ಮತ್ತೆ ನೆನಪಾಗುವ ಧೀಮಂತ ಛತ್ರಪತಿ ಶಿವಾಜಿ

ಜೂನ್  13, 2011 ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಹಿಂದು ಸಾಮ್ರಾಜ್ಯ ದಿನೋತ್ಸವ. ಛತ್ರಪತಿ ಶಿವಾಜಿ ಮಹಾರಾಜರು ಪಟ್ಟಕ್ಕೆ ಏರಿದ  ದಿನ. ಶಿವಾಜಿ  ಮಹಾರಾಜರ ಪರಾಕ್ರಮ, ದಿಟ್ಟ ಹೋರಾಟ ಹಾಗೂ ರಾಜತಾಂತ್ರಿಕ ಧೀಮಂತಿಕೆಯ ಒಂದು ಮೆಲುಕುನೋಟ ಇಲ್ಲಿದೆ.


ಸ್ವಾಮಿ ವಿವೇಕಾನಂದರು ಶಿವಾಜಿಯ ಕುರಿತು ಆಡಿದ ಮಾತುಗಳನ್ನು ನಾವೊಮ್ಮೆ ಗಮನಿಸಬೇಕು. ‘ಶಿವಾಜಿಯಂತಹ ಪರಾಕ್ರಮಿ, ಧರ್ಮಪುರುಷನ ಬಗ್ಗೆ ಹಗುರ ಮಾತುಗಳ ನ್ನಾಡುವವರಿಗೆ ನಾಚಿಕೆಯಾಗಬೇಕು. ನಮ್ಮ ಜನಾಂಗ, ಧರ್ಮ ಮತ್ತು ಸಂಸ್ಕೃತಿ ಎಲ್ಲವೂ ವಿನಾಶದ ತುದಿ ತಲುಪಿರುವಾಗ, ನಮ್ಮ ಧರ್ಮವನ್ನು ಸಮಾಜವನ್ನು ಉದ್ಧಾರ ಮಾಡಿ ದವನು ಆತ. ವಾಸ್ತವವಾಗಿ ಇಂತಹ ಯುಗ ಪುರುಷನ ಬರುವಿಗೆ ಜನ ಕಾದು ಕುಳಿತಿದ್ದರು. ಸಾಧು ಸಂತರು ತಪಸ್ಸು ನಡೆಸಿದ್ದರು. ಅಂತಹ ಕಾಲಘಟ್ಟದಲ್ಲಿ ಅವತರಿಸಿ, ಅಧರ್ಮವನ್ನು ಅಳಿಸಿ, ಧರ್ಮವನುಳಿಸಿದ ಯುಗಪುರುಷ ಆತ. ಪ್ರತ್ಯಕ್ಷ ಶಿವನ ಅವತಾರ. ನಮ್ಮೆಲ್ಲ ಗ್ರಂಥಗಳಲ್ಲಿ ವರ್ಣಿಸಲಾದ ಸರ್ವ ಸದ್ಗುಣಗಳ ಸಜೀವ ಆಕಾರ. ಅವನಷ್ಟು ಶ್ರೇಷ್ಠ ಶೂರ, ಸತ್ಪುರುಷ, ಭಗವದ್ಭಕ್ತ ರಾಜ ಇನ್ನೊಬ್ಬನುಂಟೇ? ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ ಅವನು. ಭಾರತದ ಭವಿತವ್ಯದ ಆಶಾದೀಪ ಅವನು!’

ಯೋಗಿ ಅರವಿಂದರ ಕಾವ್ಯ ಪ್ರತಿಭೆಗೂ ಶಿವಾಜಿ ಪ್ರೇಣೆಯಾದರು. ವಿದೇಶದಲ್ಲಿ ಸೈನ್ಯ ಕಟ್ಟಿ ಸ್ವಾತಂತ್ರ್ಯ ಹೋರಾಟ ನಡೆಸಿದ ಅಮರ ಸೇನಾನಿ ನೇತಾಜಿ ಸುಭಾಷರಿಗೆ ರೋಲ್ ಮಾಡೆಲ್ ಆದವರು. ಸುಭಾಷರು ವಿದೇಶಕ್ಕೆ ಹಾರುವ ಮುನ್ನ ತಮ್ಮ ಮಿತ್ರ ವಿಜಯರತ್ನ ಮುಜುಮ್‌ದಾರರೊಡನೆ ಹೇಳಿದ್ದು, ‘ಭಾರತದ ಸ್ವಾತಂತ್ರ್ಯ ಸಮರಕ್ಕೆ ಏಕಮಾತ್ರ ಆದರ್ಶವಾಗಿ ನಾವಿಂದು ಶಿವಾಜಿಯನ್ನು ಸ್ವೀಕರಿಸಬೇಕು’. ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವೀರ ಸಾವರ್ಕರ್ ಸಹ ‘ಅಭಿನವ ಭಾರತ’ ಸಂಘಟನೆಗೆ ಸೇರುವಾಗ ಶಿವಾಜಿ ಚಿತ್ರಪಟದ ಮುಂದೆಯೇ ಶಪಥ ನೀಡುತ್ತಿದ್ದರು. ರಾಷ್ಟ್ರ, ಧರ್ಮಗಳ ಪುನರುತ್ಥಾನಕ್ಕಾಗಿ ಸಾವಿರಾರು ಯುವಕರಿಗೆ ಪ್ರೇರಣೆ ನೀಡಿದ ಕೇಶವ ಬಲಿರಾಮ ಹೆಡಗೇವಾರರಿಗೂ ಶಿವಾಜಿಯೇ ಪ್ರೇರಕ ಶಕ್ತಿಯಾದವನು. ಮಾತ್ರವಲ್ಲ, ಶಿವಾಜಿ ಮಹಾರಾಜರು ಇಂದಿಗೂ ಪ್ರಸ್ತುತ ಮಾತ್ರವಲ್ಲ, ಅನಿವಾರ್ಯ ಪರ್ಯಾಯದ ದಾರಿದೀಪ.

ಜಾತಿಭಾವನೆಗಳ ಕೃತಕ ಗೋಡೆಯನ್ನು ಧರ್ಮಸಂರಕ್ಷಣೆಗಾಗಿ ನಾಶ ಮಾಡಿದ್ದು ಶಿವಾಜಿ. ಔರಂಗಜೇಬನ ಬಿಗಿ ರಕ್ಷಣಾ ಬಂಧನದಿಂದ ಪಾರಾಗಿ ಬರುವಾಗ ಎಳೆಯ ಮಗ ಸಾಂಬಾಜಿಯನ್ನು ಆಯಾಸ ಪಡಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಒಬ್ಬ ಕರ್ಮಠ ಬ್ರಾಹ್ಮಣನನ್ನು ಕೆಲವೇ ಕ್ಷಣಗಳಲ್ಲಿ ಮನವೊಲಿಸಿ, ತನ್ನ ವಂಶದ ಕುಡಿ ಸಾಂಬಾಜಿಯನ್ನು ಅವನಿಗೆ ಒಪ್ಪಿಸಿ ಬರುತ್ತಾನೆ ಶಿವಾಜಿ. ಒಬ್ಬ ಬ್ರಾಹ್ಮಣ ಮತ್ತು ಕ್ಷತ್ರಿಯ ಒಟ್ಟಿಗೇ ಊಟ ಮಾಡುವುದು ಜನ್ಮ ಜನ್ಮಾಂತರದಲ್ಲೂ ಸಾಧ್ಯವಿಲ್ಲ ಎಂದು ಮುಸ್ಲಿಂ ದೊರೆ ನಂಬಿದ್ದ. ಅಂತಹ ಕಾಲದಲ್ಲೂ ಸಹ ಮುಸ್ಲಿಮನ ನಂಬಿಕೆಯನ್ನು ಸುಳ್ಳು ಮಾಡುವಂತೆ ಆ ಬ್ರಾಹ್ಮಣ ಅದು ತನ್ನ ಮಗುವೆಂದು ವಾದಿಸಿ ಅದರೊಂದಿಗೆ ಊಟ ಮಾಡುತ್ತಾನೆ. ಜಾತಿಯ ಗೋಡೆಯನ್ನು ಒಡೆಯಲು ಶಿವಾಜಿಗೆ ಸಾಧ್ಯವಾದದ್ದು, ಜಾತಿಯನ್ನು ಮೀರಿ ನಿಂತದ್ದರಿಂದ. ಇಂದು ಹೆಜ್ಜೆ-ಹೆಜ್ಜೆಗೆ ಜಾತಿ, ರಾಜಕಾರಣದಲ್ಲಿ ಜಾತಿಯೇ ಜಾತಿ. ಜಾತಿಗಳನ್ನು ರಕ್ಷಾಕವಚವೆಂದು ಆಚರಿಸುವವರಿಂದ ಇಂದಿನ ವಿಷಮ ಪರಿಸ್ಥಿತಿಯಿಂದ ಸಮಾಜವನ್ನು ಮೇಲೆತ್ತಲಾರರು. ಹಿಂದುತ್ವ- ರಾಷ್ಟ್ರೀಯತೆಗಳು ನಮ್ಮ ಹೆಮ್ಮೆಯ ಗುರುತುಗಳು ಆಗಬೇಕು.

  • ಶಿವಾಜಿಯ ಹೋಲಿಸಲಾಗದ ಪರಾಕ್ರಮದ ಚಾತುರ್ಯದ ಮಿಂಚು ಕಂಡಿದ್ದು ಮುದಿ ವಯಸ್ಸಿನಲ್ಲಿ ಅಲ್ಲ. ಹದಿ ಹರೆಯದ ಚಿಗುರು ವಯಸ್ಸಿನಲ್ಲಿ. ಏರು ಯೌವನದ ಶಕ್ತಿ, ಸಮರ್ಥ ರಾಮದಾಸರಂತಹ ಪ್ರೌಢ ಚಿಂತನೆ-ಅನುಭವಗಳ ಶಕ್ತಿ ಶಿವಾಜಿಗೆ ಸಿಕ್ಕಿತ್ತು. ಇಂದು ೮೦ರ ಇಳಿ ವಯಸ್ಸಿನವರು ಅನೇಕರು ನಮ್ಮ ಮುಂಚೂಣಿ ನಾಯಕರು. ದೇಶದ ವಿಷಮ ಪರಿಸ್ಥಿತಿಗಳನ್ನು ಪಲ್ಲಟ ಮಾಡಲು ಅವರಿಂದ ಸಾಧ್ಯವೇ?
  • ಶತ್ರುವನ್ನು ಸರಿಯಾಗಿ ಗ್ರಹಿಸಿ, ತಕ್ಕ ಪಾಠ ಕಲಿಸಿದವನು ಶಿವಾಜಿ. ಯಾವುದೇ ಭ್ರಮೆಗಳಿಗೆ ಅವನು ಅವಕಾಶ ನೀಡಲಿಲ್ಲ. ಅವ್ಯವಹಾರಿಕ ವಾದ ಭ್ರಾಮಕ ಆದರ್ಶಗಳಿಗೆ, ಅತಿಯಾದ ಸದ್ಗುಣ ಆಚರಣೆ ಯಿಂದಾದ ವಿಕೃತಿಗಳಿಗೆ ಅವಕಾಶ ನೀಡಲಿಲ್ಲ. ಮೋಸಕ್ಕೆ ಮೋಸ. ಸುಳ್ಳಿಗೆ ಸುಳ್ಳು. ಕತ್ತಿಗೆ ಕತ್ತಿ. ಇದು ಅವನ ಸೂತ್ರವಾಗಿತ್ತು. ಆದರೆ ಇಂದಿನ ನಮ್ಮ ರಾಜಕಾರಣಿಗಳು ಪರಸ್ಪರ ಸ್ಪರ್ಧಾತ್ಮಕವಾಗಿ ಭ್ರಷ್ಟತೆಗೆ-ಭ್ರಷ್ಟತೆ, ಅಡ್ಡದಾರಿಗೆ-ಅಡ್ಡದಾರಿ ಎಂಬಂತೆ ತಮ್ಮದೇ ಆದ ತರ್ಕದ ಮೂಲಕ ಶಿವಾಜಿಯನ್ನು ತಮ್ಮೊಂದಿಗೆ ಸಮೀಕರಿಸಿ ಕೊಳ್ಳುತ್ತಾರೆ.
  • ಸಾಮ್ರಾಜ್ಯ ತನಗಾಗಿ ಅಲ್ಲ ಧರ್ಮಕ್ಕಾಗಿ ಎಂಬುದು ಶಿವಾಜಿಯ ಪ್ರತ್ಯಕ್ಷ ವ್ಯವಹಾರ. ೧೬ರ ವಯಸ್ಸಿನಿಂದ ಆರಂಭಿಸಿ, ಅಕ್ಷರಶಃ ರಕ್ತವನ್ನೇ ಬೆವರಾಗಿ ಹರಿಸಿ ಕೋಟೆಗಳನ್ನು ಗೆದ್ದು ಸಾಮ್ರಾಜ್ಯ ಸ್ಥಾಪಿಸಿ, ಈ ಸಾಮ್ರಾಜ್ಯ ತನ್ನದಲ್ಲ, ನಿಮ್ಮದು ಎಂದು ಸಮರ್ಥ ರಾಮದಾಸರ ಭಿಕ್ಷಾಜೋಳಿಗೆಗೆ ಹಾಕಿದವನು ಶಿವಾಜಿ. ಆದರೆ ಇಂದು ಎಲ್ಲಾ ಪದವಿ, ಹಣ, ಅಧಿಕಾರ ನನ್ನ ಕಾಲ ಬಳಿ ಬಿದ್ದಿರಬೇಕು ಎಂದು ಬಯಸು ವವನು ಯಾವ ವಿಶ್ವಾಸ ಗೌರವ ಗಳಿಸಿ ಯಾನು? ಏನು ಆದರ್ಶವಾದಾನು? ಯಾವ ಪರಿವರ್ತನೆ ತಂದಾನು?
  • ಪಾಕಿಸ್ತಾನ ಮೋಸ ಮಾಡುತ್ತಿದೆ. ಉಗ್ರರು ವಂಚನೆ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹಾಕುವುದು ಇನ್ನೆಷ್ಟು ದಿನ? ಯುದ್ಧನೀತಿ ಯೆಂದರೆ ಶತ್ರುವಿನ ನಾಶ ಅಷ್ಟೆ. ಅವನ ಬಗ್ಗೆ ವಿವರಿಸುವುದು ಅಲ್ಲ. ‘ಶತ್ರುವಿ ನಿಂದ ಮೋಸ ಹೋದೆ’ ಎನ್ನುವನನ್ನು ರಾಜಪಟ್ಟದಿಂದ ತಕ್ಷಣ ಕಿತ್ತು ಹಾಕು ಎನ್ನುತ್ತಾನೆ ಚಾಣಕ್ಯ. ಹಾಗೆಯೇ ಶಿವಾಜಿ ಅಫಜಲಖಾನನ ವಧೆ ಮಾಡುತ್ತಾನೆ. ಶಿವಾಜಿ ಹಾಗೆ ಮಾಡದೆ ಹೋಗಿದ್ದಲ್ಲಿ ಅಂದೇ ತಾನು ಸಮಾಧಿಯಾಗುತ್ತಿದ್ದ. ಮೋಸ-ವಂಚನೆಗಳ ಉಪಯೋಗ ಯಾವಾಗ ಎಲ್ಲಿ ಹೇಗೆ ಎಂಬ ಬಗ್ಗೆ ಶಿವಾಜಿಗೆ ಯಾವುದೇ ಗೊಂದಲವಿರಲಿಲ್ಲ. ಮಾತ್ರವಲ್ಲ, ಯಾರಿಗೇ ಆಗಲಿ ತನ್ನ ಬಗ್ಗೆ ಅಪನಂಬಿಕೆ ಬರುವ ಒಂದು ಕ್ಷಣಕ್ಕೂ ಶಿವಾಜಿ ಅವಕಾಶ ನೀಡಲಿಲ್ಲ.
  • ಶಿವಾಜಿ ಪ್ರಾಂತ-ಭಾಷೆಗಳ ಗಡಿ ಮೀರಿ ದವನು. ಎಲ್ಲವನ್ನೂ ಸಮಗ್ರವಾಗಿ ಕಂಡವನು. ರಜಪೂತರ ಅಪ್ರತಿಮ ವೀರ ಜಯಸಿಂಹನು ಅಕ್ಬರ್‌ನ ಪರವಾಗಿ ಯುದ್ಧಕ್ಕೆ ಬಂದಾಗ, ಶಿವಾಜಿ ಅವನಿಗೊಂದು ವಿಸ್ತಾರವಾದ ಪತ್ರ ಬರೆಯುತ್ತಾನೆ. ‘ನೀನೇನಾದರೂ, ಸ್ವತಂತ್ರವಾಗಿ ಒಬ್ಬ ಹಿಂದು ರಾಜನಾಗಿ ಬಂದಿದ್ದೇ ಆಗಿದ್ದರೆ, ನಾನೇ ನನ್ನ ಸರ್ವಸ್ವವನ್ನು ನಿನಗೆ ಸಮರ್ಪಿಸು ತ್ತಿದ್ದೆ. ಏಕೆಂದರೆ ಹಿಂದೂ ಶಕ್ತಿ ಈಗ ಬಲಗೊಳ್ಳಲೇ ಬೇಕು.’ ನಿಜಕ್ಕೂ ಅದೊಂದು ಪ್ರೇರಕ ಪತ್ರ. ಸಮಗ್ರ ಸಮಾಜದ ಹಿತದ ಮುಂದೆ ವ್ಯಕ್ತಿಗತ ಸ್ವಾರ್ಥವನ್ನು ಹೇಗೆ  ಸಮರ್ಪಿಸಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ ಶಿವಾಜಿ.
  • ಶಿವಾಜಿ ನಿರ್ಮಿಸಿದ ಹಿಂದವೀ ಸಾಮ್ರಾಜ್ಯದ ನಿಜವಾದ ಶಿಲ್ಪಿಗಳು ವನವಾಸಿಗಳಾದ ಮಾವಳಿ ಪೋರರು. ಅವರ ಶಿಲ್ಪಿ ಶಿವಾಜಿಯೆನಿಸಿದರೂ ಸಹ ಮೂಲ ಸಾಮರ್ಥ್ಯವಿದ್ದದ್ದು ಆ ಕಾಡಿನ ಗ್ರಾಮೀಣ ಹಿನ್ನೆಲೆಯ ಜನರಲ್ಲಿ. ಅದನ್ನು ಸರಿಯಾಗಿ ಗುರುತಿಸಿ ಪೋಷಿಸಿದ್ದು ಶಿವಾಜಿ. ಇಂದಿಗೂ ನಮ್ಮ ಗ್ರಾಮೀಣ ವನವಾಸಿ ಪ್ರತಿಭೆ ಶಕ್ತಿಗಳು ನಗರೀಕರಣದ ವೈಭವದ ನಡುವೆ ಮರೆಯಾಗುತ್ತಿವೆ. ನಮ್ಮ ದೇಶದ ಜ್ಞಾನ ಆಯೋಗದ ನಿರ್ಮಾತೃ ಸ್ಯಾಮ್ ಪಿಟ್ರೋಡಾ ಸಹ ಇಂತಹ ಒಂದು ಕುಗ್ರಾಮದ ಕುಸುಮ. ನಿರಂತರ ಮೂರು ಬಾರಿ ಬಾಕ್ಸಿಂಗ್‌ನಲ್ಲಿ ಜಾಗತಿಕ ಸ್ತರದಲ್ಲಿ ಚಾಂಪಿಯನ್ ಆದ ಮೇರಿ ಕೋಮ್ ಎರಡು ಮಕ್ಕಳ ವನವಾಸಿ ತಾಯಿ.
  • ಶಿವಾಜಿ ಶಸ್ತ್ರಾಸ್ತ್ರ ವಿಷಯದಲ್ಲಿ ಯಾವತ್ತೂ ಮುಂದೆ. ಅಂದಿನ ಕಾಲಕ್ಕೆ ಅತ್ಯಂತ ಆಧುನಿಕ ಎನಿಸಿದ ತೋಪುಗಳನ್ನು ಬಳಸಿದ್ದ. ಕುದುರೆಗಳನ್ನು ತರಿಸಿದ್ದ. ಕತ್ತಿ ಮುಂತಾದ ಆಯುಧಗಳ ವಿಷಯದಲ್ಲೂ ಆಧುನಿಕನೆನಿ ಸಿದ್ದ. ಆದರೆ ಇಂದು ಜಾಗತಿಕ ಸ್ತರದಲ್ಲಿ ಭಾರತದ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಕಾಲು ಕೆರೆದು ಜಗಳಕ್ಕೆ ಬಂದಾಗಲೂ ಚೈನಾಕ್ಕೆ ಒಂದು ಗಟ್ಟಿ ಸ್ವರದಲ್ಲಿ ಉತ್ತರಿಸುವ ತಾಕತ್ತು ಇನ್ನೂ ಬರಲಿಲ್ಲ ಎನ್ನುವುದು ನಮ್ಮ ದೇಶದ ದುರಂತ, ಶಿವಾಜಿಯಂತಹ ವೀರ ಪರಂಪರೆಗೆ ಮಾಡುತ್ತಿರುವ ಅವಮಾನ.

ಅಫಜಲಖಾನನು ಶಿವಾಜಿಯನ್ನು ಬೇಟೆಯಾಡಲು ತನ್ನ ದೊಡ್ಡ ಸೈನ್ಯದೊಂದಿಗೆ ಬಿಜಾಪುರದಿಂದ ಹೊರಟು ಬರುತ್ತಾನೆ. ಬರುವಾಗ ದಾರಿಯಲ್ಲಿ ಸಿಕ್ಕ ಸಿಕ್ಕ ಹಿಂದು ದೇವಾಲಯಗಳನ್ನು ನಾಶ ಮಾಡುತ್ತಾ ಹಿಂದುಗಳ ಮೇಲೆ ಆಕ್ರಮಣ ಮಾಡುತ್ತಾ ಶಿವಾಜಿಯನ್ನು ಕೆರಳಿಸಲು ಪ್ರಯತ್ನಿಸಿದ. ಕೊನೆಗೆ ಶಿವಾಜಿಯ ಆರಾಧ್ಯದೈವವಾದ ತುಳಜಾಭವಾನಿಯ ದೇವಾಲಯವನ್ನೂ ನಾಶ ಮಾಡಿದ. ಈಗಂತೂ ಕ್ರೋಧಗೊಂಡ ಶಿವಾಜಿ ತನ್ನ ದುರ್ಗಮ ಕೋಟೆಯಿಂದ ಕೆಳಗಿಳಿದು ಬಯಲಿಗೆ ಬಂದು ತನ್ನನ್ನು ಎದುರಿಸುತ್ತಾನೆ. ಆಗ ಅವನನ್ನು ಮುಗಿಸುವುದು ಸುಲಭ ಎಂಬುದು ಖಾನನ ಲೆಕ್ಕಾಚಾರವಾಗಿತ್ತು. ಆದರೆ, ಶಿವಾಜಿ ಖಾನನ ಲೆಕ್ಕಾಚಾರವನ್ನು ಚೆನ್ನಾಗಿಯೇ ಊಹಿಸಿದ. ನಾಶವಾದ ದೇವಾಲಯವನ್ನು ಪುನಃ ನಿರ್ಮಿಸಬಹುದು. ಆದರೆ, ತಾನು ಈಗ ಖಾನನನ್ನು ಬಯಲಿನಲ್ಲಿ ಎದುರಿಸಿದರೆ, ತನಗೆ ಸೋಲಾಗಿ ತನ್ನ ಹಿಂದೂ ಸಾಮ್ರಾಜ್ಯ ನಿರ್ಮಾಣದ ಕನಸು ನನಸಾಗದು ಎಂದು ಚಿಂತಿಸಿದ ಆತ ಕೋಟೆಯಿಂದ ಕೆಳಗಿಳಿಯಲೇ ಇಲ್ಲ! ತನ್ನ ಕುಲದೇವತೆಯ ದೇವಾಲಯ ನಾಶವಾದರೂ ಭಾವಾವೇಶಕ್ಕೊಳಗಾಗಿ ದುಡುಕದೇ ಚಾಣಾಕ್ಷ ನಿರ್ಧಾರ ಕೈಗೊಂಡ ಆತ. ಕೊನೆಗೂ ತನ್ನ ಲೆಕ್ಕಾಚಾರದಂತೆಯೇ ಖಾನನನ್ನು ತನ್ನ ಕೋಟೆಯೊಳಗೇ ಬರುವಂತೆ ಮಾಡಿ, ಅವನನ್ನು ಕೊಂದ. ತುಳಜಾಭವಾನಿ ದೇವಾಲಯವನ್ನು ಪುನಃ ನಿರ್ಮಿಸಿದ! ಅಂದು ಶಿವಾಜಿ ದುಡುಕಿದ್ದರೆ ಅವನ ಕತೆ ಅಲ್ಲಿಗೇ ಮುಗಿದು, ಮುಸ್ಲಿಂ ದೊರೆಗಳ ದುರಾಚಾರ ಮುಂದು ವರಿದು ಇಂದಿನ ಭಾರತದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿರುತ್ತಿದ್ದರೇನೋ! ಶಿವಾಜಿಯ ದೂರದೃಷ್ಟಿಯ ಫಲವಾಗಿ ಮುಸ್ಲಿಂ ದೊರೆಗಳಿಗೆ ಸಡ್ಡು ಹೊಡೆದ ಹಿಂದು ಸಾಮ್ರಾಜ್ಯವೊಂದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಹಿಂದುಗಳು ಸ್ವಾಭಿಮಾನದಿಂದ ಬದುಕುವಂತಾಯಿತು.

ಹೀಗೆ ಇಂದಿನ ಅನೇಕ ಸಮಸ್ಯೆ ಸವಾಲುಗಳಿಗೆ ಶಿವಾಜಿ ಮಹಾರಾಜರ ಜೀವನದಲ್ಲಿ ಅದ್ಭುತ ಪರಿಹಾರದ ಸುಳಿಗಳು ಸಿಗುತ್ತವೆ. ಒಂದು ಧೀರೋದಾತ್ತ ಜೀವನದ ರೋಮಾಂಚಕಾರೀ ಘಟನೆಗಳನ್ನು ತಿಳಿದು ಕೊಳ್ಳೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.