HIV ಅಥವಾ ಏಡ್ಸ್. ಅನೇಕರು ಇದರ ಕುರಿತು ಬಿಚ್ಚು ಮನಸ್ಸಿನಿಂದ ಮಾತನಾಡಲು ಹಿಂಜರಿಯುತ್ತಾರೆ.ಅದರಲ್ಲೂ ಎದುರಿನ ವ್ಯಕ್ತಿ HIV  ಸೋಂಕಿತ ಎಂದು ತಿಳಿದ ತಕ್ಷಣದಲ್ಲೇ ಅವರಿಂದ ದೂರ ಉಳಿಯುವ, ವಿಚಿತ್ರವಾಗಿ ನೋಡುವ, ಮೂಗು ಮುರಿಯುವ ರೀತಿಯ ವರ್ತನೆಗಳು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ಅಪವಾದಗಳೂ ಇದೆ.


ಏಡ್ಸ್ ಅನ್ನುವಂಥದ್ದು ಮನುಷ್ಯನ ದೇಹದೊಳಗೆ ಇರುವ ಇಮ್ಯೂನಿಟಿಯನ್ನು ಕಡಿಮೆಗೊಳಿಸುವ ವೈರಸ್ಸಿನಿಂದ ಸೋಂಕಿತವಾಗುವಂತಹ ಖಾಯಿಲೆ. ಹ್ಯೂಮನ್ ಇಮ್ಯೂನೋ ಡಿಫೀಶಿಯನ್ಸಿ (HIV) ಎಂಬುದು ಆ ವೈರಸ್. ಒಬ್ಬ ವ್ಯಕ್ತಿ ಇದರಿಂದ ಸೋಂಕಿತನಾದರೆ ತನ್ನ ದೇಹದಲ್ಲಿ ಖಾಯಿಲೆ ಮತ್ತು ರೋಗಗಳನ್ನು ತಡೆಯುವ ಪ್ರತಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇದಕ್ಕೆ ಯಾವುದೇ ಔಷಧಗಳಿಲ್ಲ, ಆದರೆ ಈ ಸೋಂಕಿನ ಪ್ರಭಾವವನ್ನು ಕೆಲವು ಔಷಧಗಳ ಮೂಲಕ ಕಡಿಮೆಗೊಳಿಸಲು ಸಾಧ್ಯವಿದೆ. ಈ ವೈರಸ್ಸು ಎಂಟು ಹತ್ತು ವರ್ಷಗಳಲ್ಲಿ ಏಡ್ಸ್ ಆಗಿ ಪರಿವರ್ತನೆಗೊಳ್ಳುತ್ತದೆ.

ಹೇಗೆ ಹರಡುತ್ತದೆ?
– ರಕ್ತದ ಮೂಲಕ
ಸ್ವಚ್ಛ ಮಾಡದ ಸೂಜಿಗಳು ಅಥವಾ ರಕ್ತವನ್ನು ಟ್ರಾನ್ಸ್‌ಪ್ಲಾಂಟ್ ಮಾಡುವ ಸಂದರ್ಭದಲ್ಲಿ ಪರೀಕ್ಷಿಸದೆ ಇದ್ದಲ್ಲಿ ಹೆಚ್ಐವಿ ಹರಡಬಹುದು

-ಲೈಂಗಿಕ ಕ್ರಿಯೆಯ ಮೂಲಕ
STI (sexually transmitted infection)ಗಳಾದ ಸಿಫೈಲ್ಸ್,ಹೆರ್ಪಿಸ್,ಗೊನೋರ್ಹಿಯಾ ಮತ್ತಿತರ ಬ್ಯಾಕ್ಟೀರಿಯಲ್ ವಜೈನೋಸಿಸ್‌ನಿಂದ ಬಳಲುತ್ತಿರುವವರೊಂದಿಗೆ ಅಸುರಕ್ಷಿತವಾದ ಲೈಂಗಿಕ ಕ್ರಿಯೆಯ ಮೂಲಕ ಹೆಚ್‌ಐವಿ ವೈರಸ್ ಹರಡಬಹುದು.

-ಗರ್ಭಾವಸ್ಥೆಯಲ್ಲಿ
ಗರ್ಭಾವಸ್ಥೆಯಲ್ಲಿಯೇ ತಾಯಿಂದ ಮಗುವಿಗೆ ಹರಡುವ ಸಾಧ್ಯತೆಗಳೂ ಇದ್ದು, ಆನಂತರದಲ್ಲಿ ಹೆರಿಗೆಯ ಸಮಯದಲ್ಲೂ ಸೋಂಕು ತಗುಲುವ ಸಾಧ್ಯತೆಯಿರುತ್ತದೆ.

ಈ ರೀತಿಯಲ್ಲಿ ಹೆಚ್‌ಐವಿ ಹರಡಬಹುದು.
ಇನ್ನು ಈ ರೀತಿ ಹರಡಿದ ವೈರಸ್ ನಾಲ್ಕು ವಾರಗಳ ನಂತರ ದೇಹವನ್ನು ಕೃಷಗೊಳಿಸುತ್ತದೆ. ಜ್ವರದಂತಹ ಲಕ್ಷಣಗಳು 2-4ವಾರದ ಹೊತ್ತಿಗೆ ಕಾಣಿಸಿಕೊಳ್ಳುತ್ತದೆ. ದೇಹದ ಪ್ರತಿರೋಧಕ ಶಕ್ತಿಯು ಕ್ಷೀಣವಾಗುವುದರಿಂದ ದೇಹಕ್ಕೆ ಸುಸ್ತು, ಆಯಾಸ, ದೇಹ ಊತ, ಜ್ವರ ಕಾಣಿಸಿಕೊಳ್ಳುತ್ತದೆ.

ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕುರಿತಾಗಿ ಉಚಿತ ಪರೀಕ್ಷೆಗಳನ್ನು ಸಹ ಮಾಡಲಾಗುತ್ತದೆ. ಅಲ್ಲದೆ ಅದನ್ನು ಗೌಪ್ಯವಾಗಿಯೂ ಇಡಲಾಗುತ್ತದೆ. ಇದಲ್ಲದೆ ಈಗ ಸ್ವಯಂ ಪರೀಕ್ಷೆ ಮಾಡಿಕೊಳ್ಳುವ ಕಿಟ್‌ಗಳೂ ಲಭ್ಯವಿದ್ದು ಅಗತ್ಯವಾದ ವೈದ್ಯಕೀಯ ಸಹಕಾರದೊಂದಿಗೆ ಅದನ್ನು ಉಪಯೋಗಿಸಬಹುದಾಗಿದೆ.

ಅನೇಕ ಬಾರಿ ಜನರಿಗೆ ಹೆಚ್‌ಐವಿ/ ಏಡ್ಸ್ ಕುರಿತಾಗಿ ಬಹಳ ತಪ್ಪು ತಿಳುವಳಿಕೆಗಳೂ ಇದೆ. ಅದರಲ್ಲೂ ಅನಕ್ಷರಸ್ಥರಿಗಿಂತ ಹೆಚ್ಚಾಗಿ ಅಕ್ಷರಸ್ಥರೇ ಈ ರೀತಿಯ ತಪ್ಪು ಕಲ್ಪನೆಗಳಿಗೆ ಬಲಿಯಾಗುತ್ತಿದ್ದಾರೆ.

-ಹೆಚ್ಐವಿ ಸೊಳ್ಳೆ ಅಥವಾ ಇನ್ನಿತರ ಕ್ರಿಮಿ ಕೀಟಗಳಿಂದ ಹರಡುವುದಿಲ್ಲ. ಸೊಳ್ಳೆಗಳು ಒಬ್ಬರಿಂದ ರಕ್ತ ಹೀರಿದ ನಂತರ ಮತ್ತೊಬ್ಬರ ದೇಹದೊಳಗೆ ರಕ್ತವನ್ನು ಇನ್‌ಜೆಕ್ಟ್ ಮಾಡುವುದಿಲ್ಲ. ಹಾಗಾಗಿ ಸೊಳ್ಳೆ, ನೊಣ ಇತ್ಯಾದಿಗಳಿಂದ ಹೆಚ್‌ಐವಿ ಹರಡುವುದಿಲ್ಲ.
-ಊಟ, ಪಾತ್ರೆ, ಬಟ್ಟೆಗಳನ್ನು ಒಟ್ಟಿಗೆ ಉಪಯೋಗಿಸುವುದರಿಂದ ಹೆಚ್‌ಐವಿ ಬರುವುದಿಲ್ಲ.
-ಹೆಚ್‌ಐವಿ ಸೋಂಕಿತನನ್ನು ಮುಟ್ಟುವುದರಿಂದ, ಹಗ್ ಮಾಡುವುದರಿಂದ,ಉಸಿರಾಡುವ ಗಾಳಿಯಿಂದ, ಒಂದೇ ಶೌಚಾಲಯ ಬಳಸುವುದರಿಂದ, ಕೆಮ್ಮು, ಕಫ, ಸೀನುವುದರಿಂದಲೂ ಹೆಚ್‌ಐವಿ ಹರಡುವುದಿಲ್ಲ.
-ಹೆಚ್‌ಐವಿ ಪೀಡಿತರೊಂದಿಗಿನ ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ರೋಗ ಹರಡುವುದಿಲ್ಲ.
-ಪ್ರತಿ ಹೆಚ್‌ಐವಿ ಸೋಂಕಿತ ಗರ್ಭಧಾರಣೆಯಿಂದ ಮಗುವಿಗೆ ಹೆಚ್‌ಐವಿ ಬರುವುದಿಲ್ಲ.ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಕಾರಣದಿಂದ ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುತ್ತದೆ.
– ಏಡ್ಸ್ ಎನ್ನುವುದು ಮರಣದಂಡನೆಯಲ್ಲ. ಅದು ಈ ಹಿಂದೆ ಮಾರಣಾಂತಿಕ ಖಾಯಿಲೆಯಾಗಿ ಪರಿಗಣಿಸಲ್ಪಟ್ಟಿದ್ದರೂ ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರವು ಏಡ್ಸ್ ರೋಗಿಗಳ ಬದುಕನ್ನು ಹಸನುಗೊಳಿಸಿವೆ. ಅವರಿಗೂ ಕೂಡ ಸಾಮಾನ್ಯ ಜನರಷ್ಟೇ ಲೈಫ್ ಎಕ್ಸ‌ಪೆಕ್ಟೆನ್ಸಿ ಈಗ ಸಾಧ್ಯ.

ಸೋಂಕಿತರ ಜೊತೆ ಹೀಗಿರಲಿ ನಮ್ಮ ನಡವಳಿಕೆ:

– ಹೆಚ್‌ಐವಿ ಸೊಂಕಿತರ ಜೊತೆ ಸಹನೆಯಿಂದ, ಸಹಜವಾಗಿಯೇ ವರ್ತಿಸಿ. ಹೊಸದಾಗಿ ಸೋಂಕು ತಗುಲಿದ್ದರೆ ಅವರನ್ನು ಭಯ ಬೀಳಿಸದೆ ಮೂದಲಿಸದೆ ಮುಕ್ತವಾಗಿ ಮಾತನಾಡಲು ಅವಕಾಶ ಕಲ್ಪಿಸಿ.
– ಹೆಚ್‌ಐವಿಯ ಕುರಿತು ತಿಳಿದುಕೊಳ್ಳಿ, ಅದರ ಬಗೆಗೆ ಇರುವ ಎಲ್ಲ ತಪ್ಪು ತಿಳುವಳಿಕೆಗಳಿಗೆ ತಿಲಾಂಜಲಿ ಹಾಡಿ, ಸರಿಯಾದ ಮಾಹಿತಿಯ ಮೂಲಕ ಅದನ್ನು ಎದುರಿಸುವಂತೆ ಸೋಂಕಿತರಿಗೆ ಧೈರ್ಯ ಹೇಳಿ.
– ಹೆಚ್ಐವಿಯ ಚಿಕಿತ್ಸೆಗಾಗಿ ಸೋಂಕಿತರಿಗೆ ಬೆಂಬಲಿಸಿ.ಸರಿಯಾದ ವೈದ್ಯಕೀಯ ಸಹಾಯ, ಅಗತ್ಯವಾದ ನೆರವು ತೆಗೆದುಕೊಳ್ಳುವಲ್ಲಿ ನೆರವು ನೀಡಿ.
– ನಿಮ್ಮ ನಡವಳಿಕೆ ಸಕಾರಾತ್ಮಕವಾಗಿರಲಿ, ಆತ್ಮವಿಶ್ವಾಸ ತುಂಬುವ ರೀತಿಯಿರಲಿ.
– ಯಾವುದೇ ಕಲ್ಪನೆಗಳಿಗೆ ಒಳಗಾಗಿ ಅವರನ್ನು ದೂಷಿಸಬೇಡಿ, ಅಥವಾ ಅವರನ್ನು ಅಪರಾಧೀ ಮನೋಭಾವಕ್ಕೆ ಗುರಿಯಾಗಿಸಬೇಡಿ.

ಭಾರತದಲ್ಲಿ ಪ್ರತಿ ವರ್ಷ ಒಂದು ಮಿಲಿಯನ್ ಕೇಸುಗಳು ಪತ್ತೆಯಾಗುತ್ತಿದ್ದು ಈ ಕುರಿತು ಜಾಗೃತಿ ಮೂಡಬೇಕಾದ ಅಗತ್ಯವಿದೆ.2000ನಿಂದ ಈಚೆಗೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 2019ರ ವರದಿಯ ಪ್ರಕಾರ ಪುರುಷರಲ್ಲಿ 0.24%ನಷ್ಟು ಹಾಗು ಮಹಿಳೆಯರಲ್ಲಿ 0.20% ನಷ್ಟು ಮಾತ್ರವೆ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಭಾರತದಲ್ಲಿ 69,220 ಜನರಲ್ಲಿ 2019ರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 190 ಮಂದಿಗೆ ಪ್ರತಿ ದಿನ ಹೊಸದಾಗಿ ಸೋಂಕು ತಗಲುತ್ತಿದೆ‌.

ಈ ಕುರಿತಾಗಿ ಮುಕ್ತವಾದ ನಿಲುವಿನ ಸಮಾಜವನ್ನು, ತೆರೆದ ಮನಸ್ಸಿನಿಂದ ಸೋಂಕಿತರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ತರುವ, ಅವರನ್ನು ಸಮಾನವಾಗಿ ಕಾಣುವ, ಸಹಾನುಭೂತಿಯಿಂದ ವರ್ತಿಸುವ ನಿಟ್ಟಿನಲ್ಲಿ ಅಗತ್ಯವಾದ ಜಾಗೃತಿ ಹಾಗು ನಡೆಯ ಅವಶ್ಯಕತೆ ಇದೆ.


Leave a Reply

Your email address will not be published.

This site uses Akismet to reduce spam. Learn how your comment data is processed.