ಪಾಣಿಪತ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ 2023ನೆಯ ಅಖಿಲ ಭಾರತೀಯ ಪ್ರತಿನಿಧಿ ಸಭಾವು ಹರಿಯಾಣದ ಪಾಣಿಪತ್ನ ಸಮಲ್ಕಾದಲ್ಲಿ ನಡೆಯುತ್ತಿದ್ದು ಪ್ರಾರಂಭಕ್ಕೂ ಮುನ್ನ ಸಹಸರಕಾರ್ಯವಾಹರಾದ ಶ್ರೀ ಮನಮೋಹನ್ ವೈದ್ಯ ಅವರು ಪತ್ರಿಕಾ ಗೋಷ್ಠಿ ನಡೆಸಿದರು.
ಮನಮೋಹನ್ ವೈದ್ಯ ಅವರು ಮಾತನಾಡುತ್ತಾ, “ಈ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪ್ರತಿವರ್ಷವು ನಡೆಯುತ್ತಿದ್ದು, ಇದರಲ್ಲಿ ಅಖಿಲ ಭಾರತ ಮಟ್ಟದ ಹಾಗೂ ಪ್ರಾಂತ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಈ ತಂಡವು ಸರಕಾರ್ಯವಾಹರ ಚುನಾವಣೆಗೆ ಮತ ಹಾಕಿ ಆಯ್ಕೆ ಮಾಡುತ್ತದೆ. ಅಲ್ಲದೇ ಸಂಘದ ವ್ಯವಸ್ಥೆಯಲ್ಲಿ ಈ ಪ್ರತಿನಿಧಿ ಸಭೆಯು ಸಂಘದ ಸರ್ವೋಚ್ಚ ನಿರ್ಣಾಯಕ ಸಭೆಯಾಗಿರುತ್ತದೆ”.
“ಒಂದು ವರ್ಷದ ಕಾರ್ಯಗಳನ್ನು ಶಾಖೆ, ಸ್ಥಾನ, ಸಾಪ್ತಾಹಿಕ ಮಿಲನ್ ಹಾಗೂ ಸಂಘ ಮಂಡಳಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಸದ್ಯ ದೇಶದಾದ್ಯಂತ 68,651 ದೈನಿಕ ಶಾಖೆಗಳು ಸುಮಾರು 42,613 ಸ್ಥಾನಗಳಲ್ಲಿ ನಡೆಯುತ್ತಿದೆ. 26,877 ಸಾಪ್ತಾಹಿಕ ಮಿಲನ್ ಮತ್ತು 10,412 ಸಂಘ ಮಂಡಳಿಗಳು ನಡೆಯುತ್ತಿದೆ. ಕೊರೋನಾದ ನಂತರ ನಿಧಾನ ಗತಿಯಲ್ಲಿದ್ದ ಸಂಘಕಾರ್ಯವನ್ನು ಮತ್ತೆ ಚುರುಕುಗೊಳಿಸಲು, ಮತ್ತೆ ಕಾರ್ಯನಿರತರಾಗಲು ಸ್ವಯಂಸೇವಕರು ಪ್ರಯತ್ನ ನಡೆಸಿ ಗೆದ್ದಿದ್ದಾರೆ. ಈ ಕಾರಣದಿಂದ 3,700 ಸ್ಥಾನಗಳು ಹೆಚ್ಚಾಗಿದೆ, 6100 ಹೊಸ ಶಾಖೆಗಳು ಆರಂಭವಾಗಿದೆ ಅಂದರೆ ಶೇಕಡ 30ರಷ್ಟು ಹೆಚ್ಚಾಗಿದೆ,ಅಲ್ಲದೆ 1,680ರಷ್ಟು ಸಂಘ ಮಂಡಳಿಗಳು ಹೆಚ್ಚಾಗಿದ್ದು ಶೇಕಡ 20ರಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ 71,355 ಸ್ಥಾನಗಳಲ್ಲಿ ಸದ್ಯ ಸಂಘ ಕಾರ್ಯನಿರತವಾಗಿದೆ. ಒಂದು ವರ್ಷದಲ್ಲಿ ಸಂಘದ ಶತಾಬ್ಧಿ ಕಾಲ ಆರಂಭವಾಗುವ ಮುನ್ನ ಇದನ್ನು ಒಂದು ಲಕ್ಷಕ್ಕೆ ತಲುಪಿಸುವ ಸಂಕಲ್ಪವಿದೆ” ಎಂದರು.
ಮುಂದುವರೆದು ಮಾತನಾಡಿದ ಅವರು, “ಸಂಘದ ಸ್ವಯಂಸೇವಕರ ಪ್ರಶಿಕ್ಷಣ ವರ್ಗವು ಪ್ರಥಮ ವರ್ಷ,ದ್ವಿತೀಯ ವರ್ಷ, ತೃತೀಯ ವರ್ಷಗಳ ಅನುಕ್ರಮದಲ್ಲಿ ಪ್ರತಿವರ್ಷ ಏಪ್ರಿಲ್ನಿಂದ ಜೂನ್ವರೆಗೂ ನಡೆಯುತ್ತದೆ. ಈ ವರ್ಷ ಈ ರೀತಿಯ 109 ವರ್ಗಗಳು ನಡೆಯಲಿದ್ದು, 20,000 ಯುವಕರು ಈ ರೀತಿ ಭಾಗವಹಿಸುವ ಅಂದಾಜಿದೆ. 68,651 ಶಾಖೆಗಳು ದೇಶದಾದ್ಯಂತ ನಡೆಯುತ್ತಿದ್ದು ಇದರಲ್ಲಿ ಕೆಲವು ವಿಭಾಗಗಳಿವೆ. ಇದರಲ್ಲಿ ಕೆಲವು ವಿದ್ಯಾರ್ಥಿಗಳೂ ಇದ್ದು, ಈ ರೀತಿಯ ಶಾಖೆಗಳು ಶೇ.60ರಷ್ಟಿದೆ. 40ವರ್ಷಕ್ಕಿಂತ ಹೆಚ್ಚಿರುವ ಸ್ವಯಂಸೇವಕರ ಸಂಖ್ಯೆ 10%,ಉಳಿದದ್ದು ವಿದ್ಯಾರ್ಥಿಗಳಲ್ಲದ 20-40ವರ್ಷದ ಉದ್ಯೋಗಸ್ಥರಿದ್ದು ಅವರ ಸಂಖ್ಯೆ ಶೇಕಡ 30%ರಷ್ಟಿವೆ.”
“ಸಂಘವು ದೇಶದಾದ್ಯಂತ 911 ಜಿಲ್ಲೆಗಳನ್ನು ಹೊಂದಿದ್ದು. ಇದರಲ್ಲಿ 901 ಜಿಲ್ಲೆಗಳಲ್ಲಿ ಸಂಘವು ಪ್ರತ್ಯಕ್ಷವಾಗಿ ಕೆಲಸ ನಡೆಸುತ್ತದೆ. 6,663 ತಾಲೂಕುಗಳಲ್ಲಿ ಅಂದರೆ 88% ತಾಲೂಕುಗಳಲ್ಲಿ ಪ್ರತ್ಯಕ್ಷ ಶಾಖೆಯಿದೆ. ಇದನ್ನು ಶೇಕಡ. 100ರಷ್ಟು ಮಾಡುವ ಸಂಕಲ್ಪವಿದೆ. ಮಂಡಲ ಅಥವಾ ಹೋಬಳಿ 59,326 ಇದ್ದು, ಇದರಲ್ಲಿ 26,498 ಮಂಡಲಗಳಲ್ಲಿ ಪ್ರತ್ಯಕ್ಷ ಶಾಖೆಯಿದೆ. ಉಳಿದ ಕಡೆಗಳಲ್ಲೂ ಶಾಖೆಗಳನ್ನು ವಿಸ್ತರಿಸುವ ಯೋಜನೆಯಿದೆ”ಎಂದರು.
“ಸಮಾಜದ ಎಲ್ಲಾ ವರ್ಗದ ಜನರೂ ಶಾಖೆಗಳಲ್ಲಿ, ಸಂಘ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕರು ತಮ್ಮ ದಿನಗೂಲಿಯ ನಡುವೆಯೂ ಸಂಘ ಶಿಕ್ಷಾ ವರ್ಗಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂಘದ ಶತಾಬ್ದಿ ವರ್ಷ ತಲುಪುವಾಗ ಎಲ್ಲಾ ಮಂಡಲಗಳಲ್ಲಿ ಸಂಘಕಾರ್ಯದ ವಿಸ್ತರಣೆಯ ಹಾಗೂ ದೃಢಗೊಳಿಸುವ ದೃಷ್ಟಿಯಿಂದ ಸಂಘದ ವಿಸ್ತಾರಕ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯವರೆಗು 1300ವಿಸ್ತಾರಕರು ಹೊರಟಿದ್ದಾರೆ.ಮತ್ತೂ 500ಮಂದಿ ಯುವಕರು ವಿಸ್ತಾರಕರಾಗಿ ಹೊರಡುವ ನಿರೀಕ್ಷೆಯಿದೆ”.
“ಸಂಘದ ಜೊತೆ ಜೋಡಿಸಿಕೊಳ್ಳುವ ಸಲುವಾಗಿ ಯಾರನ್ನ ಸಂಪರ್ಕಿಸಬೇಕು ತಿಳಿಯದಿದ್ದಾಗ ಅನೇಕ ಮಂದಿ ಯುವಕರು ಸಂಘದ ವೆಬ್ಸೈಟ್ನಲ್ಲಿ Join RSS ಪೋರ್ಟಲ್ ಮೂಲಕ RSS ಸೇರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. 2017 ರಿಂದ 2022ರವರೆಗೂ ಸುಮಾರು 7,25,000 ವಿನಂತಿ ಬಂದಿದೆ. ಅಂದರೆ ಒಂದು ವರ್ಷಕ್ಕೆ ಸರಾಸರಿ 1,20,000 ಮಂದಿ ಹೀಗೆ Join RSS ಪೋರ್ಟಲ್ ಮೂಲಕ ಸಂಘದೊಂದಿಗೆ ಸೇರಿಕೊಂಡಿದ್ದಾರೆ. ಇದರಲ್ಲಿ 20-35 ವರ್ಷದ ಯುವಕರೇ ಹೆಚ್ಚಾಗಿದ್ದು, ಅದರಲ್ಲೂ ಮುಖ್ಯವಾಗಿ ಶೇಕಡ 70% ಮಂದಿ ಸೇವೆಯ ಕಾರಣಕ್ಕಾಗಿ ಸಂಘದ ಜೊತೆ ಜೋಡಿಸಿಕೊಳ್ಳಲು ಬಯಸಿದ್ದಾರೆ.”
“ಇನ್ನು ಸಭೆಯಲ್ಲಿ ಈ ಬಾರಿ ಸ್ವ – ಆಧಾರಿತ ವಿಕಾಸ ನೀತಿಯ ಕುರಿತಾಗಿ ಅಂದರೆ ಸ್ವಾವಲಂಬಿ,ಸ್ವದೇಶಿ ಹೀಗೆ ಅನೇಕ ಪ್ರಾಕಾರಗಳಲ್ಲಿ ದೇಶ ಮುಂದುವರೆಯಬೇಕಾದ ಅಗತ್ಯವಿದ್ದು ಈ ಕುರಿತು ಕಾರ್ಯಚಟುವಟಿಕೆಗೆ ಸಂಘವು ನಿರ್ಣಯ ತೆಗೆದುಕೊಳ್ಳಲಿದೆ. ಅಲ್ಲದೆ ಭಗವಾನ್ ಮಹಾವೀರರ ಮಹಾಪರಿನಿರ್ವಾಣ ದಿನದ ಸಲುವಾಗಿ, ಸ್ವಾಮಿ ದಯಾನಂದ ಸರಸ್ವತಿ ಅವರ 200ನೆಯ ಜನ್ಮ ಜಯಂತಿಯ ಸಲುವಾಗಿ ಹಾಗು ಛತ್ರಪತಿ ಶಿವಾಜಿ ಮಹಾರಾಜರ 350ನೆಯ ವರ್ಷದ ರಾಜ್ಯಾಭಿಷೇಕದ ಸಲುವಾಗಿ ವಿಶೇಷ ಚರ್ಚೆ ಮತ್ತು ಸ್ಮರಣಾರ್ಥ ಕಾರ್ಯಕ್ರಮವೂ ನಡೆಯಲಿದೆ” ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ಉಪಸ್ಥಿತರಿದ್ದರು.