 
                ಬೆಂಗಳೂರು: ಸ್ವದೇಶಿ ಜಾಗರಣ ಮಂಚ್ – ಕರ್ನಾಟಕದ ವತಿಯಿಂದ ಜನವರಿ 4 ರಿಂದ 8ನೆಯ ತಾರೀಖಿನವರೆಗೆ ಸ್ವಾವಲಂಬನೆಯ ಪರಿಕಲ್ಪನೆಯೊಂದಿಗೆ ‘ಸ್ವದೇಶಿ ಮೇಳ – 2023’ ಅನ್ನು ಬೆಂಗಳೂರಿನ ಬಾಗಲಗುಂಟೆಯ ಬಳಿ ಇರುವ ಎಂಇಐ ಆಟದ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.

ಜನವರಿ 4ನೇ ತಾರೀಖು ಸಂಜೆ ಸಾರ್ವಜನಿಕ ಉದ್ಘಾಟನಾ ಸಮಾರಂಭದೊಂದಿಗೆ ಸ್ವದೇಶಿ ಮೇಳ ಪ್ರಾರಂಭವಾಗುತ್ತದೆ. ಉದ್ಘಾಟನಾ ಸಮಾರಂಭದ ನಂತರ ಹಾಸ್ಯಭರಿತ ಜಾನಪದ ನಾಟಕ ‘ಮಂಗ ಮಾಣಿಕ್ಯ ಪ್ರಹಸನ’ ನಡೆಯಲಿದೆ.
ಜನವರಿ 5ನೇ ತಾರೀಖು ಆಯುರ್ವೇದ ಶಿಬಿರ, ತಾರಸಿ ತೋಟ ತರಬೇತಿ ಕಾರ್ಯಾಗಾರ, ಇ-ಕಾಮರ್ಸ್ ಕುರಿತು ಉಪನ್ಯಾಸ ಕಾರ್ಯಕ್ರಮ, ರಾತ್ರಿ ಪ್ರವೀಣ್ ಗೋಡ್ಖಿಂಡಿ ಮತ್ತು ತಂಡದವರಿಂದ ‘ರಾಗ್ ರಂಗ್ – ಬಾನ್ಸುರಿ ಜುಗಲ್ ಬಂದಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜನವರಿ 6ನೇ ತಾರೀಖು ನಿತ್ಯ ಬಳಕೆ ವಸ್ತು ತಯಾರಿಕಾ ಶಿಬಿರ, ಮಹಿಳಾ ಸಮ್ಮೇಳನ, ನಿತ್ಯ ಜೀವನದಲ್ಲಿ ಸ್ವದೇಶಿ ಉಪನ್ಯಾಸ ಕಾರ್ಯಕ್ರಮ, ರಂಗಪುತ್ಥಳಿ ಬೊಂಬೆಯಾಟದ ಕಲಾವಿದರಿಂದ ಸೂತ್ರಸಲಾಕೆ ಬೊಂಬೆಯಾಟ ನಡೆಯಲಿದೆ.
ಜನವರಿ 7ನೇ ತಾರೀಖು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ಸಮೂಹಗಾನ ಸ್ಪರ್ಧೆ, ಪಂಚಗವ್ಯ ಚಿಕಿತ್ಸಾ ಶಿಬಿರ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸ್ವಾವಲಂಬಿ ಭಾರತ ಅಭಿಯಾನ ಉಪನ್ಯಾಸ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ಮತ್ತು ಅತಿಥಿ ಕಲಾವಿದರಿಂದ ‘ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜನವರಿ 8ನೇ ತಾರೀಖು ರಂಗೋಲಿ ಸ್ಪರ್ಧೆ, ರೈತರೊಂದಿಗೆ ಸಂವಾದ ಕಾರ್ಯಕ್ರಮ, ಕುಟುಂಬ ಪ್ರಬೋಧನ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಂದೇ ಮಾತರಂ ನೃತ್ಯ ರೂಪಕ ಇರಲಿದೆ.
 
                                                         
                                                         
                                                         
                                                         
                                                        