ಶಿಕ್ಷಣ ಒಂದು ಸಮರ್ಥ ಸಾಧನ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಒಂದು ಪರಿಣಾಮಕಾರಿ ಮಾಧ್ಯಮವೂ ಹೌದು. ಕಲಿಕೆಯ ಪಠ್ಯಕ್ರಮ ಶಿಕ್ಷಣದ ಈ ಉದ್ದೇಶಗಳ ಪ್ರಾಪ್ತಿಗೆ ಪ್ರಧಾನ ಕೀಲಿಕೈ. ಹೀಗಾಗಿ ಶಿಕ್ಷಣದ ಅಂತಿಮ ಯಶಸ್ಸು ನಾವು ಎಂತಹ ಪಠ್ಯವಿಷಯಗಳನ್ನು ಬೋಧಿಸುತ್ತೇವೆ ಎನ್ನುವುದರ ತಳಹದಿಯ ಮೇಲೆ ನಿಂತಿದೆ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಏನನ್ನು ಕಲಿಯಬೇಕು ಮತ್ತು ವಿದ್ಯಾರ್ಥಿಗಳಿಗೆ ಏನನ್ನು ಕಲಿಕೆಯ ಪಠ್ಯವನ್ನಾಗಿ ರೂಪಿಸಬೇಕು ಎನ್ನುವುದು ಮಹತ್ವದ ಚರ್ಚೆ ಹಾಗೂ ಚಿಂತನೆಯ ಬಳಿಕವೇ ರೂಪುಗೊಳ್ಳುತ್ತದೆ. ಇದಕ್ಕಾಗಿ ನಾಡಿನ ಪ್ರಾಜ್ಞರು, ಶಿಕ್ಷಣ ತಜ್ಞರು, ಮನೋವಿಜ್ಞಾನದ ಹಿನ್ನೆಲೆಯುಳ್ಳವರು ಸೇರಿ ಕಲಿಕೆಯ ಗುರಿಯನ್ನು ಮತ್ತು ಅದನ್ನು ಸಾಧಿಸುವ ಮಾರ್ಗವನ್ನು ದೃಢೀಕರಿಸುತ್ತಾರೆ. ಆ ಮೂಲಕ ಪಠ್ಯ ಎನ್ನುವುದನ್ನು ಶಿಕ್ಷಣ ಪ್ರಕ್ರಿಯೆಯ ಸರ್ವೋಚ್ಛ ಗೌರವದ ಸ್ಥಾನವನ್ನು ಪಡೆಯುವ ಅರ್ಹ ಕೈದೀವಿಗೆಯಾಗಿಸುತ್ತಾರೆ, ವಿದ್ಯಾರ್ಥಿ ಸಾಧಿಸಬೇಕಾದ ಗುರಿಯನ್ನು ಪೂರ್ಣಗೊಳಿಸುವಲ್ಲಿ , ಜ್ಞಾನಾರ್ಜನೆಯ ದಾರಿಯನ್ನು ಇದು ನಿರ್ದೇಶಿಸುತ್ತದೆ. ಈ ಕಾರಣಗಳಿಂದಾಗಿಯೇ ಅಲ್ಲಿನ ಒಂದೊಂದು ಪದ ವಾಕ್ಯಗಳನ್ನೂ ಅಳೆದು ತೂಗಿ ಸಂಯೋಜಿಸಲಾಗುತ್ತದೆ. ಆಗ ಅದು ಯಾವ ವಿಷಯವೇ ಇರಬಹುದು, ಯಾವ ಕಕ್ಷೆಯ ಪಠ್ಯವೇ ಇರಬಹುದು ಅದಕ್ಕೊಂದು ಗಂಭೀರತೆ ಪ್ರಾಪ್ತವಾಗುತ್ತದೆ.

 ಕಲಿಕೆಯ ವಿಷಯ ಸೂಚಿಯಾಗಿ ಕೆಲಸಮಾಡುವ ಈ ಪಠ್ಯಪುಸ್ತಕಕ್ಕೆ ಅದರದೇ ಆದ ಶಿಸ್ತಿದೆ. ಚೌಕಟ್ಟಿದೆ. ಈ ಕಾರಣದಿಂದಲೇ ‘ಪಠ್ಯಪುಸ್ತಕವೇ ಬೋಧನೆಯ ಅರ್ಧ ಸಾಮಾಗ್ರಿಯಿದ್ದಂತೆ ’ ಎನ್ನಲಾಗಿದೆ. ಅದರೊಳಗೊಂದು ಏಕಸೂತ್ರತೆ ಇದೆ. ವಯೋಮಾನಕ್ಕೆ ತಕ್ಕಂತೆ ಕಲಿಕಾರ್ಥಿಗಳ ಜ್ಞಾನಮತ್ತು ಕೌಶಲವನ್ನು ಬೆಳೆಸುವಲ್ಲಿ, ಕನಿಷ್ಟ ಮಟ್ಟವನ್ನು ಕಾಪಾಡುವಲ್ಲಿ , ವಿದ್ಯಾರ್ಥಿ ಹಾಗೂ ಅಧ್ಯಾಪಕರ ನಡುವಿನ ಸಂವಹನಕ್ಕಾಗಿ ಒದಗಿಬರುವ ವಿಷಯಸೂಚಿಯೂ ಹೌದು. ಅಂತಿಮವಾಗಿ ಪಠ್ಯಕ್ರಮ ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸಕ್ಕೆ ಪ್ರೇರೇಪಿಸಬೇಕು .ಓದಿನ ಉಲ್ಲಾಸದಾಯಕ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ನೆರವಾಗಬೇಕು. ಈ ಕಾರಣಕ್ಕಾಗಿಯೇ “ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕೊಡುವುದು ಅಗತ್ಯ ಆದರೆ ಅದಕ್ಕಿಂತಲೂ ಅವಶ್ಯಕ  ಅವರಲ್ಲಿ ಜ್ಞಾನಶಕ್ತಿಯ ನಿರ್ಮಾಣವನ್ನು ಮಾಡುವುದು” ಎಂದು ಹೇಳುವ ಅರವಿಂದರ ಮಾತು ಅರ್ಥಪೂರ್ಣವಾಗಿದೆ. ಈ ಮೂಲಕ ಪಠ್ಯ ಎನ್ನುವುದು ಅರ್ಥಪೂರ್ಣ ಕಲಿಕೆಯ ಕೈದೀವಿಗೆ. ಅದು ನಮ್ಮ ಕಲಿಕೆಯನ್ನು ಸುಗಮಗೊಳಿಸುವ ಮಾರ್ಗಸೂಚಿ ಎಂದು ಒಪ್ಪಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಶಾಲೆಗಳಲ್ಲಿ ಬೋಧಿಸಲಾಗುತ್ತಿರುವ ಪಠ್ಯಪುಸ್ತಕಗಳ ಒಂದು ಪ್ರಾಮಾಣಿಕ ಅವಲೋಕನವನ್ನು ಮಾಡಿದರೆ ಕಾಣುವ ಸತ್ಯವೇನು? ಈ ಅವಲೋಕನವನ್ನು ಕಾಲಕಾಲಕ್ಕೆ ನಮ್ಮ ಶೈಕ್ಷಣಿಕ ವ್ಯವಸ್ಥೆಯೊಳಗೆ ಮಾಡಲಾಗುತ್ತಿದೆಯೇ? ಮಾಡುವ ಬೌದ್ಧಿಕ ವಾತಾವರಣ ಇಲ್ಲಿದೆಯೇ? ಇವೆಲ್ಲವೂ ಬಹು ಮುಖ್ಯವಾದ ಪ್ರಶ್ನೆಗಳೇ. ನಮ್ಮ ಬೌದ್ಧಿಕ ವಲಯವಿನ್ನೂ ಜಾತಿಯ, ಮತದ , ಸಿದ್ಧಾಂತಗಳೆನ್ನುವ ಪೊಟರೆಯೊಳಗಿಂದ ಹೊರಬರಲಾರದಷ್ಟು ದುರ್ಬಲವಾಗಿದೆ. ಹೀಗಾಗಿ ಇಲ್ಲಿ ಮುಕ್ತ ಸಂವಾದ ಎನ್ನುವುದು ಸಾಧ್ಯವಾಗಲಾರದು. ಬದಲಾವಣೆಯ ಕುರಿತು ಮಾತನಾಡಲಾರಂಭಿಸಿದ ಕೂಡಲೇ ಜಾತಿಯಿಂದ, ಸಿದ್ಧಾಂತದಿಂದ ಬ್ರಾಂಡ್ ಮಾಡಿ ನೈಜ ಕಾಳಜಿಯನ್ನು ಮರೆಗೆ ಸರಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ನಮ್ಮ ಬೌದ್ಧಿಕ ಜಗತ್ತಿನ ಕಳಪೆ ಪ್ರದರ್ಶನ. ಒಂದು ಕಡೆ ರಾಜಕಾರಣಿಗಳು, ಇನ್ನೊಂದೆಡೆ ಅವರನ್ನು ಸುತ್ತುವರಿದಿರುವ ಬುದ್ಧಿಜೀವಿಗಳು, ಪ್ರಾಮಾಣಿಕತೆ, ಶೈಕ್ಷಣಿಕ ಕಾಳಜಿಗಳೆನ್ನುವುದೆಲ್ಲಾ ಇಲ್ಲಿ ನಗಣ್ಯ. ಅದಕ್ಕೆ ಉದಾಹರಣೆಯೇ ಪ್ರಸ್ತುತ ನಡೆಯುತ್ತಿರುವ ಚರ್ಚೆ.

ಶಾಲಾ ಪಠ್ಯಪುಸ್ತಕಗಳ ಪರೀಶೀಲನೆ ಪೂರ್ಣಗೊಂಡು ಪರಿಷ್ಕೃತ ಪಠ್ಯಪುಸ್ತಕಗಳು ಪ್ರಕಟವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಮ್ಮೆ ಪಠ್ಯಪುಸ್ತಕಗಳನ್ನು ಕೇಂದ್ರವಾಗಿರಿಸಿಕೊಂಡ ಚರ್ಚೆಯೊಂದು ಆರಂಭವಾಗಿದೆ. ಆದರೆ ಸತ್ಯದ ತಳಹದಿಯ ಮೇಲೆ ಆರಂಭವಾಗಬೇಕಾಗಿದ್ದ ಚರ್ಚೆಯು, ಕೇವಲ ಕಲ್ಪಿತ ಸಂಗತಿಯೊಂದನ್ನು ಮುಂದಿಟ್ಟುಕೊಂಡು ಆರಂಭವಾಗಿದೆ. ಹೀಗಾಗಿ ಈ ಚರ್ಚೆಯು ಪೊಳ್ಳುವಾದಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಒಂದು ಹುನ್ನಾರದಂತೆ ಕಾಣುತ್ತಿದೆಯೇ ಹೊರತು ಶೈಕ್ಷಣಿಕ ಕಾಳಜಿಯಿಂದ ಕೂಡಿದೆ ಎಂದೇನೋ ಕಾಣುತ್ತಿಲ್ಲ. ನಾಡಿನ ಜನರೆಲ್ಲಾ ಈ ಚರ್ಚೆಯನ್ನು ಗಮನಿಸುತ್ತಿದ್ದಾರೆ.ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪ್ರಯೋಗಿಸಿ ನಡೆಸಿದ ಪ್ರಯ್ನಗಳೆಲ್ಲವೂ ಇದೇ ಮೊದಲ ಬಾರಿಗೆ ಸಾರ್ವಜನಿಕ ಚರ್ಚೆಗೆ ಒಳಗಾಗಿ.ವಿದ್ಯಾರ್ಥಿಗಳಷ್ಟೇ ಅಲ್ಲ, ಸಮಾಜದ ಎಲ್ಲಾ ಸ್ಥರದ ಜನಗಳು ಈ ಕುರಿತು ಪ್ರತಿಕ್ರಿಯಿಸುತ್ತಿದ್ದಾರೆ. ಒಂದರ್ಥದಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆ. ಈ ಹಿಂದೆ ಪಠ್ಯ ಪುಸ್ತಕಗಳಲ್ಲಿ ಆಯಾ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳ ಹೊರತಾಗಿ ಇನ್ಯಾರಿಗೂ ಏನಿದೆ ಎಂದೇ ಗೊತ್ತಿರುತ್ತಿರಲಿಲ್ಲ. ಆದರೆ ಚರ್ಚೆಯು ಒಂದು ಆರೋಗ್ಯಕರ ನೆಲೆಗಟ್ಟಿನಲ್ಲಿ ನಡೆಯಬೇಕಾದುದು. ಪಠ್ಯದಲ್ಲಿ ಏನಿದೆ? ಏನಿರಬೇಕು? ಏನನ್ನು ಸೇರಿಸಬೇಕು? ಏನನ್ನು ಕೈಬಿಡಬೇಕು ಎನ್ನುವುದು ರಚನಾತ್ಮಕ ಚರ್ಚೆಯಾಗಬೇಕು. ಆದರೆ ಪಠ್ಯ ಪರಿಷ್ಕರಣೆಯನ್ನೇ ವಿವಾದವಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ಈ ಹಿಂದೆ ಇದ್ದ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಮಾರಕವಾಗಬಹುದಾಗಿದ್ದ ಅಥವಾ ವಿದ್ಯಾರ್ಥಿಗಳ ತರಗತಿಯ ಕಲಿಕೆಗೆ ಯೋಗ್ಯವಾಗಿರದೇ ಇದ್ದ ಅಂಶಗಳನ್ನು ಸಮಿತಿ ಪರಿಶೀಲಿಸಿ, ಅವುಗಳ ಬದಲು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಬಹುದಾದ ಪಠ್ಯಗಳನ್ನು ಅಳವಡಿಸಲಾಗಿದೆ. ದುರಂತವೆಂದರೆ ಇಂತಹ ಪಠ್ಯಗಳನ್ನು ಅವುಗಳ ವಸ್ತುವಿನ ಆಧಾರದಲ್ಲಿ ನೋಡಿ, ವಿವೇಚಿಸುವ ಬದಲಾಗಿ ರಾಜಕೀಯ ದ್ವೇಷದ ಹಿನೆಲೆಯಲ್ಲಿ ನೋಡಲಾಗುತ್ತಿರುವುದು ಅಪಾಯಕಾರಿಯಾದುದು.

ಉದಾಹರಣೆಗೆ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಬರೆದ ಒಂದು ಲೇಖನವನ್ನು ಪ್ರಸ್ತುತ ಪರಿಶೀಲನಾ ಸಮಿತಿ ಪಠ್ಯದಲ್ಲಿ ಅಳವಡಿಸಿಕೊಂಡದ್ದನ್ನು ಕೇಸರೀಕರಣ ಎಂದೋ, ಆರೆಸ್ಸೆಸ್ಸ್ ಸಿದ್ಧಾಂತದ ಬೋಧನೆ ಎಂದೋ ಟೀಕಿಸುವುದು ಬೌದ್ಧಿಕ ಅಸಹನೆ ಎಂದೇ ಹೇಳಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಬೆಳೆಸುವ ದೃಷ್ಟಿಯಲ್ಲಿ ಯೋಚಿಸುವುದಾದರೆ ಈ ಪಠ್ಯ ಅತ್ಯುತ್ತಮವಾದ ಸಂಗತಿಯನ್ನು ಮನವರಿಕೆ ಮಾಡಿಕೊಡುತ್ತದೆ. ವ್ಯಕ್ತಿ ಪೂಜೆಯ ಹಿಂದೆ ಬೀಳದೆ ತತ್ವದ ಆರಾಧನೆಯನ್ನು ಮಾಡಬೇಕು ಎನ್ನುವುದು ನಮ್ಮ ಕಾಲಕ್ಕೆ ಅತ್ಯಂತ ಪ್ರಸ್ತುತವಾದ ಮೌಲ್ಯವೇ ಆಗಿದೆ. ವ್ಯಕ್ತಿ ಪೂಜೆಯ ಹಿಂದೆ ಬಿದ್ದು ವಿಚಾರಹೀನರಾಗಿ ಬದುಕುತ್ತಿರುವ ಉದಾಹರಣೆಗಳು ಕಣ್ಮುಂದೆಯೇ ಇದೆ. ವ್ಯಕ್ತಿಗಳು ದೋಷ ರಹಿತರಲ್ಲ, ಅಂತಹ ವ್ಯಕ್ತಿಗಳ ಆರಾಧನೆಯಿಂದ ನಾವು ದೋಷಾತೀತವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ದೊಡ್ಡ ಸಂದೇಶ ಇಲ್ಲಿದೆ. ಜತೆಗೆ ಈ ಲೇಖನವು ತನ್ನೊಳಗೆಯೇ ಮೂರ್ತಿ ಪೂಜೆಯ ವಿಮರ್ಶೆಯನ್ನೂ ಮಾಡುತ್ತದೆ.ಮೂರ್ತಿಗಳು ತತ್ವದ ಸಂಕೇತಗಳೇ ಹೊರತು ಮೂರ್ತಿ ಪೂಜೆಯೇ ಧರ್ಮದ ಜೀವಾಳವಲ್ಲ ಎನ್ನುತ್ತಾರೆ. ಬಹುಶಃ ವರ್ತಮಾನದ ಜಗತ್ತು ಧರ್ಮವನ್ನು ಕೇವಲ ಮೂರ್ತಿಯೊಳಗೆ ನೋಡಲು ಆರಂಭಿಸಿದ ಪರಿಣಾಮವನ್ನೂ ನೋಡುತ್ತಿದ್ದೇವೆ. ಯಾವ ಪ್ರಗತಿಪರತೆಯ ಗದ್ದಲಗಳಿಲ್ಲದೆ ಈ ಲೇಖನದೊಳಗೆ ಸೂಕ್ಷ್ಮವಾಗಿ ಈ ಅಂಶ ಕೂಡಿಕೊಂಡಿದೆ ಎನ್ನುವುದನ್ನು ಯಾರಾದರೂ ಯಾಕಾಗಿ ಪ್ರಸ್ತಾಪಿಸುತ್ತಿಲ್ಲ? ಅಷ್ಟು ಮಾತ್ರವಲ್ಲ, ರಾಮಾಯಣ , ಮಹಾಭಾರತ ಮೊದಲಾದ ಮಹಾನ್ ಗ್ರಂಥಗಳನ್ನು ಅದರೊಳಗಿಂದ ಆದರ್ಶಗಳನ್ನು ಹುಡುಕುವುದಕ್ಕಾಗಿ, ಗುಣಗ್ರಹಣಕ್ಕಾಗಿ ಅಧ್ಯಯನ ಮಾಡದೆ ಅದನ್ನು ಕೇವಲ ಪುಣ್ಯ ಸಂಚಯನಕ್ಕಾಗಿ ಪಠಿತಪಿಸುವ ಮೂರ್ಖತನವನ್ನೂ ಲೇಖಕರು ಪ್ರಶ್ನಿಸುತ್ತಾರೆ. ಶ್ರೀ ರಾಮನನ್ನು ಸ್ಮರಿಸುವುದು ಆತನ ಆದರ್ಶಗಳನ್ನು ಆಚರಣೆಯಲ್ಲಿ ತರುವುದಕ್ಕಾಗಿ ಆಗಿರಬೇಕಿತ್ತು. ಆದರೆ ಸಮಾಜ ಆತನನ್ನು ಕೇವಲ ದೇವರ ಸ್ವರೂಪದಲ್ಲಿ, ಅವತಾರದ ಸ್ವರೂಪದಲ್ಲಿ ಕಂಡು ಆಚರಣೆಯಲ್ಲಿ ತಂದುಕೊಳ್ಳಬಹುದಾಗಿದ್ದ ಮಹಾನ್ ಆದರ್ಶವನ್ನು ಕುಬ್ಜಗೊಳಿಸಿದ್ದನ್ನು ಲೇಖಕರು ಪ್ರಶ್ನಿಸುತ್ತಾರೆ.ಈ ಸಂಗತಿಗಳೇ ನಮ್ಮ ಸಮಾಜದ ಅಧಃಪತನದ ಮೂಲ ಕಾರಣಗಳು ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಶ್ರೇಷ್ಠ ಗ್ರಂಥಗಳಲ್ಲಿರುವ ಉದಾತ್ತ ಸಂಗತಿಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳದೆ ಕೇವಲ ಆರಾಧನೆಯ ಮಟ್ಟಕ್ಕೆ ಇಳಿಸಿದ ಪರಿಣಾಮ ನಮ್ಮ ಸಮಾಜ ಶೌರ್ಯವನ್ನು ಮರೆಯಿತು ಎನ್ನುತ್ತಾರೆ. ಶ್ರೀ ಶಂಕರರನ್ನು, ಶಿವಾಜಿಯನ್ನು, ತಿಲಕರನ್ನು ನಾವು ಗುಡಿಯ ವಿಗ್ರಹ ಮಾಡುವ , ದೇವರ ಅವತಾರ ಮಾಡುವ ಧಾವಂತದಲ್ಲಿ ಅವರಿಂದ ಪ್ರೇರಣೆಯನ್ನು ಪಡೆಯುವುದನ್ನು ಮರೆತೆವು ಎನ್ನುವ ಈ ಸಂದೇಶ ಯಾವ ಪ್ರಗತಿಪರ ಪಠ್ಯಕ್ಕಿಂತ ಕಡಿಮೆ ಇದೆ? ಪೂಜೆ ಮಾಡುತ್ತಾ, ಗುಣವನ್ನು ಅಳವಡಿಸಿಕೊಳ್ಳದ ಸಮಾಜದ ದೋಷವನ್ನು ಹೆಡ್ಗೇವಾರ್ ತೀವ್ರವಾಗಿಯೇ ಆಕ್ಷೇಪಿಸುತ್ತಾರೆ. ಈ ಸಂಗತಿಗಳು ನಮ್ಮ ವಿದ್ಯಾರ್ಥಿ ಸಮುದಾಯವನ್ನು ಪ್ರಜ್ಞಾವಂತರನ್ನಾಗಿಯೂ, ಪ್ರಬುದ್ಧರನ್ನಾಗಿಯೂ ಮಾಡುವುದಿಲ್ಲವೇ?

 ಇದೇ ಮಾತುಗಳನ್ನು ಪ್ರಗತಿಪರತೆಯ ಬ್ರಾಂಡ್‌ನ ಅಡಿಯಲ್ಲಿ ಯಾರಾದರೂ ಹೇಳಿದ್ದರೆ ಇಂದು ಪಠ್ಯ ವಿರೋಧಿಸುತ್ತಿರುವವರಿಗೆ ಇಷ್ಟವಾಗುತ್ತಿತ್ತು. ಆದರೆ ಲೇಖಕರ ಆಶಯ ಇರುವುದು ಸಮಾಜ ಭಂಜನೆಯಲ್ಲ. ಈ ದೋಷಗಳನ್ನು ನವಿರಾಗಿಯೇ ಮನವರಿಕೆ ಮಾಡುತ್ತಾರೆಯೇ ವಿನಃ ಅಲ್ಲಿ ಕ್ರಾಂತಿ ಮಾಡುವ ಭ್ರಮೆ ತುಂಬುವುದಿಲ್ಲ. ಪರಿವರ್ತನೆಯೇ ಅಲ್ಲಿನ ಕಾಳಜಿ. ಬಹುಶಃ ಆಧುನಿಕ ವ್ಯಕ್ತಿತ್ವ ವಿಕಾಸ ತರಬೇತಿ ಕೋರ್ಸುಗಳು ಇದೇ ಸಂಗತಿಗಳನ್ನು ಹೇಳುತ್ತಿರುವುದು. ಆದರೆ ಈ ಅಂಶವನ್ನು ಹೆಡ್ಗೇವಾರ್ ಹೇಳಿದರೆ ದೋಷವಾಗುತ್ತದೆಯೇ? ಹಾಗಾದರೆ ವಿರೋಧ ಇರುವುದು ರಾಜಕೀಯ ಕಾರಣದಿಂದ ಮಾತ್ರ ಎಂದಂತಾಯಿತು. ಪಠ್ಯ ಪುಸ್ತಕಗಳನ್ನು ಹೀಗೆ ರಾಜಕೀಯ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ವಿರೋಧಿಸಬೇಕೇ? ಅಥವಾ ನಮ್ಮ ಮುಂದಿನ ತಲೆಮಾರಾದ ಮಕ್ಕಳಿಗೆ ಒಳ್ಳೆಯ ಸಂಗತಿಗಳು ತರಗತಿಯ ಮೂಲಕ ಸಿಗಲಿ ಎಂದು ಸಂಭ್ರಮಿಸಬೇಕೇ?  ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು ಮೊದಲಾದವರ ವಿಚಾರಗಳು ಪಠ್ಯದಲ್ಲಿ ಇದ್ದರೂ ಈ ಹೆಸರುಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಜನರನ್ನು ಭಾವೋದ್ರೇಕಗೊಳಿಸಿ ಪರಿಷ್ಕರಣೆಯ ವಿರುದ್ಧ ಎತ್ತಿಕಟ್ಟುವ ರಾಜಕಾರಣ ಅತ್ಯಂತ ಅಸಹ್ಯಕರವಾದುದು. ಪಠ್ಯದಲ್ಲಿ ಈ ಮಹಾತ್ಮರುಗಳ ಪಠ್ಯವನ್ನು ಉಳಿಸಿಕೊಂಡಿದ್ದರೂ ರಾಜಕಾರಣಿಗಳೂ, ಸೋಕಾಲ್ಡ್ ಬುದ್ಧಿಜೀವಿಗಳೂ ಸೇರಿಕೊಂಡು ಮಾಡುತ್ತಿರುವ ಸಂಚು ಅಪಾಯಕಾರಿಯಾದುದು.

 ಮಕ್ಕಳ ಮನಸ್ಸು ಪಠ್ಯಪುಸ್ತಕಗಳ ಮೂಲಕ ವಿಕಾಸವಾಗಬೇಕು, ಅದು ಸಹಜವಾಗಿ ಅರಳಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜವನ್ನು ನಾವು ಕಾಣುವುದಕ್ಕೆ ಸಾಧ್ಯ . ಆದರೆ ಹಾಲು ಉಣ್ಣಬೇಕಾದ ಶಿಶುವಿಗೆ ವಿಷವನ್ನೇ ಕುಡಿಸಿದಂತೆ ನಮ್ಮ ಪಠ್ಯ ಪುಸ್ತಕಗಳು ಮನಸ್ಸನ್ನು ಕೆಡಿಸಿ ವಿಕಾರಕ್ಕೆ ಒಳಗಾಗುವಂತೆ ಮಾಡಿದರೆ ಸರಿ ಪಡಿಸುವ ಜವಾಬ್ದಾರಿ ಯಾರದ್ದು?

ಪಠ್ಯ ಪುಸ್ತಕಗಳು ಕಾಲಕಾಲಕ್ಕೆ ಹೊಸದಾಗಬೇಕು, ನವೀಕರಣ, ಪರಿಷ್ಕಾರಕ್ಕೆ ಒಳಗಾಗಬೇಕು. ಬದಲಾವಣೆಗಳುಕಾಣಬೇಕಾಗುವುದು ಬೆಳವಣಿಗೆ ಸಹಜ ಲಕ್ಷಣ. ಈ ಹಿನ್ನೆಲೆಯಲ್ಲಿಯೇ ಪ್ರಸ್ತುತ ಪರಿಷ್ಕಾರ ನಡೆಯುತ್ತಿರುವುದು. ಹಾಗೆ ನೋಡಿದರೆ ಪಠ್ಯ ಪುಸ್ತಕಗಳ ಪರಿಷ್ಕಾರ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಈ ಹಿಂದೆಯೂ ಅನೆಕ ಬಾರಿ ರಚನೆಯಾದ ಪಠ್ಯ ಪುಸ್ತಕಗಳು ಪರಿಷ್ಕರಣೆಗೆ ಒಳಗಾಗಿದೆ. ಆಗ ಯಾವುದೇ ವಿವಾದಗಳು ಉಂಟಾಗಿರಲಿಲ್ಲ. ಅದೊಂದು ಸಹಜ ಪ್ರಕ್ರಿಯೆಯಾಗಿತ್ತು. ಆದರೆ ಈಗ ಈ ಪ್ರಕ್ರಿಯೆಯನ್ನು ರಾಜಕೀಯ ಗೊಳಿಸಲಾಗುತ್ತಿದೆ. ಪಠ್ಯ ಪುಸ್ತಕಗಳ ಒಳಗೆ ಕಾಲಕ್ಕೆ ಹೊಸ ಹೊಸ ಸಂಗತಿಗಳು, ಹೊಸ ಹೊಸ ಲೇಖಕರ ಬರಹಗಳು ಬರಬೇಕು. ಯಾವ ಬರಹಗಳನ್ನು ಪಠ್ಯದ ರೂಪದಲ್ಲಿ ನೀಡುತ್ತೇವೆಯೋ ಅದು ಮುಂದೆ ಇದೇ ವಿದ್ಯಾರ್ಥಿಗಳನ್ನು ಇನ್ನಷ್ಟು ಹೊಸ ಓದಿಗೆ ಪ್ರೇರೇಪಿಸುವಂತಿರಬೇಕು.  ಅಂತಿಮವಾಗಿ ತರಗತಿಗಳನ್ನು ಮುಗಿಸಿ ಹೊರಡುವ ವೇಳೆಗೆ ನಮ್ಮ ವಿದ್ಯಾರ್ಥಿಗಳ ಕೈಯಲ್ಲಿ ಕಾಗದದ ಹಾಳೆಯೊಂದರ ಸರ್ಟಿಫೀಕೆಟ್ ಮಾತ್ರ ಇರಬೇಕಾದುದಕಲ್ಲ, ಅವರ ಹೃದಯಲ್ಲಿ, ಚಿಂತನೆಯಲ್ಲಿ ಮಾನವೀಯ ಮೌಲ್ಯಗಳು, ಉದಾತ್ತ ಚಿಂತನೆಗಳು, ದೇಶಭಕ್ತಿ, ಸಮಾಜ ಪ್ರೀತಿಗಳೆಲ್ಲವೂ ಚಿಗುರೊಡೆದು ಪ್ರಜ್ಞಾವಂತ ನಾಗರಿಕರಾಗಬೇಕು.  ಹಿಂದಿನ ಅನೇಕ ದಶಕಗಳಲ್ಲಿ ನಾವು ರೂಪಿಸಿ ಕೊಟ್ಟ ಪಠ್ಯಗಳು ಎಷ್ಟರ ಮಟ್ಟಿಗೆ ಈ ಉದ್ಧೇಶವನ್ನು ಈಡೇರಿಸಿದೆ ಎನ್ನುವ ಪ್ರಾಮಾಣಿಕ ಆತ್ಮಾವಲೋಕನ ಆಗಬೇಕಲ್ಲವೇ? ನಾವು ತೋರಬೇಕಾದುದು ಮಕ್ಕಳ ಶೈಕ್ಷಣಿಕ ಕಾಳಜಿಯನ್ನೇ ಹೊರತು ನಮ್ಮ ಸಿದ್ಧಾಂತದ ಕಾಳಜಿಯನ್ನಲ್ಲ. ಬೆಳೆಯುವ ಮಕ್ಕಳ ಮನಸ್ಸನ್ನು ಇನ್ನಷ್ಟು ಸುಂದರವಾಗಿ ರೂಪುಗೊಳಿಸಬೇಕು. ಅಷ್ಟೇ.

ಆದರೆ ಸ್ವಾತಂತ್ರ್ಯ ನಂತರದ ಕಳೆದ ಏಳು ದಶಕಗಳ ಕಾಲವೂ ಭಾರತದ ಶೈಕ್ಷಣಿಕ ರಂಗ, ವೈಚಾರಿಕ ರಂಗದ ಮೇಲೆ ತಮ್ಮದೇ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡು ತಮಗಿಷ್ಟವಾದಂತೆ ತಮ್ಮ ಸಿದ್ಧಾಂತಗಳನ್ನೇ ಪಠ್ಯದ ಒಳಗೆ ಸೇರಿಸಿಕೊಂಡು ಬಂದವರು, ಸುಳ್ಳು ವಿಚಾರಗಳನ್ನು, ತಪ್ಪು ಮಾಹಿತಿಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಿಸುತ್ತಾ ಬಂದವರು ಇಂದು ವಿಚಲಿತರಾಗುತ್ತಿದ್ದಾರೆ. ಇಲ್ಲಿ ಕೆಲವರು ಪಠ್ಯಪುಸ್ತಕಗಳನ್ನು ತಮ್ಮ ಸಿದ್ದಾಂತದ ಖಾಯಂ ರಂಗಸ್ಥಳವನ್ನಾಗಿಸಿಕೊಂಡಿದ್ದರು. ಪರಿಣಾಮವಾಗಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ ಹೊರಬಂದ ಯುವ ಜನರಿಗೆ ಈ ದೇಶ , ಇಲ್ಲಿನ ಸಂಸ್ಖೃತಿ, ಪರಂಪರೆಯು ಅಭಿಮಾನದ ಸಂಗತಿಯಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಅವೆಲ್ಲವೂ ಕಳಪೆಯಾಗಿ ಕಾಣಲು ಆರಂಭವಾಗುತ್ತಿತ್ತು.

ಪಠ್ಯ ಪುಸ್ತಕವೆಂದರೆ ಸಂತೆಯಲ್ಲಿ ಸರಕು ಸುತ್ತಿಕೊಡುವ ಹಾಳೆಗಳಲ್ಲ.  ಅದಕ್ಕೆ ಮುಂದಿನ ತಲೆಮಾರುಗಳನ್ನು ರೂಪಿಸುವ ಹೋಣೆಗಾರಿಕೆ ಇದೆ. ವಿಚಾರವಾದದ ಅಮಲಿನಲ್ಲಿ ಪಠ್ಯಪುಸ್ತಕವನ್ನು ‘ಇಸಂ’ಗಳ ಪ್ರಯೋಗ ಶಾಲೇಯನ್ನಾಗಿ ಮಾಡುವ ದೂರ್ತತೆಯ ವಿರುದ್ಧ ನಾಡಿನ ಪ್ರಜ್ಞಾವಂತರು, ವಿಚಾರವಂತರು ಎದ್ದುನಿಲ್ಲಬೇಕಾಗಿದೆ. ಸಾರ್ವಜನಿಕರ ತೆರಿಗೆಯ ಹಣದಿಂದ ನಡೆಯುವ ಶಿಕಕ್ಷಣ ಸಂಸ್ಥೆಗಳು ಸಾರ್ವಜನಿಕರಿಗೆ ಉತ್ತರದಾಯಿಗಳಾಗಬೇಕು. ಸಾಹಿತ್ಯ, ಸಮಾಜ ವಿಜ್ಞಾನ, ಇತಿಹಾಸದ ಪಠ್ಯಗಳನ್ನು ರಚಿಸುವಾಗ ನಮ್ಮ ನಡುವಿರುವ ಅತ್ಯುತ್ತಮ ಮಾದರಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅವುಗಳಿಂದ ಅವರು ಪ್ರೇರಣೆ ಪಡೆಯುವಂತೆ ಮಾಡಬೇಕೇ ಹೊರತು ಆ ಪಠ್ಯಗಳೇ ಅವರ ದಾರಿ ತಪ್ಪಿಸಿ ಅವರ ಪಾಲಿನ ಕೊನೆಯ ಓದಾಗುವಂತೆ ಮಾಡಬಾರದು. ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಅಭಿಪ್ರಾಯಗಳು ಇರಬಹುದಾದರೂ ಪಠ್ಯದಂತಹ ಸಾರ್ವಜನಿಕ ಹಿತಾಸಕ್ತಿಯ ಜಬಾಬ್ದಾರಿಗಳಲ್ಲಿ ವೈಯಕ್ತಿಕ ಹಿತಾಸಕ್ತಿ ಪ್ರವೇಶಿಸಬಾರದು. ಬೆಂದ ಅನ್ನವನ್ನು ಪರೀಕ್ಞಿಸಲು ಒಂದೆರಡು ಅಗುಳನ್ನು ಹಿಸುಕಿನೋಡಿ ತೀರ್ಮಾನಕ್ಕೆ ಬರುವಂತೆ ಪಠ್ಯಪುಸ್ತಕದಲ್ಲಿ ನೀಡಿದ ಕಳಪೆ ಗುಣಮಟ್ಟದ ಪಠ್ಯಗಳಿಂದಲೇ ವಿದ್ಯಾರ್ಥಿಗಳು ಓದಿನ ಅಬಿರುಚಿಯನ್ನು ಕಳೆದುಕೊಳ್ಳಬಾರದು. ಜಗತ್ತಿನ ಬೇರೆ ಬೇರೆ ಮೂಲೆಗಳಿಂದ ವಿದ್ಯಾರ್ಜನೆಗಾಗಿ ಆಕರ್ಷಿಸುತ್ತಿದ್ದ ನಮ್ಮ ಶಿಕ್ಷಣ ವ್ಯವಸ್ಥೆ ನಾನಾ ಕಾರಣಗಳಿಂದ ಸಂಪೂರ್ಣ ನಾಶವಾಯಿತು. ಮತ್ತೊಮ್ಮೆ ನಾವು ನಿಜವಾದ ಶಿಕ್ಷಣದ ಕಾಳಜಿಯನ್ನು ತೋರಿಸಬೇಕು. ಈ ಮೂಲಕ ನಮ್ಮ ಶೈಕ್ಷಣಿಕ ಕ್ಷೇತ್ರದ ಹಿರಿಮೆ ಮತ್ತೊಮ್ಮೆ ಸಾಬೀತಾಗುವಂತೆ ಮಾಡಬೇಕಾಗಿದೆ.ಇದಕ್ಕಾಗಿ ಈ ಪಠ್ಯ ಪುಸ್ತಕ ಪರಿಶೀಲನೆ ಒಂದು ಗುಣಾತ್ಮಕ ಪರಿವರ್ತನೆಗೆ ನಾಂದಿ ಹಾಡಲಿ. ಇನ್ನಾದರೂ ನಮ್ಮ ಶಾಲಾ ಪಠ್ಯಗಳು ಕಲಿಕೆಯ ಕೈದೀವಿಗೆಯಾಗಲಿ.

ಡಾ. ರೋಹಿಣಾಕ್ಷ ಶಿರ್ಲಾಲು

ಸಹಾಯಕ ಪ್ರಾಧ್ಯಾಪಕರು

ಕನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

Leave a Reply

Your email address will not be published.

This site uses Akismet to reduce spam. Learn how your comment data is processed.