ಧಾರವಾಡ: ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ ಸ್ವಾಂತರಂಜನ ಜಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಯೋಜಿಸಿದ್ದ ಸ್ವರಾಜ್ಯ 75ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಧಿನತೆ ಹಾಗೂ ಸ್ವತಂತ್ರತೆ  ಎರಡು ಶಬ್ದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಭಾವಿಸಲಾಗುತ್ತದೆ. ಆದರೆ ಎರಡರ‌ ಮಧ್ಯೆ ಅಂತರವಿದೆ. ನಾವು ಮುಂಚೆ ಪರರ ಅಧಿನದಲ್ಲಿದ್ದೆವು. ಭಾರತ ಮೊದಲಿನಿಂದಲೂ ಸಂಪನ್ನ ದೇಶವಾಗಿತ್ತು.‌ ಆದರೆ ಅನೇಕ ಆಕ್ರಮಣಕಾರರು ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದರು. ಕೇವಲ ಸಂಪತ್ತು ಅಲ್ಲದೇ  ಬೌದ್ಧಿಕ್ ಹಾಗೂ ಸಾಂಸ್ಕೃತಿಕವಾಗಿಯೂ ಆಕ್ರಮಿಸಿ, ಭಾರತವನ್ನು ಪರಾಧಿನತೆಗೆ ಒಳಪಡಿಸಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಭಕ್ತಿ ಪಂಥದ ಕಾರ್ಯ ಮಹತ್ವದಾಗಿತ್ತು. ದಕ್ಷಿಣದ ಭಾರತದಲ್ಲಿ ಭಕ್ತಿ ಆಂದೋಲನ ಮೊದಲ ಆರಂಭವಾಗಿ, ಉತ್ತರದಲ್ಲಿ ರಾಮಾನಂದ ಆಚಾರ್ಯರು ಭಕ್ತಿ ಆಂದೋಲನ ವಿಸ್ತರಿಸಿದರು. ಸಮಾಜದ ಎಲ್ಲ ಜಾತಿಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು.  ಅವರ ಆಂದೋಲನದ ನೇತೃತ್ವದಲ್ಲಿ ಸಂತ  ಕಬೀರದಾಸ, ಸಂತ ರವಿದಾಸ ಮುಂತಾದವರು ಪ್ರಖ್ಯಾತ ಸಂತರಾಗಿ ಹೊರಹೊಮ್ಮಿದರು.

ಭಕ್ತಿ ಆಂದೋಲನದ ಮೂಲಕ ದೇವಸ್ಥಾನದ‌ ಕುರಿತು ಶ್ರದ್ಧೆ ಬೆಳೆಸಲಾಯಿತು. ಸಂತ ತುಳಸಿದಾಸ ರಾಮಾಯಣ ಕುರಿತು ಎಲ್ಲೆಡೆ ಪ್ರಚಾರ ನಡೆಸಿ, ಜನರಲ್ಲಿ ರಾಜಾ ಶ್ರೀರಾಮಚಂದ್ರನ ಕುರಿತು ಶ್ರದ್ಧೆ ಬೆಳೆಸಿ, ಸಾಂಸ್ಕೃತಿಕವಾಗಿ ಒಂದುಗೂಡಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಏಕಾಏಕಿ ನಡೆದ ಯುದ್ಧವಲ್ಲ. ನಾನಾಸಾಹೇಬ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಮಂಗಲ ಪಾಂಡೆ ಮುಂತಾದವರು ಮೊದಲಿನಿಂದಲೂ ಬ್ರಿಟಿಷರನ್ನು ವಿರೋಧಿಸಿದ್ದರು. ಆ ಸಂದರ್ಭದಲ್ಲಿ 21 ಮೇ, 1857 ದೇಶದೆಲ್ಲೆಡೆ ಏಕಕಾಲಕ್ಕೆ ಬ್ರಿಟಿಷರ ವಿರುದ್ಧ ಧಂಗೆ ಏಳಲು ಪ್ರತಿ ಗ್ರಾಮಗಳಿಗೆ ಗುಪ್ತ ಸಂದೇಶ ಕಳಿಸಲಾಗಿತ್ತು. ಆದರೆ ಮಂಗಲ ಪಾಂಡೆ ಅವರ ಅವಸರದಿಂದ 10 ಮೇ, 1857ರಲ್ಲೇ ಸಂಗ್ರಾಮ ಆರಂಭವಾಯಿತು. ಬಂಗಾಳ, ಬಿಹಾರ, ಉತ್ತರ ಪ್ರದೇಶ, ಖಾನಪುರ, ಲಕನೌ ಮುಂತಾದ ಕಡೆ ಸಂಗ್ರಾಮ ವಿಸ್ತಾರವಾಯಿತು. ಈ ಯುದ್ಧದಲ್ಲಿ ಸೈನಿಕರು, ವ್ಯಾಪರಿಗಳು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಸೇರಿದಂತೆ ಸುಮಾರು 3 ರಿಂದ 4 ಲಕ್ಷ ಜನ ದೇಶದ ಸ್ವಾತಂತ್ರ್ಯಕ್ಕೊಸ್ಕರ ಬಲಿದಾನಗೈದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಅಹಿಂಸೆ ಹೋರಾಟದಿಂದ ಎಂದು ಕೆಲವರು ಹೇಳುವುದು ವಿಪರ್ಯಾಸ. ಮಾನಗರ್, ಜಲಿಯನ್ ವಾಲಾಬಾಗ್ ಮುಂತಾದ ಹತ್ಯಾಕಾಂಡಗಳಲ್ಲಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದರು.

ಗಾಂಧೀಜಿಯ ಗ್ರಾಮ ಸ್ವರಾಜ್ಯ ಪುಸ್ತಕದಲ್ಲಿ ಆಡಳಿತ ವಿಕೇಂದ್ರೀಕರಣ ಕುರಿತು ವಿವರಿಸಿದ್ದಾರೆ. ಇದನ್ನೆ ರಾಮರಾಜ್ಯವೆಂದು ಅವರು ಕರೆದಿದ್ದರು. ಆದರೆ ಸ್ವಾತಂತ್ರ್ಯ ನಂತರ ಗಾಂಧೀಜಿ ಅವರ ಕಲ್ಪನೆಯನ್ನು ಕಾಂಗ್ರೆಸ್ ಸರ್ಕಾರ ಕ್ರಿಯಾನ್ವಯಗೊಳಿಸಲಿಲ್ಲ. ಮೆಕಾಲೆ ಶಿಕ್ಷಣದಿಂದ ಪಠ್ಯ ಪುಸ್ತಕದಲ್ಲಿ ಭಾರತ ಮೊದಲಿನಿಂದಲೂ ಬಡ ದೇಶವೆಂದು ಬಿಂಬಿತವಾಗಿ, ಬ್ರಿಟಿಷರು ಬಂದ ನಂತರ ಅಭಿವೃದ್ಧಿಗೊಂಡಿತು ಎಂಬ ವಿಚಾರ ವ್ಯಾಪಕವಾಗಿದ್ದು ದುರ್ದೈವ. ಆದರೆ ಭಾರತದಲ್ಲಿ ವಿದೇಶಿಯರ ಆಗಮನಕ್ಕಿಂತ ಮೊದಲೂ ಪ್ರತಿ ಹಳ್ಳಿಯಲ್ಲಿ ಪಾಠಶಾಲೆಗಳಿದ್ದವು. ಅಲ್ಲಿ ಎಲ್ಲ ಜಾತಿಯವರು, ಮಹಿಳೆಯರು ಬಂದು ಶಿಕ್ಷಣ ಪಡೆಯುತ್ತಿದ್ದರು. ಆದರೆ ಬ್ರಿಟಿಷರು ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದರು.

1917 ರಲ್ಲಿ ಬಿಹಾರದಲ್ಲಿ ಗಾಂಧೀಜಿ ಮೊದಲ ಸತ್ಯಾಗ್ರಹ ಮಾಡಿದ್ದರು. ಕಾರಣ ಬ್ರಿಟಿಷರು ರೈತರ ಮೇಲೆ ನಡೆಸಿದ ಅನ್ಯಾಯ, ಆಕ್ರಮಣ. ಆಹಾರ ಧಾನ್ಯಗಳ ಬದಲಾಗಿ ವಾಣಿಜ್ಯ ಕೃಷಿ ಮಾಡಲು ಬ್ರಿಟಿಷರು ರೈತರಿಗೆ ಒತ್ತಾಯಿಸುತ್ತಿದ್ದರು. ಬಂಗಾಳದಲ್ಲಿ ಪ್ಲೇಗ್ ರೋಗ ವ್ಯಾಪಿಸಿದಾಗ, ಬ್ರಿಟಿಷರು ಯಾವುದೇ ಚಿಕಿತ್ಸೆ, ಪರಿಹಾರ ತೆಗೆದುಕೊಳ್ಳಲಿಲ್ಲ ಬದಲಾಗಿ ಭಾರತೀಯರನ್ನು ಸಾಯಲು ಬಿಟ್ಟರು. ವನವಾಸಿಗಳ ಮೇಲೆ ನಿರ್ಬಂಧ ವಿಧಿಸಿದಾಗ, ಸಂಘಸ್ಥಾಪಕ ಡಾಕ್ಟರ್ ಹೆಡಗೆವಾರ ಜಂಗಲ್ ಸತ್ಯಾಗ್ರಹ ನಡೆಸಿ ಬ್ರಿಟಿಷರನ್ನು ವಿರೋಧಿಸಿದ್ದರು. ಇದೇ ದಿಶೆಯಲ್ಲಿ ಕಾರ್ಯನಿರ್ವಹಿಸಿದ ಸಾವರಕರ್, ಆಝಾದ, ಸುಭಾಷ್ ಚಂದ್ರ ಬೋಸ್ ಮುಂತಾದವರ ತ್ಯಾಗ, ಬಲಿದಾನವನ್ನು ಸದಾ ಸ್ಮರಿಸಬೇಕು.

ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ. ಸರ್ವೆ ಭವಂತು ಸುಖಿನಃ ಎಂದು ಹೇಳಿದ ದೇಶ ನಮ್ಮದು. ಕೊರೋನಾ ಲಸಿಕೆ ತಯಾರಿಸಿದ ನಂತರ ಕೇವಲ ನಾವಷ್ಟೆ ತೆಗೆದುಕೊಳ್ಳಲಿಲ್ಲ. ಬದಲಾಗಿ ಎಲ್ಲ ದೇಶಗಳಿಗೆ ರಫ್ತು ಮಾಡಿದೆವು. ಪ್ರಸ್ತುತ ಶ್ರೀಲಂಕಾದ ಸಂದಿಗ್ಧ ಸ್ಥಿತಿಯಲ್ಲಿ ಚೀನಾ ಕೈಬಿಟ್ಟರು, ಭಾರತ ಶ್ರೀಲಂಕಾಗೆ ಸಹಕರಿಸುತ್ತಿರುವುದು ನಮ್ಮ ದೇಶದ ಹೆಮ್ಮೆಯ ವಿಷಯ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ, ವಿಭಾಗ ಕಾರ್ಯವಾಹ ಮಧುಸೂದನ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.