ಇಂದು ಚನ್ನೇನಹಳ್ಳಿಯಲ್ಲಿ ನಡೆದ ಆರೆಸ್ಸೆಸ್ ಸಂಘ ಶಿಕ್ಷಾ ವರ್ಗದ ಸಮಾರೋಪ ಕಾರ್ಯಕ್ರಮದ ವರದಿ

07.05.2022, ಶನಿವಾರ
ಬೆಂಗಳೂರು

ಇಂದು ಸಂಜೆ ನಗರದ ಹೊರವಲಯದಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ವಿದ್ಯಾರ್ಥಿ ಮತ್ತು ಉದ್ಯೋಗಿಗಳ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ನಡೆಯಿತು.

ಪ್ರತಿ ವರ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳ ರಜಾದಿನಗಳಲ್ಲಿ ಕಾರ್ಯಕರ್ತರ ನಿರ್ಮಾಣಕ್ಕಾಗಿ ತರಬೇತಿ ವರ್ಗಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈ ವರ್ಷ ಕರ್ನಾಟಕ ದಕ್ಷಿಣ ಪ್ರಾಂತದ 20 ದಿನಗಳ 2 ಸಂಘ ಶಿಕ್ಷಾವರ್ಗಗಳು ಕಳೆದ ಏಪ್ರಿಲ್ ತಿಂಗಳ 17 ರಂದು ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಆರಂಭವಾಗಿದ್ದವು.

ಚಾಮರಾಜನಗರದ ಜಿಲ್ಲಾ ಸಂಘಚಾಲಕರಾದ ರಾಜಣ್ಣ ಅವರು ಕಾರ್ಯಕ್ರಮದಲ್ಲಿ ಶಿಬಿರದ ವರದಿ ಓದಿದರು. ಪ್ರಥಮ ವರ್ಷದ ವಿದ್ಯಾರ್ಥಿ ಸಂಘ ಶಿಕ್ಷಾ ವರ್ಗದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 104  ಸ್ಥಾನಗಳಿಂದ 188 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ. ಉದ್ಯೋಗಿಗಳಿಗಾಗಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಕರ್ನಾಟಕದ ದಕ್ಷಿಣ ಪ್ರಾಂತದ 214 ಸ್ಥಾನಗಳಿಂದ 272 ಶಿಕ್ಷಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಈ 2 ಶಿಬಿರಗಳಲ್ಲಿ ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಲ್ಲದೇ ಕೃಷಿಕ, ಕೂಲಿ ಕಾರ್ಮಿಕ, ಸಾಫ್ಟ್‌ವೇರ್‌ ಎಂಜಿನಿಯರ್‌, ಅಧ್ಯಾಪಕ, ವೈದ್ಯ ಹೀಗೆ ಸಮಾಜದ ಬಹುತೇಕ ಎಲ್ಲ ವೃತ್ತಿ ಕ್ಷೇತ್ರದಲ್ಲಿರುವವರು ಶಿಕ್ಷಾರ್ಥಿಗಳಾಗಿ ಪಾಲ್ಗೊಂಡಿದ್ದಾರೆ. ಈ ಶಿಬಿರಗಳಲ್ಲಿ ಪಾಲ್ಗೊಂಡ ಶಿಕ್ಷಾರ್ಥಿಗಳು ಶಿಬಿರ ಶುಲ್ಕ ಭರಿಸಿ, ತಮ್ಮದೇ ಖರ್ಚಿನಲ್ಲಿ ಗಣವೇಷ ಜೋಡಿಸಿಕೊಂಡು, ಸ್ವಂತ ಸಿದ್ಧತೆಯಿಂದ ಈ ಶಿಬಿರಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು.

ಬೆಳಗ್ಗೆ 4.45 ರಿಂದ ರಾತ್ರಿ 10.15 ರವರೆಗೆ ಶಿಬಿರದ ಎಲ್ಲ ಶಿಕ್ಷಾರ್ಥಿಗಳಿಗೂ ಬಿಡುವಿಲ್ಲದ ಚಟುವಟಿಕೆಗಳು. ಮೈದಾನದಲ್ಲಿ ಶಿಬಿರಾರ್ಥಿಗಳು ದಂಡ, ಯೋಗಾಸನ, ನಿಯುದ್ಧ, ಸಮತಾ, ದಂಡಯುದ್ಧ, ಆಟಗಳು ಮುಂತಾದ ವಿಷಯಗಳಲ್ಲಿ ಶಾರೀರಿಕ ಶಿಕ್ಷಣ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಸಾಮಾಜಿಕವಾಗಿ ಮಹತ್ತ್ವ ಪಡೆದ ಅನೇಕ ವಿಚಾರಗಳು, ಮಹಾಪುರುಷರ ಜೀವನದ ಪ್ರೇರಕ ಪ್ರಸಂಗಗಳು, ಉತ್ತಮ ನಡವಳಿಕೆ ಮತ್ತು ಶಿಷ್ಟಾಚಾರ ಇತ್ಯಾದಿಗಳ ಶಿಕ್ಷಣವನ್ನು ಪಡೆದಿದ್ದಾರೆ. ಸೇವಾ ಶಿಕ್ಷಣದ ಭಾಗವಾಗಿ ಶ್ರಮದಾನ, ಸ್ವಚ್ಛತೆ, ಸೀಡ್ ಬಾಲ್ ಮಾಡುವುದು, ಬಾಲಗೋಕುಲ ನಡೆಸುವುದು, ಪ್ರಥಮ ಚಿಕಿತ್ಸೆ, ಭಜನೆ ಮುಂತಾದ ವಿವಿಧ ಸೇವಾ ಆಯಾಮಗಳನ್ನು, ಜೊತೆಗೆ ಅನುಶಾಸನಬದ್ಧ ಸಾಮೂಹಿಕ ಜೀವನ ಹಾಗೂ ವ್ಯಾವಹಾರಿಕ ಶಿಕ್ಷಣವನ್ನು ಶಿಕ್ಷಾರ್ಥಿಗಳು ಈ ಶಿಬಿರದಲ್ಲಿ ಪಡೆದಿದ್ದಾರೆ ಎಂದು ಅವರು ತಿಳಿಸಿದರು. 

ಸಂಘದ ಸಹ ಸರಕಾರ್ಯವಾಹರಾದ ಶ್ರೀ ರಾಮದತ್ತ ಚಕ್ರಧರ್, ಅಖಿಲ ಭಾರತ ಸಹ ಸಂಪರ್ಕ ಪ್ರಮುಖರಾದ ಶ್ರೀ ರಮೇಶ ಪಪ್ಪಾ ಹಾಗೂ ಇನ್ನೂ ಅನೇಕ ಹಿರಿಯರು ಇಲ್ಲಿಗೆ ಬಂದು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.  

ಚಿತ್ರನಟರು, ರಂಗಭೂಮಿ ಕಲಾವಿದರು ಹಾಗೂ ಸಹೃದಯರೂ ಆದ ಶ್ರೀ ಪ್ರಕಾಶ ಬೆಳವಾಡಿಯವರು ಒಂದು ದಿನ ಶಿಬಿರದಲ್ಲಿದ್ದು ಶಿಕ್ಷಾರ್ಥಿಗಳ ಜೊತೆಗೆ ಸಂವಾದ ನಡೆಸಿ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಯು. ಎಸ್. ವಿಶಾಲ್ ರಾವ್ ಅವರು ಮಾತನಾಡಿ ಶಿಕ್ಷಣದ ಗುರಿ ಜ್ಞಾನ, ಜ್ಞಾನದ ಗುರಿ ಸೇವೆ ಆಗಬೇಕು. ಮೊದಲು ನಮ್ಮ ದೇಶದಲ್ಲಿ ಹೀಗೇ ಇತ್ತು ಎಂದರು. ನಮ್ಮ ಶಿಕ್ಷಣದ ಮೂಲಕ ನಮಗೆ ಶಿಸ್ತು ಬರಬೇಕು. ನೀವು ಇಲ್ಲಿ ಪಡೆದಿರುವ ಜ್ಞಾನದ ಆಧಾರದ ಮೇಲೆ ನಿಮ್ಮ ಗ್ರಾಮಕ್ಕೆ, ರಾಜ್ಯಕ್ಕೆ ಮತ್ತು  ದೇಶಕ್ಕೆ ಹೇಗೆ ಸೇವೆ ಮಾಡಬಹುದು, ಹೆಮ್ಮೆ ತರಬಹುದು ಹಾಗೂ ಸಮಾಜದಲ್ಲಿ ಸುಖ ಶಾಂತಿಗಳನ್ನು ತರಬಹುದು ಎಂದು ಯೋಚಿಸಿ ಎಂದು ತಿಳಿಸಿದರು. ಜಿಡಿಪಿ ಮಾತ್ರ ನಮ್ಮ ದೇಶದ ಬೆಳವಣಿಗೆಯ ಅಳತೆಗೋಲಾಗಬಾರದು. ಜನರ ಜೀವನದ ಮಟ್ಟ, ಮನಸ್ಸಿನ ನೆಮ್ಮದಿ ಇವು ಮುಖ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀ ಪಿ. ಎಸ್. ಪ್ರಕಾಶ್ ಅವರು ‘ಈ ರೀತಿಯ ಶಿಬಿರಗಳಲ್ಲಿ ಶಿಕ್ಷಣ ಪಡೆದವರಿಂದ ಸಂಘ ಕಾರ್ಯದ ವಿಸ್ತಾರ ಆಗುತ್ತಿದೆ. ಈ ಶಿಬಿರದ ಮುಖ್ಯ ಉದ್ದೇಶ ಅಂತಹ ಕಾರ್ಯಕರ್ತರ ನಿರ್ಮಾಣ. ಸಂಘದ ಮುಖ್ಯ ಉದ್ದೇಶ ಹಿಂದೂ ಸಂಘಟನೆ ಮತ್ತು ಏಕತೆ. ಈ ಗುರಿಯನ್ನು ತಲುಪಲು ನಿರಂತರವಾದ ದೀರ್ಘ ಸಾಧನೆ ಬೇಕು. ಇದಕ್ಕೆ ಸಂಘಕ್ಕೆ ಆಧಾರವಾಗಿರುವ ಕಾರ್ಯಪದ್ಧತಿ ಸಂಘದ ಶಾಖೆ ಎಂದರು. 

ಸಮಾಜದ ಯುವಕರ ಮುಂದೆ ಉದಾತ್ತವಾದ ಧ್ಯೇಯ, ಗುರಿ ಕೊಡಬೇಕು. ಅದನ್ನು ಸಾಧಿಸಲು ಅವರಿಗೆ ಶಿಕ್ಷಣ ಕೋಡಬೇಕು. ಅವರು ನಿರಂತರ ಅದಕ್ಕಾಗಿ ಶ್ರಮಿಸಲು ಪ್ರಯತ್ನಿಸಿದಾಗ ಗುರಿ ತಲುಪುತ್ತಾರೆ ಎಂದರು. 

ಸ್ವರಾಜ್ಯದ 75ನೇ ವರ್ಷದ ಸಂದರ್ಭದಲ್ಲಿ ನಾವು ಪಾಶ್ಚಾತ್ಯ ಚಿಂತನೆ, ಜೀವನಶೈಲಿಯನ್ನು ಬಿಟ್ಟು ನಮ್ಮ ಈ ನೆಲದ ಚಿಂತನೆಯ ಆಧಾರದಲ್ಲಿ ಜೀವನವನ್ನು ರೂಪಿಸಿಕೊಳ್ಳುವ, ರಾಷ್ಟ್ರವನ್ನು ಪುನರ್ನಿಮಾಣ ಮಾಡುವ ಅವಶ್ಯಕತೆ ಇದೆ.

ಏಕೆಂದರೆ ಪಾಶ್ಚಾತ್ಯ ಚಿಂತನೆ ಶಕ್ತಿವಂತನಿಗೇ ಈ ಭೂಮಿ, ಜಗತ್ತು ಇರುವುದೇ ನಿನಗಾಗಿ, ಇದನ್ನು ಉಪಯೋಗಿಸಿ ಬಿಟ್ಟುಬಿಡು, ಪ್ರಕೃತಿಯ ಶೋಷಣೆ ಮಾಡಿಯಾದರೂ ನೀನು ಸುಖವಾಗಿರಬೇಕು, ಎಲ್ಲವನ್ನೂ ಪಡೆಯುವುದು ನಿನ್ನ ಹಕ್ಕು ಎಂಬ ವಿಚಾರದ್ದು. ಇದು ಸ್ವಾರ್ಥಕೇಂದ್ರಿತ ಚಿಂತನೆ. ನಮ್ಮ ಚಿಂತನೆಯೂ ಸ್ವಲ್ಪ ಆ ಕಡೆಗೆ ಹೊರಳಿದ ಪರಿಣಾಮವನ್ನು ಇಂದು ನಾವೂ ಅನುಭವಿಸುತ್ತಿದ್ದೇವೆ. ಈ ಎಲ್ಲಾ ವಿನಾಶಕಾರೀ ಆತ್ಮನಾಶೀ ಚಿಂತನೆಯಿಂದ ಜಗತ್ತನ್ನು ರಕ್ಷಿಸಬಲ್ಲ ಚಿಂತನೆ ಹೊಂದಿರುವ ಏಕೈಕ ದೇಶ ಭಾರತ. ಇಲ್ಲಿನ ಚಿಂತನೆ ಸರ್ವೇ ಭವಂತು ಸುಖಿನಃ, ಸರ್ವಂ ಖಲ್ವಿದಂ ಬ್ರಹ್ಮ, ಎಲ್ಲಾ , ಚರಾಚರವಸ್ತುಗಳಲ್ಲಿ ದೇವರನ್ನು ಕಂಡ ದೇಶ ಚಿಂತನೆ ನಮ್ಮದು.

ಕೇವಲ ವಿಚಾರ ಶ್ರೇಷ್ಠವಿದ್ದರೆ ಸಾಲದು, ಅದನ್ನು ಆಚರಣೆಗೆ ತರುವ ಜನರಿರಬೇಕು. ಸಮಾಜ ಅದನ್ನು ಆಚರಣೆಯಲ್ಲಿ ತರಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿಯಿಂದ ಪ್ರಯೋಜನ ಸಾಧ್ಯ. ನಮ್ಮ ದೇಶದಲ್ಲಿ ನಾವು ಜನರ, ದೇಶದ ಸೇವೆ ಮಾಡಬೇಕು ಎಂಬುದನ್ನು ಕಲಿಸುತ್ತೇವೆ. ದೀಪದ ಬತ್ತಿಯಂತೆ ತಾನು ಉರಿದು ಇತರರಿಗೆ ಬೆಳಕು ಕೊಡಬೇಕು ಎಂದು ಕಲಿಸುತ್ತೇವೆ. ಈ ದೇಶವನ್ನು ಪರಮ ವೈಭವಶಾಲೀ ದೇಶವನ್ನಾಗಿ ಮಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ. ನಮ್ಮ ದೇಶದ ಇಂತಹ ಮೌಲ್ಯಗಳು ಜಗತ್ತಿನೆಲ್ಲೆಡೆ ಪಸರಿಸಬೇಕಿದೆ ಎಂದರು.

ಇದಕ್ಕಿಂತ ಮೊದಲು ಶಿಬಿರದ ಶಿಕ್ಷಾರ್ಥಿಗಳಿಂದ ಧ್ವಜವಂದನೆ, ಘೋಷ್, ಆಟ, ನಿಯುದ್ಧ, ಯೋಗಾಸನ, ದಂಡ, ಪಾಠ ಸಂಚಲನ ಮೊದಲಾದ ಶಾರೀರಿಕ ಪ್ರದರ್ಶನಗಳು ನಡೆಯಿತು. 

ಈ ಕಾರ್ಯಕ್ರಮವನ್ನು ವೀಕ್ಷಿಸಲು 500 ಹೆಚ್ಚು ಸಾರ್ವಜನಿಕರು ಬಂದಿದ್ದರು. 

Leave a Reply

Your email address will not be published.

This site uses Akismet to reduce spam. Learn how your comment data is processed.