ರಾಷ್ಟ್ರೀಯ ಸ್ವಯಂಸೇವಕ ಸಂಘ
ಅಖಿಲ ಭಾರತೀಯ ಪ್ರತಿನಿಧಿ ಸಭಾ 2023

ಪಾಣಿಪತ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಂಗಳವಾರ ಸಮಾಪನಗೊಂಡಿದೆ. ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಅಂತಿಮ ದಿನವಾದ ಇಂದು ಪತ್ರಿಕಾಗೋಷ್ಠಿ ನಡೆಸಿದರು. ಇಂದು ನಿಧನರಾದ ಖ್ಯಾತ ಪತ್ರಕರ್ತ ಡಾ. ವೇದ್ ಪ್ರತಾಪ್ ವೈದಿಕ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಬೈಠಕ್ ನಲ್ಲಿ ವಾರ್ಷಿಕ ವರದಿಯ ಸಹಿತ ಭವಿಷ್ಯದ ಕಾರ್ಯ ದೃಷ್ಟಿಯ ಕುರಿತು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಈ ನಿರ್ಣಯಗಳ ಪ್ರಸ್ತಾವನೆಯು ಭಾರತದ ಅಮೃತ ಕಾಲ, ಸಂಘದ ಶತಾಬ್ದಿ ವರ್ಷಾಚರಣೆಯ ಸಮಯದಲ್ಲಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಕೆಲಸ ಮಾಡುತ್ತದೆ. ಜಾಗತಿಕ ನಾಯಕತ್ವದ ಹಾದಿಯಲ್ಲಿ ಭಾರತವು ಸ್ಥಿರವಾದ ದಾಪುಗಾಲು ಇಡುತ್ತಿರುವ ಈ ಸಮಯದಲ್ಲಿ, ಈ ಹಾದಿಯಲ್ಲಿ ಯಾರು ಮುಳ್ಳುಗಳನ್ನು ಹಾಕಲು ಬಯಸುತ್ತಾರೆ ಎಂಬುದನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಇಡೀ ಸಮಾಜವು ರಾಷ್ಟ್ರದ ನವೋತ್ಥಾನದ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಕೆಲಸ ಮಾಡುತ್ತದೆ ಎಂದರು.

ದೇಶದ ಅಮೃತಕಾಲದಲ್ಲಿ ಭಾರತದ ಆಖ್ಯಾನ ಬದಲಾಗಬೇಕು. ಭಾರತದ ಪ್ರಶ್ನೆಗಳಿಗೆ ಭಾರತದಿಂದಲೇ ಉತ್ತರ ಸಿಗಬೇಕು. ತಿರುಚಿದ ಇತಿಹಾಸದ ಜಾಗದಲ್ಲಿ ಸರಿಯಾದ ಇತಿಹಾಸವನ್ನು ಹೇಳಬೇಕು ಮತ್ತು ಯುಗಾನುಕೂಲಕ್ಕೆ ತಕ್ಕಂತೆ ಸಮಕಾಲೀನ ಪರಿಹಾರಗಳನ್ನು ರಚಿಸಬೇಕಿದೆ.

ಸಭೆಯಲ್ಲಿ ನಿರ್ಣಯದ ಹೊರತಾಗಿ, ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜನ್ಮ ವರ್ಷಾಚರಣೆ, ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ನೇ ವರ್ಷ ಮತ್ತು ಮಹಾವೀರ ಸ್ವಾಮಿಗಳ 2550 ನೇ ವರ್ಷದ ನಿರ್ವಾಣದ ಕುರಿತಾದ ಮೂರು ಹೇಳಿಕೆಗಳನ್ನು ಸಹ ನೀಡಲಾಯಿತು.

ಸರಕಾರ್ಯವಾಹರು ಮಾತನಾಡುತ್ತಾ ವಿಜಯದಶಮಿ 2025ಕ್ಕೆ ಸಂಘದ ಶತಾಬ್ದಿ ವರ್ಷ ಆರಂಭವಾಗುತ್ತದೆ.ಆದರೆ ಪ್ರತಿನಿಧಿ ಸಭಾದಲ್ಲಿ ಈ ಕುರಿತಂತೆ ಯಾವುದೇ ಯೋಜನೆ ನಡೆದಿಲ್ಲ.ಆದರೆ ಕಾರ್ಯವಿಸ್ತಾರ ಮತ್ತು ಗುಣಾತ್ಮಕವಾಗಿ ಹೇಗೆ ವಿಸ್ತರಣೆಯಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು ಎಂದರು. ಆಯಾ ಸ್ಥಾನಗಳಲ್ಲಿ ಗ್ರಾಮ ಬಸ್ತಿಗಳಲ್ಲಿ ಅಲ್ಲಿನ ಪರಿಸ್ಥಿತಿಯ ಅಧ್ಯಯನ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಶಾಖೆಯ ಸ್ವಯಂಸೇವಕರು ನಿರತರಾಗುತ್ತಾ ಸಮಾಜವನ್ನು ಜೋಡಿಸುವ ಪ್ರಯತ್ನ ನಡೆಸುತ್ತಾರೆ. ಈ ರೀತಿಯ ಪ್ರಯೋಗ ಈಗಲೂ ನಡೆಯುತ್ತಿದೆ, ಈ ಕುರಿತಾಗಿಯೂ ಪ್ರತಿನಿಧಿ ಸಭಾದಲ್ಲಿ ಚರ್ಚೆ ನಡೆಯಿತು. ದತ್ತಾತ್ರೇಯ ಹೊಸಬಾಳೆಯವರು ಮಹತ್ವಪೂರ್ಣ ವಿಚಾರಗಳ ಕುರಿತು ಮಾತನಾಡುತ್ತಾ , ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ,ಸ್ವದೇಶೀ ಆಚರಣೆ, ನಾಗರಿಕ ಕರ್ತವ್ಯಗಳು, ಮುಂದಿನ ದಿನಗಳಲ್ಲಿ ಈ ಐದು ಕಾರ್ಯಗಳ ಕಡೆಗೆ ಗಮನ ಹರಿಸಿ ಸಾಮಾಜಿಕ ಪರಿವರ್ತನೆ ನಡೆಸುವ ಕುರಿತು ಪ್ರಯತ್ನ ನಡೆಸಲಿದ್ದೇವೆ ಎಂದರು. ಇದರ ಜೊತೆಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅಸ್ಪೃಶ್ಯತೆ ಸಮಾಜಕ್ಕೆ ಶಾಪ ಮತ್ತು ಕಳಂಕವಾಗಿದೆ. ಸಂಘ ಅದನ್ನು ತೊಲಗಿಸಲು ಪ್ರತಿಬದ್ಧವಾಗಿದೆ ಎಂದರು.

ಮುಂದುವರೆದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡುತ್ತಾ ಸಂಘವು ಜನಸಂಖ್ಯಾ ಅಸಮತೋಲನದ ಕುರಿತಾಗಿ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸಿದೆ. ಈ ವಿಷಯವಾಗಿ ಆಗಾಗ ಸುಪ್ರೀಂ ಕೋರ್ಟ್, ನಿವೃತ್ತ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಹಾಗೂ ಮಹಾತ್ಮ ಗಾಂಧಿಯವರೂ ಕೂಡ ಈ ಕುರಿತು ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಎಂದರು.ರಾಹುಲ್ ಗಾಂಧಿಯವರು ಸಂಘದ ಕುರಿತು, ಭಾರತದ ಕುರಿತು ಅಪಶಬ್ದಗಳಿಂದ ನಿಂದಿಸಿದ್ದಾರೆ.ಇದರ ಕುರಿತು ನಿಮ್ಮ ಅಭಿಪ್ರಾಯ ಏನು ಎಂದಾಗ ನಾವು ಈ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ, ಅವರು ರಾಜಕೀಯ ಅಜೆಂಡಾವನ್ನಿಟ್ಟುಕೊಂಡು ಮಾತನಾಡುತ್ತಾರೆ.ಒಂದು ರಾಜಕೀಯ ಪಕ್ಷದ ನೇತಾರರಾಗಿ ಜವಾಬ್ದಾರಿಯಿಂದ ಮಾತನಾಡಬೇಕು ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿರುವ ಅವರು ಇಲ್ಲಿಯವರೆಗೂ ಒಂದು ಕ್ಷಮೆಯನ್ನೂ ಕೇಳಿಲ್ಲ ಎಂದರು. ಸಲಿಂಗ ವಿವಾಹದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು marriages can take place only between two opposite genders, ವಿವಾಹ ಒಂದು ಸಂಸ್ಕಾರ, ಅದು ಒಪ್ಪಂದವಲ್ಲ, ವಿವಾಹದ ಉದ್ದೇಶ ಕೇವಲ ವ್ಯಕ್ತಿಗತ ಸುಖವಲ್ಲ, ಬದಲಾಗಿ ಇಡಿಯ ಸಮಾಜದ ಹಿತವೇ ಆಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರು ಮಾತನಾಡುತ್ತಾ ಭಾರತವು ವೇಗವಾಗಿ ಆರ್ಥಿಕ ವಿಕಾಸ ಕಾಣುತ್ತಿದೆ. ಸಾಮರಿಕ ಮತ್ತು ಕೂಟನೀತಿಯಲ್ಲೂ ಹೆಚ್ಚುತ್ತಿರುವ ಭಾರತದ ವರ್ಚಸ್ಸು ನಮಗೆಲ್ಲ ಪರಿಚಯವಿದೆ. ಈ ಸಂದರ್ಭದಲ್ಲಿ ಭಾರತೀಯ ಸಮಾಜ ಒಂದಾಗಿ ಸರ್ವಾಂಗೀಣ ವಿಕಾಸದ ಕಡೆಗೆ ಗಮನ ಹರಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ದೇಶವಿದೇಶಗಳಲ್ಲಿ ಅನೇಕ ಶಕ್ತಿಗಳು ಭಾರತವನ್ನು ಈ ದಾರಿಯಲ್ಲಿ ಸಾಗುವುದರಿಂದ ತಪ್ಪಿಸಲು ಕಾದುಕುಳಿತಿವೆ. ಆದರೆ ‘ಸ್ವ’-ತ್ವವನ್ನು ಮೈಗೂಡಿಸಿಕೊಂಡು ಇಂತಹ ಶಕ್ತಿಗಳನ್ನು ಸೋಲಿಸಬೇಕಾದ ಅಗತ್ಯವಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ
ಅಖಿಲ ಭಾರತೀಯ ಪ್ರತಿನಿಧಿ ಸಭಾ 2023ವು ಹರಿಯಾಣದ ಪಾಣಿಪತ್‌ನಲ್ಲಿ ಮಾರ್ಚ್ 12 ರಿಂದ ನಡೆದಿದ್ದು, ಮೂರು ದಿನಗಳ ಈ ಸಭೆಯಲ್ಲಿ ವಿಭಿನ್ನ ಪ್ರಾಂತಗಳಿಂದ ಬಂದ ಪ್ರತಿನಿಧಿಗಳು ವಿಚಾರ ಮಂಥನದಲ್ಲಿ ಭಾಗವಹಿಸಿದರು. ಸಭೆಯ ಮೊದಲ ದಿನದಂದು ವಾರಗಷಿಕ ವರದಿ ಪ್ರಸ್ತುತ ಪಡಿಸಲಾಗಿತ್ತು.ಅದರ ವರದಿಯಂತೆ 62ಸಾವಿರದಿಂದ 68ಸಾವಿರಕ್ಕೆ ಶಾಖೆಗಳು ಸಂಖ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಒಂದು ಲಕ್ಷಕ್ಕೇರಿಸುವ ಕುರಿತು ಸಭೆಯಲ್ಲಿ ಸಂಕಲ್ಪ ಮಾಡಲಾಗಿದೆ. ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.