– ವಾದಿರಾಜ್, ಸಾಮಾಜಿಕ ಕಾರ್ಯಕರ್ತರು
ಮೈಸೂರಿನ ಅಶೋಕಪುರಂ ದಲಿತ ಚಳವಳಿಯ ಶಕ್ತಿ ಕೇಂದ್ರ . ನಿನ್ನೆ ನಮ್ಮನ್ನು ಅಗಲಿದ ಹಿರಿಯ ರಾಜಕಾರಿಣಿ ವಿ ಶ್ರೀನಿವಾಸಪ್ರಸಾದ್ ಹುಟ್ಟಿ ಬೆಳೆದದ್ದು ಇದೇ ಅಶೋಕಪುರಂನಲ್ಲಿ.
ಅದು 1957 – 58 ರ ಸಂದರ್ಭ. ಅಶೋಕಪುರಂನಿಂದ ಅನತಿ ದೂರದಲ್ಲಿದ್ದ ಗಣೇಶ ಪಾರ್ಕಿನಲ್ಲಿ ಆರೆಸ್ಸೆಸಿನ ವಿಜಯ ಶಾಖೆ. ಮೊದಲು ಶಾಖೆಯ ಆಟೋಟಗಳಿಗೆ ಆಕರ್ಷಿತರಾದವರು ಅಶೋಕಪುರಂನ ರಾಮಕೃಷ್ಣ. ಅವರ ಹಿಂದೆಯೇ ಬಂದವರು ವೆಂಕಟರಾಮು , ಶ್ರೀನಿವಾಸ ಪ್ರಸಾದ್. ಈ ಮೂವರು ಸದಾ ಜೊತೆಗೇ ಇರುತ್ತಿದ್ದ ಚಡ್ಡಿ ದೋಸ್ತರು. ಇವರೊಂದಿಗೆ ಜವರಯ್ಯ , ಮುದ್ದು ಚಲುವಯ್ಯ, ವುರ್ಗಿ ಜವರ, ರಘುನಾಥ, ಮಹದೇವ, ವೆಂಕಟರಾಜು, ರಾಮಸ್ವಾಮಿ, ಚಿಕ್ಕವೀರಯ್ಯ, ಚಾಮುಂಡಿ ಮಹಾಲಿಂಗು, ನಾರಾಯಣಸ್ವಾಮಿ, ಶ್ರೀಕಂಠ, ಸಿದ್ದಪ್ಪಾಜಿ, ಚನ್ನರಸು, ಗೋವಿಂದರಾಜು, ವಾಸು, ಗಂಗಾಧರ … ಹೀಗೆ ದೊಡ್ಡ ಪಟಾಲಮ್ಮೆ ವಿಜಯ ಶಾಖೆಗೆ ಬಂದಿಳಿಯಿತು. ಕ್ರಮೇಣ ಆರೆಸ್ಸೆಸಿನ ಕಲಿಕೆಗಳು ಕರಗತವಾಗುತ್ತಲೇ ಅಶೋಕಪುರಂನಲ್ಲಿ ‘ ಹನುಮಾನ್ ಶಾಖೆ ‘ ತಲೆ ಎತ್ತಿತು. ಈಗಲೂ ಶ್ರೀನಿವಾಸ ಪ್ರಸಾದ್ ಆ ಕಾಲದ ಆರೆಸ್ಸೆಸ್ ಸಹಪಾಠಿಗಳೊಂದಿಗೆ ಮಾತಿಗೆ ಕೂತರೆ ‘ ವಿಜಯ ಶಾಖೆ – ಹನುಮಾನ್ ಶಾಖೆ ‘ ಪ್ರಸ್ತಾಪವಾಗದೆ ಮಾತು ಮುಗಿಯುವುದಿಲ್ಲ .
ಹದಿನೈದು ವರ್ಷಕ್ಕೂ ಮೀರಿದ ಆ ದಿನಗಳ ಆರೆಸ್ಸೆಸ್ ನಂಟನ್ನು ಶ್ರೀನಿವಾಸ ಪ್ರಸಾದ್ ತಮ್ಮ ‘ ಸ್ವಾಭಿಮಾನಿಯ ನೆನಪುಗಳು ‘ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಯಾದವರಾವ್ ಜೋಷಿ , ಹೊ ವೆ ಶೇಷಾದ್ರಿ, ನಂ ಮಧ್ವರಾವ್ , ಹರಿಭಾವು ವಝೆ , ವೆಂಕಣ್ಣ – ಅಂದಿನ ಸಂಘಟನೆಯ ಪ್ರಮುಖರು ತೋರಿದ ಪ್ರೀತಿ , ಕಾಳಜಿ , ನೀಡಿದ ಪ್ರೋತ್ಸಾಹ , ತಿಂಗಳುದ್ದಕ್ಕೂ ನೆಡೆದ ಎರಡು ತರಬೇತಿ ಶಿಬಿರಗಳು , ಕೊಲ್ಕತ್ತಾದಲ್ಲಿ ನೆಡೆದ ಎಬಿವಿಪಿ ರಾಷ್ಟ್ರೀಯ ಸಮ್ಮೇಳನ , ಅಲ್ಲಿ ಕೇಳಿದ ವಿಚಾರಧಾರೆಗಳು ಹುಟ್ಟಿಸಿದ ರೋಮಾಂಚನ – ಎಲ್ಲವನ್ನು ಶ್ರೀನಿವಾಸಪ್ರಸಾದ್ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ಬೇಸಿಗೆಯ ರಜೆಯಲ್ಲಿ ವೆಂಕಟರಾಮು ಜೊತೆ ಕಂಪಲಾಪುರ , ಚಿಲ್ಕುಂದ , ಕಂದೇಗಾಲ ಗ್ರಾಮಗಳಲ್ಲಿ ವಿಸ್ತಾರಕರಾಗಿ ಹೋಗಿ ಹದಿನೈದು ದಿನ ತಂಗಿ ಆರೆಸ್ಸೆಸ್ ಶಾಖೆಗಳನ್ನು ತೆರೆದಿದ್ದು , ಒಕ್ಕಲಿಗರು , ಲಿಂಗಾಯತರು , ದಲಿತರೆಲ್ಲ ಶಾಖೆಯಲ್ಲಿ ಬೆರೆಯುತ್ತಿದ್ದದ್ದು ಪ್ರಸಾದ್ ಅವರ ಸುಂದರ ನೆನಪುಗಳು . ಶಾಖೆಯ ಆಟೋಟಗಳು ನಮ್ಮೊಳಗಿನ ವಿಕಾರಗಳನ್ನು ಹದಗೊಳಿಸುವ ಬಗೆ ಅನನ್ಯ . ‘ ಆರೆಸ್ಸೆಸ್ ಜೊತೆಗಿನ ಆ ಹದಿನೈದು ವರ್ಷಗಳ ಅವಧಿಯಲ್ಲಿ ನಾನೆಂದು ಜಾತೀಯತೆಯ ಸೋಂಕನ್ನು ಕಾಣಲಿಲ್ಲ ‘ – ಇದು ಶ್ರೀನಿವಾಸ್ ಪ್ರಸಾದರ ಸ್ಪಷ್ಟ ಮಾತು . ( ಪುಟ 41)
ಶ್ರೀನಿವಾಸ ಪ್ರಸಾದ್ ಅವರು ಆರೆಸ್ಸೆಸ್ ಅಂಗಳದಲ್ಲಿ ಬೆಳಸಿಕೊಂಡ ನಾಯಕತ್ವದ ಗುಣ ಅವರನ್ನು ರಾಜಕೀಯಕ್ಕೆ ಸೆಳೆದದ್ದು ಸಹಜ . 1968 ರಲ್ಲಿ ಮೈಸೂರೂ ಸೇರಿದ ನೈಋತ್ಯ ಪದವೀಧರ ಕ್ಷೇತ್ರದಿಂದ ಜನಸಂಘದ ರಾಜ್ಯ ಕಾರ್ಯದರ್ಶಿಯಾಗಿದ್ದ ಎ ಕೆ ಸುಬ್ಬಯ್ಯ ಸ್ಪರ್ಧಿಸಿ , ಗೆದ್ದು ಮೇಲ್ಮನೆ ಪ್ರವೇಶಿಸಿದರು. ಆ ಚುನಾವಣೆಯಲ್ಲಿ ಪ್ರಸಾದ್ – ಸುಬ್ಬಯ್ಯನವರಿಗೆ ಕೌಂಟಿಂಗ್ ಎಜೆಂಟ್ ಆಗಿದ್ದರು .
ಬೂಸಾ ಪ್ರಕರಣದ ಹಿನ್ನೆಲೆಯಲ್ಲಿ ದಲಿತ ಚಳವಳಿಗೆ ಪ್ರಸಾದ್ ಬಂದರೂ ಆರೆಸ್ಸೆಸ್ ನಂಟು ಇದ್ದೇ ಇತ್ತು. 1989 – ಆರೆಸ್ಸೆಸ್ ಸ್ಥಾಪಕ ಡಾ. ಹೆಡಗೇವಾರ ಅವರ ಜನ್ಮ ಶತಮಾನೋತ್ಸದ ಸಂಭ್ರಮ . ಆಗ ಕಾಂಗ್ರೆಸ್ಸಿನ ಸಂಸದರಾಗಿದ್ದರೂ ಶ್ರೀನಿವಾಸ ಪ್ರಸಾದ ಮೈಸೂರಿನ ಟೌನ್ ಹಾಲ್ ಮೈದಾನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಬಾಳಾಸಾಹೇಬ್ ದೇವರಸರೊಡನೆ ವೇದಿಕೆ ಹಂಚಿಕೊಂಡಿದ್ದರು .
ಜಾತೀಯತೆ , ಅಸ್ಪೃಶ್ಯತೆಯ ಬಗ್ಗೆ ಶ್ರೀನಿವಾಸ ಪ್ರಸಾದ್ ಅವರದ್ದು ಎಣೆಯಿಲ್ಲದ ತುಡಿತ . ಅವರಲ್ಲಿದ್ದ ಈ ತುಡಿತ ಮತ್ತು ಅವರಿಗಿದ್ದ ಅನುಭವದ ಆಳ – ಹಲವು ಸಲ ಅವರೊಂದಿಗೆ ತಾಸುಗಟ್ಟಲೆ ಮಾತಿಗೆ ಕೂರುವಂತೆ ಮಾಡಿತು . ‘ ಸಂಘ ಮಾತ್ರ ಹಿಂದುಗಳಲ್ಲಿ ಸಾಮರಸ್ಯ ತರಬಲ್ಲದು. ಆ ಶಕ್ತಿ ಇರೋದು ಸಂಘಕ್ಕೆ ಮಾತ್ರ. ಉಳಿದವರದ್ದು ಬರಿ ಮಾತಷ್ಟೆ. ಆದರೆ ಸಂಘದ್ದು ನಿಧಾನಗತಿ . ಹೀಗಾಗಿ ಅಸ್ಪ್ಬಶ್ಯತೆಯ ನೋವಿನಲ್ಲಿರುವ ದಲಿತರು ಈ ನಿಧಾನಗತಿಗೆ ಒಗ್ಗಲಾರರು , ಒಪ್ಪಲಾರರು . ನನ್ನ ತಕರಾರು ಇದೇ . ಎಲ್ಲರನ್ನು ಬೆಸೆಯುವ ಸಾಮರಸ್ಯದ ಕೆಲಸ symbolic ಆಗಿ ನೆಡೆದರೆ ಸಾಲದು . ‘ ಎಲೆ ತುದಿಯ ಪಾಯಸ ‘ ಹೊಟ್ಟೆ ತುಂಬಿಸುವುದಿಲ್ಲ – ಪ್ರಸಾದ್ ಅವರು ವಿವರಿಸುವ ಬಗೆ ಕಣ್ಣಿಗೆ ಕಟ್ಟಿದಂತಿದೆ .
ವೆಂಕಟರಾಮು ಅವರು ಜೊತೆಗಿದ್ದರೆ ಶ್ರೀನಿವಾಸ್ ಪ್ರಸಾದ್ ಅವರಿಗೆ ಹಳೆಯ ಒಡನಾಟದ ನೆನಪುಗಳು ಒತ್ತರಿಸಿ ಭಾವುಕರಾಗುವುದೂ ಇತ್ತು . ಅದೊಂದು ದಿನ ಪ್ರಸಾದರು ಹಂಚಿಕೊಂಡ ನೆನಪು ಹೃದಯವನ್ನು ಕಲುಕಿತ್ತು .
1980 – ಶ್ರೀನಿವಾಸ್ ಪ್ರಸಾದ್ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು . ತಮ್ಮನ್ನು ಬೆಂಬಲಿಸಿದ ಚಾಮರಾಜನಗರ ಮೀಸಲು ಕ್ಷೇತ್ರದ ಜನತೆಗೆ ಕೃತಜ್ಞತೆ ತಿಳಿಸಲು ಪ್ರಸಾದ್ ಹಳ್ಳಿ – ಹಳ್ಳಿಗೆ ಸಂಚರಿಸುತ್ತಿದ್ದರು . ಅದೊಂದು ಹಳ್ಳಿಯಲ್ಲಿ ಇದ್ದದ್ದು ಎರಡೇ ಸಮುದಾಯದವರು . ಉಪ್ಪಾರರು ಮತ್ತು ದಲಿತರು . ಪ್ರಸಾದ್ ಆ ಹಳ್ಳಿಗೆ ಹೋದಾಗ ಊರ ಮುಖಂಡರದ್ದು ಒಂದೇ ಒತ್ತಾಯ .’ ಮುಂದಿನ ತಿಂಗಳಲ್ಲಿ ಬರುವ ಊರಮ್ಮನ ಜಾತ್ರೆಯಲ್ಲಿ ಕೆಂಡ ಹಾಯಬೇಕು . ಕಿರಿಕಿರಿ ಮಾಡುವ ಅರಣ್ಯ ಇಲಾಖೆಗೆ ಹೇಳಿ ಸೌದೆ ಕೊಡ್ಸಿ ‘. ಪ್ರಸಾದ್ ಸೌದೆಯ ವ್ಯವಸ್ಥೆಯನ್ನೂ ಮಾಡಿದರು , ಆ ದಿನ ಜಾತ್ರೆಗೂ ಹೋದರು. ನೋಡಿದರೆ ಕೆಂಡ ಹಾಯಲು ಎರಡೆರಡು ವ್ಯವಸ್ಥೆ. ಉಪ್ಪಾರರಿಗೆ ಒಂದು, ದಲಿತರಿಗೆ ಇನ್ನೊಂದು . ಶ್ರೀನಿವಾಸ್ ಪ್ರಸಾದ್ ಗೆ ತಡೆಯಲಾಗಲಿಲ್ಲ . ಊರ ಪ್ರಮುಖರನ್ನು ಮೆಲುದನಿಯಲ್ಲೇ ತರಾಟೆ ತೆಗೆದುಕೊಂಡರು. ಕೊನೆಗೆ ಊರ ಪ್ರಮುಖನೊಬ್ಬ ಸ್ಪಷ್ಟವಾಗಿ ಹೇಳಿದ – ‘ ನೀವ್ ಹೇಳಿದಂಗೆ ಒಂದೇ ತಾವ್ ಕೆಂಡ ಹಾಯಕ್ಕೆ ಆಗಲ್ಲ ಸ್ವಾಮಿ , ಕಾಲು ಸೋಕಿ ಬಿಟ್ಟರೆ ? ‘
ಇವರಿಗೆ ಹಾಯುವಾಗ ಕೆಂಡವೇ ಸೋಕುತ್ತಿಲ್ಲ ! ಆದರೆ ತನ್ನೂರಿನ ದಲಿತನ ಕಾಲು ಸೋಕುತ್ತದೆಂಬ ಭಯ !
ಅಸ್ಪೃಶ್ಯತೆಯ ಈ ಸಂಕೀರ್ಣತೆಯನ್ನು ಹಳ್ಳಿಗಾಡಿನ ಮುಗ್ಧರಿಗೆ ಮಾನಗಾಣಿಸುವುದು ಹೇಗೆ ?
ಜಯಲಕ್ಷ್ಮಿ ಪುರಂನ ಶ್ರೀನಿವಾಸ್ ಪ್ರಸಾದ್ ಅವರ ಮನೆ ‘ಭೀಮಸದನ’ . ಎರಡು ರಸ್ತೆಗಳಾಚೆ ರಾಘವೇಂದ್ರ ಸ್ವಾಮಿಗಳ ಮಠ . ಅದೊಂದು ದಿನ ಅಂದಿನ ಪೇಜಾವರ ಸ್ವಾಮೀಜಿ ಮಠದಲ್ಲಿ ತಂಗಿದ್ದರು . ಗೋಡೆಗೆ ಹಾಕಿದ – ಮಠದ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರ ಪಟ್ಟಿ – ನೋಡಿದ ಪೇಜಾವರ ಸ್ವಾಮೀಜಿ ‘ಇದ್ಯಾರು ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್ ? ‘ – ಎಂದು ಜೊತೆಗಿದ್ದವರನ್ನು ಕೇಳಿದರು . ‘ ಅವರು ಸಂಸದ ಶ್ರೀನಿವಾಸ್ ಪ್ರಸಾದ ಅವರ ಮನೆಯವರು . ಮಠಕ್ಕೆ ಆಗಾಗೆ ಬರುತ್ತಾರೆ . ಹತ್ತಿರದಲ್ಲೇ ಮನೆಯಿದೆ’. ‘ ಹತ್ತಿರದಲ್ಲೇ ಮನೆಯಿದ್ದರೆ ಹೋಗಿ ಶ್ರೀನಿವಾಸಪ್ರಸಾದರನ್ನು ನೋಡೋಣ ‘ ಎಂದು ಸ್ವಾಮೀಜಿ ಹೊರಟರು .
ಯಾವ ಪೂರ್ವ ಸೂಚನೆಯೂ ಇಲ್ಲದೆ ಮನೆಗೆ ಬಂದು ಅಸ್ಪ್ರಶ್ಯತೆ ತೊಲಗಬೇಕು ಎಂದು ಗಟ್ಟಿಯಾಗಿ ಪೇಜಾವರ ಸ್ವಾಮಿಗಳು ಹೇಳಿದ್ದು ಒಂದು ಸಣ್ಣ ಭರವಸೆ ಮೂಡಿಸಿತು . ಉಳಿದೆಲ್ಲ ಸ್ವಾಮೀಜಿಗಳೂ ಹೀಗೆ ಆದರೆ ಏನಾದರು ಸರಿ ಆಗಬಹುದೇನೊ? – ಎಂದು ಅನುಭವ ಬಿಚ್ಚಿಟ್ಟ ಪ್ರಸಾದ್ – ಇದನ್ನೆಲ್ಲ ಸಂಘವೇ ಮಾಡಬೇಕು ಎಂದು ಆಗ್ರಹದಿಂದ ಹೇಳಿದ್ದರು .
1959ರಲ್ಲಿ ಅಂದಿನ ರೈಲ್ವೆ ಸಚಿವ ಬಾಬು ಜಗಜೀವನ್ ರಾಮ್ ಅಶೋಕಪುರಂಗೆ ಬಂದು ಸಿದ್ಧಾರ್ಥ ವಸತಿ ಶಾಲೆಗೆ ಶಿಲಾನ್ಯಾಸ ನೆರವೇರಿಸಿದ್ದರು . ಅವತ್ತಿನ ಕಾರ್ಯಕ್ರಮದಲ್ಲಿ ವೇದಿಕೆಯ ಮುಂದೆ ನೆಲದ ಮೇಲೆ ಕೂತು ಭಾಷಣ ಕೇಳಿದ ಹುಡುಗ 20 ವರ್ಷದ ತರುವಾಯ ಸಂಸತ್ತು ಪ್ರವೇಶಿಸಿದ . ಬಾಬೂಜಿ ಜೊತೆಗೆ ಕಲಾಪದಲ್ಲಿ ಭಾಗವಹಿಸಿದ. ಇದು ಭಾರತದ ಜನತಂತ್ರದ ಹಿರಿಮೆ ! ಬಾಬಾಸಾಹೇಬರ ಸಂವಿಧಾನದ ಗರಿಮೆ !!
ಶ್ರೀನಿವಾಸ್ ಪ್ರಸಾದ್ ನಮ್ಮ ಜೊತೆಗಿಲ್ಲ , ಆದರೆ ಸಾಮರಸ್ಯದ ಕುರಿತಾದ ಅವರ ತುಡಿತ , ಅನುಭವದ ಮಾತುಗಳು ಸದಾ ದಾರಿದೀಪವಾಗಿರುತ್ತದೆ .