* ವಿನಾಯಕ ಗಾಂವ್ಕರ್, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು

ಕಳೆದ ಆಗಸ್ಟ್ 2 ರಂದು ಅಮೆರಿಕದ ವಿಮಾನವೊಂದು ತೈವಾನ್ ನತ್ತ ಪ್ರಯಾಣಿಸುತ್ತಿತ್ತು. ಜಗತ್ತಿನಾದ್ಯಂತ ಜನರ ಕಣ್ಣುಗಳು ಆ ವಿಮಾನದತ್ತ ನೆಟ್ಟಿದ್ದವು. ಸುಮಾರು 30 ಲಕ್ಷ ಮಂದಿ ವಿಮಾನದ ಜಾಡನ್ನು ಜಾಲತಾಣದಲ್ಲಿ ಟ್ರ್ಯಾಕ್ ಮಾಡುತ್ತಿದ್ದರು. ಇತ್ತ ಚೀನಾ ಕಣ್ಣನ್ನು ಕೆಂಪಗೆ ಮಾಡಿ ಧುಮುಗುಡುತ್ತಿತ್ತು.
ಹೌದು! ಅಮೇರಿಕಾದ ಸಂಸತ್ತಿ(ಕಾಂಗ್ರೆಸ್)ನ ಕೆಳ ಮನೆಯ ಸ್ವೀಕರ್ ಆಗಿರುವ ನ್ಯಾನ್ಸಿ ಪೆಲೋಸಿ, ಇತರ ಕೆಲವು ಕೆಳಮನೆಯ ಸದಸ್ಯರೊಡನೆ ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅದಕ್ಕೂ ಕೆಲದಿನ ಮೊದಲು ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಅಮೆರಿಕಾದ ಅಧ್ಯಕ್ಷರೊಡನೆ ಮಾತನಾಡುತ್ತಾ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ತೈವಾನ್ ಭೇಟಿಯನ್ನು ರದ್ದುಗೊಳಿಸಲು ಕೇಳಿದ್ದರಂತೆ, ಆದರೆ ಇದು ಸಾಧ್ಯವಿಲ್ಲ ಎಂದು ಜೋ ಬಿಡೆನ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು. ನ್ಯಾನ್ಸಿ ಪೆಲೋಸಿಯವರ ತೈವಾನ್ ಭೇಟಿ ಚೀನಾದ ‘ ಒನ್ ಚೈನಾ ‘ ಪಾಲಿಸಿಯ ಉಲ್ಲಂಘನೆ ಎನ್ನುವುದು ಚೀನಾದ ವಾದ.

ನ್ಯಾನ್ಸಿ ಪೆಲೋಸಿಯವರೊಡನೆ ತೈವಾನ್ ನ ಅಧ್ಯಕ್ಷೆ

ತೈವಾನ್ ಚೀನಾದ ಭಾಗ ಎಂದು ಚೀನಾ ವಾದಿಸುತ್ತದೆ, ಅಲ್ಲದೆ ತೈವಾನ್ ನೊಡನೆ ಯಾವುದೇ ದೇಶ ಅಧಿಕೃತ ರಾಜತಾಂತ್ರಿಕ ಸಂಬಂಧವನ್ನು ಹೊಂದುವುದನ್ನು ಚೀನಾ ಒಪ್ಪುವುದಿಲ್ಲ. ವಿಶ್ವಸಂಸ್ಥೆಯ ಒಟ್ಟು 193 ಸದಸ್ಯ ರಾಷ್ಟ್ರಗಳಲ್ಲಿ ಕೇವಲ 13 ರಾಷ್ಟ್ರಗಳು ಮಾತ್ರ ತೈವಾನ್ ನೊಡನೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ.

19 ನೆಯ ಶತಮಾನದಲ್ಲಿ ಚೀನಾವನ್ನು ಕಿಂಗ್ ರಾಜಮನೆತನ(Qing Dynasty) ಆಳುತ್ತಿತ್ತು, ತೈವಾನ್ ಕೂಡಾ ಚೀನಾದ ಕಿಂಗ್ ಸಾಮ್ರಾಜ್ಯದ ಭಾಗವಾಗಿತ್ತು. 1894-95 ರಲ್ಲಿ ನಡೆದ ಮೊದಲ ಚೀನಾ-ಜಪಾನ್ ಯುದ್ಧದಲ್ಲಿ ಸೋಲು ಕಂಡ ಚೀನಾ ತೈವಾನ್ ನ್ನು ಕಳೆದುಕೊಂಡಿತು. ಈ ಯುದ್ಧದಲ್ಲಿನ ಸೋಲು ಚೀನಾದ ಕಿಂಗ್ ಸಾಮ್ರಾಜ್ಯ ದುರ್ಬಲಗೊಳ್ಳಲು ಕಾರಣವಾಯಿತು.

1911 ರಲ್ಲಿ ಚೀನಾದಲ್ಲಿ ನಡೆದ ಕ್ರಾಂತಿಯ ಕಾರಣ ಅಲ್ಲಿನ ಕಿಂಗ್ ರಾಜಮನೆತನದ ಆಡಳಿತ ಕೊನೆಗೊಂಡು ಸನ್ ಯಾತ್ ಸೇನ್ ರ ನೇತೃತ್ವದಲ್ಲಿ ಕುಮಿಂಟಾಂಗ್ ಪಕ್ಷ ಅಧಿಕಾರಕ್ಕೆ ಬಂತು ಹಾಗೂ ರಿಪಬ್ಲಿಕ್ ಆಫ್ ಚೈನಾ(ROC)ದ ಸ್ಥಾಪನೆಯಾಯಿತು. 1937 ರಿಂದ 1945 ರ ವರೆಗೆ ನಡೆದ ಎರಡನೇ ಚೀನಾ- ಜಪಾನ್ ಯುದ್ಧದಲ್ಲಿ ಜಪಾನ್ ಶರಣಾಯಿತು ಹಾಗೂ ಚೀನಾ ತೈವಾನ್ ನ್ನು ಮರಳಿ ಪಡೆಯಿತು. ಆದರೆ ನಂತರದ ದಿನಗಳಲ್ಲಿ ನಡೆದ ಆಂತರಿಕ ಯುದ್ಧದಲ್ಲಿ ಮಾವೋನ ನೇತೃತ್ವದ ಕಮ್ಯುನಿಸ್ಟರಿಗೂ ಹಾಗೂ ಚಿಯಾಂಗ್ – ಕೈ- ಷೇಕ್ ನ ನೇತೃತ್ವದ ಕುಮಿಂಟಾಂಗ್ ಪಡೆಗಳಿಗೂ ಸಂಘರ್ಷ ನಡೆದು ಕಮ್ಯುನಿಸ್ಟರ ಕೈ ಮೇಲಾಗಿ ಚಿಯಾಂಗ್- ಕೈ- ಷೇಕ್ ನ ನೇತೃತ್ವದ ಕುಮಿಂಟಾಂಗ್ ಪಡೆಗಳು ತೈವಾನ್ ಗೆ ತೆರಳಿ ಆಶ್ರಯ ಪಡೆದು ಅಲ್ಲಿ ಸರಕಾರವನ್ನು ರಚಿಸಿದವು.

ಅಲ್ಲದೆ ಅಮೇರಿಕಾದ ಬೆಂಬಲವನ್ನು ಹೊಂದಿದ್ದ ಕಾರಣಕ್ಕೆ ತೈವಾನ್( ರಿಪಬ್ಲಿಕ್ ಆಫ್ ಚೈನಾ) ಸರಕಾರವೇ ಅಧಿಕೃತ ಚೀನಾದ ಸರಕಾರ ಎಂಬ ಮಾನ್ಯತೆಯನ್ನೂ ಪಡೆಯಿತು. ಮಾವೋನ ನೇತೃತ್ವದ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ 1970 ವರೆಗೂ ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆಯಲು ಅಮೆರಿಕಾದ ವಿರೋಧದಿಂದ ಸಾಧ್ಯವಾಗಲಿಲ್ಲ.


ತಾನು ಅನುಸರಿಸುತ್ತಿರುವ ನೀತಿಯಿಂದ ಹೆಚ್ಚಿನ ಪ್ರಯೋಜವಿಲ್ಲವೆಂದು ಭಾವಿಸಿದ ಅಮೆರಿಕ 1970 ರ ದಶಕದ ಪ್ರಾರಂಭದಲ್ಲಿ ಅಂದಿನ ಸೋವಿಯತ್ ಒಕ್ಕೂಟವನ್ನು ಕಟ್ಟಿ ಹಾಕುವ ಉದ್ದೇಶದಿಂದ ಕಮ್ಯುನಿಸ್ಟ್ ಚೀನಾದ ಕುರಿತು ತನ್ನ ನೀತಿಯನ್ನು ಬದಲಾಯಿಸಿಕೊಂಡಿತು. ಚೀನಾ ಹಾಗೂ ಅಮೆರಿಕ ಎರಡರೊಡನೆಯೂ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಪಾಕಿಸ್ತಾನ, ಚೀನಾ ಹಾಗೂ ಅಮೆರಿಕಾದ ಮಧ್ಯೆ ಬಾಂಧವ್ಯ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. 1971 ರ ವರೆಗೂ ಚೀನಾ ಎಂಬ ಅಧಿಕೃತ ಮಾನ್ಯತೆಯನ್ನು ಹೊಂದಿದ್ದ ತೈವಾನ್ ( ರಿಪಬ್ಲಿಕ್ ಆಫ್ ಚೈನಾ)ನ್ನು ವಿಶ್ವಸಂಸ್ಥೆಯಿಂದ ಹೊರದಬ್ಬಿ ಆ ಸ್ಥಾನಕ್ಕೆ ಇಂದಿನ ಕಮ್ಯೂನಿಸ್ಟ್ ಚೀನ (ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ) ವನ್ನು ತರಲಾಯಿತು. ಹೀಗೆಯೇ ಕಮ್ಯುನಿಸ್ಟ್ ಚೈನಾ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲೂ ಶಾಶ್ವತ ಸದಸ್ಯತ್ವ ವನ್ನು ಪಡೆದುಕೊಂಡಿತು.

1979 ರ ಜನವರಿ 1 ರಿಂದ ಅಮೆರಿಕ ಕಮ್ಯುನಿಸ್ಟ್ ಚೀನಾದೊಡನೆ ಅಧಿಕೃತ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಿತು. ಇದರೊಂದಿಗೆ ಚೀನಾ ಮುಂದಿಟ್ಟ ‘ಒನ್ ಚೈನಾ ಪಾಲಿಸಿ’ಯನ್ನು ಒಪ್ಪಿಕೊಂಡಿತ್ತು. ಅದರಂತೆ ತೈವಾನ್ ನೊಂದಿಗೆ ಹೊಂದಿದ್ದ ಅಧಿಕೃತ ರಾಜತಾಂತ್ರಿಕ ಸಂಬಂಧವನ್ನು ತೊರೆಯಿತು. ಆದರೆ ತೈವಾನ್ ನೊಂದಿಗೆ ಆರ್ಥಿಕ , ವಾಣಿಜ್ಯ ಹಾಗೂ ರಾಜಕೀಯೇತರ ಸಂಬಂಧವನ್ನು ಹೊಂದುವ ಅವಕಾಶವನ್ನು ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಅಮೆರಿಕ ಉಳಿಸಿಕೊಂಡಿದೆ, ಅಷ್ಟೇ ಅಲ್ಲದೆ ತೈವಾನ ಸ್ವಾಯತ್ತತೆಯನ್ನು ಅಮೆರಿಕ ಬೆಂಬಲಿಸುತ್ತದೆ.

1970 ರ ದಶಕದಲ್ಲಿ ತನಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಚೀನಾ ‘ತೆರೆದ ಬಾಗಿಲ ನೀತಿ'(open door policy) ಯನ್ನು ಪ್ರಾರಂಭಿಸಿತು. ಇದರ ಮೂಲಕ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಳ್ಳುತ್ತಾ ಬಂದ ಚೀನಾ ಮುಂದಿನ 30 ವರ್ಷಗಳಲ್ಲಿ ವಿಶ್ವದ ಎರಡನೆಯ ಬೃಹತ್ ಆರ್ಥಿಕತೆಯಾಗಿ ಬೆಳೆದು ನಿಂತಿದ್ದಷ್ಟೇ ಅಲ್ಲ, ಅಮೆರಿಕದೊಂದಿಗಿನ ರಫ್ತಿನಲ್ಲಿ ಮೇಲುಗೈಯನ್ನು ಸಾಧಿಸಿತು.1970 ರ ದಶಕದಲ್ಲಿ ಚೀನಾಗೆ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಚೀನಾ ಬೆಳೆದು ನಿಲ್ಲಲು ಕಾರಣವಾದ ಅಮೆರಿಕ ಇಂದು ಅದಕ್ಕೆ ಪಶ್ಚಾತ್ತಾಪವನ್ನು ಪಡುತ್ತಿದೆ.

ತೈವಾನ್ ತನ್ನದೇ ಭಾಗ ಎಂದು ಪ್ರಬಲವಾಗಿ ವಾದಿಸುವ ಕಮ್ಯುನಿಸ್ಟ್ ಚೀನಾ, ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡುವ ಮೂಲಕ ಅಮೆರಿಕ-ಚೀನ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಬೊಬ್ಬಿರಿಯುತ್ತಿದೆ. ನ್ಯಾನ್ಸಿ ಪೆಲೋಸಿಯವರ ಭೇಟಿಯನ್ನು ತಡೆಯಲು ಪ್ರಯತ್ನಿಸಿ ವಿಫಲವಾದ ಚೀನಾ, ಭೇಟಿಯ ಪ್ರತೀಕಾರವಾಗಿ ತೈವಾನ್ ನ ಸುತ್ತ ಆರು ವಿವಿಧ ವಲಯಗಳಲ್ಲಿ ಅಣಕು ಯುದ್ಧ ಕಾರ್ಯಾಚರಣೆಯನ್ನು ನಡೆಸಿತು. ಇದು ದ್ವೀಪವನ್ನು ಆಕ್ರಮಿಸುವ (island attack) ಯುದ್ಧ ಕಾರ್ಯಾಚರಣೆಯನ್ನೂ ಒಳಗೊಂಡಿತ್ತು. ಇದಲ್ಲದೆ ಚೀನಾ ಪ್ರಯೋಗಿಸಿದ ಕ್ಷಿಪಣಿಗಳು ತೈವಾನ್ ನ ಭೂಪ್ರದೇಶದ ಮೇಲೆ ಹಾರಿ ಹೋಗಿ ಜಪಾನ್ ನ ವಿಶೇಷ ಆರ್ಥಿಕ ವಲಯದ ಜಲಪ್ರದೇಶವನ್ನು ಅಪ್ಪಳಿಸಿದವು. ಚೀನಾದ ಯುದ್ಧನೌಕೆ ಹಾಗೂ ಯುದ್ಧವಿಮಾನಗಳು ತೈವಾನ ಜಲಸಂಧಿಯಲ್ಲಿನ ಮಧ್ಯರೇಖೆ(Median line)ನ್ನು ದಾಟಿ ತೈವಾನ್ ನ ವಾಯು ಗಡಿಯನ್ನು ಪ್ರವೇಶಿಸಿದವು. ಕೇವಲ ಮಿಲಿಟರಿ ಕ್ರಮಗಳಲ್ಲದೆ ಚೀನಾ ಅಮೆರಿಕದೊಂದಿಗೆ ನಡೆಯಬೇಕಿದ್ದ ಅನೇಕ ಮಾತುಕತೆಗಳನ್ನು ರದ್ದುಪಡಿಸಿದೆ. ನ್ಯಾನ್ಸಿ ಪೆಲೋಸಿಯವರ ತೈವಾನ್ ಭೇಟಿಯನ್ನು ಜಪಾನ್ ಸಮರ್ಥಿಸಿದ ಕಾರಣಕ್ಕೆ ಜಪಾನ್ ನ ವಿದೇಶಾಂಗ ಸಚಿವರೊಡನೆ ನಡೆಯಬೇಕಿದ್ದ ಮಾತುಕತೆಯನ್ನೂ ಚೀನಾ ರದ್ದುಪಡಿಸಿತು.

ನ್ಯಾನ್ಸಿ ಪೇಲೋಸಿ ಹಾಗೂ ಅವರ ಕುಟುಂಬದವರ ಮೇಲೆ ನಿರ್ಬಂಧಗಳನ್ನು ಕೂಡ ಚೀನಾ ಹೇರಿದೆ. ಚೀನಾದ ಮಿಲಿಟರಿ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ ಅಮೆರಿಕ ಚೀನಾಗೆ ಎಚ್ಚರಿಕೆಯನ್ನು ನೀಡಿದ್ದಲ್ಲದೆ ತನ್ನ ವಿಮಾನ ವಾಹಕ ನೌಕೆ ಯುಎಸ್ಎಸ್ ರೊನಾಲ್ಡ್ ರೇಗನ್ ನ್ನು ತೈವಾನ್ ಗೆ ಸಮೀಪದ ಫಿಲಿಫೈನ್ಸ್ ಸಮುದ್ರದಲ್ಲಿ ನಿಯೋಜಿಸಿದೆ. ಕೆಲವೇ ತಿಂಗಳುಗಳ ಹಿಂದೆ ತೈವಾನ್ ನ್ನು ಬಾಹ್ಯ ಆಕ್ರಮಣದಿಂದ ರಕ್ಷಿಸುವ ಅಮೆರಿಕದ ಬದ್ಧತೆಯ ಬಗ್ಗೆ ಅಮೆರಿಕಾದ ಅಧ್ಯಕ್ಷರು ಹೇಳಿಕೆಯನ್ನೂ ನೀಡಿದ್ದರು.

ಅಮೆರಿಕದ ರೊನಾಲ್ಡ್ ರೇಗನ್ ಯುದ್ಧ ನೌಕೆ

1960 ರ ದಶಕದಿಂದ ಕೈಗಾರಿಕಾ ಶಕ್ತಿಯಾಗಿ ಬೆಳೆದು ನಿಂತ ತೈವಾನ್ ಇಂದು ಜಗತ್ತಿನಲ್ಲಿ ಸೆಮಿಕಂಡಕ್ಟರ್ ನ ಅತಿ ಪ್ರಮುಖ ಉತ್ಪಾದಕ. ಜಗತ್ತಿನ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ಪಾಲನ್ನು ತೈವಾನ್ ಹೊಂದಿದೆ. ತನ್ನದೇ ಆದ ರಕ್ಷಣಾ ವ್ಯವಸ್ಥೆಯನ್ನು, ಅಮೇರಿಕಾದ F-16 ಯುದ್ಧ ವಿಮಾನಗಳನ್ನು ಹೊಂದಿದ್ದರೂ ಚೀನಾದ ಮಿಲಿಟರಿಯನ್ನು ಎದುರಿಸುವ ಶಕ್ತಿಯನ್ನು ತೈವಾನ್ ಹೊಂದಿಲ್ಲ. ತೈವಾನ್ ಜಲಸಂಧಿಯ 160 ಕಿಮೀ ನ್ನು ದಾಟಿ ತೈವಾನನ್ನು ಆಕ್ರಮಿಸುವುದು ಕೂಡ ಚೀನಾಗೆ ಅಷ್ಟೇನು ಸರಳವಲ್ಲ. ಇಂದಿನ ಬಹು ಧ್ರುವೀಯ ಜಗತ್ತಿನಲ್ಲಿ ಪ್ರತಿಯೊಂದು ಪ್ರಬಲ ಮಿಲಿಟರಿ ಶಕ್ತಿಯೂ ತನ್ನ ಸುತ್ತಲಿನ ಜಲ ಪ್ರದೇಶದಲ್ಲಿ ಪಾರಮ್ಯವನ್ನು ಮೆರೆಯಲು ಪ್ರಯತ್ನಿಸುತ್ತದೆ. ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಾಗರದಲ್ಲಿ ಅಮೆರಿಕ ತನ್ನ ಪಾರಮ್ಯವನ್ನು ಮೆರೆದರೆ, ಕಪ್ಪು ಸಮುದ್ರ ಹಾಗೂ ಬಾಲ್ಟಿಕ್ ಸಮುದ್ರದಲ್ಲಿ ರಷ್ಯಾ ತನ್ನ ಹಿಡಿತವನ್ನು ಹೊಂದಿದೆ. ಅಂತೆಯೇ ತೈವಾನ ನ ಸುತ್ತಲಿನ ಜಲಪ್ರದೇಶ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಪಾರಮ್ಯವನ್ನು ಮೆರೆಯಲು ಚೀನಾ ಪ್ರಯತ್ನಿಸುತ್ತಿದೆ. ಆದರೆ ತೈವಾನ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರೆ ಇ ದು ಸಾಧ್ಯವಿಲ್ಲ. ಹಾಗಾಗಿ ತೈವಾನ್ ನ್ನು ಅಂಕೆಯಲ್ಲಿ ಇಡಲು ಚೀನಾ ಪ್ರಯತ್ನಿಸುತ್ತಿದೆ.

ಆದರೆ ಹಾಗೊಮ್ಮೆ ತೈವಾನ್ ನ್ನು ಚೀನಾ ಆಕ್ರಮಿಸಿದರೆ ಅಮೆರಿಕ ಮಧ್ಯ ಪ್ರವೇಶಿಸುವುದು ಬಹುತೇಕ ಖಚಿತ. ಇಂತಹ ಸಂದರ್ಭದಲ್ಲಿ ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಈಗಾಗಲೇ ರಷ್ಯಾ- ಉಕ್ರೇನ್ ಯುದ್ಧದಿಂದ ಬಸವಳಿದಿರುವ ಜಗತ್ತಿಗೆ ಈ ಯುದ್ಧ ಗಾಯದ ಮೇಲಿನ ಬರೆಯಾಗಬಹುದು. ಹಣದುಬ್ಬರದಿಂದ ತತ್ತರಿಸುತ್ತಿರುವ ಅನೇಕ ರಾಷ್ಟ್ರಗಳಿಗೆ ಇದು ನುಂಗಲಾರದ ತುತ್ತಾಗಬಹುದು. ತೈವಾನ ಮೇಲಿನ ಆಕ್ರಮಣ ಸೆಮಿಕಂಡಕ್ಟರ್ ಚಿಪ್ ಗಳ ಅಭಾವಕ್ಕೆ ಕಾರಣವಾಗಿ ಜಗತ್ತಿನಾದ್ಯಂತ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಸುಮಾರು ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್-19 ಹಾಗೂ ರಷ್ಯಾ- ಯುಕ್ರೇನ್ ಯುದ್ಧದಿಂದ ಕಂಗೆಟ್ಟಿರುವ ಜಗತ್ತು ಇನ್ನೊಂದು ಯುದ್ಧಕ್ಕೆ ಸಾಕ್ಷಿಯಾಗದಿರಲಿ ಎಂದು ನಾವು ಪ್ರಾರ್ಥಿಸೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.