಯತೆಯ ವಿಚಾರದಲ್ಲಿ ಎಲ್ಲರದ್ದೂ ಸಾಮಾನ್ಯ ಆಧಾರಭೂಮಿಕೆ ಆಗಬೇಕು. ಪರಕೀಯರು ನಮ್ಮ ದೇಶದ ಕುರಿತು ಹೇಳಿದ್ದನ್ನೇ ಅನೇಕರು ಒಪ್ಪಿಕೊಂಡಿದ್ದಾರೆ. ಇದು ಬದಲಾಗದೆಯೇ ರಾಜಕೀಯ ಪಕ್ಷಗಳ ಉದ್ದೇಶ, ಹೇಳಿಕೆಗಳು ಬದಲಾಗುವುದಿಲ್ಲ. ಇದೆಲ್ಲದರ ಆಧಾರದಲ್ಲಿ ರಾಜಕೀಯ ನಡೆಯುವುದರಿಂದ ರಾಜಕೀಯ ಒಡಕನ್ನೇ ತರುತ್ತದೆ. ದೇಶದಲ್ಲಿ ಅನೇಕ ರಾಜಕೀಯ ಪಕ್ಷಗಳು ಇರುವುದು ಸಮಾಜಕ್ಕೆ ತೊಡಕಲ್ಲ, ಒಡಕಲ್ಲ. ಆದರೆ ರಾಷ್ಟ್ರೀಯತೆಯ ದೃಷ್ಟಿಯಿಂದ ಮನೋಭೂಮಿಕೆ ಒಂದಾಗಬೇಕು, ಉಳಿದಂತೆ ನೀತಿಗಳ ದೃಷ್ಟಿಯಲ್ಲಿ ಭಿನ್ನತೆ ಇರಬಹುದು, ಬರಬಹುದು.
ವಿಕ್ರಮ: ಸಂಘವು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೆ. ಆದರೆ ರಾಜಕೀಯ ಕ್ಷೇತ್ರ ದಿನದಿನವೂ ಸಮಾಜದ ಕೇಂದ್ರವಾಗಿ ಪ್ರಬಲವಾಗುತ್ತಿದೆ. ಯಾವುದೇ ಕ್ಷೇತ್ರದ ಸಮಸ್ಯೆಗೆ ತನ್ನಲ್ಲಿ ಪರಿಹಾರ ಇದೆ ಎನ್ನುತ್ತದೆ, ಆ ಕ್ಷೇತ್ರವನ್ನು ತನ್ನ ನಿಯಂತ್ರಣಕ್ಕೆ ಪಡೆಯುವ ಸರ್ವಪ್ರಯತ್ನವನ್ನೂ ಮಾಡುತ್ತಿದೆ. ಸಮರ್ಥ ರಾಮದಾಸರು, ವಿದ್ಯಾರಣ್ಯರ ಉದಾಹರಣೆಯನ್ನು ನೀಡುವುದಾದರೆ, ಸಂಸ್ಕೃತಿಯೇ ಸಿಂಹಾಸನವನ್ನು ನಿರ್ಮಾಣ ಮಾಡಿದ ಪರಂಪರೆ ನಮ್ಮದು. ಆದರೆ ಇಂದು ಸಿಂಹಾಸನವೇ ಸಂಸ್ಕೃತಿಯನ್ನು ನಿರ್ಮಿಸುವ, ನಿಯಯಂತ್ರಿಸುವಹಾಗೆ ಆಗಿದೆಯಲ್ಲ?
ದತ್ತಾತ್ರೇಯ ಹೊಸಬಾಳೆ: ಇದು ವ್ಯಾಪಕವಾಗಿ ಯೋಚನೆ ಮಾಡಬೇಕಾದ ವಿಚಾರ. ನಮ್ಮಲ್ಲಿ ‘ರಾಜಾ ಕಾಲಸ್ಯ ಕಾರಣಂ’ ಎಂಬ ಮಾತಿದೆ. ಅಂದರೆ ಕಾಲಕ್ಕೆ ರಾಜನೇ ಕಾರಣ ಎಂಬ ಮಾತೂ ಇದೆ. ರಾಜ ಎಂದರೆ ಶಾಸನ, ಆಡಳಿತ, ಸರ್ಕಾರ. ರಾಜರ ಪ್ರಭಾವ ಇದ್ದೇ ಇರುತ್ತದೆ. ಆದರೆ ಆ ರಾಜನಿಗೆ ಇದ್ದ ಸಂಸ್ಕಾರದ ಆಧಾರದಲ್ಲಿ ಆ ರಾಜ್ಯ ಹೇಗಿರುತ್ತದೆ ಎನ್ನುವುದು ನಿರ್ಧಾರವಾಗುತ್ತದೆ. ರಾಜ್ಯ ಎನ್ನುವುದು ಸಮಾನ. ರಾಮನಿದ್ದಾಗ ರಾಮರಾಜ್ಯವಾಗುತ್ತದೆ, ಧರ್ಮವಿದ್ದಾಗ ಧರ್ಮರಾಜ್ಯವಾಗುತ್ತದೆ. ಈ ವಿಶೇಷಣಗಳು ಇಲ್ಲದಿದ್ದಾಗ ಕೇವಲ ಸ್ವಾರ್ಥದ, ಅಧಿಕಾರದ ಪ್ರತಿಷ್ಠೆಯ, ದಾದಾಗಿರಿ ಮಾಡುವ, ರಾಕ್ಷಸೀ ರಾಜ್ಯವಾಗುತ್ತದೆ. ಹಾಗಾಗಿ ರಾಜ್ಯದ ಮೇಲೆ ಸಂಸ್ಕೃತಿಯ ನೈತಿಕ ನಿಯಂತ್ರಣ ಇರಬೇಕು. ಆ ನೈತಿಕ ನಿಯಂತ್ರಣ ಯಾರೋ ಒಬ್ಬಿಬ್ಬರು ವ್ಯಕ್ತಿಗಳು, ಒಂದು ಸಂಘಟನೆ ಮಾಡುವುದಲ್ಲ, ಸಮಾಜದ ಒಂದು ವ್ಯವಸ್ಥೆ ಮಾಡಬೇಕು. ಆದ್ದರಿಂದಲೇ ಲೋಕತಂತ್ರ, ಸಂವಿಧಾನ ನಮ್ಮ ಸಮಾಜಕ್ಕೆ ಪೂರಕವಾಗಿದೆ. ಸಂವಿಧಾನದ ಕುರಿತು ಬಹಳ ದೊಡ್ಡ ವಿದ್ವಾಂಸರು ಚರ್ಚೆ ಮಾಡಿದಾಗ, ಎಲ್ಲವನ್ನೂ ಆಳವಾಗಿಯೇ ಗ್ರಹಿಸಿದ್ದಾರೆ. ನಮ್ಮಲ್ಲಿ ಪರಸ್ಪರ ಚೆಕ್ಸ್ ಆಂಡ್ ಬ್ಯಾಲೆನ್ಸಸ್ ಇದೆ. ಯಾರೋ ಒಬ್ಬರು ತನ್ನ ಅಹಂಕಾರ, ಪ್ರತಿಷ್ಠೆಯಿಂದ ಮುಂದುವರಿಯಲು ಆಗುವುದಿಲ್ಲ.
ಸಮಾಜ ಒಂದು ಸ್ವಾಯತ್ತ ಶಾಸನವನ್ನು ಗಟ್ಟಿಗೊಳಿಸುವಂತಹ ಸ್ಥಿತಿಗೆ ತಲುಪಿಲ್ಲವಾದ್ದರಿಂದ ರಾಜಕೀಯ ಎಲ್ಲವನ್ನೂ ಪ್ರಭಾವಿಸುತ್ತಿದೆ. ಅದಕ್ಕೆ ಸಮಾಜ ಹೆಚ್ಚು ಶಕ್ತಿಯುತವಾಗಬೇಕು. ಇವತ್ತು ಸರ್ಕಾರದ ವ್ಯವಸ್ಥೆ ಎಷ್ಟೊಂದು ಬಲವಾಗಿದೆ ಎಂದರೆ ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಬಯಕೆಯನ್ನು ಜನರೇ ತೋರಿಸುತ್ತಿದ್ದಾರೆ. ಅಥವಾ ಚುನಾವಣೆ ಹಾಗೂ ಬೇರೆಬೇರೆ ಸಂದರ್ಭಗಳಲ್ಲಿ ಜನರಲ್ಲಿ ಇಲ್ಲಸಲ್ಲದ ಆಸೆ ಆಮಿಷಗಳನ್ನು ಹುಟ್ಟಿಸಿ ದಾರಿತಪ್ಪಿಸುತ್ತಿದ್ದಾರೆ. ಈ ವ್ಯವಸ್ಥೆ ಎಷ್ಟು ದಿನ ನಡೆಯುತ್ತದೆ? ಹೀಗೇ ನಡೆದರೆ ದೇಶ ದೀವಾಳಿಯಾಗಿಹೋಗುತ್ತದೆ.
ವಿಕ್ರಮ: ಸಂಘ ರಾಜಕೀಯ ಮಾಡುವುದಿಲ್ಲ ಎಂದಿದೆ. ಆದರೆ ಸ್ವಯಂಸೇವಕರು ರಾಜಕಾರಣವನ್ನು ಪ್ರಭಾವಿಸುತ್ತಿದ್ದಾರೆ. ಸಂಘ ಪರಿವಾರ ಎನ್ನಲಾಗುವ ಚೌಕಟ್ಟಿನಲ್ಲಿ ಒಂದೇ ರಾಜಕೀಯ ಪಕ್ಷ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದು ರಾಜಕೀಯ ಪಕ್ಷದ ಮೇಲೆ ಸಂಘ ಪ್ರಭಾವ ಹೊಂದುವುದರಿAದಾಗಿ, ಇಡೀ ಸಮಾಜದ ಮೇಲೆ ಪ್ರಭಾವ ಬೀರುವುದರಿಂದ ದೂರ ಉಳಿದಂತಾಗಲಿಲ್ಲವೇ? ರಾಜನೀತಿಯ ಬದಲಿಗೆ ರಾಜಕೀಯದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಸೀಮಿತವಾಯಿತಲ್ಲವೇ?
ದತ್ತಾತ್ರೇಯ ಹೊಸಬಾಳೆ: ಈ ಭಯ, ಕೆಲಮಟ್ಟಿನ ವಾಸ್ತವ ನಿಜವಾದದ್ದೆ. ಇದಕ್ಕೆ ಕೆಲವು ಕಾರಣಗಳಿವೆ. ಒಂದು ರಾಜಕೀಯ ಪಕ್ಷವನ್ನೇ ಬೆಂಬಲಿಸಬೇಕು ಎನ್ನುವುದು ಸಂಘದ ಮೂಲ ನಿಲುಮೆಯಲ್ಲಿ ಇಲ್ಲ. ಸ್ವಯಂಸೇವಕರು ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲಿಬೇಕಾದರೂ ಕೆಲಸ ಮಾಡಬಹುದು.
ಆದರೆ ನಮ್ಮ ದೇಶದಲ್ಲಿ ರಾಜಕೀಯ ಯಾವ ನಿಟ್ಟಿನಲ್ಲಿ ನಡೆದಿದೆ? ಗಾಂಧೀಜಿ, ಮಾಲವೀಯ, ಪೂರ್ಣಾನಂದರು ಮುಂತಾದವರ ಪರಂಪರೆ ಆ ಪಕ್ಷಗಳಲ್ಲಿ ಉಳಿದಿದೆಯೇ? ಪ್ರಣಬ್ ಮುಖರ್ಜಿಯವರು ತಮ್ಮ ಪಕ್ಷದಲ್ಲಿದ್ದಾಗ ಸಂಘದ ಕಾರ್ಯಕ್ರಮಕ್ಕೆ ಬರಲು ಆಗುತ್ತಿರಲಿಲ್ಲ. ಏಕೆಂದರೆ ಸಂಘವನ್ನು ರಾಜಕೀಯವಾಗಿ ಅಸ್ಪೃಶ್ಯ ಎಂದು ರಾಜಕೀಯ ಪಕ್ಷಗಳು ನಡೆಸಿಕೊಂಡಿದ್ದರಿಂದ. ಕೇರಳದ ಕೊಚ್ಚಿನ್ನಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕರೊಬ್ಬರು ಸಂಘದ ಕಾರ್ಯಕ್ರಮಕ್ಕೆ ಬಂದಿದ್ದರು. ಅದೊಂದೇ ಕಾರಣಕ್ಕೆ ಅವರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರಹಾಕಲಾಯಿತು. ಅಂದರೆ ಅಸ್ಪೃಶ್ಯತೆ ಮಾಡುತ್ತಿರುವವರು ಯಾರು?
ಹಾಗಾಗಿ ಯಾವ ಪಕ್ಷ ನೀನು ಸಂಘದೊಂದಿಗಿನ ಸಂಬಂಧವನ್ನು ತೆಗೆದುಹಾಕಬೇಕಿಲ್ಲ ಎನ್ನುತ್ತದೆಯೋ ಆ ಪಕ್ಷದ ಜತೆಗೆ ಸ್ವಯಂಸೇವಕರು ಸಹಜವಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲ ಬಾಗಿಲುಗಳೂ ಮುಚ್ಚಿದಾಗ ಯಾವ ಬಾಗಿಲು ತೆರೆದಿದೆಯೋ ಅಲ್ಲಿತಾನೆ ಹೋಗಬೇಕು? ಸಂಘದಲ್ಲಿಯೂ ಇದ್ದೇನೆ, ಪಕ್ಷದಲ್ಲಿಯೂ ಇದ್ದೇನೆ ಎನ್ನುವ ಸ್ಥಿತಿಯನ್ನು ಉಳಿದ ಪಕ್ಷಗಳು ಮಾಡಲಿ. ಒಬ್ಬ ಸಂಘದ ಸ್ವಯಂಸೇವಕ ರಾಜಕೀಯ ಪಕ್ಷಕ್ಕೆ ಹೋದರೆ ಅವರಿಗೆ ಒಬ್ಬ ಪ್ರಾಮಾಣಿಕ ಕಾರ್ಯಕರ್ತ ಸಿಗುತ್ತಾನೆ ತಾನೆ? ಅದನ್ನು ಬಿಟ್ಟು ಅಸ್ಪೃಶ್ಯತೆ ಮಾಡಿದರೆ ಹೇಗೆ?
ಇನ್ನು ತಾತ್ತ್ವಿಕ ವಿಚಾರವೂ ಇದರಲ್ಲಿದೆ. ಅಲ್ಪಸಂಖ್ಯಾತ, ಜಾತಿ, ಏಕಾತ್ಮಕತೆ, ಮತಾಂತರ, 370ನೇ ವಿಧಿ ಮುಂತಾದ ವಿಚಾರಗಳು ತನ್ನ ಆಧಾರಭೂತ ತತ್ತ್ವ ಎಂದು ಸ್ವಯಂಸೇವಕರು ಸ್ವೀಕಾರ ಮಾಡಿದ್ದಾರೆ. ಅಂತಹ ವಿಚಾರಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿರುವ ಪಕ್ಷದಲ್ಲಿ ಸ್ವಯಂಸೇವಕ ಹೇಗೆ ಕೆಲಸ ಮಾಡುತ್ತಾನೆ? ಸಂಘವು ಬೇರೆ ಪಕ್ಷಗಳ ಜತೆಗೆ ಮುಕ್ತ ಸಂಪರ್ಕ ಇರಿಸಿಕೊಳ್ಳದೇ ಇರಲು ಆ ಪಕ್ಷಗಳೇ ಹೊಣೆ. ಆದರೂ ಸಂಘದ ಅನೇಕ ಸ್ತರದ ಪ್ರಮುಖರು ವಿವಿಧ ರಾಜಕೀಯ ಪಕ್ಷಗಳ ನೇತಾರರೊಂದಿಗೆ ರಾಷ್ಟ್ರ, ಸಂಸ್ಕೃತಿ, ಸೇವೆ ಮುಂತಾದ ವಿಷಯಗಳ ಆಧಾರದಲ್ಲಿ ಸಂಪರ್ಕವಿಟ್ಟುಕೊಂಡಿದ್ದಾರೆ.
ವಿಕ್ರಮ: ಸಂಘ ರಾಜಕೀಯ ಪ್ರವೇಶೀಸುವುದಿಲ್ಲ ಎಂದು ಅನೇಕ ಬಾರಿ ಹೇಳಿದೆ. ಆದರೆ ಹೀಗೆ ತಾನು ಪ್ರವೇಶ ಮಾಡುವುದಿಲ್ಲ ಎಂದು ಅನೇಕ ಕ್ಷೇತ್ರಗಳ ಕುರಿತು ಹೇಳುತ್ತಿತ್ತು. ಉದಾಹರಣೆಗೆ ಪ್ರಚಾರದ ಅವಶ್ಯಕತೆಯಿಲ್ಲ ಎಂದು ಹೇಳುತ್ತಿತ್ತಾದರೂ ಅದರ ಅವಶ್ಯಕತೆ ಬಿದ್ದದ್ದರಿಂದ ೯೦ರ ದಶಕದಲ್ಲಿ ಪ್ರಚಾರ ವಿಭಾಗ ಆರಂಭವಾಗಿದೆ. ಕಾಲಕ್ಕೆ ತಕ್ಕಂತೆ ತೆರೆದುಕೊಳ್ಳುವ ಪ್ರಯತ್ನವನ್ನು ಸಂಘ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ, ಮುಂದೆ ಯಾವುದೇ ರಾಜಕೀಯ ಪಕ್ಷದಿಂದಲೂ ಸಮಾಜದ ಉನ್ನತಿಯ ಕೆಲಸ ಮಾಡಲು ಆಗುತ್ತಿಲ್ಲ ಎನ್ನುವ ಅನಿವಾರ್ಯ ಪರಿಸ್ಥಿತಿ ಬಂದಾಗ ಸಂಘ ಅದನ್ನೂ ಆಲೋಚಿಸಿ ರಾಜಕೀಯಕ್ಕೆ ಪ್ರವೇಶ ಮಾಡಬಹುದೇ?
ದತ್ತಾತ್ರೇಯ ಹೊಸಬಾಳೆ: ಇಲ್ಲ, ಹಾಗಿಲ್ಲ. ಪ್ರಚಾರ ವಿಭಾಗ ಆರಂಭ ಮಾಡುವುದಿಲ್ಲ ಎಂದು ಸಂಘ ಹೇಳಿಲ್ಲ. ಮೊದಲೇ ಹೇಳಿದಂತೆ ಇದು ಪ್ರೋಗ್ರೆಸ್ಸಿವ್ ಅನ್ಫೋಲ್ಡ್ಮೆಂಟ್. ಡಾಕ್ಟರ್ಜಿಯವರು ಇದ್ದಾಗಲೂ ಸಂಘದ ವಿಷಯಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗಲು ಸ್ವತಃ ಡಾಕ್ಟರ್ಜಿಯವರೇ ಸಮಾಚಾರಗಳನ್ನು ಬರೆಯಿಸಿ ಕಳಿಸುತ್ತಿದ್ದರು. ಸಂಘದ ಸ್ವಯಂಸೇವಕರೇ ಹಿಂದೂಸ್ಥಾನ್ ಸಮಾಚಾರ, ಆರ್ಗನೈಸರ್, ಪಾಂಚಜನ್ಯ ಆರಂಭಿಸಿದರಲ್ಲ? ನೀವು ಸಂಪಾದಕರಾಗಿರುವ ಪತ್ರಿಕೆಯನ್ನೇ ೧೯೪೮ರಲ್ಲಿ ಸ್ವಯಂಸೇವಕರೇ ಶುರು ಮಾಡಿದರಲ್ಲ?
ರಾಜಕೀಯದ ವಿಚಾರಕ್ಕೆ ಬಂದರೆ, ಸ್ವಯಂಸೇವಕರಲ್ಲಿ ಯಾರಿಗೆ ಇಚ್ಛೆ ಇದೆಯೋ ಅವರು ರಾಜಕೀಯಕ್ಕೆ ಪ್ರವೇಶಿಸಬಹುದು. ಸಂಘ ತಾನೇ ಒಂದು ರಾಜಕೀಯ ಪಕ್ಷದ ರೀತಿ ವ್ಯವಹಾರ ಮಾಡುವುದಿಲ್ಲ, ಸಂಘವು ರಾಜಕೀಯ ಸಂಘಟನೆ ಆಗುವುದಿಲ್ಲ. ಸಂಘದ ಪದಾಧಿಕಾರಿಗಳು ರಾಜಕೀಯ ಪಕ್ಷದಲ್ಲಿ ಸಕ್ರಿಯ ಭಾಗವಹಿಸುವಿಕೆ ಇರುವುದಿಲ್ಲ. ಇನ್ನೊಂದು ವಿಚಾರವೆಂದರೆ, ಸಂಘವು ಈ ದೇಶದಲ್ಲಿ ಯಾವ ಬದಲಾವಣೆಯನ್ನು ಮಾಡಬೇಕು ಎಂದುಕೊAಡಿದೆಯೋ ಅದರಲ್ಲಿ ಸರ್ಕಾರದ ಪಾತ್ರವಿದೆ. ಉದಾಹರಣೆಗೆ ಮಾತೃಭಾಷೆ ಶಿಕ್ಷಣ, ೩೭೧ನೇ ವಿಧಿ ರದ್ದು, ದೇಶದ ರಕ್ಷಣೆ, ಗೋರಕ್ಷಣೆ, ಮತಾಂತರ ನಿಷೇಧದ ಕಾನೂನನ್ನು ಯಾರು ಮಾಡಬೇಕು? ಸರ್ಕಾರವೇ ಅಲ್ಲವೇ? ಸರ್ಕಾರದ ಪಾತ್ರವನ್ನು ನಾವೇನು ಅಲ್ಲಗಳೆಯಲು ಹೋಗುವುದಿಲ್ಲ.
ವಿಕ್ರಮ: ಭಾರತದಲ್ಲಿರುವವರೆಲ್ಲರೂ ಹಿಂದೂಗಳು ಎನ್ನುವುದು ಸಂಘದ ಅಭಿಪ್ರಾಯ. ಅದರಲ್ಲಿ ಮುಸ್ಲಿಂ, ಕ್ರೈಸ್ತರೂ ಹಿಂದೂಗಳು ಎಂದು ಸರಸಂಘಚಾಲಕರು ಹೇಳಿದ್ದಾರೆ. ಭಾರತದಲ್ಲಿರುವ ಮುಸ್ಲಿಮರನ್ನು ಹಿಂದೂಗಳು ಎಂದು ಹೇಳುತ್ತಿರುವುದು ಯಾವ ಆಧಾರದಲ್ಲಿ? ಈ ದೇಶದಲ್ಲಿದ್ದಾರೆ ಎಂಬ ಕಾರಣಕ್ಕಾಗಿಯೋ? ಈ ದೇಶದಲ್ಲಿ ಜನಿಸಿದ್ದಾರೆ ಎಂಬ ಕಾರಣಕ್ಕಾಗಿಯೋ? ಅವರ ಡಿಎನ್ಎ, ಉಳಿದ ಭಾರತೀಯರಿಗೆ ಸಮಾನ ಎಂದೊ?
ದತ್ತಾತ್ರೇಯ ಹೊಸಬಾಳೆ: ಭಾರತದಲ್ಲಿರುವ ಬೇರೆಬೇರೆ ಮತ ಸಂಪ್ರದಾಯ, ಭಾಷೆಯವರಾಗಲಿ ವಿಭಿನ್ನ ರೇಸ್ ಅಲ್ಲ ಎಂದು ಸಾಬೀತಾಗಿದೆ ಹಾಗೂ ಇದನ್ನು ಸ್ವತಃ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಹ ಹೇಳಿದ್ದಾರೆ. ಹಿಂದೂ ಎನ್ನುವುದು ಒಂದು ರಿಲಿಜನ್ ಅಲ್ಲ. ಇದೊಂದು ಜೀವನ ಪದ್ಧತಿ ಎಂದು ಡಾ. ಎಸ್. ರಾಧಾಕೃಷ್ಣನ್, ಭಾರತದ ಸುಪ್ರೀಂಕೋರ್ಟ್ ಸಹ ಹೇಳಿದೆ. ಹಿಂದೂಗಳು ಪಾಲನೆ ಮಾಡುತ್ತಿರುವ ಧರ್ಮ ಹಿಂದೂ ಧರ್ಮ ಎನ್ನಲಾಗುತ್ತಿದೆಯಷ್ಟೆ, ನಿಜಕ್ಕೂ ಅದು ಮಾನವಧರ್ಮವೆ. ಹಿಂದೂ ಎನ್ನುವುದು ಭೂಸಾಂಸ್ಕೃತಿಕ ಪರಿಭಾಷೆ. ಇದೊಂದು ಮತೀಯ ಕಲ್ಪನೆಯಾಗಲಿ, ಧಾರ್ಮಿಕ ಕಲ್ಪನೆಯಾಗಲಿ ಅಲ್ಲ.
ಇಲ್ಲಿನ ಮುಸ್ಲಿಮರು ತಮ್ಮ ಮತೀಯ ಆಚರಣೆಗಳನ್ನು ಬದಲಾಯಿಸಿಕೊಂಡಿರಬಹುದು. ಒಬ್ಬ ಬೌದ್ಧನು ನಾಳೆ ಲಿಂಗಾಯತ ಆಗಬಹುದಲ್ಲವೇ? ಬ್ರಾಹ್ಮಣನೊಬ್ಬ ಆತನಿಗೆ ಇಚ್ಛೆಯಿದ್ದರೆ ಬೌದ್ಧ ಆಗಬಹುದಲ್ಲವೇ? ಒಂದೇ ಮನೆ, ಕುಟುಂಬದಲ್ಲಿದ್ದAತಹ ಅಣ್ಣ-ತಮ್ಮ, ಗಂಡ-ಹೆAಡತಿಯು ಶೈವ-ವೈಷ್ಣವರಾದಂತಹ ನೂರಾರು ಉದಾಹರಣೆಗಳಿವೆ. ನಮ್ಮಲ್ಲಿ ಹಿಂದೂ ಎನ್ನುವುದು ಒಂದು ಪಂಥ ಸಂಪ್ರದಾಯವಾಗಿರಲಿಲ್ಲ. ಮತಾಂತರವಾದ ಮಾತ್ರಕ್ಕೆ ಅವರು ತಮ್ಮ ರಾಷ್ಟಿçÃಯತೆ, ಸಂಸ್ಕೃತಿಯ ಬೇರುಗಳನ್ನು ಅಲ್ಲಗಳೆಯಬಾರದು ಎಂಬುದು ಸಂಘದ ನಿಲುವು.
ವಿಕ್ರಮ: ಎಲ್ಲವನ್ನೂ ಒಪ್ಪಿಕೊಳ್ಳಬೇಕು ಎನ್ನುವ ವಿಚಾರವು ಭಾರತೀಯ ನೆಲದಲ್ಲಿ ಜನಿಸಿದಂತಹ ಜೈನ, ಬೌದ್ಧ, ಸಿಖ್ ಸಂಪ್ರದಾಯಗಳಿಗೆ ಅನ್ವಯವಾಗುತ್ತದೆ. ಆದರೆ ವಿದೇಶದಿಂದ ಬಂದ ಮತಗಳು ಹೀಗೆ ‘ಉಳಿದವರನ್ನು’ ಅವರಷ್ಟಕ್ಕೆ ಬಿಟ್ಟುಬಿಡಲು ಅವರ ನಂಬಿಕೆ, ಪುಸ್ತಕಗಳಲ್ಲೇ ಅವಕಾಶ ಇಲ್ಲ. ಹಾಗಾಗಿ ಸಂಘ ಅವರನ್ನು ಹಿಂದೂಗಳು ಎಂದು ಹೇಳಿದರೂ ಅವರ ಆಚರಣೆ ಅದಕ್ಕೆ ಅವಕಾಶ ಕೊಡುತ್ತದೆಯೇ? ಅದನ್ನು ಹೇಗೆ ನೋಡುವುದು?
ದತ್ತಾತ್ರೇಯ ಹೊಸಬಾಳೆ: ಇದು ಸರಿಯಿದೆ. ನಮ್ಮ ದೇಶದಲ್ಲಿ ಜೈನ, ಬೌದ್ಧವನ್ನು ಆರಂಭಿಸಿದವರು ಬೇರೆ ಧರ್ಮವನ್ನು ಸ್ಥಾಪನೆ ಮಾಡುತ್ತಿದ್ದೇವೆ ಎನ್ನಲಿಲ್ಲ. ಅವರ ಶಿಷ್ಯರು, ಅನುಯಾಯಿಗಳು ಬೇರೆ ಮತ ಸ್ಥಾಪನೆ ಮಾಡಿದರು ಅಷ್ಟೆ. ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂದು ಹಿರಿಯರು ಹೇಳಿದಾಗ ಅವರ ಮನಸ್ಸಿನಲ್ಲಿ ಇದೇ ಇದ್ದಿದ್ದಲ್ಲವೇ? ಏಷದ್ಧರ್ಮ ಸನಾತನಃ ಎಂದು ಸ್ವತಃ ಬುದ್ಧ ಹೇಳಿದ್ದಾನೆ ಅಲ್ಲವೇ? ಸನಾತನದಲ್ಲಿ ಇದ್ದದ್ದೂ ವೈದಿಕ ಹಾಗೂ ಅವೈದಿಕ ಪರಂಪರೆಗಳು ಮಾತ್ರ. ಅವೈದಿಕ ಎನ್ನುವುದು ಇನ್ನೊಂದು ಪರಂಪರೆಯೇ ವಿನಃ ವೇದದ ವಿರುದ್ಧ ಎಂದಲ್ಲ. ಈ ರೀತಿಯ ಸ್ಪಿರಿಚುವಲ್ ಡೆಮಾಕ್ರಸಿ, ಅಧ್ಯಾತ್ಮ ಸ್ವಾತಂತ್ರ್ಯವನ್ನು ನಮ್ಮ ದೇಶದಲ್ಲಿ ಎಲ್ಲ ಕಾಲದಲ್ಲೂ ಕೊಟ್ಟಿದ್ದಾರೆ.
ವಿಕ್ರಮ: ಈ ವಿಚಾರಗಳನ್ನು ವಿದೇಶಿ ಮತಗಳಿಗೆ ಹೇಗೆ ಇದನ್ನು ಅನ್ವಯಿಸುವುದು?
ದತ್ತಾತ್ರೇಯ ಹೊಸಬಾಳೆ: ನಿನ್ನ ಸಂಪ್ರದಾಯಗಳನ್ನು ಸರಿಯಾಗಿ ಆಚರಣೆ ಮಾಡು, ಮೋಕ್ಷ ಸಿಗುತ್ತದೆ ಎನ್ನುವುದು ಭಾರತದಲ್ಲಿರುವ ಜೈನ, ಬೌದ್ಧ, ಲಿಂಗಾಯತ, ಶೈವ, ವೈಷ್ಣವ ಮತಪಂಥಗಳ ಮಾತು. ಆದರೆ ಸೆಮೆಟಿಕ್ ರಿಲೀಜನ್ನುಗಳು ಈ ಸಂಗತಿಗಳನ್ನು ಒಪ್ಪುವುದಿಲ್ಲ್ಲ. ಉದಾಹರಣೆಗೆ ಕ್ರೈಸ್ತ ಮತದ ಹೊರಗಡೆಯೂ ಸಾಲ್ವೇಷನ್ ಇದೆ ಎಂದು ಕ್ರೆöÊಸ್ತರು ಒಪ್ಪುವುದಿಲ್ಲ. ಇದೇ ರೀತಿ ಇಸ್ಲಾಂ. ಆದ್ಧರಿಂದ ಭಾರತೀಯ ನೆಲದಲ್ಲಿ ಜನಿಸಿದ ಮತಪಂಥಗಳಿಗೂ ವಿದೇಶದಿಂದ ಬಂದ ಸೆಮೆಟಿಕ್ ರಿಲೀಜನ್ನುಗಳಿಗೂ ಸಾಂಸ್ಕೃತಿಕ ಭಿನ್ನತೆ ಮಾತ್ರವಲ್ಲ, ವೈರುಧ್ಯ ಇದೆ.
ವಿಕ್ರಮ: ಅಂದರೆ ಸಂಘವು ಮುಸ್ಲಿಂ ಮತ್ತು ಕ್ರೆöÊಸ್ತರು ಹಿಂದೂ ಎಂದು ಹೇಳಿದಾಗ, ಅವರು ಆ ರಿಲೀಜನ್ನುಗಳಿಂದ ಹೊರಗೆ ಬಂದರೆ ಮಾತ್ರ ಹಿಂದೂಗಳಾಗುತ್ತಾರೆ ಎನ್ನುತ್ತಿದೆಯೇ?
ದತ್ತಾತ್ರೇಯ ಹೊಸಬಾಳೆ: ಹೊರಗೆ ಬರಬೇಕು ಎನ್ನುವಂಥದ್ದೇನಿಲ್ಲ. ಇದನ್ನು ಗುರೂಜಿ ಗೋಳ್ವಲ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. “ಒಬ್ಬ ಮುಸ್ಲಿಂ ಕೂಡ ನನ್ನ ಪಕ್ಕದಲ್ಲಿ ಕುಳಿತು, ನನ್ನ ದೇವರ ಮಂದಿರದಲ್ಲೇ ನಮಾಜ್ ಮಾಡಬಹುದು, ನಾನು ಪೂಜೆ ಮಾಡುತ್ತೇನೆ, ನನಗೆ ಅಭ್ಯಂತರ ಇಲ್ಲ” ಎಂದಿದ್ದಾರೆ. ಇನ್ನೊಬ್ಬರ ಪೂಜಾ ಮಾರ್ಗದ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ಅದು ಈ ದೇಶದ ಸಂಸ್ಕೃತಿಗೆ ವಿರುದ್ಧವಾಗಿರಬಾರದು ಅಷ್ಟೆ. ಅವರಲ್ಲಿ ಆ ಭಾವನೆಯನ್ನು ತರಬಬೇಕಾದ್ದು ಹಿಂದೂ ಸಮಾಜದ ಕರ್ತವ್ಯ. ಹಿಂದೂ ಸಮಾಜ ಒಗ್ಗಟ್ಟಾಗಿದ್ದರೆ ಅವರು ತನ್ನಿಂತಾನೇ ಬರುತ್ತಾರೆ. ಅದೇ ರೀತಿ, ಆ ಮತೀಯರೂ ಇತರರ ಧರ್ಮಾಚರಣೆ ಬಗ್ಗೆ ಗೌರವ ತಾಳಬೇಖು. ಅವರ ಮತಾಂತರಕ್ಕೆ ಪ್ರಯತ್ನಿಸಬಾರದು.
ವಿಕ್ರಮ: ದೇವಾಲಯಗಳ ಪುನರುತ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶ್ರೀ ರಾಮಜನ್ಮಭೂಮಿ ಆಂದೋಳನವನ್ನು ಸಂಘ ಒಂದು ವಿಶೇಷ ಸಂದರ್ಭದಲ್ಲಿ ಕೈಗೆತ್ತಿಕೊಂಡಿತು, ಆದರೆ ಮುಂದೆ ಇಂತಹ ಯಾವುದೇ ಆಂದೋಳನಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರಸಂಘಚಾಲಕರು ಹೇಳಿದ್ದಾರೆ. ಆದರೆ ಸಂಘದ ಕಾರ್ಯದಿಂದ ಪ್ರೇರಣೆಗೊಂಡು ಅನೇಕರು ಮಸೀದಿ, ಕಟ್ಟಡಗಳ ಅವಶೇಷಗಳಲ್ಲಿ ದೇವಸ್ಥಾನಗಳನ್ನು ಹುಡುಕುತ್ತಿದ್ದಾರೆ ಹಾಗೂ ಅದನ್ನು ರಾಮಜನ್ಮಭೂಮಿ ಆಂದೋಳನದ ರೀತಿಯಲ್ಲೇ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಗಳಿಗೆ ಸಂಘ ಕೈಜೋಡಿಸುತ್ತದೆಯೇ? ತಟಸ್ಥವೇ? ಅಥವಾ ಬೇಡ ಎನ್ನುತ್ತದೆಯೇ?
ದತ್ತಾತ್ರೇಯ ಹೊಸಬಾಳೆ: ಇದಕ್ಕೆ ಐವತ್ತು ವರ್ಷದ ಇತಿಹಾಸ ನೋಡಬೇಕು. ರಾಮಜನ್ಮಭೂಮಿ ಹೋರಾಟವನ್ನು ಸಂಘ ಆರಂಭಿಸಲಿಲ್ಲ. ಸಮಾಜದ ಧಾರ್ಮಿಕ ನೇತೃತ್ವ ವಹಿಸಿದ್ದ ಅನೇಕ ಸಾಧು ಸಂತರು, ಮಠಾಧೀಶರು ಸಭೆಯನ್ನು ಮಾಡಿ ಅದರಲ್ಲಿ ಈ ತೀರ್ಮಾನ ಮಾಡಿದರು. ಅವರು ಸಂಘವನ್ನು ಕೇಳಿದರು. ರಾಮಜನ್ಮಭೂಮಿ ಆಂದೋಳನದಲ್ಲಿ ಸ್ವಯಂಸೇವಕರು ತೊಡಗಲು ಒಪ್ಪಿದೆವು. ಒಂದು ದೇಶದ ಸಂಸ್ಕೃತಿಯ ದೃಷ್ಟಿಯಿಂದ ರಾಮಜನ್ಮಭೂಮಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಲು, ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ತೆಗೆದುಕೊಳ್ಳಲು ಒಪ್ಪಿದೆವು. ಅವತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ ಹಾಗೂ ಧರ್ಮಾಚಾರ್ಯರು ಮೂರು ಮಂದಿರದ ಬಗ್ಗೆ ಹೇಳಿದ್ದರು. ಸಂಘದ ಕೆಲವು ಸ್ವಯಂಸೇವಕರು ಸೇರಿಕೊಂಡು ಈ ಮೂರು ಮಂದಿರಗಳ ಕುರಿತು ಪ್ರಯತ್ನ ಮಾಡಿದರೆ ಸಂಘ ಅದನ್ನು ತಡೆಯುತ್ತಿಲ್ಲ.
ಆದರೆ ಉಳಿದ ಮಸೀದಿ, ಕಟ್ಟಡಗಳ ಕುರಿತು ಹೇಳುವುದಾದರೆ, ದೇಶದಲ್ಲಿ ೩೦ ಸಾವಿರ ಮಸೀದಿಗಳ ಕೆಳಗೆ ದೇವಾಲಯ ಇದೆ ಎಂದರೆ ಅದೆಲ್ಲವನ್ನೂ ಅಗೆದು ಚರಿತ್ರೆಯನ್ನು ಉಲ್ಟಾ ಮಾಡಲು ಹೋದರೆ ಸಮಾಜದಲ್ಲಿ ಇನ್ನಷ್ಟು ವೈರ, ಧ್ವೇಷವನ್ನೇ ಬೆಳೆಸಿಕೊಂಡು ಹೋಗುತ್ತದೆಯಲ್ಲವೇ? ಸಮಾಜ ಮುಂದೆ ಹೋಗಬೇಕೊ ಬೇಡವೋ? ಇತಿಹಾಸಕ್ಕೆ ಎಷ್ಟು ಹೋಗುತ್ತೀರಿ? ಹೀಗೆ ಮಾಡುತ್ತಲೇ ಹೋದರೆ ಸಮಾಜದ ಉಳಿದ ಪರಿವರ್ತನೆಯ ಕೆಲಸ ಯಾವಾಗ ಮಾಡುವುದು? ಸಮಾಜದಲ್ಲಿರುವ ಅಸ್ಪೃಶ್ಯತೆ ನಿವಾರಣೆ ಹೇಗೆ?, ಯುವಕರಲ್ಲಿ ಜೀವನಮೌಲ್ಯ ಬಿತ್ತುವುದು ಹೇಗೆ?, ಸಂಸ್ಕೃತಿಯ ರಕ್ಷಣೆ, ಭಾಷೆ ಉಳಿಸುವುದು.. ಇದೆಲ್ಲವನ್ನೂ ಬಿಟ್ಟು ಅದೊಂದನ್ನೇ ಮಾಡುತ್ತಾ ಕೂರಬೇಕೇನು? ಇಂದು ಸಮಾಜದಲ್ಲಿ ಮತಾಂತರ, ಗೋಹತ್ಯೆ, ಲವ್ ಜಿಹಾದ್, ಇನ್ನೂ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡಬಾರದು ಎಂದು ಸಂಘ ಹೇಳಿಲ್ಲವಲ್ಲ?
ದೇವಸ್ಥಾನದ ಕಲ್ಪನೆಯಲ್ಲಿ ನೋಡುವುದಾದರೆ, ಇಂದು ಮಸೀದಿಯಾಗಿರುವ ದೇವಾಲಯದ ಕಟ್ಟಡಕ್ಕೆ ದೈವತ್ವ ಇಲ್ಲ ತಾನೆ? ಕಟ್ಟಡದಲ್ಲಿ ಇರುವ ಹಿಂದುತ್ವ ಹುಡುಕಬೇಕೊ, ಅಥವಾ ಯಾರು ತಾವು ಹಿಂದೂಗಳೇ ಅಲ್ಲ ಎಂದುಕೊAಡಿದ್ದರೋ ಅವರಲ್ಲಿರುವ ಹಿಂದುತ್ವವನ್ನು ಜಾಗೃತಗೊಳಿಸಬೇಕ? ಕಟ್ಟಡದಲ್ಲಿರುವ ಹಿಂದುತ್ವದ ಪಳೆಯುಳಿಕೆಗಳನ್ನು ಹುಡುಕುವುದಕ್ಕಿಂತ ಆ ಸಮಾಜ, ಸಮೂಹದಲ್ಲಿ ಇರುವ ಹಿಂದುತ್ವದ ಮೂಲ ಬೇರುಗಳನ್ನು ಜಾಗೃತಗೊಳಿಸಿದರೆ ಈ ಮಸೀದಿಯ ಪ್ರಶ್ನೆ ತನ್ನಿಂತಾನೆ ಪರಿಹಾರ ಆಗಿಬಿಡುತ್ತದೆ.
ವಿಕ್ರಮ: ಸಂಘವು ಪರಮವೈಭವ ಎನ್ನುವುದನ್ನು ಗುರಿ ಎಂದಿರಿಸಿಕೊAಡಿದೆ. ಪರಮವೈಭವ ಸ್ಥಿತಿಯ ಕಡೆಗೆ ಸಮಾಜ ಸಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮೈಲುಗಲ್ಲುಗಳು ಯಾವುವು? ಇಲ್ಲದಿದ್ದರೆ ಅದೊಂದು ಅಮೂರ್ತವಾದ ಕಲ್ಪನೆಯಾಗುವ ಸಾಧ್ಯತೆಯಿರುತ್ತದೆ ಅಲ್ಲವೇ?
ದತ್ತಾತ್ರೇಯ ಹೊಸಬಾಳೆ: ಪರಮವೈಭವ ಎನ್ನುವಂಥದ್ದರ ಮೂಲ ಉದ್ದೇಶವು ಸಂಘದ ಪ್ರಾರ್ಥನೆಯಲ್ಲಿ ಹೇಳಿರುವಂತೆ, ಸಮುತ್ಕರ್ಷ ಮತ್ತು ನಿಃಶ್ರೇಯಸ್ಸು. ಭೌತಿಕ ಅಭ್ಯುದಯ ಮತ್ತು ಪಾರಮಾರ್ಥಿಕ ಶ್ರೇಯಸ್ಸು ಎರಡನ್ನೂ ಸಾಧಿಸುವುದು. ಅದನ್ನೇ ರಾಮರಾಜ್ಯ, ಧರ್ಮರಾಜ್ಯ ಎನ್ನಬಹುದು. ಅದಕ್ಕೆ ಮೈಲುಗಲ್ಲುಗಳು ಎನ್ನುವುದಕ್ಕಿಂತ, ಕುರುಹುಗಳನ್ನು ಗುರುತಿಸಬಹುದು.
ಕೌಟುಂಬಿಕ ಜೀವನ ಮೌಲ್ಯಗಳನ್ನು ಅನುಸರಿಸಿದಾಗ ಕುಟುಂಬದ ಶಾಂತಿಯನ್ನು ಅಪೇಕ್ಷಿಸುತ್ತೇವೆ. ಕುಟುಂಬವು ಜೀವನ ನಿರ್ವಹಣೆಗೆ ಹಣ ಸಂಪಾದಿಸಬೇಕು ಹಾಗೂ ಇದ್ದಿದ್ದರಲ್ಲೇ ಸಮಾಧಾನವಾಗಿಯೂ ಇರಬೇಕು. ಅಸ್ಪೃಶ್ಯತೆ ನಿವಾರಣೆ ಆಗಬೇಕು. ಈ ದೇಶದ ಎಲ್ಲ ಮುಖಗಳಲ್ಲೂ ರಾಷ್ಟಿçÃಯತೆ ಅಭಿವ್ಯಕ್ತಗೊಳ್ಳಬೇಕು. ಅನ್ನ, ಅರಿವೆ, ವಿದ್ಯೆ ಎಲ್ಲರಿಗೂ, ಎಷ್ಟು ಅವಶ್ಯಕತೆಯಿದೆಯೋ ಅಷ್ಟು ಸಿಗಬೇಕು. ಸಾಮಾಜಿಕ ಸಮ್ಮಾನ, ಪ್ರತಿಷ್ಠೆ ಎಲ್ಲರಿಗೂ ಲಭಿಸಬೇಕು. ಲಿಂಗಾಧಾರಿತ, ಜನ್ಮಾಧಾರಿತ ಭೇದ ಇರಬಾರದು. ಬೇರೆಯವರಿಂದ ಆಗುವ ಆಕ್ರಮಣವನ್ನು ಭೌಗೋಳಿಕವಾಗಿರಲಿ ಅಥವಾ ಸಾಂಸ್ಕೃತಿಕವಾಗಲಿ ತಡೆಯುವ ಶಕ್ತಿ ಭಾರತಕ್ಕೆ ಇರಬೇಕು. ಜಗತ್ತಿನ ಯಾವುದೇ ಭಾಗ, ದೇಶ, ಸಮಾಜ ಸಂಕಷ್ಟ ಎದುರಿಸಿದಾಗ ಸಹಾಯ ಮಾಡುವ ಶಕ್ತಿ ನಮಗಿರಬೇಕು. ಇವು ಪರಮವೈಭವದೆಡೆಗೆ ಸಾಗುತ್ತಿರುವ ಕುರುಹುಗಳು.
ಕವಿ ರವೀಂದ್ರನಾಥ ಟಾಗೋರರು ತಮ್ಮ Wheಡಿe ಖಿhe ಒiಟಿಜ Is Wiಣhouಣ ಈeಚಿಡಿ ಕವಿತೆಯಲ್ಲಿ ಹೇಳಿರುವುದಕ್ಕೆ ಅನುಗುಣವಾಗಿ ಹಾಗೂ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ “ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ | ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ||” ಎಂಬ ಸ್ಥಿತಿಯೂ ಪರಮವೈಭವವೆ.
ವಿಕ್ರಮ: ಹಿಂದೂಗಳು ಎನ್ನಲು ಹೆಮ್ಮೆ ಪಡುವಂತಹ ಸನ್ನಿವೇಷ ನಿರ್ಮಾಣ ಮಾಡಿರುವುದು, ಹಿಂದೂಗಳು ಸಂಘಟಿತರಾಗಬಹುದು ಎಂದು ನಿರೂಪಿಸಿರುವುದು ನೂರು ವರ್ಷಗಳಲ್ಲಿ ಸಂಘದ ಅತಿದೊಡ್ಡ ಸಾಧನೆ. ಸಂಘದ ಈ ಕಾರ್ಯದ ಪ್ರಭಾವ ಸಾಕಷ್ಟಿದೆ. ಆದರೆ ಮೀಸಲಾತಿ (ಅಲ್ಪಸಂಖ್ಯಾತ ಮಿಸಲಾತಿ), ಶಿಕ್ಷಣ ಕ್ಷೇತ್ರದ ಸೌಲಭ್ಯ ಸೇರಿ ಸರ್ಕಾರದ ಕೆಲವು ನೀತಿಗಳ ಕಾರಣಕ್ಕೆ ಅನೇಕರು ತಾವು ಹಿಂದೂಗಳಲ್ಲ ಎನ್ನುತ್ತಿದ್ದಾರಲ್ಲ?
ದತ್ತಾತ್ರೇಯ ಹೊಸಬಾಳೆ: ಇವತ್ತು ಇರುವಂತಹ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ಒತ್ತಡದಲ್ಲಿ ಇಂಥದ್ದೆಲ್ಲ ಆಗುತ್ತಿದೆ. ನಮ್ಮ ಸಮಾಜದಲ್ಲಿ ಹಿಂದೂಗಳು ಯಾರು? ಹಿಂದೂ ಸಮಾಜ ಎನ್ನುವುದು ಕಿರಾಣಿ ಅಂಗಡಿ ಇದ್ದಂತೆ. ಕಿರಾಣಿ ಅಂಗಡಿಯಲ್ಲಿ ಹೋಗಿ ನನಗೆ ಒಂದು ಕೆ.ಜಿ. ಕಿರಾಣಿ ಕೊಡಿ ಎಂದರೆ ಏನು ಕೊಡುತ್ತಾರೆ? ಅಲ್ಲಿ ಕಿರಾಣಿ ಎನ್ನುವುದು ಯಾವುದೂ ಇಲ್ಲ. ಬೇಳೆ, ತಂಗಿನಕಾಯಿ, ಊದುಬತ್ತಿ, ಅಕ್ಕಿ ಇನ್ನೇನೋ ಇದೆ, ಅವೆಲ್ಲವೂ ಸೇರಿ ಕಿರಾಣಿ ಅಂಗಡಿ. ಹಿಂದೂ ಎನ್ನುವವರು ಯಾರೂ ಇಲ್ಲ, ಆದರೆ ಎಲ್ಲರೂ ಸೇರಿ ಹಿಂದೂಗಳು. ಹಿಂದೂ ಎನ್ನುವುದು ಮತಾಚರಣೆ ಅಲ್ಲ. ಅದು ಜೀವನದೃಷ್ಟಿ. ಸಾಂಸ್ಕೃತಿಕ ದರ್ಶನ, ಆಚರಣೆ. ಈ ಕಲ್ಪನೆ ಕೆಲವರಿಗೆ ಇಲ್ಲವಾದ್ಧರಿಂದ ನಾವು ಜೈನರು, ನಾವು ಲಿಂಗಾಯತರು ಎನ್ನುತ್ತಾರೆ. ಅವರು ಹಿಂದೂಗಳಾಗಿರುವುದರಿAದಲೇ ಹೀಗೆ ಹೇಳಲು ಆಗುತ್ತಿರುವುದು. ಆ ವೈವಿಧ್ಯತೆ ಇರುವುದೇ ಹಿಂದೂ ಧರ್ಮದಲ್ಲಿ ಅಲ್ಲವೇ? ಈ ಮಾನಸಿಕತೆಗೆ ಸ್ವಲ್ಪಮಟ್ಟಿಗೆ ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಬ್ರಿಟಿಷರ ಕಾಲದಿಂದ ಬಂದ ವಿಚಾರಗಳ ಪ್ರಭಾವವೂ ಇದೆ.
ವಿಕ್ರಮ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು, ವಿದ್ಯಾರ್ಥಿಗಳು ಆರ್ಎಸ್ಎಸ್ ಶಾಖೆಗೆ ಬರುವುದು ಬಹಳ ಸವಾಲಿನ ಕೆಲಸ. ಹಳ್ಳಿಗಳಲ್ಲಿ ಕೆಲಮಟ್ಟಿಗೆ ಈ ಸಮಸ್ಯೆ ಇಲ್ಲದಿದ್ದರೂ ಭಾರತದಲ್ಲಿ ಆಗುತ್ತಿರುವ ನಗರೀಕರಣದ ವೇಗ ನೋಡಿದರೆ ಇನ್ನು ಎಷ್ಟು ಕಾಲ ಹಳ್ಳಿಗಳು ಹಳ್ಳಿಗಳಾಗಿ ಉಳಿಯುತ್ತವೆ ಎನ್ನುವ ಪ್ರಶ್ನೆಯಿದೆ. ಈ ಹಿನ್ನೆಲೆಯಲ್ಲಿ ಶಾಖೆ ಎನ್ನುವ ಪರಿಕಲ್ಪನೆ, ಅದರ ಸ್ವರೂಪ ಇಂದಿಗೆ ಹಾಗೂ ಭವಿಷ್ಯಕ್ಕೆ ಎಷ್ಟರಮಟ್ಟಿಗೆ ಪ್ರಸ್ತುತ? ಇದರ ಬಗ್ಗೆ ಸಂಘದಲ್ಲಿ ಚಿಂತನೆ ನಡೆದಿದೆಯ? ಮುಂದೆ ಶಾಖೆಯ ಸ್ವರೂಪ ಹೇಗಿರುತ್ತದೆ?
ದತ್ತಾತ್ರೇಯ ಹೊಸಬಾಳೆ: ಶಾಖೆಯ ಸ್ವರೂಪ ಒಂದು ಗಂಟೆಯ ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸಕ್ಕೆ ಬೇಕಾಗುವಂತಹ ಚಟುವಟಿಕೆ ನಡೆಸುವುದು, ಎಲ್ಲರೂ ಒಟ್ಟಾಗಿ ಒಂದು ಸ್ಥಾನದಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಬರುವುದು. ಎಲ್ಲರೂ ಒಟ್ಟಾಗಿ ಸೇರಬೇಕು ಎನ್ನುವುದು ಮೂಲ ಉದ್ದೇಶ. ಇಂದು ಕಬಡ್ಡಿ ಆಡುತ್ತಿರುವ ಜಾಗದಲ್ಲಿ ಭವಿಷ್ಯದಲ್ಲಿ ವಾಲಿಬಾಲ್ ಆಡಬಹುದು. ಕೋವಿಡ್ ಸಮಯದಲ್ಲಿ ಸಂಘಸ್ಥಾನದಲ್ಲಿ ಶಾಖೆ ಮಾಡಲಾಗುತ್ತಿರಲಿಲ್ಲ, ಆಗ ಗೃಹಶಾಖೆ, ವರ್ಚುವಲ್ ಶಾಖೆ ಮಾಡಿದ್ದೇವೆ. ‘ಎಲ್ಲರೂ ಒಂದೆಡೆ ಸೇರಿ ಕಂಬಳಿ ಹೊದ್ದುಕೊಂಡು ಮಲಗುವುದು, ಎದ್ದುಹೋಗುವದನ್ನೇ ಬೇಕಾದರೂ ಶಾಖೆ ಎನ್ನಬಹುದು. ಒಂದು ಕಡೆ ಬರುವುದೇ ಇಲ್ಲಿ ಮುಖ್ಯ’ ಎಂದು ಸ್ವತಃ ಡಾಕ್ಟರ್ಜಿ ಹೇಳಿದ್ದಾರೆ. ಮೂಲಸತ್ವವನ್ನು ಉಳಿಸಿಕೊಂಡು ಬಾಹ್ಯರಚನೆಯನ್ನು ಪರಿಸ್ಥಿತಿಗೆ ತಕ್ಕಂತೆ ಬದಲಿಸಿಕೊಳ್ಳಬಹುದು. ಈಗಾಗಲೆ ಅನೇಕ ಕಡೆ ಮಾಡಲಾಗಿದೆ.
ಈಗ ಬೇರೆ ದೇಶಗಳಲ್ಲಿರುವ ಹಿಂದೂ ಕುಟುಂಬಗಳ ಮಕ್ಕಳು ಶಾಖೆಗೆ ಬರುವಂಥದ್ದನ್ನೇ ಅತ್ಯಂತ ಆಕರ್ಶಕವಾದದ್ದು ಎಂದುಕೊAಡಿದ್ದಾರೆ. ಏಕೆಂದರೆ ಶಾಖೆಯಲ್ಲಿ ಸಿಗುವ ಆತ್ಮೀಯತೆ, ಸಂಸ್ಕಾರ, ಜೀವನದ ಪಾಠ ಅವರಿಗೆ ಬೇರೆಡೆ ಸಿಗುತ್ತಿಲ್ಲ. ಶಾಖೆಗಳಲ್ಲಿ ಏನೇನು ಪ್ರಯೋಗ ಮಾಡಬಹುದು ಎನ್ನುವ ಚರ್ಚೆ, ವಿಶ್ಲೇಷಣೆ, ಬದಲಾವಣೆ ಆಗಾಗ್ಗೆ ನಡೆಯುತ್ತಿರುತ್ತದೆ. ಮೂಲ ಚಿಂತನೆ ಬದಲಾವಣೆ ಆಗಬಾರದು, ಪ್ರತಿನಿತ್ಯ ನಿಶ್ಚಿತ ಅವಧಿಯಲ್ಲಿ ಒಟ್ಟಾಗಿ ಸೇರಬೇಕು ಎನ್ನುವುದಷ್ಟೇ ಆಶಯ. ಸೇರುವುದರಿಂದಲೇ ಸಂಸ್ಕಾರ, ಸಂಘಟನೆ ನಿರ್ಮಾಣ ಆಗುತ್ತದೆ, ಇಲ್ಲದಿದ್ದರೆ ಆಗುವುದಿಲ್ಲ ಎನ್ನುವುದು ಸಂಘದ ಅನುಭವ.
ವಿಕ್ರಮ: ಸಂಘ ಎರಡನೇ ಶತಮಾನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮುಖ್ಯವಾಗಿ ಸಂಘದ ಸ್ವಯಂಸೇವಕರಿಗೆ, ಯುವಕರಿಗೆ ಏನನ್ನು ಹೇಳಲು ಬಯಸುತ್ತೀರಿ?
ದತ್ತಾತ್ರೇಯ ಹೊಸಬಾಳೆ: ನಾವೆಲ್ಲರೂ ಈ ದೇಶದ ಗೌರವವನ್ನು ಹೆಚ್ಚಿಸಬೇಕು. ಅದಕ್ಕಾಗಿ ನನ್ನ ಕೊಡುಗೆ ಏನು ಎನ್ನುವ ಕುರಿತು ಪ್ರತಿಯೊಬ್ಬ ನಾಗರಿಕನೂ ಯೋಚನೆ ಮಾಡಬೇಕು. ಅದಕ್ಕಾಗಿ ತನ್ನ ಸಮಯವನ್ನು ಒಂದಷ್ಟು ಮೀಸಲಿಡಬೇಕು. ಭಾರತ ಬಲಿಷ್ಠವಾಗುವುದು, ಸಮೃದ್ಧಿಗೊಳ್ಳುವುದು ಕೇವಲ ಭಾರತಕ್ಕಾಗಿ ಅಲ್ಲ. ಭಾರತ ಸಮೃದ್ಧಿಯಾಗುವುದು ಎಂದರೆ ಜಗತ್ತಿನ ಕತ್ತಲನ್ನು ದೂರ ಮಾಡುವ ದೀಪಸ್ಥಂಭವಾಗುವುದು.
ಸ್ವಯಂಸೇವಕರು ತಮ್ಮ ಸಮಯ, ಶಕ್ತಿ, ಪ್ರತಿಭೆಯನ್ನು ವಿನಿಯೋಗಿಸಿ ಹೆಚ್ಚೆಚ್ಚು ಜನರನ್ನು ಈ ಪ್ರವಾಹದಲ್ಲಿ ಜೋಡಿಸಬೇಕು. ಪರಸ್ಪರ ಸಣ್ಣ ಪುಟ್ಟ ಭೇದಗಳನ್ನು ಮರೆತು ಒಂದಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಇರುವ ಸಜ್ಜನ ಸಕಾರಾತ್ಮಕ ಶಕ್ತಿಯನ್ನು ಈ ದೃಷ್ಟಿಯಲ್ಲಿ ನಡೆಸಲು ಪ್ರಯತ್ನಿಸಬೇಕು.