ಭಾವಪೂರ್ಣ ಶ್ರದ್ಧಾಂಜಲಿ
ಹಿರಿಯ ಯಕ್ಷಗಾನ ಕಲಾವಿದರು, ತಾಳಮದ್ದಳೆಯ ಪ್ರಖ್ಯಾತ ಅರ್ಥಧಾರಿಗಳು, ಸಂಸ್ಕಾರ ಭಾರತಿಯ ಮಾಜಿ ರಾಜ್ಯಾಧ್ಯಕ್ಷರು ಮತ್ತು ಸಂರಕ್ಷಕರು ಹಾಗೂ ಮಾಜಿ ಶಾಸಕರಾಗಿದ್ದ ಶ್ರೀ ಕುಂಬ್ಳೆ ಸುಂದರ ರಾವ್ (88ವರ್ಷಗಳು) ಅವರ ನಿಧನವಾರ್ತೆ ಅತ್ಯಂತ ಶೋಕವನ್ನು ತಂದಿದೆ. ನಾಡಿನ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ, ತಮ್ಮ ಮಾತಿನ ಓಘ, ಪ್ರತ್ಯುತ್ಪನ್ನಮತಿತ್ವ ಮತ್ತು ಪ್ರಾಸಬದ್ಧ ವಾಙ್ಮಯತೆಯಿಂದ ಜನಮಾನಸದಲ್ಲಿ ನೆಲೆಸಿದವರು. ಕಲಾಮಾತೆಗೆ ತನ್ನನ್ನು ಸಮರ್ಪಿಸಿಕೊಂಡ ಓರ್ವ ಕಲಾಯೋಗಿ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರದ್ದು ಸ್ಮರಣೀಯ ಕೊಡುಗೆ. ಸಂಸ್ಕಾರ ಭಾರತಿಯ ಚಟುವಟಿಕೆಗಳಿಗೆ ಶಕ್ತಿತುಂಬಿ ಮಾರ್ಗದರ್ಶನ ಮಾಡಿದ ಕುಶಲ ಸಂಘಟಕ. ತಮ್ಮ ನೇರ ನಡೆ-ನುಡಿಯ ಧೀಮಂತ ವ್ಯಕ್ತಿತ್ವದಿಂದ, ಸರಳತೆ ಹಾಗೂ ಸಜ್ಜನಿಕೆಯಿಂದ ಎಲ್ಲರ ಮನಗೆದ್ದವರು.
ಶ್ರೀ ಕುಂಬ್ಳೆ ಸುಂದರ ರಾವ್ ಅವರ ನಿಧನದಿಂದ ನಾಡಿನ ಕಲಾಲೋಕದ ಅಮೂಲ್ಯ ರತ್ನವೊಂದು ಕಣ್ಮರೆಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳಿಗೆ, ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಭಗವಂತನಲ್ಲಿ ಸವಿನಯ ಪ್ರಾರ್ಥನೆ.
ಶ್ರೀ ಕುಂಬ್ಳೆ ಸುಂದರ ರಾವ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತಿದ್ದೇವೆ.
ಶ್ರೀ ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹರು
ಶ್ರೀ ವಿ. ನಾಗರಾಜ್,
ಕ್ಷೇತ್ರೀಯ ಸಂಘಚಾಲಕರು,
ರಾಷ್ಟ್ರೀಯ ಸ್ವಯಂಸೇವಕ ಸಂಘ.
ಬೆಂಗಳೂರು.
ನವೆಂಬರ್ 30, 2022.