– ತನ್ಮಯಿ ಪ್ರೇಮ್‌ಕುಮಾರ್,ವಿಶ್ವ ಸಂವಾದ ಕೇಂದ್ರ, ಕರ್ನಾಟಕ

ಅಂದು ಸಂಜೆ ಕದನದ ವಿರಾಮ ಘೋಷಣೆಯಾಗಿತ್ತು.ಬ್ರಿಟಿಷ್ ಸೇನೆ ಹೈರಾಣಾಗಿತ್ತು. ಆಸ್ಟ್ರಿಯಾ,ಹಂಗೇರಿ ಮತ್ತು ಟರ್ಕಿಯವರ ಬಲಿಷ್ಠ ಸುರಕ್ಷಿತ ಸೇನೆ ಅತ್ಯಂತ ಸುರಕ್ಷಿತ ಸ್ಥಳದಲ್ಲಿ ನಿಂತು ಯುದ್ಧ ಮಾಡುತ್ತಾ ಮೇಲುಗೈ ಸಾಧಿಸಿತ್ತು. ಬ್ರಿಟೀಷ್ ಸೇನೆಯ ದಂಡನಾಯಕರಿಗೆ  ಟರ್ಕಿಯವರನ್ನ ಇನ್ನು ಹೀಗೆ ತೆರೆದ ಮೈದಾನದಲ್ಲಿ ಯುದ್ಧದಲ್ಲಿ ನಿಂತು ಎದುರುಗೊಳ್ಳುವುದೆಂದರೆ ಸ್ವತಃ ಮೃತ್ಯುದೇವತೆಯನ್ನೇ ಆಹ್ವಾನ ಮಾಡಿ ಒಪ್ಪಿಸಿಕೊಂಡಂತೆ ಎನ್ನುವುದು ಅರ್ಥವಾಗಿತ್ತು. ಇನ್ನು ಅಲ್ಲಿದ್ದರೆ ಇದ್ದ ಸೈನಿಕರನ್ನೂ ಕಳೆದುಕೊಳ್ಳುವ ಭಯ ಆವರಿಸಿತ್ತು. ಬ್ರಿಟಿಷ್ ಅಧಿಕಾರಿ ಸಿರಿಲ್ ಅಂಡು ಸುಟ್ಟ ಬೆಕ್ಕಿನಂತಾಗಿದ್ದ. ಗೆಲ್ಲದೆ ವಾಪಾಸ್ಸು ಹೋಗುವ ಹಾಗಿಲ್ಲ, ಇಲ್ಲಿ ಸೋಲು ಸಾವಿನ ಭಯ. ಕೊನೆಗೂ ಅಳೆದೂ ತೂಗಿ ಆ ಯುದ್ಧದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದ.

ಅಷ್ಟೊತ್ತಿಗೆ ಅಲ್ಲಿಗೆ ಬಂದ ಮೇಜರ್ ದಲಪತ್ ಸಿಂಗ್ ಶೇಖಾವತ್‌ಗೆ ಸನ್ನಿವೇಶ ಅರ್ಥವಾಗಿತ್ತು. ಅವರಿಗೂ ಇದು ಸರಿಯೆನಿಸಿದ್ದರೂ ಒಳಗಿನ ಕ್ಷತ್ರಿಯ ರಕ್ತಕ್ಕೆ ಬೆನ್ನ ತೋರಿಸುವ ಪರಿಪಾಠದ ಕಲ್ಪನೆಯೂ ಇರಲಿಲ್ಲ. ಅವನ ಆ ಕ್ಷಾತ್ರ ತುಂಬಿದ ಹೃದಯದಲ್ಲಿ ಗೆದ್ದು ಬರುವುದು ಅಥವಾ ಸಾಯುವುದು ಎರಡೇ ಇತ್ತೇ ವಿನಃ ಹೇಡಿಗಳ ಹಾಗೆ ಓಡಿಹೋಗುವುದು ಸಾಧ್ಯವೇ ಇಲ್ಲದ ಮಾತಾಗಿತ್ತು. ಈ ನಿರ್ಧಾರ ಕೇಳಿದ ಅವನು ಬ್ರಿಟಿಷ್ ಅಧಿಕಾರಿಯ ಎದುರು ” ನಾವು ಕ್ಷತ್ರಿಯರು, ನಮಗೆ ಯುದ್ಧ ಮಾಡುವುದು ಧರ್ಮ, ಸಂಬಳದ ಆಸೆಗಾಗಿ ನಾವು ಕತ್ತಿ ಹಿಡಿದಿಲ್ಲ,ನಾವು ಗೆದ್ದೇ ಇಲ್ಲಿಂದ ಹೊರಡುವುದು, ಯುದ್ಧ ಮುಂದುವರೆಸೋಣ” ಎನ್ನುತ್ತಾ ತಲೆಯೆತ್ತಿ ಹೇಳುವಾಗ ಅವರ ತಲೆಯ ಹಳದಿ ಕೆಂಪು ಹಸಿರು ಮಿಶ್ರಿತ ಪಗಡಿಯ ಕೊನೆಯಲ್ಲಿದ್ದ  ಮುತ್ತಿನ ಮಣಿಗಳ ಸಣ್ಣ ಮಾಲೆಯ ತೂಗಾಟ ಬ್ರಿಟೀಷ್ ಅಧಿಕಾರಿಯ ಎದೆಯಲ್ಲೂ ಒಂದು ಮಿಂಚು ಸುಳಿದು ಧೈರ್ಯ ತುಂಬಿತ್ತು.

ಇದು ನಡೆದದ್ದು ಮೊದಲ ವಿಶ್ವಯುದ್ಧದ ಸಮಯದಲ್ಲಿ.1917 ಜಗತ್ತಿನಲ್ಲಿ ಯುದ್ಧದ ಕಾರ್ಮೋಡಗಳು ಭೀಕರವಾಗಿ ಆವರಿಸಿದ್ದ ಕಾಲ. ಅದು ಹೈಫಾ ಎಂಬ ಬಂದರು ನಗರ. ಅದೊಂದು ಆಯಕಟ್ಟಿನ ಬಂದರು ಪ್ರದೇಶ. ಅದೆಂತಹ ಜಾಗವೆಂದರೆ ವಿಶ್ವಯುದ್ಧದ ವ್ಯೂಹಾತ್ಮಕ ದೃಷ್ಟಿಯಿಂದ ನೋಡಿದರೆ ಅದು ಎಲ್ಲರಿಗೂ ಬೇಕಾಗಿದ್ದ ಜಾಗ. ಒಟ್ಟೋಮನ್ ಟರ್ಕರು ಹೈಫಾವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡಿದ್ದರು. ಅದೋ ಅದಾಗಲೇ400 ವರ್ಷಗಳ ಕಾಲ ಟರ್ಕರು ಅದನ್ನು ಆಕ್ರಮಿಸಿಕೊಂಡಿದ್ದರು. ಮತ್ತು ಅಲ್ಲಿನ ಎಲ್ಲ ಜಾಗತಿಕ ಚಟುವಟಿಕಗಳ ಮೇಲೆ ತಮ್ಮ ಹಿಡಿತ ಸಾಧಿಸಿದ್ದರು.ಇದಕ್ಕಾಗಿಯೇ ಯುರೋಪು ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಹುಡುಕುವ ಪ್ರಯತ್ನ ಆರಂಭಮಾಡಿದ್ದು. ಒಟ್ಟೋಮನ್ ಟರ್ಕರ ಬಾಹ್ಯುಳದಿಂದ ಹೈಫಾವನ್ನು ಬಿಡಿಸಿಕೊಂಡರೆ ಬ್ರಿಟನ್ನಿಗೆ ಮೊದಲನೆಯ ವಿಸ್ವಯುದ್ಧದಲ್ಲಿ ಲಾಭವಿತ್ತು.ಆಗತಾನೆ ಹೊಸದಾಗಿ ರೂಪುಗೊಳ್ಳುತ್ತಿದ್ದ ಜಾಗತಿಕ ಸಮೀಕರಣದ ದೃಷ್ಟಿಯಿಂದ ಇದೊಂದು ಮಹತ್ವದ ಗೆಲುವಾಗಿ ಬ್ರಿಟನ್ ತನ್ನ ಪ್ರಾಬಲ್ಯ ಸಾಧಿಸುವ ಸಲುವಾಗಿ ಶತಾಯಗತಾಯದ ಪ್ರಯತ್ನ ಆರಂಭಿಸಿತ್ತು.ಹಾಗಾಗಿಯೇ ಹೈಫಾಕ್ಕಾಗಿ ಯುದ್ಧ ಆರಂಭವಾಗಿತ್ತು. ಬ್ರಿಟಿಷ್ ಸೇನೆಯ ಜೊತೆಗೆ ಹಾಗೆ ನಿಂತವರು ಅದರ ದಂಡನಾಯಕರಾಗಿದ್ದ ಮೇಜರ್ ದಲಪತ್ ಸಿಂಗ್ ಶೇಖಾವತ್, ಭಾರತದಿಂದ ಬ್ರಿಟೀಷರ ಪರವಾಗಿ ಹೋಗಿದ್ದ ಜೋಧಪುರ, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನದ ಸೈನಿಕರು ಯುದ್ಧದಲ್ಲಿ ಜೊತೆಯಾಗಿದ್ದರು.

ಇನ್ನು 1917ರಲ್ಲಿ ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಆರ್ಥರ್‌ ಬಾಲ್‌ಫೋರ್‌ ತನ್ನ ಘೋಷಣಾ ಪತ್ರದಲ್ಲಿ ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗಾಗಿ ಒಂದು ರಾಜ್ಯ ಸ್ಥಾಪನೆ ಮಾಡಲು ರಾಜಸಮ್ಮತಿ ದೊರೆತಿದೆ ಎಂದು ಉಲ್ಲೇಖಿಸಿದ್ದ.ಹೀಗಾಗಿ ರಾಜಾನುಜ್ಞೆಯನ್ನು ಪಾಲಿಸಬೇಕಿತ್ತು.

ಹೈಫಾವನ್ನು ಗೆಲ್ಲಬೇಕಿತ್ತು ನಿಜ, ಆದರೆ ಹೈಫಾವನ್ನು ಗೆಲ್ಲುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಬ್ರಿಟಿಷ್ ಸೇನೆ ಆಸ್ಟ್ರಿಯಾ,ಹಂಗೇರಿ ಒಟ್ಟು ಸೇನೆಯ ವಿರುದ್ಧ ಕಾದಾಡಬೇಕಿತ್ತು. ಅಲ್ಲದೆ ಅವರು ನೆಲೆ ನಿಂತಿದ್ದ ಜಾಗ ಅತ್ಯಂತ ಸುರಕ್ಷಿತವಾಗಿದ್ದುದ್ದಲ್ಲದೆ ಯುದ್ಧಕ್ಕೆ ಪೂರಕವಾಗಿತ್ತು. ಆದರೆ ಯುದ್ಧಕ್ಕೆ ಹೊರಟವನಿಗೆ ಎಂದಾದರೂ ಪರಿಸ್ಥಿತಿ ಅನುಕೂಲವಾಗಿರಲು ಸಾಧ್ಯವಿದೆಯೇ? ಉಹುಂ, ಯುದ್ಧ ಮತ್ತೆ ಆರಂಭವಾದಾಗ ಅದಾಗಲೇ ಮಧ್ಯರಾತ್ರಿಯ ಆಸುಪಾಸು. ಸಮುದ್ರದ ಅಲೆಗಳ ಏರಿಳಿತದ ಅಬ್ಬರ ಜೋರಾಗಿಯೇ ಇತ್ತು.

ಕಾರ್ಮೆಲ್‌ ಪರ್ವತದ ಮೇಲೆ ಸಜ್ಜಾಗಿದ್ದ ಟರ್ಕರ ಸೇನೆಯನ್ನು ಅಲ್ಲಿಯೇ ಸದೆಬಡಿಯುವ ತಂತ್ರದೊಂದಿಗೆ ಮೈಸೂರಿನ 15ನೇ ಇಂಪೀರಿಯಲ್‌ ಸವೀರ್ಸ್ ತುಕಡಿಯು ಪರ್ವತವನ್ನೇರಿದರೆ, ಪರ್ವತದ ಕೆಳಗೆ ತೆರೆದ ಮೈದಾನದಲ್ಲಿ ನಿಂತಿದ್ದ ಟರ್ಕಿ ಸೇನೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡಲು ಜೋಧಪುರದ ತುಕಡಿ ಕತ್ತಿ ಹಿಡಿದು ಕಾಯುತ್ತಿತ್ತು. ಯುದ್ಧ ಕೈದಿಗಳಾಗಿ ಸೆರೆಸಿಕ್ಕವರಿಗೆ ಸರಿಯಾದ ಗತಿ ಕಾಣಿಸುವುದರ ಭಾರ ಹೈದರಾಬಾದ್‌‌ನ ತುಕಡಿಯದ್ದು. ಇದು ಯುದ್ಧದ ತಂತ್ರ!

ಅದಾಗಲೇ ಮಧ್ಯರಾತ್ರಿಯಾದ್ದರಿಂದ ಅನೇಕ ಸೈನಿಕರು ಬಿಡಿ, ಸೇನಾನಾಯಕರೂ ಮೈಮರೆವಿನಲ್ಲಿದ್ದರು.ಹಿಂದಿನ ದಿನ ಸಂಜೆಯವರೆಗೂ ನಡೆದ ಯುದ್ಧದಲ್ಲಿ ಸಿಕ್ಕಿದ್ದ ಗೆಲುವಿನ ಅಮಲಿನಲ್ಲಿದ್ದ ಟರ್ಕಿ ಸೇನೆಗೆ ಮಧ್ಯರಾತ್ರಿಯ ಆಘಾತ ಕಾದಿತ್ತು. ಮೈಸೂರಿನ ಲ್ಯಾನ್ಸರ್ ತುಕಡಿ ಮಧ್ಯರಾತ್ರಿ ಪರ್ವತವನ್ನೇರಿ ಆಕ್ರಮಣ ಮಾಡತೊಡಗಿತು. ಇತ್ತ ಮೈದಾನದಲ್ಲಿ ಟರ್ಕಿ ಸೇನೆಯ ಜೊತೆ ಕಾದಾಡಲಾರಂಭಿಸಿದರು.ಆದರೆ ಎಲ್ಲಿಂದಲೋ ಬಂದ ಬಾಣವೊಂದು ಮೇಜರ್ ದಲಪತ್ ಅವರ ಎದೆಗೆ ನಾಟಿ ಅವರು ಪ್ರಾಣ ತೆರಬೇಕಾಯಿತು. ಆದರೆ ನಾಯಕನ ಮರಣದಿಂದ ಕ್ರುದ್ಧರಾದ ಸೈನಿಕರು ಮತ್ತಷ್ಟು ರೋಷಾವೇಶದಿಂದ ಕಾದಾಡಿದರು.

ಪ್ರತಿಕೂಲ ಪರಿಸ್ಥಿತಿಯಲ್ಲಿ ಸೈನಿಕರು ಕಾದಾಡಲೇಬೇಕಿತ್ತು. ಆ ಪ್ರದೇಶದ ಕುರಿತಾಗಿ ಅದೇನೂ ಗೊತ್ತಿರಲಿಲ್ಲ, ಗೆಆಯುಧಗಳ ಕೊರತೆಯಾದರೆ ತಕ್ಷಣವೇ ಅದನ್ನು ಪೂರೈಸಬಲ್ಲ ಮರುಪೂರಣ ಸೇನಾ ನೆಲೆಗಳಿರಲಿಲ್ಲ. ಆಯುಧವಾದರೂ ಯಾವುದು? ಈಟಿ, ಭರ್ಜಿ, ಭಲ್ಲೆ, ಬಾಣ! ಆದರೆ ಎದುರು ಸುರಕ್ಷಿತವಾಗಿ ಕೂತಿದ್ದವರ ಹತ್ತಿರವಿದ್ದದ್ದು ಆಧುನಿಕ ಶಸ್ತ್ರಾಸ್ತ್ರಗಳು,ತುಪಾಕಿಗಳು. ಸೈನಿಕರೋ ಹಿಡಿಯಷ್ಟು ಜನ. ತಮಗೂ ಕುದುರೆಗಳಿಗೂ ಆಹಾರದ ವ್ಯವಸ್ಥೆಯಿಲ್ಲ. ಎಲ್ಲವೂ ಅಯೋಮಯವಾದ ಪರಿಸ್ಥಿತಿ.

ಮೈಸೂರಿನ ಆ ಈಟಿ ರಾವುತರ ಪಡೆಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ. ಕಾರ್ಮೆಲ್‌ ಪರ್ವತ ಮಳೆಯಿಂದ ತೇವಗೊಂಡಿದ್ದ ಜೌಗು ನೆಲ, ಕಡಿದಾದ ಹಾದಿ, ಭಯಂಕರ ಕಣಿವೆ, ದಟ್ಟಕತ್ತಲು, ಶತ್ರುವಿನ ನಿಖರವಾದ ನೆಲೆ ತಿಳಿದಿಲ್ಲ.
ಆದರೆ ಈ ಎಲ್ಲ ಅನನುಕೂಲಗಳ ಆಚೆಗೆ ಶೌರ್ಯದಿಂದ ಕಾದಾಡಿದ ಮೈಸೂರಿನ ಸೇನೆ, ಪರ್ವತವನ್ನೇರಿ ವೈರಿಗಳನ್ನು ಕೆಳಗಿಳಿಯದಂತೆ ಬಂಧಿಸಿಟ್ಟರು.

ಹೀಗೆ ಆಧುನಿಕ ಮಶಿನ್‌ಗನ್‌ಗಳನ್ನು ಎದುರಿಸಿ ಜಯ ಸಾಧಿಸಿದ ಈಟಿರಾವುತರ ಅಶ್ವದಳದ ಕತೆ ಇದೊಂದೇ ಇರಬೇಕು. ಅದರಲ್ಲೂ ಮಾನವ ಇತಿಹಾಸದ ಅಪರೂಪದ ಯುದ್ಧ ಗೆಲುವು ಇದೆಂದರೆ ಅತಿಶಯೋಕ್ತಿಯೇನಲ್ಲ.

ಒಂದೇ ಒಳ್ಳೆಯ ಸಂಗತಿಯೆಂದರೆ ಪರ್ವತದ ಮೇಲಿದ್ದ ಸೈನಿಕರಿಗೆ ಈ ಆಕ್ರಮಣದ ಕಲ್ಪನೆಯೂ ಇರಲಿಲ್ಲ, ಅವರು ಓರೆಯಿಂದ ಕತ್ತಿ ತೆಗೆಯುವ ಮೊದಲೇ ಕತ್ತು ಸೀಳಿ ಹೋಳಾಗಿರುತ್ತಿತ್ತು. ಸೂರ್ಯೋದಯದ ನಸುಕಿಗಿಂತ ಮುನ್ನ ಆರಂಭವಾಗಿದ್ದ ಯುದ್ಧ ಮಾರನೆಯ ದಿನ ಮಧ್ಯಾಹ್ನದವರೆಗೂ ನಡೆದಿತ್ತು. ಜೊತೆಗೆ ವಿಜಯವೂ ದೊರೆತಿತ್ತು.

ಹೈಫಾ ನಗರವು ಒಟ್ಟೋಮನ್‌ ಟರ್ಕಿ ಆಳ್ವಿಕೆಯಿಂದ ಬಿಡುಗಡೆಗೊಂಡ ನಂತರ ತಮ್ಮ ತಾಯ್ನಾಡಿಗಾಗಿ ‘ಜಿಯಾನಿಸಂ’ ಆಂದೋಲನ ನಡೆಸುತ್ತಿದ್ದ ಯಹೂದಿಗಳು ಭೂಪಟದಾದ್ಯಂತ ಚದುರಿದ್ದ ಯಹೂದಿ ಜನಾಂಗವು ನಿಧಾನವಾಗಿ ತಮ್ಮ ದೇಶಕ್ಕೆ ಮರಳಲು ಆರಂಭಿಸಿದರು.

ಯಾವ ನಗರದ ಕಾರಣಕ್ಕಾಗಿ ಯುರೋಪಿಯನ್ನರು ಭಾರತಕ್ಕೆ ಹೊಸ  ಸಮುದ್ರ ಯಾತ್ರೆ ನಡೆಸಿದರೋ, ಅದನ್ನು ಅವರಿಗಾಗಿಯೇ ಅವರೇ ಆಕ್ರಮಿಸಿಕೊಂಡಿದ್ದ ಭಾರತದ ಸೈನಿಕರು ಪ್ರಾಣವನ್ನು ಒತ್ತೆ ಇಟ್ಟು ಯುದ್ಧ ಮಾಡಿ ಬಿಡಿಸಿಕೊಟ್ಟದ್ದು ಇತಿಹಾಸದ ಅತ್ಯಂತ ದೊಡ್ಡ ವ್ಯಂಗ್ಯವೂ ಹೌದು.

ಆದರೆ ಆ ಯುದ್ಧ ಈಗಲೂ ಇತಿಹಾಸವೇ. ಭಾರತದ ಹೋರಾಟ, ಮೈಸೂರಿನ ವೀರ ಯೋಧರು, ಜೋಧಪುರದ ಕ್ಷತ್ರಿಯ ಯೋಧರು ಎಲ್ಲವನ್ನೂ ಇಂದಿಗೂ ಇಸ್ರೇಲ್ ಗೌರವದಿಂದ ಕಾಣುತ್ತದೆ. ಅದರ ಸವಿನೆನಪಿಗಾಗಿ ಕೃತಜ್ಞತೆ ಸಲ್ಲಿಸುತ್ತದೆ‌. ಭಾರತ ಮತ್ತೆ ತನ್ನ ವೈಭವಕ್ಕೆ ಮರಳುವ ಈ ಹೊತ್ತಿನಲ್ಲಿ ಹೇಗೆ ತಾನು ದಾಸ್ಯದಲ್ಲಿದ್ದಾಗಿಯೂ ಮತ್ತೊಂದು ದೇಶದ ಜಾಗವನ್ನು ಮುಕ್ತವಾಗಿಸಿ ಉಪಕಾರಮಾಡಿತು ಎನ್ನುವ ಕಥೆ ಯುದ್ಧದ ಕಥೆಯಾಚೆಯ ಮತ್ತೊಂದು ಸುತ್ತಿನ ರೋಮಾಂಚಕಾರಿ ಅನುಭವ.

Leave a Reply

Your email address will not be published.

This site uses Akismet to reduce spam. Learn how your comment data is processed.