ಲೇಖಕರು: ನಾರಾಯಣ ಶೇವಿರೆ
ಒಮ್ಮೆ ಒಂದು ಕಾರ್ಯಕ್ರಮದಲ್ಲಿ; 1947ರ ಆಗಸ್ಟ್ 15ರಂದು ನಮಗೆ ಸಿಕ್ಕಿದ್ದು ಸ್ವರಾಜ್ಯವೋ ಸ್ವಾತಂತ್ರ್ಯವೋ ಎಂದು ಒಬ್ಬರು ಭಾಷಣಕಾರರು ತನ್ನಿಮಿತ್ತದ ತಮ್ಮ ಭಾಷಣದ ಪ್ರಾರಂಭದಲ್ಲಿ ಕೇಳಿದ್ದರು. ಕೇಳಿಸಿಕೊಂಡ ವಿದ್ಯಾರ್ಥಿಗಳಿಗೆ ಇದೊಂದು ಹೊಸ ಹೊಳಹುಳ್ಳ ಪ್ರಶ್ನೆಯಾಗಿತ್ತು. ಈ ಭಾಷಣದ ಮೂಲಕ ಒಂದು ಹೊಸವಿಚಾರದ ಎಡೆಗೆ ಪ್ರವೇಶಿಸುತ್ತಿದ್ದೇವೆಂಬ ಭಾವವುಂಟಾಗಿತ್ತು.
ಪ್ರಶ್ನೆಗೆ ಸ್ಪಂದಿಸಿದ ಕಾಲೇಜು ವಿದ್ಯಾರ್ಥಿಗಳು ಹಾಗೂ ಉತ್ತರಿಸಿದರು, ಹೀಗೂ ಉತ್ತರಿಸಿದರು; ಯಾವುದಕ್ಕೂ ಅನ್ಯಾಯವಾಗಬಾರದೆಂಬಂತೆ!
ಸ್ವರಾಜ್ಯ ಮತ್ತು ಸ್ವಾತಂತ್ರ್ಯ – ಇವುಗಳ ನಡುವೆ ಇರುವ ಅಂತರವನ್ನು ಆ ವಿದ್ಯಾರ್ಥಿಗಳು ಅರಿತಿದ್ದರೆಂದು ಅವರ ಉತ್ತರಗಳಿಂದ ಅನಿಸಲಿಲ್ಲ. ಭಾಷಣಕಾರರಿಗೆ ಆ ಅಂತರವನ್ನು ತಿಳಿಸುವುದಕ್ಕಿಂತ ಇನ್ನಿತರ ವಿಷಯಗಳು ಮುಖ್ಯವಾಗಿದ್ದುವು. ಅಲ್ಲದೆ; ಅವರು ಸೂಚಿಸಿದ ನಿರ್ದಿಷ್ಟ ಅಂತರ ಇಷ್ಟೇ: ಆಡಳಿತ ನಮ್ಮವರ ಕೈಗೆ ಬಂದಾಗ ಸ್ವರಾಜ್ಯ, ಆಡಳಿತದ ತಂತ್ರ ನಮ್ಮದಾದಾಗ ಸ್ವಾತಂತ್ರ್ಯ. ಅವರ ಅಭಿಪ್ರಾಯದಂತೆ; ನಲವತ್ತೇಳರಲ್ಲಿ ನಮಗೆ ಸಿಕ್ಕಿದ್ದು ಸ್ವರಾಜ್ಯವೇ ವಿನಾ ಸ್ವಾತಂತ್ರ್ಯವಲ್ಲ.
ಇದೊಂದು ತೋರುನೋಟದ ನಿಷ್ಕರ್ಷೆಯಾದೀತು. ಬರಿಯ ಶಬ್ದವಿವರದಿಂದ ಹೀಗೆ ಹೇಳಲು ಬರುತ್ತದೆ. ಆದರೆ ಇಷ್ಟೇ ಹೇಳಿದರೆ, ಶಬ್ದವಿವರದ ಮೂಲಕವೇ ಆದರೂ ಪೂರ್ತಿ ಒಳಹೊಕ್ಕಂತೆ ಆಗದು.
ಬರಿಯ ಉಪಸರ್ಗವಲ್ಲ
ನೋಡಿ, ಸ್ವರಾಜ್ಯ ಮತ್ತು ಸ್ವಾತಂತ್ರ್ಯ ಈಯೆರಡು ಪದಗಳಲ್ಲಿಯೂ ಉಪಸರ್ಗವಾಗಿ ಇರುವ ‘ಸ್ವ’ ಅಕ್ಷರವು ಅಂತಿಂಥ ಅಕ್ಷರವಲ್ಲ, ಅದು ಯಾವುದೇ ಸಂಗತಿಯ ಮೂಲಗುರುತನ್ನು ಸೂಚಿಸುವ ಅಕ್ಷರ. ಉಪಸರ್ಗಸಹಿತ ಇರುವ ಉಳಿದ ನೂರಾರು ಪದಗಳನ್ನು ವಿವರಿಸುವಂತೆ ‘ಸ್ವ’ ಉಪಸರ್ಗವಿರುವ ಪದವನ್ನು ಸರಳವಾಗಿ ವಿವರಿಸಲಾಗದು. ಯಾಕೆಂದರೆ ‘ಸ್ವ’ ಎಂಬುದು ತನ್ನ, ತನಗೆ ಸೇರಿದ ಎಂಬ ಅರ್ಥವನ್ನು ಇನ್ನಿಲ್ಲದಷ್ಟು ಗಾಢವಿವರದೊಂದಿಗೆ ತೆರೆದುಕೊಳ್ಳುತ್ತ ಹೋಗುತ್ತದೆ. ಬರಿಯ ಹೊರಮೈಯನ್ನೂ ತನ್ನದು ಎಂದು ಬಗೆಯಬಹುದು, ತನಗೆ ಸೇರಿದ ವಸ್ತು-ವಿಷಯಗಳನ್ನೂ ತನ್ನದೆಂದು ಬಗೆಯಬಹುದು. ಹೀಗೆ ಹೊರನೋಟಕ್ಕೆ ಕಾಣುವ ವಸ್ತುವಿವರಗಳಲ್ಲದೆ ಬರಿಯ ನೋಟಕ್ಕೆ ಕಾಣದ ಆದರೆ ಗಾಢವಾಗಿ ಸಂಬಂಧಹೊಂದಿರುವ ಸಂಗತಿಗಳನ್ನೂ ತನ್ನದೆಂದು ತಿಳಿದಾಗ ‘ಸ್ವ’ ಉಪಸರ್ಗದ ಸಮಗ್ರತೆಯನ್ನು ಇನಿತಾದರೂ ಸ್ಪರ್ಶಮಾಡಿದಂತೆ ಆಗಬಹುದು.
ವಸ್ತುವೊಂದರ ‘ಸ್ವ’ವನ್ನು ಗುರುತಿಸಲು ಅದರ ಮೂಲ ಮತ್ತು ಬೇರ್ಪಡಿಸಲಾಗದ ಗುಣಗಳನ್ನು ಗಮನಿಸಬೇಕು. ಯಾವ ಗುಣಗಳ ಹೊರತಾಗಿ ಆ ವಸ್ತುವಿನ ಅಸ್ತಿತ್ವವೇ ಇರಲಾರದೋ ಅವುಗಳನ್ನು ಗುರುತಿಸಿದಾಗಷ್ಟೆ ನಿಜ ಗುರುತಿಸುವಿಕೆ ಸಾಧ್ಯವಾಗುತ್ತದೆ.
ಅಂದರೆ; ಕೆಲವು ನಿರ್ದಿಷ್ಟ ಗುಣಗಳೇ ಒಂದು ವಸ್ತುವಿನ ಅಸ್ತಿತ್ವವನ್ನು ನಿರ್ಧರಿಸುತ್ತವೆ. ಅವುಗಳ ವಿನಾ ಆ ವಸ್ತು ಹೊರನೋಟಕ್ಕೆ ಕಾಣುವಂತೆ ಇದ್ದರೂ ಅದಕ್ಕೆ ಮಹತ್ತ್ವವಿರಲಾರದು ಮತ್ತದು ಉಪಯೋಗಕ್ಕೂ ಬರಲಾರದು.
ವಸ್ತುವಿನ ‘..ತನ’
ಇದನ್ನು ದೃಷ್ಟಾಂತಿಸಿ ನೋಡುವುದಾದರೆ;
ಹಲಸು, ಇಂದು ಅತಿಹೆಚ್ಚು ಮೌಲ್ಯವರ್ಧಿತ ಆಯಾಮವನ್ನು ಪಡಕೊಳ್ಳುತ್ತಿರುವ ಒಂದು ಹಣ್ಣು. ಬಹುಶಃ ಯಾವುದೇ ಹಣ್ಣು ಕೂಡಾ ಇದರಷ್ಟು ಅವಯವಗಳನ್ನು ಹೊಂದಿರಲಾರದು. ಅದರಲ್ಲಿ ಹೊರಗಿನ ಕವಚದಿಂದ ಹಿಡಿದು ಒಳಗಿನ ರಚ್ಚೆ, ಕೂಂಜಿ, ಸೊಳೆ, ಮೇಣ ಇತ್ಯಾದಿ ಅವೆಷ್ಟು ಅಂಗೋಪಾಂಗಗಳು!
ಹೊರನೋಟಕ್ಕೆ ಕಾಣುವ ಇವೆಲ್ಲವೂ ಇದ್ದಾಗಲೇ ಹಣ್ಣೊಂದು ಹಲಸೆನಿಸುವುದು. ಆದರೆ ಇವೆಲ್ಲವೂ ಇದ್ದೂ ಹಲಸಿನ ‘ಹಲಸುತನ’ ಇಲ್ಲದೆ ಹೋದರೆ ಅದು ಹಲಸಾಗಲಾರದು. ಆಘ್ರಾಣಿಸಲು ಹಲಸಿನ ಪರಿಮಳವಿರಬೇಕು, ಸವಿಯಲು ಹಲಸಿನ ರುಚಿಯಿರಬೇಕು, ಹೊಟ್ಟೆತುಂಬುವ ಶಕ್ತಿಯಿರಬೇಕು, ಆರೋಗ್ಯವರ್ಧನೆಯಲ್ಲಿ ತನ್ನದೇ ಪಾತ್ರವಹಿಸುವ ಪೌಷ್ಟಿಕಾಂಶಗಳಿರಬೇಕು.. ಇವೆಲ್ಲವೂ ಸೇರಿ ‘ಹಲಸುತನ’ವಾಗುತ್ತದೆ.
ಹಲಸುತನವಿಲ್ಲದ ಹಲಸನ್ನು ತಿನ್ನಲೂ ಸಾಧ್ಯವಾಗದು, ಹಪ್ಪಳವನ್ನೂ ಮಾಡಲಾಗದು, ಕರಿದ ತಿಂಡಿಗಳನ್ನೂ ಸಿದ್ಧಪಡಿಸಲಾಗದು. ಒಟ್ಟಿನಲ್ಲಿ ಅದರ ಮೌಲ್ಯವರ್ಧನೆ ಅಸಾಧ್ಯ. ಅಂದರೆ ಹಲಸಿನಂತೆ ಕಾಣುವ, ಆದರೆ ಹಲಸುತನವಿಲ್ಲದ ವಸ್ತುವಿನಲ್ಲಿ ಹಲಸಿನ ಮಹತ್ತ್ವವೂ ಇರಲಾರದು, ಅದರಿಂದ ಹಲಸಿನ ಉಪಯೋಗವೂ ದಕ್ಕಲಾರದು.
‘ಹಲಸುತನ’ವಿಲ್ಲದೆ ಹಲಸಿನ ಹಣ್ಣಿಲ್ಲ. ‘ಮಾವುತನ’ವಿಲ್ಲದೆ ಮಾವಿನ ಹಣ್ಣಿಲ್ಲ. ‘ಸೀಬೆತನ’ವಿಲ್ಲದೆ ಸೀಬೆಹಣ್ಣಿಲ್ಲ..
ಈ ‘..ತನ’ವೇ ಆಯಾ ವಸ್ತುವಿನ ‘ಸ್ವ’.
ಸ್ವ-ತಂತ್ರವಿದ್ದಾಗಲೇ ಸ್ವರಾಜ್ಯ
ಈಗ ಈ ನೆಲೆಯಲ್ಲಿ ಸ್ವರಾಜ್ಯ ಮತ್ತು ಸ್ವಾತಂತ್ರ್ಯ – ಇವುಗಳನ್ನು ನೋಡಬಹುದು.
ರಾಜ್ಯವೊಂದು ಪರಕೀಯರ ಕೈಗೆ ಹೋದಾಗ ಪರರಾಜ್ಯವೆಂದೂ ಸ್ವಕೀಯರ ಕೈಗೆ ಬಂದಾಗ ಸ್ವರಾಜ್ಯವೆಂದೂ ಭಾವಿಸುವುದು ಇದೆ. ಈ ಭಾವನೆಗೆ ಪದಾರ್ಥಶಃ ಅರ್ಥವಿದೆ. ಇಲ್ಲಿ ಪರಕೀಯ ಮೊಗಲರು ದೀರ್ಘಕಾಲ ರಾಜ್ಯವಾಳಿದರು. ನಂತರ ಇಲ್ಲಿಗೆ ಬಂದ ಆಂಗ್ಲರದು ಕೂಡಾ ರಾಜ್ಯಾಡಳಿತ ನಡೆಯಿತು. ನಡೆದವಷ್ಟೆ ಅಲ್ಲ, ಅವರ ಮರ್ಜಿಗೆ ತಕ್ಕಂತೆ ನಡೆಯಿತು. ಅವರ ರೀತಿನೀತಿಗಳಿಗೆ ತಕ್ಕಂತೆ ನಡೆಯಿತು. ಅವರ ಭಾಷೆ-ಸಭ್ಯತೆಗೆ ತಕ್ಕಂತೆ ನಡೆಯಿತು.. ಸರಿ, ಇಷ್ಟೆಲ್ಲ ಆದ ಮೇಲೂ ಇದನ್ನು ಸಂಪೂರ್ಣವಾಗಿ ಪರರಾಜ್ಯವೆನ್ನಲಾದೀತೇ? ಪರರ ಕೈಗೆ ಹೋಗಿರುವ ಸ್ವರಾಜ್ಯ ಎನ್ನಬೇಕೇ? ಪಡೆಯಬೇಕಾದ ಸ್ವರಾಜ್ಯ ಎನ್ನಬಹುದೇ..?
ಹಾಗೆಯೇ ಸ್ವಕೀಯರ ಕೈಗೆ ಆಡಳಿತಸೂತ್ರವೊಂದು ಬಂದಾಕ್ಷಣ ಸ್ವರಾಜ್ಯವೆಂದುಕೊಳ್ಳಬಹುದೇ? ಅಂಥ ರಾಜ್ಯದಲ್ಲಿ ಸ್ವಕೀಯವಾದುದು ಇನ್ನಾವುದೂ ಇರಬೇಡವೇ? ಪರಕೀಯ ರೀತಿರಿವಾಜುಗಳಲ್ಲಿಯೇ ಸ್ವಕೀಯರು ನಡೆಸುವ ರಾಜ್ಯವನ್ನು ಸ್ವರಾಜ್ಯ ಎನ್ನಬಹುದೇ..?
ಪರಕೀಯರೇ ಇಲ್ಲಿಗೆ ಬಂದು ಇಲ್ಲಿಯದೇ ಭಾಷೆ, ಸಂಸ್ಕೃತಿ, ರೀತಿರಿವಾಜು ಇತ್ಯಾದಿಗಳಿಂದ, ಇಲ್ಲಿಯ ಜನ-ದನ ಇತ್ಯಾದಿಗಳೆಲ್ಲವನ್ನೂ ಉತ್ಕಟವಾಗಿ ಪ್ರೀತಿಸುತ್ತ, ಇಲ್ಲಿಯ ಜನರಿಗೆ ಅನುಕೂಲವಾಗುವಂತೆ ಆಳಿದರೆ ಅದು ಪರರಾಜ್ಯವಾಗುವುದೋ, ಸ್ವರಾಜ್ಯವಾಗುವುದೋ? ಇದಂತೂ ಕೋಟಿಕೋಟಿ ರೂಪಾಯಿಗಳ ಪ್ರಶ್ನೆ!
ನಮ್ಮದೇ ದೇಶವನ್ನು ಯಾರು ಆಳುತ್ತಾರೆ ಎಂಬ ಆಧಾರದಲ್ಲಿ ಪರರಾಜ್ಯವೆಂದಾಗಲೀ ಸ್ವರಾಜ್ಯವೆಂದಾಗಲೀ ನಿರ್ಣಯಿಸುವುದು ಒಂದು ಹ್ರಸ್ವನೋಟವಾದೀತು. ಅವಸರದ ತೀರ್ಪಾದೀತು. ಮತ್ತು ಈ ಎರಡೂ ನಿರ್ಣಯಗಳೂ ಎರಡು ಅತಿಗಳಲ್ಲಿವೆ. ಅತಿಯಾದುದನ್ನು ಬಿಡಬೇಕು ಎಂಬ ಸುಭಾಷಿತವಾಕ್ಯಕ್ಕೆ ಪೂರಕವಾಗುವಂತೆ ಇವೆ.
ಜತೆಗೆ; ದೇಶವು ತನ್ನೆಲ್ಲ ಆಯಾಮಗಳಲ್ಲಿ ಸಾಗುವ ತಂತ್ರವು ಸ್ವಕೀಯವಾಗಿದ್ದಾಗ ಅದು ಸ್ವಾತಂತ್ರ್ಯ. ಸ್ವಾತಂತ್ರ್ಯವಿಲ್ಲದೆ ಸ್ವರಾಜ್ಯವೆಂತು?
ಭಾರತದ ತನ್ನತನ
ಭಾರತವನ್ನು ಹಳ್ಳಿಗಳ ದೇಶ ಎನ್ನುವುದಿದೆ. ಹಾಗನ್ನುವುದು ಚೆನ್ನಾಗಿದೆ, ಆದರೆ ಸರಿಯಿದೆಯೆನ್ನಲಾಗದು. ಯಾಕೆಂದರೆ ಹಳ್ಳಿ ಪೇಟೆ ಪಟ್ಟಣ ನಗರ ಮಾತ್ರವಲ್ಲ, ಬೆಟ್ಟ ಗುಡ್ಡ ಕಾಡು ಇತ್ಯಾದಿಗಳೆಲ್ಲವನ್ನು ಒಳಗೊಂಡ ದೇಶ ಭಾರತ. ಆದರೆ ಭಾರತದ ‘ಸ್ವ’ತ್ವವನ್ನು ಹಳ್ಳಿಗಳಲ್ಲಿ ಕಾಣುವ ಒಂದು ವಿಚಾರಕ್ರಮವಿದೆ. ಇದು ಒಂದು ಆಯಾಮದಲ್ಲಿ ಸರಿಯೂ ಇದೆ.
ಹಳ್ಳಿಯ ಸ್ವ ಏನು?
ಒಂದು ಉತ್ತಮ ಹಳ್ಳಿಯೆನಿಸಲು ಅಲ್ಲಿ ಶಾಲೆ, ಆಸ್ಪತ್ರೆ, ಪಂಚಾಯಿತಿ ಕಚೇರಿ ಇತ್ಯಾದಿಗಳಿರಬೇಕೆಂಬ ತರ್ಕವಿದೆ. ಇವೆಲ್ಲ ಇರುವುದು ಒಳ್ಳೆಯದೇ. ಆದರೆ ಹಳ್ಳಿಯ ಸ್ವತ್ವ ಇರುವುದು ಇವುಗಳಲ್ಲಲ್ಲ, ಕೃಷಿಯಲ್ಲಿ. ಅದೂ ಆಹಾರದ ಬೆಳೆಬೆಳೆವ ಕೃಷಿ. ಬರೇ ರಾಟೆತಿರುಗುವ, ವಾಹನಗಳ ಭರಾಟೆಯಿರುವ ಪ್ರದೇಶ ಹಳ್ಳಿಯಾದೀತು ಹೇಗೆ? ಮನುಷ್ಯನ ಉಸಿರು ಹಳ್ಳಿ. ಆ ಉಸಿರಿರುವುದು ಆಹಾರದ ಬೆಳೆಯಲ್ಲಿ. ನಿಜಕ್ಕಾದರೆ ಇಲ್ಲಿಯ ಪ್ರಾಚೀನ ಪದ್ಧತಿಯಲ್ಲಿ ಆಹಾರದ ಬೆಳೆಬೆಳೆಯುವ ರೈತರ ನಿಜ ಪ್ರತಿನಿಧಿಯೊಬ್ಬ ಮಹಾತ್ಮನೆನಿಸಿಕೊಳ್ಳಬೇಕಿತ್ತು.
ವಾಹನವಿಲ್ಲ, ರಸ್ತೆಯೇ ಇಲ್ಲ, ಕಾಡು ಯಥೇಚ್ಛವಾಗಿ ಇದೆ, ಮನೆಗಳು ಹಳ್ಳಿಯ ಮನೆಗಳಂತೆ ಇವೆ, ಆದರೆ ಕೃಷಿ ಇಲ್ಲ ಎಂದಾದರೆ ಅದು ಎಷ್ಟೇ ಹಳ್ಳಿಯ ಹಾಗೆ ಕಂಡರೂ ಹಳ್ಳಿ ಆಗುವುದು ಅಸಾಧ್ಯ.
ಆಹಾರಬೆಳೆಯ ಕೃಷಿ ಹಳ್ಳಿಯ ಸ್ವತ್ವ. ಹಳ್ಳಿಯೆಂದರೆ ಅವಶ್ಯವಾಗಿ ಕೃಷಿ ಹೌದು. ಜತೆಗೆ ಬಟ್ಟೆಬರೆ ಇತ್ಯಾದಿ ಜೀವನಾವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೇಂದ್ರವೂ ಹೌದು. ಆದರೆ ಅವುಗಳಷ್ಟೇ ಅಲ್ಲ. ಅವು ಅದರ ಬಾಹ್ಯಾಭಿವ್ಯಕ್ತಿ. ಪ್ರೀತಿ, ಆತಿಥ್ಯ, ಪಾರಸ್ಪರಿಕತೆ ಇತ್ಯಾದಿ ಹತ್ತುಹಲವು ಗುಣಗಳು ಸಂಪನ್ನವಾಗಿರುವ ಹಳ್ಳಿ ನಿಜ ಭಾರತದ ಹಳ್ಳಿ. ಕೃಷಿಯಿದ್ದೂ ಇವುಗಳಿಲ್ಲವಾದರೆ ಅದು ಭಾರತದ ಹಳ್ಳಿಯಾಗದು.
ಅಂದಹಾಗೆ ಹಳ್ಳಿಗಳಲ್ಲಿ ಜಾತೀಯತೆ, ಅಸ್ಪೃಶ್ಯತೆ ಇತ್ಯಾದಿ ಅಪಸವ್ಯಗಳೂ ಇದ್ದಾವು. ಇವು ಇಲ್ಲದೆಯೂ ಹಳ್ಳಿ ಹಳ್ಳಿಯಾಗಲು ಯಾವುದೇ ಸಮಸ್ಯೆಯಿರದು. ಮತ್ತಿವು ನಿವಾರಿಸಿಕೊಳ್ಳಲೇಬೇಕಾದ ಕೊಳೆ-ಕಸಗಳೇ ವಿನಾ ಹಳ್ಳಿಯ ಆತ್ಮವಲ್ಲ.
ಇಂಥ ಗುಣಲಕ್ಷಣಗಳುಳ್ಳ ಹಳ್ಳಿಗಳು ಎಲ್ಲೆಡೆ ಇದ್ದಾಗಷ್ಟೆ ಭಾರತ ಭಾರತವಾದೀತು. ಭಾರತಕ್ಕೆ ತನ್ನತನ ದಕ್ಕೀತು.
ಎಲ್ಲವುಗಳ ಭಾರತ
ಇಲ್ಲಿ ಹಳ್ಳಿಯನ್ನು ಭಾರತೀಯತೆಯ ಒಂದು ಪ್ರಾತಿನಿಧಿಕ ಆಯಾಮವಾಗಿ ಸ್ವೀಕರಿಸಿ ತೊಡಗಿದ್ದು. ಅದೇ ಭಾರತ ಅಥವಾ ಅದಷ್ಟೇ ಭಾರತ ಎಂಬ ಭಾವ ಬೇಕಿಲ್ಲ. ನಮಗೆ ನಮ್ಮ ಸ್ವರಾಜ್ಯ ದಕ್ಕಲು ಇದೊಂದು ಪ್ರಾಥಮಿಕ ಅನಿವಾರ್ಯತೆ ಎಂಬ ಧ್ವನಿಯಷ್ಟೆ ಇಲ್ಲಿಯದು. ಮತ್ತು ನಮ್ಮ ಸ್ವತ್ವವನ್ನು ಕಂಡುಕೊಳ್ಳಲು ಇದೊಂದು ಉತ್ತಮ ಉಪಾಯವೂ ಹೌದು.
ಇಲ್ಲಿ ಪ್ರಾಚೀನದಲ್ಲಿ ಹಳ್ಳಿಗಳಲ್ಲೇ ಸಾಹಿತ್ಯ ಸಂಸ್ಕೃತಿ ತತ್ತ್ವಜ್ಞಾನ ವಿಜ್ಞಾನ ಇತ್ಯಾದಿಗಳು ಹುಟ್ಟಿದ್ದು ಬೆಳೆದಿದ್ದು. ಈಗಿವುಗಳನ್ನು ನಗರ-ಮಹಾನಗರಗಳಿಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಭಾರತಕ್ಕೆ ಭಾರತದ್ದೇ ಆದ ತಾತ್ತ್ವಿಕ ನೆಲೆಗಟ್ಟಿದೆ, ಸಾಂಸ್ಕೃತಿಕ ಚಹರೆಯಿದೆ, ಸಾಹಿತ್ಯಕ ನೋಟವಿದೆ, ರಾಜ್ಯಭಾರದ ದಾರಿಯಿದೆ.. ಇವೆಲ್ಲವೂ ಇಲ್ಲಿಯ ಸ್ವತ್ವದ ಅವಿಭಾಜ್ಯ ಅಂಗಗಳು. ಇವೆಲ್ಲವನ್ನೂ ನಮ್ಮ ಪ್ರಾಚೀನ ಹಳ್ಳಿಯು ಪ್ರತಿನಿಧಿಸಬಲ್ಲುದು.
ಅಂದರೆ; ರಾಜ್ಯಭಾರವೊಂದಷ್ಟೆ ನಮ್ಮ ಸ್ವತ್ವವನ್ನು ನಿರ್ಧರಿಸುವ ಸಂಗತಿಯಲ್ಲ. ನಮ್ಮ ರಾಷ್ಟ್ರಜೀವನದ ಹಲವು ಅಂಗಗಳಲ್ಲಿ ಅದೂ ಒಂದು ಅಷ್ಟೇ. ಪರಕೀಯತೆಯ ಪ್ರಭಾವದಿಂದಾಗಿ ಅದಕ್ಕೆ ಇದೀಗ ಒಂದು ಸಲ್ಲದ ಮಹತ್ತ್ವ ಒದಗಿಬಿಟ್ಟಿದೆ. ಈ ಮಹತ್ತ್ವ ಉಳಿದ ಅಂಗಗಳಿಗೂ ಬಂದಾಗ ನಮ್ಮ ರಾಷ್ಟ್ರದ ನಿಜ ಸ್ವತ್ವ ಅರಳೀತು.
ಸರಿ, ಈಗ ರಾಜ್ಯಭಾರದ ವಿಷಯಕ್ಕೇ ಬಂದು ಸಮಾಪನಗೈಯುವುದಾದರೆ, ಅಲ್ಲಿ ತೋರುವುದೇನು! ಭಾರತವನ್ನು ಆಳುವ ಕೊನೆಯ ಬ್ರಿಟಿಷ್ ವ್ಯಕ್ತಿ ತಾನು ಎಂದು ಮೊದಲ ಪ್ರಧಾನಿ ಬಲು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸ್ವಕೀಯರೆನಿಸಿಕೊಂಡ ಆಧುನಿಕ ಆಡಳಿತಗಾರರು ಸ್ವಕೀಯ ರೀತಿನೀತಿ – ಆಚಾರವಿಚಾರಗಳಿಗಿಂತ ಅಧಿಕತರವಾಗಿ ವಿದೇಶಗಳ ಸಲ್ಲದ ಮಾರ್ಗದಲ್ಲೇ ತಮ್ಮ ದಿಟ್ಟನಡೆಯನ್ನು ಊರುತ್ತ ಸಾಗಿದ್ದಾರೆ. ಪರ್ಯಾಯವೆನಿಸಿದ ಈ ಎರಡೂ ನಡೆಗಳಲ್ಲಿ ಸ್ವತ್ವದ ಹ್ರಾಸ ಎದ್ದುತೋರುತ್ತಿದೆ. ಇಂಥ ನವಿರಾದ ಭೀಕರ ಸವಾಲುಗಳ ನಡುವೆ ನಾವು ಸ್ವರಾಜ್ಯವನ್ನು ಕಂಡುಕೊಳ್ಳಬೇಕಾಗಿದೆ.
("ವಿಕ್ರಮ"
ವಾರಪತ್ರಿಕೆಯ 'ಕಡೆಗೋಲು'
ಅಂಕಣದಲ್ಲಿ ಪ್ರಕಟಿತ ಲೇಖನ)