ಧಾರವಾಡ: ನಗರದ ಮನೋಹರ ಗ್ರಂಥಮಾಲೆ ಅಟ್ಟಕ್ಕೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ ಪ್ರಮುಖ ಸ್ವಾಂತರಂಜನ ಅವರು ಭೇಟಿ ನೀಡಿ ಸಾಹಿತಿಗಳೊಂದಿಗೆ ಸಂವಾದ ನಡೆಸಿದರು.
ಮನೋಹರ ಗ್ರಂಥಮಾಲೆ ತನ್ನ ಶ್ರಮ ಮತ್ತು ಅತ್ಯುತ್ತಮ ಗ್ರಂಥಗಳ ಮೂಲಕ ದೇಶದ ಪ್ರಮುಖ ಪ್ರಕಾಶನ ಸಂಸ್ಥೆಯಾಗಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಲೇಖಕರ ಗ್ರಂಥಗಳ ಹಸ್ತಪ್ರತಿಗಳನ್ನು ನೋಡಿ ತುಂಬಾ ಸಂತೋಷಪಟ್ಟರು ಮತ್ತು ಇವುಗಳ ಕಾಯ್ದಿಡುವಿಕೆಯಲ್ಲಿ ಬಹಳಷ್ಟು ಪ್ರಯತ್ನ ಪಡಬೇಕು ಎಂದು ಅಭಿಪ್ರಾಯ ಪಟ್ಟರು.
ರಾಷ್ಟ್ರದಲ್ಲಿ ಪ್ರಸ್ತುತ ದಿನಕ್ಕೆ ಹಾಗೂ ಮುಂದಿನ ಪೀಳಿಗೆಗೆ ನಮ್ಮ ಭವ್ಯ ಭಾರತದ ಇತಿಹಾಸ ತಿಳಿಸುವುದು ಅನಿವಾರ್ಯವಾಗಿದೆ. ಪ್ರಸಕ್ತ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಇರುವುದರಿಂದ, ನಮ್ಮ ಪ್ರಾಂತ, ಪ್ರದೇಶಗಳಲ್ಲಿ ಭಾರತದ ಸ್ವರಾಜ್ಯಕ್ಕೊಸ್ಕರ ಎಲೆಮರೆ ಕಾಯಿಯಂತೆ ಶ್ರಮಿಸಿದ ಹೋರಾಟಗಾರರ ಸ್ಮರಣೆ ಆಗಬೇಕು. ಅವರ ಕುರಿತು ಹೆಚ್ಚು ಹೆಚ್ಚು ಸಾಹಿತ್ಯ ರಚನೆ ಆಯಾ ಭಾಗದ ಸಾಹಿತಿಗಳಿಂದ ಆಗಬೇಕು.
ಈಗ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪಠ್ಯಗಳಲ್ಲಿ ನೈಜ ಇತಿಹಾಸದ ಅಂಶಗಳು ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿ ಭಾಷೆಗೆ ಕನ್ನಡ, ತೆಲಗು, ತಮಿಳು, ಮಲಯಾಳಿ ಮೊದಲಾದ ಭಾಷೆಗಳಿಂದ ಅತ್ಯುತ್ತಮ ಕೃತಿಗಳು ಅನುವಾದವಾಗಿ ಬರಬೇಕಾಗಿದೆ. ಈ ದಿಸೆಯಲ್ಲಿ ಇಲ್ಲಿಯ ಸರಕಾರ, ಅಕಾಡಮಿ ಮತ್ತು ಸಾಹಿತಿಗಳು ಕೂಡಿ ಕೆಲಸ ಮಾಡುವ ಅವಶ್ಯಕತೆ ಇದೆ.ಹಾಗೆಯೇ ಪ್ರಕಾಶನ ಸಂಸ್ಥೆಗಳು ಕೂಡಾ ಒಂದಾಗಿ ಈ ಕಾರ್ಯದಲ್ಲಿ ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮನೋಹರ ಗ್ರಂಥಮಾಲೆ ಕುರಿತು ಮಾಹಿತಿ ಪಡೆದು, ಅದರ ಕಾರ್ಯ-ಸಾಧನೆಗಳಿಗೆ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದರು.