ವಿನಾಯಕ ಯದುರಾಜ ಗಾಂವಕರ, ಅಂತರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ಹಾಗೂ ನಾಗರಿಕ ಸೇವಾ ಪರೀಕ್ಷೆಗಳ ತರಬೇತುದಾರರು

ದಶಕಗಳಿಂದ ಸುದ್ದಿಯಲ್ಲಿದ್ದ ಸುಡಾನ್ ಈ ಬಾರಿಯೂ ಅಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದೆ. ಅಲ್ಲಿನ ಸೇನೆ ಹಾಗೂ ಆರ್.ಎಸ್.ಎಫ್.(Reserved Support Force) ಎಂಬ ಹೆಸರಿನ ಪ್ಯಾರಾ ಮಿಲಿಟರಿ ಪಡೆಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ಇದೊಂದು ವಿಲಕ್ಷಣ ವಿದ್ಯಮಾನ! ಒಂದು ದೇಶದ ರಕ್ಷಣೆಯ ಕಾಯಕದಲ್ಲಿ ನಿರತವಾಗಬೇಕಾಗಿದ್ದ ಸಶಸ್ತ್ರ ಪಡೆಯ ಎರಡು ವಿಭಾಗಗಳು ತಾವೇ ಯುದ್ಧದಲ್ಲಿ ತೊಡಗುವುದು ತೀರ ಅಸಹಜ. ಆದರೆ ಇಂತಹ ಒಂದು ವಿದ್ಯಮಾನಕ್ಕೆ ಸುಡಾನ್ ದೇಶ ಸಾಕ್ಷಿಯಾಗಬೇಕಾಗಿದೆ. ಈ ಒಂದು ಅಂತರ್ ಯುದ್ಧದಲ್ಲಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿದ್ದಾರೆ. ಸುಡಾನ್ ನಲ್ಲಿನ ಈ ಬಿಕ್ಕಟ್ಟು ಭಾರತ ಸರ್ಕಾರ ತಕ್ಷಣ ಕಾರ್ಯ ಪ್ರವೃತ್ತವಾಗುವಂತೆ ಮಾಡಿತು. ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆಯನ್ನು ಕರೆದರು. ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೆನಿಯೋ ಗುಟೆರಾಸ್ ರೊಡನೆ ಸುಡಾನ್ ನ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು.

ಅತ್ತ ಭಾರತ ‘ಆಪರೇಷನ್ ಕಾವೇರಿ’ ಎಂಬ ಕಾರ್ಯಚರಣೆಯನ್ನು ಕೈಗೊಂಡಿದೆ. ಭಾರತೀಯ ನೌಕಾಪಡೆಯ ಹಡಗುಗಳಾದ ‘ಐ.ಎನ್.ಎಸ್. ಸುಮೇಧಾ’, ‘ ಐ.ಎನ್.ಎಸ್. ತೇಗ್’ ಹಾಗೂ ‘ಐ.ಎನ್.ಎಸ್. ತರ್ಕಶ್’ಗಳು ಸುಡಾನ್ ನ ಕರಾವಳಿಯ ಕಡೆಗೆ ಧಾವಿಸಿ ಅಲ್ಲಿನ ಬಂದರಿನಿಂದ ಭಾರತೀಯರನ್ನು ರಕ್ಷಿಸಿದವು. ಇತ್ತ ಭಾರತೀಯ ವಾಯುಪಡೆಯ ‘C – 130J’ ಹೆಸರಿನ ಎರಡು ದೈತ್ಯ ವಿಮಾನಗಳು ಸುಡಾನ್ ನ ನೆರೆಯ ದೇಶವಾದ ಸೌದಿ ಅರೇಬಿಯಾದ ವಾಯುನೆಲೆಯಲ್ಲಿ ಭಾರತೀಯ ಯುದ್ಧ ನೌಕೆಗಳು ರಕ್ಷಿಸಿದ ಭಾರತೀಯರನ್ನು ಮರಳಿ ಭಾರತಕ್ಕೆ ತಂದಿವೆ. ಭಾರತ ಹೀಗೆ ತಕ್ಷಣವೇ ಕಾರ್ಯ ಪ್ರವೃತ್ತವಾಗಲು ಎರಡು ಮುಖ್ಯ ಕಾರಣಗಳಿವೆ.

(1). ಸುಡಾನ್ ನಲ್ಲಿ ಸಿಲುಕಿರುವ ಸುಮಾರು 4000 ಭಾರತೀಯರನ್ನು ರಕ್ಷಿಸುವುದು. ಅವರಲ್ಲಿ ಕರ್ನಾಟಕದ ‘ಹಕ್ಕಿ-ಪಿಕ್ಕಿ’ ಜನಾಂಗದ ಸುಮಾರು 30ಕ್ಕೂ ಹೆಚ್ಚು ಜನರಿರುವುದನ್ನು ನಾವಿಲ್ಲಿ ಗಮನಿಸಬಹುದು.

(2).ಭಾರತ ಯುರೋಪಿನ ದೇಶಗಳೊಂದಿಗೆ ವ್ಯಾಪಾರ ವಹಿವಾಟನ್ನು ಕೆಂಪು ಸಮುದ್ರದ ಮೂಲಕವೇ ನಡೆಸುವುದರಿಂದ ಸುಡಾನ್ ನ ಕರಾವಳಿಯ ಸನಿಹದಿಂದಲೇ ಭಾರತದ ವಾಣಿಜ್ಯ ಹಡಗುಗಳು ಹಾದು ಹೋಗುತ್ತವೆ. ಹಾಗಾಗಿ ಸುಡಾನ್ ನಲ್ಲಿನ ಅರಾಜಕತೆ, ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗಬಹುದೆಂಬ ಆತಂಕ.

ಸುಡಾನ್ ದೇಶದ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಆ ದೇಶದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ ಸುಡಾನ್ ಗೆ ಅಭಿವೃದ್ಧಿ ಇನ್ನೂ ಗಗನ ಕುಸುಮ. 1956 ರಲ್ಲಿ ಸುಡಾನ್ ಸ್ವತಂತ್ರ ವಾಗುವ ಮೊದಲು ಈಜಿಪ್ಟ್ ಹಾಗೂ ಬ್ರಿಟನ್ ದೇಶಗಳೆರಡೂ ಇದನ್ನು ಆಳುತ್ತಿದ್ದವು. ಸ್ವತಂತ್ರವಾದ ನಂತರ ಸುಡಾನ್ ಅನೇಕ ಮಿಲಿಟರಿ ಕ್ಷಿಪ್ರಕ್ರಾಂತಿಗಳಿಗೆ ಸಾಕ್ಷಿಯಾಯಿತು, ಸುದೀರ್ಘ ಅಂತರ್ಯುದ್ಧವನ್ನೂ ಕಾಣಬೇಕಾಯಿತು. ಅಂದಿನ ಸುಡಾನ್ ನ ಉತ್ತರ ಭಾಗದಲ್ಲಿ ಮುಸ್ಲಿಂ ಬಾಹುಳ್ಯವಿತ್ತು, ದಕ್ಷಿಣ ಭಾಗ ( ಇಂದು ಸ್ವತಂತ್ರವಾಗಿದೆ ) ದಲ್ಲಿ ಕ್ರಿಶ್ಚಿಯನ್ನರು ಹಾಗೂ ಆಫ್ರಿಕಾದ ಇತರ ಬುಡಕಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅಂದಿನ ಸುಡಾನ್ ಸರ್ಕಾರ ‘ಇಸ್ಲಾಮಿಕರಣ’ವನ್ನು ಕೈಗೊಳ್ಳಲು ಯತ್ನಿಸಿತು, ಇದನ್ನು ಅಂದಿನ ಸುಡಾನ್ ನ ದಕ್ಷಿಣ ಭಾಗದ ಜನರು ವಿರೋಧಿಸಿದರು. ಇದು ಅಂತರ್ಯುದ್ಧಕ್ಕೆ ಕಾರಣವಾಗಿ ಅಪಾರ ಸಾವು ನೋವುಗಳಿಗೆ ಸುಡಾನ್ ಸಾಕ್ಷಿಯಾಯಿತು. 1972ರಲ್ಲಿ ಪ್ರಾರಂಭವಾದ ಅಂತರ್ ಯುದ್ಧ 2005ರವರೆಗೂ ಮುಂದುವರೆಯಿತು. 2005 ರಲ್ಲಿ ನಡೆದ ಶಾಂತಿ ಒಪ್ಪಂದದಂತೆ 2011 ರಲ್ಲಿ ಜನಮತಗಣನೆ ನಡೆದು ಸುಡಾನ್ ನ ದಕ್ಷಿಣ ಭಾಗ ಸುಡಾನ್ ದೇಶದಿಂದ ಪ್ರತ್ಯೇಕಗೊಂಡು ‘ ದಕ್ಷಿಣ ಸುಡಾನ್’ ಎಂಬ ಹೊಸ ದೇಶದ ಉದಯವಾಯಿತು.

ಸುಡಾನ್ ದೇಶವನ್ನು 1989 ರಿಂದ 2019 ರವರೆಗೆ ಆಳಿದ್ದು ಅಲ್ಲಿನ ಸರ್ವಾಧಿಕಾರಿ ಓಮರ್ ಅಲ್-ಬಶೀರ್. ಸುಮಾರು ಐದು ವರ್ಷಗಳ ಕಾಲ ಈತನ ಆಡಳಿತದಲ್ಲಿ ಸುಡಾನ್ ಓಸಾಮ ಬಿನ್ ಲಾಡೆನ್ ಗೆ ಆಶ್ರಯವನ್ನೂ ನೀಡಿತ್ತು. ಸುಡಾನ್ ನ ದಕ್ಷಿಣ ಪ್ರಾಂತ್ಯ ‘ಢರ್-ಫರ್’ ನ ಜನರು ಸುಡಾನ್ ಸರ್ಕಾರದ ವಿರುದ್ಧ ದಂಗೆಯೆದ್ದಾಗ ಜನರನ್ನು ಮಟ್ಟ ಹಾಕಲು ಆರ್‌.ಎಸ್‌.ಎಫ್. ಎಂಬ ಪ್ಯಾರಾ ಮಿಲಿಟರಿ ಪಡೆಯನ್ನು ಅಲ್-ಬಶೀರ್ ಸಿದ್ಧಪಡಿಸಿದ. ಅಂದಿನ ದಿನಗಳಲ್ಲಿ ಆರ್‌.ಎಸ್‌.ಎಫ್. ‘ಡರ್-ಫರ್’ ಪ್ರಾಂತ್ಯ ಜನರ ದಂಗೆಯನ್ನು ತೀವ್ರವಾಗಿ ಹತ್ತಿಕ್ಕಿ , ಅವರ ಮೇಲೆ ಆಕ್ರಮಣ, ಅತ್ಯಾಚಾರಗಳನ್ನು ಎಸಗಿತು.

2019 ರಲ್ಲಿ ಸುಡಾನ್ ನಲ್ಲಿ ಪ್ರಜಾಪ್ರಭುತ್ವದ ಪರ ಅಲೆ ಪ್ರಾರಂಭವಾಯಿತು. ಓಮರ್ ಅಲ್-ಬಶೀರ್ ನ ಆಡಳಿತವನ್ನು ವಿರೋಧಿಸಿ ಜನರು ಪ್ರತಿಭಟಿಸಿದಾಗ ಸೇನೆ ಹಾಗೂ ಆರ್‌.ಎಸ್‌.ಎಫ್. ಗಳೆರಡು ಸೇರಿ ಕ್ಷಿಪ್ರ ಕ್ರಾಂತಿ ನಡೆಸಿ ಅಲ್-ಬಶೀರ್ ಅಧಿಕಾರವನ್ನು ಕಳೆದುಕೊಂಡ. ಜನರು ಪ್ರಜಾಪ್ರಭುತ್ವವೇ ಬೇಕೆಂದು ಹಠ ಹಿಡಿದಾಗ ಅಂದು ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂತಾದರೂ ಅಲ್ಪಾಯುಷಿಯಾಗಿತ್ತು. 2021 ರಲ್ಲಿ ಇನ್ನೊಮ್ಮೆ ಕ್ಷಿಪ್ರಕ್ರಾಂತಿ ನಡೆದು ಸೇನೆ ಹಾಗೂ ಆರ್.ಎಸ್.ಎಫ್.ಗಳೆರಡೂ ಸೇರಿ ಮಧ್ಯಂತರ ಸರ್ಕಾರವನ್ನು ಕಿತ್ತೊಗೆದವು. ಆದರೆ ಇಂದು ಅದೇ ಸೇನೆ ಹಾಗೂ ಆರ್‌.ಎಸ್‌.ಎಫ್.ಗಳು ಪರಸ್ಪರ ಸೆಣೆಸುತ್ತಿವೆ.

ಅಲ್ಲಿನ ಸೇನೆ ನಾಗರಿಕ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಸಿದ್ಧವಾಗಿದೆ. ಆದರೆ ಅಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರುವುದನ್ನು ಆರ್.ಎಸ್.ಎಫ್. ವಿರೋಧಿಸುತ್ತಿದೆ. ಆರ್. ಎಸ್. ಎಫ್. ನಡೆಸಿರುವ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಅಂತರಾಷ್ಟ್ರೀಯ ಮಟ್ಟದ ಒತ್ತಡಗಳಿವೆ. ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಆರ್‌.ಎಸ್‌.ಎಫ್. ನಡೆಸಿರುವ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಯುವುದಂತೂ ನಿಶ್ಚಿತ. ಇದೇ ಕಾರಣಕ್ಕೆ ನಾಗರಿಕ ಸರ್ಕಾರವನ್ನು ಆರ್.ಎಸ್.ಎಫ್. ವಿರೋಧಿಸಿ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗಿದೆ. ದೇಶದ ಹೆಚ್ಚಿನ ಭಾಗ ಸೇನೆಯ ಹಿಡಿತದಲ್ಲಿದ್ದರೆ ಕೆಲವು ಭಾಗ ಆರ್.ಎಸ್.ಎಫ್.ನ ಹಿಡಿತದಲ್ಲಿದೆ.

ಇಲ್ಲಿನ ಕಲಹಕ್ಕೆ ಮಿಲಿಟರಿ ದೈತ್ಯಗಳಾದ ಅಮೆರಿಕ ಹಾಗೂ ರಷ್ಯಾಗಳೂ ಕಾರಣ. ಎರಡೂ ದೇಶಗಳು ಸುಡಾನ್ ನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ತನ್ನ ಕೈಗೊಂಬೆ ಸರ್ಕಾರವನ್ನು ತರಲು ಅಮೆರಿಕ ಪ್ರಯತ್ನ ನಡೆಸುತ್ತಲೇ ಇದೆ. ಸುಡಾನ್ ನ ಕರಾವಳಿಯಲ್ಲಿ ತನ್ನ ನೌಕಾ ನೆಲೆಯನ್ನು ತೆರೆಯಲು ರಷ್ಯಾ ಪ್ರಯತ್ನಿಸಿ ವಿಫಲವಾಗಿತ್ತು. ಇಲ್ಲಿನ ಸೇನಾ ಕಮಾಂಡರ್ ಗಳ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿರುವ ರಷ್ಯಾ ಇಲ್ಲಿನ ಅಪಾರ ಚಿನ್ನದ ಅದಿರನ್ನು ಲೂಟಿಗೈದಿದೆ ಎಂಬ ಆರೋಪಗಳೂ ಇವೆ. ಈಗ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಸುಡಾನ್ ನ ಸೇನೆಗೆ ಅಮೆರಿಕ ಬೆಂಬಲ ನೀಡುತ್ತಿದ್ದರೆ, ‘ಆರ್.ಎಸ್.ಎಫ್’ ಗೆ ರಷ್ಯಾ ದ ಬೆಂಬಲವಿದೆ ಎಂಬ ವದಂತಿಗಳೂ ಇವೆ.

ಏನೇ ಇರಲಿ, ಸುಡಾನ್ ನಲ್ಲಿ ಸಿಲುಕಿರುವ ಭಾರತೀಯರೆಲ್ಲರೂ ಸುರಕ್ಷಿತವಾಗಿ ಮರಳಲಿ ಹಾಗೂ ಇಲ್ಲಿನ ಅಂತರ್ಯುದ್ಧ ಶೀಘ್ರವೇ ಕೊನೆಗೊಳ್ಳಲಿ ಎಂದು ನಾವೆಲ್ಲರೂ ಆಶಿಸೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.