ರಾಜ್ಯದಿಂದ ರಾಜ್ಯಕ್ಕೆ ಕೆಲಸದ ಸಲುವಾಗಿ ಜನರು ವಲಸೆ ಹೋಗುವುದು ಸಾಮಾನ್ಯ. ತಮ್ಮ ಹೊಟ್ಟೆ ಪಾಡು, ತಮ್ಮ ಕುಟುಂಬ, ಊರಲ್ಲಿರುವ ತಂದೆ ತಾಯಿಯರನ್ನು ಸಾಕುವುದು ಮತ್ತೆಲ್ಲೋ ಸಾಲ ತೀರಿಸಬೇಕು. ಕಷ್ಟವಾದರೇನಂತೆ ಊರು ಬಿಟ್ಟು ಕೆಲಸ ಹುಡುಕೋಣವೆಂದು, ತಾವಿದ್ದ ಊರಿನಲ್ಲಿ ಕೆಲಸವೂ ಸಿಗದಿದ್ದಾಗ ಧಿಡೀರನೆ ಊರು ಬಿಟ್ಟು ಹೊರಟುಬಿಡುತ್ತಾರೆ. ಹಾಗೆ ಕರ್ನಾಟಕಕ್ಕೂ ವಲಸೆ ಬಂದು ಜೀವನ ಕಟ್ಟಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಕೆಲವರು ಹವಾನಿಯಂತ್ರಿತ ಆಫೀಸ್ ಒಳಗೆ ಕುಳಿತು ಕೆಲಸ ಮಾಡಿ ದುಡ್ಡು ಎಣಿಸಿಕೊಳ್ಳುತ್ತಾರೆ; ಹಲವಾರು ಮಂದಿ ಕೆಲಸ ಅರಸಿ ಬರುವುದು ಸಣ್ಣ ಪುಟ್ಟ ಕೆಲಸಕ್ಕಾಗಿಯೇ. ಗಾರ್ಮೆಂಟ್ಸ್, ಗ್ರೆನೈಟ್, ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಎಂಬ ಹೆಸರಿನಲ್ಲಿ ಭಾರತದ ಮೂಲೆ ಮೂಲೆಗಳಿಂದ ಕರ್ನಾಟಕಕ್ಕೆ ಬರುತ್ತಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕೆಲಸ ಮಾಡುವವರು ಇಲ್ಲಿಯ ಭಾಷೆ ಕಲಿಯಲೇ ಬೇಕು ಎಂಬ ತೀವ್ರ ಹಠ ಇಟ್ಟುಕೊಂಡಿರುವುದಿಲ್ಲ. ವ್ಯವಹಾರಕ್ಕೆ ಇಂಗ್ಲಿಷ್, ಹಿಂದಿ ಬಂದರೆ ಸಾಕೆ ಸಾಕು. ಕನ್ನಡಿಗರು ಸ್ವಲ್ಪ ಉದಾರವಾದಿಗಳೇ ಅಲ್ಲವೇ? ಅಂಗಡಿ, ಮಾರುಕಟ್ಟೆಗೆ ಇವರು ಹೋದರೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿಯೇ ಸಂವಹನ. ಕನ್ನಡ ಕಲಿಯಲೇ ಬೇಕು ಎಂಬ ವಾಂಛೆ ವಲಸೆ ಬಂದವರಿಗೂ ಇರುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕೆಂಬ ಉತ್ಸಾಹವನ್ನು ನಾವೂ ತೋರುವುದಿಲ್ಲ.

ಶ್ರೀ ನರಸಿಂಹರಾಜು. ಊರು: ತುಮಕೂರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ಊರಿಗೆ ಹತ್ತಿರವಿರುವ ಡಾಬಸ್ಬೇಟೆ ಹಲವು ವರ್ಷಗಳಿಂದ ಬೇರೆ ಊರುಗಳಿಂದ – ವಿಶೇಷವಾಗಿ ಒಡಿಶಾ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಿಂದ ಕೆಲಸ ಅರಸಿ ಬರುವವರನ್ನು ನೋಡುತ್ತಲಿದ್ದರು. ಆದರೆ ಸುಮ್ಮನೆ ಕೂರಲಿಲ್ಲ. ಕಳೆದ ಐದು ವರ್ಷಗಳಿಂದ ಹೀಗೆ ತಮ್ಮ ಊರಿಗೆ ವಲಸೆ ಬರುವವರಿಗೆ ಕನ್ನಡ ಹೇಳಿಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಬಂದವರಿಗೆ ಕನ್ನಡ ಹೇಳಿಕೊಡಬೇಕು ಎಂಬ ಯೋಚನೆ ಬಂದದ್ದಾದರೂ ಹೇಗೆ ಎಂದು ಕೇಳಿದರೆ, ನರಸಿಂಹ ರಾಜು ಹೇಳುತ್ತಾರೆ “ಬೆಂಗಳೂರಿನಂತಹ ಊರುಗಳಲ್ಲಿ ಹಿಂದಿಯಲ್ಲೋ ಇಂಗ್ಲಿಷ್ ನಲ್ಲಿಯೂ ಮಾತನಾಡುವ ಕನ್ನಡಿಗರು ಸಿಗುತ್ತಾರೆ. ತುಮಕೂರಿನಲ್ಲಿ ಆ ಸಂಖ್ಯೆ ಕಡಿಮೆ. ಅಲ್ಲದೇ ಅನ್ಯ ರಾಜ್ಯಗಳಿಂದ ಬರುವವರು ನಮ್ಮ ಸೊಗಸಾದ ಭಾಷೆ ಕಲಿತರೆ ಸಂವಹನಕ್ಕೆ ಸುಲಭವಲ್ಲವೇ?” ಅಲ್ಲದೆ, ಪ್ರತಿಬಾರಿಯೂ ಹೊರಗಿನಿಂದ ಬಂದವರು ಎಂಬುದನ್ನೇ ಹೇಳಿ ಅವರಿಗೆ ನಮ್ಮ ಕೈಲಾದ ಸಹಾಯ ಮಾಡದಿದ್ದರೆ ಹೇಗೆ ಎಂದು ಯೋಚಿಸಿ ನರಸಿಂಹ ರಾಜು ಅವರು ಶನಿವಾರ ಭಾನುವಾರಗಳಂದು ಇವರಿದ್ದಲ್ಲಿಗೆ ಹೋಗಿಯೋ ಅಥವಾ ಅವರು ಇವರಲ್ಲಿಗೆ ಬಂದು ಭಾಷೆ ಕಲಿಯುವ ವ್ಯವಸ್ಥೆ ರೂಪಿಸಿದ್ದಾರೆ.

ಕೆಲವರಿಗೆ ವ್ಯವಹಾರಕ್ಕೆ ಬೇಕಾದ ಕನ್ನಡ ಕಲಿತರೆ ಸಾಕು. ಮತ್ತೆ ಕೆಲವರು ಜೀವನವನ್ನು ಇಲ್ಲಿಯೇ ಕಟ್ಟಿಕೊಳ್ಳಬೇಕು ಎಂದು ಪಾತ್ರೆ ಪಗಡಿ ಸಮೇತ ಈ ಊರಿಗೆ ಬಂದವರಿರುತ್ತಾರೆ. ಅವರ ಮಕ್ಕಳಿಗೂ ಕನ್ನಡ ಹೇಳಿಕೊಡುತ್ತಾರೆ ನರಸಿಂಹರಾಜು. ಹೀಗೆ ವಲಸೆ ಬಂದ ಕಾರ್ಮಿಕರ ಮಕ್ಕಳೂ ಕನ್ನಡವನ್ನು ಚೆನ್ನಾಗಿಯೇ ಕಲಿತಿದ್ದಾರೆ. ಕೇವಲ ಮಾತುಗಳಲ್ಲಿ ಎಲ್ಲರೂ ಕನ್ನಡವನ್ನಷ್ಟೇ ಮಾತನಾಡಬೇಕು ಎಂಬುದನ್ನು ಹೇಳುವವರ ಮಧ್ಯದಲ್ಲಿ, ಅನ್ಯ ಭಾಷಿಗರು ಭಾರತದವರೇ ಅಲ್ಲ ಎಂಬಂತೆ ವರ್ತಿಸುವವರ ಮಧ್ಯದಲ್ಲಿ, ಈ ತರಹದ ಸೇವೆ ಅಪೂರ್ವ ಹಾಗೂ ಅನುಪುಮ. ಇವರಿಂದ ಪ್ರೇರಿತರಾಗಿ ಇನ್ನಷ್ಟು ಜನರಿಗೆ ಕನ್ನಡ ಕಲಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾಗೊಣ. ನರಸಿಂಹರಾಜು ಅವರ ಕಾವ್ಯ ಸೇವೆಗೆ ಹಾಗೂ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಸೇವೆಯನ್ನು ಪರಿಗಣಿಸಿ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ಸೇವಾ ರತ್ನ’ ಪ್ರಶಸ್ತಿಯನ್ನು ನರಸಿಂಹರಾಜು ಅವರಿಗೆ ಘೋಷಿಸಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ ಅವರನ್ನು ಲಿ ಸನ್ಮಾನಿಸಲಾಗಿದೆ.

ನರಸಿಂಹರಾಜು ಅವರ ಕನ್ನಡ ಸೇವೆ ಮತ್ತಷ್ಟು ಮೈಲಿಗಲ್ಲು ದಾಟಲಿ ಎಂಬುದು ವಿಶ್ವ ಸಂವಾದ ಕೇಂದ್ರದ ಹಾರೈಕೆ.

Leave a Reply

Your email address will not be published.

This site uses Akismet to reduce spam. Learn how your comment data is processed.