ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿ, “ಸಾವಿರಾರು ವರ್ಷಗಳ ಹೋರಾಟದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯದ ಉದ್ದೇಶವು ಪ್ರಾಚೀನ ರಾಷ್ಟ್ರವನ್ನು ಮತ್ತೆ ಸಮೃದ್ಧಗೊಳಿಸುವುದು. ಇಡಿಯ ಭಾರತವನ್ನು ಒಂದು ಸಮಾಜವಾಗಿ ಸ್ಥಾಪಿತಗೊಳಿಸುವುದು ಸಂಘದ ಚಿಂತನೆಯಾಗಿದೆ. ಇದಕ್ಕಾಗಿ ಸಂಘವು ಪ್ರತಿನಿತ್ಯ ಕಾರ್ಯಪ್ರವೃತ್ತವಾಗಿದೆ”, ಎಂದರು.ಅವರು ಬೋಧ ಗಯಾದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದರು.
” ಪ್ರತಿಯೊಂದು ಸಮಾಜ, ರಾಷ್ಟ್ರ ಮತ್ತು ಸಮುದಾಯ ತಮ್ಮ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ತನ್ನ ಇತಿಹಾಸದ ತಪ್ಪುಗಳಿಂದ ಕಲಿಯದ ಸಮಾಜ ಅಥವಾ ರಾಷ್ಟ್ರವು ಅಸ್ತಿತ್ವದಲ್ಲಿರುವುದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರು ಇತಿಹಾಸದ ತಪ್ಪುಗಳು ಪುನರಾವರ್ತನೆಯಾಗದಂತೆ ಕಾರ್ಯಪ್ರವೃತ್ತರಾಗುವ ಸಲುವಾಗಿಯೇ ಸಂಘವನ್ನು ಸ್ಥಾಪಿಸಿದರು. ಡಾ. ಹೆಡ್ಗೆವಾರ್ ಅವರು 1982 ರ ವಿಕ್ರಮ್ ಸಂವತ್ ವಿಜಯದಶಮಿ ದಿನದಂದು ಸಂಘವನ್ನು ಸ್ಥಾಪಿಸಿದರು (ಅದರ ಪ್ರಕಾರ ಕ್ರಿ.ಶ. 1925). ಈ ದಿನ ರಾಮನು ರಾವಣನನ್ನು ಕೊಂದನು ಮತ್ತು ದುರ್ಗೆಯು ಮಹಿಷಾಸುರನನ್ನು ಕೊಂದು ಧರ್ಮರಾಜ್ಯವನ್ನು ಸ್ಥಾಪಿಸಿದಳು ಎಂದು ಪರಂಪರೆ ಹೇಳುತ್ತದೆ. ಅಂತಹ ಅತ್ಯುತ್ತಮ ಕಾರ್ಯದ ಸಂದೇಶವನ್ನು ನೀಡಲು ಈ ದಿನವನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯುವುದು ಅವಶ್ಯಕ” ಎಂದು ಹೇಳಿದರು.
ಅವರು ಮುಂದುವರೆದು ಮಾತನಾಡುತ್ತಾ ಸಾಮರಸ್ಯಕ್ಕಾಗಿ ಆಗ್ರಹ ಮಾಡುತ್ತಾ, “ದೇವರ ಪ್ರತಿಯೊಂದು ಸೃಷ್ಟಿಯಲ್ಲಿಯೂ ದೈವತ್ವದ ಅಂಶವಿದೆ. ನಾವೆಲ್ಲರೂ ಸಹೋದರರು ಎಂದು ಸಮಾಜ ಭಾವಿಸಬೇಕು. ನಮ್ಮಲ್ಲಿ ಯಾರೂ ಅಸ್ಪೃಶ್ಯರಲ್ಲ. ಸಮಾಜದ ಎಲ್ಲ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಬೇಕು. ಯಾರು ಯಾವ ಜಾತಿಗೆ ಸೇರಿದವರು ಎಂದು ಯೋಚಿಸಬೇಡಿ. ಗುಡಿಸಲಿನಲ್ಲಿ ಹುಟ್ಟಿದವನಾಗಲಿ, ಅರಮನೆಯಲ್ಲಿ ಹುಟ್ಟಿದವನಾಗಲಿ ಪ್ರತಿಯೊಬ್ಬರಲ್ಲೂ ದೇವರ ಭಾಗವಿರುತ್ತದೆ. ಇದು ನಮ್ಮ ಸನಾತನ ಸಂಸ್ಕೃತಿ. ಈ ಸಂಸ್ಕೃತಿಯನ್ನು ಮುರಿಯಲು ಕೆಲವು ಜನರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ, ಆದರೆ ಈ ಉಜ್ವಲ ಸಂಪ್ರದಾಯ ಮತ್ತು ಸಂಸ್ಕೃತಿಯ ವಾಹಕಗಳು ವಿಭಿನ್ನವಾಗಿವೆ. ಇದನ್ನು ಉಳಿಸಿಕೊಳ್ಳಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಗ ಮಾತ್ರ ದೇಶ ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗ್ಅನ್ನು ಸೋಲಿಸಲು ಸಾಧ್ಯವಾಗುವುದು.”
ವಿಜಯದಶಮಿ ಕಾರ್ಯಕ್ರಮದಲ್ಲಿ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರ ಭಾಷಣದ ನಂತರ ಸ್ವಯಂಸೇವಕರು ಪಥ ಸಂಚಲನವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಸಹ ವಿಭಾಗ ಸಂಘಚಾಲಕರಾದ ಸಿಯಶರಣ ಪ್ರಸಾದ್, ನಗರ ಸಂಘಚಾಲಕರಾದ ಅಭಯ ಸಿಂಬಾ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಯಾದ ಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕಿ ಉಷಾ ದಾಲ್ಮಿಯಾ ಅವರು ವಹಿಸಿದ್ದರು.