ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ಭಾರತೀಯ ರಾಜಕಾರಣಿ, ನ್ಯಾಯವಾದಿ, ಶಿಕ್ಷಣತಜ್ಞರು. ಇವರು ಕೈಗಾರಿಕೋದ್ಯಮ ಮತ್ತು ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿದವರು. ನಂತರ ಭಾರತೀಯ ಜನಸಂಘವನ್ನು ಸ್ಥಾಪಿಸಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ಜುಲೈ 6, 1901 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಅಶುತೋಷ್‌ ಮುಖರ್ಜಿ ಹಾಗೂ ತಾಯಿ ಜೋಗಮಯ ದೇವಿ ಮುಖರ್ಜಿ. ಇವರ ತಂದೆಯಾದ ಅಶುತೋಷ್‌ ಮುಖರ್ಜಿ ಅವರು ಕೊಲ್ಕತ್ತಾ ಹೈಕೋರ್ಟ್‌ ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದವರು. ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಭವಾನಿಪುರದ ಮಿತ್ರ ಸಂಸ್ಥೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು.ಅವರು ತಮ್ಮ ಮೆಟ್ರಿಕ್ಯುಲೇಷನ್‌  ನಂತರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಸ್ನಾತಕೋತ್ತರದಲ್ಲಿ ಇಂಗ್ಲಿಷ್ನಲ್ಲಿ ಪದವಿ ಪಡೆದರು. ಅವರು ತಂದೆಯ ನಿಧನದ ನಂತರ ಕೊಲ್ಕತ್ತಾದಲ್ಲಿ ವಕೀಲರಾಗಿ ಅಧ್ಯಯನ ಮಾಡಿದರು. 1924ರಲ್ಲಿ ಕೊಲ್ಕತ್ತಾ ಹೈಕೋರ್ಟ್‌ ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. 1926ರಲ್ಲಿ ಲಿಂಕನ್ಸ್‌ ಇನ್‌ ನಲ್ಲಿ ಅಧ್ಯಯನ ಮಾಡಲು ಇಂಗ್ಲೆಂಡ್‌ ಗೆ ತೆರಳಿದರು. 1934ರಲ್ಲಿ 33 ನೇ ವಯಸ್ಸಿನಲ್ಲಿ ಅವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ವಿಶ್ವದ ಅತ್ಯಂತ ಕಿರಿಯ ಉಪಕುಲಪತಿಯಾದರು.


ಶ್ಯಾಮ್‌ ಪ್ರಸಾದ್ ಮುಖರ್ಜಿ ಏಷಿಯಾಟಿಕ್‌ ಸೊಸೈಟಿ ಆಫ್‌ ಕೊಲ್ಕತ್ತಾದಲ್ಲಿ ಸಕ್ರಿಯವಾಗಿದ್ದರ ಜೊತೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನ್ಯಾಯಾಲಯ ಮತ್ತು ಕೌನ್ಸಿಲ್‌ನ ಸದಸ್ಯರಾಗಿದ್ದರು. ನಂತರ ಇಂಟರ್-ಯೂನಿವರ್ಸಿಟಿ ಆಫ್ ಬೋರ್ಡ್‌ನ ಅಧ್ಯಕ್ಷರಾಗಿದ್ದರು.


ರಾಜಕೀಯ ಜೀವನ
ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು 1929ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. 1937ರಲ್ಲಿ ಅವರು ಕ್ರಶಕ್‌ ಪ್ರಜಾ ಪಾರ್ಟಿಯಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಶ್ಯಾಮ್ ಪ್ರಸಾದ್ ಮುಖರ್ಜಿಯವರು 1941-42ರಲ್ಲಿ ಎ.ಕೆ. ಫಜುಲ್ ಹಕ್ ಅವರ ಮಿತ್ರ ಪಕ್ಷಗಳ ಒಕ್ಕೂಟ ಸರ್ಕಾರದ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ಅವರು 1942ರಲ್ಲಿ ಬ್ರಿಟಿಷ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಅಧಿಕಾರದಿಂದ ಹೊರಬಂದು ಮಹಾಬೋಧಿ ಸೊಸೈಟಿ, ರಾಮಕೃಷ್ಣ ಮಿಷನ್ ಜೊತೆಗೂಡಿ ಮಿದ್ನಾಪುರದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು ಕಲ್ಪಿಸಲು ಹಗಲಿರುಳೂ ಶ್ರಮಿಸಿದರು.


ಮುಖರ್ಜಿ ಅವರು 1946ರ ಅವಧಿಯಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ನಂತರ 1947 ರಂದು ಆಗಿನ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಅವರ ಸಂಪುಟದಲ್ಲಿ  ಸಚಿವರಾಗಿ ಕೆಲಸ ನಿರ್ವಹಿಸಿದರು. ಲಿಯಾಕತ್ ಅಲಿ ಖಾನ್ ಅವರೊಂದಿಗಿನ ದೆಹಲಿ ಒಪ್ಪಂದದ ವಿಷಯದ ಮೇಲೆ ಮುಖರ್ಜಿ ಅವರು 6 ಏಪ್ರಿಲ್ 1950 ರಂದು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು. ಆರ್‌ಎಸ್‌ಎಸ್‌ನ ಶ್ರೀ ಗೋಲ್ವಾಲ್ಕರ್ ಗುರೂಜಿಯವರೊಂದಿಗೆ ಸಮಾಲೋಚಿಸಿದ ನಂತರ ಶ್ರೀ ಮುಖರ್ಜಿ ಅವರು 21 ಅಕ್ಟೋಬರ್ 1951 ರಂದು ದೆಹಲಿಯಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅವರು ಅದರ ಮೊದಲ ಅಧ್ಯಕ್ಷರಾದರು. 1952 ರ ಚುನಾವಣೆಯಲ್ಲಿ, ಭಾರತೀಯ ಜನಸಂಘವು ಸಂಸತ್ತಿನಲ್ಲಿ 3 ಸ್ಥಾನಗಳನ್ನು ಗೆದ್ದುಕೊಂಡಿತು. ಅವರು ಸಂಸತ್ತಿನೊಳಗೆ ನ್ಯಾಶನಲ್ ಡೆಮಾಕ್ರಟಿಕ್ ಪಕ್ಷವನ್ನು ರಚಿಸಿದರು. ಇದರಲ್ಲಿ 32 ಸಂಸದರು ಮತ್ತು 10 ರಾಜ್ಯಸಭಾ ಸದಸ್ಯರಿದ್ದರು.
ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ಜೂನ್‌ 23, 1953 ರಂದು ತಮ್ಮ 51ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.