
ರಾಷ್ಟ್ರವ್ಯಾಪಿ ಬಹುದೊಡ್ಡ ಚರ್ಚೆಗೆ ಮುನ್ನುಡಿ ಬರೆದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತಾದ ಹೇಳಿಕೆಗೆ ಇದೀಗ ಕರ್ನಾಟಕದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ “ಸನಾತನ ಎಂದರೆ ಪ್ರಾಚೀನ ಎಂಬ ಅರ್ಥವಿದೆ. ಯಾವುದಕ್ಕೆ ಆರಂಭ ಮತ್ತು ಅಂತ್ಯಗಳಿಲ್ಲವೋ ಅಂದರೆ ಹಿಂದೆ ಇದ್ದಿದ್ದು, ಈಗಲೂ ಇರುವುದು, ಮುಂದೆಯೂ ಇರುವಂತದ್ದಕ್ಕೆ ಸನಾತನ ಎನ್ನುತ್ತಾರೆ” ಎಂದು ಸನಾತನ ಶಬ್ದದ ಕುರಿತು ತಿಳಿಸಿದರು.
ಧರ್ಮದ ಕುರಿತು ಮಾತನಾಡುತ್ತಾ “ಕತ್ತಲೆಯನ್ನು ನೀಗಿ ಬೆಳಕನ್ನು ತರುವದು, ಕೊಳೆಯನ್ನು ನೀಗಿ ಶುದ್ಧತೆಯನ್ನು ತರುವುದು ಧರ್ಮ. ಯಾವುದೇ ಧರ್ಮವಾಗಲಿ ಅದಕ್ಕೆ ಮಹತ್ತರವಾದ ವ್ಯವಸ್ಥೆ ಇರತ್ತದೆ. ಧರ್ಮವೆನ್ನುವುದು ಆಮ್ಲಜನಕವಿದ್ದ ಹಾಗೆ. ಅದರ ಮೂಲೋತ್ಪಾಟನೆ ಮಾಡುವುದರಿಂದ ನಮಗೇ ಸಮಸ್ಯೆ” ಎಂದು ಹೇಳಿದರು.

“ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿ ಇರುವಾಗ ಸ್ವಲ್ಪ ಶಬ್ದಗಳನ್ನು ನೋಡಿಕೊಂಡು ಮಾತನಾಡುವುದು ಉತ್ತಮ. ಚಾಣಕ್ಯ ಬಹಳ ಹಿಂದೆಯೇ ಹೇಳಿರುವಂತೆ ನಾಡಳುವ ದೊರೆ ನಾಸ್ತಿಕನಾದರೂ, ಪ್ರಜೆಗಳ ಆಸ್ತಿಕತೆಯನ್ನು ಗೌರವಿಸಬೇಕು” ಎಂದು ಉದಯನಿಧಿ ಸ್ಟಾಲಿನ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
“ಈ ಸೃಷ್ಟಿಯಲ್ಲಿ ಪ್ರತಿ ಜೀವಿಯೂ ವಿಭಿನ್ನವಾಗಿರುವುದರಿಂದಲೇ ವಿಭಿನ್ನ ಕ್ಷೇತ್ರಗಳಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ. ಹಾಗೆಯೇ ಪ್ರತಿ ನೆಲಕ್ಕೂ ಅದರದ್ದೇ ಆದ ಧರ್ಮವಿರುತ್ತದೆ. ಒಂದೊಂದು ನೆಲಕ್ಕೆ ಅದರದ್ದೇ ಆದ ಸತ್ವ ಇರುತ್ತದೆ. ಭಾರತದ ನೆಲದ ಧರ್ಮದ ವಿಶೇಷತೆಯನ್ನು ತಿಳಿಸುವಾಗ ಸ್ವಾಮಿ ವಿವೇಕಾನಂದರು ‘If India lives, who dies? If India dies, who lives? ಎಂದು ತಿಳಿಸುತ್ತಾರೆ. ಈ ಮಾತಿಗೆ ತುಂಬಾ ಗಹನವಾದ ಅರ್ಥವಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ” ಎಂದು ಅಭಿಪ್ರಾಯಪಟ್ಟರು
“ಧರ್ಮದ ನಿಜವಾದ ಅರ್ಥವನ್ನು ಅರ್ಥೈಸಿಕೊಂಡವರು ನಿಜವಾಗಿಯೂ ಯಾವ ಧರ್ಮದ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ. ಧರ್ಮದ ತಿರುಳನ್ನು ಅರ್ಥೈಸಿಕೊಳ್ಳದೇ ಇರುವವರು ತಾನು ಹುಟ್ಟಿದ ಧರ್ಮದ ಬಗ್ಗೆಯೂ ಮಾತನಾಡುತ್ತಾರೆ, ಮತ್ತೊಂದು ಧರ್ಮದ ಬಗ್ಗೆಯೂ ಮಾತನಾಡುತ್ತಾರೆ. ಯಾವ ಧರ್ಮ ಬೇರೆಲ್ಲಾ ಧರ್ಮಗಳು ಹುಟ್ಟುವ ಮೊದಲೇ ಅಸ್ತಿಸ್ವದಲ್ಲಿತ್ತೋ ಅದನ್ನು ಸನಾತನ ಧರ್ಮವೆನ್ನುತ್ತಾರೆ. ಅಂತಹ ಧರ್ಮವನ್ನು ಪಾಲಿಸುತ್ತಿದ್ದ ನೆಲದ ಆಧಾರದ ಮೇಲೆ ಅದನ್ನು ಹಿಂದು ಧರ್ಮವೆಂದು ಕರೆದಿದ್ದೇವೆ” ಎಂದು ನುಡಿದರು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ‘ಸನಾತನ’ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯ ವೀಡಿಯೋ ತುಣುಕು:
