Subraya Bhat

06ಜುಲೈ 2018, ಬೆಂಗಳೂರು: ಹಿರಿಯ ಸ್ವಯಂಸೇವಕರಾದ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರವಹಿಸಿದ್ದ ಹಿರಿಯ ಜೀವಿ, ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಸುಬ್ರಾಯ ಭಟ್ ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮೂರ್ನಾಲ್ಕು ದಿನಗಳ ಹಿಂದೆ ತಮ್ಮ ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವಯಸ್ಸಿನ ಕಾರಣದಿಂದ ಶಸ್ತ್ರ ಚಿಕಿತ್ಸೆ ಮಾಡಲಾಗದೇ ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತು. ಇಂದು ಉಸಿರಾಟದ ತೊಂದರೆಯಿಂದಾಗಿ ನಮ್ಮನ್ನು ಅಗಲಿದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು.

Subraya Bhat
ಹೊಳೆಯುವ ಕಣ್ಣು, ಅಗಲವಾದ ಕಿವಿ, ಉದ್ದನೆಯ ಮೂಗು, ಬೆಳ್ಳನೆಯ ದಾಡಿ, ಸದಾ ಮುಗುಳ್ನಗೆ, ತೇಜಸ್ವಿ ಮುಖ ಮಂದಾರ….

ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿರುವ ಯಾರಿಗಾದರು ಸದಾ ನೆನಪಿನಲ್ಲುಳಿಯುವ ವ್ಯಕ್ತಿತ್ವ ಅವರದ್ದು. ಅವರನ್ನು ಸುಬ್ರಾಯ  ಭಟ್ಟರು ಎಂದರೆ ತಿಳಿದವರಿಗೆ ಮಾತ್ರವೇ  ಗೊತ್ತು….. ’ಅಜ್ಜ’ ಎಂದರೇ ಎಲ್ಲರಿಗೂ ಚಿರಪರಿಚಿತ.
ಅಜ್ಜನನ್ನು ಇಷ್ಟು ಜನಜನಿತವಾಗಿ ಮಾಡಿದ ವಿಷಯ ಯಾವುದು ಎಂದು ಆಲೋಚಿಸಿದರೆ ಥಟ್ಟನೆ ಹೊಳೆಯುವುದು ಸದಾ ಚಟುವಟಿಕೆಯಿಂದ ಕೂಡಿದ ಅವರ ದಿನಚರಿ. ೧೮ ವರ್ಷದ ಯುವಕನನ್ನೂ ನಾಚಿಸುವಂಥಹ ಓಡಾಟ. ಸಂಘದ ಯಾವುದೇ ಕಾರ್ಯಕ್ರಮಕ್ಕೆ ತಡವಾಗಿ ಬಂದ ಒಂದೇ ಒಂದೂ ಉದಾಹರಣೆ ಇಲ್ಲ. ಸಂಘದ ಸಾಂಘಿಕ್‍ಗೆ  ಎಲ್ಲರಿಗಿಂತಲೂ ಮೊದಲು ಬರುತ್ತಿದ್ದುದು ಅವರೇ. ಯಾರ ಮೇಲು ಅವಲಂಬಿತರಾಗದೇ ಮನೆಯಿಂದ ಹೊರಟು ಆಟೋ ಹಿಡಿದುಕೊಂಡು ಸಮಯಕ್ಕೆ ಮುಂಚೆಯೇ ಸಂಘಸ್ಥಾನ ತಲುಪುತ್ತಿದ್ದ ಅವರ ಮನಸ್ಸಿನಲ್ಲಿದ್ದ ಶ್ರದ್ಧೆಯನ್ನು ಬರಿಯ ಪದಗಳಲಿ ಹಿಡಿದಿಡಲು ಸಾಧ್ಯವಿಲ್ಲ.

ಯುವಕನಾಗಿದ್ದಾಗ ಬ್ರಿಟಿಷರಿಂದ ತಿಂದ ಬೂಟಿನ ಏಟು, ಗುಂಡಿನ ಏಟು, ಚಿತ್ರ ಹಿಂಸೆಯ ನೋವು, ತುರ್ತುಪರಿಸ್ಥಿರಿಯಲ್ಲಿ ಪೋಲೀಸರಿಂದ ತಿಂದ ಏಟುಗಳು ಅವರನ್ನು ಎಂದೂ ಕುಗ್ಗಿಸಲಿಲ್ಲ ಬದಲಿಗೆ ಆ ಎಲ್ಲದರಿಂದ ಅವರು ಮತ್ತಷ್ಟು ಬಲಿಷ್ಠಗೊಂಡಿದ್ದರು. ೯೦ರ ಇಳಿವಯಸ್ಸಿನಲ್ಲಿಯೂ ವಯೋಸಹಜ ನೋವು ಸಂಕಷ್ಟಗಳು ಅವರನ್ನು ಸಂಘ ಕಾರ್ಯದಿಂದ ವಿಮುಖಗೊಳಿಸಲಾಗಲಿಲ್ಲ.

ಅವರನ್ನು ಭೇಟಿಯಾದಾಗಲೆಲ್ಲ ಭಗತ್‍ಸಿಂಗ್‌ರವರ ತಾಯಿ ವಿದ್ಯಾವತಿಯವರ ತಂಡದ ಸದಸ್ಯರಾಗಿದ್ದಾಗಿನ ಘಟನೆಗಳನ್ನು ನೆನೆದು ನಮಗೂ ಸ್ಪೂರ್ತಿ ತುಂಬುವ ಚೈತನ್ಯಶೀಲರಾಗಿದ್ದರು. ಗುರೂಜಿಯವರ ಹೆಸರನ್ನು ಎಂದೂ ಪರಮಪೂಜನೀಯ ಎಂದು ಸಂಭೋಧಿಸದೇ ಬಳಸುತ್ತಿರಲಿಲ್ಲ. ಪ.ಪೂ ಗುರೂಜಿಯವರೊಂದಿಗಿನ ಅವರ ಒಡನಾಟ ಅವರನ್ನು ೯೦ರ ವರಸ್ಸಿನಲ್ಲಿ ಸ್ಪೂರ್ತಿಶೀಲರನ್ನಾಗಿ ಮಾಡಿತ್ತು ಎನಿಸುತ್ತದೆ.

ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಇಚ್ಛಿಸುತ್ತಿದ್ದ ಅಜ್ಜ ಮೊನ್ನೆಯಷ್ಟೇ ಅಡುಗೆಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿದ್ದರು. ತಮ್ಮ ಕಾಲಿನ ಮೂಳೆ ಮುರಿದಿದೆ ಎಂದು ಅರಿತಿದ್ದರೂ ಕೂಡ ತಮ್ಮನ್ನು ಭೇಟಿಯಾಗಲು ಬಂದ ಕಾರ್ಯಕರ್ತರೊಡನೆ ಅವರು ಮಾತನಾಡಿದ್ದು ಮುಂದೆ ಬರಲಿರುವ ಶ್ರೀಗುರುಪೂಜಾ ಉತ್ಸವದ  ತಯಾರಿಯ ಕುರಿತಾಗಿ. ಇಂದು ಬೆಳಿಗ್ಗೆ ನಮ್ಮನ್ನು ಅಗಲುವವರೆಗೂ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದವರು ಅಜ್ಜ. ಅವರ ಜೀವನ ಇಂದಿನ ಪೀಳಿಗೆಯ ತರುಣರೆಲ್ಲರಿಗೂ ಅತ್ಯಂತ ಪ್ರೇರಣಾದಾಯಿ ಮತ್ತು ಅವರ ಒಡನಾಡಿ ಕಾರ್ಯಕರ್ತರೆಲ್ಲರ ಮನಸ್ಸಿನಲ್ಲಿ ಅವರು ಚಿರಸ್ಥಾಯಿ.

Leave a Reply

Your email address will not be published.

This site uses Akismet to reduce spam. Learn how your comment data is processed.