ಬೆಂಗಳೂರು, ಮೇ 22: ಥಣಿಸಂದ್ರದ ಸಾಧನಾ ಕ್ಯಾಂಪಸ್ನಲ್ಲಿ ಎರಡು ವರ್ಷಗಳ ಪಿಯುಸಿ ಶಿಕ್ಷಣ ಹಾಗೂ ನೀಟ್, ಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಾಧನಾದ 5ನೇ ಬ್ಯಾಚಿನ 55 ಹೆಣ್ಣುಮಕ್ಕಳ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞೆ ಹಾಗೂ ಜೆ.ಜಿ.ಆರ್.ವಿ. ಕಲ್ಯಾಣನಗರ ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ಅಶ್ವಿನಿ ಲೋಂಢೆ, ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನಾಚಾರ್ಯೆ ಮಂಜುಳಾ, ಹಾಗೂ ತಪಸ್-ಸಾಧನಾ ಯೋಜನೆಯ ಸಂಯೋಜಕಿ ರುಕ್ಮಿಣಿ ಸಮಾರಂಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಇತರರು ಅನುಕರಿಸುವಂತಾಗಬೇಕು ಮತ್ತು ಕಷ್ಟಗಳು ಬಂದರೆ ಧೈರ್ಯದಿಂದ ಎದುರಿಸಬೇಕೆಂಬ ಕಿವಿಮಾತು ಹೇಳಿದರು.
ಸಾಧನಾ ಇದು ರಾಷ್ಟ್ರೋತ್ಥಾನದ ಮಹತ್ವಾಕಾಂಕ್ಷೆಯ ಯೋಜನೆ. ಪ್ರತಿ ವರ್ಷ 10ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ, ಪ್ರತಿಭಾವಂತ 80 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉಚಿತವಾಗಿ PUC ಶಿಕ್ಷಣ ಹಾಗೂ NEET, CET ಪ್ರವೇಶ ಪರೀಕ್ಷಾ ತರಬೇತಿ ಅಥವಾ Integrated BSc BEd ಶಿಕ್ಷಣ ನೀಡಲಾಗುತ್ತದೆ. ಈ ಯೋಜನೆಗೆ BASE ಸಂಸ್ಥೆಯ ಸಹಯೋಗವಿದೆ.