ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಕಾಶ್ಮೀರಿ ಹಿಂದೂ ಸಮಾಜವನ್ನು ಉದ್ದೇಶಿಸಿ ‘ಶೌರ್ಯ ದಿವಸ್’ನ ಅಂಗವಾಗಿ ಭಾನುವಾರ ನವರೇಹ್ ಮಹೋತ್ಸವ-2022ದಲ್ಲಿ ಆನ್ಲೈನ್ ಮಾಧ್ಯಮದ ಮೂಲಕ ಮಾತನಾಡಿದರು.
ತಮ್ಮ ಭಾಷಣದಲ್ಲಿ, ಹಿಂದೂಗಳನ್ನು ಕಾಶ್ಮೀರಕ್ಕೆ ಮತ್ತೆ ಹಿಂದಿರುಗಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ಅವರು ಸಂಜೀವಿನಿ ಶಾರದಾ ಕೇಂದ್ರದ ಫೇಸ್ಬುಕ್ ಪುಟದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಸಾವಿರಾರು ಕಾಶ್ಮೀರಿ ಹಿಂದೂಗಳು ಮಾತ್ರವಲ್ಲದೆ ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ಹಿಂದೂಗಳನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 1 ರಂದು ಶಿರ್ಯಾಭಟ್ಟ ಸ್ಮಾರಕ ದಿನವನ್ನು ಆಚರಿಸಲಾಗುತ್ತಿದ್ದು, ನವರೇಹ್ ಸಂಕಲ್ಪ್ ದಿವಸ್ ಅನ್ನು ಏಪ್ರಿಲ್ 2 ರಂದು ಆಚರಿಸಲಾಯಿತು. ಈ ನವರೇಹ್ -ಮಹೋತ್ಸವ 2022 ಅನ್ನು ಸಂಜೀವನಿ ಶಾರದಾ ಕೇಂದ್ರವು ಆಯೋಜಿಸಿತ್ತು.
ಸರಸಂಘಚಾಲಕರು ಮಾತನಾಡುತ್ತಾ ಶಿರ್ಯಾಭಟ್ಟ, ರಾಜಾ ಲಲಿತಾದಿತ್ಯ ಮತ್ತು ಗುರುತೇಗ್ ಬಹದ್ದೂರ್ರ ಇತಿಹಾಸವನ್ನು ನೆನೆಯಬೇಕು, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಧೈರ್ಯದಿಂದ ತಮ್ಮ ಶಕ್ತಿಯ ಮೂಲಕ ಎದುರಿಸುತ್ತಾ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಶಿರ್ಯಾಭಟ್ಟರು ಸಮಾಜವನ್ನು ಹೇಗೆ ಒಗ್ಗೂಡಿಸಿದ್ದರು ಎಂದು ಉಲ್ಲೇಖಿಸಿದರು. ರಾಜ ಲಲಿತಾದಿತ್ಯನ ಜೀವನ ಚರಿತ್ರೆಯನ್ನು ಉಲ್ಲೇಖಿಸಿದ ಅವರು, ಮಹಾರಾಣಾ ಪ್ರತಾಪ ಮತ್ತು ವೀರ ಶಿವಾಜಿಯ ಕ್ಷಾತ್ರ ಸಂಪ್ರದಾಯದ ಪೂರ್ವಜರು ಅವರು ಎಂದು ಹೇಳಿದರು. ಈ ವಿಚಾರವನ್ನು ನಾವು ಗಂಭೀರವಾಗಿ ಯೋಚಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಭಾರತವು ಅರಬರ ಆಕ್ರಮಣದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ರಾಜ ಲಲಿತಾದಿತ್ಯನು ಹೇಗೆ ತನ್ನ ಸಂಘಟನಾ ಕೌಶಲ್ಯದಿಂದ ಶತ್ರುಗಳನ್ನು ಗಡಿಯುದ್ದಕ್ಕೂ ತಡೆಗಟ್ಟಿ ಓಡಿಸಿದನು,ಹೇಗೆ ಆ ಸಮಯದಲ್ಲಿ ಭಾರತದ ರಾಜರ ಒಕ್ಕೂಟವನ್ನು ರಚಿಸುವ ಮೂಲಕ ರಾಷ್ಟ್ರದ ಹಿತಾಸಕ್ತಿಗಳನ್ನು ಜಾಗೃತಗೊಳಿಸಿದನು,ಈ ಯೋಗದಾನದಿಂದಾಗಿಯೇ ಭಾರತದ ಇತಿಹಾಸದಲ್ಲಿ ರಾಜ ಲಲಿತಾದಿತ್ಯನ ಶಕ್ತಿ, ಕೊಡುಗೆ ಬಹಳ ಮುಖ್ಯವಾಗಿದೆ ಎಂದರು
ಗುರು ತೇಗ ಬಹದ್ದೂರ್ ಅವರನ್ನು ಉಲ್ಲೇಖಿಸಿದ ಅವರು “ದೇಶದ ಹಿತಾಸಕ್ತಿ ಮತ್ತು ಹಿಂದೂ ಹಿತಾಸಕ್ತಿಗಾಗಿ ಪರಮ ತ್ಯಾಗದ ಆದರ್ಶ” ಎಂದು ಹೇಳಿದರು. ” ಅವರ ದಯೆ, ಕರುಣೆ ಮಾತ್ರವಲ್ಲ, ಗುರು ಮಹಾರಾಜರ ಕ್ಷಾತ್ರದ ಅನಂತ ಕೃಪೆಯೂ ‘ಹಿಂದ್ ಕಿ ಚಾದರ್’ ಆಗಿ ದೇಶವನ್ನು ಕಾಯುತ್ತಿತ್ತು.ಅದು ಮತದ ಆಚರಣೆಯೋ ದ್ವೇಷವೋ ಅಲ್ಲ,ಅದರ ಹಿಂದೆ ರಾಷ್ಟ್ರ ರಕ್ಷಣೆಯ ವಿಚಾರವೂ ಇತ್ತು, ಎಲ್ಲರೊಂದಿಗಿನ ಬಾಂಧವ್ಯವೂ ಇತ್ತು. ಅದೇ ಧರ್ಮ.
ಗುರು ತೇಗ ಬಹದ್ದೂರ್ ಜೀ ಅವರು ತಮ್ಮ ಮುಂಡವನ್ನು ಬಲಿ ಕೊಟ್ಟರು, ಆದರೆ ಅದೊರಳಗಿದ್ದ ಧರ್ಮದ ಸಾರವನ್ನು ಬಲಿ ನೀಡಲಿಲ್ಲ ಎಂದು ಸರಸಂಘಚಾಲಕರು ಹೇಳಿದರು. ಗುರು ತೇಗ ಬಹದ್ದೂರ್ರು ಸ್ವಯಂ ಬಲಿದಾನ ಮಾಡುವ ಮೂಲಕ ಭಾರತದ ಜೀವವನ್ನು ಉಳಿಸಿದರು. ಅವರು ತೋರಿದ ತ್ಯಾಗ, ಧೈರ್ಯ,ಸಾಹಸ ಮತ್ತು ಪರಾಕ್ರಮದೊಂದಿಗೆ, ಈಗ ನಾವು ನಮ್ಮ ಬುದ್ಧಿವಂತಿಕೆ, ಶಕ್ತಿಯನ್ನು ಸಂಯೋಜಿಸುಕೊಳ್ಳುತ್ತಾ ಮತ್ತು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿ ನಾವು ತೊಡಗಿಸಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದರು
“ಈ ದಿನದ ನವರೇಹ್ ಮಹೋತ್ಸವದ ಒಂದು ಹೊಸ ಪರ್ವ ಮತ್ತು ಸಂವತ್ಸರದ ಹೊಸ ಪ್ರಾರಂಭಕ್ಕೆ ಸಂಕಲ್ಪದ ದಿನ.ಈಗ ಸಂಕಲ್ಪ ಪೂರ್ತಿಯ ಸಮಯ ಹತ್ತಿರವಾಗುತ್ತಿದೆ.370 ಆರ್ಟಿಕಲ್ ತೆಗೆದ ನಂತರ ವಾಪಾಸಾತಿಗೆ ಕಣಿವೆಯ ಮಾರ್ಗವು ಈಗ ಪ್ರಶಸ್ತವಾಗಿದೆ.”
“ಇಸ್ರೇಲ್ ಜನರೂ ಚದುರಿ ಹೋಗಿದ್ದರು, ಅವರೂ ತಮ್ಮ ಹಬ್ಬಗಳಂದು ಸಂಕಲ್ಪ ಮಾಡುತ್ತಿದ್ದರು, 1800 ವರ್ಷಗಳ ಕಾಲ ಈ ಸಂಕಲ್ಪವನ್ನು ಜಾಗೃತವಾಗಿರಿಸಿದ್ದರು ಮತ್ತು ನಿರಂತರ ಸಂಕಲ್ಪದ ಬಲದ ಆಧಾರದ ಮೇಲೆ ಸ್ವತಂತ್ರ ಇಸ್ರೇಲ್ ಅನ್ನು ಅವರು ಸ್ಥಾಪಿಸಿದರು ಮತ್ತು ಕಳೆದ 30 ವರ್ಷಗಳಲ್ಲಿ ಇಸ್ರೇಲ್ ಎಲ್ಲಾ ಅಡೆತಡೆಗಳನ್ನು ದಾಟಿ ವಿಶ್ವದ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಾಶ್ಮೀರಿ ಹಿಂದೂಗಳು ಪ್ರಪಂಚದಾದ್ಯಂತ ಸ್ಥಳಾಂತರಗೊಂಡಿದ್ದಾರೆ ಮತ್ತು ಚದುರಿಹೋಗಿದ್ದಾರೆ, ಆದರೆ ಅವರಿಗೆ ಒಂದು ಭೂಮಿ ಇದೆ, ಅದು ಅವರ ನಮ್ಮ ನಿಮ್ಮ ಕಾಶ್ಮೀರ, ಭಾರತದ ಭಾಗವಾಗಿರುವ ಕಾಶ್ಮೀರ. ಇಡೀ ಭಾರತ ಸ್ಥಳಾಂತರಗೊಂಡ ಕಾಶ್ಮೀರದ ಹಿಂದೂಗಳ ಬೆನ್ನಿಗೆ ಇದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಂತು. ಭಾರತದ ಜನಮಾನಸದಲ್ಲಿ ಈ ಚಿತ್ರ ಸತ್ಯಗಳು ನೆಲೆಗೊಳ್ಳುತ್ತಿದೆ , ಅಲ್ಲಿ ನಡೆದ ಜಿಹಾದ್ನ ಭೀಕರತೆಯ ಸತ್ಯವನ್ನು ಮುನ್ನೆಲೆಗೆ ತರುವ ಈ ಚಿತ್ರದ ಚರ್ಚೆ ದೇಶದೆಲ್ಲೆಡೆ ನಡೆಯುತ್ತಿದೆ.
ಈ ಬಾರಿ ಅಲ್ಲಿನ ಹಿಂದೂಗಳು ಮರುಸ್ಥಾಪಿತಗೊಳ್ಳುವಾಗ, ಮತ್ತೆ ಯಾವ ರೀತಿಯಲ್ಲೂ ಅಲ್ಲಿಂದ ಕದಲದ ರೀತಿಯಲ್ಲಿ ಕಾಶ್ಮೀರದಲ್ಲಿ ನೆಲೆಸಬೇಕಿದೆ. ಈಗ ಕಾಶ್ಮೀರಕ್ಕೆ ಹೋಗಿ ನೆಲೆಸಿದ ನಂತರ ಯಾವುದೇ ಅಪಾಯವಿಲ್ಲ,ಅವರ ಅದೃಷ್ಟ ಖುಲಾಯಿಸುತ್ತದೆ ಎಂದಲ್ಲ, ಆದರೆ ಜೀವನದಲ್ಲಿ ಎಲ್ಲ ರೀತಿಯ ಸಂದರ್ಭಗಳು ಬರುತ್ತವೆ.ಅಂತಹ ಸಂದರ್ಭಗಳು ನಮ್ಮನ್ನು ಪರೀಕ್ಷೆ ಮಾಡುತ್ತದೆ, ಆಗ ಸಾಹಸ ಮತ್ತು ಧೈರ್ಯದಿಂದ ಮಾತ್ರ ಆ ಪರಿಸ್ಥಿತಿಯನ್ನು ಜಯಿಸಲು ಸಾಧ್ಯ. ಕಾಶ್ಮೀರಿ ಹಿಂದೂಗಳು ತಮ್ಮದೇ ದೇಶದಲ್ಲಿ, ತಮ್ಮ ಮನೆಯಲ್ಲಿ ನಿರಾಶ್ರಿತರಾಗುವ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಮತ್ತು ಈ ಪರಿಸ್ಥಿತಿಯು ಮೂರು-ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಮತ್ತು ಗೆಲ್ಲುವ ಸಂಕಲ್ಪ ಮಾಡಬೇಕಿದೆ.