– ಕೌಶಿಕ್ ಗಟ್ಟಿಗಾರ್, ಹವ್ಯಾಸಿ ಬರಹಗಾರ

‘ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು’ ಎನ್ನುವ ಬಾಬಾಸಾಹೇಬ್ ಅವರ ಮಾತು ಅಕ್ಷರಶಃ ನಿಜ. ಆದರೆ ಈ ವಾಸ್ತವಕ್ಕೆ ವಿಪರೀತವಾಗಿ ನೆಲದ ಸತ್ಯವನ್ನು ಜನಮಾನಸದಲ್ಲಿ ಉಳಿಯದಂತೆ ಮಾಡುವ ಹುನ್ನಾರ ಎಲ್ಲಾ ಕ್ಷೇತ್ರದಲ್ಲೂ ನಡೆದಿದೆ ಎನ್ನುವುದು ದುರಂತದ ಸಂಗತಿ. ಅಂತಹದ್ದೇ ಒಂದು ಐತಿಹಾಸಿಕ ಮಹತ್ವಪೂರ್ಣ ಘಟನೆಯನ್ನು ವ್ಯವಸ್ಥಿತವಾಗಿ ಮರೆಮಾಚಲು ಕೆಲವರು ಪ್ರಯತ್ನಿಸಿದರು. ಆದರೆ ಪ್ರಸ್ತುತ ಕೇಂದ್ರ ಸರಕಾರದ ಮಾಸ್ಟರ್ ಸ್ಟ್ರೋಕ್ ಗೆ ಅದು ನುಚ್ಚುನೂರಾಗಿ ಹೋಗಿದೆ‌.‌ ತನ್ನ ಗತವೈಭವವನ್ನು ‘ಸೆಂಗೋಲ್’ ಮತ್ತೊಮ್ಮೆ ಸಿಂಹದಂತೆ ಘರ್ಜಿಸುವಂತಾಗಿದೆ

ಬಲಿದಾನಗಳ ಫಲವಾದ ಸ್ವಾತಂತ್ರ್ಯವನ್ನು ಅಧಿಕೃತವಾಗಿ ನಮ್ಮದಾಗಿಸಿಕೊಂಡ ಕ್ಷಣದ ರೋಚಕತೆ – ‘ಸೆಂಗೋಲ್’ ಕಥೆ

ಘಟನೆ ನಮ್ಮನೆಲ್ಲರನ್ನು ೧೯೪೭ ರ ಸ್ವಾತಂತ್ರ್ಯದ ಸಂದರ್ಭಕ್ಕೆ ಕೊಂಡೊಯ್ಯುತ್ತದೆ. ಭಾರತ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಬಂದು ನಿಂತಿರುವಾಗ, ಅಧಿಕಾರ ಹಸ್ತಾಂತರವನ್ನು ಕೇವಲ ಕೈಕುಲುಕುವುದರ ಮೂಲಕ ಮಾಡಿದರೆ ಅದಕ್ಕೆ ಪ್ರಾಶಸ್ತ್ಯ ಬರಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡು, ಅದಕ್ಕೊಂದು ವ್ಯವಸ್ಥಿತವಾದ ಕಾರ್ಯರೂಪದ ಭಾರತೀಯತೆಯ ಸೊಬಗನ್ನು ನೀಡಬೇಕು ಎಂಬುದಾಗಿ ಚಿಂತಿಸಿದರು.

ಸ್ವಾತಂತ್ರ್ಯದ ಅಧಿಕೃತ ಕ್ಷಣಕ್ಕೆ ರಾಜಮರ್ಯಾದೆಯನ್ನೊದಗಿಸಿದ ರಾಜಾಜಿ
ಸ್ವಾತಂತ್ರ್ಯ ಹೋರಾಟಗಾರರಾದ ರಾಜಾಜಿ ಅರ್ಥಾತ್ ಶ್ರೀ.ಸಿ.ರಾಜಗೋಪಾಲಾಚಾರಿ ಅವರ ಭಾರತೀಯ ಸಂಸ್ಕೃತಿ, ತತ್ವಜ್ಞಾನ, ಸಂಪ್ರದಾಯ, ನಾಗರೀಕತೆಗಳ ಕುರಿತಾದ ಅಪಾರ ಪಾಂಡಿತ್ಯವನ್ನು ಅರಿತಿದ್ದ ಜವಹರಲಾಲ್ ನೆಹರು , ರಾಜಾಜಿಯ ಬಳಿ ತೆರಳಿ ಹಸ್ತಾಂತರದ ಕುರಿತಾಗಿ ಚರ್ಚಿಸಿ ತಾತ್ವಿಕ ಪರಿಹಾರವನ್ನು ನೀಡಲು ವಿನಂತಿಸಿದರು. ರಾಜಾಜಿ ಅವರು ಈ ವಿಚಾರಕ್ಕೆ ಭಾರತೀಯ ಘತಕಾಲದ ಸತತ ಅಧ್ಯಯನದ ಮೂಲಕ ಪರಿಹಾರವನ್ನು ಕಂಡು ಹಿಡಿದರು. ಇತಿಹಾಸದ ಪುಟಗಳು ಭಾರತದ ಹಳೆಯ ಮತ್ತು ದೀರ್ಘಕಾಲೀನ ರಾಜಮನೆತನವಾದ ತಮಿಳುನಾಡಿನ ‘ ಚೋಳ’ ಅರಸರ ಕಡೆಗೆ ತಿರುಗಿತು. ಚೋಳ ಆಡಳಿತದ ಕಾಲದಲ್ಲಿ ಒಬ್ಬ ಚೋಳ ಅರಸ ಇನ್ನೊಬ್ಬ ಚೋಳ ಅರಸನಿಗೆ ಅಧಿಕಾರ ಹಸ್ತಾಂತರವನ್ನು ನ್ಯಾಯಪರಾಯಣ ಪ್ರತೀಕವಾದ ‘ಸೆಂಗೋಲ್’ ಹಸ್ತಾಂತರಿಸುವ ಮೂಲಕ ಕೈಕೊಳ್ಳುತಿದ್ದರು. ‘ಸೆಂಗೋಲ್’ ಪದವು ತಮಿಳಿನ ‘ಸೆಮ್ಮೈ’ ಅಂದರೆ ‘ಸದಾಚಾರ’ ಎನ್ನುವ ಪದದಿಂದ ಬಂದಿದೆ. ಈ ಬಗೆಯ ಅಧಿಕಾರ ಹಸ್ತಾಂತರ ನಮ್ಮ ಸ್ವಾತಂತ್ರ್ಯದ ಅಧಿಕಾರ ಹಸ್ತಾಂತರಕ್ಕೆ ಸೂಕ್ತವೆಂದು ರಾಜಾಜಿ ಅವರು ಜವಹರಲಾಲ್ ನೆಹರು ಅವರಿಗೆ ತಿಳಿಸಿದರು. ಇದಕ್ಕೋಸ್ಕರ ತಮಿಳುನಾಡಿನ ತಿರುವಾಡುತುರೈ ಅಧೀನಂ ಎನ್ನುವ ೫ ಶತಮಾನಗಳ ಹಳೆಯ ಸಂಸ್ಥಾನದ ಇಪ್ಪತ್ತನೇ ಗುರುಗಳಾದ ಶ್ರೀಲಶ್ರೀ ಅಂಬಲವಾನ ದೇಶಿಕ ಸ್ವಾಮಿ ಅವರನ್ನು ಸಂಪರ್ಕಿಸಿ ಚರ್ಚಿಸಿದರು. ಗುರುಗಳು ಚಿನ್ನದ ಸೆಂಗೋಲ್ ನಿರ್ಮಾಣದ ಕಾರ್ಯದ ಜವಾಬ್ದಾರಿಯನ್ನು ಮದ್ರಾಸಿನ ವುಮ್ಮಿಡಿ ಬಂಗಾರು ಅವರಿಗೆ ಕೊಟ್ಟರು. ಸೆಂಗೋಲ್ ನ ಮೇಲ್ಭಾಗದಲ್ಲಿ ನಂದಿಯನ್ನು ಹಾಗೂ ಅದರ ಕೆಳಭಾಗದಲ್ಲಿ ತಮಿಳು ಶ್ಲೋಕವನ್ನು ಕೆತ್ತಿದರು. ಇಲ್ಲಿ ನಂದಿಯು – ಶಕ್ತಿ, ಸತ್ಯ ಹಾಗೂ ನ್ಯಾಯದ ಪ್ರತಿರೂಪವಾಗಿದೆ. ಮುಂದೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಅಧಿಕಾರ ಹಸ್ತಾಂತರದ ಕಾರ್ಯಕ್ರಮಕ್ಕೆ ಅಧೀನಂ ಇದರ ಉಪಪ್ರಮುಖ್ ಶ್ರೀಲಶ್ರೀ ಕುಮಾರಸ್ವಾಮಿ ತಂಬಿರಾನ್ , ಅಧೀನಂ ಓದುವವರು, ಗಾಯಕ ಮಾಣಿಕಮ್ ಮತ್ತು ನಾದಸ್ವರ ವಿದ್ವಾನ್ ಟಿ.ಎನ್.ರಾಜರಾತಿನಂ ಪಿಳ್ಳೈ ಅವರು ಸೆಂಗೋಲ್ ಸಹಿತವಾಗಿ ದೆಹಲಿ ತಲುಪಿ, ಮೌಂಟ್‌‌ಬ್ಯಾಟನ್‌‌ ಗೆ ಕೊಟ್ಟರು. ಮುಂದೆ ಸೆಂಗೋಲ್ ನ ಶುದ್ಧೀಕರಣ, ಕೋಳರ್ ಪಡಿಗಮ್ ಪದ್ಯ ವಾಚನ, ನೆಹರು ಅವರಿಗೆ ಪೀತಾಂಬರ ವಸ್ತ್ರಧಾರಣೆಯೊಂದಿಗೆ ವಿಧಿವತ್ತಾಗಿ “ಇದು ನಮ್ಮ ಆದೇಶ, ಈಶ್ವರನ ಅನುಯಾಯಿ (ದೇವರ ಅನುಯಾಯಿ) ರಾಜ ಸ್ವರ್ಗಕ್ಕೆ ಸಮಾನವಾದ ಶಾಸನ ನಡೆಸಬೇಕು” ಎನ್ನುವ ಕೊನೆಯ ಮಂತ್ರದೊಂದಿಗೆ ಅಧಿಕಾರ ಹಸ್ತಾಂತರವು ಶಾಸ್ತ್ರೋಕ್ತವಾಗಿ ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡುವ ಮಾದರಿಯಲ್ಲಿ ನಡೆಯಿತು.

ಸುವರ್ಣ ಘಳಿಗೆ, ಸರಿಯಿತು ರಾಷ್ಟ್ರದ ಸ್ಮೃತಿಪಟಲದ ಮೂಲೆಗೆ

ನಮ್ಮ ಭಾರತೀಯರ ದುರ್ದೈವ ಎಂತಹದ್ದು ಅಂದರೆ ನಮ್ಮ ನೆಲದ ಸಂಸ್ಕೃತಿಯ ಆಧಾರದ ಮೇಲೆ ನಡೆದ ಅಧಿಕಾರ ಹಸ್ತಾಂತರವು ಇತಿಹಾಸದ ಪುಟಗಳಿಂದ ವ್ಯವಸ್ಥಿತವಾದ ಷಡ್ಯಂತರದ ಮೂಲಕ ಮರೆಮಾಡಲಾಯಿತು. ಸೋಕಾಲ್ಡ್ ಸೋಷಿಯಲಿಸ್ಟ್ ವಾದದ ಸುಳಿಗೆ ಸಿಲುಕಿದ್ದ ನೆಹರುವಿಂದ ಹಿಡಿದು ಸಂಪೂರ್ಣ ವ್ಯವಸ್ಥೆಯೇ ಈ ಮಹೋನ್ನತ ಘಳಿಗೆಯನ್ನು ಮರೆತೇ ಹೋದರು. ಆದರೆ ನಮ್ಮ ನೆಲದ ಪ್ರಾಚೀನ ಇತಿಹಾಸವು ಮಣ್ಣಿನ ಒಳಗಡೆ ಹುಡುಗಿಸಿದರೂ ಒಂದಲ್ಲ ಒಂದು ದಿನ ಮೇಲೆದ್ದು ಬಂದೆ ಬರುತ್ತದೆ.

ಮುಚ್ಚಿಡಲು ಪ್ರಯತ್ನಿಸಿದ ಸೆಂಗೋಲ್ ಚರಿತೆ ಜನಜನಿತವಾಗಿದ್ದೇಗೆ?

೧೯೭೮ ಆಗಸ್ಟ್ ೧೫ ರಂದು ಅದೇ ತಮಿಳುನಾಡಿನ ಕಾಂಚಿಪುರಂ ನ ಕಂಚಿ ಕಾಮಕೋಟಿ ಪೀಠದ ೬೮ನೇ ಪೀಠಾಧಿಪತಿಗಳಾದ ಮಹಾಪೆರಿಯವರಾದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಧಾರ್ಮಿಕ ಸಾಹಿತ್ಯದ ಆಸಕ್ತರಾದ ಡಾ.ಬಿ.ಆರ್.ಸುಬ್ರಮಣಿಯಂ ಥೇವಾರಂ ಅವರ ಬಳಿ ‘ಸೆಂಗೋಲ್’ ಕಥೆಯನ್ನು ಹಂಚಿಕೊಳ್ಳುತ್ತಾರೆ.ಇದನ್ನು ಥೇವಾರಂ ಡಾಕ್ಟರ್ ಅವರು ಮಹಾಪೆರಿಯವ ಸ್ವಾಮಿಗಳ ಕುರಿತು ಬರೆದ ಪುಸ್ತಕದಲ್ಲಿ ಈ ವಿಚಾರವನ್ನು ಸವಿಸ್ತಾರವಾಗಿ ದಾಖಲಿಸುತ್ತಾರೆ. ಮುಂದೆ ಇದು ಕಾಡ್ಗಿಚ್ಚಿನಂತೆ ಹಬ್ಬಿ ‘ಸೆಂಗೋಲ್’ ಇತಿಹಾಸ ನಮ್ಮೆಲ್ಲರ ಕಣ್ಣ ಮುಂದೆ ಬಂದಿತು. ‘ಸೆಂಗೋಲ್’ ಅನ್ನು ಹುಡುಕುತ್ತಾ ಹೋದರೆ ಅದು ನಶಿಸಿಹೋಗದೆ ಪ್ರಯಾಗ್ ರಾಜ್ ನ ಆನಂದಭವನ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿತ್ತು. ಜಗತ್ತುಮೆಚ್ಚಿದ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟು ನಮ್ಮ ಸಾಂಸ್ಕೃತಿಕ ದರೋಹರವನ್ನು ನೂತನ ಪಾರ್ಲಿಮೆಂಟ್ ಭವನದ ಒಳಗಡೆ ನ್ಯಾಯದ, ಸತ್ಯದ, ಧರ್ಮದ ಪ್ರತೀಕವಾದ ಸೆಂಗೋಲ್ ಅನ್ನು ಸ್ಥಾಪಿಸಲು ಹೊರಟಿದೆ. ಇಂತಹ ಸಾಂಸ್ಕೃತಿಕ ಪುನರುತ್ಥಾನದ (Cultural Revival) ಪ್ರಯತ್ನಕ್ಕೆ ನಮ್ಮದೊಂದು ನಮನ. ರಾಷ್ಟ್ರೀಯತೆಯೇ ನಮ್ಮೆಲ್ಲರ ಗುರಿಯಾಗಿದ್ದುಕೊಂಡು ಐತಿಹಾಸಿಕ ಘಳಿಗೆಯತ್ತ ಹರಿಸೋಣ ಗಮನ.

ಭಾರತ್ ಮಾತಾಕೀ ಜೈ.

Leave a Reply

Your email address will not be published.

This site uses Akismet to reduce spam. Learn how your comment data is processed.