Shraddhanjali Sabha held at Bellary June-20-2013

Bellary, North Karnataka June-20 2013: A ‘Shraddhanjali Sabha’ held at RSS local office here, which remembered the social contributions of Ganesh Kamath, recently expired RSS Bellary Vibhag Pracharak. Sri Sankal Chand Bagrecha, RSS Akhil Bharatiya Vyavastha Pramukh, Sri Shankarananda, RSS Pranth Pracharak and several Swayamsevaks attended the Shraddhanjali Sabha. On June 12th 2013, RSS Bellary Vibhag Pracharak Sri Ganesh Kamath (44) died in a road accident near Javalagere Cross, near Sindhanoor of Raichur District.

Shraddhanjali Sabha held at Bellary June-20-2013
Shraddhanjali Sabha held at Bellary June-20-2013

ವಿಭಾಗ ಪ್ರಚಾರಕ್ ಗಣೇಶ್‌ಜೀ ಶ್ರದ್ಧಾಂಜಲಿ ಸಭೆ;

ಬಳ್ಳಾರಿ:ಸುಮಾರು ಎರಡು ದಶಕಗಳ ಕಾಲದ ಒಡನಾಟ ನಮ್ಮದು. ೧೯೯೫ರಲ್ಲಿ ತೃತೀಯ ಸಂಘ ಶಿಕ್ಷಾ ವರ್ಗ ಮುಗಿಸಿ ಬಳ್ಳಾರಿಗೆ ವಿಸ್ತಾರಕರಾಗಿ ಆಗಮಿಸಿ, ಇಲ್ಲಿನ ವಿಭಾಗ ಪ್ರಚಾರಕರಾಗಿ ತಮ್ಮ ಚಾಣಾಕ್ಷತನದಿಂದ ಸಂಘದ ಸಂಘಟನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗಣೇಶ್‌ಜೀ ಓರ್ವ ಅಸಾಮಾನ್ಯ ವ್ಯಕ್ತಿಯಾಗಿದ್ದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಲ ಭಾರತ ವ್ಯವಸ್ಥಾ ಪ್ರಮುಖರಾದ ಸಾಕಲ್‌ಚಂದ್‌ಜೀ ಬಾಗ್ರೇಚಾ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಇಹಲೋಕ ತ್ಯಜಿಸಿದ್ದ ಸಂಘದ ವಿಭಾಗ ಪ್ರಚಾರಕರಾಗಿದ್ದ ಗಣೇಶ್‌ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬುಧವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಅವರ ಅನುಪಸ್ಥಿತಿ ನನಗೆ ಅತೀವ ದುಃಖ ತಂದಿದೆ ಎಂದ ಸಾಕಲ್‌ಚಂದ್‌ಜೀ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.

Ganesh Kamath (RSS Pracharak)
Ganesh Kamath (RSS Pracharak)

ತಾವು ಹಸಿದಿದ್ದರೂ ಇನ್ನೊಬ್ಬರ ಹಸಿವಿನ ನೀಗುವಿಕೆಗೆ ತಮ್ಮ ಪ್ರಯತ್ನ ಮಾಡುತ್ತಿದ್ದ ಗಣೇಶ್‌ಜೀ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ವಿಭಾಗ ಸಹ-ಕಾರ್ಯವಾಹ ಗೋಪಿಯವರು ಅಭಿಪ್ರಾಯಪಟ್ಟರು.

ಕೆಲವರು ಬದುಕಿದರೂ ಸತ್ತಂತೆ ಇರುತ್ತಾರೆ. ಕೆಲವರು ಸತ್ತಮೇಲೆ ಬದುಕಿ ತಮ್ಮ ಅನುಪಸ್ಥಿತಿಯಲ್ಲಿಯೂ ತಮ್ಮ ಅಸಾಮಾನ್ಯ ಇರುವಿಕೆಯನ್ನು ತೋರಿಸುತ್ತಾರೆ. ಗಣೇಶ್‌ಜೀ ಅಂತಹ ಅಪರೂಪದ ವರ್ಗಕ್ಕೆ ಸೇರಿದವರಾಗಿದ್ದರು ಎಂದು ಸಂಘದ ಕಾರ್ಯಕರ್ತ, ಬ್ಯಾಂಕ್ ಅಧಿಕಾರಿ ಗುರುರಾಜ್ ಅಭಿಪ್ರಾಯಪಟ್ಟರು.

ತಮ್ಮ ದೇಹದ ಮುಖ್ಯ ಅಂಗವನ್ನು ದಾನ ಮಾಡಿದ್ದರೂ ತಮ್ಮ ಪಕ್ಕದವರಿಗೆ ತಿಳಿಸದೇ ಗುಪ್ತವಾಗಿಟ್ಟಿದ್ದರು. ಅವರದು ನಿಷ್ಕಪಟ ವ್ಯಕ್ತಿತ್ವ, ವಿನೋದ ಪ್ರವೃತ್ತಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಅರಿಷಡ್ವರ್ಗಗಳನ್ನು ತಮ್ಮ ಬಳಿ ಬರಗೊಡದೇ  ತಮ್ಮ ಜೀವನದ ಬೇಕು ಬೇಡಗಳನ್ನು ಇತರರಿಗೆ ಊಹಿಸಲೂ ಅವಕಾಶಕೊಡದೇ ಕಠೋರ ಜೀವನ ನಡೆಸಿದರು.

ಗಣೇಶ್‌ಜೀ ಅವರೊಬ್ಬ ಅನರ್ಘ್ಯ ರತ್ನ, ನಿಜಾರ್ಥದಲ್ಲಿ ಭಾರತಾಂಬೆಯ ಸುಪುತ್ರರಾಗಿದ್ದರು. ತಮ್ಮ ಇರುವಿಕೆಯಿಂದ ಇತರರಲ್ಲಿ ಸ್ಫೂರ್ತಿ ತುಂಬುತ್ತಿದ್ದ, ಉನ್ನತ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದ, ಮಿತಭಾಷಿಯಾಗಿದ್ದ ಅವರ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದರು.

ಯಾವ ಕಾರ್ಯವನ್ನು ನಾವು ಮಾಡಬಾರದಾಗಿತ್ತೋ ಅಂತಹ ಕಾರ್ಯವನ್ನು ಮಾಡಬೇಕಾದ ದೌರ್ಭಾಗ್ಯ ನಮ್ಮದು. ನಮಗಿಂತಲೂ ಕಿರಿಯರಾದವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾಗಿರುವುದು ನಮ್ಮ ದೌರ್ಭಾಗ್ಯವೇ ಸರಿ ಎಂದು ಶಂಕರಾನಂದಜೀ ಅಭಿಪ್ರಾಯಪಟ್ಟರು.

ಸಂಘದ ಕಾರ್ಯ ನಿರ್ವಹಿಸುವ ಕಾರ್ಯಕರ್ತರದು ಸನ್ಯಾಸವೂ ಅಲ್ಲದ, ಸ್ವತಃ ಕೆಲಸ ಮಾಡಿ ಅದರ ಶ್ರೇಯಸ್ಸನ್ನು ಇತರರಿಗೆ ದಾನ ಮಾಡುವ, ಸಂಸಾರದಲ್ಲಿ ಇದ್ದೂ ಇಲ್ಲದಂತೆ ಜೀವಿಸುವ ಅಪೂರ್ವ ಕಾರ್ಯದ ರೂಪುರೇಷೆ ಸಂಘದ ಕಾರ್ಯಕರ್ತರದು. ಇಂತಹ ಅಭೂತಪೂರ್ವ ವ್ಯವಸ್ಥೆ ವಿಶ್ವದ ಇನ್ಯಾವುದೇ ಸಂಘಟನೆಯಲ್ಲಿ ಇಲ್ಲದಿರುವುದು ಸಂಘದ ಅಪೂರ್ವ ವೈಶಿಷ್ಠ್ಯವಾಗಿದೆ.

ಗಣೇಶ್‌ಜೀ ಹೊರಗಡೆಯಿಂದ ಕಠೋರವಾಗಿಯೇ ಕಂಡರೂ ಅಂತರ್ಯದಲ್ಲಿ ವಿನೋದ ಸ್ವಭಾವದ, ಮಾನವೀಯ ಸಂಬಂಧಗಳಿಗೆ ಮೌಲ್ಯವನ್ನು ನೀಡುವ ಗುಣವನ್ನು ಹೊಂದಿದ್ದ ಅಪೂರ್ವ ವ್ಯಕ್ತಿಯಾಗಿದ್ದರು. ಸಾಮಾನ್ಯ ಮನುಷ್ಯ ಅಸಾಮಾನ್ಯಬಾಗಿ ಬದುಕುವುದು ಹೀಗೆ. ತಾನು ಸುಟ್ಟು ಬೇರೆಯವರ ಬಾಳಿಗೆ ಬೆಳಕಿನ ಹಾದಿ ತೋರುವ ದೀಪದ ಬೆಳಕಿನಂತೆ ಅವಸರದ ಸಂತನಾಗಿ ಜೀವಿಸಿ ಅವರು ತಮ್ಮ ಕೆಲಸಗಳನ್ನು ಅರ್ಧಕ್ಕೇ ನಿಲ್ಲಿಸಿ ಹೋದರು. ಅವರು ಅರ್ಧಕ್ಕೆ ನಿಲ್ಲಿಸಿಹೋದ ಕೆಲಸವನ್ನು ನಾವು ಸಂಪೂರ್ಣಗೊಳಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಿದೆ.

ಜೀವನದಲ್ಲಿ ಅವರು ಕೊನೆಯಬಾರಿಗೆ ಏಕಾತ್ಮತಾ ಶ್ಲೋಕವನ್ನು ಆಡದೇ ಅವರು ಏಕಾತ್ಮತಾ ಶ್ಲೋಕ ಉಚ್ಛರಿಸುವ ಕಾರ್ಯಕರ್ತರ ನಡುವೆ ಅವರು ಮಲಗಿದ್ದರು. ಇನ್ನೊಮ್ಮೆ ಇಹಲೋಕಕ್ಕೆ ಬಾರದ ಉನ್ನತ ಲೋಕಕ್ಕೆ ಅವರು ನಮ್ಮನ್ನು ಬಿಟ್ಟು ತೆರಳಿದ್ದಾರೆ. ಬಹುಶಃ ಅಲ್ಲೂ ಅವರಿಗೊಂದು ಪ್ರಮುಖ ಕಾರ್ಯವನ್ನು ಭಗವಂತ ವಹಿಸಿರಬೇಕು ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಯೋಗಾ ನಾಗರಾಜ್, ತಿಮ್ಮಣ್ಣ ಭಟ್, ಅನಿಲ್ ನಾಯ್ಡು ಗಣೇಶ್‌ಜೀಯವರೊಡನೆ ತಮಗಿದ್ದ ವೈಯಕ್ತಿಕ ಸಂಬಂಧ, ಅವರೊಡನೆ ಕಳೆದ ಅಪೂರ್ವ ಕ್ಷಣಗಳ ಮೆಲುಕು ಹಾಕಿ ತಮ್ಮ ಶ್ರದ್ಧಾಂಜಲಿ ಸಮರ್ಪಿಸಿದರು.

ಸಂಘದ ಕಾರ್ಯಕರ್ತರು, ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.