ಶ್ಯಾಮಪ್ರಸಾದ್ ಮುಖರ್ಜಿಯವರು ಮಹರ್ಷಿ ಅರವಿಂದರ ಜೀವನ ಸಂದೇಶಗಳ ಕುರಿತು ಪಾಂಡಿಚೆರಿಯ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ :
ಒಬ್ಬ ಸಾಮಾನ್ಯ ಮನುಷ್ಯನಿಗೆ ಶ್ರೀ ಅರವಿಂದರ ಜೀವನವನ್ನ ಸಂದೇಶಗಳನ್ನ ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಬಹಳ ಕಷ್ಟ.ಮಾನವ ಚೈತನ್ಯದ ಸಾಧ್ಯತೆಗಳ ಔನ್ನತ್ಯವನ್ನ ಪೂರ್ಣವಾಗಿ ಬಳಸಿಕೊಳ್ಳುವ ಮತ್ತು ಆ ನಿಟ್ಟಿನಲ್ಲಿ ಏಕಾತ್ಮ ಪ್ರಯತ್ನವನ್ನ ನಡೆಸುವ ಕುರಿತ ಅವರ ಚಿಂತನೆಗಳು ಬಹುಮೂಲ್ಯವಾದುದು. ಆ ಮಟ್ಟಿನ ಆಧ್ಯಾತ್ಮಿಕ ಸಾಧನೆಗೆ ಮನಸ್ಸು ಬುದ್ಧಿಗಳ ಶಿಸ್ತು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆ ನಿಟ್ಟಿನಲ್ಲಿ ಸಾಗಲು ತ್ಯಾಗದ ಕಠಿಣತೆಯ ಅಗತ್ಯವಿರುತ್ತದೆ. ಇವುಗಳೆಲ್ಲ ನಮ್ಮಲ್ಲಿನ ಬಹುಪಾಲು ಮಂದಿಯಿಂದ ಸಾಧ್ಯವಾಗುವುದಿಲ್ಲ.ಆದರೆ ನಮ್ಮ ಹಿಂದಿನ ಕಾಲದ ಋಷಿಮುನಿಗಳು ವರ್ತಮಾನದ ಕರೆಗಳಿಂದ ದೂರವಿದ್ದು, ಯುದ್ಧಗಳಿಂದ ಕಂಗೆಡದೆ, ಸಾಮ್ರಾಜ್ಯಗಳು ಹುಟ್ಟಿದರೂ ಅಳಿದರೂ ಯಾವುದಕ್ಕೂ ಲೆಕ್ಕಿಸದೆ, ಶಾಶ್ವತ ಸತ್ಯಗಳ ಹುಡುಕಾಟಕ್ಕಾಗಿ ಬದುಕನ್ನೇ ಮೀಸಲಿಟ್ಟರು.
ಇನ್ನು ಇತ್ತೀಚೆಗಿನ ಶತಮಾನಕ್ಕೆ ಬಂದರೆ, ಗುರು ಗೋವಿಂದ ಸಿಂಹರ ಪ್ರೀತಿಯ ಶಿಷ್ಯರು ಅವರಿಗೆ ನಾಯಕತ್ವ ವಹಿಸಬೇಕೆಂದು ಕೋರಿಕೊಂಡಾಗ, ನನ್ನನ್ನ ಈ ಜಗತ್ತಿನ ಮಿಥ್ಯಾ ಬಂಧನಕ್ಕೆ ಸಿಲುಕಿಸಬೇಡಿ ಎನ್ನತ್ತಾ ಎಚ್ಚರಿಸುತ್ತಾರೆ, ಅದೇ ರೀತಿ ದೇಶಬಂಧು ಚಿತ್ತರಂಜನದಾಸರು ಮಹರ್ಷಿ ಅರವಿಂದರಲ್ಲಿ ಯಾವುದೋ ರಾಜಕೀಯ ಹೋರಾಟದ ಸಮಸ್ಯೆಯೊಂದನ್ನ ತೆಗೆದುಕೊಂಡು ಹೋಗುತ್ತಾರೆ, ಆಗ ಅವರು, ನನಗಿನ್ನೂ ಆಧ್ಯಾತ್ಮಿಕ ಹಾದಿಯಲ್ಲಿ ಪೂರ್ಣ ಸತ್ಯ ದರ್ಶನವಾಗಿಲ್ಲ, ಹಾಗಿರುವಾಗ ಮನುಕುಲದ ಉದ್ಧಾರ ಮಾಡುವ ಪ್ರಯತ್ನವೊಂದು ಭ್ರಮೆಯ ಮಾತಾಗುತ್ತದೆ ಎಂಬ ಮಾತನ್ನಾಡುತ್ತಾರೆ.
ಈ ರೀತಿಯ ಆಧ್ಯಾತ್ಮಿಕ ಪಥದರ್ಶಕರ ಚಿಂತನೆ ಮತ್ತು ಪ್ರಯತ್ನಗಳು ಅನೇಕ ಬಾರಿ ಸಾಮಾನ್ಯ ಜನರ ಗ್ರಹಿಕೆಗಳಿಗೆ ತದ್ವಿರುದ್ಧವಾಗಿಯೂ ಇದ್ದಿರಬಹುದು.ಆದರೆ ಆಗೆಲ್ಲ ಇವತ್ತಿನಷ್ಟು ತುರ್ತು ಸ್ಪಂದನೆಯ ಅಗತ್ಯಗಳಿರಲಿಲ್ಲ. ಇವತ್ತು ಭಾರತ ಕೇವಲ ಐಹಿಕ ವಸ್ತುಗಳ ಬಡತನದಿಂದ ಮಾತ್ರವೇ ಬಳಲುತ್ತಿಲ್ಲ,ಬದಲಾಗಿ ತನ್ನೆಲ್ಲ ಆಧ್ಯಾತ್ಮಿಕ ಸಂಪನ್ಮೂಲಗಳ ದೀವಾಳಿತನಕ್ಕೆ ಸಾಕ್ಷಿಯಾಗಿದೆ. ಸರಕಾರ ಅನೈತಿಕವಾದ ವಿಷವರ್ತುಲದಲ್ಲಿ ಭಾರತವನ್ನ ಸಿಲುಕಿಸಿದೆ, ಮೌಲ್ಯಗಳು ಬಿಕರಿಯಾಗುತ್ತಿದೆ. ಒಳ್ಳೆಯದಾದ ಯಾವುದೇ ಇದ್ದರೂ ಕೇವಲ ದೊಡ್ಡ ಹುದ್ದೆಯ ಅಹಂಕಾರಕ್ಕೆ,ಹೆಚ್ಚಿನ ಅಧಿಕಾರದ ಅಮಲಿಗೆ, ಹೀಗೆ ಈ ರೀತಿಯ ಹೊರಗಿನ ವಿಶೇಷಣಕ್ಕೇ ವಿಶೇಷ ಪಾರಮ್ಯ.ಒಂದೊಮ್ಮೆ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಮಹಾನ್ ಎನಿಸಿದ್ದ ಜನರ ಅಸ್ತಿ ಪಂಜರದ ಅವಶೇಷಗಳ ಚಟ್ಟ ಕಟ್ಟಿದಂತೆ ಭಾಸವಾಗುತ್ತದೆ.
ವಿಷಾದವೇನೆಂದರೆ, ನಾವು ನಮ್ಮ ನೈಜವಾದ ಸಂಸ್ಕೃತಿಯ ಹೆಜ್ಜೆ ಗುರುತುಗಳನ್ನೇ ಮರೆತುಹೋಗಿದ್ದೇವೆ. ಅರವಿಂದರು ಹೇಳುತ್ತಾರಲ್ಲ, “ಮನುಷ್ಯರ ಸಂಸ್ಕೃತಿ ಎನ್ನುವಂತದ್ದು ಅವನ ಜೀವನ ಪ್ರಜ್ಞೆಯ ಅಭಿವ್ಯಕ್ತಿ.ಅದನ್ನ ಸ್ಥೂಲವಾಗಿ ಮೂರು ಆಯಾಮಗಳನ್ನಾಗಿ ವಿಂಗಡಿಸಿ ನೋಡಬಹುದು;ಒಂದು ಆಯಾಮ ಅವನ ಚಿಂತನೆ,ಆದರ್ಶ,ಊರ್ಧ್ವಮುಖವಾದ ಸಂಕಲ್ಪಶಕ್ತಿ, ಮತ್ತು ಆತ್ಮೋನ್ನತಿಯ ಆಕಾಂಕ್ಷೆಗಳು;ಎರಡನೆಯದ್ದು ಅವನ ಸೃಜನಾತ್ಮಕ ಅಭಿವ್ಯಕ್ತಿಯ ರುಚಿ ಮತ್ತು ಸೌಂದರ್ಯಾಸ್ವಾದನೆಯ ಸಾಧ್ಯತೆಗಳು ; ಮತ್ತು ಮೂರನೆಯದಾಗಿ ಮನುಷ್ಯರ ಬಹಿರ್ಮುಖವಾದ ಮತ್ತು ವಾಸ್ತವವಾದಿ ಮೌಲ್ಯಗಳ ಪ್ರತಿಪಾದನೆಗಳ ಮೇಲೆ ಮನುಷ್ಯನ ಸಂಸ್ಕೃತಿ ಅವಲಂಬಿತವಾಗುತ್ತದೆ.” ತತ್ವಜ್ಙಾನ ಮತ್ತು ಮತ್ತು ಧಾರ್ಮಿಕ ನಂಬಿಕೆಗಳು ಮೊದಲ ಸ್ತರಕ್ಕೆ, ಕಲೆ,ಸಾಹಿತ್ಯ ಇತ್ಯಾದಿಗಳು ಎರಡನೆಯದ್ದಕ್ಕೆ ಸೇರಿದರೆ, ಸಮಾಜ ಮತ್ತು ರಾಜಕೀಯ ಮೂರನೆಯ ಆಯಾಮವೆನಿಸಿಕೊಳ್ಳುತ್ತದೆ. ತನ್ನ ಜೀವನದ ಉದ್ದೇಶವೇನು? ಮತ್ತು ತಾನು ಯಾರು ಎಂಬ ಸತ್ಯದ ಹುಡುಕಾಟ, ಇಂತಹ ಚಿಂತನೆಗಳು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ತಾನೇತಾನಾಗಿ ನೆಲೆ ನಿಂತುಬಿಡುತ್ತದೆ, ಅದು ಇಲ್ಲಿನ ಸಂಸ್ಕೃತಿ,ಸಾಮಾಜಿಕ ಆದರ್ಶಗಳು ಮತ್ತು ಅದು ಇಲ್ಲಿನ ಬದುಕಿನ ರೀತಿ.ಇಂತಹ ಉನ್ನತ ಉದ್ದೇಶವನ್ನ ನಾವು ಮೈಮರೆವಿನಲ್ಲಿ ಕಳೆದುಕೊಂಡಿದ್ದೇವೆ.ಭೋಗಪರವಾದ ದೃಷ್ಟಿಕೋನದಿಂದಲೇ ಜೀವನದ ಎಲ್ಲ ಕೆಲಸಗಳನ್ನ ನೋಡುತ್ತಿದ್ದೇವೆ,ದೌರ್ಭಾಗ್ಯವೆಂದರೆ ಅರವಿಂದರು ಹೇಳಿದ ಸಂಸ್ಕೃತಿಯ ಮೊದಲೆರೆಡು ಆಯಾಮಗಳನ್ನೂ ಅದೇ ದೃಷ್ಟಿಕೋನದಿಂದಲೇ ಕಾಣಲು ಮೊದಲುಮಾಡಿದ್ದೇವೆ.ಹಾಗಾಗಿಯೇ ಇಂದು ಫಿಲಾಸಫಿ ಅನ್ನುವುದು ಪ್ರಪಗಾಂಡಾ ಆಗಿ ಬದಲಾಗಿದೆ, ಅಥವಾ ಐಹಿಕ ಭೋಗಭಾಗ್ಯಗಳ ಅವಶ್ಯಕತೆಗಳ ದೃಷ್ಟಿಯಿಂದಲೇ ಇತಿಹಾಸವನ್ನೂ ನೋಡುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೇವೆ. ಸೆಕ್ಯುಲರಿಸಮ್ಮಿನ ಬಲಿಪೀಠದ ಮೇಲೆ ಧರ್ಮವನ್ನ ಬಲಿಕೊಡುತ್ತಿದ್ದೇವೆ. ಸಾಹಿತ್ಯ ಅನ್ನುವುದು ಕೇವಲ ಪಾಮ್ಪ್ಲೆಟ್ಟಿಗೆ ಸೀಮಿತಗೊಳಿಸಿಕೊಂಡಿದ್ದೇವೆ, ಕಲಾವಿದನೊಬ್ಬನನ್ನ ಕೇವಲ ಕೆಲಸಬಲ್ಲಂತಹ ಕುಶಲಕರ್ಮಿಯನ್ನಾಗಿಸಿದ್ದೇವೆ,ಇದು ನಮ್ಮ ಕಾಲದ ದುರಂತವೇ ಸರಿ.ಅನೇಕ ಬಾರಿ ನೈತಿಕ ಮೌಲ್ಯಗಳ ವಿಚಾರ ಬಂದಾಗಲೂ ರಾಜಿ ಮಾಡಿಕೊಳ್ಳುತ್ತಾ ಒಲೈಕೆಗೆ ಮುಂದಾಗುತ್ತಾ ಅದನ್ನೂ ಡಿಪ್ಲೋಮೆಸಿಯ ಹೆಸರಿನಲ್ಲಿ ಒಪ್ಪಿಕೊಂಡಿದ್ದೇವೆ.
ಇಂದು ಸಾಮಾಜಿಕ ಜೀವನದ ಸ್ಥಾನಮಾನದ ಉತ್ತುಂಗಕ್ಕಿಂತಲೂ, ವ್ಯಕ್ತಿಯೊಬ್ಬನ ಆಧ್ಯಾತ್ಮಿಕ ಶಕ್ತಿಯ ಉನ್ನತಿಗೇ ನಮ್ಮಲ್ಲಿ ಪ್ರಾಮುಖ್ಯತೆ ಹೆಚ್ಚು. ಪುರಾತನ ಬಾರತದಲ್ಲಿ ಸಾಮಾಜಿಕ ಜೀವನವೆನ್ನುವುದು ವ್ಯಕ್ತಿಯ ಆಧ್ಯಾತ್ಮಿಕ ಜೀವನದ ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನವೇ,ಹಾಗಾಗಿಗಿಯೇ ನಮ್ಮೆಲ್ಲ ಐಹಿಕ ನ್ಯೂನ್ಯತೆಗಳಿಗಾಗಿ ನಾವು ದುಃಖಿಸುತ್ತೇವೆ ಇದನ್ನೇ ಅರವಿಂದರು ‘ಪ್ರಾಪಂಚಿಕ ಅಗತ್ಯತೆಗಳು’ ಎಂದೂ ,ಇದನ್ನು ‘ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಚೌಕಟ್ಟು’ ಅಂತಲೂ ಕರೆಯುತ್ತಾರೆ.ಇವತ್ತಿನ ಸಾಮಾಜಿಕ ಜೀವನದಲ್ಲಿ ಇದರ ಪ್ರಭಾವ ಸಾಂಕೇತಿಕವಾದ ಸ್ವರೂಪದಲ್ಲಿದ್ದರೂ, ಸಾಂಸಾರಿಕವಾದ ಚೌಕಟ್ಟುಗಳ ಮಧ್ಯೆ ಜೀವಿಸುತ್ತಿದ್ದರೂ ಸಹ ಮನುಷ್ಯ ಅಂತಿಮ ಸತ್ಯಕ್ಕಾಗಿ ಮತ್ತು ತನ್ನೊಳಗಿನ ಹುಡುಕಾಟಕ್ಕಾಗಿ ತುಡಿಯುವ ಆ ಪ್ರಕ್ರಿಯೆಯ ಚಿಂತನೆ ಇವತ್ತಿಗೂ ಸಮಾಜದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ‘ರಾಮರಾಜ್ಯ’, ‘ಧರ್ಮರಾಜ್ಯ’, ‘ಧರ್ಮಯುದ್ಧ’ ‘ರಾಜರ್ಷಿ’ ಮುಂತಾದ ಶಬ್ದಗಳು ಸನಾತನ ಭಾರತದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳಿಗೆ ಮೌಲ್ಯವನ್ನ ಘನತೆಯನ್ನ ತಂದಿದೆ, ಅದಕ್ಕೆ ಸಾಮಾನ್ಯಜನರೂ ಅದೇ ರೀತಿಯ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಆದರೆ ಇಂದು ಆ ಆಧ್ಯಾತ್ಮಿಕ ಉನ್ನತಿಯ ಕಡೆಗಿನ ನಮ್ಮ ಪ್ರಜ್ಞೆ ಮುರಿದುಬಿದ್ದಿದೆ, ಮನುಷ್ಯ ತನ್ನ ಚೈತನ್ಯವನ್ನ ಕಳೆದುಕೊಂಡು ಪ್ರೇತಕಳೆ ಹೊತ್ತು ತಿರುಗುತ್ತಿದ್ದಾನೆ.
ಹಾಗಾಗಿಯೇ ಇಂದು ವಿಶ್ವವಿದ್ಯಾಲಯದಲ್ಲಿ ಅಂತಹ ಬದುಕಿನ ಶಾಶ್ವತ ಸತ್ಯಗಳ ಹುಡುಕಾಟಕ್ಕೆ ಹೊರಡುವುದನ್ನ ಕಲಿಸುತ್ತಾ, ಪುನಃ ಪುನಃ ಅದನ್ನೇ ಕಲಿಸುತ್ತಾ ಮತ್ತು ತನ್ಮೂಲಕ ಅವರನ್ನ ಇವತ್ತಿನ ದಿನಕ್ಕೂ ಪ್ರಸ್ತುತರನ್ನಾಗಿಸಬೇಕಿದೆ . ಇದು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವೊಂದರ ಕಾರ್ಯವಾಗಬೇಕು,ಮತ್ತು ಮಹರ್ಷಿ ಅರವಿಂದರ ನೆನಪಿನಲ್ಲಿ ಈ ಕುರಿತಂತೆ ಅಧ್ಯಯನಕ್ಕೆ ಹುಡುಕಾಟಕ್ಕೆ ಅನುವು ಮಾಡಿಕೊಡುವ ವಿಶ್ವವಿದ್ಯಾನಿಲಯವೊಂದು ಸ್ಥಾಪಿಸಬೇಕಿದೆ.ಹೇಗೆ ಗುರುದೇವ ರವೀಂದ್ರನಾಥ ಟ್ಯಾಗೋರರ ಹೆಸರಿನಲ್ಲಿ ಶಾಂತಿನಿಕೇತನವನ್ನ ಸ್ಥಾಪಿಸಿ ಜಗತ್ತಿನ ಎಲ್ಲಾ ಕಲಾವಿದರು,ಸಾಹಿತ್ಯಾಸಕ್ತರಿಗೆ ಸ್ಪೂರ್ತಿಯ ಕೇಂದ್ರವಾಗಿದೆಯೋ ಅದೇ ರೀತಿ ಆಧ್ಯಾತ್ಮಿಕ ಸಾಧಕರೆಲ್ಲರಿಗೂ ಹೀಗೊಂದು ಪ್ರೇರಣಾ ಕೇಂದ್ರವನ್ನಾಗಿ, ಅಂತಹ ಚಿಂತನೆಗಳಿಗೆ ಮೂಲನೆಲೆಯಾಗಿ ರೂಪಿಸಬೇಕಿದೆ. ಉಪನಿಷತ್ತುಗಳು ತಮ್ಮ ಸಾರವನ್ನ ಕೇವಲ ಮೂರು ಶಬ್ದಗಳಲ್ಲಿ ಹೇಳುತ್ತವೆ, ‘ಶಾಂತಂ,ಶಿವಂ ಅದ್ವೈತಮ್’.
ಅರವಿಂದರೂ ಅದೇ ಸತ್ಯವನ್ನೇ ನಮ್ಮೆಲ್ಲರಿಗೂ ಹಂಚಿದ್ದಾರೆ.