ಜಾಬಲ್ಪುರ : ಜಾಬಲಪುರದ ಮಾನಸ ಭವನದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀ ರಾಮಾನಂದಾಚಾರ್ಯರ 723ನೆಯ ಜಯಂತಿಯಂದು ಸಮರಸತಾ ವ್ಯಾಖ್ಯಾನಮಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಭಾಗವಹಿಸಿ ಮಾತನಾಡಿದರು. “ಭಗವಂತ ತನ್ನ ಯಾವ ಅವತಾರದಲ್ಲೂ ಜಾತಿ, ಪಂಥ ನೋಡಲಿಲ್ಲ, ಭೇದ ಭಾವ ಮಾಡಲಿಲ್ಲ. ಇದೇ ನಮ್ಮ ಶಾಸ್ತ್ರಗಳಲ್ಲೂ ಇದೆ. ಈ ದೇಶ ನಮ್ಮದು, ಈ ಸಮಾಜ ನಮ್ಮದು. ನಮ್ಮದೇ ಆದ ಪವಿತ್ರವಾದ ಹಿಂದೂ ಧರ್ಮ ಸಂಸ್ಕೃತಿಯಿದೆ. ಇದನ್ನು ಎಲ್ಲಾ ರೋಗಗಳಿಂದ ಮುಕ್ತವಾಗಿಸಿ ಮತ್ತೆ ಎದ್ದು ನಿಲ್ಲಿಸಬೇಕಿದೆ. ಇದನ್ನು ನಾವು ಮಾಡದಿದ್ದರೆ ನಮ್ಮ ಮನೆ ಕುಟುಂಬ ಮತ್ತು ನಮಗೂ ಸಂಕಟ ತಪ್ಪಿದ್ದಲ್ಲ”ಎಂದರು.
ಅವರು ಮುಂದುವರೆದು ಮಾತನಾಡುತ್ತಾ “ಸಂತರಿಗೆ ಜಾತಿ ಮತಗಳ ಭೇದವನ್ನು ಕಟ್ಟಬಾರದು. ಸಂತರು ಇಡಿಯ ಸಮಾಜಕ್ಕೆ ಸೇರಿದವರು. ವರ್ತಮಾನ ಸಮಯದಲ್ಲು ಸಾಮಾಜಿಕ ಸಮರಸತೆ ಬಹಳ ಅವಶ್ಯಕವಾಗಿದೆ. ಮನುಷ್ಯರಲ್ಲಿ ಜಾತಿ – ಮತಗಳು, ಉಚ್ಚ – ನೀಚ ಈ ರೀತಿಯ ದೃಷ್ಟಿಯಿಂದ ನೋಡುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಇದು ಈಗಿನ ಅಭ್ಯಾಸವಲ್ಲ. ಇದನ್ನು ನಿಧಾನವಾಗಿ ಸುಧಾರಿಸುವ ಸಮಯ ಬಂದಿದೆ. ಭಾರತವನ್ನು ತುಚ್ಛವಾಗಿ ಕಾಣುವವರಿಗೆ ಸಮರಸತೆಯಿಂದ ಉತ್ತರ ನೀಡಬೇಕಿದೆ. ಹಿಂದೂ ಸಮಾಜವನ್ನು ಸಂಘ ಸಂಘಟಿಸುತ್ತಿದೆ. ಆದರೆ ಸಮರಸತೆಯಿಲ್ಲದೆ ಸಂಘಟನೆ ಸಾಧ್ಯವಿಲ್ಲ. ಹಾಗಾಗಿ ಸಾಮಾಜಿಕ ಸಮರಸತೆ ನಮ್ಮದಾಗಿಸಬೇಕಿದೆ. ಸಣ್ಣ ಸಣ್ಣ ವಿಚಾರಗಳಲ್ಲಿ ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕಿದೆ” ಎಂದರು.
ಸರಸಂಘಚಾಲಕರು ಮಾತನಾಡುತ್ತಾ, ” ಧರ್ಮ ನಮ್ಮನ್ನು ಜೋಡಿಸುತ್ತದೆ. ಆದರೆ ಭಾರತದಿಂದ ಹೊರಗಡೆ ಧರ್ಮ ಎನ್ನುವ ಶಬ್ದವೇ ಇಲ್ಲ. ಸಮಾಜದಲ್ಲಿ ಯಾವ ಜಾತಿ ಭೇದಗಳು ಹುಟ್ಟಿದ್ದಾವೋ ಅದನ್ನು ತೊಡೆಯಲು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ. ಭೇದಭಾವಗಳ ಸಮರ್ಥನೆ ಮಾಡುವ ಕಾಲ ಈಗ ಇನ್ನಿಲ್ಲವಾಗಬೇಕಿದೆ. ಧರ್ಮವನ್ನು ತಿಳಿಯಬೇಕೆಂದರೆ ಸತ್ಯದ ದಾರಿಯಲ್ಲಿ ಸಾಗಬೇಕಿದೆ. ಆಧ್ಯಾತ್ಮದಲ್ಲಿ ಭೇದಗಳ ಸಮರ್ಥನೆ ಎಲ್ಲಿಯೂ ಇಲ್ಲ. ಹಾಗಾಗಿ ಸಮರಸತೆಯ ಕಾರ್ಯಕ್ರಮವನ್ನು ಹಿಂದೂ ಸಮಾಜದಲ್ಲಿ ಮತ್ತೆ ಹಮ್ಮಿಕೊಳ್ಳುವ ಅಗತ್ಯವಿದೆ. ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ಅಸ್ಪೃಶ್ಯತೆಯ ರೋಗವನ್ನು ಕಿತ್ತೆಸೆದು ಸಮರಸತೆಯಿಂದ ಭಾರತವನ್ನು ವಿಶ್ವ ಗುರುವಾಗಿಸಲು ಮುನ್ನಡೆಯಬೇಕಿದೆ” ಎಂದರು.
ಈ ಸಮರಸತಾ ವ್ಯಾಖ್ಯಾನಮಾಲೆಯಲ್ಲಿ ಜಗದ್ಗುರು ಶ್ರೀ ಸುಖಾನಂದ ದ್ವಾರಾಚಾರ್ಯ ಸ್ವಾಮಿ ರಾಘವದೇವಾಚಾರ್ಯ ಅವರು ಸಮರಸತೆಯ ಕುರಿತಾಗಿ ಹಮ್ಮಿಕೊಂಡ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಅವರು ಮಾತನಾಡಿ, “ಅನೇಕ ಜನ ತಮ್ಮ ರೂಢಿಗಳನ್ನು ಬದಲಿಸಿಕೊಳ್ಳಲು ಹೆದರುತ್ತಾರೆ. ಆದರೆ ಇಂದಿನ ದಿನಗಳಿಗೆ ಈ ರೀತಿಯ ಬದಲಾವಣೆ ಅಗತ್ಯವಾಗಿದೆ. ನಮ್ಮ ಶಾಸ್ತ್ರಗಳು ಹೇಳುವಂತೆ ಭಕ್ತಿಯಿದ್ದರೆ ಕಂಬದಿಂದಲೂ ಭಗವಂತ ಹೊರಬರುತ್ತಾನೆ. ಭಗವಂತನೇ ಹೀಗೆ ಜಾತಿ ಭೇದ ನೋಡುವುದಿಲ್ಲವಾದರೆ ಈ ರೀತಿಯ ಭೇದಗಳನ್ನು ಮಾಡಲು ನಾವು ಯಾರು?” ಎಂದರು.