ಈ ವರ್ಷ, ವಿಶ್ವ ಸಂವಾದ ಕೇಂದ್ರ, ಕರ್ನಾಟಕ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ ನಡೆಸಿತು. ಆನ್ಲೈನ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ, ಆಯ್ಕೆಗಳನ್ನು ಮತಗಳ ಮೂಲಕ ದಾಖಲಿಸಬಹುದಾಗಿತ್ತು. ದಿನಕ್ಕೆ ಎರಡರಂತೆ  ಒಟ್ಟು ೧೨ ಪ್ರಶ್ನೆಗಳನ್ನು ನಮ್ಮ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸಾಪ್ ಸ್ನೇಹಿತರೊಂದಿಗೆ ಹಂಚಿಕೊಳ್ಳಲಾಗಿತ್ತು. ಪ್ರತಿ ಪ್ರಶ್ನೆಗೆ ೧೦ ಆಯ್ಕೆಗಳು ಹಾಗೂ ಪ್ರತಿಯೊಬ್ಬರೂ ೩ ಮತಗಳನ್ನು ಚಲಾಯಿಸಬಹುದಿತ್ತು. ಪ್ರತಿ ಪ್ರಶ್ನೆಗೆ ೨೪ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಸಾವಿರಾರು ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಆಯ್ಕೆಗಳಿಗೆ ಮತ ಚಲಾಯಿಸಿದ್ದಾರೆ.

ಕರ್ನಾಟಕ, ಕನ್ನಡ, ಕನ್ನಡ ನಾಡು ಎಂದ ಕೂಡಲೇ, ಕೆಲವರು ಸಿನಿಮಾಗಳು ಕನ್ನಡವನ್ನು ಪ್ರತಿನಿಧಿಸುತ್ತವೆ ಎಂದು ನಂಬುತ್ತಾರೆ. ಕನ್ನಡ ಉಳಿಯಬೇಕಾದರೆ ಕನ್ನಡ ಸಿನಿಮಾ ಮಾತ್ರ ನೋಡಬೇಕು ಎಂಬುದು ಅವರ ಅಂಬೋಣ. ಕೆಲ ಕನ್ನಡ ಸಿನಿಮಾಗಳು, ಜನರ ಜೀವನವನ್ನೇ ಬೆಳಗಿಸಿರುತ್ತವೆ. ಸಿನಿಮಾ ಎಂಬ ಮಾಧ್ಯಮದಿಂದ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ ಎಂಬುದು ಹಲವರ ಅಭಿಪ್ರಾಯ. ತಕ್ಕಮಟ್ಟಿಗೆ ಇದು ನಿಜವೂ ಹೌದು.  ಇನ್ನು ಸಿನಿಮಾ ಒಳಗಿಳಿದರೆ ಅದರಲ್ಲಿನ ನಾಯಕ ನಟ, ನಟಿ, ಪೋಷಕ ನಟ, ನಿರ್ದೇಶಕ, ಗಾಯಕ- ಗಾಯಕಿಯರು – ಇವರನ್ನೇ ಆರಾಧ್ಯ ದೈವ ಎಂದು ಪರಿಗಣಿಸುವ ಜನರಿರುತ್ತಾರೆ. ಸಿನಿಮಾ – ಬೆಳ್ಳಿ ಪೆರದೆ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತದೆಯಾದರೆ, ಕಿರುತೆರೆಯ  ಕಾರ್ಯಕ್ರಮಗಳು, ಅವುಗಳ ನಿರೂಪಣೆ, ಸಾರುವ ಸಂದೇಶ ಈಗಿನ ದಿನಗಳಲ್ಲಿ ತನ್ನದೇ ರೀತಿಯಲ್ಲಿ ಆಕರ್ಷಿಸುತ್ತಿದೆ. ಕೆಲ ಕಿರುತೆರೆಯ ಕಾರ್ಯಕ್ರಮಗಳು ದಾಖಲೆಗಳನ್ನು ಸೃಷ್ಟಿಸಿವೆ.  ಈ ರೀತಿಯ ನಮ್ಮ ಕನ್ನಡ ಕಾರ್ಯಕ್ರಮಗಳನ್ನು ಬೇರೆ ರಾಜ್ಯಗಳಿಗೆ ಅವರ ಭಾಷೆಯಲ್ಲಿ ತರುವ ಪ್ರಯತ್ನ ನಡೆದರೆ ನಮ್ಮಲ್ಲಿ ಹೆಮ್ಮೆ ಮೂಡದೇ  ಇರದು. 

 ಕೆಲವರಿಗೆ ಭಾವ ಗೀತೆಗಳು, ಕವಿಗಳು, ಸಾಹಿತ್ಯ, ಪುಸ್ತಕ, ಕಾದಂಬರಿ ಇವುಗಳು ಕನ್ನಡವನ್ನು ಪ್ರತಿನಿಧಿಸುತ್ತವೆ. ಕನ್ನಡವೆಂಬ ಭಾಷೆ ಉಳಿದಿರುವುದು ಈ ಸಾಹಿತ್ಯದಿಂದಲೇ. ಆದ್ದರಿಂದ ಸಾಹಿತ್ಯ ಕಲಿಸುವ ಪಾಠ, ರೂಪಿಸುವ ಬದುಕು ಅತಿ ವಿಶಿಷ್ಟ ಎಂಬ ಬಲವಾದ ನಂಬಿಕೆ. ಇನ್ನು ಕೆಲವರಿಗೆ ಜಾನಪದ ಸಾಹಿತ್ಯದಲ್ಲಿನ ಸೊಗಡು, ಲಾಲಿತ್ಯ ಕನ್ನಡದ ಭಾವವನ್ನು ಎಲ್ಲರಲ್ಲಿ ಮೂಡಿಸುವಲ್ಲಿ ಪಾತ್ರವಹಿಸುತ್ತವೆ ಎಂದು ಪರಿಭಾವಿಸುತ್ತಾರೆ.

  ನಮ್ಮಲ್ಲಿನ ಭಾಷೆ ಕನ್ನಡವಾದರೂ, ಭಾಷೆಯ ಶೈಲಿ ಊರಿಂದ ಊರಿಗೆ ಬದಲಾಗುತ್ತಾ, ಮೂಲ ಸಂಸ್ಕೃತಿ ಒಂದೇ ಆದರೂ ಆಚರಣಾ ಪದ್ಧತಿ ಬದಲಾಗುತ್ತಾ ಹೋಗುತ್ತವೆ. ತಿಂಡಿ ತಿನಿಸುಗಳು  ಊರಿಂದ ಊರಿಗೆ ಬದಲಾಗುತ್ತವೆ, ಕೆಲ ಜಿಲ್ಲೆಗಳು ಖಾರದ ತಿಂಡಿಗೆ ಪ್ರಖ್ಯಾತಿ ಮತ್ತೆ ಕೆಲವು ಸಿಹಿ ತಿಂಡಿಗೆ. ಊರಿನಿಂದ ಊರಿಗೆ ಹೋದಂತೆ, ಕಾಣ ಸಿಗುವ ಪ್ರೇಕ್ಷಣೀಯ ಸ್ಥಳಗಳ ವೈಖರಿಯೇ ಬೇರೆ. ಕೋಟೆ ಕೊತ್ತಲಗಳು, ಅರಮನೆಗಳು, ದೇವಸ್ಥಾನಗಳು, ಜಲಪಾತಗಳು, ಬೆಟ್ಟಗುಡ್ಡಗಳು ಜನರನ್ನು ತಂತಮ್ಮ ರೀತಿಯಲ್ಲಿ ಆಕರ್ಷಿಸುತ್ತವೆ. ಆದ್ದರಿಂದ ಕೆಲವರಿಗೆ ಈ ಪ್ರವಾಸಿ ತಾಣಗಳು, ತಿಂಡಿ ತಿನಿಸುಗಳು ಅವುಗಳ ಜೊತೆ ಬೆಸೆದಿರುವ ಕಥೆಗಳು, ಅವುಗಳ ಅಂಕಿಅಂಶಗಳು ಜಗತ್ತಿಗೆ ಪರಿಚಯವಾಗಬೇಕು ಹಾಗೂ ಕರ್ನಾಟಕಕ್ಕೇ ಮುಕುಟದಂತಿರುವ ಈ ಸ್ಥಳಗಳು, ತಿಂಡಿ ತಿನಿಸುಗಳು  ಸರ್ವಕಾಲಕ್ಕೂ  ಹೆಮ್ಮೆಯಷ್ಟೇ ಅಲ್ಲದೇ ಅಸೂಯೆಯನ್ನೂ ಹುಟ್ಟಿಸುತ್ತವೆ ಎಂಬ ಭಾವವಿರಿಸಿಕೊಂಡಿರುತ್ತಾರೆ.

ಹೀಗೆ ನಾನಾ ತರಹದ ಪ್ರಶ್ನೆಗಳನ್ನು ಮುಂದಿಡುತ್ತಾ, ವಿಶ್ವ ಸಂವಾದ ಕೇಂದ್ರ ಒಟ್ಟು ೧೨ ಪ್ರಶ್ನೆಗಳನ್ನು ಕೇಳಿತು. ಒಂದು ಪ್ರಶ್ನೆ ಹೊರತುಪಡಿಸಿ (ನಮ್ಮಲ್ಲಿ ಬಂದ ಕಡೆಯ ಪ್ರಶ್ನೆ – ಮಾತೃಭಾಷೆಯಲ್ಲಿ ಶಿಕ್ಷಣ ಬೇಕೆ /ಬೇಡವೇ.) ಈ ಪ್ರಶ್ನೆಗಳಿಗೆ ಆಯ್ಕೆಗಳನ್ನು ಒಂದು ತಜ್ಞರ ತಂಡ ರಚಿಸಿತು.  ಎಲ್ಲ ರೀತಿಯ ಜನರು, ವಯಸ್ಸು, ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಳನ್ನು ನೀಡಲಾಗಿತ್ತು. ಅಲ್ಲದೆ ಪ್ರತಿ ಪ್ರಶ್ನೆಗೆ, ಪ್ರತಿಯೊಬ್ಬರಿಗೂ ೩ ಮತಗಳಿದ್ದವು. ಇಷ್ಟವಾಗುವ ೩ ಆಯ್ಕೆಗಳಿಗೆ ಜನರು ಮತ ಚಲಾಯಿಸಬಹುದಾಗಿತ್ತು.

ನವೆಂಬರ್ ಮುಗಿಯುತ್ತ ಬಂತು. ನವೆಂಬರ್ ಎಂದರೆ ಕನ್ನಡದ ತಿಂಗಳು ಎಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಉಳಿದವರೂ ಹೇಳುವಷ್ಟರ ಮಟ್ಟಿಗೆ ನಮ್ಮ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಹೀಗೆ ಬಂದ ಕೆಲ ಪ್ರಶ್ನೆಗಳ ಅಭಿಪ್ರಾಯಗಳನ್ನು ವಿಶ್ಲೇಷಿಸಿ, ಕಂತುಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಓದಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿಕೊಡಿ.

-ಸಂಪಾದಕೀಯ ತಂಡ

3 thoughts on “ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

Leave a Reply

Your email address will not be published.

This site uses Akismet to reduce spam. Learn how your comment data is processed.