ಬೆಂಗಳೂರು: ತನ್ನ ವ್ಯವಹಾರ, ಕುಶಲತೆ ಮತ್ತು ವಿನಮ್ರತೆಯ ಮೂಲಕ ಸಮಾಜದ ಒಳ್ಳೆಯ ವ್ಯಕ್ತಿಗಳನ್ನು ಸಮಾಜದ ಕಾರ್ಯಕ್ಕೆ ಹೇಗೆ ಜೋಡಿಸಬೇಕು ಎನ್ನುವುದನ್ನು ತಿಳಿದವನು ಯೋಜಕ ಅಥವಾ ಸಂಘಟಕ. ಅಂತಹ ಒಬ್ಬ ಅತ್ಯುತ್ತಮ ಸಂಘಟಕ ಮದನ್ ದಾಸ್ ದೇವಿ ಅವರು. ದೇಶವ್ಯಾಪಿಯಾಗಿ ಸಹಸ್ರಾರು ಮಂದಿಯನ್ನು ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಡಾ.ಕೃಷ್ಣಗೋಪಾಲ್ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿದ್ದ ಅಗಲಿದ ಜ್ಯೇಷ್ಠ ಪ್ರಚಾರಕ ಮದನ್ ದಾಸ್ ದೇವಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಯಾವುದೇ ಸಂಘಟನೆಯಲ್ಲಿ ಸಿದ್ಧಾಂತವೇ ಸರ್ವಸ್ವವಾಗಿರುವುದಿಲ್ಲ. ಸಿದ್ಧಾಂತವನ್ನು ಅರಿತ ಸಂಘಟನೆಯ ಕಾರ್ಯಕರ್ತರ ಸ್ವಭಾವ, ಆಚರಣೆ ಮತ್ತು ಇನ್ನೋರ್ವ ಕಾರ್ಯಕರ್ತನ ಜೊತೆಗಿನ ವ್ಯವಹಾರ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ. ಸಂಘ ಸಂಸ್ಥಾಪಕ ಡಾ.ಹೆಡಗೇವಾರ್ ಸ್ವತಃ ಕಾರ್ಯಕರ್ತರ ಸಮಸ್ಯೆಗಳ ನಿವಾರಣೆಗಾಗಿ ವೈಯಕ್ತಿಕವಾಗಿ ಗಮನಹರಿಸುತ್ತಿದ್ದರು. ಈ ಸಂಗತಿಯ ಕುರಿತು ಗಮನಕೊಡಬೇಕಾದ ಅವಶ‍್ಯಕತೆಯನ್ನೂ ತಿಳಿಸಿದ್ದರು. ಮದನ್ ದಾಸ್ ಜಿ ಕಾರ್ಯಕರ್ತರೊಂದಿಗೆ ಪ್ರೇಮದಿಂದ ವ್ಯವಹರಿಸುತ್ತಿದ್ದ ಒಬ್ಬ ಮಹತ್ವಪೂರ್ಣ ಕಾರ್ಯಕರ್ತರಾಗಿದ್ದರು ಎಂದು ನುಡಿದರು.
ಮದನ್ ದಾಸ್ ಜಿ ಸಮಸ್ಯೆಗಳು ಎದುರಾದಾಗ ಅದರ ಪರಿಹಾರವನ್ನು ಹುಡುಕಿ, ಅನುಷ್ಠಾನದಲ್ಲಿ ಪ್ರಯತ್ನಶೀಲರಾಗುವ ಕಾರ್ಯಕರ್ತರು. ಈಶಾನ್ಯ ಭಾರತದಲ್ಲಿ ಹಲವು ಸಮಸ್ಯೆಗಳು ಎದುರಾದಾಗ ಅಲ್ಲಿಗೆ ಬೇರೆ ರಾಜ್ಯಗಳಿಂದ ಪೂರ್ಣಾವಧಿ ಕಾರ್ಯಕರ್ತರನ್ನು ಕಳುಹಿಸುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸದ ದೃಷ್ಟಿಯಿಂದ ಉಳಿದ ರಾಜ್ಯಗಳಲ್ಲಿನ ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಅಂತಹ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ರಾಷ್ಟ್ರದ ಏಕತ್ವದ ಪ್ರತಿನಿಧಿಗಳಾಗಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತವರಾದರು. ಅವರ ಮನಸ್ಸಿನಲ್ಲಿ ಪ್ರತ್ಯೇಕತೆಯ ಮಾತು ಮೂಡುವುದೇ ಇಲ್ಲ. ಇಂತಹ ಯೋಜನೆಗಳನ್ನು ಸೃಷ್ಟಿಸಿ, ಅವಗಳಿಗೆ ಪರಿಪೂರ್ಣವಾದಂತಹ ಸ್ವರೂಪವನ್ನು ಕೊಟ್ಟು ಅನುಷ್ಠಾನಗೊಳಿಸಿದವರು ಮದನ್ ದಾಸ್ ಜಿ. ಇಂತಹ ಯೋಜನೆಗಳ ಕುರಿತು ಕೇಳುವುದಕ್ಕೆ ಸುಲಭವೇ ಆಗಿದ್ದರೂ, ಅದರ ಅನುಷ್ಠಾನ ಬಹಳ ಕಠಿಣವಾದಂತಹ ಸಂಗತಿ ಎಂದು ಅಭಿಪ್ರಾಯಪಟ್ಟರು.
ಮದನ್ ದಾಸ್ ಜಿ ಕಾರ್ಯಕರ್ತರ ಸಮಸ್ಯೆಗಳನ್ನು ವೈಯಕ್ತಿಕವಾಗಿ ಹಲವು ಗಂಟೆಗಳ ಕಾಲ ಆಲಿಸಿ, ನಂತರ ಅವರ ಪ್ರೀತಿಯ ಮಾತುಗಳ ಮೂಲಕ ಧೈರ್ಯವನ್ನು ತುಂಬುತ್ತಿದ್ದರು. ಕಾರ್ಯಕರ್ತರ ಮಾತುಗಳನ್ನು ಆಲಿಸುವ ಅವರ ತಾಳ್ಮೆಯು ಕಾರ್ಯಕರ್ತರಲ್ಲಿ ನಮ್ಮ ಮಾತುಗಳನ್ನೂ ಆಲಿಸುವವರಿದ್ದಾರೆ ಎನ್ನುವ ಧೈರ್ಯವನ್ನೂ, ಸಮಾಜಕ್ಕಾಗಿ ಕೆಲಸ ಮಾಡಲು ಉತ್ಸಾಹವನ್ನೂ ಹೆಚ್ಚಿಸುತ್ತಿತ್ತು. ಬಡವರ ದುಃಖ ಮತ್ತು ಸಮಸ್ಯೆಗಳನ್ನು ಅರ್ಥೈಸಿಕೊಂಡು ಸ್ಥಾನೀಯ ಸ್ಥಾನಗಳಲ್ಲಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮದನ್ ದಾಸ್ ಜಿ ಮಾಡಿದರು. ಭಾರತೀಯ ಮಜ್ದೂರ್ ಸಂಘದ ವತಿಯಿಂದಲೂ ಅಸಂಘಟಿತ ಕಾರ್ಮಿಕರಿಗೆ ಉತ್ತಮ ಸವಲತ್ತುಗಳು ಸಿಗುವಂತಹ ವ್ಯವಸ್ಥೆ ಮಾಡಿದರು. ಅವರು ಈ ಕಾರ್ಯದಲ್ಲಿ ನಿರಂತರತೆಯನ್ನು ಹೊಂದಿದ್ದರು ಮತ್ತು ನಿರಂತರತೆಯನ್ನು ಹೊಂದಿರುವವರನ್ನು ನಿರ್ಮಿಸಿದರು ಎಂದರು.
ಡಾಕ್ಟರ್ ಜಿ ಯಾವುದನ್ನು ಹೀಗೆ ಮಾಡಿ ಎಂದು ಹೇಳುತ್ತಿರಲಿಲ್ಲ ಬದಲಾಗಿ ಅವರು ಅದನ್ನು ಸ್ವತಃ ತಾವು ಪಾಲಿಸುತ್ತಿದ್ದರು. ಹಿರಿಯರು ಪಾಲಿಸುತ್ತಿದ್ದನ್ನು ವೀಕ್ಷಿಸಿ ಕಿರಿಯ ಕಾರ್ಯಕರ್ತರು ಬೆಳೆಯುತ್ತಾರೆ. ಇದು ನಮ್ಮ ಸಂಘಟನೆಯ ಬಹುದೊಡ್ಡ ವಿಶೇಷತೆ. ಪ್ರತಿಯೊಬ್ಬರೂ ತಾವಿರುವ ಸ್ಥಳದಿಂದಲೇ ತಮ್ಮ ದಿನನಿತ್ಯದ ಕಾಯಕದ ಜೊತೆಗೆ ರಾಷ್ಟ್ರಕ್ಕಾಗಿರುವ ನಮ್ಮ ಸಂಕಲ್ಪವನ್ನು ನೆರವೇರಿಸಲು ಶ್ರಮವಹಿಸುತ್ತಿದ್ದಾರೆ. ರಾಷ್ಟ್ರಕ್ಕಾಗಿ ಸಮಯ ನೀಡಬೇಕೆನ್ನುವ ಅವರ ಭಾವನೆಯೇ ಸಂಘದ ಭಾವನೆ. ಡಾ.ಹೆಡಗೇವಾರ್ ಅವರು ಈ ಸಂಗತಿಯನ್ನು ತಮ್ಮ ಆಚರಣೆಯ ಮೂಲಕ ತಿಳಿಸಿಕೊಟ್ಟರು. ಅಂತಹ ಪರಂಪರೆಯ ಬಹು ಸುಂದರ ಆದರ್ಶ ಮದನ್ ದಾಸ್ ಅವರಾಗಿದ್ದರು ಎಂದು ನುಡಿದರು.
ಪವಿತ್ರ ಗಂಗೆಯಲ್ಲಿ ಒಂದು ಕಲಶ ನೀರು ಒಳ್ಳೆಯ ಕಾರ್ಯಕ್ಕೆ ಸಮರ್ಪಣೆಗೊಂಡರೆ ಗಂಗೆ ಬರಿದಾಗುವುದಿಲ್ಲ. ಹಾಗೆಯೇ ಸಮಾಜದ ಪವಿತ್ರ ಕಾರ್ಯಕ್ಕೆ ತೊಡಗಿಕೊಂಡಂತಹ ವ್ವ್ಯಕ್ತಿಗಳ ಪ್ರವಾಹದಿಂದ ಒಬ್ಬ ವ್ಯಕ್ತಿ ಅಗಲಿದರೆ ಮತ್ತೊಬ್ಬ ಸಮರ್ಥ ಕಾರ್ಯಕರ್ತ ಅವರ ಸ್ಥಾನವನ್ನು ತುಂಬುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ಕಾರ್ಯಪದ್ಧತಿ ಜಗತ್ತಿನಲ್ಲಿಯೇ ಅನುಪಮವಾದ ವೈಶಿಷ್ಟ್ಯವನ್ನು ಹೊಂದಿದೆ. ಅದರ ಪ್ರತೀಕ ಮದನ್ ದಾಸ್ ದೇವಿ ಅವರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ರಾಷ್ಟ್ರಕಾರ್ಯಕ್ಕೆ ತಮ್ಮ ಸರ್ವಸ್ವವನ್ನು ಸಮರ್ಪಿಸಿಕೊಂಡವರು ಜ್ಯೇಷ್ಠ ಪ್ರಚಾರಕರಾದ ಮದನ್ ದಾಸ್ ದೇವಿ ಅವರು. ಸಂಘಕ್ಕೆ ಸ್ವಯಂಸೇವಕರಾಗಿ ಬಂದರು, ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವ ಮೂಲಕ ಕಾರ್ಯಕರ್ತರಾದರು, ನಂತರ ಸಂಘಕ್ಕಾಗಿಯೇ ಸಂಪೂರ್ಣ ಬದುಕನ್ನು ಸಮರ್ಪಿಸಿದರು, ಸಂಘವೇ ಆಗಿಹೋದರು ಎಂದು ನುಡಿದರು.
ಮದನ್ ದಾಸ್ ಜಿ ಅವರು 22 ವರ್ಷಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದವರು. ಎಬಿವಿಪಿಗೆ ಅವರು ಕೊಟ್ಟಂತಹ ಸ್ವರೂಪ, ತಯಾರು ಮಾಡಿದ ಕಾರ್ಯಕರ್ತರ ಪರಿಣಾಮವಾಗಿ ಇಂದು ಎಬಿವಿಪಿ ಬೃಹತ್ ಸಂಘಟನೆಯಾಗಿ ಬೆಳೆದಿದೆ. ನಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡಲು ನಂಬಿಕೊಂಡ ಸಿದ್ಧಾಂತಕ್ಕೆ ಬೇಕಾದ ಬದ್ಧತೆ, ಕಾರ್ಯಕುಶಲತೆ, ಯುವ ಪೀಳಿಗೆಗೆ ರಾಷ್ಟ್ರೀಯ ವಿಚಾರಧಾರೆಯನ್ನು ಅರ್ಥವಾಗುವಂತೆ ಹೇಳುವಂತಹ ಕಾರ್ಯಶೀಲತೆ ಮದನ್ ದಾಸ್ ಅವರಲ್ಲಿಇತ್ತು.
ಕಾರ್ಯಕ್ರಮ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್ ಹಾಗೂ ಖ್ಯಾತ ವೈದ್ಯೆ ಡಾ.ಆರ್.ನಾಗರತ್ನ ನುಡಿನಮನ ಸಲ್ಲಿಸಿದರು. ಚಾಣಕ್ಯ ವಿಶ್ವವಿದ್ಯಾನಿಲಯದ ಚಾನ್ಸಲರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರದ ಸಂಘಚಾಲಕ ಡಾ.ಎಂ.ಕೆ.ಶ್ರೀಧರ್ ಉಪಸ್ಥಿತರಿದ್ದರು.