ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಶ್ರದ್ಧಾಂಜಲಿ ಸಂದೇಶ.
“ಕನ್ನಡದ ಖ್ಯಾತ ಕವಿ ಹಾಗೂ ನನ್ನ ಗೆಳೆಯ ಸಿದ್ದಲಿಂಗಯ್ಯ ಇನ್ನಿಲ್ಲ ಎಂದು ತಿಳಿದು ಮಾತೇ ನಿಂತಂತಾಗಿದೆ. ಅವರ ನಿಧನ ಕನ್ನಡ ನಾಡು-ನುಡಿಗಳಿಗಾದ ಅಪಾರ ನಷ್ಟ; ವೈಯಕ್ತಿಕವಾಗಿ ನನಗೆ ಅತೀವ ಆಘಾತ. ಕೋವಿಡ್ ಮಹಾಮಾರಿಗೆ ಅವರು ಬಲಿಯಾದುದು ಮನವನ್ನು ಕಲಕುತ್ತಿದೆ.
ಎಲ್ಲ ವಿಧದ ನೋವನ್ನುಂಡ ಸಮುದಾಯದ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು ಕನ್ನಡ ಭಾಷೆಯ ಬರಹ-ಮಾತುಗಳಲ್ಲಿ ನೋವಿನ ಅಭಿವ್ಯಕ್ತಿಯ ಹೊಸ ಛಾಪನ್ನೇ ಮೂಡಿಸಿದರು. ಕವಿ, ಸಾಹಿತಿ, ಅಧ್ಯಾಪಕ, ಶಾಸಕ, ಆಡಳಿತಗಾರ ಮುಂತಾಗಿ ಹಲವು ಆಯಾಮಗಳಲ್ಲಿ ಪರಿಚಿತರಾದ ಡಾ। ಸಿದ್ದಲಿಂಗಯ್ಯ ಎಲ್ಲವನ್ನೂ ಮೀರಿ ಶ್ರೇಷ್ಠ ಮಾನವರಾಗಿದ್ದರು. ಸಂವೇದನೆಯಿದ್ದ ಒಬ್ಬ ಸಾಮಾಜಿಕ-ಸಾಹಿತ್ಯಕ ನೇತಾರನಾಗಿ ಅವರು ಸದಾಕಾಲ ನೆನಪಿರುತ್ತಾರೆ. ವೈಚಾರಿಕ ಮತಭೇದವಿದ್ದೂ ಸಹಚಿಂತನಕ್ಕೆ ಹಾಗೂ ಸಹಮತಿ ಇರುವಲ್ಲಿ ಅದನ್ನು ವ್ಯಕ್ತಪಡಿಸಲು ಅವರು ಹಿಂಜರಿಯಲಿಲ್ಲ.
ಸಿದ್ದಲಿಂಗಯ್ಯನವರ ಕುಟುಂಬಕ್ಕೂ ಅವರ ಎಲ್ಲ ಅಭಿಮಾನಿಗಳಿಗೂ ನನ್ನ ತೀವ್ರ ಸಂತಾಪಗಳು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ”
ಎಂದು ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ತಮ್ಮ ಶ್ರದ್ಧಾಂಜಲಿ ಸಂದೇಶದಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.