ಬೆಂಗಳೂರು: ವಿಶ್ವ ಹಲವು ನಾಯಕರನ್ನು ಕಂಡಿದೆ. ಆದರೆ ವ್ಯಕ್ತಿತ್ವದ ಕಾರಣಕ್ಕಾಗಿ ಮಹಾನ್ ನಾಯಕರೆನಿಸಿಕೊಂಡವರು ಕೆಲವರು ಮಾತ್ರ. ಅಂತಹ ಮಹಾತ್ಮರು ಕೇವಲ ನಾಯಕರಾಗಿ ಉಳಿಯದೆ ಸರ್ವ ಕಾಲಕ್ಕೂ ವಿದ್ಯಮಾನ ಆಗುವರು. ಅಟಲ್ ಬಿಹಾರಿ ವಾಜಪೇಯಿ ಅಂತಹವರಲ್ಲೊಬ್ಬರು. ಆದ್ದರಿಂದಲೇ ಅವರ ಜನ್ಮದಿನವನ್ನು ರಾಷ್ಟ್ರೀಯ ಸುಶಾಸನ ದಿನವಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಾಮಮಾಧವ್ ಹೇಳಿದರು.
ಮಂಥನ ಹೆಬ್ಬಾಳ, ಬೆಂಗಳೂರು ಇದರ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಹೆಬ್ಬಾಳದ ವೆಟೆರಿನರಿ ಕಾಲೇಜಿನ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾದ 290ನೇ ಮಂಥನ ಕಾರ್ಯಕ್ರಮದಲ್ಲಿ ‘ಉತ್ತಮ ಆಡಳಿತ – ಭಾರತೀಯ ದೃಷ್ಟಿಕೋನ’ ಎಂಬ ವಿಷಯದ ಕುರಿತು ಅವರು ಭಾನುವಾರ ಉಪನ್ಯಾಸ ನೀಡಿದರು.
ಭ್ರಷ್ಟಾಚಾರ ಎನ್ನುವುದು ನದಿಯಲ್ಲಿನ ಮೀನು ನೀರು ಕುಡಿದಷ್ಟೇ ವ್ಯಾಪಕವಾಗಿ ನಡೆಯುತ್ತಿದೆ. ಅದನ್ನು ಕಂಡು ಹಿಡಿಯುವುದು ಕ್ಲಿಷ್ಟಕರ ಸಂಗತಿಯಾಗಿದೆ. ಆದ್ದರಿಂದ ಈ ಸಾಮಾಜಿಕ ವ್ಯವಸ್ಥೆಯಲ್ಲಿ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ದ ಪ್ರಯತ್ನಗಳು ಹೆಚ್ಚಾಗಬೇಕು. ಆಗ ಮಾತ್ರ ಪಾರದರ್ಶಕ ಆಡಳಿತವನ್ನು ನಾವು ನೋಡಬಹುದು. ಅಂತಹ ಪಾರದರ್ಶಕ ಆಡಳಿತಕ್ಕೆ ಜನರೇ ಸಾಕ್ಷಿಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ವ್ಯಕ್ತಿಗಳಿಂದ ಮಾತ್ರ ಘೋಷಿತ ಯೋಜನೆಯ ಉದ್ದೇಶ ಸಫಲವಾಗುವುದು. ಆದರೆ ಪ್ರಸ್ತುತ ಭ್ರಷ್ಟಾಚಾರದ ಕರಾಳತೆ ಹಲವು ಯೋಜನೆಗಳ ಯಶಸ್ಸಿಗೆ ತಡೆಗೋಡೆಯಂತೆ ನಿಂತಿದೆ. ಇದನ್ನು ಹೋಗಲಾಡಿಸಬೇಕಾದರೆ ಭ್ರಷ್ಟಾಚಾರವನ್ನು ಅಧಿಕಾರಿ ಹಂತದಿಂದಲೇ ಹೋಗಲಾಡಿಸಬೇಕು. ಮೌಲ್ಯವನ್ನು ಸಾಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸದ ನಂತರ ಸಂವಾದ ನಡೆಯಿತು.