ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯಸ್ಥ ಡಾ.ಇಮಾಮ್ ಉಮೆರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿ ಮಾಡಿದರು.
ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು “ಇಲ್ಯಾಸಿ ಅವರು ಸರಸಂಘಚಾಲಕರನ್ನು ಬಹಳ ಹಿಂದೆಯೇ ಆಹ್ವಾನ ನೀಡಿದ್ದರು. ಸಮಾಜ ಜೀವನದ ವಿವಿಧ ಸ್ಥರದಲ್ಲಿನ ಭಿನ್ನ ಜನರನ್ನು ನಿರಂತರವಾಗಿ ಅವರು ಭೇಟಿಯಾಗುತ್ತಾರೆ.ಇದು ಕೂಡ ಅದೇ ರೀತಿಯ ‘ಸಂವಾದ’ ಪ್ರಕ್ರಿಯೆಯ ಒಂದು ಭಾಗ” ಎಂದು ಹೇಳಿದ್ದಾರೆ.
ಭೇಟಿಯ ನಂತರ ಇಲ್ಯಾಸಿಯವರು ಮಾತನಾಡಿ, “ಮೋಹನ್ ಭಾಗವತ್ ಅವರು ಬೇಟಿ ನೀಡಿರುವುದು ನಮ್ಮ ಸೌಭಾಗ್ಯ. ಭಾಗವತಗ ಅವರು ಇಮಾಮ್ ಹೌಸ್ಗೆ ಭೇಟಿಗಾಗಿ ಬಂದಿದ್ದರು ಅವರೊಬ್ಬ ರಾಷ್ಟ್ರ ಋಷಿ ಮತ್ತು ರಾಷ್ಟ್ರ ಪಿತ, ದೇಶದಲ್ಲಿ ಏಕತೆ ಮತ್ತು ನಿಷ್ಠೆ ಪಾಲನೆಯಾಗಬೇಕಿದೆ.ನಾವೆಲ್ಲ ಭಿನ್ನ ರೀತಿಯ ಉಪಾಸನಾ ಪದ್ಧತಿಗಳನ್ನು ಪಾಲಿಸುತ್ತೇವೆ, ಆದರೆ ಅದೆಲ್ಲದಕ್ಕಿಂತ ಮೊದಲು ನಾವು ಮನುಷ್ಯರು.ನಾವು ಭಾರತದಲ್ಲಿ ಜೀವಿಸುತ್ತಿದ್ದೇವೆ, ನಾವು ಭಾರತೀಯರು. ಭಾರತ ವಿಶ್ವ ಗುರುವಾಗುವ ಹೊಸ್ತಿಲಲ್ಲಿದೆ, ಅದಕ್ಕಾಗಿ ನಾವು ಶ್ರಮಪಡಬೇಕಿದೆ” ಎಂದರು.
ಮೋಹನ್ ಭಾಗವತ್ ಅವರನ್ನು ರಾಷ್ಟ್ರಪಿತ ಎಂದಿರುವ ಕುರಿತು ಪತ್ರಕರ್ತರು ಪ್ರಶ್ನೆ ಮಾಡಿದಾಗ ಇಲ್ಯಾಸಿಯವರು, ” ಖಂಡಿತವಾಗಿಯೂ ಅವರೊಬ್ಬ ರಾಷ್ಟ್ರಪಿತ” ಎಂದರು.
ಉಮರ್ ಇಲ್ಯಾಸಿಯ ಸಹೋದರ ಸುಹೈಬ್ ಇಲ್ಯಾಸಿ ಮಾತನಾಡಿ, ” ನಮ್ಮ ತಂದೆಯವರು ಸಂಘದೊಂದಿಗೆ ಬಹಳ ಹಳೆಯ ನಂಟು ಹೊಂದಿದ್ದರು.ಮೋಹನ್ ಭಾಗವತ್ ಅವರು ನಮ್ಮ ತಂದೆಯವರಾದ ಜಮೀಲ್ ಇಲ್ಯಾಸಿಯವರ ಪುಣ್ಯಸ್ಮರಣೆಯ ಸಲುವಾಗಿ ಮಸೀದಿಗೆ ಬಂದಿದ್ದರು. ಇದೊಂದು ಕುಟುಂಬದ ಖಾಸಗಿ ಕಾರ್ಯಕ್ರಮ, ಅದನ್ನು ಆ ದೃಷ್ಟಿಯಿಂದಲೇ ನೋಡಬೇಕಿದೆ ಹಾಗು ಭಾಗವತ್ ಅವರು ಮುಸಲ್ಮಾನ ವಿಚಾರವಂತರ ಜೊತೆ ಸಾಮಾಜಿಕ ಸಾಮರಸ್ಯದ ಕುರಿತಾಗಿ ಆಳವಾದ ಚರ್ಚೆಯನ್ನೂ ನಡೆಸಿದ್ದಾರೆ” ಎಂದರು.
ಭಾಗವತ್ ಅವರು ಮುಸಲ್ಮಾನ ಸಮುದಾಯದೊಂದಿಗೆ ಈ ಹಿಂದೆಯೂ ಆತ್ಮೀಯ ನಂಟು ಹೊಂದಿದ್ದು ಆಗಸ್ಟ್ನಲ್ಲಿ ಇಲ್ಯಾಸಿಯವರನ್ನು ಭೇಟಿ ಮಾಡಿದ್ದರು. ಅಲ್ಲದೆ ಅಂದು ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಎಸ್ವೈ ಖುರೇಶಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಜ಼ಮೀರ್ ಉದ್ದೀನ್ ಷಾ, ಮಾಜಿ ಸಂಸದ ಶಹೀದ್ ಸಿದ್ದಿಕಿ ಮತ್ತು ಸಮಾಜ ಸೇವಕರೂ ಉದ್ಯಮಿಗಳೂ ಆದ ಸಯೀದ್ ಶೇರ್ವಾನಿ ಅವರನ್ನು ಭೇಟಿ ಮಾಡಿದ್ದರು.