ಇಂದು ಪುಣ್ಯಸ್ಮರಣೆ
ತಮ್ಮ ಪ್ರವಚನದ ಚಾತುರ್ಯತೆಯಿಂದಲೇ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷ ಸಿದ್ದೇಶ್ವರ ಸ್ವಾಮೀಜಿ ಅವರು. ತಮ್ಮ ನಡೆ ನುಡಿಗಳಿಂದ ಸಾರ್ವಕಾಲಿಕವಾಗಿ ಪ್ರಚಲಿತದಲ್ಲಿರುವವರು. ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ತ್ವಜ್ಞಾನಿ. ಶ್ರೀ ಸಿದ್ದೇಶ್ವರ ಶ್ರೀಗಳು ಯಾವುದೇ ಮೋಡಿ ಮಾಡುವ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡಿದವರಲ್ಲ, ಅವರ ತೆರೆದಿಟ್ಟ ಜೀವನದ ಮೂಲಕ ಇತರರ ಬದುಕಿಗೆ ದಾರಿದೀಪ ಮಾಡಿಕೊಟ್ಟ ದಾರ್ಶನಿಕರು. ಅಷ್ಟೇ ಅಲ್ಲದೆ ಜನರಿಂದ ನಡೆದಾಡುವ ದೇವರು ಎಂಬ ಅಭಿದಾನಕ್ಕೆ ಪಾತ್ರರಾದವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಸಿದ್ದೇಶ್ವರ ಸ್ವಾಮೀಜಿಗಳು ಸೆಪ್ಟೆಂಬರ್ 5, 1940 ರಂದು ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದವರು. ಅವರ ತಂದೆ ಓಗೆಪ್ಪಗೌಡ ಬಿರಾದಾರ, ತಾಯಿ ಸಂಗವ್ವ. ಶ್ರೀಗಳ ಬಾಲ್ಯದ ಹೆಸರು ಸಿದ್ದಗೊಂಡ ಬಿರಾದಾರ. ಅವರು ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರಿದವರು. ನಂತರ ಶ್ರೀ ಸಿದ್ದೇಶ್ವರರಾಗಿ ಆಧ್ಯಾತ್ಮಿಕ ದಿವ್ಯ ಚೇತನವಾಗಿ ರೂಪುಗೊಂಡರು.ಬಿಜ್ಜರಗಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ವಿಜಯಪುರದಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದು, ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ತ್ತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದರು.
ಸಿದ್ದೇಶ್ವರ ಸ್ವಾಮೀಜಿಯವರ ಆಧ್ಯಾತ್ಮದ ಹಿನ್ನೆಲೆ
ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ಹೆಚ್ಚು ಚಿಂತನೆ ನಡೆಸಿದವರು. ಮಧುರ ಸ್ವಭಾವದವರಾಗಿದ್ದ ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಅರಿತವರು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು. ಇದು ಇಂದಿಗೂ ಉತ್ತರಕರ್ನಾಟಕದ ಜನಮಾನಸದಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆದಿದೆ.
ಸ್ವಾಮೀಜಿಗಳ ಜೀವನ ಶೈಲಿ
ಇವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದವರು. ತತ್ತ್ವಜ್ಞಾನಿ, ಚಿಂತಕ ಸ್ವಾಮೀಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವರು ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಚಿಂತನೆ, ಅಭಿವ್ಯಕ್ತಿಗಾಗಿ ಶ್ರೀಗಳು ಹೆಸರುವಾಸಿಯಾದವರು. ಸಿದ್ದೇಶ್ವರ ಸ್ವಾಮೀಜಿಯವರ ಸರಳತೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನದ ಪರಿಹಾರ ಮತ್ತು ಅವರ ಶಾಂತಸ್ವಭಾವದಿಂದ ಅನುಯಾಯಿಗಳಿಗೆ ಪ್ರೇರಣಾದಾಯಿ ವ್ಯಕ್ತಿಯಾಗಿದ್ದರು. ಅವರ ಪ್ರವಚನವು ನಿಖರತೆ ಮತ್ತು ನೇರ ಹೃದಯಸ್ಪರ್ಶಿಯಾಗುವುದಕ್ಕೆ ಹೆಸರುವಾಸಿಯಾಗಿತ್ತು.
ಶ್ರೀ ಸಿದ್ದೇಶ್ವರ ಶ್ರೀಗಳು ಪ್ರವಚನಗಳಿಂದಲೇ ಜನರ ಜೀವನ, ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಕನ್ನಡ, ಇಂಗ್ಲಿಷ್, ಪರ್ಷಿಯನ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರವೀಣರಾಗಿದ್ದ ಶ್ರೀಗಳು ನಿರರ್ಗಳವಾಗಿ ಉಪನ್ಯಾಸ ನೀಡುತ್ತಿದ್ದರು. ಸುತ್ತೂರ ಶ್ರೀಗಳ ಕೋರಿಕೆಯ ಮೇರೆಗೆ ಅಮೇರಿಕಾಗೆ ತೆರಳಿ ಆಧ್ಯಾತ್ಮದ ಸುಗಂಧ, ಭಾರತೀಯ ಸಂಸ್ಕೃತಿಯ ದಿವ್ಯತೆಯನ್ನು ಪ್ರವಚನದ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಚಯಿಸಿದ ಮಹನೀಯರು.
ಪ್ರಶಸ್ತಿಗಳಿಂದ ದೂರ
ಸಿದ್ದೇಶ್ವರ ಸ್ವಾಮೀಜಿಗಳಿಗೆ ಅವರ ಪ್ರಬುದ್ಧತೆಯನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿದ್ದವು. ಆದರೆ ಸ್ವಾಮೀಜಿಗಳು ಅವುಗಳಿಂದ ದೂರ ಉಳಿದರು. ಅಷ್ಟೇ ಅಲ್ಲದೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಾಗಲೂ ಈ ಬಗ್ಗೆ ಸ್ವಾಮೀಜಿಗಳು ಸ್ಪಷ್ಟವಾದ ಮಾತೊಂದನ್ನು ಹೇಳಿದ್ದರು, ‘ಭಾರತ ಸರ್ಕಾರ ನೀಡಿರುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ . ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ . ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆ ನನಗಿಲ್ಲ’ ಎಂದಿದ್ದರು.
ಸಿದ್ದೇಶ್ವರ ಸ್ವಾಮೀಜಿಗಳು ಜನವರಿ 2, 2023 ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.