
Sullia: ಹಿಂದೂ ಆದವನು ಎಂದೂ ಭಯೋತ್ಪಾದಕನಾಗಲು ಸಾಧ್ಯವಿಲ. ಹಿಂದೂ ಭಯೋತ್ಪಾದನೆ ಇದೆ ಎಂದು ಕೇಂದ್ರ ಸರಕಾರ ಪ್ರಚುರಪಡಿಸಿ ಹಿಂದು ಯುವಕರನ್ನೂ, ಸನ್ಯಾಸಿಗಳನ್ನೂ ಹಿಂಸಿಸುವುದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಭಾರತ ದೇಶಕ್ಕೇ ಮಾಡಿದ ಅಪಮಾನ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ ಹೇಳಿದ್ದಾರೆ.
ಅವರು ವಿರಾಟ್ ಹಿಂದೂ ಸಮಾಜೋತ್ಸವ ಮತ್ತು ಶ್ರೀ ಹನುಮಾನ್ ಜಾಗರಣ ಸಮಿತಿಯ ಆಶ್ರಯದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಮತ್ತು ಶ್ರೀ ಹನುಮಾನ್ ಶಕ್ತಿ ಯಜ್ಞದ ಅಂಗವಾಗಿ ಏರ್ಪಡಿಸಿದ ಸಾರ್ವಜನಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಮ್ಮ ದೇಶದ ಶಿಖರವಾದ ಕಾಶ್ಮೀರಕ್ಕೆ ಸ್ವಾಯುತ್ತತೆಯನ್ನು ನೀಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ತೀರಾ ಅಪಾಯಕಾರಿ ಎಂದ ಅವರು ಇದು ದೇಶವನ್ನು ಮತ್ತೊಮ್ಮೆ ಬೇರ್ಪಡಿಸುವ ಷಡ್ಯಂತ್ರ ಎಂದು ಎಚ್ಚರಿಸಿದರು. ನಮ್ಮ ಉದಾಸೀನದಿಂದ, ಸರಕಾರಗಳ ಬೇಜವಾಬ್ದಾರಿಯಿಂದ ನಮ್ಮ ದೇಶದ ಮಾನಸ ಸರೋವರದಂತಹಾ ಹಲವಾರು ಪವಿತ್ರ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ, ಸರಕಾರದ ಕ್ರಮದ ವಿರುದಟಛಿ ಸೆಟೆದು ನಿಲ್ಲದಿದ್ದರೆ ಕಾಶ್ಮೀರ ನಮಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಹೇಳಿದರು.
ಜಗತ್ತಿಗೇ ಮಾರ್ಗದರ್ಶನ ಮಾಡಿದ, ಎಲ್ಲ ಧರ್ಮಕ್ಕೆ ಆಶ್ರಯ ನೀಡಿದ ಹಿಂದೂ ಧರ್ಮಕ್ಕೆ ಇಂದು ಗಂಡಾಂತರ ಉಂಟಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂದ ಸ್ವಾಮೀಜಿ, ರಾಜಕೀಯ ಸಾಮಾಜಿಕ ದಾಳಿಯ ಜೊತೆಗೆ ಸಾಂಸ್ಕೃತಿಕವಾದ ದಾಳಿ ನಡೆಯುತ್ತಿದೆ. ದೈಹಿಕವಾಗಿ ನಾವು ಭಾರತೀಯರಾದರೂ ಸಾಂಸ್ಕೃತಿಕವಾಗಿ ನಾವು ಪಾಶ್ಚಾತ್ಯರಾಗುತ್ತಿದ್ದೇವೆ ಎಂದರು. ಮಕ್ಕಳು ಆಧುನಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗದಂತೆ ತಂದೆ-ತಾಯಿಯರು ಎಚ್ಚರ ವಹಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.
ಅಯೋಧ್ಯೆ ಪೂರ್ತಿಯಾಗಿ ರಾಮನ ಜನ್ಮಭೂಮಿ ಎಂದು ನ್ಯಾಯಾಲಯದಲ್ಲಿ ಸಾಬೀತಾದರೂ, ರಾಮ ಜನ್ಮಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿರುವುದು ರಾಜಕೀಯ ಷಡ್ಯಂತ್ರ ಮತ್ತು ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ಎಂದು ದಿಕ್ಸೂಚಿ ಭಾಷಣ ಮಾಡಿದ ವಿಶ್ವಹಿಂದೂ ಪರಿಷತ್ನ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಹೇಳಿದ್ದಾರೆ.
ರಾಮಜನ್ಮ ಭೂಮಿಯನ್ನು ಮಾತ್ರವಲ್ಲ, ವೋಟಿಗಾಗಿ, ಮುಸ್ಲೀಮರ ಓಲೈಕೆಗಾಗಿ ನಮ್ಮ ದೇಶಕ್ಕೆ ಪ್ರೇರಣೆಯಾದ ವಂದೇ ಮಾತರಂ ವನ್ನೂ, ರಾಷ್ಟ್ರಧ್ವಜವನ್ನೂ, ಎಲ್ಲಕ್ಕಿಂತ ಮಿಗಿಲಾಗಿ ದೇಶವನ್ನೆ ಒಡೆದರು. ಇದೀಗ ಕಾಶ್ಮೀರವನ್ನು ಒಡೆಯುವ ಸಂಚು ರೂಪಿಸಲಾಗಿದೆ. ಇದರ ವಿರುದಟಛಿ ಹಿಂದೂಶಕ್ತಿ ಎಚ್ಚೆತ್ತುಕೊಳ್ಳಬೇಕಾಗಿದೆ. ಮುಸ್ಲಿಮರು ಮಾಡಿದ ಭಯೋತ್ಪಾದನೆಯನ್ನೂ, ದೇಶದ್ರೋಹಿ ಚಟುವಟಿಕೆಗಳನ್ನೂ ಸಮರ್ಥಿಸಲು ಕೇಂದ್ರ ಸರಕಾರ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ ಕ್ರಮ ಕೈಗೊಳ್ಳುವುದರಿಂದ ನುಣುಚಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ರಾಮಜನ್ಮ ಭೂಮಿ ಹೋರಾಟ ಎಂಬುದು ಶತಮಾನಗಳ ಹೋರಾಟದ ವೀರಗಾಥೆ ಎಂದು ಬಣ್ಣಿಸಿದ ಹೆಗ್ಡೆ ರಾಮಮಂದಿರ ನಿರ್ಮಾಣದ ವಿಘ್ನಗಳ ನಿವಾರಣೆಗಾಗಿ ಹನುಮಾನ್ ಶಕ್ತಿ ಯಜ್ಞವನ್ನು, ಹಿಂದೂಗಳನ್ನು ಒಟ್ಟಾಗಿಸಲು ಹಿಂದೂ ಸಮಾಜೋತ್ಸವವನ್ನೂ ನಡೆಸಲಾಗುತ್ತಿದೆ ಎಂದರು. ಪ್ರಗತಿಪರ ಕೃಷಿಕರು ವಿರಾಟ್ ಹಿಂದೂ ಸಮಜೋತ್ಸವದ ಗೌರವಾಧ್ಯಕ್ಷರೂ ಆದ ಮಾಣಿಬೆಟ್ಟು ಪುರುಷೋತ್ತಮ ಗೌಡ, ತೂಗುಸೇತುವೆಗಳ ಸರದಾರ, ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ಗಿರೀಶ್ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಗಿರೀಶ್ ಭಾರದ್ವಾಜ್ ಸ್ವಾಗತಿಸಿ, ಸಂಚಾಲಕ ಶ್ರೀನಿವಾಸ ಉಬರಡ್ಕ ವಂದಿಸಿದರು, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ನಿರೂಪಿಸಿದರು. ಸಮಾಜೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್.ಎ.ರಾಮಚಂದ್ರ, ಶಾಸಕ ಎಸ್.ಅಂಗಾರ, ಕೆಎಫ್ಡಿಸಿ ಅಧ್ಯಕ್ಷ ಎಸ್.ಎನ್.ಮನ್ಮಥ, ಹಿರಿಯರಾದ ಉಪೇಂದ್ರ ಕಾಮತ್, ಚಂದ್ರಶೇಖರ ಮೇಲ್ನಾಡ್, ಕುಕ್ಕೇಟಿ ಮಾಧವ ಗೌಡ, ಡಾ.ವೀಣಾ, ಡಾ.ರಾಮಯ್ಯ ಭಟ್, ಟಿ.ವಿ.ಭಟ್, ಡಾ.ರಾಂಮೋಹನ್, ನಾಗೇಶ್ ಕುಂದಲ್ಪಾಡಿ, ರಾಮ ಕಡಂಬಳಿತ್ತಾಯ, ದೇರಣ್ಣ ಗೌಡ, ತಾ.ಪಂ.ಅಧ್ಯಕ್ಷೆ ಪುಷ್ಪಾವತಿ ಬಾಳಿಲ, ನ.ಪಂ. ಅಧ್ಯಕ್ಷೆ ಸುಮತಿ, ಸೀತಾರಾಂ ಭಟ್ ಉಬರಡ್ಕ, ವೆಂಕಟ್ ದಂಬೆಕೋಡಿ, ನ.ಸೀತಾರಾಮ, ಚಂದ್ರಶೇಖರ ತಳೂರು, ಶುಭಾಶ್ಚಂದ್ರ ಬಾಳಿಲ, ಎ.ವಿ.ತೀರ್ಥರಾಮ ಮತ್ತಿತರರು ಉಪಸ್ಥಿತರಿದ್ದರು.
ವೈಭವದ ಶೋಭಾಯಾತ್ರೆ
ಹಿಂದೂ ಸಮಾಜೋತ್ಸವದ ಅಂಗವಾಗಿ ನಗರದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು. ಸುಳ್ಯ ಶಾಸ್ತ್ರಿ ವೃತ್ತ ಮತ್ತು ಕಾಯರ್ತೋಡಿ ವಿಷ್ಣು ಸರ್ಕಲ್ನಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿರು. ಸಿಡಿಮದ್ದಿನ ಚಿತ್ತಾರ, ಚೆಂಡೆ ವಾದ್ಯ ಮೇಳ, ಹುಲಿವೇಷದೊಂದಿಗೆ ಓಂಕಾರ ಧ್ವಜದೊಂದಿಗೆ ಸಾವಿರಾರು ಮಂದಿ ಹೆದ್ದೆರೆಯಾಗಿ ಹರಿದು ಬಂದರು. ವಿಷ್ಣು ಸರ್ಕಲ್ ಬಳಿಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಗಣೇಶ್ ನಾಯರ್ ಮತ್ತು ಶಾಸ್ತ್ರಿ ವೃತ್ತದ ಬಳಿ ಡಾ.ವೀಣಾ ಮೆರವಣಿಗೆಗೆ ಚಾಲನೆ ನೀಡಿದರು.