ನಿವಾರ್ ಚಂಡಮಾರುತದಿಂದ ಉಂಟಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ಚಂಗಲಪಟ್ಟು, ಕಡಲೂರು, ಪನ್ರುಟ್ಟಿ, ಪಳವೆರ್ಕಾಡು, ಪೆರಂಬೂರ್, ಮಧುರಂತಕಂ, ಅರಕೊನ್ನಂ, ಪುದುಚೇರಿ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ.
ತಗ್ಗು ಪ್ರದೇಶಗಳಲ್ಲಿದ್ದ ಸಾವಿರಾರು ಜನರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ವಿವಿಧ ಸರ್ಕಾರಿ ನಿರ್ಮಿತ ವಸತಿಗಳಲ್ಲಿ ಆಶ್ರಯಪಡೆದಿದ್ದಾರೆ.
ಸೇವಾಭಾರತಿ ತಮಿಳುನಾಡು ಸರ್ಕಾರಿ ಆಡಳಿತದ ಸಮನ್ವಯದೊಂದಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಹಾರ, ನೀರಿನ ಬಾಟಲಿಗಳು, ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲು, ಗಾಳಿ, ಮಳೆಗೆ ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಸೇವಾ ಭಾರತಿ ಕಾರ್ಯಕರ್ತರು ತೊಡಗಿದ್ದಾರೆ. ಕೋರಟ್ಟುರಿನಲ್ಲಿ ಅಗ್ನಿ ಶಾಮಕ ದಳದವರೊಂದಿಗೆ ಸಂಘದ ಕಾರ್ಯಕರ್ತರು ಸೇವಾ ಕಾರ್ಯ ನಡೆಸುತ್ತಿದ್ದಾರೆ.
ನಿವಾರ್ ಚಂಡಮಾರುತವು ಪುದುಚೇರಿ ಬಳಿ 25 ರಂದು ರಾತ್ರಿ 11.30 ರ ಸುಮಾರಿಗೆ ದಡ ದಾಟಿತು. ಆರ್ಎಸ್ಎಸ್ ಸೇವಾಭಾರತಿ ಸ್ವಯಂಸೇವಕರು ತಕ್ಷಣವೇ ಸಂತ್ರಸ್ತರಿಗೆ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಚಂಡಮಾರುತದ ಅವಧಿಯಲ್ಲಿ, ಚೆನ್ನೈ ಬಳಿಯ ಚೆಂಬರಂಬಕ್ಕಂ ಕೆರೆಯನ್ನು ತೆರೆಯಲಾಯಿತು, ತಗ್ಗು ಪ್ರದೇಶಗಳಲ್ಲಿ ನೀರು-ನುಗ್ಗಿತು. ತಾಂಬರಂ ಪ್ರದೇಶದ ಕ್ರೊಂಪೇಟ್ನಲ್ಲಿನ ಸ್ವಯಂ ಸೇವಕರು ಪೀಡಿತ ಜನರಿಗೆ ತಕ್ಷಣ ಆಹಾರವನ್ನು ತಯಾರಿಸಲು ತಮ್ಮ ಸೇವೆಯನ್ನು ಪ್ರಾರಂಭಿಸಿದರು ಮತ್ತು ಸುಮಾರು 1000 ಜನರಿಗೆ ಸೇವೆ ಸಲ್ಲಿಸಿದರು.
ಕಡಲೂರಿನಲ್ಲಿ, ಸೇವಾಭಾರತಿ ಸ್ವಯಂಸೇವಕರು ನಿವಾರ್ ಚಂಡಮಾರುತದಿಂದ ಪೀಡಿತ ಸುಮಾರು 2000 ಜನರಿಗೆ ಆಹಾರ ಪ್ಯಾಕೆಟ್ಗಳನ್ನು ವಿತರಿಸಿದರು.
ಕಾಂಚೀಪುರಂನ ಇರುಲಾರ್ ಸಮುದಾಯದ 300 ಜನರಿಗೆ ಆಹಾರ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಸೇವಾಭಾರತಿ ಸ್ವಯಂಸೇವಕರು ಚಂಡಮಾರುತದಿಂದ ಉಂಟಾದ ಹಾನಿಯಿಂದ ಜನರನ್ನು ರಕ್ಷಿಸಲು ನಿರತರಾಗಿದ್ದಾರೆ.
ಅರಕೋಣಂ ಕಂದಾದ ರಾಣಿಪೇಟೆಯಲ್ಲಿ ಸುಮಾರು 200 ಜನರನ್ನು ಮೂರು ಶಿಬಿರ ಆಶ್ರಯಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಅವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ.
ಚೆನ್ನೈನ ತಿರುವಳ್ಳಿಕೆಣಿಯಲ್ಲಿ, ಸ್ವಯಂಸೇವಕರು ರಸ್ತೆಗಳಲ್ಲಿ ಬಿದ್ದ ಮರಗಳನ್ನು ಕತ್ತರಿಸಿ ತೆಗೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.