( ಸ್ವರ್ಗೀಯ ಗೋಪಾಲಕೃಷ್ಣ ಗೋಖಲೆಯವರ ಜನ್ಮಶತಾಬ್ದಿಯ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಅವರು ಬರೆದಿರುವ ಲೇಖನ)

ಮಾನವ ಸಮಾಜದ ಇತಿಹಾಸದಲ್ಲಿ ಕೆಲವು ಸಂದರ್ಭಗಳಲ್ಲಿ ಯಾವುದೇ ದೇಶ ವಿಶೇಷದಿಂದ ಅಕಸ್ಮಾತ್ ಅಥವಾ ಅನಿರೀಕ್ಷಿತವಾಗಿ ಅಸಾಮಾನ್ಯ ಶ್ರೇಷ್ಠ ವ್ಯಕ್ತಿಗಳ ಮಾಲಿಕೆಯೇ ಜನ್ಮತಾಳುತ್ತವೆ ಎನ್ನುವುದು ಅನುಭವಕ್ಕೆ ಬರುತ್ತದೆ. ಅದೂ, ರಾಷ್ಟ್ರವೊಂದು ಅತೀ ಸಂಕಷ್ಟುತಿಯಲ್ಲಿರು ವಾಗ ಈ ಅನುಭವ ತೀವ್ರತೆಯಿಂದ ಆಗುತ್ತದೆ. ಹೇಗೆ ಭೂಗರ್ಭದ ಕುದಿಯುತ್ತಿರುವ ಉಷ್ಣತೆ ಅಥವಾ ಒತ್ತಡದ ಪರಿಣಾಮದಿಂದ ಕಲ್ಲಿದ್ದಲು ಉತ್ಪನ್ನವಾಗುತ್ತದೋ ಆಗುತ್ತದೆಯೋ, ಹಾಗೇ ಪರತಂತ್ರ ಅಥವಾ ಬೇರೆ ಸಂಕಷ್ಟಗಳ ದುಃಖ ಹಾಗೂ ಅಪಮಾನದ ಅಗ್ನಿಯಲ್ಲಿ ಬೆಂದ ಸಾಮಾನ್ಯ ಮಾನವನ ಮನಸ್ಸು ಅಲೌಕಿಕ ರೀತಿಯಲ್ಲಿ ಪರಿವರ್ತನೆಯಾಗುತ್ತದೆ. ಸುಖವಾದ ಜೀವನದಲ್ಲಿ ಸುಪ್ತಾವಸ್ಥೆಯಲ್ಲಿರುವ ಸಮಾಜದ ಗುಣ ಸಮುಚ್ಚಯವಾದ ಸಂಕಟಗಳ ಆಹ್ವಾನದಿಂದ ಜಾಗೃತವಾಗಿ, ಅನೇಕ ಮಹಾಪುರುಷರು ಪ್ರಕಟಗೊಳ್ಳುತ್ತಾರೆ. ಸಂಕಷ್ಟದ ತೀವ್ರತೆಯು ಎಷ್ಟು ಭೀಷಣವಾಗಿರುತ್ತದೋ, ಅಷ್ಟು ಈ ವ್ಯಕ್ತಿಯ ತೇಜಸ್ಸು ಪ್ರಖರವಾಗುತ್ತದೆ.

ಧರ್ಮಶಕ್ತಿ ಹಾಗೂ ರಾಷ್ಟ್ರಶಕ್ತಿಯ ಜಾಗೃತಿ : ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಇಂಥ ಪ್ರಸಂಗಗಳು ಅನೇಕ ಬಾರಿ ಬಂದಿವೆ. ಪರಕೀಯ ವ್ಯಕ್ತಿಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಆಕ್ರಮಣದಿಂದ ನಿರಾಶಾಗ್ರಸ್ತವಾದ ಸಮಾಜದ ಧರ್ಮಶಕ್ತಿ ಹಾಗೂ ರಾಷ್ಟ್ರಶಕ್ತಿಯ ಜಾಗೃತಿಯು ದೇಶದ ವಿಭಿನ್ನ ಕ್ಷೇತ್ರಗಳಲ್ಲಿ ಒಂದೇ ಬಾರಿಗೆ ಉತ್ಪನ್ನವಾಗಿ ಭಗವ್ಭಕ್ತರು ಹಾಗೂ ಅವರ ಪ್ರೇರಣೆಯಿಂದ ಪ್ರಕಟಗೊಂಡ ವೀರರ ರೂಪದಲ್ಲಿ ಉತ್ಪನ್ನವಾಗಿದೆ ಅನುಭವಗಳನ್ನು ಕಾಲ ಕಾಲದಲ್ಲಿ ಆಗಿ ಹೋಗಿವೆ.

ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವದೊಂದಿಗೆ ಸಮಕಾಲೀನ ಸಂತರ ಮಾಲಿಕೆಯು ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಉತ್ಪನ್ನವಾಯಿತು. ಆನಂತರ ಮಹಾರಾಷ್ಟ್ರ, ಪಂಜಾಬ್ ಗಳಲ್ಲಿ ಆಕ್ರಮಣಕಾರಿಗಳನ್ನು ಹಿಂದೂಡಿ, ಸ್ವರಾಜ್ಯದ ಗೌರವಯುತವಾದ ಪತಾಕೆಯನ್ನು ಗಗನಮಂಡಲದಲ್ಲಿ ಅಭಿಮಾನದಿಂದ ಹಾರಿಸುವ ರಾಷ್ಟ್ರವೀರರ ಸಮೂಹ ನಿರ್ಮಾಣವಾಯಿತು. ಇತಿಹಾಸದಲ್ಲಿ ಇದೆಲ್ಲವೂ ಮೇಲಿನ ಅನುಭವದ ಅಸಂದಿಗ್ಧಸಾಕ್ಷ್ಯ.

ಗತಿಸಿಹೋದ ಒಂದು ಶತಾಬ್ದಿಯ ಪ್ರಾರಂಭದಿಂದಲೇ ನಮ್ಮ ದೇಶದಲ್ಲಿ ಇಂಥ ಕಠಿಣ ಪರಿಸ್ಥಿತಿಯ ಉತ್ಪನ್ನವಾಗಿತ್ತು. 1857ರಲ್ಲಿ ಮಹಾ ಸ್ವಾತಂತ್ರ್ಯ ಸಮರದ ಅಸಫಲತೆ, ಪರಕೀಯ ಶಾಸನಕಾರರ ಮೂಲಕ ರಾಜನೈತಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಇತ್ಯಾದಿ ಜೀವನದ ಕ್ಷೇತ್ರಗಳ ಮೇಲೆ ಆಕ್ರಮಣ, ರಾಷ್ಟ್ರಜೀವನವು ದಾಸ್ಯದ ಕಠಿಣ ಪಾಶದಲ್ಲಿ ಸಿಲುಕಿ, ಶ್ವಾಸೋಚ್ಛಾಸವೂ ಕ್ಷೀಣಗೊಂಡು ಮರಣಿಸಿದಂತಾಗಿತ್ತು. ಯಾವುದೇ ಆಶಾಕಿರಣವೂ ಗೋಚರಿಸುತ್ತಿರಲಿಲ್ಲ. ರಾಷ್ಟ್ರ ಜೀವನವು ಘೋರರ ನಿರಾಶೆಯ ಹತಾಶ, ಎಲ್ಲಾ ಕಡೆ ಹರಡಿದ್ದ ವೈಫಲ್ಯ, ಪರಕೀಯರ ಮೇಲಿನ ದಾಸ್ಯ ಮನೋವೃತ್ತಿ ಆತ್ಮವಿಸ್ಮೃತಿ, ಸತ್ವಹೀನತೆ ಪರಕೀಯರ ವಿಜಯೋತ್ಸಾಹದ ಜೀವನ ಪ್ರಣಾಳಿಕೆಯ ಅಭಿನಂದನೆ ಹಾಗೂ ಅದರ ನಿಕೃಷ್ಟ ಅನುಕರಣೆಯಿಂದ ಭಯ ಹುಟ್ಟಿಸುವ ವಾತಾವರಣದಿಂದ ತುಂಬಿ ಹೋಗಿತ್ತು. ರಾಷ್ಟ್ರಜೀವನದ ಅಂತಿಮ ಕ್ಷಣ ಬಂದೊದಗಿದ ಹಾಗಾಗಿತ್ತು ಮತ್ತು ಇದರಿಂದ ಮುಕ್ತಿ ಹೊಂದಲು ಹೋರಾಡುವ ಯಾವುದೇ ವ್ಯಕ್ತಿಗಳೂ ಇಲ್ಲವೆನ್ನುವಂತಾಗಿತ್ತು. ವಿಜಯಿಗಳ ಪ್ರಭುತ್ವ ಸೂರ್ಯಚಂದ್ರಾರ್ಕ ಇದ್ದು, ಅನಾದಿಕಾಲದಿಂದಲೂ ನಡೆದು ಬಂದ ಭಾರತದ ಪುನೀತವಾದ ಜೀವನ ಆದರ್ಶ ಮತ್ತು ಜೀವನ ಮೌಲ್ಯ ಶಾಶ್ವತವಾಗಿ ಕುಂಠಿತವಾಗುವುದೋ ಎನ್ನುವಂತಿತ್ತು.

ಭಾರತದ ರಾಷ್ಟ್ರಚೈತನ್ಯ ಮೃತ್ಯುಂಜಯ : ಆದರೆ ಭಾರತದ ರಾಷ್ಟ್ರಚೈತನ್ಯವು ಮೃತ್ಯುಂಜಯವಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ವ್ಯಾಪಿಸಿ ಅಂಧಕಾರಮಯವಾದ ವಾಯುಮಂಡಲವನ್ನು ಪ್ರಕಾಶಗೊಳಿಸುವ ದೇದೀಪ್ಯಮಾನ ಕಿರಣಗಳ ಜ್ವಲಿಸುವ ಶಕ್ತಿಯಿಂದ ಯುಕ್ತವಾಗಿದೆ. ಮೃತ್ಯುವಿನ ಭೀಷಣದ ದಿಕ್ಕನ್ನು ಸೀಳಿ, ಚಿರಂಜೀವಿಯಾದ ಸ್ವಾತಂತ್ರ್ಯ ಸೂರ್ಯನ ಉದಯ ಆಶ್ವಾಸನೆ ನೀಡುವ ತೇಜೋಮಯವಾದ ಕಿರಣಗಳು ಎಲ್ಲಾ ಕ್ಷೇತ್ರಗಳಲ್ಲೂ ಪ್ರಕಟವಾದವು. ಧರ್ಮದ ಕ್ಷೇತ್ರದಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದರು, ಸ್ವಾಮಿ ದಯಾನಂದ ಸರಸ್ವತಿ, ಸಾಮಾಜಿಕ ಕ್ಷೇತ್ರದಲ್ಲಿ ರಾಜಾರಾಮ ಮೋಹನರಾಯರು, ಮಹಾತ್ಮಾ ಫುಲೇ ಮುಂತಾದ ಭಗವಂತನ ಅಂಶವನ್ನು ಹೊಂದಿದ ಮಹಾಪುರುಷರು ರಾಷ್ಟ್ರದಲ್ಲಿ ಹೊಸ ಜಾಗೃತಿಯ ಸಂತಸದ ಅಲೆಗಳನ್ನು ಎಬ್ಬಿಸಿ, ಮುಂಬರುವ ಸ್ವಾತಂತ್ರ್ಯ ಸೂರ್ಯನ ಉದಯದ ಆಶ್ವಾಸನೆಯನ್ನು ನೀಡುತ್ತಿದ್ದರು. ಇದರ ಫಲವಾಗಿ ರಾಜನೀತಿಯ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಅದುಮಿಟ್ಟ ಧ್ವನಿಗಳಿಂದ ಕ್ರಮೇಣ ಪಾಂಚಜನ್ಯ ಸ್ವರೂಪದ ಪ್ರಚಂಡ ಗರ್ಜನೆಯಿಂದ ಶತ್ರುಹೃದಯಗಳನ್ನು ಭಯಕಂಪಿತರನ್ನಾಗಿ ಮಾಡುವ ರಾಷ್ಟ್ರಸತ್ವ ಘೋಷಣೆಗಳು ಪ್ರಾರಂಭವಾದವು.

ಯಾವ ಮಹಾಪುರುಷರು ಪರಿಸ್ಥಿತಿಯ ಪ್ರತಿಕೂಲತೆಯ ಅವಹೇಳನವನ್ನು ಮಾಡುತ್ತಿದ್ದರೋ, ಅವರು ನಿರ್ಭಯದಿಂದ ಈ ಪವಿತ್ರ ಘೋಷಣೆಗಳನ್ನು ಉತ್ಪನ್ನ ಮಾಡಿದರು.ಉತ್ಪನ್ನವಾಗುವ ಅವರಲ್ಲಿ ಸ್ವನಾಮ ಧನ್ಯ ಶ್ರೀ ಗೋಪಾಲಕೃಷ್ಣ ಗೋಖಲೆಯವರ ಸ್ಥಾನ ಬಹಳ ಎತ್ತರದಲ್ಲಿದೆ. ಅವರ ಜೀವನದಲ್ಲಿ ಯಾವ ಗುಣ ಸಮುಚ್ಛಯವು ಪ್ರಕಟವಾಯಿತೋ, ಅದರಲ್ಲಿ ಅಲ್ಪವೇ ಜನರ ಕಣ್ಣಿಗೆ ಕಾಣುವುದೆಂದರೆ ಅವರ ಪ್ರಚಂಡ ವಿದ್ವತ್ತು. ಅದರ ಬಲದಿಂದ ಧನಾರ್ಜನೆಯ ಶಕ್ತಿ ಇದ್ದರೂ ಮತ್ತು ಸಾಕಷ್ಟು ವೇತನದ ರೂಪದಲ್ಲಿ ಧನಪ್ರಾಪ್ತಿಯಾದರೂ, ಸ್ವಯಂ ತಾವೇ ಸ್ವೀಕರಿಸಿದ ಸ್ವಲ್ಪವೇ ಸಂಪತ್ತನ್ನು ಮಾತ್ರ ಇಟ್ಟುಕೊಳ್ಳುವ ನಿಯಮವನ್ನು ಜೀವನದಲ್ಲಿ ಅಳವಡಿಸುವ, ಅದರ ಪರಿಪಾಲನೆಗಾಗಿ ತ್ಯಾಗ, ಉತ್ಕಟ ರಾಷ್ಟ್ರಭಕ್ತಿ, ಶುದ್ಧ ಚಾರಿತ್ರ್ಯ ಇತ್ಯಾದಿ ಅನೇಕ ಗುಣಗಳ ಪಾಲನೆಯ ಮೂಲಕ ಅವರು ಮುಂಬರುವ ಪೀಳಿಗೆಗಳಿಗೆ ಪಥ ತೋರುವ ದಾರ್ಶನಿಕರಾಗಿ ಕಾಣುತ್ತಾರೆ, ಪರಕೀಯ ಶಾಸನವು ಆರ್ಥಿಕ, ರಾಜ್ಯಾತ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳಲ್ಲಿ ವಿನಾಶಕಾರಿಯಾಗುತ್ತದೆ ಎಂಬುದನ್ನು ಅವರು ಪ್ರಮಾಣಸಹಿತ ನಿರೂಪಿಸಿದರು. ಇದನ್ನು ನಿರೂಪಿಸಲು ಅವರು ಉಪಯೋಗಿಸಿದ ಕುಶಲತೆ ಅನುಕರಣೀಯವಾದುದು. ಅವರಿಗೆ ಯಾವ ಯಾವ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುವ ಅವಶ್ಯಕತೆ ಇರುತ್ತಿತ್ತೋ, ಅದರ ಸಂಪೂರ್ಣ ಅಧ್ಯಯನ ಮಾಡಿ, ಪೂರ್ಣ ಪ್ರಮಾಣದಲ್ಲಿ ಸಾಕ್ಷಿಗಳೊಂದಿಗೆ ರುಜುವಾತು ಪಡಿಸಿ, ಅಪೂರ್ವ ಯುಕ್ತಿಗಳಿಂದ ತಮ್ಮ ಅಭಿಪ್ರಾಯವನ್ನು ಸಮರ್ಥನೆ ಮಾಡುತ್ತಿದ್ದ, ಹಾಗೇ ಸ್ವಾತಂತ್ರ್ಯದ ಆವಶ್ಯಕತೆಯ ಪ್ರತಿಪಾದನೆ ಮಾಡುತ್ತಿದ್ದ ಆ ಶೈಲಿಯು ಅನುಪಮವಾಗಿತ್ತು. ಇಂದು ದೊಡ್ಡ ದೊಡ್ಡ ನೇತಾರರು, ಮಂತ್ರಿಗಳು ತಮ್ಮ ವಿಷಯದಲ್ಲಿ ಉದ್ಭವಿಸುವ ಅವರ ಪ್ರಶ್ನೆಗಳಿಗೆ ನೇರವಾದ , ಪ್ರಮಾಣಸಹಿತವಾದ ಉತ್ತರಗಳನ್ನು ಕೊಡದೆ ಏರುಪೇರು ಮಾಡುವುದನ್ನು ನೋಡುತ್ತೇವೆ. ಈ ದುಃಖದಾಯಕವಾದ, ಲಜ್ಜಾಸ್ಪದವಾದ ದೃಶ್ಯಗಳು ಎಲ್ಲರಿಗೂ ಪರಿಚಿತವೇ ಈ ಅವಸ್ಥೆಯಲ್ಲಿ ಶ್ರೀ ಗೋಪಾಲಕೃಷ್ಣ ಗೋಖಲೆಯವರ ಚರಿತ್ರೆಯಿಂದ ಇಂದಿನ ದೇಶದ ನೇತಾರರು, ಶಾಸನ ಚಲಾಯಿಸುವವರು, ಹಾಗೆ ವಿರೋಧಿ ಪಕ್ಷದವರೂ ಪಾಠವನ್ನು ಕಲಿತು, ತಮ್ಮ ತಮ್ಮ ವಿಷಯಗಳ ಪೂರ್ಣ ಅಧ್ಯಯನ ಮಾಡಿ, ಸಮಾಜವನ್ನು ಗಲಿಬಿಲಿ ಉತ್ತರಗಳಿಂದ ಭ್ರಮಿತವನ್ನಾಗಿ ಮಾಡದೇ ನಿಜವಾದ ಚಿತ್ರಣವನ್ನು ಮುಂದಿಡುವ ನಿಶ್ಚಯವನ್ನು ಮಾಡಿದರೆ, ಅವರ ಪ್ರತಿಷ್ಠೆ ಬೆಳೆಯುತ್ತದೆ, ರಾಷ್ಟ್ರದ ಕಲ್ಯಾಣವೂ ಆಗುತ್ತದೆ.

ಚಾರಿತ್ರ್ಯಹೀನತೆಯ ಸಂಕಟ : ಇಂದು ಎಲ್ಲ ಕಡೆಯೂ ಭ್ರಷ್ಟಾಚಾರ, ದುರ್ಮಾರ್ಗದ ಬಳಕೆಯಿಂದ ಧನಸಂಚಯ ಇತ್ಯಾದಿ ಆರೋಪಗಳು ದೊಡ್ಡದೊಡ್ಡವರ ಮೇಲೆ ಆಗುತ್ತಲಿವೆ. ಈ ಆರೋಪವನ್ನು ಸರ್ವಥಾ ಸುಳ್ಳು ಎಂದು ಸಾಧಿಸಲಾಗುತ್ತಿದೆ ಇಲ್ಲವೆ ಆರೋಪ ಸತ್ಯವೆಂದು ಸಾಬೀತಾಗಬಹುದೆಂಬ ತಿಳುವಳಿಕೆ ಜನರಲ್ಲಿ ಹರಡುವ ಒಂದು ಯೋಗ್ಯ ನಿಷ್ಪಕ್ಷಪಾತವಾದ ಬೇಹುಗಾರಿಕೆ ಕೆಲವೊಮ್ಮೆ ಮರೆಮಾಚಲ್ಪಡುತ್ತದೆ. ‘ಯಥಾ ರಾಜಾ ತಥಾ ಪ್ರಜಾ’ ಎಂಬ ಹೇಳಿಕೆಯಂತೆ , ನೇತಾರರ ಚಾರಿತ್ಯದ ಬದಲಾಗಿ ಸಮಾಜದಲ್ಲಿ ಸದ್ಗುಣಗಳ ಬದಲಾಗಿ ಅನಾದರ, ಅನೀತಿ, ಭ್ರಷ್ಟಾಚಾರವೆಂಬ ಜೀವನ ಮೌಲ್ಯಗಳು, ಅವುಗಳನ್ನು ಅನುಸರಿಸುವುದರಲ್ಲಿ ಯಾವುದೇ ದೋಷವಿಲ್ಲವೆಂಬ ಅತ್ಯಂತ ಅನಿಷ್ಟ ಹಾಗೂ ರಾಷ್ಟ್ರಘಾತಕ ಭಾವನೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ತಮ್ಮ ಆದರ್ಶಗಳಿಗೇನೋ ಪವಿತ್ರ ಚಾರಿತ್ರ್ಯವುಳ್ಳ ಮಹಾತ್ಮಾಗಾಂಧಿ, ಭಗವಾನ್ ಬುದ್ಧನೆಂದು ಕರೆಯುತ್ತಾರೆ. ಶ್ರೇಷ್ಟವಾದ ಭಾಷಣ-ಉಪದೇಶಗಳನ್ನೂ ಕೊಡುತ್ತಾರೆ. ಚರಿತ್ರಹೀನನಾಗುವುದರ ಸಂಕಷ್ಟವನ್ನೂ ಹೇಳಿ ಚಿತಾವಣೆ ಮಾಡುತ್ತಾರೆ. ಆದರೆ, ಪ್ರತ್ಯಕ್ಷ ವ್ಯವಹಾರವು ಅವರ ಭಾಷಣ ಮತ್ತು ಆ ಶ್ರೇಷ್ಠ ವ್ಯಕ್ತಿಗಳ ಅನುಸರಣೆಯಂತೆಯೇ ನಡೆಯುತ್ತದೆಯೇ ಎಂದು ಹೇಳುವುದು ಕಷ್ಟ

ಒಂದು ವೇಳೆ ಮಹಾತ್ಮಾ ಗಾಂಧಿಯವರನ್ನು ತಮ್ಮ ಗುರುವನ್ನಾಗಿ ಭಾವಿಸಿ, ಅವರ ಚಾರಿತ್ರ್ಯದ ಅನುಕರಣೆ ಮಾಡುವುದು ಉಚಿತವೇ ಆದರೆ, ಪ್ರತ್ಯಕ್ಷವಾಗಿ ಮಹಾತ್ಮಾ ಗಾಂಧಿಯವರು ಯಾರನ್ನು ತಮ್ಮ ಗುರುವೆಂದು ತಿಳಿದಿದ್ದರೋ ಆ ಶ್ರೀ ಗೋಪಾಲಕೃಷ್ಣ ಗೋಖಲೆ ಮಹಾಶಯರ ಚರಿತ್ರೆಯನ್ನು ನಿತ್ಯ ಸ್ಮರಣೆ ಮಾಡಿ, ಅವರ ಅನೇಕ ವಿಧವಾದ ಗುಣಗಳ ಅನುಕರಣೆ ಮಾಡುವ ಪ್ರಯತ್ನವನ್ನು ಮಾಡುವುದು ಎಲ್ಲರ ಪರಮ ಕರ್ತವ್ಯವಾಗಿದೆ.

ಶ್ರೀ ಗೋಪಾಲಕೃಷ್ಣ ಗೋಖಲೆಯವರು ‘Servants of Indian Society” ಅಂದರೆ ‘ಭಾರತೀಯ ಸಮಾಜ ಸೇವಕ ಸಂಘ’ದ ಆಧಾರ ಸ್ತಂಭವಾಗಿ ತಮ್ಮ ಜೀವನವನ್ನು ಒತ್ತೆಯಿಟ್ಟು ತಮ್ಮ ವಿಪುಲವಾದ ಧನಾದಾಯದಲ್ಲಿ ಕುಟುಂಬಜೀವನ ಶೈಲಿಗೆ ಎಷ್ಟು ಅವಶ್ಯಕವೋ ಅಷ್ಟು ಗೌರವಯುತವಾದ ಮೊತ್ತವನ್ನು ಪಡೆದು, ಉಳಿದ ಧನವನ್ನು ಆ ಸಂಘದ ಮೂಲಕ ರಾಷ್ಟ್ರ ಹಿತಕ್ಕೆ ಸಮರ್ಪಣೆ ಮಾಡಿದ ಉಜ್ವಲ ಉದಾಹರಣೆ ನಿಜಕ್ಕೂ ಅನುಕರಣೀಯವಲ್ಲವೇ?

ಇಂಗ್ಲೀಷರ ಆಳ್ವಿಕೆಯ ವಿರೋಧವನ್ನು ಮಾಡುತ್ತಾ ಅವರು ಸರ್ವಸ್ವವನ್ನೂ ಹೋಮ ಮಾಡುವ ನಿಶ್ಚಯವನ್ನು ಕೈಗೊಂಡಿದ್ದರು, ಇಂಗ್ಲೀಷ್ ರಾಜ್ಯ ಹೊರಟು ಹೋದ ಮೇಲೆ ಆ ನಿಶ್ಚಯವನ್ನು ತ್ಯಜಿಸುವುದು ಉಚಿತವೇ ಅಥವಾ ವಿಹಿತವೇ? ತ್ಯಾಗದ ಮಹಿಮೆಯನ್ನು ತ್ಯಜಿಸಿ, ಭೋಗತಪ್ತ ಹಾಗೂ ನಿಕೃಷ್ಟವಾದ ಸ್ವಾರ್ಥವನ್ನು ಸ್ವೀಕಾರ ಮಾಡುವುದು ರಾಷ್ಟ್ರದ ಹಿತದ ದೃಷ್ಟಿಯಿಂದ ಪ್ರಗತಿಯ ಲಕ್ಷಣವೇ? ಹಾಗಿಲ್ಲದಿದ್ದಲ್ಲಿ ಶ್ರೀ ಗೋಪಾಲಕೃಷ್ಣ ಗೋಖಲೆಯಂಥ ಗುರುಗಳ ತ್ಯಾಗಮಯ, ನಿಷ್ಕಳಂಕ, ರಾಷ್ಟ್ರಸೇವಾ ಜೀವನವನ್ನು ಆದರ್ಶದ ರೂಪದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ನಿಜವಾದ ಅರ್ಥದಲ್ಲಿ ರಾಷ್ಟ್ರಸಮರ್ಪಣೆಗೆ ಬಳಸುವ ಅವಿರತ ಪ್ರಯತ್ನವೇ ಅವಶ್ಯವಾಗಿದೆ.

ರಾಷ್ಟ್ರವನ್ನು ದಾಸ್ಯಮುಕ್ತವನ್ನಾಗಿ ಮಾಡುವ ದೃಷ್ಟಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೂಲಕ ಸ್ವರಾಜ್ಯದ ಧ್ಯೇಯವನ್ನು ಶ್ರೀ ಗೋಪಾಲಕೃಷ ಗೋಖಲೆ  ಗುರುತಿಸಿಕೊಂಡಿದ್ದರು. ಇದನ್ನು ತಣ್ಣನೆಯ ಪಕ್ಷವೆಂದು ಅಪಹಾಸ್ಯ ಕೂಡಾ ಮಾಡಲಾಗುತ್ತಿತ್ತು. ಅವರ ಈ ಲಕ್ಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ಣ ಸ್ವಾತಂತ್ರ್ಯದ ಘೋಷಣೆಯನ್ನು ಮಾಡುವವರ ಮತ್ತು ಅದರ ಸಲುವಾಗಿ ಉಗ್ರ ಆಂದೋಲನವನ್ನು ಆಹ್ವಾನಿಸುವ ‘ಕುದಿಯುವ ಪಕ್ಷ’ವು ಅಧಿಕ ಪ್ರಭಾವಶಾಲಿ ಮತ್ತು ಲೋಕಪ್ರಿಯವಾಗಿ ದ್ರುತಗತಿಯಲ್ಲಿ ಸಂಪೂರ್ಣ ರಾಜನೈತಿಕ ಕ್ಷೇತ್ರದಲ್ಲಿ ಪ್ರಭುತ್ವವನ್ನು ಸ್ಥಾಪಿಸುವುದರಲ್ಲಿ ಸಫಲವಾಯಿತು. ‘ಕುದಿಯುವ ಪಕ್ಷ’ದ ಈ ಆಂದೋಲನಗಳ ಸ್ವರೂಪ ದೇಶವ್ಯಾಪಿಯಾಗಿ ಹರಡುವ ಶ್ರೇಯಸ್ಸು ಮಹಾತ್ಮಾಗಾಂಧಿಯವರಿಗೆ. ಈ ಆಂದೋಲನಗಳ ಪರಿಣಾಮದಿಂದ ದೇಶದ ಆಂತರಿಕ ಪರಿಸ್ಥಿತಿ ಹಾಗೂ ಜಾಗತಿಕ ಪರಿಸ್ಥಿತಿಯ (ಎರಡನೇ ಮಹಾಯುದ್ಧದ ಬಳಿಕ ಉತ್ಪನ್ನವಾಗಿದ್ದ ಸ್ಥಿತಿ) ಪ್ರಭಾವದಿಂದ ಭಾರತದಿಂದ ಇಂಗ್ಲಿಷ್ ರಾಜ್ಯವು ಅಸ್ತಂಗತವಾಗಲು ಸಾಧ್ಯವಾಯಿತು.

ಆದರೆ ಅಲ್ಲಿಯವರೆಗೆ ವಿಚಾರಗಳ ಪರಿವರ್ತನೆ ಎಷ್ಟಾಗಿತ್ತು ಎಂದರೆ, ಯಾರು ಸಂಪೂರ್ಣ ಸ್ವರಾಜ್ಯದ ಘೋಷಣೆಯನ್ನು ಮಾಡಿದ್ದರೋ, ಅವರೇ ಸಾಮ್ರಾಜ್ಯ ಅಂತರ್ಗತ ಸ್ವರಾಜ್ಯದ ಒಂದು ರೂಪವನ್ನು ಸ್ವೀಕಾರ ಮಾಡಿದರು. ಇಷ್ಟೇ ಅಲ್ಲ, ಈ ರೀತಿಯ ಬ್ರಿಟಿಷ್ ಆಳ್ವಿಕೆಯಡಿಯ ಘಟಕ ರಾಷ್ಟ್ರವಾಗಿ ಭಾರತದ ಘನತೆ ಗೌಣವಾಗುತ್ತದೆ ಎನ್ನುವವರನ್ನು ಅವಹೇಳನವನ್ನು ಮಾಡಿ, ಬ್ರಿಟಿಷ್ ಘಟಕ ರಾಜ್ಯವಾಗಿ ಇರುವುದೇ ಲಾಭದಾಯಕ ಹಾಗೂ ಸುರಕ್ಷಿತ ಎನ್ನುವ ವಾದ ಮಾಡಿ, ಈ ವ್ಯವಸ್ಥೆಯ ಸಮರ್ಥನೆಯನ್ನು ಆ ಮಹಾನುಭಾವರೇ ಮಾಡಿದರು.

ಇಂದು ನೇತೃತ್ವವು ಸಾಮಾನ್ಯ ಶ್ರೇಣಿಯ, ಸಾಮಾನ್ಯ ಬುದ್ಧಿಯ, ಅಶುದ್ಧ ಹಾಗೂ ಅಲ್ಪಸ್ವಭಾವದ ವ್ಯಕ್ತಿಗಳ ಕೈಯಲ್ಲಿ ಬಂದಿದೆ, ಹಾಗಾಗಿ ಶ್ರೀ ಗೋಪಾಲಕೃಷ್ಣ ಗೋಖಲೆಯವರ ಪಚಂಡ ಪ್ರತಿಭೆ,ಕಾರ್ಯಕ್ಷಮತೆ, ಪಾಂಡಿತ್ಯ, ಶುದ್ಧ ಚಾರಿತ್ರ್ಯ ಹಾಗೂ ಸ್ವ ಇಚ್ಛೆಯಿಂದ ಅಂಗೀಕೃತಗೊಂಡ ದಾರಿದ್ರ್ಯಲರೂಪದ ತ್ಯಾಗ ಇವುಗಳಿಗೆ ನಮ್ರತಾಪೂರ್ವಕ ಅಭಿನಂದನ ಮಾಡಿ, ಅವರ ಸಂಕಲ್ಪವನ್ನು ಎಲ್ಲಾ ದೇಶವಾಸಿಗಳೂ ಮಾಡಬೇಕು. ಇದು ಅತ್ಯಂತ ಅವಶ್ಯವಾಗಿದೆ.

ಮಂಗಲಮಯನಾದ ಶ್ರೀ ಪರಮೇಶ್ವರನಲ್ಲಿ ನನ್ನ ಪ್ರಾರ್ಥನೆ ಏನೆಂದರೆ ಶ್ರೀ ಗೋಪಾಲಕೃಷ್ಣ ಗೋಖಲೆಯವರ ನೆನಪು ನಮ್ಮಲ್ಲಿ ಚಿರಂತನವಾಗಿರಲಿ ಮತ್ತು ನಮಗೆಲ್ಲಾ ಅದರಿಂದ ಮಾರ್ಗದರ್ಶನ ಸಿಗುತ್ತಿರಲಿ. ಜೊತೆಗೇ, ನಾವೆಲ್ಲಾ ದೇಶವಾಸಿಗಳಿಗೆ ಅವರ ಭವ್ಯವಾದ, ಉದಾತ್ತವಾದ ಚಾರಿತ್ರ್ಯದ ಅನುಕರಣೆ ಮಾಡಿ, ಯೋಗ್ಯರಾದ ರಾಷ್ಟ್ರಭಕ್ತರಾಗಲು ಪ್ರೇರಣೆ ಹಾಗೂ ಶಕ್ತಿ ಪ್ರಾಪ್ತವಾಗಲಿ, ಶುಭಂ

ಮೂಲ : ಶ್ರೀ ಗುರೂಜಿ ಸಮಗ್ರ ಸಂಪುಟ 1, ಪುಟ 155

Leave a Reply

Your email address will not be published.

This site uses Akismet to reduce spam. Learn how your comment data is processed.