ಬೆಂಗಳೂರು : ಸಕ್ಷಮ ಸಂಘಟನೆಯು AICFB (ಅಖಿಲ ಭಾರತ ಚೆಸ್ ಫೆಡರೇಶನ್ ಫಾರ್ ದಿ ಬ್ಲೈಂಡ್) ಮತ್ತು KSCAVC (ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಫಾರ್ ವಿಶ್ವಲಿ ಚಾಲೆಂಜ್ಡ್) ಸಹಯೋಗದಲ್ಲಿ ದಕ್ಷಿಣ ವಲಯ ಚೆಸ್ ಚಾಂಪಿಯನ್ಶಿಪ್ ಅನ್ನು ಜನವರಿ 5 ರಿಂದ ಜನವರಿ 7 ರವರೆಗೆ ಬೆಂಗಳೂರಿನ ಬಸವನಗುಡಿ ಶ್ರೀ ನಿಜಗುಣರ ಕ್ಷೇತ್ರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ 6 ರಾಜ್ಯಗಳಿಂದ ಸುಮಾರು 160 ದೃಷ್ಟಿ ಸವಾಲುಳ್ಳ ಚೆಸ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಸಕ್ಷಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ.ಗೋವಿಂದರಾಜನ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಚದುರಂಗದ ಕಾಲಾಳುಗಳನ್ನು ಚಲಿಸುವ ಮೂಲಕ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ಅವರ ಉದ್ಘಾಟನಾ ಭಾಷಣದಲ್ಲಿ ಅವರು ಪ್ರತಿ ಆತ್ಮವು ದೈವೀ ಗುಣ ಸಂಪನ್ನ ಮತ್ತು ದಿವ್ಯಾಂಗತೆಯು ಭಗವಂತನ ಸೃಷ್ಟಿಯ ಭಾಗವಾಗಿರುತ್ತದೆ. ಈ ರೀತಿಯ ಕ್ರೀಡಾ ಚಟುವಟಿಕೆಗಳು ದೃಷ್ಟಿ ಸವಾಲುಳ್ಳವರಿಗೆ ತಮ್ಮ ಸವಾಲುಗಳನ್ನು ಜಯಿಸಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಉತ್ಸಾಹ ತುಂಬಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕ್ರೀಡಾ ಸಕ್ಷಮದ ಯೋಜನೆಯ ಭಾಗವಾಗಿ ಈ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿದ ಸಕ್ಷಮ ಕರ್ನಾಟಕ ತಂಡದ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಚೆಸ್ ಪದ್ಯಾವಳಿಯ ಉದ್ಘಾಟನೆಯೊಂದಿಗೆ ಲೂಯಿಸ್ ಬ್ರೈಲ್ ದಿನಾಚರಣೆಯ ನಿಮಿತ್ತ ಶ್ರೀ ಶ್ರೀಕೃಷ್ಣ ಉಡುಪ ಅವರನ್ನು ಚೆಸ್ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮತ್ತು ನಳಂದ ಚೆಸ್ ಅಕಾಡೆಮಿಯನ್ನು ಸ್ಥಾಪಿಸಿ ಅಲ್ಲಿ ಅವರು ಹಲವಾರು ಸಾಧಕ ದೃಷ್ಟಿ ಸವಾಲುಳ್ಳ ಚೆಸ್ ಆಟಗಾರರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಸಾಧನೆಗಾಗಿ ಅವರನ್ನು ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಪ್ಯಾರಾ ಏಷ್ಯನ್ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ ಮತ್ತು AICFB ಉಪಾಧ್ಯಕ್ಷರಾದ ಶ್ರೀ ಕಿಶನ್ ಗಂಗೊಳ್ಳಿ ಅವರು ದಕ್ಷಿಣ ವಲಯ ಚೆಸ್ ಚಾಂಪಿಯನ್ಶಿಪ್ ಅನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊತ್ತ ಸಕ್ಷಮ ಸಂಘಟನೆಯನ್ನು ಶ್ಲಾಘಿಸಿದರು ಮತ್ತು ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು.
ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಡಾ. ಸುಧೀರ್ ಪೈ ಅವರು ದಕ್ಷಿಣ ವಲಯ ಚೆಸ್ ಚಾಂಪಿಯನ್ಶಿಪ್ ಆಯೋಜಿಸುವಲ್ಲಿ ಸಕ್ಷಮ ಸಂಘಟನೆಗೆ ಸಹಕರಿಸಿದ RNS ಕಾಲೇಜಿನ NSS ಸ್ವಯಂಸೇವಕರು ಮತ್ತು ಸ್ಥಳೀಯ RSS ಸ್ವಯಂಸೇವಕರನ್ನು ಅವರು ಅಭಿನಂದಿಸಿದರು. ಸಕ್ಷಮ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ವಸಂತ ಮಾಧವ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀ. ಕಾ. ಶ೦. ಶ್ರೀಧರ್ ದಿಕ್ಸೂಚಿ ಭಾಷಣ ಮಾಡಿದರು. ಸನ್ಮಾನ ಕಾರ್ಯಕ್ರಮವನ್ನು ಶ್ರೀ ಯೋಗೀಶ್ ನೆರವೇರಿಸಿ ಕೊಟ್ಟರು, ಪ್ರಾಂತ ಖಜಾಂಚಿ ಶ್ರೀ ರಮೇಶ್ ಪ್ರಭು ವಂದಿಸಿದರು ಮತ್ತು ಡಾ.ಹರಿಕೃಷ್ಣ ರೈ ಸಕ್ಷಮದ ಪ್ರಾಂತ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.