ಅಕ್ಟೋಬರ್ 20, 2026, ನಾಗಪುರ


ಸ್ಮರಣೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಾಬ್ದಿ ಕಾರ್ಯಕ್ರಮಗಳ ಸಮಾರೋಪದ ಸಂದರ್ಭದಲ್ಲಿ, ವಿಜಯದಶಮಿ ಉತ್ಸವವನ್ನು ಆಚರಿಸಲು ಇಂದು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಈ ವರ್ಷವು ಸಂತ ಶಿರೋಮಣಿ ರವಿದಾಸಜೀ ಮಹಾರಾಜ್ ಅವರ 650ನೇ ಜಯಂತಿ ವರ್ಷವೂ ಆಗಿದೆ. ಸಂತ ರವಿದಾಸ ಅವರ ಜೀವನ, ಬೋಧನೆಗಳು ಮತ್ತು ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಶಾಖೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪರಿಶ್ರಮ, ತಪಸ್ಸು ಮತ್ತು ತ್ಯಾಗಮಯ ಜೀವನದ ಮೂಲಕ ಹಾಗೂ ತಮ್ಮದೇ ಆದ ನಿಷ್ಠೆಯ ಮಾದರಿಯನ್ನು ತೋರಿಸುವ ಮೂಲಕ, ಅವರು ಸಮಾಜದಲ್ಲಿ ಭಕ್ತಿ, ಸ್ವಧರ್ಮನಿಷ್ಠೆ ಮತ್ತು ಸಾಮಾಜಿಕ ಸಾಮರಸ್ಯದ ಭಾವನೆಯನ್ನು ಜಾಗೃತಗೊಳಿಸಿದರು. ಸ್ವಧರ್ಮವನ್ನು ಪಾಲಿಸುತ್ತಿದ್ದ ಜನರ ಮೇಲೆ ವಿದೇಶಿ ಆಕ್ರಮಣಕಾರರು ನಡೆಸುತ್ತಿದ್ದ ದೌರ್ಜನ್ಯ ಮತ್ತು ಪೀಡನೆಯಿಂದ ದೇಶವು ನರಳುತ್ತಿದ್ದ ಸಮಯದಲ್ಲಿ ಅವರು ಈ ಕಾರ್ಯವನ್ನು ಮಾಡಿದರು. ಸಂತ ರವಿದಾಸ ಅವರು ತಮ್ಮ ಮಾತುಗಳ ಮೂಲಕ ಮತ್ತು ಸ್ವಜೀವನದ ಉದಾಹರಣೆಯ ಮೂಲಕ ನೀಡಿದ ಬೋಧನೆಗಳು ಇಂದು ಕೂಡ ನಮಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತಿವೆ.
ಈ ವರ್ಷವು ಸ್ವಧರ್ಮ ಮತ್ತು ಶ್ರದ್ಧೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಇಬ್ಬರು ಮಹಾನ್ ವ್ಯಕ್ತಿಗಳ ಸ್ಮರಣೆಯ ವರ್ಷವೂ ಆಗಿದೆ. ಆರ್ಯಸಮಾಜದ ತಪಸ್ವೀ ಸನ್ಯಾಸಿ, ಪ್ರಖರ ಧರ್ಮಾಭಿಮಾನಿ, ಮೇರುವಿದ್ವಾಂಸ-ಶಿಕ್ಷಣತಜ್ಞ, ಧೀರ ಸ್ವಾತಂತ್ರ್ಯ ಹೋರಾಟಗಾರ ಮತ್ತು ‘ಶುದ್ಧಿ ಚಳವಳಿ‘ಯ ಪ್ರವರ್ತಕರಾಗಿದ್ದ ಪೂಜ್ಯ ಸ್ವಾಮಿ ಶ್ರದ್ಧಾನಂದರ ಬಲಿದಾನಕ್ಕೆ 100 ವರ್ಷಗಳು ಪೂರ್ಣಗೊಂಡಿವೆ. ಉತ್ಕಲ (ಒಡಿಶಾ)ದ ಅರಣ್ಯವಾಸಿ ಸಮುದಾಯಗಳ ನಡುವೆ ವಾಸಿಸುತ್ತಾ, ಅಲ್ಲಿನ ಜನರ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಅಂತಿಮವಾಗಿ ಅವರ ಮಧ್ಯೆಯೇ ಪ್ರಾಣತ್ಯಾಗ ಮಾಡಿದ ಪೂಜ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವವನ್ನೂ ಈ ವರ್ಷ ಆಚರಿಸಲಾಗುತ್ತಿದೆ. ಯಾವ ಸ್ವತ್ವದ (ಸ್ವಂತಿಕೆಯ) ರಕ್ಷಣೆಗಾಗಿ ಈ ಮಹಾನ್ ವ್ಯಕ್ತಿಗಳು ಅತ್ಯುನ್ನತ ತ್ಯಾಗವನ್ನು ಮಾಡಿದ್ದರೋ, ಅದೇ ರೀತಿಯ ಆತ್ಮಬೋಧೆಯನ್ನು ಸಮಾಜದಲ್ಲಿ ಸ್ವದೇಶಿ ಉತ್ಸವಗಳ ಮೂಲಕ ಮೂಡಿಸಿದ್ದ, ‘ಹಿಂದೂ ಮೇಳ‘ದ ಪ್ರವರ್ತಕ ಮತ್ತು ಪ್ರೇರಕರಾಗಿದ್ದ ಬಂಗಾಳದ ಶ್ರೀ ರಾಜ್ ನಾರಾಯಣ್ ಬಸು ಅವರ 200ನೇ ಜಯಂತಿ ವರ್ಷವೂ ಇದಾಗಿದೆ.
ಕಳೆದ ನೂರು ವರ್ಷಗಳಿಂದ ಸಂಘದ ಕಾರ್ಯವೂ ಈ ‘ಸ್ವತ್ವ’ದ ಆಧಾರದಲ್ಲಿ, ಅಸ್ಮಿತೆ ಮತ್ತು ಮೌಲ್ಯಗಳ ಬುನಾದಿಯ ಮೇಲೆ ಭಾರತವನ್ನು ಸಂಘಟಿಸುವ ಮತ್ತು ಬಲಪಡಿಸುವ ಕೆಲಸವನ್ನು ಮಾಡುತ್ತಿದೆ. ಸಂಘದ ಶತಾಬ್ದಿ ಆಚರಣೆಯ ಭಾಗವಾಗಿ, ಐದು ಜೀವನ ಪರಿವರ್ತನಾತ್ಮಕ ಉಪಕ್ರಮಗಳನ್ನು ಗುರುತಿಸಲಾಗಿದೆ – ಈ ಉಪಕ್ರಮಗಳನ್ನು ಮೊದಲು ಸ್ವಯಂಸೇವಕರಿಂದ ಪ್ರಾರಂಭಿಸಲಾಗಿದ್ದು, ನಂತರ ಅವರ ಮೂಲಕ ಸಮಾಜಕ್ಕೆ ಕೊಂಡೊಯ್ಯಲಾಗುತ್ತದೆ. ಸ್ವತ್ವದ ಬೋಧೆ ಹಾಗೂ ಸ್ವದೇಶಿಯ ಆಚರಣೆಯನ್ನು ಉತ್ತೇಜಿಸುವುದೂ ಅವುಗಳಲ್ಲಿ ಒಂದು ಪ್ರಮುಖ ಉಪಕ್ರಮವಾಗಿದೆ.

ನಮ್ಮ ‘ಸ್ವತ್ವ’ದ ಬುನಾದಿ:
ನಮ್ಮ ಸಂವಿಧಾನದಲ್ಲಿ, ನಮ್ಮನ್ನು ನಾವೇ ‘ಒಂದೇ ಜನ’ – ಅಂದರೆ “ಭಾರತದ ಪ್ರಜೆಗಳಾದ ನಾವು” (We the people of India) ಎಂದು ಸಂಬೋಧಿಸಿಕೊಂಡಿದ್ದೇವೆ. ನಮ್ಮ ಸಮಾಜವು ಅತ್ಯಂತ ವಿವಿಧತೆಯಿಂದ ಕೂಡಿದ್ದರೂ, ಆಳವಾದ ಭಾವನಾತ್ಮಕ ಏಕತೆಯಿಂದ ಒಂದಾಗಿದ್ದೇವೆ. ಇದೇ ಸಂವಿಧಾನವು, ನಮ್ಮ ಜನರ ನಡುವಿನ ಈ ಏಕತೆಯ ಬೆಸುಗೆಯನ್ನು ನಿರಂತರವಾಗಿ ಬಲಪಡಿಸುವ ಮತ್ತು ಆಳಕ್ಕಿಳಿಸುವ ದಿಗ್ದರ್ಶನವನ್ನು ಸ್ಪಷ್ಟ ಶಬ್ದಗಳಲ್ಲಿ ತನ್ನ ಮಾರ್ಗದರ್ಶಿ ತತ್ತ್ವವಗಳಲ್ಲಿ ನಿರೂಪಿಸಿದೆ. ಈ ಭಾವನಾತ್ಮಕ ಬಂಧವನ್ನು ಸೃಷ್ಟಿಸುವ ಪ್ರತ್ಯಕ್ಷ ಅನುಭೂತಿ ಮತ್ತು ಆ ಅನುಭೂತಿ ಹಾಗೂ ಅದನ್ನು ತಿಳಿಹೇಳುವ ವಿಶ್ವದ ಸರ್ವೋತ್ಕೃಷ್ಟ ತತ್ತ್ವಜ್ಞಾನವು ನಮ್ಮ ಬಳಿ ಇದ್ದರೂ ಕೂಡ, ದುರದೃಷ್ಟವಶಾತ್, ನಮ್ಮ ನಡವಳಿಕೆಯು ಅದಕ್ಕಿಂತ ಸಂಪೂರ್ಣ ಭಿನ್ನವಾಗಿ ಸಾಗಿತು. ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಪರಿಣಾಮವಾಗಿ, ನಾವು ವಿಶ್ವಗುರುವಿನ ಉನ್ನತ ಸ್ಥಾನದಿಂದ ಎಷ್ಟೋ ಕೆಳಕ್ಕಿಳಿದು, ಅನೇಕ ಶತಮಾನಗಳ ಕಾಲ ವಿದೇಶಿ ದಾಸ್ಯವನ್ನು ಅನುಭವಿಸಬೇಕಾಯಿತು. ಭೀಮಪ್ರಯತ್ನಗಳು ಹಾಗೂ ಬಲಿದಾನಗಳ ಮೂಲಕ ಆ ಕಷ್ಟದ ದಿನಗಳಿಂದ ಮುಕ್ತಿ ಪಡೆದು ನಾವು ಮತ್ತೊಮ್ಮೆ ಏಕತೆ ಮತ್ತು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ. ಆದ್ದರಿಂದ, ನಾವು ನಮ್ಮ ವಿಸ್ಮೃತಿಯನ್ನು ದೂರಗೊಳಿಸಿ, ಆ ತತ್ತ್ವವನ್ನೂ ಸ್ಪಷ್ಟ ರೂಪದಲ್ಲಿ ಅರ್ಥೈಸಿಕೊಳ್ಳಬೇಕು, ಮನಸ್ಸಿನಿಂದ ಸ್ವೀಕರಿಸಬೇಕು ಹಾಗೂ ಅದಕ್ಕೆ ಅನುರೂಪವಾದ ಗುಣಗಳನ್ನು ನಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ಆಯಾಮದಲ್ಲೂ ಬೆಳೆಸಬೇಕಿದೆ. ದೇಶದ ಸ್ವಾಧೀನತೆಗಾಗಿ ಎಷ್ಟೊಂದು ತಪಸ್ಸು ಹಾಗೂ ಸಮರ್ಪಣೆ ನಡೆದಿತ್ತೋ ಅದಕ್ಕಿಂತಲೂ ಹೆಚ್ಚು ಅಗತ್ಯ ಈಗ ಇದೆ ಎಂಬುದು ಗಮನಕ್ಕೆ ಬರುತ್ತಿದೆ.

ವಿವಿಧ ಮತ-ಪಂಥಗಳು, ಸಂಪ್ರದಾಯಗಳು, ಪ್ರದೇಶಗಳು, ಜಾತಿಗಳು, ಭಾಷೆಗಳು, ಆಹಾರ ಪದ್ಧತಿಗಳು, ಆಚಾರ-ವಿಚಾರಗಳು ಮತ್ತು ಜೀವನಶೈಲಿಗಳ ಅಪಾರ ವಿವಿಧತೆಯಿರುವ ಭಾರತದಂತಹ ದೇಶದಲ್ಲಿ, ಈ ಎಲ್ಲಾ ವಿವಿಧತೆಗಳನ್ನು ಸ್ವೀಕರಿಸುವ, ಗೌರವಿಸುವ ಮತ್ತು ಅವುಗಳನ್ನು ನೈಜ ಆಪ್ತತೆಯಿಂದ ಕಾಣುವ ದೃಷ್ಟಿಕೋನವೇ ನಮ್ಮ ಏಕತೆಯ ಬುನಾದಿಯಾಗಿದೆ. ಸೌಭಾಗ್ಯದಿಂದಾಗಿ, ಭಾರತವು ಅನಾದಿಕಾಲದಿಂದಲೂ ಸಾಗಿಬಂದ ಪರಂಪರೆ ಮತ್ತು ಅಸಂಖ್ಯಾತ ಆಧ್ಯಾತ್ಮಿಕ ಮಹಾಪುರುಷರ ಪ್ರತ್ಯಕ್ಷ ಅನುಭೂತಿಯಿಂದ ನಿರಂತರವಾಗಿ ಸ್ಪಷ್ಟಗೊಳ್ಳುತ್ತಾ ಹಾಗೂ ದೃಢಗೊಳ್ಳುತ್ತಾ ಬಂದಿದೆ. ಸೃಷ್ಟಿಯ ವಿವಿಧತೆಯು ನೈಸರ್ಗಿಕವೂ ಮತ್ತು ಪರಿವರ್ತನಶೀಲವಾಗಿದ್ದರೂ, ಸಕಲ ಜೀವರಾಶಿಗಳ ಅಂತರ್ಗತ ಏಕತೆಯು ಶಾಶ್ವತವಾದ, ಸ್ಥಿರ ಮತ್ತು ಅಚಲವಾದ ಸತ್ಯವಾಗಿದೆ ಎಂಬುದನ್ನು ಈ ಪರಂಪರೆಯು ನಮಗೆ ಕಲಿಸುತ್ತದೆ. ಚಿಂತನಾಶೀಲ ಸ್ವಭಾವದ ಮಾನವನು, ಈ ಏಕತೆಯನ್ನು ತನ್ನೊಳಗೂ ಮತ್ತು ತನ್ನ ಸುತ್ತಲಿನ ಪರಿಸರದಲ್ಲೂ ಕಾಣುತ್ತಾನೆ. ಇದನ್ನು ಮಾಡುವುದರಿಂದಲೇ ಶಾಶ್ವತ ಹಾಗೂ ನಿತ್ಯಸುಖದ ಹುಡುಕಾಟವನ್ನೊಳಗೊಂಡ ಬಾಳಯಾನವು ಸಫಲವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ.
“इसी सत्य को विविध पक्ष से
वेदों में हमने गाया था,
निकट बिठाकर इसी तत्व को
उपनिषदों में समझाया था।
मंदिर – मठ – गुरुद्वारे जाकर
यही ज्ञान सत्संग मिलेगा.”
“ವೇದಗಳಲ್ಲಿ ನಾವು ವೈವಿಧ್ಯಮಯವಾಗಿ ಸಾರಿದ್ದು ಇದೇ ಸತ್ಯವನ್ನು;
ಉಪನಿಷತ್ತುಗಳಲ್ಲಿ ಸನಿಹ ಕುಳಿತು ತಿಳಿಸಿಕೊಟ್ಟಿದ್ದು ಇದೇ ತತ್ತ್ವವನ್ನು.
ದೇವಾಲಯಗಳು, ಮಠಗಳು ಅಥವಾ ಗುರುದ್ವಾರಗಳಿಗೆ ಹೋಗಿ ನೋಡಿ—
ಅಲ್ಲೆಲ್ಲಾ ನಿಮಗೆ ದೊರೆಯುವುದು ಇದೇ ಜ್ಞಾನದ ಸತ್ಸಂಗ.”
ಎಲ್ಲಾ ರೀತಿಯ ವಿವಿಧತೆಯನ್ನು ಗೌರವಿಸುತ್ತಾ ಹಾಗೂ ಸ್ವೀಕರಿಸುತ್ತಾ, ಅವುಗಳನ್ನು ಸಂರಕ್ಷಿಸುವುದು ಭಾರತದ ಸಹಜ ಪ್ರವೃತ್ತಿಯಾಗಿದೆ. ಪರಿವರ್ತನಾಶೀಲತೆ ಹಾಗೂ ಕಾಲವಿಸಂಗತವಾದುದನ್ನು ಬದಲಾಯಿಸಬಲ್ಲ ನಮ್ಯತೆಯು (Flexibility) ಭಾರತದ ಸನಾತನ ದೃಷ್ಟಿಯ ಪರಿಣಾಮವಾಗಿದೆ. ಯಾವಾಗಲೆಲ್ಲಾ ಭಾರತದ ಜನರಲ್ಲಿ ಈ ಮನೋಭಾವವು ಅತ್ಯಂತ ಸರ್ವೋಚ್ಚವಾಗಿತ್ತೋ, ಆವಾಗಲೆಲ್ಲಾ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಜಗತ್ತಿಗೆ ಆದರ್ಶ ರಾಷ್ಟçವಾಗಿತ್ತು. ಆತ್ಮವಿಸ್ಮೃತಿ, ವಿಘಟನೆ ಮತ್ತು ಪರಸ್ಪರ ಸಂಪರ್ಕದ ಕೊರತೆಯಿಂದಾಗಿ ನಾವು ಬಲಹೀನ, ಸಂಕುಚಿತ ಹಾಗೂ ಅಹಂಕಾರಿ/ಭಯಗ್ರಸ್ತರಾದೆವು. ನಾವು ಈ ಆಚರಣೆಯನ್ನು ಕೈಬಿಟ್ಟಾಗಲೆಲ್ಲಾ ನಮ್ಮ ದುರ್ಗತಿ ಪ್ರಾರಂಭವಾಯಿತು. ನಾವು ಮತ್ತೊಮ್ಮೆ ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಅದರ ಆಧಾರದಲ್ಲಿ ಸ್ಮರಿಸುತ್ತಾ, ಸಂಘಟಿತರಾಗಿ ಮತ್ತು ಪರಸ್ಪರರ ಹಿತಕ್ಕಾಗಿ ಕಟಿಬದ್ಧರಾಗಬೇಕು.

ಸಂಘದ ಶತಾಬ್ದಿ ಕಾರ್ಯಕ್ರಮಗಳು:
ಸಂಘದ ಶತಾಬ್ದಿಯ ಸಂದರ್ಭದಲ್ಲಿ ಶಾಖೆಗಳ ಮತ್ತು ಸ್ವಯಂಸೇವಕರ ಸಂಪರ್ಕದ ವಿಸ್ತಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಜೊತೆಜೊತೆಗೆ, ದೇಶದಾದ್ಯಂತ ಮತ್ತು ವಿಶ್ವದಾದ್ಯಂತ ಭಾರತ, ಹಿಂದೂ ಮತ್ತು ಸಂಘದ ಬಗ್ಗೆ ವ್ಯಾಪಕ ಪ್ರಬೋಧನೆಯ ಯೋಜನೆಯನ್ನೂ ಕ್ರಿಯಾನ್ವಿತಗೊಳಿಸಲಾಯಿತು. ಇದುವರೆಗೆ ಸ್ವೀಕರಿಸಿದ ಕಾರ್ಯಕ್ರಮಗಳ ವರದಿ ಹೀಗಿದೆ:
• ಗೃಹ ಸಂಪರ್ಕ ಅಭಿಯಾನ (ಮನೆ ಮನೆ ಸಂಪರ್ಕ) – 4,61,527 ಹಳ್ಳಿಗಳು ಮತ್ತು 41,076 ನಗರೀಯ ವಸತಿಗಳಲ್ಲಿ ಒಟ್ಟು 10,19,88,511 ಮನೆಗಳನ್ನು ಸಂಪರ್ಕಿಸಲಾಗಿದೆ.
• ಪ್ರಮುಖ ನಾಗರಿಕ ಗೋಷ್ಠಿ 1,117 ಜಿಲ್ಲೆಗಳಲ್ಲಿ ನಡೆದ ಗೋಷ್ಟಿಗಳಲ್ಲಿ ಮಹಿಳೆಯರೂ ಸೇರಿದಂತೆ 4,26,497 ಪ್ರಮುಖ ಗಣ್ಯರು ಭಾಗವಹಿಸಿದ್ದರು.
• ಸದ್ಭಾವನಾ ಬೈಠಕ್ – 5,036 ಖಂಡಗಳಲ್ಲಿ (ತಾಲೂಕುಗಳಲ್ಲಿ) ನಡೆಯಿತು.
• ಹಿಂದೂ ಸಮ್ಮೇಳನ – 34,187 ಮಂಡಲಗಳಲ್ಲಿ ಆಯೋಜಿಸಲಾಗಿತ್ತು.
• ಯುವ ಸಮಾವೇಶ – 39,25,225 ಯುವಕರು ಉಪಸ್ಥಿತರಿದ್ದರು..
ಪಶ್ಚಿಮದ ತಥಾಕಥಿತ ಅಭಿವೃದ್ಧಿಹೊಂದಿದ ದೇಶಗಳಲ್ಲೂ, ಅಲ್ಲಿನ ಸಮಾಜಗಳಲ್ಲಿ ಭಾರತ, ಹಿಂದುತ್ವ ಮತ್ತು ಸಂಘದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದ ಸಂಘದ ಕೆಲವು ಕಾರ್ಯಕರ್ತರು ಅಲ್ಲಿಗೆ ಭೇಟಿ ನೀಡಿದ್ದರು. ಅಲ್ಲೂ ನಮ್ಮ ಸನಾತನ, ಸರ್ವಸದ್ಭಾವೀ ಭಾರತೀಯ ಸಂಸ್ಕೃತಿ; ಹಿಂದು ಸಮಾಜದ ಎಲ್ಲರನ್ನು ಒಳಗೊಳ್ಳುವ ಸ್ವಭಾವ ಹಾಗೂ ಸಂಘದ ಉದ್ದೇಶ ಮತ್ತು ಕಾರ್ಯಗಳ ಸರಿಯಾದ ಮತ್ತು ಸತ್ಯ ಸಂಗತಿಗಳನ್ನು ಜನರ ಮುಂದೆ ಇಡಲಾಯಿತು. ಇಂದು ಪ್ರಪಂಚದಾದ್ಯಂತ ಭಾರತದ ಬಗ್ಗೆ ಒಂದು ಕುತೂಹಲದ ಭಾವನೆ ಜಾಗೃತಗೊಳ್ಳುತ್ತಿದೆ. ಭೌತಿಕವಾದ, ವ್ಯಕ್ತಿವಾದ ಮತ್ತು ಸಂಯಮರಹಿತ ಉಪಭೋಗವನ್ನು ಆಧರಿಸಿದ ಅಪೂರ್ಣ ದೃಷ್ಟಿಯ ಕಾರಣದಿಂದಾಗಿ ಭೌತಿಕವಾಗಿ ಸಮೃದ್ಧವಾಗಿದ್ದರೂ ಈ ದೇಶಗಳು ಚಿಂತೆಗೀಡಾಗಿವೆ. ವಿವಿಧತೆಯನ್ನು ಹೇಗೆ ಸಂಭಾಳಿಸುವುದು? ವಿಕಾಸ ಮತ್ತು ಪರಿಸರವನ್ನು ಒಟ್ಟಿಗೆ ಕೊಂಡೊಯ್ಯುವುದು ಹೇಗೆ? ತಮ್ಮಂತೆ ಅಲ್ಲದವರೊಂದಿಗೆ ಆಪ್ತತೆಯ ಭಾವನೆಯಿಂದ ಹೇಗೆ ನಡೆದುಕೊಳ್ಳುವುದು? ಮತ್ತು ಕೌಟುಂಬಿಕ ಜೀವನ ಹಾಗೂ ಹೊಸ ಪೀಳಿಗೆಗೆ ನೀಡುವ ಸಂಸ್ಕಾರಗಳ ಕುಸಿತವನ್ನು ತಡೆಯುವುದು ಹೇಗೆ? ಎಂಬಂತಹ ಪ್ರಶ್ನೆಗಳಿಗೆ ಅವರ ಬಳಿ ಉತ್ತರಗಳಿಲ್ಲ. ಅದಕ್ಕಾಗಿಯೇ ಇಂದಿನ ಪ್ರಪಂಚವು ಭೂರಾಜಕೀಯ ಒತ್ತಡಗಳಿಂದ, ಆರ್ಥಿಕ ಅನಿಶ್ಚಿತತೆ, ಪರಿಸರ ಬಿಕ್ಕಟ್ಟುಗಳು ಮತ್ತು ವರ್ಚಸ್ಸಿಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ವಿನಾಶವನ್ನು ಕಾಣುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಭಾರತದ ಬಳಿ ಉತ್ತರಗಳಿವೆ ಎಂಬುದು ಅವರಿಗೆ ತಿಳಿದಿದೆ. ಆದ್ದರಿಂದ, ನಮ್ಮ ಕಾರ್ಯಕರ್ತರು ವ್ಯಕ್ತಪಡಿಸಿದ ವಿಚಾರಗಳನ್ನು ಉತ್ತಮ ರೀತಿಯಲ್ಲಿ ಆಲಿಸಲಾಯಿತು. ತದನಂತರ ಚರ್ಚೆಗಳೂ ನಡೆದವು. ಶತಾಬ್ದಿಯ ಸಂದರ್ಭದಲ್ಲಿ ದೇಶದಲ್ಲೂ ಮತ್ತು ಜಗತ್ತಿನಾದ್ಯಂತ ಪ್ರಾರಂಭವಾದ ಎಲ್ಲಾ ರೀತಿಯ ಸಂವಾದಗಳು ಭವಿಷ್ಯದಲ್ಲೂ ಸತತವಾಗಿ ಹಾಗೂ ನಿರಂತರವಾಗಿ ಮುಂದುವರಿಯುವಂತೆ ನಮ್ಮ ಕಾರ್ಯಕರ್ತರು ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ಪಂಚ ಪರಿವರ್ತನೆ (ಐದು ಉಪಕ್ರಮಗಳು) – ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವ-ಬೋಧೆ ಮತ್ತು ಸ್ವದೇಶಿ, ಹಾಗೂ ನಾಗರಿಕ ಶಿಷ್ಟಾಚಾರ – ಈ ಐದೂ ಉಪಕ್ರಮಗಳನ್ನು (ಪಂಚ ಪರಿವರ್ತನೆ) ಸಮಾಜದ ಎಲ್ಲಾ ವರ್ಗಗಳು ಮತ್ತು ಸ್ತರಗಳಲ್ಲೂ ಸ್ವಾಗತಿಸಲಾಗಿದೆ. ವಿಶ್ವದ ಇತರ ದೇಶಗಳಲ್ಲೂ ಇವುಗಳ ಅವಶ್ಯಕತೆಯ ಮನವರಿಕೆಯಾಗಿದೆ. ಇವು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳಲ್ಲ; ಬದಲಾಗಿ, ನಮ್ಮ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವ ವ್ಯಾವಹಾರಿಕ ಶೈಲಿಯಾಗಿದೆ. ಪ್ರತ್ಯಕ್ಷ ಅಭ್ಯಾಸಗಳಿಂದ ಮತ್ತು ಆ ಅಭ್ಯಾಸಗಳನ್ನು ಚಾರಿತ್ರö್ಯವನ್ನಾಗಿ ಪರಿವರ್ತಿಸುವ ಈ ಪ್ರಯತ್ನಗಳು ಜೀವನದ ಎಲ್ಲಾ ಆಯಾಮಗಳಲ್ಲೂ ನಿರಂತರವಾಗಿ ಮುಂದುವರಿಯಬೇಕು; ಆಗ ಪರಿವರ್ತನೆ ಸಾಧ್ಯ. ನಮ್ಮ ಸಮಾಜದಲ್ಲಿ, ಸಂಸ್ಕಾರಗಳ ಮೂಲಕ ಈ ರೀತಿಯ ಇಡೀ ಜಗತ್ತನ್ನು ಒಂದಾಗಿ ಹಿಡಿದಿಟ್ಟುಕೊಳ್ಳುವ ಧಾರ್ಮಿಕ ಜೀವನ ವಿಧಾನದ ಸಂಸ್ಕಾರಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಗಿಬಂದಿವೆ.

ವಿವೇಕಶೀಲ ನಡವಳಿಕೆಯ ಅವಶ್ಯಕತೆ:
ಪ್ರಸ್ತುತ ದಿನಗಳಲ್ಲಿ, ಕುಟುಂಬದ ಹಿರಿಯರ ಮೂಲಕ, ಶಾಲಾ ಪಠ್ಯಕ್ರಮಗಳ ಮೂಲಕ ಅಥವಾ ಸಾಮಾಜಿಕ ವಾತಾವರಣದ ಮೂಲಕ ಅಂತಹ ಸಂಸ್ಕಾರಗಳ ಲಭ್ಯತೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯೊಂದಿಗೆ, ಎಲ್ಲಾ ರೀತಿಯ ಮಾಹಿತಿ ಮತ್ತು ಸುದ್ದಿಗಳು ಈಗ ಸೋಶಿಯಲ್ ಮೀಡಿಯಾ (ಸಾಮಾಜಿಕ ಮಾಧ್ಯಮ) ಮೂಲಕ ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಾಗುತ್ತಿವೆ. ಹಲವು ದೇಶಗಳಲ್ಲಿ, ಯುವ ಪೀಳಿಗೆಯು ಯಾವುದು ‘ಸೂಕ್ತ’ ಮತ್ತು ಯಾವುದು ‘ಸೂಕ್ತವಲ್ಲದ’ ಎಂಬ ವಿವೇಚನೆಯನ್ನು ಬಳಸದೆ ಈ ಮಾಧ್ಯಮಗಳ ಮೂಲಕ ಬರುವ ಮಾಹಿತಿಯನ್ನು ಯಥಾವತ್ತು ಸ್ವೀಕರಿಸುತ್ತಿದೆ. ಇದರ ದುಷ್ಪರಿಣಾಮಗಳನ್ನು ಅನುಭವಿಸಿದ ನಂತರ, ಆ ದೇಶಗಳು ಇಂತಹ ಮಾಧ್ಯಮ ವೇದಿಕೆಗಳ ಮೇಲೆ ಕೆಲವು ನಿಯಮಗಳು ಮತ್ತು ನಿರ್ಬಂಧಗಳನ್ನು ಹೇರಿವೆ. ನಮ್ಮ ದೇಶದಲ್ಲೂ ವಿಶೇಷವಾಗಿ ‘ಒಟಿಟಿ‘ (OTT) ವೇದಿಕೆಗಳಿಗೆ ಸಂಬಂಧಿಸಿದಂತೆ ಇಂತಹ ಕ್ರಮಗಳ ಅಗತ್ಯವನ್ನು ಸಮಾಜವು ಹೆಚ್ಚಾಗಿ ಗುರುತಿಸಿದೆ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಅದೇ ಸಮಯದಲ್ಲಿ, ಮಾಹಿತಿ ಮುಕ್ತವಾಗಿ ಲಭ್ಯವಿದ್ದಾಗಲೂ, ಯಾವುದು ‘ಸೂಕ್ತವಾದದ್ದು’ ಮತ್ತು ಯಾವುದು ‘ಸೂಕ್ತವಲ್ಲದ್ದು’ ಎಂಬುದನ್ನು ವಿವೇಚಿಸುವ ಗುಣವನ್ನು ಯುವ ಪೀಳಿಗೆಗೆ ಕಲಿಸಿಕೊಡಬೇಕಾಗಿದೆ. ಇಂತಹ ವಿವೇಚನೆಯ ಕೊರತೆಯಿಂದಾಗಿ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಅನೇಕ ದುಷ್ಪರಿಣಾಮಗಳು ಎದ್ದು ಕಾಣುತ್ತಿವೆ. ಇಂತಹ ವಿವೇಕದ ಕೊರತೆಯಿಂದಲೇ ಪ್ರಪಂಚದಾದ್ಯಂತ ಯುವ ಪೀಳಿಗೆಯು ಮಾರಕ ಮಾದಕವಸ್ತುಗಳ ದಾಸರಾಗಲು ಕಾರಣವಾಗುತ್ತಿದೆ. ಮಾದಕ ವ್ಯಸನವು ಒಂದು ಗಂಭೀರವಾದ ರಾಷ್ಟ್ರೀಯ ಸಮಸ್ಯೆಯಾಗಿದೆ. ಅದರ ಪರಿಹಾರಕ್ಕಾಗಿ ಸರ್ಕಾರ, ಆಡಳಿತ ಮತ್ತು ಸಮಾಜವು ಈ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಗುರುತಿಸಿ, ಇದನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಬೇಕು.
ಸಮಾಜದ ಪ್ರಸ್ತುತ ಪೀಳಿಗೆಯ ಪೋಷಕರು ಮತ್ತು ಹಿರಿಯರು ಯುವ ಪೀಳಿಗೆಯಲ್ಲಿ ಈ ವಿವೇಚನೆಯನ್ನು ಬೆಳೆಸಬೇಕು. ಅದೇ ಸಮಯದಲ್ಲಿ, ಯುವ ಪೀಳಿಗೆಯು ತನ್ನ ಕಡೆಯಿಂದ ಇಂತಹ ಹಾನಿಕಾರಕ ಅಭ್ಯಾಸಗಳ ಬೆಳವಣಿಗೆಗೆ ಕಾರಣವಾಗುವ ಎಲ್ಲಾ ಪ್ರಭಾವಗಳು ಮತ್ತು ಚಟುವಟಿಕೆಗಳಿಂದ ದೂರವಿರಬೇಕು. ಈ ದೃಷ್ಟಿಕೋನದಿಂದ, ಸ್ವಯಂಸೇವಕರು ಭಾರತದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿರುವ ಎಲ್ಲರನ್ನೂ ಒಗ್ಗೂಡಿಸಿ, ಇದರ ವಿರುದ್ಧ ದೇಶವ್ಯಾಪಿ ಆಂದೋಲನವನ್ನು ನಿರ್ಮಿಸಲು ಶ್ರಮಿಸಲಿದ್ದಾರೆ.
ಮುಂಬರುವ ದಿನಗಳಲ್ಲಿ, ಪರಮವೈಭವ ಸಂಪನ್ನ ವಿಶ್ವಗುರು ಭಾರತವನ್ನು ನಿರ್ಮಿಸುವ ಮಹತ್ತರವಾದ ಜವಾಬ್ದಾರಿಯು ಮುಂಬರುವ ಪೀಳಿಗೆಯ ಹೆಗಲ ಮೇಲೆ ಇರಲಿದೆ. ಈ ಸವಾಲನ್ನು ಸ್ವೀಕರಿಸಲು ಮತ್ತು ಅದನ್ನು ಯಶಸ್ವಿಯಾಗಿ ಉತ್ತರಿಸಲು, ನಮ್ಮ ಯುವಕರು ಎಲ್ಲಾ ಪ್ರಕಾರಗಳಲ್ಲೂ ಸಂಪೂರ್ಣವಾಗಿ ಸಜ್ಜಾಗಬೇಕಾಗಿದೆ.
ಸಂತುಲಿತ ಮತ್ತು ಸಮಗ್ರ ವಿಕಾಸದ ದೃಷ್ಟಿ:
ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯು ಮಾನವನಿಗೆ ಭೌತಿಕವಾಗಿ ಅನುಕೂಲಕರವಾದ ಜೀವನವನ್ನು ನಡೆಸಲು ಮತ್ತು ಜ್ಞಾನ ಹಾಗೂ ತರ್ಕದ ಆಧಾರದ ಮೇಲೆ ತನ್ನ ನಡವಳಿಕೆಯನ್ನು ನಿರ್ದೋಷವಾಗಿ ಸುಧಾರಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ, ಹೊಸ ಜ್ಞಾನ, ವೈಜ್ಞಾನಿಕ ಬೆಳವಣಿಗೆಗಳು ಮತ್ತು ತಂತ್ರಜ್ಞಾನವನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕು ಹಾಗೂ ಅಳವಡಿಸಿಕೊಳ್ಳಬೇಕು. ಆದರೆ, ತಂತ್ರಜ್ಞಾನ ಎಂಬುದು ಕೇವಲ ಒಂದು ಸಾಧನ ಎಂಬುದನ್ನು ಗಮನಿಸಬೇಕು. ಅಭಿವೃದ್ಧಿಯನ್ನು ಕೇವಲ ಉಪಭೋಗವಾದಿ ಅಥವಾ ಭೌತಿಕ ದೃಷ್ಟಿಕೋನದಿಂದ ಮಾತ್ರ ನೋಡಿದಾಗ, ಅದು ತರುವ ಸೌಕರ್ಯ ಮತ್ತು ಸೌಲಭ್ಯಗಳಿಗಿಂತ ದೊಡ್ಡದಾದ ಹಾನಿಯನ್ನು ತರಬಹುದು.
ಇತ್ತೀಚೆಗೆ ನೇಪಾಳವು ಅನುಭವಿಸಬೇಕಾಗಿಬಂದ, ಸಾವಿರಾರು ಜನರ ಜೀವವನ್ನು ಬಲಿಪಡೆದ ಭೀಕರ ದುರಂತಕ್ಕೆ ಭಾರತ, ಟಿಬೆಟ್, ಭೂತಾನ್ ಮತ್ತು ಚೀನಾ ಸೇರಿದಂತೆ ಹಲವು ದೇಶಗಳಾದ್ಯಂತ ಹರಡಿರುವ ಹಿಮಾಲಯನ್ ಪ್ರದೇಶಗಳಲ್ಲಿ ನಡೆಯುತ್ತಿರುವ ಏಕಪಕ್ಷೀಯ ಅಭಿವೃದ್ಧಿಯ ದುಷ್ಪರಿಣಾಮಗಳೂ ಭಾಗಶಃ ಕಾರಣವಾಗಿವೆ. ಇಂತಹ ಬೃಹತ್ ಪ್ರಮಾಣದ ಜೀವಹಾನಿಯಿಂದ ಉಂಟಾದ ಆಳವಾದ ದುಃಖವನ್ನು ನಾವೆಲ್ಲರೂ ಅನುಭವಿಸುತ್ತೇವೆ ಮತ್ತು ಇಂತಹ ದುರಂತಗಳ ನಂತರ ಸಂತ್ರಸ್ತರಿಗೆ ಪರಿಹಾರ ಮತ್ತು ನೆರವು ನೀಡಲು ಸಹಜವಾಗಿಯೇ ಒಂದಾಗುತ್ತೇವೆ. ಆದರೆ, ನಾವು ಅಭಿವೃದ್ಧಿಯ ಸಮಗ್ರ ಮತ್ತು ಸಂತುಲಿತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಒಂದು ಸಾಧನವನ್ನು ಯಾವ ರೀತಿಯಲ್ಲಿ ಬಳಸಬೇಕು ಮತ್ತು ಅದರ ಬಳಕೆಯಲ್ಲಿ ಯಾವುದು ‘ಉಚಿತ’ ಅಥವಾ ಯಾವುದು ‘ಅನುಚಿತ’ ಎಂಬುದನ್ನು ನಿರ್ಧರಿಸುವವನು ಮಾನವನೇ ಆಗಿದ್ದಾನೆ. ಆದ್ದರಿಂದ, ಜ್ಞಾನ ಮತ್ತು ತಂತ್ರಜ್ಞಾನವನ್ನು ಗಳಿಸುವುದರ ಜೊತೆಗೆ, ಅವುಗಳ ಸರಿಯಾದ ಬಳಕೆಗೆ ಅಗತ್ಯವಾದ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಅದರ ಬಳಕೆಯನ್ನು ನಿಯಂತ್ರಿಸುವ ನೈತಿಕ ಮತ್ತು ಪ್ರಾಯೋಗಿಕ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅಣು ವಿಜ್ಞಾನದ ಜ್ಞಾನವು ಸ್ವಚ್ಛ ಇಂಧನಕ್ಕಿಂತ ಹೆಚ್ಚಾಗಿ ಜೀವಸಂಹಾರಕ ಅಸ್ತçಗಳನ್ನು ಉತ್ಪಾದಿಸುತ್ತದೆ ಮತ್ತು ಕೃತಕ ಬುದ್ಧಿಮತ್ತೆಯಂತಹ (Artificial Intelligence) ಅತ್ಯಂತ ಉಪಯುಕ್ತ ತಂತ್ರಜ್ಞಾನಗಳೂ ಸಹ ಜನರನ್ನು ಹಾದಿತಪ್ಪಿಸುವ, ವಂಚಿಸುವ ಮತ್ತು ಸುಳ್ಳನ್ನು ಹರಡುವ ಸಾಧನಗಳಾಗಿ ಬಳಕೆಯಾಗುತ್ತಲೇ ಇರುತ್ತವೆ.
ಈ ಕಾರಣದಿಂದಾಗಿಯೇ ಭಾರತದ ಸನಾತನ ಸಮಗ್ರ ಜೀವನ ದೃಷ್ಟಿಯು, ತನ್ನ ಪೂರ್ಣತೆ ಮತ್ತು ಏಕತೆಯ ಭಾವನೆಯಿಂದ, ಸೌಹಾರ್ದತೆ ಮತ್ತು ಸಂಯಮದ ಮೌಲ್ಯಗಳಲ್ಲಿ ಬೇರೂರಿರುವ ಸಂಸ್ಕೃತಿಯು ಇಡೀ ಜಗತ್ತಿನಲ್ಲಿ ವಿಕಸಿತಗೊಳ್ಳುವುದನ್ನು ಕಾಣಲು ಬಯಸುತ್ತದೆ. ನಮ್ಮ ಹಿರಿಯರು ಈ ದೃಷ್ಟಿಕೋನವನ್ನು “ಸಾ ಪ್ರಥಮಾ ಸಂಸ್ಕೃತಿ ವಿಶ್ವವಾರಾ” – ಅಂದರೆ ಇಡೀ ಜಗತ್ತನ್ನೇ ಅಪ್ಪಿಕೊಳ್ಳಲು ಅರ್ಹವಾದ ಅತ್ಯಂತ ಶ್ರೇಷ್ಠ ಸಂಸ್ಕೃತಿ ಎಂದು ವರ್ಣಿಸಿದ್ದಾರೆ. ಈ ದೃಷ್ಟಿಕೋನದ ಆಧಾರದ ಮೇಲೆ ಭಾರತವು, ಎಲ್ಲರಿಗೂ ಮಾದರಿಯಾಗಬಲ್ಲ ಸಮಗ್ರ ಮತ್ತು ಸಮನ್ವಿತವಾದ ಅಭಿವೃದ್ಧಿಯ ಹೊಸಮಾದರಿಯನ್ನು ಜಗತ್ತಿನ ಮುಂದೆ ಸ್ಥಾಪಿಸಲೇಬೇಕಾಗಿದೆ.
ಹಿಂದು ಭಾವ ಮತ್ತು ಸ್ವಭಾವ – ಏಕತೆಯ ಬುನಾದಿ
ಈ ಸನಾತನ ದೃಷ್ಟಿಯೇ ನಮ್ಮ ರಾಷ್ಟçದ ಚೇತನವಾಗಿದೆ. ಇದನ್ನು ಇಂದು ಭಾರತದ ಜನತೆ ಸೇರಿದಂತೆ ಇಡೀ ಜಗತ್ತಿನಲ್ಲಿ ‘ಹಿಂದೂ ವಿಶ್ವದೃಷ್ಟಿ‘ (Hindu World View) ಎಂದು ಕರೆಯಲಾಗುತ್ತದೆ. ಇದು ಯಾವುದೇ ನಿರ್ದಿಷ್ಟ ಪೂಜಾ ಪದ್ಧತಿ, ನಿರ್ದಿಷ್ಟ ಆಹಾರ ಪದ್ಧತಿ ಅಥವಾ ಜೀವನಶೈಲಿ, ಅಥವಾ ಯಾವುದೇ ನಿರ್ದಿಷ್ಟ ಸಾಮಾಜಿಕ ಅಥವಾ ರಾಜಕೀಯ ಸಿದ್ಧಾಂತ, ಯಾವುದೇ ನಿರ್ದಿಷ್ಟ ಜಾತಿ, ಭಾಷೆ ಅಥವಾ ಪ್ರದೇಶಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಇಲ್ಲ. ಈ ಎಲ್ಲಾ ಭೇದಭಾವಗಳನ್ನು ಮೀರಿ, ಆಧ್ಯಾತ್ಮಿಕತೆ, ಮಾನವೀಯತೆ ಮತ್ತು ವಿಶ್ವಬಂಧುತ್ವ ಇದರ ಪ್ರಮುಖ ಲಕ್ಷಣಗಳಾಗಿವೆ. ಭಾರತೀಯರಲ್ಲಿ ಇದೇ ಭಾವನೆಯು ಭಾರತೀಯತೆಯ ವ್ಯಾಖ್ಯಾನಕ್ಕೆ ಜನ್ಮ ನೀಡಿದೆ: ಭಾರತ ಎಂಬುದು ಜ್ಞಾನದ ಬೆಳಕಿನಲ್ಲಿ ತಲ್ಲೀನರಾಗಿರುವವರ ಭೂಮಿಯಾಗಿದೆ, ಇಲ್ಲಿ “ಭಾ” ಎಂದರೆ ಜ್ಞಾನದ ಬೆಳಕು. ಇಡೀ ಜಗತ್ತನ್ನು ಒಂದುಗೂಡಿಸುವ ಸಾಮರ್ಥ್ಯ ಮತ್ತು ಬಯಕೆಯನ್ನು ಹೊಂದಿರುವ ಈ ಹಿಂದು ಚಿಂತನೆಯನ್ನು ನೆನಪಿಸಿಕೊಳ್ಳುವುದು ಮತ್ತು ಪೋಷಿಸುವುದು ಭಾರತದ ಪ್ರಗತಿ ಮತ್ತು ಏಕತೆಗೆ ಅತ್ಯಗತ್ಯವಾದ ಪೂರ್ವಾಪೇಕ್ಷೆ ಆಗಿದೆ. ಈ ಭಾವನೆಯು ಮಾತೃಭೂಮಿಯ ಮೇಲಿನ ಉತ್ಕಟ ಭಕ್ತಿ, ನಾವೆಲ್ಲಾ ಭಾರತೀಯರು ನಮ್ಮ ಸಮಾನ ಪೂರ್ವಜರ ಪರಂಪರೆಯ ಗೌರವ ಹಾಗೂ ಆದರ್ಶಗಳಲ್ಲಿ ಮತ್ತು ಭಾರತದ ಶಾಶ್ವತ ಸಂಸ್ಕೃತಿಯ ಮೌಲ್ಯಗಳಿಗೆ ಅನುಗುಣವಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವ ನಿರಂತರ ಪ್ರಯತ್ನವು ಭಾರತದಲ್ಲಿ ವ್ಯಕ್ತವಾಗುತ್ತದೆ. ಪ್ರಾಚೀನ ಕಾಲದಿಂದಲೂ, ಭಾರತ ಭೂಮಿಯಲ್ಲಿ ವಾಸಿಸುವ ಜನರು ಇದೇ ವಿಶ್ವದೃಷ್ಟಿಯೊಂದಿಗೆ ಒಂದೇ ಸಮಾಜವಾಗಿ ಬಾಳುತ್ತಾ ಬಂದಿದ್ದಾರೆ.
ನಮ್ಮ ಭಾರತೀಯರ ಏಕತೆ – ಸ್ವಾಭಾವಿಕ ಮತ್ತು ಷರತ್ತುರಹಿತ:
ನಾವು ಪರಸ್ಪರ ಹಂಚಿಕೊಳ್ಳುವ ಬಂಧ ಮತ್ತು ಭಾರತದೊಂದಿಗಿನ ನಮ್ಮ ಸಂಬಂಧವು ಹೃದಯದಲ್ಲಿ ಬೇರೂರಿರುವ ಜೀವಂತ ಬಂಧಗಳಾಗಿವೆ, ಆದ್ದರಿಂದ ಇವು ಷರತ್ತುರಹಿತವಾಗಿವೆ. “ತೇರಾ ವೈಭವ ಅಮರ ರಹೇ ಮಾ, ಹಮ್ ದಿನ್ ಚಾರ್ ರಹೇಂ ನಾ ರಹೇಂ” (ಓ ತಾಯೇ, ನಿನ್ನ ವೈಭವವು ಶಾಶ್ವತವಾಗಿರಲಿ; ನಾವು ಇನ್ನು ಕೆಲವು ದಿನಗಳು ಬದುಕಿದ್ದರೂ ಇರದಿದ್ದರೂ ಚಿಂತೆಯಿಲ್ಲ) ಎಂಬ ಮಾತುಗಳಲ್ಲಿ ವ್ಯಕ್ತವಾದಂತೆ ಇವು ಏಕಪಕ್ಷೀಯ ಸ್ವರೂಪವಾಗಿವೆ. ಆಪ್ತತೆ, ಸ್ನೇಹ ಮತ್ತು ಬಾಂಧವ್ಯದ ಭಾವನೆಯ ಮೇಲೆ ಸ್ಥಾಪಿತವಾದ ಸಂಬಂಧಗಳು ಎಂದಿಗೂ ಷರತ್ತುಗಳಿಗೆ ಒಳಪಡುವುದಿಲ್ಲ. ಸಂಬAಧಗಳು ಬೆಳೆಯುವ ಈ ಬುನಾದಿಯ ಮೇಲೆ ನಾವು ದೃಢವಾಗಿ ನಿಂತರೆ ಸಾಕು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರದ ಕುರಿತಾಗಿ ಸಂಪೂರ್ಣ ಮತ್ತು ಷರತ್ತುರಹಿತ ಭಕ್ತಿಯ ಈ ಭಾವನೆಯನ್ನೇ ಪ್ರದರ್ಶಿಸಿದರು. ಅಂತಿಮವಾಗಿ ಬ್ರಿಟಿಷ್ ಸರ್ಕಾರವು ಭಾರತವನ್ನು ತೊರೆಯುವಂತೆ ಮಾಡಿದ್ದು ಇದೇ ಭಕ್ತಿಯಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಇದೇ ಹಿಂದು ಭಾವನೆಯನ್ನು ಜಾಗೃತಗೊಳಿಸಲು ಮತ್ತು ಇಡೀ ಸಮಾಜವನ್ನು ಒಂದು ಸುಸಂಘಟಿತ ಮತ್ತು ಶಕ್ತಿಯುತ ಸಮಾಜವಾಗಿ ನಿರ್ಮಿಸಲು ಶ್ರಮಿಸುತ್ತಿದೆ. ಶಕ್ತಿಯಿಲ್ಲದೆ ವೈಯಕ್ತಿಕ ಜೀವನದಿಂದ ಹಿಡಿದು ಜಾಗತಿಕ ಜೀವನದವರೆಗಿನ ಜೀವನಾಧಾರ, ಪ್ರಗತಿ ಮತ್ತು ರಕ್ಷಣೆ ಸಾಧ್ಯವಿಲ್ಲ. ಆದ್ದರಿಂದ, ಸಂಘಟಿತ ಮತ್ತು ಶಕ್ತಿಯುತ ಹಿಂದು ಸಮಾಜವನ್ನು ನಿರ್ಮಿಸಲು ಪ್ರತಿಪಾದಿಸುವುದು ಅಥವಾ ಕೆಲಸ ಮಾಡುವುದು ಎಲ್ಲಾ ಪಂಥಗಳನ್ನು ಗೌರವಿಸುವ ಭಾವನೆಗೆ ಅಥವಾ ರಾಷ್ಟçದ ಭಾವನಾತ್ಮಕ ಏಕತೆಗೆ ವಿರುದ್ಧವಾದದ್ದಲ್ಲ. ಹಿಂದು ಸಮಾಜದ ವಿಶ್ವದೃಷ್ಟಿ ಮತ್ತು ಪ್ರವೃತ್ತಿಯು ಸರ್ವಸಮ್ಮತವೂ ಒಳಗೊಳ್ಳುವಂತಹುದೂ ಆಗಿರುವುದರಿಂದ, ಇಂತಹ ಪ್ರಯತ್ನಗಳು ನಮ್ಮೆಲ್ಲರ ನಡುವಿನ ಭಾವನಾತ್ಮಕ ಐಕ್ಯ, ಸದ್ಭಾವನೆ ಮತ್ತು ಸನ್ನಡತೆಯನ್ನು ಬಲಪಡಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿರುವ ಇದೇ ಪ್ರವೃತ್ತಿ ಮತ್ತು ಮೌಲ್ಯಗಳು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ತಮ್ಮದೇ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಮಾನವ ಜೀವಗಳನ್ನು ರಕ್ಷಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಪ್ರೇರೇಪಿಸುತ್ತವೆ.
ಸದ್ಭಾವನಾಪೂರ್ಣ ನಡವಳಿಕೆ ಆವಶ್ಯಕ:
ಇದು ಕೇವಲ ವಿಚಾರ ಅಥವಾ ಮಾತುಗಳ ವಿಷಯವಲ್ಲ. ಈ ಭಾವನೆಯು ನಮ್ಮೊಬ್ಬೊಬ್ಬರ ನಡವಳಿಕೆಯಲ್ಲೂ ಪ್ರತಿಫಲಿಸಬೇಕು. ನಮ್ಮ ಭಾರತವು ವಿಶಾಲವಾದದ್ದು, ವೈವಿಧ್ಯಮಯ ಪ್ರಕೃತಿ ಮತ್ತು ಸಮೃದ್ಧ ನೈಸರ್ಗಿಕ ವಾತಾವರಣಗಳಿಂದ ಅಲಂಕೃತಗೊಂಡಿದೆ. ಇದು ವಿವಿಧ ಪಂಥಗಳನ್ನು ಅನುಸರಿಸುವ, ವಿವಿಧ ಪ್ರದೇಶಗಳಿಗೆ ಸೇರಿದ, ವಿವಿಧ ಭಾಷೆಗಳನ್ನು ಮಾತನಾಡುವ, ವಿಭಿನ್ನ ಜಾತಿಗಳು, ಆಹಾರ ಪದ್ಧತಿಗಳು ಮತ್ತು ಆಚಾರ-ವಿಚಾರಗಳನ್ನು ಹೊಂದಿರುವ ಸಮೂಹಗಳನ್ನೊಳಗೊಂಡ ಜೀವಂತ ಮತ್ತು ವರ್ಣರಂಜಿತ ಸಮಾಜವಾಗಿದೆ; ಆದರೂ ಒಟ್ಟಾಗಿ, ನಾವು ಒಂದೇ ಸಮಾಜವನ್ನು ರೂಪಿಸುತ್ತೇವೆ. ನಮ್ಮ ಪರಸ್ಪರ ವ್ಯವಹಾರಗಳಲ್ಲಿ, ಈ ಸದ್ಭಾವನೆ ಮತ್ತು ಆಪ್ತತೆಯ ಭಾವನೆಯು ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಇರಬೇಕು ಮತ್ತು ವ್ಯಕ್ತವಾಗಬೇಕು.
ಗತಕಾಲದ ಇತಿಹಾಸದಲ್ಲಿ ಬೇರೂರಿರುವ, ನಾವು ಪರಸ್ಪರರ ವಿರುದ್ಧ ಹೊಂದಿರುವ ಆತಂಕಗಳು ಮತ್ತು ಶಂಕೆಗಳು ನಮ್ಮನ್ನು ದೂರವಿಡುತ್ತವೆ. ಇತಿಹಾಸದ ಸತ್ಯಗಳನ್ನು ಒಪ್ಪಿಕೊಳ್ಳುತ್ತಲೇ, ನಾವು ಹೇಗೆ ನಡೆದುಕೊಳ್ಳಬೇಕೆಂದರೆ – ಈಗಾಗಲೇ ಇರುವ ಗಂಟುಗಳು ಸಡಿಲಗೊಳ್ಳಬೇಕು ಮತ್ತು ಹೊಸ ಗಂಟುಗಳು ರೂಪುಗೊಳ್ಳಬಾರದು. ಸಣ್ಣಪುಟ್ಟ ವಿಷಯಗಳಿಗೆ ನಮ್ಮನ್ನು ಪ್ರಚೋದಿಸುವ, ಜಗಳ ತಂದಿಡುವ ಅಥವಾ ಸಂಘರ್ಷಗಳನ್ನು ಸೃಷ್ಟಿಸುವವರಿಂದ ನಾವು ಅಂತರ ಕಾಯ್ದುಕೊಳ್ಳಬೇಕು. ಇಷ್ಟೊಂದು ವಿಶಾಲವಾದ ಮತ್ತು ವೈವಿಧ್ಯಮಯವಾದ ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸುವುದು ಸಮಯ ತೆಗೆದುಕೊಳ್ಳುತ್ತದೆ. ಆದರೂ, ರಾಷ್ಟçದ ಮತ್ತು ಜಗತ್ತಿನ ಕಲ್ಯಾಣವನ್ನು ಬಯಸುವವರೆಲ್ಲರೂ ತಮ್ಮನ್ನು ಹಾಗೂ ಸಮಾಜವನ್ನು ನಿಭಾಯಿಸುವಾಗ ಶಾಂತವಾಗಿ, ದೃಢವಾಗಿರಬೇಕು ಮತ್ತು ಕೆಲಸವನ್ನು ಮುಂದುವರಿಸಬೇಕು.
ಸಮಾಜದ ಸದಸ್ಯರೊಂದಿಗೆ ವ್ಯವಹರಿಸುವಾಗ, ಸಾಮಾನ್ಯ ಜನರಾಗಲಿ ಅಥವಾ ಸರ್ಕಾರ ಮತ್ತು ಆಡಳಿತದಲ್ಲಿರುವವರಾಗಲಿ, ವಿಶೇಷವಾಗಿ ಸಮಾಜದಲ್ಲಿ ಯಾವುದೇ ನಿರ್ದಿಷ್ಟ ಪ್ರಚಾರ ಅಥವಾ ನೀತಿಯನ್ನು ಜಾರಿಗೊಳಿಸುವಾಗ ನಮ್ಮ ನಡವಳಿಕೆಯ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರಬೇಕು. ನಮ್ಮ ನಡವಳಿಕೆಯು ಯಾವಾಗಲೂ ವಿನಮ್ರವಾಗಿರಬೇಕು, ಕಾಳಜಿಯುಕ್ತವಾಗಿರಬೇಕು, ಆಪ್ತತೆಯ ಭಾವನೆಯನ್ನು ಪ್ರತಿಫಲಿಸಬೇಕು ಹಾಗೂ ನಾಗರಿಕರ ಘನತೆ ಮತ್ತು ಗೌರವಕ್ಕೆ ಸೂಕ್ತ ಮನ್ನಣೆಯನ್ನು ನೀಡುವಂತಿರಬೇಕು. ಇದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.
ಸಂಘಕ್ಕೆ ಯಾವುದೇ ಸಂಬಂಧವಿಲ್ಲದ, ಸಂಪರ್ಕವಿಲ್ಲದ ಅಥವಾ ಬೆಂಬಲವಿಲ್ಲದ, ಅಲ್ಲಲ್ಲಿ ನಡೆಯುವ ಕೆಲವು ಅಹಿತಕರ ಮತ್ತು/ಅಥವಾ ಅನಿರೀಕ್ಷಿತ ಘಟನೆಗಳನ್ನು ಉಲ್ಲೇಖಿಸಿ ಸಂಘದ ಸದ್ಭಾವನೆ ಮತ್ತು ಅದರ ಉದ್ದೇಶಗಳ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನಗಳೂ ನಿರಂತರವಾಗಿ ನಡೆಯುತ್ತಿವೆ. ಸಂಘಕಾರ್ಯದ ಆಧಾರವೇ ಶುದ್ಧ ಸಾತ್ವಿಕ ಪ್ರೇಮ. ಸಂಘದ ಕಾರ್ಯವು ಸ್ವಯಂಸೇವಕರ ಸಮರ್ಪಣೆ, ಸೇವೆ ಮತ್ತು ಕಠಿಣ ಶ್ರಮದ ಮೂಲಕ ನಡೆಯುತ್ತಿದೆ. ಸಂಘವು ತನಗಾಗಿ ಏನನ್ನೂ ಬಯಸುವುದಿಲ್ಲ. ಒಂದು ಸತ್ಯಕ್ಕಾಗಿರುವ (ಧ್ಯೇಯ-ಗುರಿ) ತನ್ನ ಶ್ರದ್ಧೆ ಮತ್ತು ಆ ಸತ್ಯವನ್ನು ಸ್ಥಾಪಿಸುವ ಕಟಿಬದ್ಧತೆಯಿಂದ ಮಾರ್ಗದರ್ಶನ ಪಡೆಯುವ ಸ್ವಯಂಸೇವಕರು, ಗುರಿ ತಲುಪುವವರೆಗೆ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ.
ನೀವೆಲ್ಲರೂ ಈಗಾಗಲೇ ಚೆನ್ನಾಗಿ ಅರ್ಥಮಾಡಿಕೊಂಡಿರುವ ಈ ಅಂಶಗಳನ್ನು ನಾನು ಮತ್ತೆ ಒತ್ತಿ ಹೇಳುತ್ತಿದ್ದೇನೆ, ಏಕೆಂದರೆ ವಿವೇಚನಾಶೀಲ ಮತ್ತು ಬುದ್ಧಿವಂತ ಜನರೂ ಸಹ ಹಾದಿತಪ್ಪುವಂತಹ ವಾತಾವರಣವು ಪ್ರಸ್ತುತ ಇದೆ, ಅಥವಾ ಅದನ್ನು ಸೃಷ್ಟಿಸಲಾಗುತ್ತಿದೆ. ಭಾರತದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಸಾಂಸ್ಕೃತಿಕ ಹಾಗೂ ಮಾನವೀಯ ಮೌಲ್ಯಗಳಲ್ಲಿ ಬೇರೂರಿರುವ, ಸತ್ಸಂಪ್ರದಾಯದ ಮತ್ತು ಮಂಗಲಕರವಾದ ಎಲ್ಲವನ್ನೂ ನಾಶಪಡಿಸುವ ಹಾಗೂ ಧ್ವಂಸಗೊಳಿಸುವ ಆಸುರೀ ಸಂಕಲ್ಪದೊಂದಿಗೆ ಪಶ್ಚಿಮದಿಂದ ಒಂದು ಬಿರುಗಾಳಿಯೇ ಬೀಸುತ್ತಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳೆಂದು ಕರೆಯಲ್ಪಡುವ ರಾಷ್ಟ್ರಗಳೂ ಸಹ ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ ಮತ್ತು ಇದರ ಮುಂದೆ ತಮ್ಮನ್ನು ತಾವು ಅಸಹಾಯಕರನ್ನಾಗಿ ಕಂಡುಕೊಳ್ಳುತ್ತಿವೆ. ಆದ್ದರಿಂದ, ಕಳೆದ ಕೆಲವು ದಶಕಗಳಲ್ಲಿ, ಭಾರತವು ತನ್ನದೇ ಆದ ಶಕ್ತಿ ಮತ್ತು ಉತ್ತಮ ನೀತಿಗಳ ಕಾರಣ ಜಗತ್ತಿನಲ್ಲಿ ಒಂದು ಸ್ಥಾನವನ್ನು ಕ್ರಮೇಣ ರೂಪಿಸಿಕೊಂಡಿದೆ. ಬಲವಾದ ನೀತಿಗಳು, ನಾಯಕತ್ವ, ದೇಶಾಭಿಮಾನ ಮತ್ತು ಜಗತ್ತಿನ ಕಡೆಗಿನ ತನ್ನ ಜವಾಬ್ದಾರಿಗಳ ಅರಿವಿನ ಜಾಗೃತಿಯಿಂದ ಪ್ರೇರಿತವಾಗಿ, ಭಾರತೀಯ ಸಮಾಜದ ಸಾಮೂಹಿಕ ಪ್ರಯತ್ನವು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಕಾಣುತ್ತಿದೆ.
ಭಾರತದ ಈ ರೀತಿಯ ಪ್ರಗತಿಯಿಂದಾಗಿ, ಜಗತ್ತಿನ ರಾಷ್ಟçಗಳಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಮತ್ತು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ತಮ್ಮದೇ ಆದ ಕೈಗೊಂಬೆಗಳನ್ನು ಪ್ರಭಾವಿ ಸ್ಥಾನಗಳಲ್ಲಿ ಸ್ಥಾಪಿಸಲು ಯತ್ನಿಸುವ ಶಕ್ತಿಗಳ ಸಂಚುಗಳು ವಿಫಲಗೊಳ್ಳುತ್ತವೆ ಹಾಗೂ ಅವರ ಆಟ ನಿಲ್ಲುತ್ತದೆ. ಈ ಆಸುರೀ ಶಕ್ತಿಗಳಿಗೆ ಈ ವಾಸ್ತವದ ಸ್ಪಷ್ಟ ಅರಿವಿದೆ. ಅದಕ್ಕಾಗಿಯೇ ಭಾರತವು ಅವರಿಗೆ ನಿರ್ಣಾಯಕ ಮತ್ತು ಅತ್ಯಂತ ಪ್ರಬಲ ಸ್ಪರ್ಧಿಯಾಗಿದ್ದು, ಅವರ ಅಂತಿಮ ಹಾಗೂ ಪ್ರಮುಖ ಗುರಿಯಾಗಿದೆ. ಅವರು ಭಾರತ, ಹಿಂದು ಸಮಾಜ ಮತ್ತು ಸಂಘವನ್ನು ವಿಭಜಿಸುವ ಮತ್ತು ಹಾನಿಗೊಳಿಸುವ ಮಾರ್ಗಗಳನ್ನು ಹುಡುಕಲು ಯೋಜನೆಗಳನ್ನು ರೂಪಿಸುತ್ತಾರೆ ಮತ್ತು ಶ್ರಮಿಸುತ್ತಾರೆ. ತಮ್ಮ ಮನೋಭಾವ ಮತ್ತು ಸ್ವಭಾವವು ಇಂತಹ ಶಕ್ತಿಗಳಿಗೆ ಪೂರಕವಾಗಿರುವ ಕೆಲವು ವ್ಯಕ್ತಿಗಳು ಇವರ ಪ್ರಯತ್ನಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಕ್ಷುಲ್ಲಕ ರಾಜಕೀಯ ಹಿತಾಸಕ್ತಿಗಳು ಮತ್ತು ವಿವೇಚನೆಯ ಕೊರತೆಯಿಂದಾಗಿ, ಕೆಲವು ಅಭಿಲಾಷೆಯ ರಾಜಕೀಯ ನಾಯಕರೂ ಅವರೊಂದಿಗೆ ಕೈಜೋಡಿಸುತ್ತಾರೆ.
ನಮ್ಮ ವಿಶಾಲವಾದ ಸಮಾಜದಲ್ಲಿ ಸಮಸ್ಯೆಗಳಿರುವುದು ನಿಜ. ವ್ಯವಸ್ಥೆಯಲ್ಲೂ ಹಲವು ಕೊರತೆಗಳಿರುವ ಸಾಧ್ಯತೆಯಿದೆ. ಇವುಗಳು ಪ್ರತಿಭಟನೆ ಅಥವಾ ಆಂದೋಲನಗಳಿಗೆ ಕಾರಣವಾಗುವುದು ಸಹಜವೇ ಆಗಿದೆ. ಆದರೆ, ಇಂತಹ ಆಂದೋಲನಗಳು ಪರಿಹಾರಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರಬೇಕು. ಆಂದೋಲನದ ನೇತೃತ್ವ ವಹಿಸುವ ಸಮಾಜದ ಗುಂಪಾಗಲಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮ ಕೈಗೊಳ್ಳುವ ಸರ್ಕಾರ ಮತ್ತು ಆಡಳಿತವಾಗಲಿ ಅಥವಾ ತಮ್ಮ ಪಾತ್ರವನ್ನು ನಿರ್ವಹಿಸುವ ರಾಜಕೀಯ ನಾಯಕರಾಗಲಿ, ಭಾವನೆಗಳು ತೀವ್ರವಾಗಿದ್ದಾಗಲೂ ನಮ್ಮ ಕಾರ್ಯಗಳು ನಮಗಿಂತ ಭಿನ್ನವಲ್ಲದ, ಒಂದೇ ಅಖಂಡ ಸಮಾಜದೊಳಗೆ ಕಲಹ, ದ್ವೇಷ, ಅಸಮಾಧಾನ, ಕಹಿ ಅಥವಾ ವಿಭಜನೆಗಳನ್ನು ಸೃಷ್ಟಿಸದಂತೆ ನಾವು ನೋಡಿಕೊಳ್ಳಬೇಕು. ನಮ್ಮ ಕೃತಿಗಳು ನಮ್ಮ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ಇರಬೇಕು. ನಮ್ಮ ಮಾತು, ನಡವಳಿಕೆ ಮತ್ತು ಒಳ್ಳೆಯ ವ್ಯವಹಾರ ನಮ್ಮ ಕೃತಿಯಲ್ಲಿ ಮೂಡಿಬರಬೇಕು. ನಾವು ಇದರ ಬಗ್ಗೆ ಜಾಗರೂಕರಾಗಿರಬೇಕು. ಮತಗಳ ಆಮಿಷ, ಅಗ್ಗದ ಜನಪ್ರಿಯತೆ ಅಥವಾ ರಾಜಕೀಯ ಲಾಭಗಳು ನಮ್ಮ ವಿವೇಚನೆ ಮತ್ತು ಸದ್ಭಾವನೆಯನ್ನು ಮೆಟ್ಟಿ ನಿಲ್ಲದಂತೆ ನಾವು ಸದಾ ಜಾಗೃತರಾಗಿರಬೇಕು.
ಸಮುದಾಯದ ಶಕ್ತಿಯ ಮೂಲಕ ಪರಿಹಾರಗಳು:
ಸಮಾಜದ ಎಲ್ಲಾ ಸಮಸ್ಯೆಗಳನ್ನು ಸರ್ಕಾರವೊಂದೇ ಬಗೆಹರಿಸುತ್ತದೆ, ಹಾಗೆಯೇ ಎಲ್ಲಾ ಸಮಸ್ಯೆಗಳನ್ನು ಆಂದೋಲನಗಳ ಮೂಲಕವೇ ಪರಿಹರಿಸಬಹುದು ಎನ್ನುವ ಅನುಭವ ಇನ್ನೂ ಆಗಿಲ್ಲ. ಸಮಾಜದ ಸಕ್ರಿಯತೆ ಮತ್ತು ಪರಸ್ಪರ ಸಂವಾದದ ಮೂಲಕವೂ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು.
ಸಂಘದ ಸ್ವಯಂಸೇವಕರು ಸಮಾಜದೊಳಗೆ ಇಂತಹ ಸಮುದಾಯ-ಚಾಲಿತ (Community Led Initiative) ಉಪಕ್ರಮಗಳನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿದ್ದಾರೆ. ಸ್ವಯಂಸೇವಕರ ಇಂತಹ ಪ್ರಯತ್ನಗಳ ಅನುಭವವು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಶಾಲೆಗಳಲ್ಲಿ ಅತ್ಯಂತ ಉತ್ತೇಜನಕಾರಿಯಾಗಿದೆ. 21 ಸಂಘಪ್ರಾಂತಗಳ 210 ಜಿಲ್ಲೆಗಳಾದ್ಯಂತ ಹರಡಿರುವ 1,296 ಶಾಲೆಗಳಲ್ಲಿ ನಡೆಸಲಾದ ಅಧ್ಯಯನದ ವರದಿಯೊಂದು ಇದನ್ನು ಸ್ಪಷ್ಟಪಡಿಸಿದೆ; ಎಲ್ಲಿ ಗ್ರಾಮಸ್ಥರು ಭಾಗವಹಿಸಿ ಹಾಗೂ ಸ್ವಯಂಸೇವಕರು ತಮ್ಮ ಬೆಂಬಲವನ್ನು ನೀಡಿದ್ದಾರೋ, ಅಲ್ಲೆಲ್ಲಾ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸುಧಾರಣೆ ಕಂಡುಬಂದಿದೆ, ವಿದ್ಯಾರ್ಥಿಗಳ ಕಲಿಕೆಯ ಮಟ್ಟವು ಹೆಚ್ಚಾಗಿದೆ ಮತ್ತು ಪೋಷಕರ ತೊಡಗಿಸಿಕೊಳ್ಳುವಿಕೆಯೂ ವೃದ್ಧಿಸಿದೆ. ಶಿಕ್ಷಣಕ್ಕೆ ಬೆಂಬಲ ನೀಡುವುದು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಸಮುದಾಯವು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೌಲ್ಯ ಆಧಾರಿತ ಉಪಕ್ರಮಗಳಿಗೆ ಕೊಡುಗೆ ನೀಡಿದೆ. ಗ್ರಾಮಸ್ಥರ ಸಾಮೂಹಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಹಳ್ಳಿಗಳ ಸಮಗ್ರ ಅಭಿವೃದ್ಧಿಯತ್ತ ಕೈಗೊಂಡ ಪ್ರಯತ್ನಗಳು ಈಗಾಗಲೇ ಸಾವಿರಾರು ಹಳ್ಳಿಗಳಲ್ಲಿ ನಡೆಯುತ್ತಿವೆ. ದೇಶಾದ್ಯಂತ ಸ್ವಯಂಸೇವಕರು ಕೈಗೊಂಡಿರುವ ಎಲ್ಲಾ ಸೇವಾ ಉಪಕ್ರಮಗಳಲ್ಲಿ, ನಮ್ಮ ದೇಶಬಂಧುಗಳಲ್ಲಿ ಸ್ವಾಭಿಮಾನ, ಸ್ವಾವಲಂಬನೆ ಹಾಗೂ ರಾಷ್ಟ್ರಜೀವನದಲ್ಲಿ ಸಹಯೋಗ ಹಾಗೂ ಸಹಭಾಗಿ ಭಾವನೆಯನ್ನು ಬಲಪಡಿಸುವತ್ತ ಪ್ರಯತ್ನಗಳನ್ನು ಮಾಡಲಾಗಿದೆ. ಈ ಆದರ್ಶಗಳನ್ನು ಪ್ರಾಯೋಗಿಕವಾಗಿ ಸಾಕಾರಗೊಳಿಸಲು ಅಗತ್ಯವಿರುವ ಶಕ್ತಿ ಮತ್ತು ಸಾಮರ್ಥ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸಲು ಶ್ರಮಿಸಲಾಗುತ್ತಿದೆ.
ಜಾಗರೂಕತೆಯ ಅಗತ್ಯ:
ಈ ಪ್ರಯತ್ನಗಳ ಹಿಂದೆ, “ದೇಶ ಮತ್ತು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮದೂ ಆಗಿದೆ ಏಕೆಂದರೆ ಈ ದೇಶ ಮತ್ತು ಸಮಾಜ ನನ್ನದೇ ಆಗಿದೆ” ಎಂಬ ಭಾವನೆಯು ಪ್ರೇರಣೆ ನೀಡುತ್ತದೆ. ಇದೇ ಭಾವನೆಯು ಸಾಮಾಜಿಕ ಚಳವಳಿಗಳಿಗೂ ಪ್ರೇರಣೆ ನೀಡಬೇಕು. ಆದರೆ, ಯಾವಾಗ ಇದು ಸಾಧ್ಯವಾಗುವುದಿಲ್ಲವೋ ಮತ್ತು ಒಂದು ಚಳವಳಿಯು ನಿರ್ದಿಷ್ಟ ವ್ಯಕ್ತಿ, ಗುಂಪು ಅಥವಾ ಸಿದ್ಧಾಂತದ ವಿರುದ್ಧದ ಹಗೆತನ ಹಾಗೂ ವೈರತ್ವದಿಂದ ಪ್ರೇರಿತವಾಗಿ ರಾಜಕೀಯದ ಸಾಧನವಾಗುತ್ತದೆಯೋ, ಆಗ ಭಾರತವನ್ನು ದುರ್ಬಲಗೊಳಿಸಲು ಯತ್ನಿಸುವ ಶಕ್ತಿಗಳು ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತವೆ. ಭಿನ್ನಾಭಿಪ್ರಾಯಗಳನ್ನು ಆಳಗೊಳಿಸಿ ಅದರಿಂದ ಮನಃಬೇಧ ಹೆಚ್ಚಿಸುವುದು, ವಿವಿಧ ಸಮಸ್ಯೆಗಳ ಸಂದರ್ಭದಲ್ಲಿ ಅನ್ಯಾಯಗ್ರಸ್ತತೆ (Victimhood) ಎಂಬ ಭಾವನೆಯನ್ನು ಉಂಟುಮಾಡುವುದು, ಆ ಮೂಲಕ ದೇಶದ ವ್ಯವಸ್ಥೆಗಳ ಮೇಲೆಯೇ ಅಪನಂಬಿಕೆಯನ್ನು ಸೃಷ್ಟಿಸುವುದು, ಕಲಹ ವಾತಾವರಣ ಮೂಡಿಸುವುದು, ತೀವ್ರ ಅಸಮಾಧಾನ, ಪ್ರತ್ಯೇಕತಾವಾದ, ಅರಾಜಕತೆ ಮತ್ತು ಗೊಂದಲಗಳನ್ನು ಸೃಷ್ಟಿಸುವುದು – ಇವು ಇವರ ಕೆಲಸದ ಶೈಲಿಯಾಗಿದೆ (Modus Operandi). ಭಾರತವನ್ನು ನಿಯಂತ್ರಣದಲ್ಲಿಡಲು ಬಯಸುವ ಜಾಗತಿಕ ಶಕ್ತಿಗಳು ಸಹ ಕೆಲವೊಮ್ಮೆ ಈ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವನ್ನು ವಹಿಸುತ್ತವೆ.
ಶ್ರೀಮತಿ ಆಶಾ ಭೋಸ್ಲೆ ಅವರು ಹಾಡಿದ ಅತ್ಯಂತ ಹಳೆಯ ಮರಾಠಿ ಹಾಡೊಂದರ ಕೊನೆಯ ಸಾಲುಗಳು ನನಗೆ ನೆನಪಾಗುತ್ತಿವೆ:
“ವಾಢವೀತ್ ಭೇದಭಾವಾ ದುಷ್ಟತೇಚಾ ಫಿರತೋ ಕಾವಾ
ಗಾಠೂನಿಯಾ ಭೋಳ್ಯಾ ಜೀವಾ ಅಂಧಾರಾತ್ ಘಾಲಿಲ್ ಘಾವಾ”
(ಅಮಾಯಕ, ಮುಗ್ಧ ಜನರಲ್ಲಿ ಗೊಂದಲ ಉಂಟುಮಾಡಲು, ದುಷ್ಟ ಸಂಚುಗಳು ಕೆಲಸ ಮಾಡುತ್ತವೆ. ಭಿನ್ನಾಭಿಪ್ರಾಯಗಳನ್ನು ಆಳಗೊಳಿಸುತ್ತವೆ ಮತ್ತು ಕತ್ತಲೆಯಲ್ಲಿ ನಿರಪರಾಧಿಗಳ ಮೇಲೆ ದಾಳಿ ನಡೆಸುತ್ತವೆ.)
ಆದ್ದರಿಂದ – “ಚಿತ್ತ ನಿತ್ಯ ಸಾವಧ ಠೇವಾ ಏಕ ಲಕ್ಷ್ಯ ಲಾವೂನ್ ಡೋಳೇ”
(ನಿಮ್ಮ ಕಣ್ಣುಗಳನ್ನು ಒಂದೇ ಗುರಿಯ ಮೇಲೆ ನೆಟ್ಟು, ನಿರಂತರವಾಗಿ ಜಾಗರೂಕರಾಗಿರಿ.)
ಇಂತಹ ವಿಭಜಕ ಪ್ರವೃತ್ತಿಗಳು ಸೃಷ್ಟಿಸುವ ಬೌದ್ಧಿಕ ಗೊಂದಲಗಳಿಂದ ನಮ್ಮನ್ನು ನಾವು ಕಾಯ್ದುಕೊಳ್ಳುವ ಮೂಲಕ ಹಾಗೂ ಎಚ್ಚರಿಕೆಯಿಂದಿರುವುದರ ಮೂಲಕ ನಮ್ಮ ಪರಸ್ಪರ ಸದ್ಭಾವನೆಯನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ನಾವು ಜಾಗರೂಕರಾಗಿರಬೇಕು, ಯಾವುದೇ ರೀತಿಯಲ್ಲಿ ವಿಚಲಿತರಾಗಬಾರದು ಅಥವಾ ಪ್ರಚೋದನೆಗೆ ಒಳಗಾಗಬಾರದು. ಭಾರತವು ‘ವಿಶ್ವಗುರು‘ ಸ್ಥಾನವನ್ನು ತಲುಪುವುದನ್ನು ನೋಡುವ ನಮ್ಮ ಆಕಾಂಕ್ಷೆ ಹಾಗೂ ಗುರಿಯನ್ನು ಯಾವಾಗಲೂ ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು, ನಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ಪರಸ್ಪರ ಆತ್ಮೀಯತೆ, ಅನುಶಾಸನ ಮತ್ತು ರಾಷ್ಟ್ರೀಯ ಗುರಿಯೆಡೆಗಿನ ಅಚಲ ನಿಷ್ಠೆಯಿಂದ ದೃಢವಾಗಿ ಬೇರೂರಿರುವ ಸಮಾಜ ಮಾತ್ರವೇ ಏಕತೆಯನ್ನು ಸಾಧಿಸುತ್ತದೆ ಮತ್ತು ಅಜೇಯ ಶಕ್ತಿಯನ್ನು ಪಡೆಯುತ್ತದೆ.
ಪ್ರಾಚೀನ ಕಾಲದಲ್ಲಿ ನಮ್ಮ ಸಮಾಜವು ಅಸ್ತಿತ್ವದ ಏಕತೆಯ ಸತ್ಯವನ್ನು ಸಾಕ್ಷಾತ್ಕರಿಸಿತ್ತು. ಈ ಏಕತೆಯ ಅನುಭೂತಿಯನ್ನು (Experiencing the Oneness) ಕಾಲಕಾಲಕ್ಕೆ ವಿಶ್ವಕ್ಕೆ ನೀಡಲು, ಎಲ್ಲರನ್ನೂ ಸ್ವೀಕರಿಸುವ, ಗೌರವಿಸುವ ಮತ್ತು ಸನ್ಮಾನಿಸುವ, ಬಹುರೂಪಿಯಾಗಿದ್ದರೂ ಏಕರಸ ಜೀವನವನ್ನು ನಮ್ಮ ಸಮಾಜವು ನಡೆಸಿಕೊಂಡು ಬಂದಿದೆ ಎನ್ನುವುದು ಸಂಘದ ನಂಬಿಕೆಯಾಗಿದೆ.
ಏಕತೆಯ ಸೂತ್ರದ ಮೇಲೆ ದೃಢವಾಗಿರಿ
ನಾವು ನಮ್ಮ ಸಮಾಜದ ಈ ಜೀವನಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡಾಗ, ನಾವೆಲ್ಲರೂ ಒಟ್ಟಾಗಿ ವಿಜಯಶಾಲಿಯಾಗಿ ಹೊರಹೊಮ್ಮಿದೆವು. ಲಾರ್ಡ್ ಕರ್ಜನ್ ಹಿಂದುಗಳಿಂದ ಮುಸ್ಲಿಮರನ್ನು ಪ್ರತ್ಯೇಕಿಸಲು ಕೋಮು ಆಧಾರದ ಮೇಲೆ ಬಂಗಾಳವನ್ನು ವಿಭಜಿಸಲು ಯತ್ನಿಸಿದಾಗ, ಒಂದೇ ಭೂಮಿ ಮತ್ತು ಒಂದೇ ಜನಸಮುದಾಯವನ್ನು ಕೋಮು ಆಧಾರದ ಮೇಲೆ ವಿಭಜಿಸುವುದನ್ನು ಸಮಾಜವು ದೃಢವಾಗಿ ವಿರೋಧಿಸಿತು. ಬ್ರಿಟಿಷ್ ಸರ್ಕಾರವು ತನ್ನ ವಿಭಜನೆಯ ಪ್ರಸ್ತಾವನೆಯನ್ನು ಹಿಂಪಡೆಯಲೇ ಬೇಕಾಯಿತು. ಆ ಅವಧಿಯಲ್ಲೇ ‘ವಂದೇ ಮಾತರಂ‘ ಅದೇ ಏಕತೆ ಮತ್ತು ದೇಶಭಕ್ತಿಯ ಸಂಕೇತವಾಗಿ ಹೊರಹೊಮ್ಮಿತು. ಅಂದು ಬಂಗಾಲ ವಿಭಜನೆಯು ವಿಫಲವಾಯಿತು.
ಹಾಗಾದರೆ, 1947ರಲ್ಲಿ ಅದೇ ಫಲಿತಾಂಶವನ್ನು ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಏಕೆಂದರೆ, ನಮ್ಮನ್ನು ವಿಭಜಿಸಲು ಮತ್ತು ಸಂಘರ್ಷದಲ್ಲಿ ಮುಳುಗಿಸಲು ಬಯಸಿದವರು, “ನಾವು ವಿಶಿಷ್ಟವಾಗಿದ್ದೇವೆ ಹಾಗಾಗಿ ಪ್ರತ್ಯೇಕವಾಗಿದ್ದೇವೆ; ನಾವು ಮೇಲ್ನೋಟಕ್ಕೆ ವಿಭಿನ್ನವಾಗಿ ಕಾಣುವುದರಿಂದ, ನಾವು ನಿಜವಾಗಿಯೂ ಭಿನ್ನ ಮತ್ತು ಪ್ರತ್ಯೇಕವೇ ಆಗಿರಬೇಕು” ಎಂಬ ಕಲ್ಪನೆಯನ್ನು ನಮ್ಮ ಮನಸ್ಸಿನಲ್ಲಿ ಬಿತ್ತಿದರು. ನಮ್ಮನ್ನು ವಿಭಜಿಸಿ, ಪರಸ್ಪರ ಕಲಹ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಕೋಮುವಾದಿ ಮತ್ತು ತೀವ್ರಗಾಮಿ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿ, ನಾವು ಮೇಲ್ನೋಟಕ್ಕೆ ಭಿನ್ನವಾಗಿ ಕಾಣುವುದರಿಂದ, ವಾಸ್ತವದಲ್ಲಿ ಒಂದಲ್ಲ, ಬದಲಿಗೆ ಪರಸ್ಪರ ಪ್ರತ್ಯೇಕವಾಗಿದ್ದೇವೆ ಎಂದು ನಾವೂ ನಂಬಲು ಪ್ರಾರಂಭಿಸಿದೆವು. ಪ್ರತ್ಯೇಕತಾವಾದ, ರಾಜಕೀಯ ಪ್ರಾಬಲ್ಯದ ದುರಾಸೆ ಮತ್ತು ಸ್ವಾರ್ಥ ಹಿತಾಸಕ್ತಿಗಳ ಕಾರಣಕ್ಕಾಗಿ, ನಮ್ಮನ್ನು ಒಂದಾಗಿ ಹಿಡಿದಿಟ್ಟಿದ್ದ ಮೂಲ ಬುನಾದಿಯನ್ನೇ ನಾವು ಕ್ರಮೇಣ ತಿರಸ್ಕರಿಸಲು ಪ್ರಾರಂಭಿಸಿದೆವು. ತುಷ್ಟೀಕರಣದ ಮನಸ್ಥಿತಿಯು ಈ ವಿಭಜಕ ಮನೋಭಾವವನ್ನು ಇನ್ನಷ್ಟು ಪ್ರಚೋದಿಸುತ್ತಾ ಹೋಯಿತು. ಅಂತಿಮವಾಗಿ, ದೇಶವು ವಿಭಜನೆಯಾಯಿತು.

ಆದರೂ, ಈ ವಿಭಜನಕಾರಿ ಪ್ರವೃತ್ತಿಗೆ ಭರವಸೆಯಾಗಿ ನೀಡಲಾಗಿದ್ದ ಪ್ರತ್ಯೇಕ, ಸ್ವಾಯತ್ತ ಅಸ್ತಿತ್ವದ ಶಾಂತಿ ಮತ್ತು ಸಂತೋಷವು ಎಂದಿಗೂ ಸಾಕಾರಗೊಳ್ಳಲಿಲ್ಲ. ಬದಲಾಗಿ, ಗಡಿಗಳಲ್ಲಿ ಮತ್ತು ದೇಶದ ಒಳಗೆ ಸುದೀರ್ಘ ಅಶಾಂತಿ, ಪರಸ್ಪರ ಅಪನಂಬಿಕೆ, ಅಭದ್ರತೆ ಮತ್ತು ಸಣ್ಣಪುಟ್ಟ ವಿಷಯಗಳಿಗೂ ನಿರಂತರ ಕಲಹಗಳನ್ನು ನಾವೇ ತಂದುಕೊಂಡೆವು.
ಬಂಗಾಳ ವಿಭಜನೆಯ ಷಡ್ಯಂತ್ರವನ್ನು ವಿಫಲಗೊಳಿಸಿದ ‘ವಂದೇ ಮಾತರಂ‘ ಗೀತೆಯು ಇಂದಿಗೂ ಅದೇ ರೀತಿಯ ಏಕತೆಯ ಶಕ್ತಿಯುತ ಪ್ರೇರಣೆಯ ಮೂಲವಾಗಿ ಮುಂದುವರಿದಿದೆ. ಇದು ನಮ್ಮ ರಾಷ್ಟ್ರೀಯ ಹಾಡು ಆಗಿದ್ದು, ಇದನ್ನು ಸಂಪೂರ್ಣವಾಗಿ, ಸ್ವಾಭಿಮಾನದಿಂದ, ಉಚ್ಚಕಂಠದಿಂದ ಹಾಡಲು ಯಾವುದೇ ಹಿಂಜರಿಕೆ ಅಥವಾ ವಿರೋಧ ಇರಬಾರದು.
ನಮ್ಮ ಮಾತೃಭೂಮಿಯಾದ ಭಾರತದ ಮೇಲಿನ ಭಕ್ತಿ, ನಮ್ಮ ಸಮಾನ ರಾಷ್ಟ್ರೀಯ ಪೂರ್ವಜರ ಜೀವನದ ಬಗ್ಗೆ ಹೆಮ್ಮೆ ಮತ್ತು ಅವರ ಹಾದಿಯ ಅನುಸರಣೆ, ಹಾಗೂ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ವೈಶ್ವಿಕ ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದು – ಇತ್ಯಾದಿಗಳು ನಮ್ಮನ್ನು ಸದಾ ಒಂದಾಗಿ ಹಿಡಿದಿಟ್ಟಿದೆ. ಈ ಮೂಲ ಬುನಾದಿಗಳು ನಮ್ಮ ಪಂಥ, ಪ್ರದೇಶ, ಭಾಷೆ, ಜಾತಿ ಮುಂತಾದ ಎಲ್ಲಾ ವಿವಿಧತೆಗಳಿಗೆ ಅವಿರೋಧವಾಗಿದೆ, ಹಾಗೂ ಇವೆಲ್ಲವನ್ನೂ ಮೀರಿದ್ದಾಗಿವೆ. ಈ ಮೂಲತತ್ತ್ವಗಳ ಬಗ್ಗೆ ನಿರಂತರ ಚಿಂತನೆ ನಡೆಸುವುದು, ಅವುಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಪೂರ್ಣಮನಸ್ಸಿನಿಂದ ತನ್ನದಾಗಿಸಿಕೊಳ್ಳುವುದರ ಮೂಲಕ, ನಾವು ನಮ್ಮ ಏಕತೆಯ ಜೊತೆಜೊತೆಗೆ, ಪ್ರತಿಯೊಬ್ಬರ ವಿಶಿಷ್ಟ ಗುರುತನ್ನೂ ಬಲಪಡಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಸಣ್ಣ ಗುರುತುಗಳಿಗೆ ಭಂಗ ಬರಬಹುದು ಎಂಬ ಸೂಕ್ತವಲ್ಲದ ಭಯದಿಂದ ಅಥವಾ ಅವುಗಳೊಂದಿಗೆ ಬೆಸೆದುಕೊಂಡಿರುವ ಅಹಂಕಾರದಿಂದ ಹಾದಿತಪ್ಪುವ ಮೂಲಕ, ನಮ್ಮ ಏಕತೆಯನ್ನು, ಈ ಬುನಾದಿಗಳನ್ನು ಕೈಬಿಡುವ ಮತ್ತು ಮತ್ತೆ ಮತ್ತೆ ಒಂದೇ ಅಡೆತಡೆಗಳಿಗೆ ಸಿಲುಕಿ ಎಡವುವ ತಪ್ಪನ್ನು ನಾವು ಪದೇ ಪದೇ ಮಾಡಬಾರದು.
ನಾವು ನಮ್ಮ ವೈಯಕ್ತಿಕ ಅಹಂಕಾರಗಳನ್ನು, ನಮ್ಮ ಮತ್ತು ಇತರರ ಉಪಾಸನಾ ಪದ್ಧತಿಗಳ ಬಗ್ಗೆ ಹೊಂದಿರುವ ಭ್ರಮೆಗಳನ್ನು ಹಾಗೂ ವಿವಿಧತೆಯನ್ನು ಪ್ರತ್ಯೇಕತೆ ಎಂದು ಭಾವಿಸುವ ಪ್ರವೃತ್ತಿಯನ್ನು ಕೈಬಿಡಬೇಕು.
ಭಾರತದ ಮೇಲಿನ ಭಕ್ತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಮತ್ತು ಭಾರತೀಯ ಸಂಸ್ಕೃತಿಗೆ ಬದ್ಧತೆ – ನಮ್ಮನ್ನೆಲ್ಲಾ ಒಂದಾಗಿ ಬೆಸೆಯುವ ಈ ತ್ರಿಸೂತ್ರ ಬಂಧವನ್ನು ಮನದಲ್ಲಿ ಸ್ವೀಕರಿಸಿ, ದೇಶಕ್ಕಾಗಿ ಬದುಕುವ ಹಾದಿಯಲ್ಲಿ ಮುನ್ನಡೆಯಬೇಕು.

ಭಾರತದ ಜಾಗತಿಕ ಜವಾಬ್ದಾರಿ ಮತ್ತು ನಮ್ಮ ಕರ್ತವ್ಯಗಳು:
ಇಂದು ಜಗತ್ತನ್ನು ಬಾಧಿಸುತ್ತಿರುವ ಮತ್ತು ಭಯಭೀತಗೊಳಿಸುತ್ತಿರುವ ಸಮಸ್ಯೆಗಳ ಮೂಲವು ಅದರ ಅಪೂರ್ಣವಾದ ಜೀವನ ದೃಷ್ಟಿಯಲ್ಲಿದೆ. ಇಲ್ಲದಿದ್ದರೆ, ಪುರುಷಾರ್ಥದ ದೃಷ್ಟಿಯಿಂದ ಮಾನವ ಶ್ರಮ ಮತ್ತು ಪ್ರಯತ್ನದ ವಿಷಯಕ್ಕೆ ಬಂದಾಗ, ನಾವೂ ಸಹ ಪ್ರಪಂಚದ ಉಳಿದ ಭಾಗಗಳಿಂದ ಸಾಕಷ್ಟು ಕಲಿಯಬಹುದು. ಇತರರಿಂದ ಕಲಿಯುವುದರ ಜೊತೆಗೆ, ನಮ್ಮ ರಾಷ್ಟ್ರೀಯ ಗುರುತಿನ ವಿಶಿಷ್ಟ ಸ್ವರೂಪವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಅಂಗೀಕರಿಸುವುದು, ನಮ್ಮ ಏಕತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಸಾಮೂಹಿಕ, ಸುಸಂಘಟಿತ ಪ್ರಯತ್ನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಧರ್ಮದ ಸಮಗ್ರ ಜ್ಞಾನದೊಂದಿಗೆ ಎಲ್ಲಾ ಆಯಾಮಗಳಲ್ಲೂ ಸಂಪೂರ್ಣವಾದ ಅಭಿವೃದ್ಧಿಯ ಹಾದಿಯನ್ನು ಒದಗಿಸುವ ಮತ್ತು ಜಗತ್ತಿಗೆ ಸುಖ-ಶಾಂತಿಗಳತ್ತ ಹೊಸ ಹಾದಿಯನ್ನು ತೋರಿಸಬಲ್ಲ ಭಾರತವನ್ನು ನಾವು ನಿರ್ಮಿಸಬೇಕಾಗಿದೆ. ನಮ್ಮ ರಾಷ್ಟ್ರೀಯ ಮೌಲ್ಯಗಳಲ್ಲಿ ಬೇರೂರಿ, ನಮ್ಮದೇ ಆದ ಮಾದರಿಯ ಮೂಲಕ ಇಡೀ ಜಗತ್ತಿಗೆ ಅಭಿವೃದ್ಧಿಯ ಹೊಸ ಹಾದಿಯನ್ನು ನಾವು ನಿರ್ಮಿಸಬೇಕಾಗಿದೆ. ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಅತ್ಯುನ್ನತ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಸಮಾಜ ಮತ್ತು ರಾಷ್ಟ್ರದ ಸುರಕ್ಷೆ, ಏಕತೆ, ಸಾಮಾಜಿಕ ನ್ಯಾಯ, ಪ್ರಗತಿ ಮತ್ತು ಗೌರವದ ಹಿತಾಸಕ್ತಿಗಳಿಗೆ ಪೂರಕವಾಗಿರಬೇಕು. ಈ ಜವಾಬ್ದಾರಿಯ ಬಗ್ಗೆ ನಾವು ಸದಾ ಜಾಗರೂಕರಾಗಿರಬೇಕು. ಭಾರತದ ಪರಮ ವೈಭವ ಮತ್ತು ವಿಶ್ವಗುರುವಾಗಿ ಅದರ ಉದಯವು ಪ್ರತಿಯೊಬ್ಬರ ಸಮರ್ಪಿತ ಕಠಿಣ ಶ್ರಮದಿಂದ ಮಾತ್ರ ಸಾಕಾರಗೊಳ್ಳುತ್ತದೆ. ಈ ಗುರಿಯನ್ನು ಸಾಧಿಸಲು ಯಾವುದೇ ಪರ್ಯಾಯ ಮಾರ್ಗವಾಗಲಿ ಅಥವಾ ಅಡ್ಡದಾರಿ (ಶಾರ್ಟ್ಕಟ್) ಆಗಲಿ ಇಲ್ಲ. ಅತ್ಯಂತ ಸಾಮಾನ್ಯ ವ್ಯಕ್ತಿಯೂ ಸಹ ತನ್ನ ದೈನಂದಿನ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ಸಣ್ಣ ಸಾತ್ವಿಕ ಕಾರ್ಯಗಳ ಮೂಲಕ ಬದಲಾವಣೆಯನ್ನು ತರುವ ತನ್ನ ಕರ್ತವ್ಯಗಳನ್ನು ಪೂರೈಸಬಹುದು. ಪಂಚ ಪರಿವರ್ತನೆಯ ಅಡಿಯಲ್ಲಿರುವ ಉಪಕ್ರಮಗಳು ಮತ್ತು ಸ್ವಯಂಸೇವಕರು ಕೈಗೊಳ್ಳುವ ವಿವಿಧ ಚಟುವಟಿಕೆಗಳು ಇದೇ ದೃಷ್ಟಿಕೋನವನ್ನು ಅನುಸರಿಸುತ್ತವೆ, ವ್ಯಕ್ತಿಗಳನ್ನು ರಾಷ್ಟçಸೇವೆ ಮತ್ತು ರಾಷ್ಟçಭಕ್ತಿಯ ಹಾದಿಯಲ್ಲಿ ಹಂತ ಹಂತವಾಗಿ ಹೆಜ್ಜೆ ಹಾಕಲು ಪ್ರೇರೇಪಿಸುತ್ತವೆ.
ತನ್ನ ಕಾರ್ಯದ ಶತಾಬ್ದಿಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಉದ್ದೇಶಗಳನ್ನು ಸಾಧಿಸಿದ ನಂತರ, ಸಂಘವು ಸಮಾಜದ ಸುಸಂಘಟಿತ, ಪರಿಶ್ರಮಿ ಮತ್ತು ವಿಜಯಶಾಲಿ ಶಕ್ತಿಯನ್ನು ನಿರ್ಮಿಸುವತ್ತ ಮುನ್ನಡೆಯುತ್ತದೆ.
“ಸಾಧಿಸಬೇಕಿದೆ ನಾವು, ಕೇಶವರು ತೋರಿಸಿದ ಧ್ಯೇಯದ ಕನಸನ್ನು;
ಕೇವಲ ಅದರ ಪೂರ್ತಿಗಾಗಿ, ಸಮರ್ಪಿತವಾಗಲಿ ಈ ಜನ್ಮವು.
ತಾಯಿಯು ತೃಪ್ತಳಾಗುವಳು ಆಗಷ್ಟೇ, ವಿಶ್ವದಲ್ಲಿ ಗೌರವವನ್ನು ಪಡೆದು.
ಸಾಗುತ್ತಿವೆ ಅಸಂಖ್ಯಾತ ಹೆಜ್ಜೆಗಳು ಈ ನಿರಂತರ ಧ್ಯಾನದಲ್ಲಿ;
ಧ್ಯೇಯದ ಹಾದಿಯಲ್ಲಿ ನಿರಂತರವಾಗಿ.”
| ಭಾರತ್ ಮಾತಾ ಕೀ ಜಯ್ |

