ಜಪಾನಿ ಭಾಷೆಯಲ್ಲಿ ಸುಂದೋಕು(Tsundoku) ಎಂಬ ಪದ ಬಳಕೆ ಇದೆಯಂತೆ. ಪುಸ್ತಕಗಳನ್ನು ರಾಶಿ ರಾಶಿ ಕೊಂಡು ಪೇರಿಸಿಟ್ಟುಕೊಂಡು ಯಾವುದನ್ನೂ ಓದದ ಅಭ್ಯಾಸಕ್ಕೆ ಸುಂದೋಕು ಎಂಬ ಹೆಸರು. ಹಾಗೆ ಮಾರುಕಟ್ಟೆಗೆ ಬರುವ ಎಲ್ಲಾ ಪುಸ್ತಕಗಳು ಒಂದೆಡೆಯಾದರೆ ಅವುಗಳಲ್ಲಿ ಓದಲೇಬೇಕಾದ ಪುಸ್ತಕ ಯಾವುದು? ಓದಿ ತಿಳಿದುಕೊಳ್ಳಲು ಯಾವುದರಿಂದ ಆರಂಭಿಸಬೇಕು? ಎಂಥಹ ಪುಸ್ತಕ ನನಗಿಷ್ಟವಾಗಬಹುದು ಎಂದು ತಿಳಿಸಲು ಮಾರ್ಗೋಪಾಯಗಳಿವೆಯೇ?…. ಹೀಗೆ ಪ್ರಶ್ನೆಯ ಸುರಿಮಳೆಯೇ ಆದೀತು. ಸುಕೃತಿ ಯವರ ಪುಸ್ತಕ ಪರಿಚಯದ ಕೆಲಸದ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಲಕ್ಷಾಂತರ ಪುಸ್ತಕಗಳಿವೆ. ನೂರಾರು ಪುಸ್ತಕಗಳು ಹೊಸದಾಗಿ ಪ್ರಕಾಶವಾಗುತ್ತಿರುತ್ತವೆ. ಪುಸ್ತಕ ಓದಬೇಕು ಎಂಬ ಹಂಬಲವಿದೆಯಾದರೂ ಪುಸ್ತಕಗಳ ರಾಶಿಯಲ್ಲಿ ಉತ್ತಮ ಪುಸ್ತಕ (ಸುಕೃತಿ) ಯಾವುದು ಎಂಬುದೇ ಅನೇಕರ ಪ್ರಶ್ನೆ. ಎಲ್ಲಾ ಪುಸ್ತಕವನ್ನು ಒಮ್ಮೆ ತಿರುವು ಹಾಕಿ ನಿರ್ಣಯ ಮಾಡಲು ಸಮಯವೂ ಇಲ್ಲ ಅಸಾಧ್ಯವೇ ಸರಿ. ಈ ಸಮಸ್ಯೆಗೆ ಉತ್ತರ ರೂಪದಲ್ಲಿ ‘ಸುಕೃತಿ’ ಪ್ರಯತ್ನ ಮಾಡುತ್ತಲಿದೆ. ‘ಸುಕೃತಿ’ಯು ಕನ್ನಡ ರಾಜ್ಯೋತ್ಸವ ನಿಮಿತ್ತ ನವೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಕೆಲವು ಪುಸ್ತಕದ ಪರಿಚಯ ವಿಡಿಯೋಗಳನ್ನು ಪ್ರಕಟಿಸುತ್ತ, ‘ಕನ್ನಡ ಸಾಹಿತ್ಯದ ತೇರ’ನ್ನು ಎಳೆಯುತ್ತಿದೆ. ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ ಎಂಬ ಉದ್ದೇಶದಿಂದ ಆರಂಭವಾದ ಈ ಪುಸ್ತಕ ಪರಿಚಯದ ಕೆಲಸ ಈಗಾಗಲೇ ಸಾವಿರಾರು ಜನರನ್ನು ತಲುಪಿದೆ. ನವೆಂಬರ್ ತಿಂಗಳಿನಲ್ಲಿ ೬೦ಕ್ಕೂ ಹೆಚ್ಚು ಪುಸ್ತಕಗಳ ಪರಿಚಯ ಪ್ರಕಟಗೊಂಡಿವೆ. ಅಲ್ಲದೆ ಈ ವರ್ಷ ಪರಿಚಯ ಸರಣಿ ಆರಂಭವಾದಾಗಿನಿಂದ ೧೦೦ಕ್ಕೂ ಹೆಚ್ಚು ವಿಡಿಯೋ ಲಭ್ಯವಿದೆ.

ನವೆಂಬರ್ ತಿಂಗಳ ಪ್ರತಿ ದಿನವೂ ಕನಿಷ್ಠ ಎರಡು ಕನ್ನಡ ಪುಸ್ತಕಗಳ ಪರಿಚಯದ ವಿಡಿಯೋ ಸುಕೃತಿ ತನ್ನ ಫೇಸ್ಬುಕ್ (https://www.facebook.com/Sukruthi-Pustaka-Parichaya-100200858329401/) ಹಾಗೂ ಯೂಟ್ಯೂಬ್(https://www.youtube.com/channel/UCnGmEgIenhA8R8vBK43jqKA) ವಾಹಿನಿಗಳಲ್ಲಿ ಪ್ರಕಟಿಸಿತು. ಅಲ್ಲದೇ ಪ್ರತಿದಿನವೂ ಹೊಸ ಮುಖಗಳು ಪುಸ್ತಕ ಪರಿಚಯ ಮಾಡುತ್ತಿದ್ದರು.

ಸುಕೃತಿ ವಾಹಿನಿಯಲ್ಲಿ ಪರಿಚಯವಾದ ಸಾಕಷ್ಟು ಪುಸ್ತಕಗಳೂ ಅಪರೂಪದ ಕೃತಿಗಳೇ. ನೂರಾರು ಪುಸ್ತಕಗಳು ಪ್ರಕಟವಾಗುತ್ತಿರುವಾಗ, ಆ ಪುಸ್ತಕಗಳ ಪರಿಚಯ, ಲೋಕಾರ್ಪಣೆಯ ಸಮಯದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ.

ಪುಸ್ತಕ ಲೋಕಾರ್ಪಣೆಯ ದಿನ ಅದನ್ನು ಓದಿದ ಮಹನೀಯರು ಪುಸ್ತಕದ ಬಗ್ಗೆ, ಅದರಲ್ಲಿನ ಹೂರಣವನ್ನು ಉಣಬಡಿಸುತ್ತಾರೆ. ಇನ್ನು ಬಿಡುಗಡೆಯಾಗಿ ಕೆಲ ವಾರಗಳಲ್ಲಿ ಭಾನುವಾರದ ವಿರಾಮದ ಓದಿಗೆ ಪತ್ರಿಕೆಯ ಪುರವಣಿಯಲ್ಲಿ ೨೦೦ ಶಬ್ದದ ಒಳಗಿನ ಪರಿಚಯವೂ ಆಗುತ್ತದೆ. ಕೆಲ ವಾರ ಪುಸ್ತಕ ಅಂಗಡಿಯಲ್ಲಿ ಟಾಪ್ ಟೆನ್ ಪುಸ್ತಕಗಳು ಎಂದು ಜನರು ಆಸಕ್ತಿಯಿಂದ ಕೊಳ್ಳುವ ಪುಸ್ತಕಗಳನ್ನು ಪತ್ರಿಕೆಯವರು, ಪುಸ್ತಕ ಅಂಗಡಿಯ ಮಾಲೀಕರು ಪ್ರಕಟಿಸುತ್ತಾರಾದರೂ, ಕೃತಿಯೊಂದರ ಪ್ರತಿ ಅಂಗಡಿಯಲ್ಲಿ ಸಿಗದೇ ಇದ್ದರೂ ಒಂದು ಕಾಲದಲ್ಲಿ ಅದು ಜನರನ್ನು ಆಕರ್ಷಿಸಿದ್ದ ಕೃತಿಗಳ ಪರಿಚಯ ದೂರ ಉಳಿದುಬಿಡುತ್ತದೆ.

ಇದನ್ನು ಮನದಲ್ಲಿಟ್ಟುಕೊಂಡು, ಸು-ಕೃತಿಯನ್ನು ಪರಿಚಯಿಸುವ ಕನಸು ಹೊತ್ತ ಬೆಂಗಳೂರಿನ ಪ್ರಮೋದ್ ನವರತ್ನ ಒಬ್ಬ ಐಟಿ ಉದ್ಯೋಗಿ, ಪುಸ್ತಕಗಳ ಅಪಾರ ಓದುಗ. ಹಲವಾರು ವೇದಿಕೆಗಳಲ್ಲಿ ಪುಸ್ತಕ ಪರಿಚಯವನ್ನು ಪ್ರೇರೇಪಿಸುತ್ತಿದ್ದ ಅವರು ಕರೋನಾ ಲಾಕ್ ದೌನ್ ಸಮಯದಲ್ಲಿ ವಿಡಿಯೋ ಮೂಲಕ ಪುಸ್ತಕ ಪರಿಚಯ ಮಾಡುವಂತೆ ತಮ್ಮ ಸ್ನೇಹಿತರನ್ನು ಕೇಳಿಕೊಂಡರು. ಕೆಲ ಉತ್ತಮ ವಿಮರ್ಶಕರ ಪರಿಚಯದ ವಿಡಿಯೋ ಸುಕೃತಿ ವಾಹಿನಿಯಲ್ಲಿ ಇವೆಯಾದರೂ ಪ್ರಕಟವಾದ ಪ್ರತಿಯೊಬ್ಬರೂ ಖ್ಯಾತ ವಿಮರ್ಶಕರಲ್ಲದಿದ್ದರೂ ಘನ ಓದುಗರು.

ವಿಡಿಯೋ ಇಂದಿನ ಯುಗದ ಸಂವಹನ ಮಾಧ್ಯಮ, ಆದರೆ ಎಲ್ಲರಿಗೂ ವಿಡಿಯೋ ತಯಾರಿಸುವ ಕೌಶಲ್ಯವಿರುವುದಿಲ್ಲ. ಎಲ್ಲರೂ ಉತ್ತಮ ವಾಗ್ಮಿಗಳೂ ಅಲ್ಲ. ಆದರೆ ಸಾಮಾನ್ಯಾತಿ ಸಾಮಾನ್ಯರನ್ನು ಪರಿಚಯ ಮಾಡಿಕೊಂಡು ಪುಸ್ತಕದ ಪರಿಚಯ ಮಾಡಿಸಿರುವ ಪ್ರಮೋದ್, ಹೀಗೆನ್ನುತ್ತಾರೆ: “ಐದಾರು ನಿಮಿಷದಲ್ಲಿ ಒಂದು ಪುಸ್ತಕ ಪರಿಚಯ ಸಾಧ್ಯವಾದರೆ, ತನ್ಮೂಲಕ ಇನ್ನಷ್ಟು ಜನರು ಆ ಪುಸ್ತಕ ಓದಿದಂತೆ ಮಾಡಿದರೆ ಸುಕೃತಿ ಕೆಲಸ ಸಾಧಿಸಿದಂತೆ. ಓದುಗರು ಕಡಿಮೆಯಾಗುತ್ತಿರುವಾಗ, ಓದುವ ಹವ್ಯಾಸವನ್ನು, ಜ್ಞಾನವನ್ನು ಹಂಚಿಕೊಳ್ಳುವ ಪ್ರಯತ್ನವನ್ನು ರೂಢಿಸಬೇಕೆಂದು ಈ ಸಾಹಸಕ್ಕೆ ಕೈ ಹಾಕಿದ್ದು!” ಇಂದಿನ ಡಿಜಿಟಲ್ ಯುಗದಲ್ಲಿ ‘ಸುಕೃತಿ’ಯು ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಪ್ರಸಾರವನ್ನು ಮಾಡುತ್ತಾ ಬಂದಿದೆ.

ಕುಮಾರವ್ಯಾಸ, ಡಿ,ವಿ.ಜಿ, ಬೇಂದ್ರೆ, ಕುವೆಂಪು, ಕಾರಂತ, ಡಾ. ಎಸ್ ಎಲ್ ಭೈರಪ್ಪ ಕೃತಿಗಳಿಂದ ಪ್ರಾರಂಭಿಸಿ ಈಗಿನ ಕೆ.ಎಸ್. ನಾರಾಯಣಾಚಾರ್ಯ, ಎಚೆಸ್ವಿ, ಶತಾವಧಾನಿ ಗಣೇಶ್, ಎ. ಆರ್. ಮಣಿಕಾಂತ್ ರವೆರೆಗೆ ಹಲವಾರು ಕವಿ-ಲೇಖಕರ ಒಂದೆರಡು ಸಾಹಿತ್ಯವನ್ನು ಆರಿಸಿಕೊಂಡಿದ್ದಾರೆ. ಕನ್ನಡ ನಾಡಿನಲ್ಲಿ ಸುಪರಿಚಿತರಾದ ಡಾ. ಶತಾವಧಾನಿ ಆರ್. ಗಣೇಶ್, ಸಾಹಿತಿ ವಿಮರ್ಶಕ ಡಾ. ಜಿ.ಬಿ ಹರೀಶ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್, ಮಾಳವಿಕಾ ಅವಿನಾಶ್, ಪ್ರಾಧ್ಯಾಪಕರಾದ ಡಾ. ಅಜಕ್ಕಳ ಗಿರೀಶ ಭಟ್, ಲೇಖಕರಾದ ಮಂಜುನಾಥ ಅಜ್ಜಂಪುರ ಮುಂತಾದವರಿಂದ ಮೊದಲ್ಗೊಂಡು ಉದಯೋನ್ಮುಖ ಸಾಹಿತ್ಯ ಪ್ರೇಮಿಗಳೂ ಮಾಡಿರುವ ಪುಸ್ತಕ ಪರಿಚಯ ಅವರ ವಾಹಿನಿಯಲ್ಲಿ ಕಾಣಸಿಗುತ್ತವೆ.

ನವೆಂಬರ್ ತಿಂಗಳಿನಲ್ಲಿ ಕಾನೂರು ಹೆಗ್ಗಡತಿ, ಮೈಸೂರು ಮಲ್ಲಿಗೆ, ತಬ್ಬಲಿಯು ನೀನಾದೆ ಮಗನೆ, ದೇವರು, ಹಸುರು ಹೊನ್ನು, ರಾಮಾಯಣ ದರ್ಶನಂ ಎಂಬ ಪ್ರಸಿದ್ಧ ಕೃತಿಗಳೂ ಅಲ್ಲದೆ, ಬಿಡಿಮುತ್ತು, ಕಾರಡಗಿ ಮಹಾಲ್, ನಾಗರಿಕ, ರಾಜಾವಳಿ ಕಥಾಸಾರ, ನಿರ್ಭಯಾಗ್ರಫಿ ಸೇರಿದಂತೆ ಹೆಚ್ಚು ಪರಿಚಯವಿಲ್ಲದ ಕೃತಿಗಳು ಇಲ್ಲಿ ಪರಿಚಯವಾಗಿವೆ.

ಪುಸ್ತಕದಿಂದ ಮಸ್ತಕ ಬೆಳಗಬೇಕು. ಋತಂ ಚ ಸ್ವಾಧ್ಯಾಯ ಪ್ರವಚನೇಚ। ಸತ್ಯಂ ಚ ಸ್ವಾಧ್ಯಾಯ ಪ್ರವಚನೇಚ।। ಎಂಬ ಸನಾತನ ಧರ್ಮದ ಜ್ಞಾನದಂತೆ, ನಿರಂತರ ಅಧ್ಯಯನ ನಮ್ಮೆಲ್ಲರಿಗೂ ಅಗತ್ಯ. ಸುಕೃತಿಯ ಈ ಪ್ರಯತ್ನದಿಂದ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳೂವುದರ ಜೊತೆಗೆ ಮತ್ತೊಬ್ಬರಿಗೂ ಆ ಗೀಳು ಹತ್ತಿಸಬಹುದಾಗಿದೆ. ಒಂದು ಪುಸ್ತಕದ ಓದು ಮತ್ತೊಂದಿಷ್ಟು ಹೊಸ ಪುಸ್ತಕಗಳನ್ನು ಓದಿಸುವಂತೆ ಮಾಡಲಿ. ಈ ವಿಡಿಯೋ ಪರಿಚಯದ ಮೂಲಕ, ಕೃತಿಯ ಸ್ವರೂಪದ ಸೂಕ್ಮತೆಯನ್ನು ಬಿತ್ತುವಂತೆ ಆಗಲಿ ಎಂದು ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಸುಕೃತಿಯ ಸಮಾರೋಪದ ವಿಡಿಯೋ ಸಂದೇಶದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

“ಸುಕೃತಿ” ಫೇಸ್‌ಬುಕ್‌ ಪುಟದಲ್ಲಿ ಪ್ರಸಾರವಾಗುತ್ತಿರುವ ಪುಸ್ತಕ ಪರಿಚಯ ಸರಣಿಯು ಪುಸ್ತಕ ಪ್ರೇಮಿಗಳು ಮತ್ತು ಸಾಹಿತ್ಯಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಾಡಿನ ಗಣ್ಯರು, ಸಾಹಿತಿಗಳು, ಪುಸ್ತಕ ಪ್ರಿಯ ಯುವ ಮನಸ್ಸುಗಳನ್ನು ಒಂದೆಡೆ ಕಲೆಹಾಕಿ ಕನ್ನಡದ ಅಪರೂಪದ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಕನ್ನಡಕ್ಕೂ, ಪುಸ್ತಕಕ್ಕೂ ಧನಾತ್ಮಕ ಕೊಡುಗೆಯನ್ನು ನೀಡಿದೆ.‌ ಕನ್ನಡಿಗರು ಮರೆತಿರಬಹುದಾದ ಮತ್ತು ಎಂದಿಗೂ ಮರೆಯಬಾರದ ಪುಸ್ತಕಗಳ ಆಯ್ಕೆ ಮಾಡಿಕೊಂಡಿರುವುದು ಮಹತ್ವದ ವಿಷಯ ಎಂದು ಆರೆಸ್ಸೆಸ್, ಕರ್ನಾಟಕದ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ್ ಅಭಿಪ್ರಾಯಪಟ್ಟಿದ್ದಾರೆ. ಸುಕೃತಿ ತಂಡದಿಂದ ಇನ್ನಷ್ಟು ಪುಸ್ತಕ ಮತ್ತು ಸಾಹಿತ್ಯ ಸೇವೆ ನಡೆಯಲಿ ಎಂದು ಆಶಿಸುತ್ತಾ, ಫೇಸ್‌ಬುಕ್‌ ಪುಟದ ಅಡ್ಮಿನ್ ತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಈ ಮೂಲಕ ಹೊಸಬರಿಗೆ ಅವಕಾಶ ಸಿಗುತ್ತದೆ, ಜ್ಞಾನಾರ್ಜನೆಯಾಗುತ್ತದೆ, ವಿಡಿಯೋಗಳಲ್ಲಿ ಮಾತನಾಡುವುದು ಕಲಿತಂತಾಗುತ್ತದೆ ಎಂದು ಹಲವಾರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕ ಪರಿಚಯದ ವಿಡಿಯೋ, ವಿಷಯವನ್ನು ಆಧರಿಸಿ ಸರಣಿ ರೂಪದಲ್ಲಿ ಸುಕೃತಿ ಪುಸ್ತಕ ಪರಿಚಯವನ್ನು ಮಾಡುವ ವ್ಯವಸ್ಥೆ ಮಾಡಿಕೊಂಡಿದೆಯಂತೆ.

Leave a Reply

Your email address will not be published.

This site uses Akismet to reduce spam. Learn how your comment data is processed.